ವಿವಾಹ- ಹೆಣ್ಣಿನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದೆ ?
ಬೆಂಗಳೂರಿನ ಸಾಕ್ರಾ ವರ್ಲ್ಡ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖ್ಯಾತ ಮನೋವೈದ್ಯರಾದ ಸಬೀನಾ ರಾವ್ ಹೇಳುವಂತೆ, ಅವರ ಕ್ಲಿನಿಕ್ಕಿಗೆ ಬರುವ ಸುಮಾರು ಎಂಟು ವಿವಾಹಿತ ಮಹಿಳೆಯರಲ್ಲಿ ಇಬ್ಬರಿಗೆ, ಭಾವನಾತ್ಮಕ, ದೈಹಿಕ ಮತ್ತು ಆರ್ಥಿಕ ವಿಷಯಗಳಿಂದ ಮಾನಸಿಕ ತೊಂದರೆ ಉಂಟಾಗಿರುತ್ತದೆ.
ಡಾ.ಸಬೀನ ರಾವ್ ಹೇಳುವಂತೆ ಕೆಲವು ಸನ್ನಿವೇಶಗಳಲ್ಲಿ ವಿವಾಹದ ನಂತರ ಬದುಕಿನಲ್ಲಾಗುವ ಹಠಾತ್ ಬದಲಾವಣೆಗೆ ಅಡ್ಜಸ್ಟ್ ಮಾಡಿಕೊಳ್ಳಲು ಆಗದೆ ಸಂಕಟ ಪಡುತ್ತಿರುತ್ತಾರೆ. ಈ ಸಮಯದಲ್ಲಿ ಯಾವುದೇ ರೀತಿಯ ನಿಂದನೆ, ಟೀಕೆ, ಅಪಹಾಸ್ಯ, ಆರ್ಥಿಕ ಅಥವಾ ಇನ್ನಿತಿರ ತೊಂದರೆಗಳಿಂದ ಅವರ ಮಾನಸಿಕ ಆರೋಗ್ಯ ಕೆಡುತ್ತದೆ.
ಬದುಕಿನ ಪ್ರಮುಖ ನಿರ್ಧಾರಗಳಲ್ಲಿ ವಿವಾಹವೂ ಒಂದು. ಹೊಸದಾಗಿ ಮದುವೆ ಮಾಡಿಕೊಂಡು ತನ್ನ ಸಂಗಾತಿಯೊಂದಿಗೆ ಜೀವನ ಹಂಚಿಕೊಳ್ಳುವ ಉತ್ಸಾಹ ಒಂದು ಕಡೆಯಾದರೆ, ಮತ್ತೊಂದು ಕಡೆ ಹೊಸ ಪರಿಸರ, ಹೊಸ ಕುಟುಂಬ ಅಥವಾ ತನ್ನ ತವರಿನಿಂದ ಬಹುದೂರದ ಅಪರಿಚಿತ ನಗರದಲ್ಲಿ ವಾಸಿಸುವುದು ಸವಾಲಿನ ಸಂಗತಿಯಾಗಿರುತ್ತದೆ.
ಬೆಂಗಳೂರಿನ ಆಪ್ತಸಮಾಲೋಚಕರಾದ ಸಿಮಿ ಮ್ಯಾಥ್ಯೂ ಹೇಳುವ ಪ್ರಕಾರ “ಹೊಸ ಬದುಕಿಗೆ ಹೊಂದಿಕೊಳ್ಳುವುದು ಎಂದರೆ ಖಂಡಿತವಾಗಿಯೂ ಮಹಿಳೆಗೆ ತೀವ್ರ ಒತ್ತಡಕರ ವಿಷಯ. ನಮ್ಮ ಸಮಾಜದಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಅನುಸರಣೆ ಮಾಡಬೇಕಾಗುತ್ತದೆ.
