ಭಾರತದಲ್ಲಿ 15 ಕೋಟಿ ಜನರಿಗೆ ಮಾನಸಿಕ ಆರೋಗ್ಯ ಸಮಸ್ಯೆಯಿದೆ

ಭಾರತದಲ್ಲಿ 15 ಕೋಟಿ ಜನರಿಗೆ ಮಾನಸಿಕ ಆರೋಗ್ಯ ಸಮಸ್ಯೆಯಿದೆ

ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಇತ್ತೀಚೆಗೆ ಬಿಡುಗಡೆ ಮಾಡಿರುವ 2016ರ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆಯ ಅನುಸಾರ ಭಾರತದ  ಜನಸಂಖ್ಯೆಯಲ್ಲಿ ಶೇ 10.60ರಷ್ಟು ಜನರು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಹನ್ನೆರಡು ರಾಜ್ಯಗಳಲ್ಲಿ ನಡೆಸಲಾದ ಈ ಸಮೀಕ್ಷೆಯಲ್ಲಿ 40000 ವ್ಯಕ್ತಿಗಳನ್ನು ಸಂಪರ್ಕಿಸಲಾಗಿದ್ದು ಎಲ್ಲರೂ  18 ವರ್ಷದ ಮೇಲ್ಪಟ್ಟವರೇ ಆಗಿದ್ದಾರೆ. ಖಿನ್ನತೆ ಮತ್ತು ಆತಂಕ ಮುಂತಾದ ಸಾಮಾನ್ಯ ಮಾನಸಿಕ ಊನತ್ವ ಈ ಜನರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವುದು ಕಂಡುಬಂದಿದೆ. ಗಂಭೀರ ಮಾನಸಿಕ ಊನತ್ವ ಎನ್ನಬಹುದಾದ ಸ್ಕಿಜೋಫಿನಿಯಾ, ಮದ್ಯಪಾನದ ವ್ಯಸನ, ಮಾದಕ ದ್ರವ್ಯ ಸೇವನೆ ಮುಂತಾದ ಸಮಸ್ಯೆಗಳು  ಆತ್ಮಹತ್ಯೆ ಪ್ರಕರಣಗಳನ್ನೂ ಹೆಚ್ಚಿಸಿದೆ.

ಈ ಸಮೀಕ್ಷೆಯ ಅನುಸಾರ ಶೇ 5ರಷ್ಟು ಜನತೆಗೆ ಮದ್ಯಪಾನ ಚಟವನ್ನು ಬಿಡಿಸಲು ಕೂಡಲೇ ಚಿಕಿತ್ಸೆ ನೀಡಬೇಕಿದೆ. ಹೆಚ್ಚಿನ ಮದ್ಯಪಾನ ಮಾಡುವ ಗಂಡಸರ ಪೈಕಿ ಇದು ಶೇ 10ಕ್ಕಿಂತಲೂ ಹೆಚ್ಚಾಗಿದೆ. ಸಾಮಾನ್ಯ ಮಾನಸಿಕ ಊನತ್ವ ಮತ್ತು ಗಂಭೀರ ಮಾನಸಿಕ ಊನತ್ವದ ಅನುಪಾತ 1:10ರಷ್ಟಿದ್ದು, ಖಿನ್ನತೆ ಮತ್ತು ಆತಂಕಗಗಳನ್ನು ದೂರ ಮಾಡುವ ಮೂಲಕ ಸಾಮಾನ್ಯ ಮಾನಸಿಕ ಊನತ್ವಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಒದಗಿಸುವ ಕೆಲಸ ಕೂಡಲೇ ವ್ಯಾಪಕ ಮಟ್ಟದಲ್ಲಿ ನಡೆಯಬೇಕಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಸಮಸ್ಯೆ ಇಷ್ಟು ಆಳವಾಗಿರುವುದರೊಂದಿಗೇ ಚಿಕಿತ್ಸೆ ನೀಡುವುದರಲ್ಲೂ ಕೊರತೆ ಹೆಚ್ಚಾಗಿರುವುದು ಆತಂಕಕಾರಿ ವಿಷಯವಾಗಿದೆ.

ಸಮೀಕ್ಷೆಯಲ್ಲಿ ಗಮನಿಸಿರುವಂತೆ,  ಮಾನಸಿಕ ಸಮಸ್ಯೆ ಇರುವವರ ಪೈಕಿ ಶೇ 25ಕ್ಕಿಂತಲೂ ಕಡಿಮೆ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. “ದೇಶದಲ್ಲಿ ಮಾನಸಿಕ ಖಾಯಿಲೆಯ ಬಗ್ಗೆ ಹೆಚ್ಚಿನ ಅರಿವು ಇಲ್ಲದಿರುವುದನ್ನು ಗುರುತಿಸಲಾಗಿದೆ. ಇದರಿಂದ ಚಿಕಿತ್ಸೆ ಪಡೆಯವುದರಲ್ಲೂ ತಡವಾಗುತ್ತಿದೆ” ಎನ್ನುತ್ತಾರೆ ನಿಮ್ಹಾನ್ಸ್ ಸಂಸ್ಥೆಯ ಮಾನಸಿಕ ರೋಗ ವಿಭಾಗದ ಪ್ರೊಫೆಸರ್ ಡಾ. ವಿವೇಕ್ ಬೆನಗಲ್.

