ಸಹಜ ಬದುಕನ್ನು ವಿಚಲಿತಗೊಳಿಸುವ ದೀರ್ಘಾವಧಿ ಅಸ್ವಸ್ಥತೆ

ಸಹಜ ಬದುಕನ್ನು ವಿಚಲಿತಗೊಳಿಸುವ ದೀರ್ಘಾವಧಿ ಅಸ್ವಸ್ಥತೆ

ನನ್ನ ಹೆಸರು ಸ್ವಾತಿ. ನಾನು ಮೇಲ್ನೋಟಕ್ಕೆ ಲಕ್ಷ್ಯಕ್ಕೆ ಸಿಗದ ದೀರ್ಘಾವಧಿ ಅಸ್ವಸ್ಥತೆ 'ಫೈಬ್ರೋಮಯೇಲ್ಜಿಯಾ'ದಿಂದ ಬಳಲುತ್ತಿದ್ದೇನೆ. ಇದು ನನ್ನಕಥೆ.

ಅದು ಆಫೀಸಿನಲ್ಲಿ ಕೆಲಸವಿದ್ದ ದಿನವಾಗಿತ್ತು. ಆದರೆ ನಾನು ತೀವ್ರತರವಾದ ನೋವನ್ನು ಅನುಭವಿಸುತ್ತಿದ್ದುದರಿಂದ ಒಂದು ದಿನದ ರಜೆ ತೆಗೆದುಕೊಂಡಿದ್ದೆ. ಸ್ವಲ್ಪ ಹೊತ್ತು ಸುಮ್ಮನೆ ಕುಳಿತುಕೊಳ್ಳಲೂ ಆಗದಷ್ಟು ತೀವ್ರತರವಾದ, ತಡೆದುಕೊಳ್ಳಲಾಗದಂತಹ ನೋವನ್ನು ಅನುಭವಿಸುತ್ತಿದ್ದೆ. ಸ್ವಲ್ಪಸಮಯದ ನಂತರ ನನ್ನನ್ನು ನಾನು ಅಕ್ಷರಶಃ  ಎಳೆದುಕೊಂಡು ಹೋದಂತೆ ಮುಂಬೈ ಹಾಸ್ಪಿಟಲ್ ತಲುಪಿದೆ. ಮತ್ತು ಸಮಸ್ಯೆಗೆ ಸಂಬಂಧಿಸಿದ ಕೆಲವು ವಿವರಗಳೊಂದಿಗೆ ನ್ಯೂರಾಲಜಿಸ್ಟ್ ಗಾಗಿ ಕಾಯುತ್ತಿದ್ದೆ.

ಅದಾದ ಒಂದು ವರ್ಷದ ನಂತರ, ಈಗ ನನ್ನ ಜೀವನ ಬದಲಾಗಿದೆ. ನೋವಿನ ಪ್ರಮಾಣ ತಗ್ಗಿದೆ. ಕುತ್ತಿಗೆ, ಬೆನ್ನು ಮತ್ತು ಮೊಣಕಾಲಿನಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ. ಸಾಮಾನ್ಯವಾಗಿ ವಾರಾಂತ್ಯದಲ್ಲಿ ತೀವ್ರ ಆಯಾಸ ಕಂಡುಬರುತ್ತದೆ ಮತ್ತು ನೋವಿನ ಜೊತೆಯಲ್ಲೇ ಕಾಲ ಕಳೆಯಬೇಕಾಗುತ್ತದೆ. ಹಾಸಿಗೆಯಿಂದ ಏಳುವುದೇ ಅಸಾಧ್ಯವಾಗಿಬಿಡುತ್ತದೆ.

