ಜೀರ್ಣಕ್ರಿಯೆಗೂ ಮತ್ತು ಭಾವನೆಗಳಿಗೂ ಸಂಬಂಧವಿದೆಯೇ?

ಜೀರ್ಣಕ್ರಿಯೆಗೂ ಮತ್ತು ಭಾವನೆಗಳಿಗೂ ಸಂಬಂಧವಿದೆಯೇ?

ಅದೊಂದು ಕಾಲವಿತ್ತು. ನಾನು ಯಾವಾಗಲೂ ಚಿಂತೆಯಲ್ಲಿರುತ್ತಿದ್ದೆ ಮತ್ತು ಹತಾಶೆಯಿಂದಿರುತ್ತಿದ್ದೆ. ನನ್ನ ಮಿತ್ರರು ನನ್ನನ್ನು ಮುಂಗೋಪಿ, ನಿರಾಶಾವಾದಿಯೆಂದು ಕರೆಯುತ್ತಿದ್ದರು. ನನಗೆ ಕೆಲವೊಮ್ಮೆ ವಿನಾಕಾರಣ ಸಿಟ್ಟು ಬರುತ್ತಿತ್ತು ಇದರಿಂದ ನನ್ನ ಮನಸ್ಥಿತಿ ಹದಗೆಟ್ಟಿತ್ತು. ದೀರ್ಘಕಾಲದ ನಂತರ ಈ ವರ್ತನೆಗೆ ನನ್ನಲ್ಲಿನ ಮಾನಸಿಕ ಉದ್ವೇಗ ಮತ್ತು ಒತ್ತಡಗಳೇ ಕಾರಣ ಎಂದು ಅರಿವಾಯಿತು.

ಬಹಳ ಸಲ ಮಾನಸಿಕ ವ್ಯಾಧಿಯನ್ನು ದೈಹಿಕ ನ್ಯೂನತೆಯೆಂದು ಕರೆಯಲಾಗುತ್ತದೆ. ಏಕೆ ಗೊತ್ತೇ? ಏಕೆಂದರೆ ಕೆಲವು ವರ್ಷಗಳ ನನ್ನ ಅನುಭವದ ಪ್ರಕಾರ, ನಮ್ಮ ಮಾನಸಿಕ ಉದ್ವೇಗಕ್ಕೆ ಕಾರಣ ನಮ್ಮ ಶರೀರದಲ್ಲಿ ಉಂಟಾಗುವ ಕೆಲವು ರಾಸಾಯನಿಕ ಪ್ರಕ್ರಿಯೆಗಳು – ಉದಾ: ಜೀರ್ಣಕ್ರಿಯೆ. ನನ್ನ 30ನೇ ವಯಸ್ಸಿನಲ್ಲಿಯೇ ನನಗೆ ಕೆಲವು ಆಹಾರ ಪದಾರ್ಥಗಳ (ಗೋಧಿ, ಹಾಲಿನ ಉತ್ಪನ್ನಗಳು, ಮೊಟ್ಟೆ, ಚಾಕೋಲೇಟ್, ಕೆಲವೊಂದು ತರಕಾರಿಗಳು, ಸಸ್ಯಗಳು ಮತ್ತು ಸಾಂಬಾರು ಪದಾರ್ಥಗಳು) ಸೇವನೆಯಿಂದ ತಾಳ್ಮೆ ಕಳೆದುಕೊಳ್ಳುವಂತಾಗಿತ್ತು. ಇವುಗಳಲ್ಲಿ ಯಾವ ಪದಾರ್ಥವನ್ನು ಸೇವಿಸಿದರೂ ಸುಸ್ತು ಮತ್ತು ನಿರುತ್ಸಾಹಗಳುಂಟಾಗಿ ಅನಾರೋಗ್ಯದಿಂದ ವಾರಗಟ್ಟಲೆ ಹಾಸಿಗೆಯಿಂದೇಳುವುದೇ ಕಷ್ಟವಾಗುತ್ತಿತ್ತು. ಈ ಆಹಾರ ಪದಾರ್ಥಗಳು ನೇರವಾಗಿ ಮಾನಸಿಕ ಅನಾರೋಗ್ಯಕ್ಕೂ ಕಾರಣವಾಗಿದ್ದವು.