ಹೊಸ ಜೀವನಕ್ಕೆ ಹೊಂದಿಕೊಳ್ಳುವುದು
ಹಳ್ಳಿಯಾಗಲಿ, ಪಟ್ಟಣವಾಗಲಿ ಮದುವೆಯಾದ ನಂತರ ತನ್ನ ಸಂಗಾತಿಯೊಂದಿಗೆ ಜೀವನ ಆರಂಭಿಸಲು ಹೊಸಜಾಗಕ್ಕೆ ಹೋಗಲೇ ಬೇಕು. ಮಾಥ್ಯೂ ಹೀಗೆ ಹೇಳುತ್ತಾರೆ: “ಈ ರೀತಿ ಜಾಗ ಬದಲಾದಾಗ, ಮನಸ್ಸಿನಲ್ಲಿ ಉಂಟಾಗುವ ಭಾವನೆಗಳ ಏರಿಳಿತಗಳನ್ನು ಇತರರೊಂದಿಗೆ ಹೇಗೆ ಹೇಳಿಕೊಳ್ಳುವುದು? ಹಾಗೆ ಹೇಳಿಕೊಂಡರೆ ಏನೆಂದು ತಿಳಿಯುತ್ತಾರೆ ಎಂಬ ಹಿಂಜರಿಕೆಯಿಂದ ಹೆಣ್ಣುಮಕ್ಕಳು ಮುಕ್ತವಾಗಿ ಯಾರೊಂದಿಗೂ ಮಾತನಾಡುವುದಿಲ್ಲ. ಕೆಲವರು ಕುಟುಂಬದವರ ಮತ್ತು ತನ್ನ ಸಂಗಾತಿಯ ಸಹಕಾರದೊಂದಿಗೆ ಅಗತ್ಯ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಆದರೆ ಕೆಲವರು ಈ ಹೊಸ ಪರಿಸರಕ್ಕೆ ಹೊಂದಿಕೊಳ್ಳಲಾಗದೇ ಒತ್ತಡ, ದುಃಖ ಮತ್ತು ಅಸಹಾಯಕತೆಗೆ ಒಳಗಾಗುತ್ತಾರೆ. ಈ ಪರಿಸ್ಥಿತಿ ಅಡ್ಜಸ್ಟ್ ಮೆಂಟ್ ಡಿಸಾರ್ಡರ್, ಖಿನ್ನತೆ ಮತ್ತು ಆತಂಕಕ್ಕೆ ದಾರಿ ಮಾಡಿಕೊಡುತ್ತದೆ.”
ಡಾ. ಸಬೀನಾ ರಾವ್ ಹೇಳುವಂತೆ: 25-30 ವರ್ಷ ಸ್ವತಂತ್ರ ಆಲೋಚನೆಗಳೊಂದಿಗೆ ಬೆಳೆದ ಹೆಣ್ಣುಮಕ್ಕಳಿಗೆ ಮದುವೆ ಎಂಬುದು ಒಂದು ದೊಡ್ಡ ಬದಲಾವಣೆ. ತಮ್ಮದೇ ಸ್ವಂತ ಅಭಿಪ್ರಾಯ, ವೃತ್ತಿಯ ಆಯ್ಕೆ ಇರುವಾಗ ಇದ್ದಕ್ಕಿದ್ದಂತೆ ಮದುವೆಯಾಗಿ ಪತಿಯ ಕುಟುಂಬದವರು ವಿರುದ್ಧ ಮನಸ್ಥಿತಿಯವರಾಗಿದ್ದರೆ ಅಥವಾ ಸಮಾನತೆಯನ್ನು ಒಪ್ಪದ ಸಂಗಾತಿ ಸಿಕ್ಕರೆ, ಮಹಿಳೆಯರು ತಮ್ಮ ಐಡೆಂಟಿಟಿ ಕಳೆದುಕೊಳ್ಳಲು ಆರಂಭಿಸುತ್ತಾರೆ. ತಮ್ಮ ಹತಾಶೆ ಮತ್ತು ಅಸಹಾಯಕತೆಯನ್ನು ಹೇಳಿಕೊಳ್ಳಲು ಆಗದೇ ಒತ್ತಡಕ್ಕೆ ಒಳಗಾಗುತ್ತಾರೆ. ಇದು ಹೆಚ್ಚಾದಾಗ, ಒಮ್ಮೊಮ್ಮೆ ಖಿನ್ನತೆ ಅಥವಾ ಆತಂಕ ಉಂಟಾಗಬಹುದು.
