ನೆಲೆ ಬದಲಾಯಿಸುವ ಕಷ್ಟಸುಖ: ದೇಶದೊಳಗೆ ಸ್ಥಳಾಂತರ ಮಾಡುವುದಕ್ಕಿಂತ, ಹೊರದೇಶದಲ್ಲಿ ನೆಲೆಸುವುದೇ ಸುಲಭ

ಮದುಮಗಳು ಈ ಎರಡನ್ನೂ ಹೋಲಿಕೆ ಮಾಡಿ ನೋಡಿದಾಗ, ತಾನು ಕುಟುಂಬದ ನಡುವೆಯೇ ಹೆಚ್ಚು ಏಕಾಂಗಿ ಎಂದು ತಿಳಿದು ಅಚ್ಚರಿಪಡುತ್ತಾಳೆ!

ನನ್ನ 23ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಮುಂಬಯಿಯಿಂದ ಹೊರಗೆ ಹೋಗಿ ನೆಲೆಸುವ ಅವಕಾಶ ಬಂದಿತ್ತು. ಅಲ್ಲಿಯವರೆಗೆ ಮುಂಬಯಿಯಲ್ಲೇ ನನ್ನ ತಂದೆತಾಯಿಯರೊಡನೆ ವಾಸಿಸುತ್ತಿದ್ದೆ. ಒಬ್ಬರಿಗಾಗಿ ನಾನು ನನ್ನ ರಾಜ್ಯವನ್ನೇ ಬಿಟ್ಟು ದೇಶದ ಮತ್ತೊಂದು ಭಾಗಕ್ಕೆ ಹೋಗಿ ನೆಲೆಸಬೇಕಾಗಿ ಬಂತು.

ಶುರುವಲ್ಲಿ ನಾನು ಬೇರೆ ರಾಜ್ಯಕ್ಕೆ ಹೋಗಿ ನೆಲೆಸುವ ಬಗ್ಗೆ ವಿಪರೀತ ಉತ್ಸುಕಳಾಗಿದ್ದೆ. ಏಕಾಂಗಿಯಾಗಿರುವ ಬಗ್ಗೆ, ಹೊಸ ಕಾಲೇಜಿನ ಬಗ್ಗೆ ಕನಸುಗಳನ್ನು ಕಟ್ಟಿಕೊಂಡಿದ್ದೆ. ಆದರೆ ಅದೊಂದೂ ನೆರವೇರಲಿಲ್ಲ. ಕಾಲೇಜ್ ಹಾಸ್ಟೆಲ್ ನನಗೆ ಇಷ್ಟವಾಗದೆ ಅಲ್ಲಿ ಇರಲಾಗಲಿಲ್ಲ. ಅದರ ಬದಲಿಗೆ ನಾನು ಹೈದರಾಬಾದ್’ನಲ್ಲಿಯೇ ಇದ್ದ ನನ್ನ ಅಂಕಲ್ ಮನೆಯಲ್ಲಿ ಇರುವುದೆಂದು ತೀರ್ಮಾನಿಸಿದೆ.

ಸಾಮಾನ್ಯವಾಗಿ ಕುಟುಂಬದ ಜೊತೆ ಇರುವುದು ಆರಾಮದಾಯಕವಾಗಿರುತ್ತದೆ. ಇತ್ತ ಕಾಲೇಜಿನಲ್ಲೂ ಮನೆ ದೂರವಿದ್ದ ಕಾರಣಕ್ಕಾಗಿ ನಾನು ಚಟುವಟಿಕೆಗಳಲ್ಲಿ ಭಾಗವಹಿಸುವುದು ಕಡಿಮೆಯಾಗಿತ್ತು. ಮಾಸ್ಟರ್ಸ್ ತರಗತಿಗಳು ನಿಯಮಿತವಾಗಿ ಇರುವುದಿಲ್ಲ ಮತ್ತು ಬಹಳ ಹೊತ್ತು ನಡೆಯುವುದಿಲ್ಲ. ಆದ್ದರಿಂದ ನಾನು ವಿಪರೀತ ಪುರುಸೊತ್ತಿನಲ್ಲಿ ಇರುತ್ತಿದ್ದೆ. ಅದನ್ನು ಸದುಪಯೋಗಪಡಿಸಿಕೊಳ್ಳಲು ದಾರಿಗಳೇ ಇರಲಿಲ್ಲ! ನಾನು ಟು ವೀಲರ್ ಓಡಿಸುತ್ತಿರಲಿಲ್ಲ. ವಾಕ್ ಮಾಡಲು ಮನೆಯ ಸುತ್ತ ಸರಿಯಾದ ಜಾಗವಿರಲಿಲ್ಲ. ನಾನಿದ್ದ ನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬಳೇ ಕುಳಿತುಕೊಂಡು ಕಾಲಹರಣ ಮಾಡುವ ಅನುಕೂಲಕರ ಪರಿಸ್ಥಿತಿಯೂ ಇರಲಿಲ್ಲ. ಹೀಗಾಗಿ ನನಗೆ ಉಸಿರುಗಟ್ಟಿದಂತೆ ಅನ್ನಿಸತೊಡಗಿತು.

