ಲೈಂಗಿಕ ದೌರ್ಜನ್ಯವೂ ಸೇರಿದಂತೆ ಎಲ್ಲಾ ಹಿಂಸೆಗಳೂ ಅಧಿಕಾರದಿಂದ ಪ್ರೇರಿತವಾಗಿರುತ್ತವೆ

ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ವ್ಯಕ್ತಿಯು ದಬ್ಬಾಳಿಕೆ ಮನಸ್ಥಿತಿಯನ್ನು ಹೊಂದಿರುತ್ತಾನೆ. ಇದು ಹಿಂಸೆ ಹಾಗೂ ದೌರ್ಜನ್ಯಗಳಿಗೆ ನಾಂದಿ ಹಾಡುತ್ತದೆ.

ಇತ್ತೀಚೆಗೆ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದ ವಿದ್ಯಾರ್ಥಿನಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ನಡೆಸಿದ ಅಭಿಯಾನವೊಂದು ಜಗತ್ತಿನ ಗಮನ ಸೆಳೆದಿತ್ತು. ಅದರಲ್ಲೂ ವಿಶೇಷವಾಗಿ ಶೈಕ್ಷಣಿಕ ವಲಯದಲ್ಲಿ ಭಾರೀ ಬಿರುಗಾಳಿಯನ್ನೇ ಎಬ್ಬಿಸಿತ್ತು. ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ, ಇಲ್ಲವೇ ಅನುಚಿತವಾಗಿ ವರ್ತಿಸಿದವರ ಹೆಸರನ್ನು ಬಹಿರಂಗಪಡಿಸಿ ಅವರನ್ನು ಮುಜುಗರಕ್ಕೀಡು ಮಾಡುವ ಅಭಿಯಾನವದು. ಇಲ್ಲಿ ಸಂತ್ರಸ್ತರ ಹೆಸರನ್ನು ಗೌಪ್ಯವಾಗಿಟ್ಟು, ದೌರ್ಜನ್ಯ ನಡೆಸಿದ ಪುರುಷರ ಹೆಸರನ್ನಷ್ಟೆ ಬಹಿರಂಗಪಡಿಸಲಾಗಿತ್ತು. ಈ ಅಭಿಯಾನದಿಂದಾಗಿ ನನ್ನ ಸಾಮಾಜಿಕ ವಲಯದ ಕೆಲವು ಪ್ರೊಫೆಸರ್’ಗಳು, ಲಾಯರ್’ಗಳು, ಉದ್ಯೋಗಿಗಳು, ಉದ್ಯಮಿಗಳು ಸೇರಿದಂತೆ ಬಹುತೇಕರು ಆತಂಕಪಟ್ಟು ಪ್ರಶ್ನಿಸತೊಡಗಿದರು. ತಮ್ಮ ಹೆಸರು ಬಹಿರಂಗವಾದರೆ ಸಮಾಜದಲ್ಲಿ ತಮ್ಮ ಘನತೆಗೆ ಕುಂದುಂಟಾಗುತ್ತದೆಯಲ್ಲವೇ ಎಂದು ಗಾಬರಿಗೊಂಡರು. ಹಾಗೂ ಇನ್ನು ಮುಂದೆ ಮಹಿಳಾ ಉದ್ಯೋಗಿಗಳ ಜೊತೆ, ವಿದ್ಯಾರ್ಥಿನಿಯರ ಜೊತೆ ಜಾಗರೂಕರಾಗಿ ನಡೆದುಕೊಳ್ಳಬೇಕು ಎಂದು ಗಂಭೀರವಾಗಿ ಚಿಂತಿಸತೊಡಗಿದರು.