ಕ್ರಮೇಣ, ಕಟ್ಟುನಿಟ್ಟಾದ ಮಿತವಾದ ಆಹಾರ ಸೇವನೆಯಿಂದ ನನ್ನ ಆರೋಗ್ಯದಲ್ಲಿ ಸುಧಾರಣೆಯಾಯಿತು ಮತ್ತು ಸಂತೋಷದಿಂದ ಇರುವಂತಾಯಿತು. ಸುಧಾರಿತ ದೈಹಿಕ ಆರೋಗ್ಯದಿಂದ ಮಾನಸಿಕ ಆರೋಗ್ಯದಲ್ಲಿ ಸುಧಾರಣೆಯಾಯಿತು. ನಿದ್ರೆ ಚೆನ್ನಾಗಿ ಬರತೊಡಗಿತು. ಇದರಿಂದ ಆರೋಗ್ಯಪೂರ್ಣವಾಗಿದ್ದುಕೊಂಡು ಕೆಲಸ, ಕಾರ್ಯಗಳನ್ನು ನಿರ್ವಹಿಸುವಂತಾಯಿತು. ಇತರರ ಹಾಗೆ ಸಂತೋಷವಾಗಿ ಮತ್ತು ನಿರಾಯಾಸವಾಗಿ ಎಲ್ಲವನ್ನೂ ನಿರ್ವಹಿಸುತ್ತಾ ಒಟ್ಟಾರೆಯಾಗಿ ಸಂತೋಷವಾಗಿದ್ದೆ. ಈ ನೆಮ್ಮದಿ - ಸಂತೋಷವು ನಾನು ಸೇವಿಸುವ ಆಹಾರ ಮತ್ತು ನನ್ನ ಕೆಲಸದ ಒತ್ತಡದ ಮೇಲೆ ಅವಲಂಭಿತವಾಗಿತ್ತು.

ನನಗೆ ಅರಗಿಸಿಕೊಳ್ಳಲಾಗದಂತಹ ಆಹಾರ ಪದಾರ್ಥಗಳ ಪಟ್ಟಿ ಸಾಕಷ್ಟು ಉದ್ದವಿದೆ. ರೆಸ್ಟೋರೆಂಟ್ಗಳಲ್ಲಿ, ಸಮಾರಂಭಗಳಲ್ಲಿ ಮತ್ತು ಔತಣ ಕೂಟಗಳಲ್ಲಿ ವಿಧವಿಧವಾದ ರುಚಿಕರವಾದ ಆಹಾರವನ್ನು ಸೇವಿಸುವಾಗ ಪ್ರತಿ ತುತ್ತಿನಲ್ಲೂ ಅದರಲ್ಲಿ ಬಳಸಲಾಗಿರುವ ಪದಾರ್ಥಗಳ ಬಗ್ಗೆ ತಿಳಿದುಕೊಳ್ಳುವುದು ಸಾಧ್ಯವಿಲ್ಲದ ಮಾತು. ಆದರೆ ನಂತರದಲ್ಲಿ ಕಂಡುಬರುತ್ತಿದ್ದ ಕೆಲವು ಅಡ್ಡಪರಿಣಾಮಗಳಿಂದ ಕೆಲವು ಆಹಾರ ಪದಾರ್ಥಗಳು ನನ್ನ ಉದ್ವೇಗ ಮತ್ತು ಅಲರ್ಜಿಗೆ ಬಲವಾದ ಕಾರಣ ಎಂಬ ಸಂಶಯವುಂಟಾಗುತ್ತಿತ್ತು.

ಈ ವಿಚಾರವನ್ನು ಇದುವರೆಗೂ ವಿಜ್ಞಾನ ಸಾಬೀತುಪಡಿಸಿಲ್ಲ. ಆದರೆ ಇತ್ತೀಚೆಗಿನ ಕೆಲವು ಸಂಶೋಧನೆಗಳು ಈ ಕುರಿತು ಸಲಹೆ ನೀಡಿವೆಯಷ್ಟೆ. ಎರಡು ವರ್ಷಗಳ ಹಿಂದೆ ನ್ಯೂಯಾರ್ಕ್ ಟೈಮ್ಸ್ ಒಂದು ವರದಿ ನೀಡಿತ್ತು. ಅದು, “ಮೆದುಳಿಗೆ ಸಂದೇಶಗಳನ್ನು ರವಾನಿಸಲು ಕಾರಣವಾದ ನ್ಯೂಟ್ರೋಕೆಮಿಕಲ್ಸ್’ನ ಬಳಕೆಯಿಂದ ಕೆಲವು ಗಟ್ ಮೈಕ್ರೋಬ್ಸ್’ಗಳು ನರಮಂಡಲವನ್ನು ಉದ್ರೇಕಿಸುತ್ತವೆ. ಮತ್ತು ಗಟ್’ನಲ್ಲಿರುವ ಮೈಕ್ರೋಆರ್ಗ್ಯಾನಿಸಮ್’ಗಳು ಮಾನಸಿಕ ಒತ್ತಡ ಹಾಗೂ ಉದ್ವೇಗಕ್ಕೆ ಕಾರಣವಾಗಿರುವ ಮೆದುಳಿನ ಒಳಭಾಗದ ಸಂವೇದನೆಗಳನ್ನು ಪ್ರಚೋದಿಸುತ್ತವೆ. ಕೆಲವೊಂದು ಬ್ಯಾಕ್ಟೀರಿಯಾಗಳು ಮಾನಸಿಕ ವ್ಯಾಧಿಗೂ ಕಾರಣವಾಗುತ್ತವೆ” ಎಂದು ವಿಶ್ಲೇಷಿಸಿತ್ತು

