ಕ್ಯಾನ್ಸರ್‌ - ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೇ?

ಕ್ಯಾನ್ಸರ್‌ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಗಳೆರಡರ ಮೇಲೂ ಪರಿಣಾಮ ಬೀರುತ್ತದೆ. ಇದನ್ನು ನೀವು ಹೇಗೆ ಎದುರಿಸುತ್ತೀರಿ?

ಕ್ಯಾನ್ಸರ್‌ ಇದೆ ಎಂದು ಮೊದಲ ಬಾರಿ ಪರೀಕ್ಷೆಗಳಿಂದ ಗೊತ್ತಾದಾಗ ಆಘಾತ, ಅಪನಂಬಿಕೆ, ಕೋಪ, ಆಯಾಸ ಮತ್ತು ದುಃಖದಂಥ ಹಲವಾರು ತೀವ್ರವಾದ ಭಾವನೆಗಳು ಉಂಟಾಗುತ್ತವೆ. ಇವು ಜೀವನದ ವಿವಿಧ ಅಂಶಗಳ ಮೇಲೆ ಪರಿಣಾಮ ಬೀರಲಿದ್ದು, ಮತ್ತಷ್ಟು ಅನಾರೋಗ್ಯಕ್ಕೆ ಕಾರಣವಾಗುತ್ತವೆ. ಕ್ಯಾನ್ಸರ್‌ ಇದೆ ಎಂದು ಗೊತ್ತಾದಾಗ ಹೆಚ್ಚಿನ ಜನರು ದುಃಖದ ವಿವಿಧ ಹಂತಗಳನ್ನು ಎದುರಿಸುತ್ತಾರೆ.

ಒಂದು ವೇಳೆ ನಿಮಗೆ ಕ್ಯಾನ್ಸರ್‌ ಇದೆ ಎಂಬುದು ಗೊತ್ತಾದರೆ, ನೀವು ಭಯಗೊಳ್ಳುತ್ತೀರಿ. ಅಪನಂಬಿಕೆಗೊಳಗಾಗುವುದಲ್ಲದೇ ಹಲವಾರು ಆಲೋಚನೆಗಳು ನಿಮ್ಮನ್ನು ಸುತ್ತುವರಿಯುತ್ತವೆ. ಕಾರಣಗಳು ಮತ್ತು ಪರಿಹಾರ ತಿಳಿಯುವ ಸಲುವಾಗಿ ಯೋಚಿಸುತ್ತೀರಿ. ಹೆಚ್ಚಿನ ರೋಗಿಗಳು "ಸಾಮಾನ್ಯವಾಗಿ ನನಗೇ ಯಾಕೆ ಬಂತು? ಇದುವರೆಗೂ ನಾನು ಆರೋಗ್ಯಯುತವಾಗಿಯೇ ಜೀವನ ನಡೆಸುತ್ತಿದ್ದೆ. ಆದರೂ ಇದು ಹೇಗೆ ಬಂತು? ಇದು ನನ್ನ ಕರ್ಮವೇ? ಮೇಲಿನಿಂದ ಇದು ಒಂದು ಚಿಹ್ನೆಯೇ? ಇದು ಎಷ್ಟು ಕೆಟ್ಟದು? ನಾನು ಚೇತರಿಸಿಕೊಳ್ಳುತ್ತೇನಾ? ಇದರಿಂದ ನಾನು ಸಾಯ್ತೀನಾ?" ಎಂಬಂಥ ಪ್ರಶ್ನೆಗಳನ್ನು ಪರಿಹರಿಸಿಕೊಳ್ಳುವುದಕ್ಕಾಗಿಯೇ ಬರುತ್ತಾರೆ ಎನ್ನುತ್ತಾರೆ ಮನಃಶ್ಶಾಸ್ತ್ರಜ್ಞ ಹಿಬಾ ಸಿದ್ದಿಕ್ಕಿ.