ಬಹುತೇಕವಾಗಿ ನಾನು ದಿನಾಲೂ ಒಡನಾಡುವ ಈ ಪುರುಷ ಸ್ನೇಹಿತರ ಜಾಗರೂಕ ಮನಸ್ಥಿತಿ ನನ್ನನ್ನು ಅಚ್ಚರಿಗೊಳಿಸಿತು. ಈವರೆಗೆ ನಾನು ಅವರಲ್ಲಿ ಅಂಥದ್ದನ್ನು ನೋಡಿರಲಿಲ್ಲ. ಮಹಿಳೆಯರು ಯೌವನದಿಂದ ಹಿಡಿದು ಕೊನೆಗಾಲದವರೆಗೆ ಯಾವಾಗಲೂ ಜಾಗರೂಕರಾಗಿಯೇ ಇರಬೇಕಾಗುತ್ತದೆ. ನಡೆದಾಡುವಾಗ, ಶಾಲೆಗೆ ಹೋಗುವಾಗ, ಉಡುಗೆ ತೊಡುಗೆಯ ವಿಷಯದಲ್ಲಿ, ಹಾಗೂ ಪುರುಷರ ಜೊತೆ ವ್ಯವಹರಿಸುವಾಗ ಕಾಳಜಿ ವಹಿಸಬೇಕಾಗುತ್ತದೆ. ಆದರೆ ಇಂಥಾ ಕಾಳಜಿ, ಈ ಜಾಗರೂಕತೆ ನನ್ನ ಪುರುಷ ಗೆಳೆಯರಿಗೆ ತೀರ ಹೊಸತು; ಅದರಲ್ಲೂ ಹೆಣ್ಣು ಮಕ್ಕಳೊಡನೆ ಒಡನಾಡುವಾಗ ಅದನ್ನು ಮೈಗೂಡಿಸಿಕೊಳ್ಳುವ ಕಲ್ಪನೆಯೇ ಅವರಿಗೆ ಹೊಚ್ಚಹೊಸತು. ಮಹಿಳೆಯರಿಗಾದರೂ ಪುರುಷರೊಡನೆ ಒಡನಾಡುವಾಗ ಜಾಗರೂಕವಾಗಿರುವುದು ಪಾರಂಪರಿಕ ರೂಢಿ. ಆದರೆ ಪುರುಷರು ಮಹಿಳೆಯರ ಜೊತೆ ವ್ಯವಹರಿಸುವಾಗ ಅದನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಮಹಿಳೆಯರಿಗೆ ಅವರು ತಾರುಣ್ಯಕ್ಕೆ ಕಾಲಿಡುವಾಗಲೇ ಮನೆಯ ಹಿರಿಯರಿಂದ, ಶಿಕ್ಷಕರಿಂದ, ತಾಯ್ತಂದೆಯರಿಂದ ನಡವಳಿಕೆಯ ಪಾಠಗಳು ಶುರುವಾಗುತ್ತವೆ.

ಆದರೆ ಹುಡುಗರ ವಿಷಯದಲ್ಲಿ ಹಾಗಲ್ಲ. ಹೆಣ್ಣುಮಕ್ಕಳಿಗೆ ಬೋಧನೆ ಮಾಡುವ ಹಾಗೆ ಅವರಿಗೆ ಮಾಡುವ ರೂಢಿಯಿಲ್ಲ. ಆದ್ದರಿಂದ ಸಹಜವಾಗಿಯೇ ಅವರು ಆರಂಭದಿಂದಲೂ ಒಂದು ಬಗೆಯ ಅಧಿಕಾರ ಮನೋಭಾವವನ್ನು ಬೆಳೆಸಿಕೊಂಡು ಬರುತ್ತಾರೆ.

ಬಹುತೇಕವಾಗಿ ಅಧಿಕಾರ ಹೊಂದಿರುವವರು ಕ್ರೂರ ಸ್ವಭಾವವನ್ನು ಹೊಂದಿರುತ್ತಾರೆ ಅಥವಾ ಅಂಥ ಪ್ರವೃತ್ತಿ ಇರುವವರಿಗೇ ಅಧಿಕಾರ ದೊರೆಯುತ್ತದೆ. ಇಂಥವರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಇತರರ ಮೇಲೆ ಶೋಷಣೆ ನಡೆಸುತ್ತಾರೆ.

ಈ ವರ್ತನೆಯನ್ನು ಬದಲಿಸಿಕೊಳ್ಳಲು ಸಾಧ್ಯವಿದೆ.