ಪ್ರಾರಂಭದಲ್ಲಿ ನಾನು ಈ ಸಮಸ್ಯೆಗೆ ಆಧುನಿಕ ಜೀವನಶೈಲಿ, ಬಹುತೇಕ ದಿನವಿಡೀ ಕೆಲಸ ಮಾಡುತ್ತಲೇ ಇರುವುದು,  ವಿಶ್ರಾಂತಿಯ ಕೊರತೆ ಮತ್ತು ಅಸಮರ್ಪಕ ಆಹಾರ ಪದ್ಧತಿಗಳು ಕಾರಣವೆಂದು ಊಹಿಸಿದ್ದೆ. ದಿನ ಕಳೆದಂತೆ, ನೋವಿನ ತೀವ್ರತೆ ಎಷ್ಟಾಯಿತೆಂದರೆ, ಕುಳಿತು ಟೈಪ್ ಮಾಡುವುದು ಕೂಡಾ ಕಷ್ಟವಾಗತೊಡಗಿತು. ಪ್ರತಿಬಾರಿ ಕೀಯನ್ನು ಒತ್ತುವ ಸಂದರ್ಭದಲ್ಲಿ ಬೆರಳಿನ ತುದಿಯಲ್ಲಿ ಉರಿಯಾಗುತ್ತಿತ್ತು. ನಾನು ಬಹಳಷ್ಟು ವೈದ್ಯರನ್ನು ಹಾಗೂ ತಜ್ಞರನ್ನು ಸಂಪರ್ಕಿಸಿದೆ. ಕಟ್ಟಕಡೆಯದಾಗಿ, ಒಬ್ಬ ಆರ್ಥೋಪೆಡಿಸ್ಟ್ ವೈದ್ಯರನ್ನು ಸಂಪರ್ಕಿಸಿದೆ. ಅವರು ಸರಣಿ ಪರೀಕ್ಷೆಗಳನ್ನು ನಡೆಸಿದ ನಂತರ ಎಲ್ಲವೂ ಸರಿಯಿದೆ, ಏನೂ ಸಮಸ್ಯೆಯಿಲ್ಲವೆಂದು ತಿಳಿಸಿದರು. ಆ ಸಂದರ್ಭದಲ್ಲಿ ನನಗೆ ನೆಮ್ಮದಿಯಾಗಿತ್ತು. ಆದರೆ, ಮುಂದಿನ ಹೇಳಿಕೆಯಲ್ಲಿ ಅವರ ಮುಖ ಗಂಭಿರವಾಗಿತ್ತು ಮತ್ತು ಆ ಹೇಳಿಕೆ ಆಶ್ಚರ್ಯಕರವಾಗಿತ್ತು : “ನೀವು ಅನುಭವಿಸುತ್ತಿರುವ ನೋವಿಗೆ ದೈಹಿಕವಾಗಿ ಯಾವ ಕಾರಣಗಳೂ ಕಂಡುಬರುತ್ತಿಲ್ಲ, ಇನ್ನು ಹೇಳುವುದಕ್ಕೆ ಏನೂ ಇಲ್ಲ!”

ನನಗಿರುವುದು “ಭಯ”ವೆಂದು ನನಗೆ ಖಾತ್ರಿಯಾಯಿತು. ನಾನು ತುಸು ಹೆಚ್ಚಾಗಿಯೇ ಪ್ರತಿಕ್ರಿಯಿಸುತ್ತಿದ್ದೆ. ನನ್ನ ಶರೀರದಲ್ಲೇನೂ ಸಮಸ್ಯೆಯಿರಲಿಲ್ಲ. ನನ್ನ ಮಾತಿನಲ್ಲಿ ಉತ್ಪ್ರೇಕ್ಷೆಯಿತ್ತು. ವಿನಾಕಾರಣ ಗಲಿಬಿಲಿಗೊಂಡಿದ್ದೆ. ಈ ಕಾರಣದಿಂದಾಗಿ ನಾನು ನನ್ನ ಲಾಯರ್ ವೃತ್ತಿಯನ್ನು ತೊರೆದಿದ್ದೆ. ಅನುಮಾನ ಮತ್ತು ಪಾಪಪ್ರಜ್ಞೆಯ ಭಾವ ನನ್ನನ್ನು ಹಿಮ್ಮೆಟ್ಟಿಸಿದ್ದವು ಮತ್ತು ಅದು ಈಗಲೂ ನನ್ನನ್ನು ಕಾಡುತ್ತಿದೆ.

ಅಗೋಚರ ಅಸ್ವಸ್ಥತೆ.