ಕ್ಯಾನ್ಸರ್‌ ಪತ್ತೆಯಾಗುವ ಕ್ಷಣ ನಿಮ್ಮ ಜೀವನದ ಬದಲಾವಣೆಯ ಘಟ್ಟವೂ ಹೌದು. ಭೌತಿಕ ರೋಗಲಕ್ಷಣಗಳು ದುಃಖ, ಹತಾಶೆ ಮತ್ತು ಆಯಾಸವನ್ನು ಉಂಟುಮಾಡಬಹುದು. ಇದರಿಂದ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಏನಾಗಲಿದೆಯೋ ಎಂದು ಚಿಕಿತ್ಸೆಯ ಬಗ್ಗೆ ಚಿಂತೆಗೀಡಾಗಬಹುದು,.

ನಿಮ್ಮ ಆರೋಗ್ಯದ ಮೇಲಷ್ಟೇ ಅಲ್ಲದೇ ನಿಮ್ಮ ಕುಟುಂಬ, ಸಂಬಂಧಗಳ ಮೇಲೂ ಇದು ಪರಿಣಾಮ ಬೀರಬಹುದು. ನಿಮ್ಮ ರೋಗಲಕ್ಷಣವನ್ನು ಅವಲಂಭಿಸಿ ಇದು ನಿರ್ಧಾರವಾಗುತ್ತದೆ. ನಿಮ್ಮ ಜೀವನಶೈಲಿ, ಕೆಲಸ, ಮತ್ತು ಕುಟುಂಬದ ಜವಾಬ್ದಾರಿಗಳ ಜತೆಗೆ ಅನೇಕ ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.

ಸದ್ಯದ ದೈಹಿಕ ಸ್ಥಿತಿಯಲ್ಲಿ ನಿಮ್ಮ ಬದ್ಧತೆಗಳು, ಜವಾಬ್ದಾರಿಗಳು ಮತ್ತು ನಿಮ್ಮ ಚಿಕಿತ್ಸೆಯ ವೇಳಾಪಟ್ಟಿಯನ್ನು ವ್ಯವಸ್ಥಿತಗೊಳಿಸುವ ವೇಳೆಯಲ್ಲಿ ನಿಮ್ಮ ಗುರುತು ಮತ್ತು ಸ್ವಾಭಿಮಾನಕ್ಕೆ ದಕ್ಕೆ ಮಾಡುವ ಸಾಧ್ಯತೆಯಿರುತ್ತದೆ.  ದೇಹದಲ್ಲಾಗುವ ಬದಲಾವಣೆಗಳಿಂದಾಗಿ ನಿಮ್ಮ ಸ್ವಯಂ ಭರವಸೆ ಕಮ್ಮಿಯಾಗಬಹುದು.

ಮಾನಸಿಕ ಆರೋಗ್ಯವನ್ನು ಏಕೆ ಹುಡುಕಬೇಕು?

ಕ್ಯಾನ್ಸರ್ ರೋಗನಿರ್ಣಯದಿಂದ ಉಂಟಾಗುವ ಒತ್ತಡಗಳು ಮತ್ತು ಕಾಳಜಿಗಳು ಗಮನಾರ್ಹವಾದವು ಮತ್ತು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ರೋಗನಿರ್ಣಯವಾದ ಕೆಲವು ದಿನಗಳವರೆಗೆ ಆಘಾತದಿಂದ ನಿಮ್ಮ ಜೀವನ ಅಲ್ಲಾಡುವುದು ಸಹಜ. ಜತೆಗೆ ನಿಮ್ಮ ಆರೋಗ್ಯದ ಬಗ್ಗೆ ಆತಂಕವೂ ನಿಮ್ಮನ್ನು ಆವರಿಸಬಹುದು. ಆದಾಗ್ಯೂ ನೀವು ಸಹಾಯ ಯಾಚಿಸುವಾಗ ಇದೆಲ್ಲವನ್ನೂ ನೀವು ಹೇಗೆ ಭಾವಿಸುತ್ತೀರಿ ಎಂಬುದು ಮುಖ್ಯವಾಗಿದೆ.

