ಮಾನಸಿಕ ದೌರ್ಬಲ್ಯ ಎಂದರೇನು ?

ಮಾನಸಿಕ ದೌರ್ಬಲ್ಯ ಎಂದರೇನು ?

ಮಾನಸಿಕ ದೌರ್ಬಲ್ಯ
Published on

ಕಳೆದ ಒಂದು ಶತಮಾನದ ಅವಧಿಯಲ್ಲಿ ದೌರ್ಬಲ್ಯವನ್ನು ಕುರಿತ ಸಾಮಾನ್ಯ ಗ್ರಹಿಕೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ವ್ಯಕ್ತಿಯನ್ನೇ ಗಮನದಲ್ಲಿಟ್ಟುಕೊಂಡು ದೌರ್ಬಲ್ಯವನ್ನು ಅರ್ಥಮಾಡಿಕೊಳ್ಳುವ ಅಭ್ಯಾಸ ಬೆಳೆದುಬಂದಿದೆ. ಅಂದರೆ ವಿಕಲತೆಯ ಬಗ್ಗೆಯೇ ಹೆಚ್ಚು ಗಮನ ನೀಡಲಾಗುತ್ತದೆ.

ಹಾಗಾಗಿ ಮೊದಲು ವಿಕಲತೆ ಎಂದರೇನು ಎಂದು ನೋಡೋಣ. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ವಿಕಲತೆಯನ್ನು ಒಂದು ರೀತಿಯ ”ಮಾನಸಿಕ ಅಸ್ವಸ್ಥತೆ“ ಎಂದು ಗುರುತಿಸಲಾಗುತ್ತದೆ. ಇದು ನಾವು ಸಾಮಾನ್ಯವಾಗಿ ನಡೆಸುವ ರೋಗ ಲಕ್ಷಣದ ತಪಾಸಣೆಗೆ ಸೀಮಿತವಾಗುವುದಿಲ್ಲ. ಮಾನಸಿಕ ಅಸ್ವಸ್ಥತೆಯನ್ನು ವಿವರಿಸುವಾಗ ಇದರ ವ್ಯಾಪ್ತಿಯೊಳಗೆ ಸೇರುವ ಎಲ್ಲ ಲಕ್ಷಣಗಳನ್ನೂ ಇದು ಒಳಗೊಳ್ಳುತ್ತದೆ. ಆದಾಗ್ಯೂ ಇದು ಸ್ಪಷ್ಟವಾದ ವ್ಯಾಖ್ಯಾನವನ್ನು ಹೊಂದಿಲ್ಲ. ಉದಾಹರಣೆಗೆ ರೋಗ ಲಕ್ಷಣದ ನಿರೂಪಣೆ ಮತ್ತು ಸಾಂಖ್ಯಿಕ (ಅಂಕಿ ಅಂಶಗಳ) ಕೈಪಿಡಿಯ ಐದನೆಯ ಆವೃತ್ತಿಯಲ್ಲಿ ಈ ರೀತಿ ವ್ಯಾಖ್ಯಾನಿಸಲಾಗಿದೆ :

