ದೀರ್ಘಕಾಲಿಕ ಅನಾರೋಗ್ಯ ಮತ್ತು ಮಾನಸಿಕ ಆರೋಗ್ಯ

ದೀರ್ಘಕಾಲಿಕ ಖಾಯಿಲೆಗಳು ವ್ಯಕ್ತಿಯ ಜೀವನದಲ್ಲಿ ಅನಿರೀಕ್ಷಿತ ಸವಾಲಾಗಿ ಪರಿಣಮಿಸುತ್ತದೆ ಮತ್ತು ಜೀವನಶೈಲಿಯಲ್ಲಿ ಬೃಹತ್ ಬದಲಾವಣೆಯನ್ನು ಬೇಡುತ್ತವೆ. ದೇಹದಲ್ಲುಂಟಾದ ಏರುಪೇರು ಭಾವನಾತ್ಮಕವಾಗಿಯೂ ತಲ್ಲಣಗೊಳಿಸಿ ಒತ್ತಡವನ್ನು ನಿಭಾಯಿಸುವ ಸಾಮಥ್ರ್ಯವನ್ನು ಕುಂಠಿತಗೊಳಿಸುವುದು. ದೀರ್ಘಾವಧಿಯ ಅನಾರೋಗ್ಯ ದೈಹಿಕವಾಗಿ ಮತ್ತು ಮಾನಸಿಕವಾಗಿಯೂ ವ್ಯಕ್ತಿಯನ್ನು ಬಳಲಿಸುತ್ತದೆ, ಕೌಟುಂಬಿಕ ಜೀವನ, ಸಂಬಂಧ, ವೃತ್ತಿಯ ಮೇಲೆ ಪರಿಣಾಮ ಬೀರುತ್ತದೆ. ಸೂಕ್ತ ವೈದ್ಯಕೀಯ ಚಿಕಿತ್ಸೆಯೊಡನೆ ವ್ಯಕ್ತಿಯನ್ನು ಮಾನಸಿಕವಾಗಿ ಸದೃಢನÀನ್ನಾಗಿಸುವುದೂ ಬಹಳ ಮುಖ್ಯ.
37ರ ಹರೆಯದ ನವೀನ್ ವಿವಾಹಿತ. ಇಬ್ಬರು ಮಕ್ಕಳು. ಇತ್ತೀಚೆಗಷ್ಟೇ ಹೃದಯ ಸಂಬಂಧಿ ತೊಂದರೆಗೊಳಗಾಗಿ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. ಸಮಸ್ಯೆಯಿದೆ ಎಂದು ತಿಳಿದಾಗಿನಿಂದ ಅವರ ಮಾನಸಿಕ ಸ್ಥಿತಿ ಚೆನ್ನಾಗಿಲ್ಲ. ಮಾನಸಿಕವಾಗಿ ಬಳಲಿದಂತೆ ಅವರಿಗನಿಸುತ್ತಿದೆ. ನವೀನ್ ಹೇಳುವುದಿಷ್ಟು: “ನಾನು ದುರ್ಬಲ ಎನಿಸುತ್ತೆ. ಈ ವಯಸ್ಸಿಗೇ ನನಗೇಕೆ ಹೀಗಾಯ್ತು? ವೃತ್ತಿ-ಕುಟುಂಬ ಎಂದು ಒತ್ತಡಕ್ಕೊಳಗಾದೆನೇ? ಹಾಗಿದ್ದಲ್ಲಿ ಒತ್ತಡ ಎಲ್ಲರಿಗೂ ಇರುತ್ತದೆ ನನಗೇ ಏಕೆ ಹೀಗೆ? ನಾನು ಇಷ್ಟು ವೀಕ್ ಆದರೆ ನನ್ನ ಮೇಲೆ ಅವಲಂಬಿತರಾಗಿರುವ ಹೆಂಡತಿ-ಮಕ್ಕಳ ಪಾಡೇನು? ನಾನು ಮತ್ತೆ ಮೊದಲಿನಂತೆ ನಿಜಕ್ಕೂ ಆಗುವೆನೇ? ಈ ಚಿಂತೆಗಳಿಂದ ತುಂಬಾ ಭಯ, ದುಃಖವಾಗುವುದು.”