ಕ್ಯಾನ್ಸರ್‌ನಿಂದ ಬಳಲುತ್ತಿರುವವರು ಆತಂಕ ಹಾಗೂ ಖಿನ್ನತೆಗೆ ಜಾರುವ ಅಪಾಯಗಳು ಹೆಚ್ಚಿವೆ ಎನ್ನುತ್ತವೆ ಸಂಶೋಧನೆಗಳು. ಅಲ್ಲದೇ ಇವರ ಈ ಮಾನಸಿಕ ಸಮಸ್ಯೆಗಳು ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರಿ ಚೇತರಿಸಿಕೊಳ್ಳುವ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ನಿಮಗೆ ಕ್ಯಾನ್ಸರ್‌ ಇದೆ ಎಂದು ಗೊತ್ತಾದಾಗ ಮಾನಸಿಕ ಆರೋಗ್ಯದ ಬಗ್ಗೆ ಗಮನಹರಿಸಿದರೆ ಆರೋಗ್ಯವನ್ನು ಮತ್ತಷ್ಟು ಉತ್ತಮವಾಗಿಸಿಕೊಳ್ಳಬಹುದು.

ಹೇಗೆ ನಿಭಾಯಿಸಬಹುದು?

ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವು ನಿಮ್ಮ ಕೈಯಲ್ಲೇ ಇದೆ ಮತ್ತು ಕ್ಯಾನ್ಸರ್‌ ರೋಗನಿರ್ಣಯವಾದಾಗ ಇವೆರಡನ್ನೂ ಸಮಾನವಾಗಿ ನಿಭಾಯಿಸುವ ಕೆಲವು ಮಾರ್ಗಗಳು ಇಲ್ಲಿವೆ. ನಿಮ್ಮ ಸಲಹೆಗಳಿಗೆ ನಿಮ್ಮ ದೈಹಿಕ ಆರೋಗ್ಯ ಮತ್ತು ನಿಮ್ಮ ವೈದ್ಯರ ನಿರ್ದೇಶನಗಳನ್ನು ಪರಿಗಣಿಸಿ, ಸಾಧ್ಯವಾದಷ್ಟು ಮಟ್ಟಿಗೆ ಈ ಸಲಹೆಗಳನ್ನು ಪಾಲಿಸಬಹುದು.

ನಿಮ್ಮ ಖಾಯಿಲೆ ಮತ್ತು ಅದರ ಚಿಕಿತ್ಸೆಯ ಬಗ್ಗೆ ಸಂಪೂರ್ಣ ಪ್ರಶ್ನೆಗಳನ್ನು ಡಾಕ್ಟರ್ ಬಳಿ ಕೇಳಿ ಅವರಿಂದ ಉತ್ತರ ಪಡೆಯಿರಿ. ಹೀಗೆ ಪಡೆದ ಖಚಿತ ಮಾಹಿತಿಗಳಿಂದ ರೋಗ ನಿಯಂತ್ರಣವನ್ನು ಮತ್ತಷ್ಟು ಸುಲಭವಾಗಿಸುತ್ತದೆ.