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಲೈಂಗಿಕ ದೌರ್ಜನ್ಯ ಹಾಗೂ ಅನುಚಿತ ವರ್ತನೆಗಳ ಬಗ್ಗೆ ದೊಡ್ಡ ಚರ್ಚೆ ನಡೆಯಿತು. ಇದರಿಂದಾಗಿ ಈ ಕುರಿತ ಮಾತುಕತೆಯನ್ನು ಮತ್ತಷ್ಟು ಮುಕ್ತವಾಗಿ ಬೆಳೆಸುವುದು ಸಾಧ್ಯವಾಗಿದೆ. ಇದು ಸಮಾಜದ ವಿವಿಧ ಭಾಗಗಳ ಜನರು ಲೈಂಗಿಕ ದೌರ್ಜನ್ಯದ ಕುರಿತು ಭಿನ್ನ ಆಯಾಮಗಳಲ್ಲಿ ನೋಡಲು ಪ್ರೇರೇಪಣೆ ನೀಡಿದೆ. ಮನಶ್ಶಾಸ್ತ್ರಜ್ಞರು, ಮಾನಸಿಕ ಆರೋಗ್ಯ ತಜ್ಞರು, ಸಂತ್ರಸ್ತರ ಪರ ವಾದಿಸುವವರು, ಶೈಕ್ಷಣಿಕ ಕ್ಷೇತ್ರದ ವೃತ್ತಿಪರರು ಇಂಥ ದೌರ್ಜನ್ಯಗಳಿಗೆ ಕಾರಣವಾಗುವ ಅಂಶಗಳ ಬಗ್ಗೆ ಗಂಭೀರವಾಗಿ ಯೋಚಿಸುವಂತೆ ಮಾಡಿದೆ.

ಇಂಥ ದೌರ್ಜನ್ಯವನ್ನು ಎಸಗಲು ಪ್ರೇರೇಪಿಸುವ ಅಂಶಗಳು ಯಾವುವು? ದೌರ್ಜನ್ಯದ ಸ್ವರೂಪಗಳು ಹೇಗಿರುತ್ತವೆ? ಅವು ಮನಶ್ಶಾಸ್ತ್ರ ಅಧ್ಯಯನದ ವ್ಯಾಪ್ತಿಗೆ ಒಳಪಡುತ್ತವೆಯೇ?  ಬಹುತೇಕವಾಗಿ ಅಧಿಕಾರ ಉಳ್ಳವರು ಲೈಂಗಿಕ ದೌರ್ಜನ್ಯ ನಡೆಸುವಲ್ಲಿ ಹೆಚ್ಚು ಧೈರ್ಯ ತೋರುತ್ತಾರೆ.

ಅದು ಯಾವುದೇ ಸಂಬಂಧವಾಗಿರಬಹುದು; ಗಂಡ – ಹೆಂಡತಿ, ಗುರು – ಶಿಷ್ಯ/ಶಿಷ್ಯೆ, ವಯಸ್ಕ – ಬಾಲಕ/ಬಾಲಕಿ, ಈ ಎಲ್ಲ ಸಂಬಂಧಗಳಲ್ಲೂ ಅಧಿಕಾರವುಳ್ಳವರು ಇಲ್ಲದವರ ಮೇಲೆ ದೌರ್ಜನ್ಯ ತೋರುತ್ತಾರೆ ಇಲ್ಲವೇ ದೌರ್ಜನ್ಯದ ಬೆದರಿಕೆ ಒಡ್ಡುತ್ತಿರುತ್ತಾರೆ. ಅಧಿಕಾರದ ಇಂಥ ದುರುಪಯೋಗವೇ ಹಿಂಸೆಗೆ ಮೂಲ ಪ್ರೇರಣೆಯಾಗುತ್ತದೆ. ಆದ್ದರಿಂದ ಸಾಧ್ಯವಾದಷ್ಟೂ ಅಧಿಕಾರದ ದುರುಪಯೋಗವನ್ನು ತಡೆಯುವುದಕ್ಕೆ ಅಥವಾ ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಬೇಕಾಗುತ್ತದೆ.

ಕೌಟುಂಬಿಕ ದೌರ್ಜನ್ಯ, ಪೀಡನೆ, ಭಾವನಾತ್ಮಕ ದೌರ್ಜನ್ಯ, ಲೈಂಗಿಕ ದೌರ್ಜನ್ಯ, ವೃದ್ಧರ ಮೇಲೆ ಹಿಂಸೆ, ಹೆಣ್ಣುಮಕ್ಕಳ ಕಳ್ಳ ಸಾಗಾಣಿಕೆ, ಸಂತ್ರಸ್ತರನ್ನು ಕುಟುಂಬ ಹಾಗೂ ಸಮಾಜದಿಂದ ಪ್ರತ್ಯೇಕವಾಗಿ ಇರಿಸುವುದು, ತಮ್ಮ ಹಿಡಿತದಲ್ಲೇ ಇರುವಂತೆ ಸಂತ್ರಸ್ತರನ್ನು ರೂಪಿಸುವುದು – ಇವೆಲ್ಲವೂ ಈ ವ್ಯಾಪ್ತಿಯಲ್ಲಿ ಬರುತ್ತವೆ. ಜೊತೆಗೆ ಮಾದಕ ದ್ರವ್ಯ ಹಾಗೂ ವಸ್ತುಗಳು ಕೂಡ ಹಿಂಸೆಯನ್ನು ಪ್ರಚೋದಿಸುತ್ತವೆ.