ದೀರ್ಘಾವಧಿಯ ಖಾಯಿಲೆ ತಂದೊಡ್ಡುವ ಮಾನಸಿಕ ಸವಾಲುಗಳು:
ಮಧುಮೇಹ, ಹೃದಯ ಸಂಬಂಧಿ ತೊಂದರೆ, ಅಧಿಕ ರಕ್ತದೊತ್ತಡ, ಸ್ಟ್ರೋಕ್, ಕ್ಯಾನ್ಸರ್, ಎಚ್.ಐ.ವಿ ಮೊದಲಾದ ದೀರ್ಘಾವಧಿ ಖಾಯಿಲೆಗಳು ಮಾನಸಿಕ ಸಮಸ್ಯೆಗಳಿಗೂ ಕಾರಣವಾಗಬಲ್ಲದು. ಖಾಯಿಲೆಯೊಡನೆ ದೈಹಿಕ ನೋವುಗಳೂ ಇದ್ದಲ್ಲಿ ವ್ಯಕ್ತಿಯ ಮಾನಸಿಕ ಸ್ಥಿತಿ ಮತ್ತಷ್ಟು ಹದಗೆಡುವುದು. ತೀವ್ರಕರವಾದ ವೈದ್ಯಕೀಯ ಸಮಸ್ಯೆಗೊಳಗಾದ ಮೂರನೇ ಒಂದರಷ್ಟು ಜನರಲ್ಲಿ ಖಿನ್ನತೆಯ ಲಕ್ಷಣಗಳು ಕಾಣಿಸಿಕೊಳ್ಳುವವು ಎನ್ನಲಾಗಿದೆ. ಜೊತೆಗೆ ಒತ್ತಡ, ಆರೋಗ್ಯದ ಆತಂಕ, ತೀವ್ರ ಮಾನಸಿಕ ಅನಾರೋಗ್ಯ ಹೀಗೆ ಹತ್ತುಹಲವು ಮಾನಸಿಕ ಸಮಸ್ಯೆಗಳು ತಲೆದೋರಬಲ್ಲವು. ತನಗೆ ದೀರ್ಘಕಾಲಿಕ ವೈದ್ಯಕೀಯ ಸಮಸ್ಯೆಯಿದೆ ಎಂದು ತಿಳಿದಾಗಿನಿಂದ ವ್ಯಕ್ತಿಯನ್ನು ಬಾಧಿಸುವ ಮಾನಸಿಕ ಸವಾಲುಗಳು ಇಂತಿವೆ:
  • ಕಾಡುವ ಪ್ರಶ್ನೆಗಳು: ತನ್ನ ಮುಂದಿನ ಬದುಕು ಹಿಂದಿನ ಬದುಕಿನಂತಿರುವುದಿಲ್ಲ ಎಂಬ ನೋವು, ತನಗೇ ಏಕೆ? ಮುಂದೇನು? ಎಂಬ ಪ್ರಶ್ನೆಗಳು.
  • ಸಾಮಾಜಿಕ ಕಳಂಕ: ತನಗೆ ಇಂತಹ ಸಮಸ್ಯೆಯಿದೆ ಎಂದು ಎಲ್ಲರಲ್ಲಿಯೂ ಹೇಳಿಕೊಳ್ಳುವುದರಲ್ಲೇ ಹಿಂಜರಿಯುವ ದುರದೃಷ್ಟಕರ. ಸಂದರ್ಭ. ಉದಾ: ಎಚ್.ಐ.ವಿ, ತೀವ್ರ ಮಾನಸಿಕ ಸಮಸ್ಯೆಗಳಿಗೆ ಅಂಟಿರುವ ಸಾಮಾಜಿಕ ಕಳಂಕದಿಂದ ತನ್ನ ಪರಿಸ್ಥಿತಿಯನ್ನು ತನ್ನವರೊಂದಿಗೆ ಹಂಚಿಕೊಳ್ಳಲಾಗದೇ ವ್ಯಕ್ತಿ ಒದ್ದಾಡಬಹುದು.