ದೀರ್ಘಕಾಲದವರೆಗೆ ನನಗೆ ಪ್ರತಿದಿನವೂ ನನಗೆ ಅನಾರೋಗ್ಯದ ದಿನವೇ ಆಗಿಬಿಟ್ಟಿತ್ತು. ಇದರಿಂದಾಗಿ ನನ್ನ ಪೂರ್ವನಿಯೋಜಿತ ಕೆಲಸಗಳು ರದ್ದಾಗಿಬಿಡುತ್ತಿದ್ದವು. ಏನಾದರೂ ಮಾಡಬೇಕೆಂದರೆ ಮತ್ತೊಬ್ಬರ ನೆರವು ಪಡೆಯಬೇಕಾಗುತ್ತಿತ್ತು. ವಹಿಸಿಕೊಂಡಿದ್ದ ಕೆಲಸ ಮಾಡಲಾಗದೆ ನನ್ನಲ್ಲಿ ಅಪರಾಧಿಭಾವ ಮೂಡುತ್ತಿತ್ತು. ಈ ಅಸ್ವಸ್ಥತೆಯನ್ನು ನಾನು ಕೆಲಸ ತಪ್ಪಿಸಿಕೊಳ್ಳುವ ಆಸರೆಯಾಗಿ, ನೆವದಂತೆ ಬಳಸುತ್ತಿದ್ದೇನೆಯೇ? ಎಂಬ ಪ್ರಶ್ನೆ ಸದಾ ನನ್ನನ್ನು ಕಾಡುತ್ತಿತ್ತು. ಮತ್ತು ಬಹಳಷ್ಟು ಮಂದಿ ನನ್ನ ಈ ಸಂದೇಹ ಹಾಗೂ ಭಯವನ್ನು ದೃಢೀಕರಿಸಿದ್ದರು. ಕೆಲಸ ತೊರೆದು ನಾನು ಪೋಷಕರೊಂದಿಗೆ ಇರಲು ಮರಳಿ ಬಂದಾಗ ನನ್ನನ್ನು ಸೋಮಾರಿ, ಅನಾರೋಗ್ಯಪೀಡಿತೆ ಹೀಗೆ ಬೇರೆಬೇರೆ ಹೆಸರುಗಳಿಂದ ಕರೆಯುತ್ತಿದ್ದರು. ನಾನು ಅಸಮರ್ಥಳು, ಜೀವನದಲ್ಲಿ ಸೋತಿದ್ದೇನೆ ಎಂಬ ಭಾವ ನನ್ನಲ್ಲಿ ಮೂಡಿತ್ತು. ‘ಫೈಬ್ರೋಮಯೇಲ್ಜಿಯಾ’ವನ್ನು ನಾನು ಸಮರ್ಥವಾಗಿ ಎದುರಿಸಬೇಕು ಮತ್ತು ಉತ್ತಮ ಜೀವನ ನಡೆಸಬೇಕೆಂದು ನನಗೆ ಅರ್ಥವಾಗಿತ್ತು. ಆದರೆ ಈ ಅಗೋಚರ ಅಸ್ವಸ್ಥತೆ ನನ್ನನ್ನು ಬಾಧಿಸಲು ಪ್ರಾರಂಭವಾದಾಗಿನಿಂದ ಯಾವುದೋ ಪಾಪಪ್ರಜ್ಞೆ ಕಾಡುತ್ತಿತ್ತು. ಏಕೆಂದರೆ, ಯಾರಿಗಾದರೂ ಅಗೋಚರವಾದದ್ದನ್ನು ನಂಬುವುದು ಕಷ್ಟವೇ ಅಲ್ಲವೆ !?

ನಾನು ಭಯಗೊಂಡಿದ್ದೆ. ಆಗಿನ್ನೂ ಯಾವುದೇ ರೀತಿಯ ವೈದ್ಯಕೀಯ ಪರೀಕ್ಷೆಗಳಿಗೊಳಪಟ್ಟಿರಲಿಲ್ಲ. ಜೀವನಪರ್ಯಂತ ನೋವು - ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಹಾಗೂ ಹಾಸಿಗೆ ಹಿಡಿಯುವ ಪರಿಸ್ಥಿತಿಗೆ ತಲಪುತ್ತೇನೆಂಬ ಆತಂಕ ಕಾಡುತ್ತಿತ್ತು. ಆಗಿನ್ನೂ ನಾನು ಯುವತಿ. ಕುಟುಂಬದವರನ್ನು ತೊರೆದು ಒಬ್ಬಳೇ ನಗರ ಪ್ರದೇಶದಲ್ಲಿ ವೈದ್ಯರನ್ನು ಹುಡುಕುವುದು, ಒಂದು ಕಡೆಯಿಂದ ಇನ್ನೊಂದು ಕಡೆಗೆ ತಿರುಗುವುದು ತುಂಬಾ ಕಷ್ಟವಾಗುತ್ತಿತ್ತು. ಆದಾಗ್ಯೂ, ಅಂತಿಮವಾಗಿ ಒಬ್ಬ ನರರೋಗ ತಜ್ಞರನ್ನು ಸಂಪರ್ಕಿಸಿದೆ ಮತ್ತು ವೈದ್ಯಕೀಯ ಪರೀಕ್ಷೆ ಮಾಡಿಸಿದೆ. (ಇಲ್ಲಿ ಆ ನರರೋಗ ತಜ್ಞರ ಹೆಸರನ್ನು ಡಾ.ಎನ್ ಎಂದು ನಮೂದಿಸಲಾಗಿದೆ)