  • ಹೆಚ್ಚಿನ ಆರೋಗ್ಯಯುತ, ಪರಿಪೂರ್ಣ ಆಹಾರವನ್ನು ನಿಮ್ಮ ಜೀವನಶೈಲಿಯಲ್ಲಿ ಸೇರಿಸಿಕೊಳ್ಳಲು ವೈದ್ಯರ ಸಲಹೆ ಪಡೆಯಿರಿ. ಮದ್ಯಪಾನ ಹಾಗೂ ಧೂಮಪಾನ ಮಾಡುತ್ತಿದ್ದರೆ ಅವುಗಳು ನಿಮ್ಮ ದೇಹವನ್ನು ಮತ್ತಷ್ಟು ಅನಾರೋಗ್ಯದ ಕಡೆಗೆ ಒಯ್ಯುವುದಲ್ಲದೇ, ಒತ್ತಡ ಮತ್ತು ಆತಂಕವನ್ನು ಹೆಚ್ಚಿಸುತ್ತದೆ.
  • ಹಗುರವಾದ ನಡಿಗೆಯಾದರೂ ಆದೀತು, ನಿಮ್ಮ ದಿನಚರಿಯಲ್ಲಿ ವ್ಯಾಯಾಮಕ್ಕೂ ಸಮಯ ಮೀಸಲಿಡಿ.
  • ನಿಮ್ಮ ನಿದ್ರೆಯ ಅಭ್ಯಾಸವನ್ನು ಬದಲಾಯಿಸಿಕೊಳ್ಳುವುದೂ ಮುಖ್ಯವಾದದ್ದು. ರಾತ್ರಿ ಪೂರ್ತಿ ನಿದ್ರೆ ಮಾಡುವುದರಿಂದ ಮಾನಸಿಕ ಆರೋಗ್ಯ ಸುಧಾರಿಸಿ, ನಿಮ್ಮ ಭಾವನೆಗಳನ್ನು ನಿಯಂತ್ರಿಸಲು ಹೇರಳ ಸಹಾಯ ಮಾಡುತ್ತದೆ.
  • ನಿಮಗೆ ಖುಷಿ ಕೊಡುವ ಕೆಲಸ ಅಥವಾ ಹವ್ಯಾಸದಲ್ಲಿ ತೊಡಗಿಸಿಕೊಳ್ಳಿ. ನಿಮ್ಮ ಒತ್ತಡವನ್ನು ಕಮ್ಮಿ ಮಾಡುವ ಕೆಲಸವನ್ನು ಹುಡುಕಿಕೊಳ್ಳಿ.
  • ಸಾಮಾಜಿಕ ಬೆಂಬಲದ ಮೂಲಗಳನ್ನು ಹುಡುಕಿ ಮತ್ತು ಸಂಗ್ರಹಿಸಿ: ಪ್ರಾಯೋಗಿಕ ಮತ್ತು ಭಾವನಾತ್ಮಕ ಬೆಂಬಲಕ್ಕಾಗಿ ನಿಮ್ಮ ಕುಟುಂಬ, ಸ್ನೇಹಿತರು, ನೆರೆಹೊರೆಯವರ ಬೆಂಬಲವನ್ನು ಪಡೆಯಿರಿ.
  • ನಿಮಗೆ ಇಷ್ಟವಾದ ಮಾರ್ಗದಲ್ಲಿ ಯಾರಾದರೂ ಒಬ್ಬರಲ್ಲಿ ಭಾವನೆಗಳನ್ನು ವ್ಯಕ್ತಪಡಿಸಿ. ಅದು ಬರವಣಿಗೆಯಾಗಬಹುದು ಅಥವಾ ಚಿತ್ರದ ಮೂಲಕವೂ ಆಗಿರಬಹುದು.
  • ಲಭ್ಯವಿದ್ದರೆ ಸ್ಥಳೀಯ ಸಹಾಯಕರ ಗುಂಪಿಗೆ ಸೇರಿಕೊಳ್ಳಿ. ಇದಲ್ಲದೆ, ನಿಮ್ಮ ಅನಾರೋಗ್ಯವನ್ನು ನಿಭಾಯಿಸಲು ನೀವು ಮಾನಸಿಕ ಆರೋಗ್ಯ ವೃತ್ತಿಪರರೊಂದಿಗೆ ಮಾತನಾಡಬಹುದು. ಚಿಕಿತ್ಸೆ ಪ್ರಕ್ರಿಯೆಯಲ್ಲಿ ಹಾಗೂ ಪರಿಣಾಮಕಾರಿಯಾಗಿ ನಿಮ್ಮ ಖಾಯಿಲೆಯನ್ನು ನಿಭಾಯಿಸಲು ಹಾಗೂ ಕಾರ್ಯವಿಧಾನಗಳನ್ನು ಅಭಿವೃದ್ಧಿಪಡಿಸಲು ಮಾನಸಿಕ ಬೆಂಬಲವು ನಿಮಗೆ ಸಹಾಯ ಮಾಡುತ್ತದೆ. ಮುಂದೆ ಬರಬಹುದಾದ ಯಾವುದೇ ದೈಹಿಕ ಅಥವಾ ಭಾವನಾತ್ಮಕ ಬದಲಾವಣೆಗಳಿಗೆ ತಯಾರಾಗಲು ಇದು ಸಹಾಯ ಮಾಡುತ್ತದೆ.