  • ಅಸಹಾಯಕ ಮನಃಸ್ಥಿತಿ: ಖಾಯಿಲೆಯಿಂದ ತೊಂದರೆಗೊಳಗಾಗಿದ್ದೀನೆಂದು ಗೊತ್ತಾದರೆ ಎಲ್ಲಿ ತಾನು ದುರ್ಬಲ, ಅಸಮರ್ಥ ಎಂದು ಜನ ಭಾವಿಸುತ್ತಾರೋ ಎಂಬ ಭಾವನೆ, ಇತರರ ಅಭಿಪ್ರಾಯದ ಆತಂಕ, ಅವಮಾನ-ಟೀಕೆಯ ಭಯ.
  • ಆರೋಗ್ಯವೇ ಆತಂಕವಾದಾಗ: ದೀರ್ಘಾವಧಿ ಅಸ್ವಸ್ಥತೆಯಿಂದ ಬಳಲುತ್ತಾ ಪದೇಪದೇ ಎದುರಿಸುವ ದೈಹಿಕ ಪರೀಕ್ಷೆಗಳು, ತಪಾಸಣೆಯಿಂದ ಜರ್ಝರಿತನಾದ ವ್ಯಕ್ತಿ ತನ್ನ ಆರೋಗ್ಯದ ಕುರಿತೇ ಭಯ-ಆತಂಕಕ್ಕೊಳಗಾಗಬಹುದು. ಟಿವಿ, ಪೇಪರ್‍ನಲ್ಲಿ ಯಾವುದೇ ಖಾಯಿಲೆಯ ಕುರಿತ ಮಾಹಿತಿ ಕಂಡರೂ ತನಗೂ ಆ ಅಸ್ವಸ್ಥತೆಯಿದೆ ಎಂದುಕೊಳ್ಳುತ್ತಾ, ಸಣ್ಣಪುಟ್ಟ ದೈಹಿಕ ತೊಂದರೆಗಳನ್ನೂ ದೊಡ್ಡ ಖಾಯಿಲೆಯ ಲಕ್ಷಣವೆಂದು ಭ್ರಮಿಸುವುದು. ಉದಾ: ಪದೇಪದೇ ಕಾಣಿಸಿಕೊಳ್ಳುವ ತಲೆನೋವನ್ನು ಬ್ರೈನ್‍ಟೂಮರ್ ಎಂದುಕೊಂಡು ಪರೀಕ್ಷೆಗಳಿಗೆ ಒಳಪಡುವುದು.
  • ಬಳಲಿಕೆ: ಸುದೀರ್ಘವಾದ ಚಿಕಿತ್ಸೆ, ನೋವುಗಳಿಂದ ದೈಹಿಕ-ಮಾನಸಿಕ ಯಾತನೆ.
  • ಖಾಯಿಲೆ ತಂದೊಡ್ಡುವ ಮಿತಿ: ದೀರ್ಘಾವಧಿಯ ಅನಾರೋಗ್ಯದಿಂದ ಆಹಾರ, ಚಟುವಟಿಕೆಯ ಆಯ್ಕೆಯಲ್ಲಿ ಸಾಕಷ್ಟು ಮಿತಿಗಳು ಎದುರಾಗುತ್ತವೆ. ಮನಬಂದಂತೆ ಇರಲಾಗುವುದಿಲ್ಲ ಎಂಬ ಕೊರಗು ಕಾಣಿಸಬಹುದು
  • ಜೀವಶೈಲಿಯಲ್ಲಿ ಬದಲಾವಣೆ: ನಿದ್ರೆ, ದೈಹಿಕ ಚಟುವಟಿಕೆ, ಪಥ್ಯಗಳು ಮೊದಲಿನ ಅಭ್ಯಾಸಗಳಿಗಿಂತಲೂ ಬಹಳ ಭಿನ್ನವಾಗಬೇಕಾಗುತ್ತದೆ. ಈ ಬದಲಾವಣೆಯಿಂದಾದ ಒತ್ತಡ, ಆತಂಕ.
