ನಿಕಟ ಸಹಚರರಲ್ಲಿ ಹಿಂಸೆ
ನಿಕಟ ಸಂಬಂಧಗಳಲ್ಲಿ ಕಂಡುಬರುವ ದೈಹಿಕ, ಲೈಂಗಿಕ ಅಥವಾ ಮಾನಸಿಕ ಹಾನಿಯನ್ನುಂಟು ಮಾಡುವ ನಡವಳಿಕೆಯನ್ನು ನಿಕಟ ಸಂಬಂಧಗಳ ದೌರ್ಜನ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ವಿವರಿಸುತ್ತದೆ. ಇದು ದೈಹಿಕ ಆಕ್ರಮಣಶೀಲತೆ, ಲೈಂಗಿಕ ದಬ್ಬಾಳಿಕೆ, ಮಾನಸಿಕ ನಿಂದನೆ ಮತ್ತು ಹಿಡಿತ ಸಾಧಿಸುವ ನಡವಳಿಕೆಯನ್ನೂ ಒಳಗೊಂಡಿರುತ್ತದೆ. ಯಾವುದೇ ಜನಾಂಗ, ವಯಸ್ಸು ಅಥವಾ ಧರ್ಮಕ್ಕೆ ಸೇರಿದವರು ನಿಕಟ ಸಂಬಂಧಗಳ ದೌರ್ಜನ್ಯಕ್ಕೆ ಒಳಗಾಗಬಹುದು. ಮದುವೆಯಾದ ದಂಪತಿಗಳಲ್ಲಿ, ಒಟ್ಟಿಗೆ ವಾಸಿಸುತ್ತಿರುವ ಅಥವಾ ನಿಕಟ ಸಂಬಂಧವನ್ನು ಹೊಂದಿರುವವರ ನಡುವೆ ಈ ದೌರ್ಜನ್ಯ ಉಂಟಾಗಬಹುದು. ಇದು ಎಲ್ಲಾ ಸಾಮಾಜಿಕ ಆರ್ಥಿಕ ಹಿನ್ನೆಲೆಯ ಮತ್ತು ಶೈಕ್ಷಣಿಕ ಅರ್ಹತೆಯ ವ್ಯಕ್ತಿಗಳ ನಡುವೆ ಕಂಡುಬರಬಹುದು.
ಮಹಿಳೆಯರ ವಿರುದ್ಧದ ದೌರ್ಜನ್ಯವು ಗಂಭೀರವಾದ ಆರೋಗ್ಯ ಸಮಸ್ಯೆಯಾಗಿದೆ. ಭಾರತಕ್ಕೆ ಸಂಬಂಧಿಸಿದಂತೆ ದಿ ನ್ಯಾಶನಲ್ ಫ್ಯಾಮಿಲಿ ಸರ್ವೆ (NFHS-3) ವರದಿಯ ಪ್ರಕಾರ 15-49 ವರ್ಷ ವಯಸ್ಸಿನ ಮಹಿಳೆಯರಲ್ಲಿ ಮೂವರಲ್ಲಿ ಒಬ್ಬರು ದೈಹಿಕ ಹಿಂಸೆ ಮತ್ತು ಹತ್ತರಲ್ಲಿ ಒಬ್ಬರು ಲೈಂಗಿಕ ಹಿಂಸೆಗೆ ಒಳಗಾಗುತ್ತಾರೆ ಎಂದು ತಿಳಿದುಬರುತ್ತದೆ. ಅದರಲ್ಲೂ ಮದುವೆಯಾದ ಮಹಿಳೆಯರು ಉಳಿದವರಿಗಿಂತ ಪತಿಯಿಂದಲೇ ಹೆಚ್ಚು ಮಾನಸಿಕ ಹಿಂಸೆಗೆ ಒಳಗಾಗುತ್ತಾರೆ ಎಂದು ವರದಿಯು ತಿಳಿಸುತ್ತದೆ.
ನಿಕಟ ಸಹಚರರಿಂದ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ತೀವ್ರ ಮಾನಸಿಕ ಸಮಸ್ಯೆಗೆ ಒಳಗಾಗುತ್ತಾರೆ. ಅವರಲ್ಲಿ ಖಿನ್ನತೆ, ಆತಂಕ, ವಿಮುಖತೆ, ಸೊಮ್ಯಾಟೋಫಾರ್ಮ್ ಡಿಸಾರ್ಡರ್, ಗ್ರಹಿಸುವ ಶಕ್ತಿ ಕ್ಷೀಣಿಸುವುದು ಮತ್ತು ಒತ್ತಡ ಕಂಡುಬರುತ್ತವೆ.
