ಹೆಣ್ಣು ಮಕ್ಕಳಿಗೆ ಜವಾಬ್ದಾರಿ ಹೆಚ್ಚಿದಂತೆಲ್ಲಾ ಪ್ರೀತಿಪಾತ್ರರ ಆರೈಕೆಯ ಹೊಣೆಯೂ ಹೆಗಲೇರುತ್ತದೆ. ಜವಾಬ್ದಾರಿಗಳ ಜಂಜಾಟ, ಎಲ್ಲವನ್ನೂ ನಿಭಾಯಿಸುವ ಆತಂಕದಲ್ಲಿ ಮಹಿಳೆಯರು ಸ್ವ-ಅಗತ್ಯ, ಆರೈಕೆಯನ್ನೇ ನಿರ್ಲಕ್ಷಿಸಿ ಬಿಡುತ್ತಾರೆ. ಯಾವುದಕ್ಕೂ ಸಮಯವೇ ಸಿಗುತ್ತಿಲ್ಲ, ಎಲ್ಲರ ಅಗತ್ಯಕ್ಕೆ ತಕ್ಕಂತೆ ನಡೆದುಕೊಂಡರೂ ಮನಸ್ಸಿಗೆ ನೆಮ್ಮದಿಯಿಲ್ಲ ಎಂದು ವ್ಯಥೆ ಪಡುತ್ತಾ, ಅನುದಿನ ಕಿರಿಕಿರಿ ಅನುಭವಿಸುವ ಮಹಿಳೆಗೆ ತನ್ನ ದೇಹ-ಮನಸ್ಸುಗಳೂ ಗಮನ ಬೇಡುತ್ತಿವೆ ಎಂಬುದೇ ಬಹಳಷ್ಟು ಸಾರಿ ಅರ್ಥವಾಗುವುದಿಲ್ಲ.
38ರ ಆಸುಪಾಸಿನಲ್ಲಿರುವ ಶೀಲಾ ಉದ್ಯೋಗಸ್ಥೆ. ಮದುವೆಯಾಗಿ 14 ವರ್ಷಗಳಾಗಿವೆ. ವೃತ್ತಿಯಿಂದ ಕುಟುಂಬದವರಿಗೆ ಯಾವುದೇ ರೀತಿಯ ಕುಂದು-ಕೊರತೆ ಬರದಂತೆ ನೋಡಿಕೊಳ್ಳಬೇಕು, ವೃತ್ತಿ-ಮನೆಯ ಜವಾಬ್ದಾರಿ ಎರಡನ್ನೂ ಸರಿದೂಗಿಸಿಕೊಂಡು ಹೋಗಬೇಕೆಂಬ ಹಂಬಲ. ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುವ ಬಯಕೆಯಿಂದ ಮನೆಕೆಲಸಗಳನ್ನೂ ತಾನೇ ಮಾಡುವ ಪರಿಪಾಠವಿಟ್ಟುಕೊಂಡಿದ್ದಾರೆ.
ಮಕ್ಕಳಿಬ್ಬರ ಪಾಲನೆ, ಗಂಡನ ಅಗತ್ಯಗಳಿಗೆ ಸ್ಪಂದಿಸುವುದರ ಜೊತೆಗೆ ಹಾಸಿಗೆ ಹಿಡಿದಿರುವ ಅತ್ತೆಯ ಹೊಣೆಯೂ ಶೀಲಾರ ಮೇಲಿದೆ. ಇತ್ತೀಚೆಗೆ ಸಣ್ಣದಕ್ಕೂ ಕೋಪ, ಕಿರಿಕಿರಿ, ದುಃಖಿಸುವುದು, ಮನೆಯವರ ಮೇಲೆ ರೇಗಾಡುವುದು ಹೆಚ್ಚಾಗಿದೆ. ದೈಹಿಕವಾಗಿ ಯಾವ ಸಮಸ್ಯೆ ಇಲ್ಲದಿದ್ದರೂ ಸುಸ್ತು, ಬೆನ್ನು ನೋವು ಜಾಸ್ತಿಯಾಗಿದೆ, ನಿದ್ರೆ ಕಡಿಮೆಯಾಗಿದೆ.
ಹಾಗೆಂದು ಕಾಟಾಚಾರಕ್ಕೆ ಏನೋ ಒಂದು ಕೆಲಸ ಮಾಡಲೂ ಮನಸ್ಸಾಗುವುದಿಲ್ಲ. ಮನೆಯವರಿಗಾಗಿಯೇ ಇಷ್ಟೆಲ್ಲಾ ಮಾಡಿದರೂ ಮನೆ-ಮನದಲ್ಲಿ ಶಾಂತಿಯಿಲ್ಲ, ವೃತ್ತಿಯಲ್ಲಿ ನೆಮ್ಮದಿಯಿಲ್ಲ, ಸಂಬಂಧಗಳಲ್ಲೂ ಸಾಮರಸ್ಯವಿಲ್ಲ. ಮಕ್ಕಳೂ ನೀನು ರೇಗಾಡುವುದರಿಂದಲೇ ಸಮಸ್ಯೆ ಎಂದು ದೂರಲು ಶುರುವಿಟ್ಟುಕೊಂಡಿದ್ದಾರೆ. ತನಗೋಸ್ಕರ ಏನೊಂದೂ ಮಾಡದೇ ಇಷ್ಟೆಲ್ಲಾ ಮಾಡಿದರೂ ತನ್ನಿಂದೇನು ಲೋಪವಾಗಿದೆ ಎಂದು ಶೀಲಾಗೆ ತಿಳಿಯುತ್ತಿಲ್ಲ.