ಡಾ.ಎನ್ ಸ್ವಲ್ಪ ಸಮಯ ನನ್ನ ಸಮಸ್ಯೆಗಳನ್ನು ಆಲಿಸಿದರು ಮತ್ತು ನೇರವಾಗಿ ನನ್ನನ್ನು ಒಂದು ಪರೀಕ್ಷೆಗೆ ಕಳುಹಿಸಿದರು. ಅವರು ಅದು ಯಾವ ರೀತಿಯ ಪರೀಕ್ಷೆಯೆಂದು ನನಗೆ ತಿಳಿಸಿರಲಿಲ್ಲ. ಪರೀಕ್ಷೆ ನಡೆಸುವ ತಂತ್ರಜ್ಞರು ನನ್ನ ಜೊತೆಯಲ್ಲಿ ಬಂದಿರುವವರನ್ನು ಕರೆತನ್ನಿ ಎಂದು ಹೇಳಿದರು. ಆದರೆ ನನ್ನ ಜೊತೆಯಲ್ಲಿ ಯಾರೂ ಇರಲಿಲ್ಲ. ವೈದ್ಯರ ಬಳಿಗೆ ನಾನೊಬ್ಬಳೇ ಹೋದದ್ದು. ತಂತ್ರಜ್ಞರು ಏಕೆ ಆ ರೀತಿಯಾಗಿ ಹೇಳಿದ್ದರು ಎಂದು ಅನಂತರವಷ್ಟೆ ನನಗೆ ಗೊತ್ತಾಗಿದ್ದು.

ಆ ವೈದ್ಯಕೀಯ ಪರೀಕ್ಷೆಯು ನನ್ನ ದೇಹಕ್ಕೆ “ಎಲೆಕ್ಟ್ರಿಕಲ್ ಪಲ್ಸ್”ಗಳನ್ನು ಸಂವಹಿಸುವ ಪ್ರಕ್ರಿಯೆಯಾಗಿತ್ತು. ಇದರಿಂದ ತುಂಬಾ ನೋವನ್ನು ಅನುಭವಿಸಿದ್ದೆ ಮತ್ತು ಪರೀಕ್ಷೆ ಪೂರ್ಣಗೊಂಡ ನಂತರ ಕೆಲಕಾಲ ಅಲ್ಲೆ ಹಾಸಿಗೆಯ ಮೇಲೆ ವಿಶ್ರಾಂತಿ ಪಡೆದಿದ್ದೆ. ಸ್ವಲ್ಪ ಸಮಯದ ನಂತರ ಸುಧಾರಿಸಿಕೊಂಡು ಹಾಸಿಗೆಯಿಂದ ಮೇಲೆದ್ದೆ ಮತ್ತು ವರದಿಗಾಗಿ ಕಾಯುತ್ತಿದ್ದೆ. ಸುದೀರ್ಘ ಅವಧಿಯವರೆಗೆ ಅಲ್ಲೆ ಕಾದು ಕುಳಿತಿದ್ದ ನನ್ನನ್ನು ಡಾ.ಎನ್ ಕರೆಸಿದರು ಮತ್ತು ನನಗೆ “ಫೈಬ್ರೋಮಯೇಲ್ಜಿಯಾ” ಎಂಬ ಕಾಯಿಲೆ ಇದೆಯೆಂದು ತಿಳಿಸಿದರು. ಫೈಬ್ರೋಮಯೇಲ್ಜಿಯಾ ಎಂಬ ಆ ಪದವೇ ಭಯ ಹುಟ್ಟಿಸುವಂತಿತ್ತು. ಆದರೆ ಕಡೆಗೂ ನನ್ನೆ ಸಮಸ್ಯೆ ಏನೆಂದು ತಿಳಿಯಿತಲ್ಲಾ ಎಂದು ಸಮಾಧಾನವಾಯಿತು. ದುರದೃಷ್ಟವಶಾತ್, ಆ ಸಮಾಧಾನ ಹೆಚ್ಚು ಕಾಲ ಉಳಿಯಲಿಲ್ಲ, ನಾನು ಈ ಅಸ್ವಸ್ಥತೆಯ ಕುರಿತು ವೈದ್ಯರಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿದಾಗ ಡಾ.ಎನ್ ಅಸ್ವಸ್ಥತೆಯ ವಿವರಗಳನ್ನು “ಗೂಗಲ್”ನಲ್ಲಿ ಜಾಲಾಡಿ ತಿಳಿದುಕೊಳ್ಳಿ ಎಂದು ಹೇಳಿದರು ಮತ್ತು ಅವರು ಈ ಅಸ್ವಸ್ಥತೆ ಗುಣಪಡಿಸಲಾಗುವಂಥದ್ದಲ್ಲ ಎಂದು ಹೇಳಿಬಿಟ್ಟರು. ಆದ್ದರಿಂದ ಮತ್ತೊಮ್ಮೆ ಅವರೊಡನೆ ಸಮಾಲೋಚನೆ ನಡೆಸುವ, ಚಿಕಿತ್ಸೆ ಪಡೆಯುವ ಗೋಜಿಗೆ ನಾನು ಹೋಗಲಿಲ್ಲ.

