ಭಾವನಾತ್ಮಕ ಶೋಷಣೆ

 “ನಾನು ಮಾನಸಿಕವಾಗಿ ಜರ್ಝರಿತಳಾಗಿ ಹೋಗಿದ್ದೇನೆ. ಏನು ಮಾಡಿದರೂ ತಪ್ಪು ಎನ್ನುವ ಭಾವನೆ ಬಂದು ಹೋಗಿದೆ. ಆತ ನನ್ನನ್ನು ವಿಪರೀತ ಎನಿಸುವಷ್ಟು ಟೀಕಿಸುತ್ತಾನೆ, ಎಲ್ಲಾ ನಿರ್ಧಾರಗಳನ್ನು ಅವನೇ ತೆಗೆದುಕೊಳ್ಳುತ್ತಾನೆ, ತೀರಾ ಕಂಟ್ರೋಲಿಂಗ್ ಮತ್ತು ಡಾಮಿನೆಂಟ್. ಎಲ್ಲವುದಕ್ಕೂ ನಾನೇ ಸರಿ ಎನ್ನುವ ವಾದ. ನನಗೊಂದು ವೈಯಕ್ತಿಕ ಸ್ವಾತಂತ್ರ್ಯ ಇಲ್ಲ. ಮನಸ್ಸಿಗೆ ಇಷ್ಟವಾದದ್ದು ಮಾಡುವಂತಿಲ್ಲ, ಸ್ನೇಹಿತರು-ಸಂಬಂಧಿಕರನ್ನು ಸಂಪರ್ಕಿಸುವುದಕ್ಕೂ ಒಪ್ಪಿಗೆ ಪಡೆಯಬೇಕು. ಎಲ್ಲವುದಕ್ಕೂ ಏನಾದರೊಂದು ಆಕ್ಷೇಪ, ಕಿರಿಕಿರಿ. ಜೊತೆಗೆ ಸಂಶಯ ಬೇರೆ. ನನಗೇನು ಗೌರವವೇ ಬೇಡವೆ? ನಾನು ಏನು ತಪ್ಪು ಮಾಡಿದ್ದೇನೆ. ಇಷ್ಟೆಲ್ಲಾ ಇದ್ದೂ ಹೊಂದಿಕೊಳ್ಳುತ್ತಿರುವೆ. ಒಂಥರಾ ಜೊತೆಯಲ್ಲಿದ್ದರೂ ಭಯ. ಬಿಟ್ಟು ಬಿಡಲೂ ಭಯ. ಅಲ್ಲದೇ ಅವನು ಹೊಡೆದು ಬಡಿದು ಮಾಡಲ್ಲ ಎಂದ ಮೇಲೆ ಸ್ವಲ್ಪ ನಾನೇ ಅಡ್ಜಸ್ಟ್ ಆಗಬಹುದೇನೋ ಅನಿಸತ್ತೆ. ಆದರೂ.....“ 
ಆಕೆ ಹೇಳುತ್ತಾ ಹೋದರು. ನೋವು, ಹತಾಶೆಯಲ್ಲಿ ಅವರು ಆಡಿದ ಮಾತುಗಳಲ್ಲಿ ತನಗೇ ಗೊತ್ತಿಲ್ಲದೇ ಅನುಭವಿಸುತ್ತಿದ್ದ ಭಾವನಾತ್ಮಕ ಶೋಷಣೆ ಕಾಣುತ್ತಿತ್ತು.
ಸಾಮಾನ್ಯವಾಗಿ, ದೈಹಿಕವಾಗಿ ಶೋಷಣೆಯಾದಾಗ ಮಾತ್ರವೇ ನಾವು ಅದನ್ನು ಶೋಷಣೆಯೆಂದು ಪರಿಗಣಿಸುತ್ತೇವೆ. ದೇಹದಲ್ಲಿ ಮೂಡಿದ ಕಲೆಗಳು ಕಥೆ ಹೇಳುತ್ತವೆ. ಆದರೆ ಭಾವನಾತ್ಮಕ ಶೋಷಣೆ ಮಾನಸಿಕ ಸ್ವಾಸ್ಥ್ಯದ, ಬದುಕಿನ ಬುನಾದಿಯನ್ನೇ ಅಲುಗಾಡಿಸಿಬಿಡಬಲ್ಲದು. 
ಏನಿದು ಭಾವನಾತ್ಮಕ ಶೋಷಣೆ?