ಇದರ ನಡುವೆಯೇ ಮೊದಲ ಸೆಮಿಸ್ಟರ್ ಮುಗಿಯುವ ವೇಳೆಗೆ ನನ್ನ ಫ್ರೆಂಡ್’ಗೆ ವಿದೇಶದಲ್ಲಿ ಕೆಲಸ ಸಿಕ್ಕಿತು. ಆತ ಅಲ್ಲಿಗೆ ಹೊರಟುಹೋದ. ನಂತರದ ದಿನಗಳಲ್ಲಿ ನನ್ನ ಫ್ರೆಂಡ್ ಅವನದೇ ಹೊಂದಾಣಿಕೆಗಳಲ್ಲಿ ಮುಳುಗಿಹೋದ. ನಮ್ಮ ನಡುವಿನ ಅಂತರ ಮತ್ತಷ್ಟು ಹೆಚ್ಚಾಯಿತು. ಇದರಿಂದ ನಾನು ವಿಪರೀತ ತಲ್ಲಣಿಸಿ ಹೋದೆ. ಒಂಟಿತನದ ಭಾವದಲ್ಲಿ ಕುಗ್ಗುತ್ತಾ ಸಾಗಿದೆ. ಅಷ್ಟಾದರೂ, ನನ್ನನ್ನು ದೂರ ಮಾಡುತ್ತಿದ್ದ ಆ ಗಂಡಸಿನೊಡನೆ ಮದುವೆಯಾಗುವ ಕನಸನ್ನು ಕಾಯ್ದಿಟ್ಟುಕೊಳ್ಳಲು ಯತ್ನಿಸುತ್ತಿದ್ದೆ. ಅವನು ನನ್ನಿಂದ ದೂರವಾಗಿ ನನಗೆ ದ್ರೋಹವೆಸಗಿದ್ದ. ಹಾಗಿದ್ದೂ ನಾನು ಅವನನ್ನು ದೂರ ಮಾಡಿಕೊಳ್ಳಲು ಸಾಧ್ಯವಾಗದೆ ಹೋಯಿತು.

ನನ್ನ ಈ ಚಡಪಡಿಕೆಗಳನ್ನು ಗಮನಿಸಿದ ಅಂಕಲ್, ನನ್ನನ್ನ ಸಮಾಧಾನಪಡಿಸಲಿಕ್ಕಾಗಿ ಕೂಲರ್ ತಂದುಕೊಟ್ಟರು. ನನ್ನ ಕಸಿನ್ ನನಗೆ ಕೌನ್ಸೆಲರ್ ಒಬ್ಬರ ವಿಳಾಸ ಕೊಟ್ಟು ಅಲ್ಲಿಗೆ ಹೋಗಿ ಬಾ ಅಂದಳು. ಅದೇ ಮೊದಲ ಬಾರಿಗೆ ನಾನು ಒಬ್ಬ ಆಪ್ತಸಮಾಲೋಚಕರನ್ನು ಭೇಟಿಯಾದೆ. ಅದರಿಂದ ಬಹಳವೇನೂ ಉಪಯೋಗವಾಗದೆ ಹೋದರೂ ನಾನೇನು ಅನುಭವಿಸ್ತಿದ್ದೇನೆ ಅನ್ನುವ ಸ್ಪಷ್ಟತೆ ನನಗೆ ಸಿಕ್ಕಿತು. ನಾನು ಇಷ್ಟು ದಿನಗಳ ಕಾಲ ಮಾಡಿಕೊಂಡು ಬಂದ ತಪ್ಪುಗಳನ್ನು ಕಂಡುಕೊಂಡೆ.