  • ಅವಿಶ್ವಾಸ: ದೀರ್ಘಾವಧಿಯ ಖಾಯಿಲೆ ಬದುಕಿನ, ಭವಿಷ್ಯದ ಮೇಲಿರುವ ಭರವಸೆ, ವಿಶ್ವಾಸಗಳನ್ನೇ ಅಲ್ಲಾಡಿಸಿಬಿಡಬಹುದು. ಖಾಯಿಲೆಯೊಡನೆ ತನ್ನ ಮುಂದಿನ ಜೀವನ ಹೇಗೆ, ತನ್ನ ಬದುಕಿನ ಯೋಜನೆಗಳಿಗೆ ಈ ಅನಾರೋಗ್ಯದ ಸಮಸ್ಯೆ ಅಡ್ಡಗಾಲಾಗುವುದೇ ಎನ್ನುವಂತಹ ಸವಾಲುಗಳು ಬದುಕನ್ನು ಪ್ರಶ್ನಾರ್ಥಕವೆನ್ನುವಂತೆ ಮಾಡಬಲ್ಲವು.
ಸ್ವ-ಆರೈಕೆಯ ಮಾರ್ಗಗಳು:
ಮಾನಸಿಕ ಬೇನೆಯನ್ನು ಸಹಜವೆಂದು ನಿರ್ಲಕ್ಷಿಸುವಂತಿಲ್ಲ. ಬಹಳ ಕಾಲ ಮುಂದುವರಿದ ಮಾನಸಿಕ ಖಿನ್ನತೆ, ದುಃಖ, ಆತಂಕ, ಬೇಗುದಿಗಳು ದೈಹಿಕ ಅನಾರೋಗ್ಯಕ್ಕೆ ಕಾರಣವಾಗುವುದಲ್ಲದೇ ಈಗಾಗಲೇ ಇರುವ ದೈಹಿಕ ಅಸ್ವಸ್ಥತೆಗೆ ಮತ್ತಷ್ಟು ಪುಷ್ಠಿ ನೀಡಬಲ್ಲವು. ದೀರ್ಘಾವಧಿಯ, ತೀವ್ರಕರ ಮಾನಸಿಕ ಅನಾರೋಗ್ಯ ದೀರ್ಘಕಾಲಿಕ ದೈಹಿಕ ಅಸ್ವಸ್ಥತೆಯನ್ನೂ ಉಂಟುಮಾಡಬಲ್ಲದು. ದೇಹ, ಮನಸ್ಸುಗಳು ಒಂದಕ್ಕೊಂದು ಪೂರಕ. ಹಾಗಾಗಿ ತೊಂದರೆ ದೇಹದಲ್ಲೇ ಇರಲಿ ಮನಸ್ಸಿನಲ್ಲೇ ಇರಲಿ ಎರಡರ  ಕಾಳಜಿಯನ್ನೂ ವಹಿಸುವುದು ಅತಿ ಮುಖ್ಯ.