ಬಹಳ ನಿಕಟ ಸಂಬಂಧಗಳಲ್ಲಿ ಕಾಣಿಸಿಕೊಳ್ಳುವ ಈ ಶೋಷಣೆಯಲ್ಲಿ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ಅವಮಾನಕರವಾಗಿ, ಅಗೌರವವಾಗಿ ನಡೆಸಿಕೊಳ್ಳುತ್ತಾನೆ. ಪದೇಪದೇ ಮಾತಿನಲ್ಲಿ ಹಿಂಸಿಸುತ್ತಾ, ತುಚ್ಚವಾಗಿ ಕಾಣುತ್ತಿರುತ್ತಾನೆ, ಶೋಷಿತನನ್ನು ನಿಯಂತ್ರಿಸುತ್ತಾ ತನ್ನ ಪ್ರಾಬಲ್ಯ ಮೆರೆಯುತ್ತಾನೆ. 
ಸಾಮಾನ್ಯವಾಗಿ ಶೋಷಿಸುವವರು ಬಾಲ್ಯದಲ್ಲಿ ಉಂಟಾದ ಮಾನಸಿಕ ಘಾತ, ಅಭದ್ರತೆಯ ಭಾವಗಳಿಂದ ಪ್ರಭಾವಕ್ಕೊಳಗಾಗಿರುತ್ತಾರೆ. ಅವರಿಗೆ ಆರೋಗ್ಯಕರವಾದ ಸಂಬಂಧಗಳನ್ನು ಬೆಳೆಸಿಕೊಳ್ಳಲು ಬರುವುದಿಲ್ಲ, ಕೋಪ, ಅಗೌರವ, ಹೀನಾಯವಾಗಿ ಕಾಣುವುದನ್ನೇ ಅವರು ಬದುಕುವ ಮಾರ್ಗಗಳೆಂದು ಕಲಿತುಬಿಟ್ಟಿರುತ್ತಾರೆ. ಶೋಷಿಸುವವರಲ್ಲಿ ವ್ಯಕ್ತಿತ್ವದ ಖಾಯಿಲೆಗಳೂ ಇರಬಹುದು. ಕಾರಣ ಏನೇ ಇದ್ದರೂ ಶೋಷಿಸುವುದು ಅಕ್ಷಮ್ಯ ಅಪರಾಧ ಎನ್ನುವುದನ್ನು ಮನಗಾಣಬೇಕು.
ಕೆಲವೊಮ್ಮೆ ಭಾವನಾತ್ಮಕ ಶೋಷಣೆ ದೈಹಿಕವಾದ ಹಿಂಸೆಯ ಹಂತಕ್ಕೂ ಹೋಗಬಹುದು. ಸಾಮಾನ್ಯವಾಗಿ ದೈಹಿಕವಾದ ಶೋಷಣೆ ನಡೆಯುವ ಮೊದಲು ಭಾವನಾತ್ಮಕವಾಗಿ ಹಿಂಸಿಸುವುದು ನಡೆದೇ ಇರುತ್ತದೆ. ಆದರೆ ಎಲ್ಲಾ ಭಾವನಾತ್ಮಕ ಶೋಷಣೆಗಳೂ ದೈಹಿಕ ಹಿಂಸೆ, ಥಳಿತವನ್ನೊಳಗೊಂಡಿರುವುದಿಲ್ಲ. ಹಾಗಾಗೇ, ಶೋಷಿತರು ತಮ್ಮ ಮೇಲೆ ನಡೆಯುತ್ತಿರುವುದು ಶೋಷಣೆ ಎಂದು ಅರಿಯದೇ ಇದೊಂದು ಸಾಮಾನ್ಯ ಸಮಸ್ಯೆ ಎಂದು ಪರಿಗಣಿಸಿಬಿಟ್ಟಿರುತ್ತಾರೆ.