“ ಮಾನಸಿಕ ಅಸ್ವಸ್ಥತೆ ಎಂದರೆ ಒಬ್ಬ ವ್ಯಕ್ತಿಯಲ್ಲಿರುವ ವಿಷಯಗಳನ್ನು ಅರ್ಥಮಾಡಿಕೊಳ್ಳುವ  ಶಕ್ತಿಯಲ್ಲಿ, ಉದ್ವೇಗವನ್ನು ನಿಯಂತ್ರಿಸುವಲ್ಲಿ  ಕಂಡುಬರುವ ಗೊಂದಲ ಅಥವಾ ಮಾನಸಿಕ ಕ್ರಿಯೆಗೆ ಸಂಬಂಧಿಸಿದಂತೆ ವ್ಯಕ್ತಿಯ ವರ್ತನೆಯಲ್ಲಿ ಕಂಡುಬರುವ ಜೈವಿಕ, ಮಾನಸಿಕ ಅಥವಾ ಬೆಳವಣಿಗೆಯ ಪ್ರಕ್ರಿಯೆಯಲ್ಲಿನ ವ್ಯತ್ಯಾಸಗಳ ಸಮಸ್ಯೆ ಎಂದು ಚಿಕಿತ್ಸಾ ವಿಧಾನಗಳ ಮೂಲಕ ತಿಳಿದುಬರುತ್ತದೆ.  ಸಾಮಾನ್ಯವಾಗಿ ಮಾನಸಿಕ ಅಸ್ವಸ್ಥತೆ ಸಾಮಾಜಿಕ, ವೃತ್ತಿಯನ್ನು ಆಧರಿಸಿದ ಅಥವಾ ಇತರ ಪ್ರಮುಖ ಕ್ರಿಯೆಗಳಲ್ಲಿ ಕಂಡುಬರುವ ಆಯಾಸಕ್ಕೆ ಅಥವಾ ಬಳಲಿಕೆಗೆ ಸಂಬಂಧಿಸಿರುತ್ತದೆ. ಸಮೀಪ ಸಂಬಂಧಿಗಳ ಸಾವು ಅಥವಾ ಪ್ರೇಮಿಸಿದವರ ಸಾವಿನಿಂದ ಉಂಟಾಗುವ ನಿರೀಕ್ಷಿತ ಅಥವಾ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಸ್ವೀಕೃತವಾದ ಒತ್ತಡ ಮತ್ತು ಆಯಾಸಗಳನ್ನು ಮಾನಸಿಕ ಅಸ್ವಸ್ಥತೆ ಎಂದು ಹೇಳಲಾಗುವುದಿಲ್ಲ.  ಸಾಮಾಜಿಕವಾಗಿ ವ್ಯತಿರಿಕ್ತವಾದ ವರ್ತನೆ ( ಉದಾಹರಣೆಗೆ ರಾಜಕೀಯ, ಧಾರ್ಮಿಕ ಅಥವಾ ಲೈಂಗಿಕ)  ಮತ್ತು ವ್ಯಕ್ತಿ ಮತ್ತು ಸಮಾಜದ ನಡುವೆ ಏರ್ಪಡುವ ಸಂಘರ್ಷಗಳು ಮಾನಸಿಕ ಅಸ್ವಸ್ಥತೆ ಎನಿಸಿಕೊಳ್ಳುವುದಿಲ್ಲ. ಆದರೆ ಈ ವ್ಯತಿರಿಕ್ತ ವರ್ತನೆ ಅಥವಾ ಸಂಘರ್ಷ ವ್ಯಕ್ತಿಯಲ್ಲಿನ ದೌರ್ಬಲ್ಯದ ಪರಿಣಾಮವಾಗಿ ಕಂಡುಬಂದರೆ ಅದನ್ನು ಮಾನಸಿಕ ಅಸ್ವಸ್ಥತೆ ಎಂದು ಪರಿಗಣಿಸಬಹುದು ”

ಮಾನಸಿಕ ಅಸ್ವಸ್ಥತೆಯ ವಿಕಲತೆಯನ್ನು ನಾವು ಹೀಗೆ ಪರಿಗಣಿಸಿದರೆ ಇದು ದೌರ್ಬಲ್ಯ ಎಂದು ಹೇಳಲಾಗುವುದಿಲ್ಲ. ದೌರ್ಬಲ್ಯ ಎನ್ನುವುದು ಅಂತರ್ಗತವಾಗಿರುವ, ವ್ಯಕ್ತಿಯಲ್ಲಿ ಗುರುತಿಸಬಹುದಾದ  ಸ್ಥಿತಿ ಅಲ್ಲ. ಇದು ಎರಡು ಸಂಗತಿಗಳ ಪರಸ್ಪರ ಕ್ರಿಯೆಯಿಂದ, ಅಂದರೆ ವಿಕಲತೆ ಮತ್ತು ಅದರ  ಸುತ್ತಲೂ ಇರುವ ಅಡೆತಡೆಗಳ ಪರಸ್ಪರ ಕ್ರಿಯೆಯಿಂದ, ಉದ್ಭವಿಸುವ ಸ್ಥಿತಿ. ಈ ಅಡೆತಡೆಗಳು   ಯಾವುವು  ? ಸ್ಪಷ್ಟವಾಗಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ನಿತ್ಯ ಜೀವನದಲ್ಲಿ ಅನೇಕ ಅಡೆತಡೆಗಳನ್ನು ಎದುರಿಸುತ್ತಾನೆ. ಯಾವುದೇ ವ್ಯಕ್ತಿಯೂ ಇದರಿಂದ ಹೊರತಾಗಿದ್ದೇನೆ ಎಂದು ಹೇಳಿಕೊಳ್ಳಲಾಗುವುದಿಲ್ಲ. ಹಾಗೆಂದ ಮಾತ್ರಕ್ಕೆ ಪ್ರತಿಯೊಬ್ಬ ವ್ಯಕ್ತಿಯಲ್ಲೂ ವಿಕಲತೆ ಇದೆ ಎನ್ನಲಾದೀತೇ ?

