ಥೈರಾಯ್ಡ್ ನನ್ನ ಮನಸ್ಸಿನ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡುವುದೆ?

ಥೈರಾಯ್ಡ್ ಅಸಮತೋಲನವು ಖಿನ್ನತೆ ಮತ್ತು ಆತಂಕಗಳಿಗೆ ಸಮನಾದ ಭಾವನಾತ್ಮಕ ಪರಿಣಾಮಗಳನ್ನು ಉಂಟುಮಾಡಬಲ್ಲದು

ಥೈರಾಯ್ಡ್ ಎಂದರೇನು?

ಕುತ್ತಿಗೆ ಭಾಗದಲ್ಲಿರುವ ಥೈರಾಯ್ಡ್ ಗ್ರಂಥಿಯು ಥೈರಾಯ್ಡ್ ರಸದೂತಗಳನ್ನು (ಹಾರ್ಮೋನ್ಸ್) ಸ್ರವಿಸುತ್ತದೆ. ಈ ಹಾರ್ಮೋನುಗಳು ದೇಹದ ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸಿ, ಪ್ರೊಟೀನುಗಳನ್ನು ರಕ್ತಕ್ಕೆ ಸೇರಿಸುತ್ತವೆ. ಥೈರಾಯ್ಡ್ ಹಾರ್ಮೋನುಗಳ ಸ್ರವಿಸುವಿಕೆಯಲ್ಲಿ ಅಸಮತೋಲನ ಉಂಟಾದರೆ, ದೇಹಾರೋಗ್ಯ ಮಾತ್ರವಲ್ಲದೆ ಮಾನಸಿಕ ಆರೋಗ್ಯದ ಮೇಲೂ ಭಾವುಕತೆಯ ಮೇಲೂ ಪರಿಣಾಮ ಬೀರುತ್ತದೆ.

ಥೈರಾಯ್ಡ್ ಗ್ರಂಥಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಹೀಗಿವೆ :

 1. ಹೈಪೋಥೈರಾಯ್ಡಿಸಮ್, ಅಥವಾ ಥೈರಾಯ್ಡ್ ಹಾರ್ಮೋನ್ ಸ್ರಾವದಲ್ಲಿ ಕೊರತೆ – ಇದು ಭಾರತದಲ್ಲಿ ಸ್ತ್ರೀ ಪುರುಷರಿಬ್ಬರಲ್ಲೂ ಸರ್ವೇಸಾಮಾನ್ಯವಾಗಿ ಕಂಡುಬರುವ ಸಮಸ್ಯೆಯಾಗಿದೆ.

 2. ಹೈಪರ್ ಥೈರಾಯ್ಡಿಸಮ್, ಅಥವಾ ಮಿತಿಮೀರಿದ ಥೈರಾಯ್ಡ್ ಹಾರ್ಮೋನ್ ಸ್ರಾವ

 3. ಥೈರಾಯ್ಡ್ ಕ್ಯಾನ್ಸರ್

 4. ಗೊಯಟೆರ (ಥೈರಾಯ್ಡ್ ಗ್ರಂಥಿಯ ಊತ)

ಇವುಗಳಲ್ಲಿ, ಥೈರಾಯ್ಡ್ ಹಾರ್ಮೋನ್ ಅಸಮತೋಲನದಿಂದ ಉಂಟಾಗುವ (ಹೈಪರ್ ಮತ್ತು ಹೈಪೊ ಥೈರಾಯ್ಡಿಸಮ್) ಸಮಸ್ಯೆಗಳು ಅತ್ಯಂತ ಸಾಮಾನ್ಯವಾಗಿದ್ದು, ಮಹಿಳೆಯರ ಮೇಲೆ ಹೆಚ್ಚು ದುಷ್ಪರಿಣಾಮ ಬೀರುತ್ತವೆ.

ಥೈರಾಯ್ಡ್ ಅಸಮತೋಲನವು ಮಾನಸಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಖಿನ್ನತೆ, ಉದ್ವಿಗ್ನತೆಗಳಿಗೆ ಸಮನಾದ ಭಾವೋದ್ವೇಗವನ್ನು ಇದು ಉಂಟು ಮಾಡುತ್ತದೆ. ಆದ್ದರಿಂದ, ಮಾನಸಿಕ ಅನಾರೋಗ್ಯದ ತಪಾಸಣೆ ನಡೆಸುವಾಗ ಥೈರಾಯ್ಡ್ ಸಮಸ್ಯೆ ಇದೆಯೋ ಇಲ್ಲವೋ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳುವುದು ಕೂಡ ಅಗತ್ಯವಾಗುತ್ತದೆ; ಮತ್ತು ಈ ಸಮಸ್ಯೆಯನ್ನು ಹೋಗಲಾಡಿಸಿಕೊಂಡು ಮುಂದಿನ ಚಿಕಿತ್ಸೆ ನಡೆಸಬೇಕಾಗುತ್ತದೆ.