ಮುಂದಿನ ದಿನಗಳಲ್ಲಿ ನನ್ನನ್ನು ಸಂಭಾಳಿಸಿಕೊಳ್ಳುತ್ತಾ ಹೆಜ್ಜೆಗಳನ್ನಿಟ್ಟಿ. ಮಾಸ್ಟರ್ಸ್ ಮುಗಿಯುವ ವೇಳೆಗೆ ನಾನು ಸಾಮಾಜಿಕ ಜೀವನದಲ್ಲಿ ಹೆಚ್ಚು ಸಕ್ರಿಯಳಾಗಿದ್ದೆ. ಅಷ್ಟಾದರೂ ನನಗೆ ಹೈದರಾಬಾದ್’ನಿಂದ ಎಷ್ಟು ಸಾಧ್ಯವೋ ಅಷ್ಟು ದೂರ ಹೋಗಿಬಿಡಬೇಕು ಅನ್ನಿಸುತ್ತಿತ್ತು.

ಎರಡು ವರ್ಷಗಳ ಅನಂತರ ನಾನು ಮದುವೆಯಾಗಿ ಹಾಂಗ್ ಕಾಂಗ್’ನಲ್ಲಿ ನೆಲೆಸಬೇಕಾಗಿ ಬಂತು. ಮತ್ತೊಮ್ಮೆ, ಮತ್ತೆ ನಾನು ಸ್ಥಳಾಂತರ ಮಾಡಬೇಕಾಯಿತು. ವಿಚಿತ್ರವೆಂದರೆ, ಇಡೀ ಹಾಂಗ್ ಕಾಂಗ್’ನಲ್ಲಿ ನನಗೆ ನನ್ನ ಗಂಡನ ವಿನಾ ಬೇರೊಬ್ಬರ ಪರಿಚಯ ಇಲ್ಲದಿದ್ದರೂ ನನಗದು ಅಪರಿಚಿತ ನಗರ ಅನ್ನಿಸಲೇ ಇಲ್ಲ. ಬಹಳ ಬೇಗ ಅಲ್ಲಿಗೆ ಹೊಂದಿಕೊಂಡೆ. ಗಂಡನ ಜೊತೆ ಮಧುರ ಬಾಂಧವ್ಯ ಇದ್ದುದರಿಂದ ನನಗೆ ಬೇರೆ ಯಾವ ಕೊರತೆಗಳೂ ಬಾಧಿಸಲಿಲ್ಲ. ನನ್ನ ಆತಂಕಗಳೂ ದೂರವಾದವು. ನನಗೊಂದು ಕೆಲಸವೂ ಸಿಕ್ಕಿ, ಸಾಮಾಜಿಕವಾಗಿಯೂ ಬದುಕನ್ನು ವಿಸ್ತರಿಸಿಕೊಳ್ಳತೊಡಗಿದೆ. ನನ್ನ ಗಂಡ ಆಗಾಗ ಕೆಲಸದ ನಿಮಿತ್ತ ಪ್ರವಾಸಕ್ಕೆ ಹೋದಾಗ ಖಾಲಿ ಮನೆಯಲ್ಲಿದ್ದಾಗ ಹೈದರಾಬಾದ್ ದಿನಗಳ ನೆನಪಾಗಿ ಬೇಸರಗೊಳ್ಳುತ್ತಿದ್ದೆ. ಅಲ್ಲಿಯ ಬದುಕಿನ ನೆನಪು ನನ್ನಲ್ಲಿ ಕಪ್ಪಾಗಿ ಕುಳಿತುಬಿಟ್ಟಿತ್ತು. ಅದನ್ನೂ ನಾನು ಸಾಮಾಜಿಕ ಬದುಕಿನಿಂದ ನಿವಾರಿಸಿಕೊಂಡೆ.