ಇಲ್ಲಿ ಪ್ರಸ್ತುತ ಎನಿಸುವ ಅಡೆತಡೆಗಳೆಂದರೆ, ಮೊದಲನೆಯದಾಗಿ ವ್ಯಕ್ತಿಯ ವಿಕಲತೆಯೊಡನೆ ಸ್ಪಂದಿಸುವ ಅಡೆತಡೆಗಳು. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಒಬ್ಬ ವ್ಯಕ್ತಿ ಯಾವ ರೀತಿಯ ಅಡೆತಡೆಗಳನ್ನು ಎದುರಿಸಬಹುದು ? ಕಾಳಜಿಯುಕ್ತ ಆರೈಕೆಯ ಕೊರತೆ ಇರಬಹುದು. ಅಥವಾ ಕುಟುಂಬದ ಸದಸ್ಯರು ಇಂತಹ ವ್ಯಕ್ತಿಯನ್ನು ಅರ್ಥಮಾಡಿಕೊಳ್ಳದೆ ಇರಬಹುದು. ಕೆಲವೊಮ್ಮೆ ನೌಕರಿ ಮಾಡುವ ಕಚೇರಿಯ ಮುಖ್ಯಸ್ಥರು ಸ್ಪಂದಿಸದಿರುವ ಕಾರಣವೂ ಇರಬಹುದು. ಅತಿ ಹೆಚ್ಚು ವಾಹನದಟ್ಟಣೆ ಮತ್ತು ದಟ್ಟವಾಗಿರುವ ಸಾರಿಗೆ ಸಮಸ್ಯೆಯೂ ಒಂದಾಗಿರಬಹುದು. ಇವೆಲ್ಲವೂ ವ್ಯಕ್ತಿಯಲ್ಲಿ ಕಂಡುಬರುವ ವಿಕಲತೆಗೆ ನೇರವಾಗಿ ಸಂಬಂಧಿಸಿದ್ದಾಗಿರುತ್ತದೆ.