ಥೈರಾಯ್ಡ್ ಸಮಸ್ಯೆಗಳಿಗೂ ಮಾನಸಿಕ ಆರೋಗ್ಯಕ್ಕೂ ಸಂಬಂಧವೇನು?

 1. ಹೈಪೋಥೈರಾಯ್ಡಿಸಮ್’ಗೆ ಒಳಗಾದವರು ಖಿನ್ನತೆಗೆ ಸಮನಾದ ವಿಷಣ್ಣತೆ, ಸುಸ್ತು, ಏಕಾಗ್ರತೆಯ ಕೊರತೆ, ಆಹಾರದಲ್ಲಿ ಅನಾಸಕ್ತಿ ಮತ್ತು ತೂಕ ಹೆಚ್ಚುವುದೇ ಮೊದಲಾದ ಲಕ್ಷಣಗಳನ್ನು ತೋರ್ಪಡಿಸುತ್ತಾರೆ. ಹೈಪರ್ ಥೈರಾಯ್ಡಿಸಮ್’ಗೆ ಒಳಗಾದವರು ರಕ್ತದ ಒತ್ತಡ ಹೆಚ್ಚಿಸುವ ಮತ್ತು ಎದೆ ಬಡಿತ ಹೆಚ್ಚಿಸುವ ಉದ್ವಿಗ್ನತೆಯ ಲಕ್ಷಣಗಳನ್ನು ತೋರ್ಪಡಿಸುತ್ತಾರೆ.

 2. ಥೈರಾಯ್ಡ್ ಅಸಮತೋಲನವು ಮಹಿಳೆಯರ ದೇಹದಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಗುತ್ತವೆ. ತೂಕದಲ್ಲಿ ಹೆಚ್ಚಳ, ಮುಖದಲ್ಲಿ ಕೂದಲು ಬೆಳೆಯುವುದು, ಕಣ್ಣುಗಳ ಊತ ಮೊದಲಾದ ದುಷ್ಪರಿಣಾಮಗಳನ್ನು ಉಂಟುಮಾಡುತ್ತದೆ. ಇದರಿಂದ ಮಹಿಳೆಯರಲ್ಲಿ ದೇಹಸೌಂದರ್ಯದ ಬಗ್ಗೆ ಹೆಚ್ಚಿನ ಆತಂಕವನ್ನು ಉಂಟುಮಾಡುತ್ತದೆ.

ನಿಮ್ಮಲ್ಲಿ ದೀರ್ಘಕಾಲದಿಂದ ಹೈಪರ್ ಥೈರಾಯ್ಡಿಸಮ್’ಗೆ ಒಳಗಾಗಿದ್ದರೆ, ನಿಮ್ಮಲ್ಲಿ ಈ ಲಕ್ಷಣಗಳು ತೋರಬಹುದು :

 • ಡಿಸ್ಪೋರಿಯ (ಬದುಕಿನಲ್ಲಿ ತೀವ್ರ ಅಸಂತೃಪ್ತಿ)
 • ಉದ್ವಿಗ್ನತೆ
 • ಕಿರಿಕಿರಿಗೊಳ್ಳುವುದು
 • ಏಕಾಗ್ರತೆಯ ಕೊರತೆ

ನೀವು ಹೈಪೋ ಥೈರಾಯ್ಡಿಸಮ್’ಗೆ ಒಳಗಾಗಿದ್ದರೆ, ನಿಮ್ಮಲ್ಲಿ ಈ ಲಕ್ಷಣಗಳು ತೋರಬಹುದು :

 • ಉತ್ಸಾಹದಲ್ಲಿ ತೀವ್ರ ಕುಸಿತ ಮತ್ತು ವಿಷಣ್ಣತೆ
 • ಮಂಕು ಕವಿದಂತೆ ಭಾಸವಾಗುವುದು
 • ಚಟುವಟಿಕೆಗಳಲ್ಲಿ ನಿರಾಸಕ್ತಿ
 • ನಿಷ್ಕ್ರಿಯತೆ ಮತ್ತು ಆಲಸ್ಯ