ನಿರೀಕ್ಷೆ ಮತ್ತು ವಾಸ್ತವ
ವಿವಾಹದ ನಂತರ ಎದುರಾಗುವ ಹಲವಾರು ಮನೋವೇದನೆಗೆ ಪರಸ್ಪರ ಹೊಂದಾಣಿಕೆ ಇಲ್ಲದಿರುವ ಅಥವಾ ಅತಿಯಾದ ನಿರೀಕ್ಷೆಗಳು ಕಾರಣವಾಗುತ್ತವೆ. ಮಾಥ್ಯೂರವರು ಹೇಳುವಂತೆ - “ದುಃಖದ ವಿಷಯವೇನೆಂದರೆ, ಹಲವಾರು ಜೋಡಿಗಳು ಮದುವೆಯಾದ ತಕ್ಷಣ ತಮ್ಮ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ ಎಂಬ ನಿರೀಕ್ಷೆ ಇಟ್ಟಿರುತ್ತಾರೆ. ಮದುವೆಯ ನಂತರ ದಂಪತಿಗಳಿಗೆ, ತಮ್ಮೆಲ್ಲಾ ನಿರೀಕ್ಷೆಗಳ ಬಗ್ಗೆ ಚರ್ಚಿಸಲು ಮತ್ತು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಮಯ ಬೇಕು. ಮದುವೆ ಭಿನ್ನ ಭಾವನೆ, ಭಿನ್ನಾಭಿಪ್ರಾಯ, ಬೇರೆ ಬೇರೆ ಕುಟುಂಬದ ಇಬ್ಬರು ವಿಭಿನ್ನ ವ್ಯಕ್ತಿಗಳನ್ನು ಬೆಸೆದಿರುತ್ತದೆ. ಒಬ್ಬರನ್ನೊಬ್ಬರು ಅರಿಯುವುದು ಮುಖ್ಯವಾಗಿರುತ್ತದೆ.” ತಮ್ಮ ಮಾತನ್ನು ಮುಂದುವರೆಸುತ್ತಾ ಮಾಥ್ಯೂರವರು ಹೀಗೆ ಹೇಳುತ್ತಾರೆ, “ಅಗತ್ಯವಿದ್ದಲ್ಲಿ ಆಪ್ತಸಮಾಲೋಚಕರನ್ನು ಭೇಟಿ ಮಾಡಿ. ಆದರೆ ಏಕೆ ಮದುವೆಯಾಗುತ್ತಿದ್ದೀರಾ ಎಂಬ ಸ್ಪಷ್ಟತೆ ಇಬ್ಬರಲ್ಲೂ ಇರಲಿ.”
ಮದುವೆಯ ನಂತರ ಒತ್ತಡವನ್ನು ನಿಭಾಯಿಸುವುದು ಹೇಗೆ ?
ಸಾಮಾನ್ಯವಾಗಿ ವೈವಾಹಿಕ ಸಂಬಂಧಗಳಲ್ಲಿ ಕಾಣಿಸಿಕೊಳ್ಳುವ ವೇದನೆಗೆ ಚಿಕಿತ್ಸೆ ಸುಲಭವಾಗಿರುವುದಿಲ್ಲ. ಸಮಸ್ಯೆ ತೀವ್ರವಾಗುವವರೆಗೂ ಪತ್ತೆಯಾಗುವುದೇ ಇಲ್ಲ. ಮನಸ್ತಾಪ, ಭಿನ್ನಾಭಿಪ್ರಾಯ, ನೆರವೇರದ ನಿರೀಕ್ಷೆಗಳು, ಇತ್ಯಾದಿ ರೂಪದಲ್ಲಿಯೂ ಸಮಸ್ಯೆ ಉಂಟಾಗಬಹುದು. ಆದ್ದರಿಂದ ಪರಸ್ಪರ ಯೋಗಕ್ಷೇಮಕ್ಕಾಗಿ ಇಬ್ಬರೂ ಗಮನ ನೀಡಬೇಕಾಗುತ್ತದೆ.
-
ಮದುವೆಯ ಅರ್ಥವೇನು? ಮದುವೆಯಾದ ನಂತರ ನಿರೀಕ್ಷೆಗಳೇನು ?ಈ ಕುರಿತು ಇಬ್ಬರ ಸಮ್ಮತವಿದೆಯೇ? ಎನ್ನುವ ಬಗ್ಗೆ ಪರಸ್ಪರ ಚರ್ಚಿಸಬೇಕು.
-
ವೈವಾಹಿಕ ಜೀವನದಲ್ಲಿ ಎದುರಾಗುವ ಬದಲಾವಣೆಗಳನ್ನು ಅರಿಯಬೇಕು. ಒಂದು ವೇಳೆ ಏನಾದರೂ ಕಿರಿಕಿರಿ ಉಂಟಾದರೆ ಸಂಗಾತಿಯೊಂದಿಗೆ ಚರ್ಚಿಸಬೇಕು.
-
ಅವಿಭಕ್ತ ಕುಟುಂಬಕ್ಕೆ ಕಾಲಿಟ್ಟ ಹೆಣ್ಣು, ಅಲ್ಲಿನ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟ ಪಡುತ್ತಿರುತ್ತಾಳೆ. ಆಕೆಗೂ ಸ್ವಂತ ಅಭಿಪ್ರಾಯ, ಆಲೋಚನೆಗಳಿರುತ್ತವೆ ಎಂಬುದರ ಅರಿವು ಸಂಗಾತಿಗೆ ಇರಬೇಕು.