ಶೋಷಿತರ ಪರಿಸ್ಥಿತಿ
ಭಾವನಾತ್ಮಕ ಶೋಷಣೆ ಮನಸ್ಸಿನಲ್ಲಿ ಬಹಳ ಆಳವಾದ ಗಾಯವನ್ನುಂಟು ಮಾಡಿಬಿಡಬಲ್ಲದು. ನಿರಂತರವಾಗಿ ವ್ಯಕ್ತಿತ್ವದ ಮೇಲಾಗುವ ದಾಳಿ, ಮಾನಸಿಕ ನೋವು, ತಿರಸ್ಕಾರ, ಹಿಂಸೆಗಳು ಯಾತನಾಮಯವಾದವು. ಅವು ವ್ಯಕ್ತಿಯ ಆತ್ಮಸ್ಥೈರ್ಯ, ನಂಬಿಕೆ, ಸ್ವಾಸ್ಥ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಲ್ಲದೇ ಶೋಷಿತನಲ್ಲಿ ಕೀಳರಿಮೆ, ಭಯ, ಅಸಹಾಯಕತೆ, ಆತಂಕ ಪ್ರವೃತ್ತಿ, ಒತ್ತಡ, ಖಿನ್ನತೆ ಮೊದಲಾದ ತೀವ್ರ ಮಾನಸಿಕ ತೊಂದರೆಗಳಿಗೂ ಕಾರಣವಾಗಿಬಿಡಬಹುದು. ವರ್ಷಗಟ್ಟಲೆ ಆತಂಕದ, ನೋವಿನ ಸ್ಥಿತಿ ಮುಂದುವರೆದರೆ  ಶೋಷಿತನ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು.
ನೀವೂ ಹಿಂಸೆಗೊಳಗಾಗುತ್ತಿದ್ದೀರಾ?
ಮಹಿಳೆಯೊಬ್ಬಳು ತನ್ನ ನೋವನ್ನು ಹಂಚಿಕೊಂಡಿದ್ದನ್ನು ನೋಡಿದಿರಿ. ಅವು ನಿಮ್ಮದೇ ಸಮಸ್ಯೆಗಳು ಎನಿಸುತ್ತಿವೆಯೇ? 
ಭಾವನಾತ್ಮಕ ಶೋಷಣೆಯಾಗುತ್ತಿದ್ದರೆ ಸಂಬಂಧಿಸಿದ ವ್ಯಕ್ತಿಯಿಂದ ನಿಮಗೆ ಈ ಅನುಭವಗಳಾಗುತ್ತಿರುತ್ತವೆ:
  • ಅತಿಯಾದ ಟೀಕೆ ಮತ್ತು ಚುಚ್ಚು ಮಾತು: ನಿಮ್ಮ ಆಯ್ಕೆ ನಿರ್ಧಾರಗಳನ್ನು ತುಚ್ಚವಾಗಿ ಕಾಣುತ್ತಾ ಟೀಕಿಸುವುದು. ಎಷ್ಟೆಂದರೆ ಸಣ್ಣಪುಟ್ಟ ಕೆಲಸಗಳಿಂದ ಹಿಡಿದು ನೀವು ಅತ್ಯಂತ ಚೆನ್ನಾಗಿ ಮಾಡುವ ಎಲ್ಲವುದರ ಬಗ್ಗೆಯೂ ವ್ಯಂಗ್ಯದ ಮಾತುಗಳನ್ನು ಆಡುವುದು. ಒಟ್ಟಾರೆ ನೀವು ಏನೇ ಮಾಡಿದರೂ, ಹೇಗೇ ನಡೆದುಕೊಂಡರೂ ಅದು ತಪ್ಪೇ.
  • ನಿಯಂತ್ರಣದಲ್ಲಿಟ್ಟುಕೊಳ್ಳುವುದು: ನಿಮ್ಮನ್ನು ವೈಯಕ್ತಿಕ ಸ್ವತಂತ್ರ್ಯದಿಂದ ವಂಚಿಸುವುದು. ಸ್ನೇಹಿತರು, ಬಂಧುಗಳೊಡನೆ ಬೆರೆಯದಂತೆ, ಕಾರ್ಯಕ್ರಮಗಳಿಗೆ ಪಾಲ್ಗೊಳ್ಳದಂತೆ ತಡೆಯುವುದು.
  • ಆರ್ಥಿಕವಾಗಿ ಪರಾವಲಂಬನೆ: ನಿಮ್ಮ ಖರ್ಚು-ವೆಚ್ಚಗಳನ್ನು ತಾನೇ ನಿರ್ಧರಿಸುವುದು, ನಿಮ್ಮ ದುಡ್ಡನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳುವುದು. ನಿರ್ಧಾರಗಳನ್ನು ನಿಮ್ಮ ಅನುಮತಿಯಿಲ್ಲದೇ ತೆಗೆದುಕೊಳ್ಳುವುದು, ನಿಮ್ಮ ಧಿರಿಸು, ವರ್ತನೆ ಎಲ್ಲವುದರ ಮೇಲೆ ನಿಬಂಧನೆ ಹೇರುವುದು, ಪ್ರತಿಯೊಂದಕ್ಕೂ ತನ್ನ ಒಪ್ಪಿಗೆ ಪಡೆಯುವಂತೆ ತಾಕೀತು ಮಾಡುವುದು.