ಮಹಿಳೆಯರಲ್ಲಿ ಆತ್ಮಹತ್ಯೆ ಪ್ರವೃತ್ತಿ ಹೆಚ್ಚುವುದಕ್ಕೂ ಇದು ಕಾರಣವಾಗುತ್ತದೆ. ನಿಕಟ ಸಹಚರರಿಂದ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರು ಆ ಸಂಬಂಧದಿಂದ ಹೊರಬರುವುದು ಸುಲಭವಲ್ಲ. ಹೆಚ್ಚಿನ ಮಹಿಳೆಯರು ತಾವು ದೂರ ಹೋದರೂ ಸಹ ಸಂಗಾತಿಯು ತಮ್ಮನ್ನು ಹುಡುಕಿ ಹಾನಿಮಾಡಬಹುದು ಎಂಬ ಭಯದಲ್ಲಿರುತ್ತಾರೆ. ಅಲ್ಲದೇ ಮಗುವಿನ ಪಾಲನೆಯಿಂದ ದೂರವಾಗುವ ಚಿಂತೆ ಸಹ ಕಾಡುತ್ತದೆ. ತಮ್ಮ ಸಂಗಾತಿಯ ನಡವಳಿಕೆ ಬದಲಾಗಬಹುದು ಎಂಬ ನಿರೀಕ್ಷೆಯಿಂದ ಮತ್ತೆ ಮತ್ತೆ ಹಿಂಸೆಗೆ ಒಳಗಾಗುತ್ತಾರೆ.
ನಿಕಟ ಸಹಚರರಿಂದ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಮಹಿಳೆಯರನ್ನು ಗುರುತಿಸಿ ಅವರಿಗೆ ಅಗತ್ಯ ಸಾಮಾಜಿಕ-ಮಾನಸಿಕ ಬೆಂಬಲ ಒದಗಿಸುವ ನಿಟ್ಟಿನಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ತಜ್ಞರಿಬ್ಬರೂ ಕೂಡ ಪರಿಣಾಮಕಾರಿ ಮಾನಸಿಕ ಮದ್ಯಸ್ಥಿಕೆಯನ್ನು ಒದಗಿಸಬಹುದು.
-
ಮಹಿಳೆಗೆ ಸುರಕ್ಷಾ ಭಾವನೆಯನ್ನು ಒದಗಿಸುವುದು.
-
ದೌರ್ಜನ್ಯಕ್ಕೆ ಕಾರಣವಾದ ಅಂಶಗಳು- ದೃಷ್ಠಿಕೋನ, ಆತ್ಮ-ಗೌರವ, ನಿರೀಕ್ಷೆ, ಸ್ವ-ಕಾರ್ಯಕಾರಿತ್ವ ಮತ್ತು ಆರೋಪಣೆಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ಸೂಕ್ತ ಮಾರ್ಗೋಪಾಯಗಳನ್ನು ಹೇಳಿಕೊಡುವುದು.
-
ಮಾನಸಿಕ ಮಧ್ಯಸ್ಥಿಕೆಯ ಮೂಲಕ ಮಹಿಳೆಗೆ ಆತಂಕ, ಖಿನ್ನತೆ, ಆಘಾತ ಮತ್ತು ಇತರ ಸಮಸ್ಯೆಯನ್ನು ಬಗೆಹರಿಸಲು ನೆರವಾಗುವುದು.
ಇದರ ಜೊತೆಗೆ ಲಭ್ಯವಿರುವ ಸಾಮಾಜಿಕ ಬೆಂಬಲವನ್ನು ಪರಿಶೀಲಿಸಿ ಸುರಕ್ಷತೆಯನ್ನು ಖಚಿತಪಡಿಸಬೇಕು. ಕ್ರೈಸಿಸ್ ಸೆಂಟರ್, ಶೆಲ್ಟರ್ ಹೋಮ್ ಬಗ್ಗೆ ಮಾಹಿತಿ ನೀಡಿ ಕಾನೂನಾತ್ಮಕ ಬೆಂಬಲ ನೀಡಬೇಕು. ಸಮಸ್ಯೆ ವಿಪರೀತವಾದರೆ ಪೋಲಿಸರಿಗೆ ಮಾಹಿತಿ ನೀಡುವಂತೆ ಪ್ರೋತ್ಸಾಹಿಸಬೇಕು.
ಡಾ. ವೃಂದಾ ಎಂ.ಎನ್ ರವರು ನಿಮ್ಹಾನ್ಸ್ ಸೈಕಿಯಾಟ್ರಿಕ್ ಸೋಷಿಯಲ್ ವರ್ಕ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಅವರು ತಮ್ಮ ತಂಡದೊಂದಿಗೆ ನಿಮ್ಹಾನ್ಸಿನ ಸೆಂಟರ್ ಫಾರ್ ವೆಲ್ ಬೀಯಿಂಗ್ ನಲ್ಲಿ ನಿಕಟ ಸಹಚರರಿಂದ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗಾಗಿ – AWAKE ಕ್ಲಿನಿಕ್ ನಡೆಸುತ್ತಾರೆ. ಹೆಚ್ಚಿನ ಮಾಹಿತಿಗೆ ಕರೆಮಾಡಿ: 080 2668 3948