ಕೌನ್ಸೆಲಿಂಗ್ ಸೈಕಾಲಜಿಸ್ಟ್ ಮತ್ತು ಸೈಕೊ-ಆನ್ಕೊಲೊಜಿಸ್ಟ್‌ ಹಿಬಾ ಖುರೇಷಿ ಅವರು ನೀಡಿರುವ ಮಾಹಿತಿಗಳನ್ನಾಧರಿಸಿ ಈ ಲೇಖನವನ್ನು ಬರೆಯಲಾಗಿದೆ.

ದುಃಖದ ಹಂತಗಳು

ನಿರಾಕರಣೆ: ವ್ಯಕ್ತಿಯು ಸನ್ನಿವೇಶದ ನೈಜತೆಯನ್ನು ನಿರಾಕರಿಸುತ್ತಾರೆ. ‘ಇಲ್ಲ, ನನಗೆ ಹೀಗಾಗಲು ಸಾಧ್ಯವೇ ಇಲ್ಲ”

ಸಿಟ್ಟು: ತಮ್ಮ ಸುತ್ತಲಿನವರ ಮೇಲೆ ಅಥವಾ ತಮ್ಮ ಮೇಲೆ ತಾವೇ ಈ ವ್ಯಕ್ತಿಗಳು ಸಿಟ್ಟಾಗುತ್ತಾರೆ. "ನನ್ನ ಜೀವನದಲ್ಲಿ ನಾನು ಯಾವತ್ತೂ ಸಿಗರೇಟ್‌ ಸೇದಿಲ್ಲ, ಆದರೂ ಇದ್ಯಾಕೆ ನಂಗೆ ಬಂತು?”

ಚೌಕಾಶಿ: ವ್ಯಕ್ತಿಯು ಹೊಂದಾಣಿಕೆ ಮಾಡಿಕೊಳ್ಳಲು ದೇವರೊಂದಿಗೆ ಅಥವಾ ಉನ್ನತ ಶಕ್ತಿಯ ಮೊರೆ                   ಹೋಗುತ್ತಾನೆ. “ ಇದು ನನ್ನ ಪರೀಕ್ಷಾ ಕಾಲ ಅಂದ್ಕೊಳ್ತೇನೆ, ಇನ್ನು ಜೀವನ ಪೂರ್ತಿ ನಾನು ಸಿಗರೇಟ್‌ ಸೇದುವುದಿಲ್ಲ”

ಖಿನ್ನತೆ: ಒಂದು ವೇಳೆ  ವ್ಯಕ್ತಿಯು ಪರಿಸ್ಥಿತಿಯನ್ನು ಒಪ್ಪಿಕೊಂಡರೂ, ಬೇಸರದಿಂದ ಕೂಡಿದ ಮನಸ್ಥಿತಿ ಆತನ ಖಿನ್ನತೆಗೆ ಕಾರಣವಾಗಬಹುದು. “ನಾನು ಬಿಟ್ಟುಬಿಡುತ್ತೇನೆ. ಇದರ ಬಗ್ಗೆ ಏನು ಮಾಡುವುದಕ್ಕೂ ನಂಗಿಷ್ಟ ಇಲ್ಲ”

ಸ್ವೀಕಾರ: ವ್ಯಕ್ತಿಯು ಸನ್ನಿವೇಶವನ್ನು ಒಪ್ಪಿಕೊಳ್ಳಲು ತೊಡಗುವುದು ಮತ್ತು ಅದು ನಿಧಾನವಾಗಿ                       ಅವನ ಜೀವನದ ಮೇಲೆ ಪ್ರಭಾವ ಬೀರಲು ಆರಂಭಿಸುತ್ತದೆ. “ಹೌದು, ನನಗಿರುವುದನ್ನು ಒಪ್ಪಿಕೊಳ್ಳುತ್ತೇನೆ”

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org