ಚಿಕಿತ್ಸೆಯಲ್ಲಿ ಕಂಡುಬಂದಿರುವ ಕೊರತೆಯನ್ನು ಸರಿಪಡಿಸಲು ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಎಂದು ಸೂಚಿಸಲು ಸಮೀಕ್ಷಾ ವರದಿಯಲ್ಲಿ ಕೆಲವು ಶಿಫಾರಸುಗಳನ್ನು ಮಾಡಲಾಗಿದೆ. ನಿಮ್ಹಾನ್ಸ್ ಸಂಸ್ಥೆಯ ಉಪಕುಲಪತಿ ಮತ್ತು ನಿರ್ದೇಶಕ ಡಾ ಬಿ ಎನ್ ಗಂಗಾಧರ್, ಈ ವಿಚಾರದಲ್ಲಿ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ನೆರವಾಗುವಂತೆ ಮಾಧ್ಯಮಗಳನ್ನು ಕೋರಿದ್ದಾರೆ. ಮಾನಸಿಕ ಸಮಸ್ಯೆಗೆ ಚಿಕಿತ್ಸೆ ದೊರೆಯುತ್ತದೆ ಎಂದು ಜನಸಾಮಾನ್ಯರಿಗೆ ತಿಳಿಸುವುದೇ ಅಲ್ಲದೆ, ಯಾವುದೇ ರೀತಿಯ ಮಾನಸಿಕ ರೋಗವಾದರೂ ಸದು ಸಹಜವಾದ ಒಂದು ಆರೋಗ್ಯ ಸಮಸ್ಯೆ ಎಂದು ತಿಳಿಸಿ ಈ ಕುರಿತು ಇರುವ ಕಳಂಕವನ್ನು ನಿವಾರಿಸಲು ಡಾ ಗಂಗಾಧರ್ ಮಾಧ್ಯಮಗಳನ್ನು ಕೋರಿದ್ದಾರೆ. “ ಮಾನಸಿಕ ಖಾಯಿಲೆಗೆ ಚಿಕಿತ್ಸೆ ನೀಡುವ ಜವಾಬ್ದಾರಿ ಕೇವಲ ಮಾನಸಿಕ ತಜ್ಞರ ಮೇಲೆ ಮಾತ್ರವೇ ಇರುವುದಿಲ್ಲ. ಕೆಲವು ಸಾಮಾನ್ಯ ಮಾನಸಿಕ ಖಾಯಿಲೆಗಳಿಗೆ ಪ್ರಾಥಮಿಕ ಆರೋಗ್ಯ ಕೆಂದ್ರಗಳಲ್ಲೇ ಕಂಡುಹಿಡಿದು ಚಿಕಿತ್ಸೆ ನೀಡಬಹುದು ” ಎನ್ನುತ್ತಾರೆ ಡಾ ಬಿ ಎನ್ ಗಂಗಾಧರ.

ನಗರ ಕೇಂದ್ರಗಳಲ್ಲಿ ಮಾನಸಿಕ ಖಾಯಿಲೆಗಳು ಹೆಚ್ಚು ವ್ಯಾಪಕವಾಗಿ ಹರಡುತ್ತವೆ ಎಂದೂ ಸಮೀಕ್ಷೆಯಲ್ಲಿ ಹೇಳಲಾಗಿದೆ. ಹೆಚ್ಚಿನ ಒತ್ತಡ ಮತ್ತು ಜೀವನ ಶೈಲಿಯೂ ಸಹ ಈ ಹೆಚ್ಚಿನ ಪ್ರಮಾಣಕ್ಕೆ ಕಾರಣ ಇರಬಹುದಾದರೂ ಖಚಿತವಾದ ಕಾರಣಗಳನ್ನು ಸೂಚಿಸಲಾಗಿಲ್ಲ. “ ಮಾನಸಿಕ ಖಾಯಿಲೆಗಳಿಂದ ಉಂಟಾಗುವ ಊನತ್ವ ಅಥವಾ ವಿಕಲತೆ ಬಹಳಷ್ಟು ಜನರಲ್ಲಿ ಕೆಲಸ ಮಾಡುವ ಸಾಮಥ್ರ್ಯವನ್ನೇ ಕಡಿಮೆ ಮಾಡಿಬಿಡುತ್ತದೆ. ಇದು ಸರ್ಕಾರದ ಅಭಿವೃದ್ಧಿ ನೀತಿಗಳಿಗೆ ಸರಿಹೊಂದುವುದಿಲ್ಲ ” ಎಂದು ಹೇಳುವ ಡಾ ಬಿ ಎನ್ ಗಂಗಾಧರ ಹೆಚ್ಚು ಪರಿಣಾಮಕಾರಿಯಾದ ಮತ್ತು ಉತ್ತಮ ಗುಣಮಟ್ಟದ ಮಾನಸಿಕ ಆರೋಗ್ಯ ನೀತಿಯನ್ನು ಜಾರಿಗೊಳಿಸಲು ಕೋರುತ್ತಾರೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org