  • ತಪ್ಪು ಹುಡುಕುವುದು ಮತ್ತು ಆರೋಪ ಮಾಡುವುದು: ನಿಮ್ಮಿಂದಾಗಿರುವ ನ್ಯೂನ್ಯತೆ, ತಪ್ಪುಗಳನ್ನು ಬೊಟ್ಟು ಮಾಡಿ ತೋರಿಸುವುದು. ಏನೇ ನಡೆದಿದ್ದರೂ ತನ್ನದೇನೂ ತಪ್ಪಿಲ್ಲ ಎನ್ನುವಂತೆ ವರ್ತಿಸುವುದು. ತಮ್ಮ ಎಲ್ಲಾ ಕಷ್ಟ, ತೊಂದರೆಗಳಿಗೂ ನಿಮ್ಮನ್ನೇ ಜವಾಬ್ದಾರರನ್ನಾಗಿ ಮಾಡುವುದು. ಅವರ ಪ್ರಕಾರ ಅವರು ಯಾವಾಗಲೂ ಸರಿ ಮತ್ತು ನೀವು ಯಾವಾಗಲೂ ತಪ್ಪಾಗಿರುತ್ತೀರಿ. 
  • ಅಭಿಪ್ರಾಯಗಳನ್ನು ಅಗೌರವಿಸುವುದು: ನಿಮ್ಮ ಅಭಿಪ್ರಾಯ, ಆಲೋಚನೆಗಳನ್ನು ನಿಕೃಷ್ಟವಾಗಿ ಕಾಣುತ್ತಾ ತನ್ನ ಅಭಿಪ್ರಾಯವನ್ನು ನಿಮ್ಮ ಮೇಲೆ ಹೇರುತ್ತಾ ಪ್ರಾಬಲ್ಯ ಮೆರೆಯುವರು. ವ್ಯಕ್ತಿಯಾಗಿ ನನಗೆ ಯಾವ ಆದರವೂ ಸಿಗುತ್ತಿಲ್ಲವೆಂಬ ಭಾವನೆ ನಿಮ್ಮ ಮನದಲ್ಲಿ ಹೆಚ್ಚುಹೆಚ್ಚು ಮೂಡುವುದು.
  • ಭಾವನಾತ್ಮವಾಗಿ ದೂರವೇ ಉಳಿದುಬಿಡುವುದು: ಆ ವ್ಯಕ್ತಿಯೊಡನೆ ನಿಮಗೆ ಯಾವ ಭಾವಸಂಬಂಧವನ್ನೂ ಬೆಳೆಸಲು ಸಾಧ್ಯವಾಗದು. ನಿಮ್ಮ ಕಷ್ಟಗಳಿಗೆ ಅವರು ಹೆಗಲು ಕೊಡುವುದಿಲ್ಲ. ನಿಮ್ಮ ಬಗ್ಗೆ ಕನಿಷ್ಟವಾದ ಕರುಣೆ, ಸಹಾನುಭೂತಿಯನ್ನೂ ಅವರು ತೋರುವುದಿಲ್ಲ. 
  • ತಿರಸ್ಕರಿಸುವುದು ಮತ್ತು ಅವಮಾನಿಸುವುದು: ನಿಮ್ಮನ್ನು ತಿರಸ್ಕಾರದಿಂದ ಕಾಣುವರು ಮತ್ತು ಸ್ನೇಹಿತರು, ಆಪ್ತರೊಡನೆ ನಿಮಗೆ ಅವಮಾನ, ಮುಜುಗರ ಉಂಟಾಗುವಂತೆ ಮಾತನಾಡುವರು
  • ಭಯ ಹುಟ್ಟಿಸುವುದು: ಅವರ ಮಾತುಗಳಿಂದ ಸಂಬಂಧದ ಬಗ್ಗೆ, ಭವಿಷ್ಯದ ಬಗ್ಗೆ, ಸಮಾಜದ ಬಗ್ಗೆ ನಿಮ್ಮಲ್ಲಿ ಭಯ ಮೂಡಿಸುವರು.