ದೀರ್ಘಕಾಲದ ಅಸ್ವಸ್ಥತೆಗೊಳಗಾಗಿದ್ದರೆ ಮಾಡಬಹುದಾದ್ದು ಇಷ್ಟು:
  • ಗುಣಮುಖವಾಗಲು ಹೊರಟಿದ್ದೀರ ನೆನಪಿರಲಿ: ಅಸ್ವಸ್ಥತೆಯಿದೆ ಎಂದಾಗ ಕೊಂಚಮಟ್ಟದ  ಭಯ, ದುಃಖವುಂಟಾಗುವುದು ಸಹಜ ಮತ್ತು ಸಾಮಾನ್ಯ. ಈ ಬದಲಾವಣೆಯೊಂದಿಗೆ ಬದುಕನ್ನು ಕಟ್ಟಿಕೊಳ್ಳುವುದು ಸುಲಭವಲ್ಲ. ಆದರೆ ಈಗ ನಿಮ್ಮ ಪಯಣ ಮುಂದುವರೆಯುತ್ತಿರುವುದು ಗುಣಮುಖವಾಗುವುದರ ಕಡೆಗೆ, ಆರೋಗ್ಯದೆಡೆಗೆ ಎಂದು ನೆನಪಿರಲಿ
  • ಸಂಪೂರ್ಣ ಮಾಹಿತಿ ಪಡೆಯಿರಿ: ಖಾಯಿಲೆ ಮತ್ತು ಚಿಕಿತ್ಸೆಯ ಬಗೆಗಿನ ಸಂಪೂರ್ಣ ಮಾಹಿತಿಯನ್ನು ತಜ್ಞರಿಂದ ಪಡೆದುಕೊಳ್ಳಿ. ಅನುಮಾನಗಳನ್ನು ಬಗೆಹರಿಸಿಕೊಳ್ಳಿ. ಮಾಹಿತಿಯ ಕೊರತೆಯಿಂದ ಆಗಬಹುದಾದ ಆತಂಕ ತಪ್ಪುತ್ತದೆ 
  • ಆಪ್ತಸಮಾಲೋಚನೆಗೆ ಮುಂದಾಗಿ: ದೀರ್ಘಕಾಲಿಕ ಆನಾರೋಗ್ಯದೊಂದಿಗೆ ಉಂಟಾಗುವ ನೋವು, ಖಿನ್ನತೆ, ಒತ್ತಡಗಳನ್ನು ಯಶಸ್ವಿಯಾಗಿ ಸಂಭಾಳಿಸಿ ಉತ್ತಮ ಬದುಕು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವತ್ತ ಸಧೃಡ ಹೆಜ್ಜೆ ಇಡುವಲ್ಲಿ ಆಪ್ತಸಮಾಲೋಚನೆ ಸಹಾಯಕಾರಿ. ನಿಮ್ಮ ಮಾನಸಿಕ ಸ್ಥಿತಿಯಲ್ಲಿ ವ್ಯತ್ಯಯವಾಗಿದ್ದರೆ ಸಹಾಯ ಪಡೆಯಲು ಹಿಂಜರಿಕೆ ಬೇಡ. 
  • ಆರೋಗ್ಯ ಆದ್ಯತೆಯಾಗಲಿ: ಅನಾರೋಗ್ಯದ ಮಾಹಿತಿಯಿರುವುದು ಎಷ್ಟು ಮುಖ್ಯವೋ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದೂ ಅಷ್ಟೇ ಮುಖ್ಯ. ದೈಹಿಕವಾಗಿ ಆರೋಗ್ಯದಿಂದಿಡುವ ಅಭ್ಯಾಸಗಳೊಡನೆ ಮಾನಸಿಕವಾಗಿ ಪ್ರಫುಲ್ಲಗೊಳಿಸುವ ಹವ್ಯಾಸಗಳನ್ನು ಅಳವಡಿಸಿಕೊಳ್ಳಿ. ಆರೋಗ್ಯ ಆದ್ಯತೆಯಾದಾಗ ಅನಾರೋಗ್ಯ ತಾನೇ ಹಿಂದೆ ಸರಿಯುವುದು 
  • ಮಿತಿಗಳನ್ನು ಆರೋಗ್ಯಕರ ಆಯ್ಕೆಯೆಂದು ಪರಿಗಣಿಸಿ: ಅಸ್ವಸ್ಥತೆ ನಿಮ್ಮ ಬದುಕಿಗೆ ಹೇರಿರುವ ಮಿತಿಯನ್ನು ಮಿತಿಯೆಂದು ಕಾಣದೇ ನಿಮ್ಮ ಆರೋಗ್ಯಕ್ಕೆ ನೀವು ಮಾಡಿಕೊಂಡಿರುವ ಆಯ್ಕೆಯೆಂದು ಕಾಣಿ. ಉದಾ: ಉಪ್ಪು ಹೆಚ್ಚು ತಿನ್ನಬಾರದು. ಒಳ್ಳೆಯದೇ. ಮಿತವಾಗಿ ಉಪ್ಪು ತಿನುವುದು ಆರೋಗ್ಯಕರ ಆಯ್ಕೆ.
