ಡಿಪ್ರೆಷನ್‌ (ಖಿನ್ನತೆ) ಇರುವಲ್ಲಿ,  ಗರ್ಭಧಾರಣೆಯ ಮಧುಮೇಹದ ಅಪಾಯ ಹೆಚ್ಚು
ದೇಹ ಮತ್ತು ಮನಸ್ಸು

ಡಿಪ್ರೆಷನ್‌ (ಖಿನ್ನತೆ) ಇರುವಲ್ಲಿ, ಗರ್ಭಧಾರಣೆಯ ಮಧುಮೇಹದ ಅಪಾಯ ಹೆಚ್ಚು

ವೈಟ್ ಸ್ವಾನ್ ಫೌಂಡೇಶನ್

ಖಿನ್ನತೆಯುಳ್ಳ ಗರ್ಭಿಣಿ ಮಹಿಳೆಯರಿಗೆ ಮೊದಲ ಆರು ತಿಂಗಳ ಕಾಲ ಗರ್ಭಧಾರಣೆಯ ಮಧುಮೇಹ ಉಂಟಾಗುವ ಅಪಾಯಗಳು ಹೆಚ್ಚಿರುತ್ತವೆ ಎಂದು ಹೊಸ ಸಂಶೋಧನೆಯೊಂದು ವರದಿ ನೀಡಿದೆ. ಅಮೆರಿಕದ ನ್ಯಾಶನಲ್ ಇನ್ಸ್’ಟಿಟ್ಯೂಟ್ ಆಫ್ ಹೆಲ್ತ್ ನ ಸಂಶೋಧಕರು ಖಿನ್ನತೆ ಮತ್ತು ಗರ್ಭಧಾರಣೆಯ ಮಧುಮೇಹಗಳ ನಡುವೆ ಎರಡು ಬಗೆಯ ಸಂಬಂಧಗಳನ್ನು ಕಂಡುಕೊಂಡಿದ್ದಾರೆ.

ಖಿನ್ನತೆಯಿಂದ ಗರ್ಭಧಾರಣೆಯ ಮಧುಮೇಹ ಉಂಟಾಗುವಂತೆಯೇ, ಗರ್ಭಧಾರಣೆಯ ಮಧುಮೇಹದಿಂದ ಖಿನ್ನತೆ ಉಂಟಾಗುವ ಸಾಧ್ಯತೆಗಳು ಇವೆ ಎಂದೂ ಸಂಶೋಧಕರು ವರದಿ ನೀಡಿದ್ದಾರೆ. ಗರ್ಭಧಾರಣೆಯ ಮಧುಮೇಹವು ಗರ್ಭಿಣಯರಲ್ಲಿ ಕಾಣಿಸಿಕೊಳ್ಳುವ ಸಕ್ಕರೆ ಕಾಯಿಲೆಯ ಒಂದು ವೀಧಾನವಾಗಿದ್ದು, ತಾಯಿ ಮತ್ತು ಮಗು ಇಬ್ಬರ ಮೇಲೂ ಗಂಭೀರ ಪರಿಣಾಮಗಳನ್ನು ಬೀರುವ ಸಾಧ್ಯತೆ ಇರುತ್ತದೆ.

ಸಾಮಾನ್ಯವಾಗಿ ಬೊಜ್ಜಿನ ಕಾರಣದಿಂದ ಗರ್ಭಧಾರಣೆಯ ಮಧುಮೇಹ ಉಂಟಾಗುವ ಸಾಧ್ಯತೆ ಹೆಚ್ಚೆಂದು ಅಭಿಪ್ರಾಯವಿತ್ತು. ಈಗ, ಖಿನ್ನತೆಯುಳ್ಳ ಮಹಿಳೆಯರಲ್ಲಿಯೇ ಈ ಅಪಾಯ ಹೆಚ್ಚೆಂದು ಅಧ್ಯಯನ ವರದಿಯು ಹೇಳುತ್ತದೆ.

ಈ ಸಂಶೋಧನೆಗಾಗಿ ಸಂಶೋಧಕರು 2334 ಬೊಜ್ಜುರಹಿತ ಗರ್ಭಿಣಿಯರನ್ನು ಹಾಗೂ 468 ಬೊಜ್ಜು ಹೊಂದಿದ ಗರ್ಭಿಣಿಯರನ್ನು ಆಯ್ದು ಅಧ್ಯಯನ ನಡೆಸಿದ್ದರು. 16ರಿಂದ 22ನೇ ವಾರಗಳ ಒಳಗಿನ ಗರ್ಭಿಣಿಯರು ಖಿನ್ನತೆ ಕುರಿತಾದ ಪ್ರಶ್ನೆಪತ್ರಿಕೆಗೆ ಉತ್ತರಿಸಿದ್ದರು. ಅವರಿಗೆ ಹೆರಿಗೆಯಾದ ಆರು ವಾರಗಳ ನಂತರದಲ್ಲಿ ಮತ್ತೊಮ್ಮೆ ಅವರಿಗೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಲಾಯಿತು.

ಫಲಿತಾಂಶ; ಬೊಜ್ಜುಳ್ಳ ಮಹಿಳೆಯರಿಗಿಂತ 17%ರಷ್ಟು ಹೆಚ್ಚು ಖಿನ್ನತೆಯುಳ್ಳ ಮಹಿಳೆಯರು ಗರ್ಭಧಾರಣೆಯ ಮಧುಮೇಹಕ್ಕೆ ಒಳಗಾಗಿದ್ದುದು ಕಂಡುಬಂತು. ಹಾಗೂ ಖಿನ್ನತೆ ಇಲ್ಲದ (ಅಥವಾ ಖಿನ್ನತೆಯ ಪ್ರಮಾಣ ಅತ್ಯಂತ ಕಡಿಮೆ ಇರುವ) ಮಹಿಳೆಯರಲ್ಲಿ ಗರ್ಭಧಾರಣೆಯ ಮಧುಮೇಹವು ಕಡಿಮೆ ಪ್ರಮಾಣದಲ್ಲಿ ಕಂಡುಬಂದಿತು.

“ಖಿನ್ನತೆ ಇರುವ ಗರ್ಭಿಣಿಯರ ಮಾನಸಿಕ ಆರೋಗ್ಯದ ಕುರಿತು ವಿಶೇಷ ಗಮನ ನೀಡುವ ಮೂಲಕ ಗರ್ಭಧಾರಣೆಯ ಮಧುಮೇಹದ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು ಎಂದು ನಮ್ಮ ಅಧ್ಯಯನವು ಹೇಳುತ್ತದೆ” ಎಂದು ಅಧ್ಯಯನ ತಂಡದ ಹಿರಿಯ ಸದಸ್ಯ ನ್ಯಾಶನಲ್ ಇನ್’ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ ಅ್ಯಂಡ್ ಹ್ಯೂಮನ್ ಡೆವಲ್ಪಮೆಂಟ್’ನ ಡಾ. ಕ್ಯುಲಿನ್ ಝಾಂಗ್ ಅಧ್ಯಯನ ವರದಿಯನ್ನು ಸಾರಾಂಶ ರೂಪದಲ್ಲಿ ಹೇಳಿದ್ದಾರೆ.

ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org