ತೀವ್ರ ಉದ್ವೇಗ ಮತ್ತು ಖಿನ್ನತೆಯ ಅವಸ್ಥೆ

ಆರಂಭಿಕ ಹಂತದಲ್ಲಿ ನಾನು ಸ್ವಲ್ಪ ಮಟ್ಟಿಗೆ ಆತಂಕದಲ್ಲಿದ್ದೆ, ಆದರೆ ನನ್ನ ಅನಾರೋಗ್ಯದ ಕಾರಣ ತಿಳಿದ ಬಳಿಕ ಸಂಪೂರ್ಣವಾಗಿ ಗಾಬರಿಗೊಂಡೆ. ನನ್ನ ಈ ಕಾಯಿಲೆ ಗುಣಪಡಿಸಲಾಗದ್ದು ಎಂದು ವೈದ್ಯರು ಘೋಷಿಸಿದ ಬಳಿಕ ತೀವ್ರ ಆಘಾತಕ್ಕೊಳಗಾಗಿದ್ದೆ ಮತ್ತು ಅಸಹಾಯಕಳಾಗಿಬಿಟ್ಟೆ. ಮನೆಗೆ ಹಿಂದಿರುಗಿದೆ. ನನಗೂ, ನನ್ನ ಕುಟುಂಬಕ್ಕೂ ಮುಂದೇನು ಮಾಡುವುದು ಎಂದು ತಿಳಿಯದಾಗಿತ್ತು. ನಾನು ಖಿನ್ನತೆಗೊಳಗಾದೆ ಮತ್ತು ಮಾನಸಿಕ ಉದ್ವೇಗ ಹೆಚ್ಚಾಗತೊಡಗಿತು. ದೈಹಿಕ ನೋವು ಮತ್ತು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ನಾನು ನನ್ನ ಕೋಣೆಯಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದೆ. ನನ್ನ ಪರಿಸ್ಥಿತಿಯನ್ನು ಯಾರೂ ಅರ್ಥಮಾಡಿಕೊಳ್ಳುತ್ತಿಲ್ಲವಲ್ಲಾ ಎಂಬ ಬೇಸರ ನನ್ನಲ್ಲಿತ್ತು. ”ಸ್ವಲ್ಪಹೊತ್ತು ಹೊರಗೆ ಓಡಾಡು”, “ವ್ಯಾಯಾಮ ಮಾಡು”, ”ಯೋಗಾಭ್ಯಾಸವನ್ನಾದರೂ ಮಾಡು”,” ಅರಿಸಿನವನ್ನಾದರೂ ಬಳಸು”,ಎಂಬಿತ್ಯಾದಿ ಸಲಹೆಗಳನ್ನು ಕೇಳಿಕೇಳಿ ಸುಸ್ತಾಗಿತ್ತು. ಅಗೋಚರ ಅಸ್ವಸ್ಥತೆಯೆಂಬ ಆಯುಧ ನನ್ನನ್ನು ಚುಚ್ಚುತ್ತಿತ್ತು ಮತ್ತು ಇದರಿಂದ ತಪ್ಪಿಸಿಕೊಳ್ಳಬೇಕೆಂಬಷ್ಟರಲ್ಲಿ ಅದು ನನ್ನ ಅಂತರಾಳವನ್ನು ಹೊಕ್ಕಿತ್ತು. ನಾನು ನನ್ನನ್ನೇ ದೂಷಿಸಿಕೊಳ್ಳಲಾರಂಭಿಸಿದೆ.