ಆಶ್ಚರ್ಯವೆಂದರೆ, ಕುಟುಂಬದ ಜೊತೆಗಿದ್ದರೂ ಹೈದರಾಬಾದಿನಲ್ಲಿ ಹೊಂದಿಕೊಳ್ಳಲು ನನಗೆ ಬಹಳ ಕಷ್ಟವಾಗಿತ್ತು. ಹಾಂಗ್ ಕಾಂಗ್ ಅಪರಿಚಿತ ದೇಶವಾದರೂ ನನಗೆ ಬಹಳ ಬೇಗ ಒಗ್ಗಿಕೊಂಡಿತ್ತು!

ಮುಂದೆ, ನಮ್ಮೊಳಗೆ ಕೆಲವು ವೈವಾಹಿಕ ಸಮಸ್ಯೆಗಳು ಉದ್ಭವಿಸಿದವು. ಬಹುಶಃ ಇದಕ್ಕೆ ನಾನು ಹೈದರಾಬಾದ್’ನಲ್ಲಿ ಕಳೆದ ದುರಂತಮಯ ಬದುಕಿನ ಅನುಭವವೇ ಕಾರಣವಿರಬಹುದು ಅಥವಾ ನಾನು ಬಾಲ್ಯದಿಂದಲೂ ಹಾಗೆಯೇ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುವುದು. ಅಷ್ಟಾದರೂ ನನಗೆ ಆ ಸಮಸ್ಯೆಗಳು ಏನೆಂದು ಈವರೆಗೆ ಕಂಡುಹಿಡಿಯಲು ಸಾಧ್ಯವಾಗಿಲ್ಲ.

ಹಾಂಗ್ ಕಾಂಗ್ ನನ್ನ ಪಾಲಿಗೆ ಸ್ನೇಹದಿಂದ ಇದೆ. ಆದರೆ ಇಲ್ಲಿ ಸೈಕಾಲಜಿಸ್ಟ್’ಗಳ ಶುಲ್ಕ ವಿಪರೀತ ದುಬಾರಿ. ಅದೇನೇ  ಇರಲಿ, ನಾನು ನನ್ನ ದೇಶಕ್ಕಿಂತ ಹೆಚ್ಚು ಇಲ್ಲಿಯೇ ಆರಾಮದಿಂದ ಇರಬಲ್ಲೆ ಎಂದು ನನಗೆ ಗೊತ್ತಾಗಿದೆ. ಬೆಂಬಲದ ಕೊರತೆ ಇದ್ದರೂ ನಾನು ನಿಭಾಯಿಸಿಕೊಳ್ಳಬಲ್ಲೆ. ಆದರೆ, ನನಗೊಂದು ಭಯ… ಮತ್ತೇನಾದರೂ ನಾನು ಭಾರತಕ್ಕೆ ಮರಳಬೇಕು ಎಂದಾದರೆ, ನಾನು ಮೂರನೇ ಬಾರಿಗೆ ಆಘಾತ ಎದುರಿಸಬೇಕಾಗುತ್ತದೆಯೋ ಏನೋ!

ಲೇಖಕಿ, ಭಾರತ ಮೂಲದ, ಹಾಂಗ್ ಕಾಂಗ್’ನಲ್ಲಿ ನೆಲೆಸಿರುವ ವೃತ್ತಿಪರ ಮಾಧ್ಯಮ ಬರಹಗಾರ್ತಿ. ಅವರ ಬ್ಲಾಗ್ :

ಈ ಕಥನವನ್ನು ‘ಬಿಯಾಂಡ್ ರಿಲೊಕೇಶನ್’ ಸರಣಿಯಿಂದ ಆಯ್ದುಕೊಳ್ಳಲಾಗಿದೆ. ವಾಸ್ತವ್ಯ ಬದಲಾವಣೆಯು ಹೇಗೆ ಭಾವನಾತ್ಮಕ ಹಾಗೂ ಮಾನಸಿಕ ಪರಿಣಾಮಗಳನ್ನು ಬೀರುತ್ತದೆ ಅನ್ನುವುದನ್ನು ಈ ಸರಣಿಯು ಹೇಳುತ್ತದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org