  • ಸಾಮಾಜಿಕ ಬೆಂಬಲ ಪಡೆದುಕೊಳ್ಳಿ: ಒಮ್ಮೊಮ್ಮೆ ಬಹುಕಾಲದ ಅನಾರೋಗ್ಯ ವ್ಯಕ್ತಿಯನ್ನು ಒಂಟಿಯಾಗಿಸಿಡಿಬಿಡುತ್ತದೆ.  ಮೊದಲಿನಂತೆ ಓಡಾಡಲು, ಬೆರೆಯಲು ಅಸಾಧ್ಯವಾದಾಗ ಉಂಟಾದ ಒಂಟಿತನವೇ ಅಸ್ವಸ್ಥತೆಯನ್ನು ಉಲ್ಬಣಿಸಿಬಿಡಬಲ್ಲದು. ತಂತ್ರಜ್ಞಾನ ಬಳಸಲು ಕಲಿಯಿರಿ. ಫೋನು, ಅಂತರ್ಜಾಲದ ಮೂಲಕ ಸ್ನೇಹಿತರು-ಸಂಬಂಧಿಕರೊಡನೆ ಸಂಪರ್ಕದಲ್ಲಿರಬಹುದಾದ ಅವಕಾಶವನ್ನು ಉಪಯೋಗಿಸಿಕೊಳ್ಳಿ
  • ಸಾಮಾಜಿಕ ಕಳಂಕದಿಂದ ಜರ್ಝರಿತರಾಗದಿರಿ: ಖಾಯಿಲೆಗಂಟಿದ ಸಾಮಾಜಿಕ ಕಳಂಕ ಸಮಾಜದ ತೊಂದರೆ ನಿಮ್ಮದಲ್ಲ. ಸದೃಢವಾಗಿರಿ
  • ನೀವು ಒಂಟಿಯಲ್ಲ: ತೊಂದರೆಗೊಳಗಾಗಿರುವುದು ನೀವೊಬ್ಬರೇ ಅಲ್ಲ ಎಂದು ಮನದಲ್ಲಿರಿಸಿ. ನಿಮ್ಮಂತೆಯೇ ಸಮಸ್ಯೆ ಎದುರಿಸುತ್ತಿರುವ, ಯಶಸ್ವಿಯಾಗಿ ಎದುರಿಸಿರುವ ವ್ಯಕ್ತಿಗಳ ಪರಿಚಯ, ಒಡನಾಟ ಬಹಳ ಉಪಯುಕ್ತ. ಸಪೋರ್ಟ್ ಗ್ರೂಪ್‍ಗಳ ಸದಸ್ಯರಾಗಿ.
  • ದೇಹ ಪ್ರಕೃತಿಗೆ ಹೊಂದಿಕೆಯಾಗುವ, ಆಹಾರ, ವ್ಯಾಯಾಮ, ಉತ್ತಮ ನಿದ್ರೆ ಅಳವಡಿಸಿಕೊಳ್ಳುವುದರಿಂದ ದೇಹವೂ ಸಧೃಡತೆ ಪಡೆಯುವುದರೊಂದಿಗೆ ಮಾನಸಿಕ ಸೌಖ್ಯವೂ ಮರಳುವುದು.