ಸೈಕಾಲಜಿಸ್ಟ್ ಭೇಟಿ ಸಹಾಯ ಮಾಡಿತು

ನಾನೀಗ ಬದಲಾಗಿದ್ದೇನೆ. ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾಗ ನನ್ನಹಿಂದಿನ ಸುಖ - ಸಂತೋಷಗಳನ್ನು ಕಳೆದುಕೊಂಡಿದ್ದೆ. ಮುಂಚೆ ನಾನು ಯಾವಾಗಲೂ ಹೊರಗಿರುತ್ತಿದ್ದೆ ಮತ್ತು ಯಾವುದಾದರೊಂದು ಕೆಲಸಕಾರ್ಯಗಳಲ್ಲಿ ತೊಡಗಿರುತ್ತಿದ್ದೆ. ಮನೆಯಲ್ಲಿಯೇ ಇರುವಂತಹ ಸಂದರ್ಭದಲ್ಲಿ ಕಿರಿಕಿರಿಗೊಳಗಾಗಿದ್ದೆ ಮತ್ತು ಯಾರೊಡನೆಯೂ ಹೆಚ್ಚು ಮಾತನಾಡುತ್ತಿರಲಿಲ್ಲ. ನನ್ನತನವನ್ನು ನಾನು ಕಳೆದುಕೊಂಡುಬಿಟ್ಟಿದ್ದೆ. ಬಹಳಷ್ಟು ವೈದ್ಯರನ್ನು ಸಂಪರ್ಕಿಸಿದ್ದೆ, ವಿಪರೀತ ತಲೆನೋವಿನಿಂದ ಬಳಲುತ್ತಿದ್ದೆ. ನನಗಿದ್ದ ಮೈಗ್ರೇನ್ ಸಮಸ್ಯೆಯಿಂದಾಗಿ ಮತ್ತೊಬ್ಬ ನರರೋಗತಜ್ಞರನ್ನು ಬೇಟಿಯಾದೆ. ಅವರು ನನ್ನನ್ನು ಸೈಕಾಲಜಿಸ್ಟ್ ಬಳಿಗೆ ಕಳುಹಿಸಿದರು, ಅಲ್ಲಿಂದಲೇ ನನ್ನ ಹೊಸಪಯಣ ಪ್ರಾರಂಭವಾದದ್ದು.

ಜೀವನದಲ್ಲಾಗುವ ವಿವಿಧ ರೀತಿಯ ಬದಲಾವಣೆಗಳಂತೆ, ಅಗೋಚರವಾದ ದೀರ್ಘಕಾಲೀನ ಅಸ್ವಸ್ಥತೆಯು ಮಾನಸಿಕ ಸ್ವಾಸ್ಥ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದು ಒಂದು ಹೊಸ ರೀತಿಯ ಸಮಸ್ಯೆಯನ್ನು ಹುಟ್ಟುಹಾಕುತ್ತದೆ. ಇಲ್ಲಿ ನೀವು “ಸಾಮಾನ್ಯ”ರಂತೆ ಇರುವುದಿಲ್ಲ, ನನ್ನ ವಿಷಯದಲ್ಲಿ ಪ್ರಮುಖ ಅಂಶವಾಗಿದ್ದದ್ದು “ಸ್ವೀಕೃತಿ”. ಸುದೀರ್ಘ ಕಾಲದವರೆಗೆ ವಿವಿಧ ರೀತಿಯ ಪರೀಕ್ಷೆಗೊಳಪಟ್ಟಿದ್ದೆ, ಆನ್ ಲೈನ್ ನಲ್ಲಿ ಬಹಳಷ್ಟು ಮಾಹಿತಿಗಳನ್ನು ಸಂಗ್ರಹಿಸಿದ್ದೆ ಮತ್ತು ಆನ್ ಲೈನ್ ಸಪೋರ್ಟ್ ಗ್ರೂಪ್ ಮೂಲಕ ಬಹಳಷ್ಟು ಜನರೊಡನೆ ಸಮಾಲೋಚನೆ ನಡೆಸಿದ್ದೆ.  ”ಫೈಬ್ರೋಮಯೇಲ್ಜಿಯಾ”ವನ್ನು ನಾನು ಸ್ವೀಕರಿಸಿದ್ದೆ ಮತ್ತು ಅದು ನನ್ನ ಜೀವನದ ಒಂದು ಭಾಗವಾಗಿಬಿಟ್ಟಿತ್ತು.