ಬಹುತೇಕ ಅತ್ಯಾಚಾರಗಳಿಗೆ ಲೈಂಗಿಕತೆಗಿಂತಲೂ ಕ್ರೂರ ಪ್ರವೃತ್ತಿಯೇ ಮುಖ್ಯ ಕಾರಣವಾಗಿರುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ನೋಯಿಸಬೇಕು, ಯಾತನೆಗೆ ಗುರಿಪಡಿಸಬೇಕು, ದಬ್ಬಾಳಿಕೆ ಮಾಡಬೇಕು, ವಶಪಡಿಸಿಕೊಳ್ಳಬೇಕು  ಅಥವಾ ಅಸಹಾಯಕತೆಯ ಲಾಭ ಪಡೆಯಬೇಕು ಅನ್ನುವ ಉದ್ದೇಶದಿಂದ ಅತ್ಯಾಚಾರ ಮಾಡುವವರ ಸಂಖ್ಯೆ ಗಣನೀಯವಾಗಿದೆ.

ಆತಂಕಕಾರಿ ಅಂಶಗಳು

ಅಧಿಕಾರದ ದುರ್ಬಳಕೆಯಿಂದ ನಡೆಸುವ ಹಿಂಸೆಯು ಕೆಲವು ಆತಂಕಗಳನ್ನು ಹುಟ್ಟುಹಾಕುತ್ತವೆ. ಕೌಟುಂಬಿಕ ಹಾಗೂ ಸಾಮಾಜಿಕ ಲೈಂಗಿಕ ಅಸಮಾನತೆ ಹಾಗೂ ತಾರತಮ್ಯವನ್ನು ಇದು ಹುಟ್ಟುಹಾಕುತ್ತದೆ. ಗಂಡು ಹೆಣ್ಣಿನ ಸಾಮಾಜಿಕ ಜೀವನದಲ್ಲಿ ಅಸಮಾನತೆ, ಒಳಗೊಳ್ಳುವಿಕೆಯ ಪ್ರಮಾಣದಲ್ಲಿ ಬಹಳ ದೊಡ್ಡ ವ್ಯತ್ಯಾಸ, ಗಂಡು – ಹೆಣ್ಣಿನ ಗುರುತಿಸುವಿಕೆ ಮತ್ತು ಪ್ರತಿಕ್ರಿಯೆಯಲ್ಲಿ ಕಂಡುಬರುವ ವ್ಯತ್ಯಾಸಗಳು ಒಟ್ಟು ಸಮಾಜದ ಸಮತೋಲನವನ್ನು ತಪ್ಪಿಸುತ್ತವೆ.

ಬಾಲ್ಯದಲ್ಲಿ ಎದುರಿಸುವ ದೌರ್ಜನ್ಯವು ಮಗುವಿನ ಬೆಳವಣಿಗೆಯನ್ನೇ ಕಸಿದುಕೊಳ್ಳುವ ಅಪಾಯವಿರುತ್ತದೆ ಆದ್ದರಿಂದ ಕುಟುಂಬ ಅಥವಾ ಯಾವುದೇ ಅವಕಾಶದಲ್ಲಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಶೋಷಣೆ ನಡೆಸುವುದರ ವಿರುದ್ಧ ಜಾಗೃತಿ ಮೂಡಿಸುವುದು ಅತ್ಯವಶ್ಯಕ.

ಈ ನಿಟ್ಟಿನಲ್ಲಿ ನಾವು ಸಂತ್ರಸ್ತರ ಸಹಾಯಕ್ಕೆ ಧಾವಿಸುವಾಗ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ನಾವು ಸಾಂಪ್ರದಾಯಿಕವಾಗಿ ಯೋಚಿಸುವುದರಿಂದ ಹೊರಗೆ ಬರಬೇಕಾಗುತ್ತದೆ. ತರುಣರು, ಗಂಡಸರು, ಲಿಂಗಾಂತರಿಗಳು, ದ್ವಿಲಿಂಗಿಗಳು ಮೊದಲಾದವರ ಸಂದರ್ಭದಲ್ಲಿ ದೌರ್ಜನ್ಯ ಹಾಗೂ ಶೋಷಣೆಗೆ ಒಳಗಾಗುವ ರೀತಿಗಳು ಭಿನ್ನವಾಗಿರುತ್ತವೆ.