  • ಕಡೆಗಣಿಸುವುದು: ಮಾತನಾಡದೇ ಇದ್ದು ಬಿಡುವುದು, ಪ್ರೀತಿ-ವಿಶ್ವಾಸಗಳನ್ನು ತೋರದಂತೆ ಬಿಗಿಯಾಗಿರುವುದು.
  • ಸಂಶಯ, ಅಸೂಯೆ, ಭಾವನಾತ್ಮಕವಾದ ಬ್ಲಾಕ್‍ಮೇಲ್‍ಗಳು ಮುಂತಾದವು.
ಇದಷ್ಟೇ ಅಲ್ಲದೆ ನಿಮ್ಮ ಮನಸ್ಸು, ವ್ಯಕ್ತಿತ್ವ, ಆತ್ಮಗೌರವಕ್ಕೆ ಕುಂದು ಬರುವಂತಹ ವರ್ತನೆಗಳನ್ನು ನಿಮ್ಮ ಆಪ್ತರು ಪದೇಪದೇ ತೋರುತ್ತಿದ್ದರೆ ನೀವು ಶೋಷಿತರಾಗಿದ್ದೀರೆಂದೇ ಅರ್ಥ.
ಭಾವನಾತ್ಮಕ ಶೋಷಣೆ- ನೀವೇನು ಮಾಡಬೇಕು?
ಕೆಲವು ಸಂಬಂಧಗಳಲ್ಲಿ ಭಾವನಾತ್ಮಕ ನೋವುಗಳಷ್ಟೇ ಇರುತ್ತವೆ. ಅದಿನ್ನೂ ತೀವ್ರವಾದ ಶೋಷಣೆಯ ಹಂತಕ್ಕೆ ಹೋಗಿರುವುದಿಲ್ಲ. ಹಾಗಿದ್ದಾಗ ಇವನ್ನು ಪ್ರಯತ್ನಿಸಿ ನೋಡಿ:
  • ನಿಮ್ಮನ್ನು ಮನಬಂದಂತೆ ಕಾಣುವಂತಿಲ್ಲ, ನೋಯಿಸುವಂತಿಲ್ಲ ಎಂದು ಸ್ಪಷ್ಟವಾದ ಗಡಿರೇಖೆ (ಬೌಂಡರಿ) ಹಾಕಿರಿ. 
  • ಚರ್ಚೆಗೆ ಇಳಿಯದಿರಿ. ಅವರ ಕೋಪ, ಆವೇಶದ ಮಾತುಗಳಿಗೆಲ್ಲಾ ಉತ್ತರಿಸುವುದನ್ನು ಬಿಡಿ. ವಿಷಯವನ್ನು ಬದಲಾಯಿಸಲು ಪ್ರಯತ್ನಿಸಿ, ಇಲ್ಲವೇ ಆ ಸ್ಥಳದಿಂದ ಹೊರ ನಡೆಯಿರಿ.
  • ತಾಳ್ಮೆಯಿಂದ, ಸ್ಪಷ್ಟವಾಗಿ ಮತ್ತು ದಿಟ್ಟವಾಗಿ ಮಾತನಾಡಿ. ನೀವು ಈ ಸಂಬಂಧದಿಂದ ಏನು ಬಯಸುತ್ತಿರುವಿರೆಂದು ಮನದಟ್ಟು ಮಾಡಿ.
  • ಈ ಭಾವನಾತ್ಮಕ ನೋವುಗಳು ನಿಲ್ಲದೇ ಮುಂದವರಿದುಬಿಟ್ಟರೆ ಅದು ಹಿಂಸೆಯ ರೂಪ ಪಡೆದು ಭಾವನಾತ್ಮಕ ಶೋಷಣೆಯ ಹಂತಕ್ಕೆ ಹೋಗುವುದು. 
  • ಮೊದಲನೆಯದಾಗಿ ನೀವು ಶೋಷಿತರಾಗುತ್ತಿರುವಿರಿ ಎಂಬುದನ್ನು ಮನಗಾಣಿ. ನೆನಪಿಡಿ, ಇಂತಹ ಹಿಂಸಾತ್ಮಕ ಸನ್ನಿವೇಶದಲ್ಲಿ ನೀವಿರುವಿರಾದರೆ ಅದರ ಬಗ್ಗೆ ಒಂದಷ್ಟು ಧೃಡ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.