ಮೊದಲಿನಿಂದಲೇ ಮಾನಸಿಕ ಸಮಸ್ಯೆಯಿದ್ದಾಗ
ಮಾನಸಿಕ ಸಮಸ್ಯೆಯ ಬಗ್ಗೆ ಮೊದಲೇ ಸಮಾಜದಲ್ಲಿ ಕಳಂಕ ಬೇರೂರಿದೆ. ಅದು ಮಹಿಳೆ ಅಥವಾ ಪುರುಷರಾಗಲೀ, ಒಂದು ವೇಳೆ ಸಮಸ್ಯೆ ಇದ್ದರೆ, ವ್ಯಕ್ತಿಯ ಕುಟುಂಬದವರು ಮದುವೆಯ ಸಂದರ್ಭದಲ್ಲಿ ವಿಷಯವನ್ನು ಮುಚ್ಚಿಡುತ್ತಾರೆ. ಸೈಕಿಯಾಟ್ರಿಸ್ಟ್ ಆಶ್ಲೇಷಾ ಬಗಾಡಿಯಾರವರು ಹೇಳುವ ಪ್ರಕಾರ, “ಈ ರೀತಿ ಮಾಡುವುದು ನೈತಿಕವಲ್ಲ. ಅದರಲ್ಲಿಯೂ ಮಹಿಳೆಯರಿಗೆ ಸಮಸ್ಯೆ ಇದ್ದು, ವಿವಾಹದ ಸಮಯದಲ್ಲಿ ಅದನ್ನು ಮುಚ್ಚಿಟ್ಟಾಗ, ಮುಂದೆ ಹೊಸ ಕುಟುಂಬದವರ ಸಹಕಾರ ಸಿಗದೇ ಹಲವಾರು ಸಮಸ್ಯೆಗಳಾಗುತ್ತವೆ."
ಕೆಲವೊಮ್ಮೆ ವಿಷಯವನ್ನು ಮುಚ್ಚಿಡುವುದಲ್ಲದೆ ಔಷಧಿ ತೆಗೆದುಕೊಳ್ಳುವುದನ್ನು ನಿಲ್ಲಿಸುತ್ತಾರೆ. ಮೊದಲೇ ಸಮಸ್ಯೆಯಲ್ಲಿರುವ ಮಹಿಳೆಯರಿಗೆ, ಹೊಸ ಪರಿಸರದ ಒತ್ತಡವೂ ಸೇರಿ ಸಮಸ್ಯೆ ಮರುಕಳಿಸುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ವೈವಾಹಿಕ ಜೀವನದಲ್ಲಿ ಯಾವುದೇ ಒತ್ತಡ ಇರದಿದ್ದರೂ ಔಷಧಿ ತೆಗೆದುಕೊಳ್ಳದೇ ಇದ್ದಾಗ ಸಮಸ್ಯೆ ಮರುಕಳಿಸಬಹುದು. ಇದರಿಂದ ಗರ್ಭಾವಸ್ಥೆಯ ಸಮಯದಲ್ಲಿ ಕೂಡ ಮಾನಸಿಕ ಸಮಸ್ಯೆ ಮರುಕಳಿಸುವ ಸಾಧ್ಯತೆ ಇರುತ್ತದೆ.
ಕುಟುಂಬದವರ ಸಹಕಾರ ಸಿಕ್ಕಾಗ ಮಾನಸಿಕ ಸಮಸ್ಯೆಯನ್ನು ಸುಲಭವಾಗಿ ನಿಭಾಯಿಸಬಹುದು. ಮ್ಯಾಥ್ಯೂರವರು ಹೇಳುವ ಪ್ರಕಾರ “ಸಂಬಂಧಗಳಲ್ಲಿ ಸಾಮರಸ್ಯ ಬರುವವರೆಗೂ ಯಾವುದೇ ವಿಷಯವನ್ನು ತಾತ್ಸಾರ ಮಾಡಬಾರದು. ಮದುವೆಯಾದ ತಕ್ಷಣ ಮಾನಸಿಕ ಸಮಸ್ಯೆ ಗುಣಮುಖವಾಗುವುದಿಲ್ಲ. ಸಂಗಾತಿಗೆ ನಿಮ್ಮ ಸಮಸ್ಯೆಯ ಬಗ್ಗೆ ಅರ್ಥ ಮಾಡಿಸಬೇಕು. ಅಗತ್ಯವಿದ್ದಲ್ಲಿ ಆಪ್ತಸಮಾಲೋಚಕರನ್ನು ಭೇಟಿ ಮಾಡಿ ಕಪಲ್ ಕೌನ್ಸಿಲಿಂಗ್ ಪಡೆಯಬೇಕು.”