ಥೈರಾಯ್ಡ್ ಸಮಸ್ಯೆಯನ್ನು ನಿವಾರಿಸಿಕೊಂಡ ಮೇಲೆ ಅದರಿಂದ ಉಂಟಾದ ಮಾನಸಿಕ ಅನಾರೋಗ್ಯಕ್ಕೆ ಪ್ರತ್ಯೇಕ ಚಿಕಿತ್ಸೆ ಪಡೆಯಬಹುದು ಅಥವಾ ಥೈರಾಯ್ಡ್ ಮರುಜೋಡಣೆಯ ಜೊತೆಜೊತೆಗೇ ಚಿಕಿತ್ಸೆ ನಡೆಸಬಹುದು ಎಂದು ಮಾನಸಿಕ ತಜ್ಞರು ಸೂಚಿಸುತ್ತಾರೆ.

ಆದ್ದರಿಂದ, ಥೈರಾಯ್ಡ್ ಚಿಕಿತ್ಸೆ ಪಡೆಯುವಾಗ ನೀವು ಅದರ ಜೊತೆಗೇ ಮಾನಸಿಕ ಆರೋಗ್ಯದ ತಪಾಸಣೆಯನ್ನೂ ಮಾಡಿಸಿಕೊಂಡು, ಚಿಕಿತ್ಸಾವಿಧಾನದ ಆಯ್ಕೆ ಮಾಡಿಕೊಳ್ಳುವುದು ಸೂಕ್ತ.

ಸಮಸ್ಯೆಯ ನಿರ್ವಹಣೆ : ಸ್ವಯಂ ಕಾಳಜಿ

ಥೈರಾಯ್ಡ್ ಅಸಮತೋಲನವು ದೀರ್ಘಕಾಲಿಕ ಸಮಸ್ಯೆಯಾಗಿದ್ದು, ಚಿಕಿತ್ಸೆ ಹಾಗೂ ಔಷಧಗಳ ಜೊತೆಗೆ ಜೀವನಶೈಲಿಯ ಬದಲಾವಣೆಯನ್ನೂ ಬೇಡುತ್ತದೆ. ಔಷಧಗಳು ಥೈರಾಯ್ಡ್ ಸಂಬಂಧಿತ ಮಾನಸಿಕ ಸಮಸ್ಯೆಗಳ ನಿರ್ವಹಣೆಗೆ ಸಹಾಯ ಮಾಡಿದರೂ ಬಾಧಿತ ವ್ಯಕ್ತಿಯು ಭಾವುಕ ಏರುಪೇರುಗಳನ್ನು ಎದುರಿಸುತ್ತಿರಬಹುದು. ಇಂಥಾ ಸಂದರ್ಭಗಳಲ್ಲಿ ಅವರು :

 • ಬದಲಾಗುತ್ತಲೇ ಇರುವ ಮೂಡ್ (ಮನಸ್ಥಿತಿ) ಕುರಿತು ಚಿಕಿತ್ಸಕರಲ್ಲಿ ಚರ್ಚಿಸಬಹುದು
 • ಆಪ್ತರ ಬಳಿ ಸಮಸ್ಯೆಯನ್ನು ಹೇಳಿಕೊಳ್ಳಬಹುದು
 • ದೈಹಿಕ ವ್ಯಾಯಾಮ ಮತ್ತು ಯೋಗ
 • ಸಹಾಯ ಗುಂಪುಗಳನ್ನು ಸಂಪರ್ಕಿಸುವುದು
 • ಮಾನಸಿಕ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆಯುವುದು

ಸೈಕಿಯಾಟ್ರಿಸ್ಟ್ ಆಗಿರುವ ಡಾ.ಸಂದೀಪ್ ದೇಶಪಾಂಡೆ, ಗೈನಕಾಲಜಿಸ್ಟ್ ಡಾ.ಅರುಣಾ ಮುರಳೀಧರ್ ಹಾಗೂ ಸೈಕಾಲಜಿಸ್ಟ್ ಗರಿಮಾ ಶ್ರೀವಾಸ್ತವ ಅವರು ನೀಡಿದ ವಿವರಗಳಿಂದ ಈ ಲೇಖನವನ್ನು ರಚಿಸಲಾಗಿದೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org