ನೀವು ಆರೈಕೆದಾರರಾಗಿದ್ದಲ್ಲಿ: 
ನಿಮ್ಮ ಪ್ರೀತಿಪಾತ್ರ ವ್ಯಕ್ತಿ ಬಹುಕಾಲ ಕಾಡುವ ಅನಾರೋಗ್ಯದಿಂದ ಪೀಡಿತನಾಗಿದ್ದರೆ ಹೀಗೆ ಮಾಡಿ:
  • ಮುಕ್ತವಾಗಿ ಮಾತನಾಡಿ: ಕೊಂಚ ಪ್ರಮಾಣದ ದುಃಖ, ನೋವು ಈ ಸಮಯದಲ್ಲಿ ಸಾಮಾನ್ಯ. ಅವರ ಮನಸ್ಸಿನಲ್ಲಿರುವ ದುಗುಡ, ದುಃಖಗಳನ್ನು ಅರಿಯಿರಿ.  ಹಂಚಿಕೊಳ್ಳುವುದು ಸಹಕಾರಿ. ನಿಮ್ಮ ಸಾಂಗತ್ಯ ಚಿಕಿತ್ಸಕಾರಿಯಾಗಬಲ್ಲದು
  • ಗಮನ ನೀಡಿ: ನಿಮ್ಮ ಪ್ರೀತಿಪಾತ್ರರ ಭಾವನೆ, ವರ್ತನೆ, ಆಲೋಚನೆಗಳಲ್ಲಿ ಗಮನಿಸುವಂತಹಾ ಬದಲಾವಣೆಗಳಾಗಿವೆಯೇ? ಮೊದಲಿಂತೆ ಖುಷಿನೀಡುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆಯೇ? ಹೆಚ್ಚು ಆತಂಕಿತರು, ದುಃಖಿತರು ಎನಿಸುತ್ತಿರುವವರೇ ಗಮನಿಸಿ
  • ಸ್ವಕಾಳಜಿ ಮಾಡುತ್ತಿದ್ದಾರೆಯೇ?: ನೆನಪಿನಲ್ಲಿರಲಿ, ಖಿನ್ನತೆ ಮೊದಲಾದ ಮಾನಸಿಕ ತೊಂದರೆಯಿಂದ ಬಳಲುತ್ತಿರುವ ವ್ಯಕ್ತಿಗಳು ತಮ್ಮನ್ನು ತಾವು ನಿರ್ಲಕ್ಷಿಸುತ್ತಾರೆ. ಔಷಧ, ಪಥ್ಯ, ವ್ಯಾಯಾಮಗಳನ್ನು ತಪ್ಪಿಸುತ್ತಿರುತ್ತಾರೆ. 