ಪ್ರೊಬಯೋಟಿಕ್ ಬ್ಯಾಕ್ಟೀರಿಯಾಗಳು ಕೆಲವೊಂದು ನಿರ್ದಿಷ್ಟ ಮಾನಸಿಕ ರೋಗಗಳಿಗೆ ಕಾರಣವಾಗಿದ್ದು, ಸೂಕ್ತ ಚಿಕಿತ್ಸೆಗಳಿಂದ ಹಾಗೂ ಹಿತಾನುಭವದ ವಾತಾವರಣದಲ್ಲಿದ್ದು, ಸರಿಯಾದ ಆಹಾರ ಸೇವನೆಯಿಂದ ಅದನ್ನು ಸುಧಾರಿಸಬಹುದು. ಇದು ನನ್ನೊಬ್ಬಳ ಅನಿಸಿಕೆಯಲ್ಲ. ಆರೋಗ್ಯ ಸುಧಾರಣೆಗಾಗಿ ತಮ್ಮ ತಮ್ಮ ಆಹಾರ ಸೇವನೆಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡ ಹಲವಾರು ಜನರೊಡನೆ ನಾನು ಮಾತನಾಡಿದ್ದೇನೆ. ದೆಹಲಿಯಲ್ಲಿ ನೆಲೆಸಿರುವ ಪತ್ರಕರ್ತರಾದ 32ವರ್ಷದ ಅದಿತಿ ಮಲ್ಯ, ”ಮಿತಿಮೀರಿದ ಆಹಾರ ಸೇವನೆ, ಹಾಲಿನ ಉತ್ಪನ್ನಗಳ ಮತ್ತು ಈಸ್ಟ್ ಬಳಸಿ ತಯಾರಿಸಿದ ಪದಾರ್ಥಗಳ ಸೇವನೆ ನನ್ನಲ್ಲಿ ಅತಿಯಾದ ಆಲಸ್ಯವನ್ನು ಉಂಟುಮಾಡುತ್ತಿತ್ತು ಮತ್ತು ಇಂತಹ ಆಹಾರವನ್ನು ಪ್ರತಿನಿತ್ಯ ಸೇವಿಸುವುದರಿಂದ ಮನಸ್ಸು ವಿಚಲಿತವಾಗುತ್ತಿತ್ತು. ಕೆಲವೊಂದು ಅಲರ್ಜಿ ಉಂಟು ಮಾಡುವ ಆಹಾರ ಸೇವನೆಯಿಂದ ನಾನು ಮಾನಸಿಕವಾಗಿ ಕಿರಿಕಿರಿಗೊಳಗಾಗುತ್ತಿದ್ದೆ ಹಾಗೂ ಕುಗ್ಗಿ ಹೋಗಿದ್ದೆ.” ಎಂದು ತಮ್ಮ ಅನುಭವ ಹಂಚಿಕೊಂಡಿದ್ದರು.

ದೆಹಲಿಯಲ್ಲಿ ವಾಸವಿರುವ, ಪ್ರಕಾಶನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ 25ರ ಹರೆಯದ ನವೋಮಿ ಬಾರ್ಟನ್ ರವರಿಗೆ ಯಾವ ಪದಾರ್ಥ ಸೇವಿಸಿದರೂ ವಾಕರಿಕೆಯ ಅನುಭವವಾಗುತ್ತಿತ್ತು. ಇದು ನೇರವಾಗಿ ಅವರ ಮನಸ್ಸಿನ ಮೇಲೆ ಪರಿಣಾಮ ಬೀರಿತ್ತು. ಅವರು, ”ನನ್ನ ಹೊಟ್ಟೆ ಕೆಟ್ಟಾಗ  ನಾನು ಉದ್ವೇಗ, ದಣಿವು ಮತ್ತು ವಿಚಲತೆಗೆ ಒಳಗಾಗುತ್ತಿದ್ದೆ” ಎಂದು ಹೇಳಿಕೊಂಡಿದ್ದರು.