  • ನಾನು ಶೋಷಿಸುತ್ತಿರುವ ವ್ಯಕ್ತಿಯನ್ನು ತಿದ್ದುತ್ತೇನೆ ಎಂದು ಹೊರಡದಿರಿ. ತಿದ್ದುಕೊಳ್ಳುವ ಸೂಕ್ಷ್ಮತೆ ಇರುವ ವ್ಯಕ್ತಿಗಳ್ಯಾರೂ ಶೋಷಿಸುವ ಮಟ್ಟಕ್ಕೆ ಇಳಿಯಲಾರರು. ಇಲ್ಲಿ ಸಮಸ್ಯೆಯೆಂದರೆ ಹಿಂಸಿಸುತ್ತಿರುವ ವ್ಯಕ್ತಿಗೆ ತಾನು ಶೋಷಿಸುತ್ತಿದ್ದೇನೆ ಎಂಬ ಅರಿವೇ ಇರುವುದಿಲ್ಲ. ಇಂತಹ ಸನ್ನಿವೇಶದಲ್ಲಿ ನಿಮ್ಮನ್ನು ನೀವು ಕಾಪಾಡಿಕೊಳ್ಳಲು ಏನು ಮಾಡಬೇಕು ಎಂಬುದಷ್ಟೇ ಅತ್ಯಂತ ಮುಖ್ಯವಾಗುವುದು. 
  • ಇಲ್ಲಿ ನಿಮ್ಮ ಯಾವ ತಪ್ಪೂ ಇರದು. ಆರೋಪ ಹೊರೆಸಿಕೊಳ್ಳುವುದನ್ನು ಬಿಡಿ. ಹೀಗೆ ಆರೋಪಿಸಿಕೊಳ್ಳುವ ಪ್ರವೃತ್ತಿಯೂ ನೀವು ಶೋಷಣೆಗೊಳಗಾದ್ದರಿಂದಲೇ ನಿಮಗೆ ಬಂದಿದೆ ಎಂಬುದನ್ನು ಮನಗಾಣಿ.
  • ನೀವು ಇರುವುದು ದೀರ್ಘಕಾಲಿಕ ಸಂಬಂಧದಲ್ಲಿ. ನಿಮ್ಮ ಮುಂದೆ ದೊಡ್ಡ ಜೀವನ ಇದೆ. ತೀವ್ರವಾಗಿ ಹಿಂಸೆಯಾಗುತ್ತಿದ್ದರೆ, ಇಡೀ ಬದುಕನ್ನು ಹೇಗೋ ಹೊಂದಿಕೊಂಡು ಕಳೆಯುತ್ತೇನೆ ಎನ್ನುವ ಮೊದಲು ದಯವಿಟ್ಟು ಯೋಚಿಸಿ.
  • ನಿಮಗೆ ಆಗುತ್ತಿರುವ ಹಿಂಸೆಯನ್ನು ಆಪ್ತರೊಡನೆ ಹಂಚಿಕೊಳ್ಳಿ. ಸಂಬಂಧದೊಳಗೆ ಮೌನವಾಗಿ ನರಳುವುದರಿಂದ ನಿಮ್ಮ ಗೌರವಕ್ಕೆ ಚ್ಯುತಿ ಬರುವುದೇ ಹೊರತು, ಹೊರಗೆ ಹಂಚಿಕೊಳ್ಳುವುದರಿಂದಲ್ಲ.
  • ನಿಮ್ಮ ಹಕ್ಕುಗಳು ನಿಮಗೆ ತಿಳಿದಿರಲಿ. ಗೌರವಯುತವಾದ ಸಂಬಂಧ ಹೊಂದುವುದು ನಿಮ್ಮ ಹಕ್ಕು. ಅಂತೆಯೇ ಈ ಸಂಬಂಧದಿಂದ ಆರ್ಥಿಕವಾಗಿ, ಕಾನೂನುಬದ್ಧವಾಗಿಯೂ ಸಹ ಕೆಲವು ಹಕ್ಕುಗಳು ನಿಮ್ಮದಾಗಿರುತ್ತವೆ. ಅದರ ಮಾಹಿತಿ ಪಡೆದು ಸಬಲರಾಗಿ.
  • ಸಹಾಯವಾಣಿಗೆ ಕರೆ ಮಾಡಿ. ಆಪ್ತ ಸಮಾಲೋಚಕರ ಸಹಾಯ ಪಡೆಯಿರಿ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org