ಹೀಗೆ ಅದನ್ನು ಒಪ್ಪಿಕೊಂಡುಬಿಟ್ಟಿದ್ದೇ ನನ್ನನ್ನು ತೀವ್ರ ಖಿನ್ನತೆ ಮತ್ತು ಉದ್ವೇಗಕ್ಕೆ ಒಳಗಾಗುವಂತೆ ಮಾಡಿದ್ದು ಮತ್ತು ಜೀವನಪೂರ್ತಿ ಅಸ್ವಸ್ಥತೆಯೊಡನೆ ಬದುಕುವಂತೆ ಮಾಡಿದ್ದು. ನಾನು ಈಗಲೂ ಆ ವಿಷಯದ ಬಗ್ಗೆ ಯೋಚಿಸುತ್ತಿರುತ್ತೇನೆ ಮತ್ತು ನನ್ನ ದೇಹ ಹಾಗು ಮನಸ್ಸನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ನಡೆಸುತ್ತೇನೆ. ನಾನು ಸ್ವಲ್ಪ ಮಟ್ಟಿನ ಸುಧಾರಣೆ ಕಂಡುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು “ಸೈಕಾಲಜಿಕಲ್ ಥೆರಪಿ”.

ಇದರಿಂದ ನಾನು ಹಿಂದಿನ ಸಂಕಷ್ಟಗಳನ್ನು ಮೆಲಕು ಹಾಕಿ ನೋವು ಅನುಭವಿಸುವುದರಲ್ಲಿ ಯಾವುದೇ ಅರ್ಥವಿಲ್ಲವೆಂಬ ವಿಷಯ ಮನದಟ್ಟಾಯಿತು. ನನಗೂ ಹೊಸಜೀವನವಿದೆ, ಮತ್ತು ಹಳೆಯ ಸಂಕಷ್ಟಗಳನ್ನೇ ಸುಖದ ಮಾನದಂಡವಾಗಿ ಬಳಸಬಾರದೆಂಬ ಅರಿವಾಯಿತು. ನನ್ನ ಜೀವನಶೈಲಿಯನ್ನು ಬದಲಾಯಿಸಿಕೊಂಡೆ. ವಿವಿಧ ಮಾರ್ಗೋಪಾಯಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಸುಧಾರಣೆ ಕಂಡುಕೊಳ್ಳಬೇಕೆಂದು ನಿರ್ಧರಿಸಿದೆ. ನಾನೀಗ ಹೊಸದೊಂದು ಜಾಗದಲ್ಲಿ ಕೆಲಸ ಮಾಡುತ್ತಿದ್ದೇನೆ, ಸ್ವತಂತ್ರಜೀವನ ಸಾಗಿಸುತ್ತಿದ್ದೇನೆ ಮತ್ತು ನನ್ನೆರಡು ಪ್ರೀತಿಯ ಬೆಕ್ಕುಗಳನ್ನು ನೋಡಿಕೊಳ್ಳುತ್ತಿದ್ದೇನೆ. ಈಗಲೂ ಪ್ರತಿನಿತ್ಯ ಹೋರಾಡುತ್ತಿದ್ದೇನೆ, ಆದರೆ ಜೀವನವನ್ನು ಅರ್ಥ ಮಾಡಿಕೊಂಡಿದ್ದೇನೆ. “ಫೈಬ್ರೋಮಯೇಲ್ಜಿಯಾ”ದೊಡನೆ ಅಸಹನೆ ಇಲ್ಲದೆ ಬದುಕುವುದನ್ನು ಕಲಿತಿದ್ದೇನೆ. ನನ್ನ ಮನಸ್ಸು ಮತ್ತು ಶರೀರವನ್ನು ಸರಿಯಾಗಿ ನೋಡಿಕೊಳ್ಳಬೇಕಷ್ಟೇ. ಈಗ ಶಾಂತಚಿತ್ತಳಾಗಿದ್ದೇನೆ. ಇದೇ ರೀತಿಯ ಸಮಸ್ಯೆಯನ್ನು ಹೊಂದಿರುವವರ ಕುರಿತು ನನಗೆ ಸಹಾನುಭೂತಿಯಿದೆ.