  • ಆಪ್ತಸಮಾಲೋಚನೆಗೆ ಪ್ರೇರೇಪಿಸಿ: ಬಾಧಿತನಾದ ಪ್ರೀತಿಪಾತ್ರರು ಮತ್ತಷ್ಟು ತೊಂದರೆ ನೀಡಲು ಇಚ್ಚಿಸದೇ ಏನೂ ಆಗಿಲ್ಲವೆಂದು ಅಲ್ಲಗೆಳೆಯಬಹುದು. ಅವರಲ್ಲಿ ಗಮನೀಯವಾದ ಬದಲಾವಣೆ, ಯಾತನೆ ಕಂಡಲ್ಲಿ ಆಪ್ತಸಮಾಲೋಚನೆಗೆ ಪ್ರರೇಪಿಸಿ ಅದರಿಂದಾಗುವ ಪ್ರಯೋಜನವನ್ನು ತಿಳಿಸಿ
  • ತಪಾಸಣೆ ಸಮಯದಲ್ಲಿ ಜೊತೆಯಲ್ಲಿರಿ: ತಜ್ಞರ ಸಲಹೆ ಸರಿಯಾಗಿ ಪಾಲನೆಯಾಗುತ್ತಿದೆಯೇ ಎಂದು ಗಮನಿಸುವ ಮೊದಲು ಸಲಹೆಯೇನು ಎಂಬುದನ್ನು ನೀವೂ ಅರಿಯಿರಿ. ಇದರಿಂದ ಒಬ್ಬರೇ ಹೋಗಿ ಸಲಹೆಯನ್ನು ಸರಿಯಾಗಿ ಕೇಳಿಸಿಕೊಳ್ಳದಿರುವುದು, ನಿರ್ಲಕ್ಷ್ಯ, ಸರಿಯಾಗಿ ಆರೈಕೆದಾರರ ಬಳಿ ಸಂವಹಿಸದಿರುವುದು ಇವುಗಳನ್ನು ತಪ್ಪಿಸಬಹುದು. ಜೊತೆಗೆ ಬೇರೆ ಯಾವುದಾದರೂ ದೈಹಿಕ-ಮಾನಸಿಕ ಸಮಸ್ಯೆಗೆ ಈಗಾಗಲೇ ಚಿಕಿತ್ಸೆ ಪಡೆಯುತ್ತಿದ್ದಲ್ಲಿ ಅದನ್ನು ತಜ್ಞರ ಗಮನಕ್ಕೆ ತನ್ನಿ.
ಮನದಲ್ಲಿರಲಿ: ತೀವ್ರವಾದ, ದೀರ್ಘಕಾಲಿಕ ಅಸ್ವಸ್ಥತೆ ಬಾಧಿತನಾದ ವ್ಯಕ್ತಿಗಷ್ಟೇ ಅಲ್ಲ ಆರೈಕೆದಾರರಿಗೂ ಯಾತನಾದಾಯಕ. ಹೆಗಲೇರುವ ಕೌಟುಂಬಿಕ ನಿರ್ವಹಣೆ, ಸಾಮಾಜಿಕ-ಆರ್ಥಿಕ ಜವಾಬ್ದಾರಿ, ಜೊತೆಗೆ ಕುಟುಂಬವೆಲ್ಲಾ ತನ್ನ ಬದುಕು, ಭವಿಷ್ಯಕ್ಕಾಗಿ ಅಸ್ವಸ್ಥ ವ್ಯಕ್ತಿಯ ಮೇಲೆ ಅವಲಂಬಿತವಾಗಿದ್ದಲ್ಲಿ ಪರಿಸ್ಥಿತಿ ಬಹಳವೇ ಕಷ್ಟಕರವಾಗಿರುವುದು. ವಿದ್ಯೆ, ಹಣಕಾಸು ಮೊದಲಾದವುಗಳಲ್ಲಿ ನಿರೀಕ್ಷಿತ ಮೈಲಿಗಲ್ಲುಗಳನ್ನು ತಲುಪಲಾಗದಿದ್ದಲ್ಲಿ ಆರೈಕೆದಾರರಲ್ಲಿ ಒತ್ತಡ, ಹತಾಶೆ ಮತ್ತಷ್ಟು ಹೆಚ್ಚಾಗುವುದು. ನೀವು ಆರೈಕೆದಾರರಾಗಿದ್ದಲ್ಲಿ, ನಿಮ್ಮಲ್ಲಿ ಆರೋಗ್ಯ, ಚೈತನ್ಯವಿದ್ದರಷ್ಟೇ ನೀವು ನಿಮ್ಮವರ ಆರೈಕೆ ಮಾಡಲು ಸಾಧ್ಯ ಎಂದು ನೆನಪಿನಲ್ಲಿರಿಸಿ. ನಿಮ್ಮ ದೇಹ-ಮನಸ್ಸುಗಳ ಕಾಳಜಿ ವಹಿಸುವುದನ್ನು ಮರೆಯದಿರಿ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org