ಪ್ರತಿಯೊಬ್ಬರ ದೇಹಸ್ಥಿತಿ ವಿಭಿನ್ನವಾಗಿರುತ್ತದೆ ಮತ್ತು ಅವರವರ ದೇಹಕ್ಕೆ ತಕ್ಕಂತೆ ಸೂಕ್ತವಾದ, ಮಿತವಾದ ಆಹಾರ ಸೇವನೆಯಿಂದ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇರಿಸಬಹುದಾಗಿದೆ. ಇದನ್ನು ಕಂಡುಕೊಂಡ ನಂತರ ನಾನು ಸಾಕಷ್ಟು ಬದಲಾವಣೆ ಅನುಭವಿಸಿದ್ದೇನೆ. ಈಗ ಒಮ್ಮೊಮ್ಮೆ, ನಾನು ಇಷ್ಟೊಂದು ಸಮಾಧಾನದಿಂದ ಇದ್ದೇನಾ ಎಂಬ ಸಂಶಯ ಉಂಟಾಗುತ್ತದೆ. ನಾನು ಸಂತೋಷದಿಂದ, ಆರೋಗ್ಯದಿಂದ ಇದ್ದಾಗ ಹಿಂದಿನಂತೆ ಕಿರಿಕಿರಿಗೊಳಗಾಗುವುದಿಲ್ಲ. ಸಾಕಷ್ಟು ತಾಳ್ಮೆಯಿಂದ ಪ್ರತಿಕ್ರಿಯಿಸುತ್ತೇನೆ.

ನನ್ನ ಸ್ಥಿರವಾದ, ಪುಷ್ಟಿಕರವಾದ ಆಹಾರ ಕ್ರಮದಿಂದಾಗಿ ಅನಾರೋಗ್ಯ ಕಾಣಿಸಿಕೊಳ್ಳುವುದು ಅಪರೂಪವಾಗಿದೆ. ಈಗ ನನಗೆ ಉದ್ವೇಗ ಮತ್ತು ಹೆದರಿಕೆ ಕಡಿಮೆಯಾಗಿದೆ. ಈಗ ನಾನು ಹಿಂದಿನ ದಿನಗಳ ನನ್ನ ವರ್ತನೆಯನ್ನು ನೆನೆದು ಹಾಸ್ಯ ಮಾಡಿಕೊಂಡು ನಗಬಲ್ಲೆ. ನಿಜವಾಗಿಯೂ.ಇದು ನನ್ನಲ್ಲಿನ ಆತ್ಮವಿಶ್ವಾಸ.

ಯಾವ ಸಂದರ್ಭದಲ್ಲಿ ನಾನು ಭಾವೋದ್ವೇಗಕ್ಕೆ ಒಳಗಾಗುತ್ತೇನೆಯೋ ಆಗ ಸಣ್ಣ - ಪುಟ್ಟ ಸಮಸ್ಯೆಗಳಿಗೆ ಭಯಪಡುವುದು, ಇನ್ನೊಬ್ಬರ ಮೇಲೆ ಎಗರಾಡುವುದು, ಚಲನಚಿತ್ರದಲ್ಲಿನ  ಭಾವನಾತ್ಮಕ ಸನ್ನಿವೇಶಗಳನ್ನು ನೋಡಿ ಅಳುವುದು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ನಾನು ಅವನ್ನು ಕೂಡಲೇ ಕಂಡುಕೊಳ್ಳುತ್ತೇನೆ. ನನ್ನಲ್ಲಿ ಈ ಬದಲಾವಣೆಗಳಾಗುತ್ತಿವೆ ಎಂದರೆ, ನಾನು ಯಾವುದೋ ಆಹಾರ ವ್ಯತ್ಯಯ ಅಥವಾ ಪ್ರಿಮೆನ್’ಸ್ಟ್ರುವಲ್ ಸಿಂಡ್ರೋಮ್ (ಪಿ ಎಮ್ ಎಸ್)ಗೆ ಒಳಗಾಗಿದ್ದೇನೆಂದು ಅರ್ಥ ಮಾಡಿಕೊಳ್ಳುತ್ತೇನೆ. ಇದು ನ್ಯೂನತೆಯಲ್ಲ. ನಾನು ಈ ಉದ್ವೇಗವನ್ನು ತಾಳ್ಮೆಯಿಂದ ಹೊರ ಹಾಕುತ್ತೇನೆ ಮತ್ತು ಯಾವುದೇ ರೀತಿಯಲ್ಲಿ ಕಿರಿಕಿರಿಗೊಳಗಾಗುವುದಿಲ್ಲ. ಈ ಕುರಿತು ನಾನು ನನಗೇ ಋಣಿಯಾಗಿದ್ದೇನೆ.

ಉನ್ಮನ ಮುಂಬೈನಲ್ಲಿ ನೆಲೆಸಿರುತ್ತಾರೆ ಮತ್ತು ಮುಂಬೈಯನ್ನು ಅತಿಯಾಗಿ ಪ್ರೀತಿಸುತ್ತಾರೆ.ಅವರು ಮಾರ್ಕೇಟಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಕಾದಂಬರಿಕಾರರೂ ಹೌದು.ಅವರು ಸಂಗೀತ, ಚಿತ್ರಕಲೆಯನ್ನೂ ಅಭ್ಯಾಸ ಮಾಡುತ್ತಿದ್ದಾರೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org