ಎರಡನೆಯದಾಗಿ, ಈ ಅಡೆತಡೆಗಳು ವ್ಯಕ್ತಿ ತನ್ನ ಜೀವನವನ್ನು ಸವಿಯಲು ಸಾಧ್ಯವಾಗದಂತಹ ವಾತಾವರಣವನ್ನು ಉಂಟುಮಾಡುವಂತಿರಬೇಕು. ಸಮಾಜದಲ್ಲಿ ಇತರರೊಡನೆ ಸಮಾನ ನೆಲೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಂತಹ ವಾತಾವರಣವನ್ನು ಸೃಷ್ಟಿಸುವಂತಿರಬೇಕು. ಕಾಳಜಿಯುಕ್ತ ಆರೈಕೆ ಇಲ್ಲದೆ ಹೋದರೆ ವ್ಯಕ್ತಿಯು  ತನಗೆ ಸಮಾಧಾನವಾಗುವ ರೀತಿಯಲ್ಲಿ ತನ್ನ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ. ಇತರೆ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಇದೇನೂ ಗಂಭೀರ ಸಮಸ್ಯೆಯಾಗಿ ಕಾಡುವುದಿಲ್ಲ. ಅರ್ಥಮಾಡಿಕೊಳ್ಳದಿರುವುದು ಎಂದರೆ, ವ್ಯಕ್ತಿಗೆ ಸೂಕ್ತವಾದ ಸ್ಥಳಾವಕಾಶವನ್ನು ಒದಗಿಸದೆ ಇರುವುದು ಮತ್ತು ಕುಟುಂಬದ ಅಥವಾ ಕಚೇರಿಯ ಇತರ  ಸದಸ್ಯರಿಗೆ ಸರಿಸಮಾನವಾಗಿ ಕೆಲಸ ಮಾಡಲು ಅಪೇಕ್ಷಿಸುವುದೂ ಇರಬಹುದು. ಅತಿ ಹೆಚ್ಚಿನ ವಾಹನ ದಟ್ಟಣೆ  ಮತ್ತು ದಟ್ಟವಾಗಿರುವ ಸಾರಿಗೆ ವ್ಯವಸ್ಥೆ ಇರುವ ಸಂದರ್ಭದಲ್ಲಿ ಪ್ರಯಾಣಿಸಲು ಇಂತಹ ವ್ಯಕ್ತಿಗಳು ಇತರರಿಗಿಂತಲೂ ಹೆಚ್ಚು ಶ್ರಮ ಪಡಬೇಕಾಗುತ್ತದೆ ಮತ್ತು ಖಾಸಗಿ ವಾಹನಗಳನ್ನು ಆಶ್ರಯಿಸಬೇಕಾಗುತ್ತದೆ.

ಇದು ದೌರ್ಬಲ್ಯದ ಸಾಮಾಜಿಕ ಮಾದರಿ. ಈ ಮಾದರಿಯ ಮೂಲಕ ವಿಕಲತೆಯನ್ನು ಅನುಭವಿಸುತ್ತಿರುವ ವ್ಯಕ್ತಿಯ ಬಗ್ಗೆಯೇ ಹೆಚ್ಚು ಗಮನ ನೀಡದೆ, ಅವರು ಎದುರಿಸುವ ಅಡೆತಡೆಗಳ ಬಗ್ಗೆ ಗಮನ ನೀಡಲಾಗುತ್ತದೆ. ಏಕೆಂದರೆ ಈ ಸಾಮಾಜಿಕ ಅಥವಾ ಇತರ ಅಡೆತಡೆಗಳು ಒಬ್ಬ ವ್ಯಕ್ತಿಗೆ ತಾನು ಅಂದುಕೊಂಡಮತೆ ಇತರರೊಡನೆ ಸಮಾನ ನೆಲೆಯಲ್ಲಿ ಬದುಕಲು ಅಡ್ಡಿಯುಂಟುಮಾಡುತ್ತವೆ.  ಆದ್ದರಿಂದ ನಮ್ಮ ಗಮನ  ವ್ಯಕ್ತಿಯ ವಿಕಲತೆಯನ್ನು ಗುರಿಮಾಡುವುದಾಗಿರದೆ ಅದು ಮಾನವನ ಸಹಜ ವೈವಿಧ್ಯತೆ  ಎಂದು ಅರಿಯುವತ್ತ ಇರಬೇಕು . ಈ ನಿಟ್ಟಿನಲ್ಲಿ ವ್ಯಕ್ತಿಯ ಅಗತ್ಯತೆಗಳನ್ನು ಪೂರೈಸಲು ಈ ಅಗತ್ಯತೆಗಳನ್ನೇ ಕೇಂದ್ರೀಕರಿಸಿ ನಮ್ಮ ನಿರ್ಧಾರಗಳನ್ನು ಕೈಗೊಳ್ಳಬೇಕು.

ಅಂಬಾ ಸಲೇಲ್ಕರ್ ಚೆನ್ನೈನಲ್ಲಿ ವಕೀಲ ವೃತ್ತಿಯಲ್ಲಿದ್ದಾರೆ. ವಿಕಲತೆಯ ಕಾನೂನು ಮತ್ತು ನೀತಿಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದಾರೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org