ನನ್ನ ಪ್ರಕಾರ, “ಫೈಬ್ರೋಮಯೇಲ್ಜಿಯಾ”ದಿಂದಾಗುವ ಮಾನಸಿಕ ಅಸ್ವಸ್ಥತೆಗೆ ಪ್ರಮುಖ ಕಾರಣ “ಜಾಗೃತಿಯ ಕೊರತೆ”. ಈ ಬಗ್ಗೆ ಜಾಗೃತಿ ಮೂಡಿಸುವಂತಹ ಕೆಲಸ ಆಗಿಯೇ ಇಲ್ಲ ಎನ್ನಬಹುದು. ಈ ವಿಷಯ ನನ್ನಲ್ಲಿ ಆತಂಕ ಮೂಡಿಸುತ್ತದೆ. ಕೆಲವು “ಸಪೋರ್ಟ್ ಗ್ರೂಪ್”ಗಳನ್ನು ಹೊರತುಪಡಿಸಿದರೆ ಅಸ್ವಸ್ಥರಿಗೆ ಸೂಕ್ತ ಬೆಂಬಲ ಸೂಚಿಸುವಂತಹ, ನೆರವು ನೀಡುವಂತಹ ವ್ಯವಸ್ಥೆಗಳೇ ಇಲ್ಲ. ವೈದ್ಯಕೀಯ ವೃತ್ತಿಯಲ್ಲಿರುವವರೂ ಸಹ ಅಗೋಚರವಾದ ಇಂತಹ ದೀರ್ಘಕಾಲಿಕ  ಅಸ್ವಸ್ಥತೆಯ ರೋಗಿಗಳ ಬಗ್ಗೆ ವಿವೇಚಿಸುವುದಿಲ್ಲ. ಸಮಾಜದಲ್ಲಿ ಬಹಳಷ್ಟು ಜನರಿಗೆ ಫೈಬ್ರೋಮಯೇಲ್ಜಿಯಾದ ಬಗ್ಗೆ ತಿಳಿದಿಲ್ಲ. ಅವರು ಇದರ ಬಗ್ಗೆ ಕೇಳಿಯೂ ಇಲ್ಲ.

ಮೇಲ್ನೋಟಕ್ಕೆ ನಾವು ಚೆನ್ನಾಗಿಯೇ ಕಾಣುತ್ತೇವೆ. ಇದರಿಮದಾಗಿ ನಾನಂತೂ ಅವಿಶ್ವಾಸದಿಂದ ದ್ವೇಷದವರೆಗೆ ಎಲ್ಲವನ್ನೂ ಎದುರಿಸಿದ್ದೇನೆ ಮತ್ತು  ನಮ್ಮ ಸಮಸ್ಯೆಯನ್ನು ಸಾಬೀತು ಪಡಿಸುವುದು ವಿಪರೀತ ಕಷ್ಟದ ಕೆಲಸ. ನಮ್ಮ ಸಮಸ್ಯೆಗಳು ಭಿನ್ನವಾಗಿರುತ್ತವೆ. ಆದರೆ ಎಲ್ಲವೂ ಅಗೋಚರ. ಯಾವುದೂ ಸುಲಭಗ್ರಾಹ್ಯವಲ್ಲ.

ನಾನು ಸೂಕ್ಷ್ಮಸಂವೇದನೆಯುಳ್ಳ ವ್ಯಕ್ತಿ. ಮುಂದೆ ಎಂದಾದರೂ ಒಂದು ದಿನ ಫೈಬ್ರೋಮಯೇಲ್ಜಿಯಾದಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ಸೂಕ್ತ ಜಾಗೃತಿ ಮೂಡಿಸುವಂತಹ ಕೆಲಸ ಆಗುತ್ತದೆ ಎಂಬ ವಿಶ್ವಾಸ ನನಗಿದೆ. ಅವರಿಗೆ ಅದರ ಬಗ್ಗೆ ಅರಿವು ಮೂಡಬೇಕು ಮತ್ತು ಸೂಕ್ತ ಬೆಂಬಲ ದೊರೆಯಬೇಕು. ಇದು ನನ್ನ ನಿರೀಕ್ಷೆ.

ಸ್ವಾತಿ ಅಗರ್ವಾಲ್ 'ಒಳಗೊಳ್ಳುವಿಕೆ ಮತ್ತು ವೈವಿಧ್ಯ' ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಯಲ್ಲಿ ವಕೀಲೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಫೈಬ್ರೋಮಯೇಲ್ಜಿಯಾ ಸಮಸ್ಯೆಯಿಂದ ಬಳಲುತ್ತಿರುವ ಇವರು, ಇತರರಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org