ಸಂಬಂಧಗಳ ಒಳಗೆ ನಡೆಯುವ ಅಧಿಕಾರ ಆಧಾರಿತ ದೌರ್ಜನ್ಯದಂತೆಯೇ ಸಂಬಂಧಗಳ ಹೊರಗೆ ಕೂಡ ನಡೆಯುತ್ತವೆ. ಅಪರಿಚಿತ ವ್ಯಕ್ತಿಗಳು ಅನಿರೀಕ್ಷಿತವಾಗಿ ಇದನ್ನು ಎಸಗುವ ಸಾಧ್ಯತೆಗಳಿರುತ್ತವೆ.

ಪರಿಣಾಮ

ಇಂತಹ ದೌರ್ಜನ್ಯಗಳಿಂದ ಸಂತ್ರಸ್ತರು ಭರವಸೆಯನ್ನೆ ಕಳೆದುಕೊಂಡು ಅಸಹಾಯಕ ಸ್ಥಿತಿಯನ್ನು ಅನುಭವಿಸುತ್ತಾರೆ. ಒತ್ತಡ ನಿರ್ವಹಣೆ ಸಾಧ್ಯವಾಗದೆ ಅಂತರ್ಮುಖಿಯಾಗುತ್ತಾರೆ. ಭಾವುಕ, ಮಾನಸಿಕ ಹಾಗೂ ದೈಹಿಕ ಯಾತನೆಗಳನ್ನು ಅನುಭವಿಸುತ್ತಾರೆ. ಅಭದ್ರತೆಯ ಆತಂಕಕ್ಕೆ ಒಳಗಾಗುತ್ತಾರೆ. ಇದರಿಂದ ಆತ್ಮವಿಶ್ವಾಸ ಕಳೆದುಕೊಂಡು, ಕಾರ್ಯಕ್ಷಮತೆಯನ್ನೂ, ಉತ್ಸಾಹವನ್ನೂ ಕಳೆದುಕೊಳ್ಳುತ್ತಾರೆ. ಇನ್ನು ಕೆಲವರಲ್ಲಿ ಇದು ತೀವ್ರತರ ಖಿನ್ನತೆ, ಉದ್ವೇಗಗಳನ್ನು ಉಂಟುಮಾಡುತ್ತದೆ.

ಆದ್ದರಿಂದ ಸಮಾಜದಲ್ಲಿ ನಡೆಯುವ ಯಾವುದೇ ಬಗೆಯ ಅಧಿಕಾರ ಆಧಾರಿತ ದೌರ್ಜನ್ಯವನ್ನು ಮುಕ್ತವಾಗಿ ಚರ್ಚಿಸುವ ಮೂಲಕ, ಖಂಡಿಸುವ ಹಾಗೂ ತಿದ್ದುವ ಮೂಲಕ ನಿಯಂತ್ರಣದಲ್ಲಿಡಬೇಕು. ಇದು ಸಾಧ್ಯವಾದರೆ ಮಾತ್ರ ಅದಕ್ಕೆ ಸಂಬಂಧಿಸಿದ ಸಮಾಜದ ಇತರ ಸಮಸ್ಯೆಗಳೂ ಪರಿಹಾರ ಕಾಣೂವವು.ಅಷ್ಟೇ ಅಲ್ಲ, ಅಧಿಕಾರಸ್ಥರ ದರ್ಪಕ್ಕೆ ಬಲಿಯಾಗುವವರ ಸಂಖ್ಯೆಯೂ ಕಡಿಮೆಯಾಗುವುದು.

ದಿವ್ಯಾ ಕಣ್ಣನ್, ಅಮೆರಿಕದ ನ್ಯಾಶ್’ವಿಲ್ಲೆಯ ವಾನ್ಡರ್’ಬಿಲ್ಟ್ ಯುನಿವರ್ಸಿಟಿಯಿಂದ ಇತ್ತೀಚೆಗೆ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಪಿಎಚ್ಡಿ ಪಡೆದಿರುವ ಇವರು, ಹಲವು ವರ್ಷಗಳ ಕಾಲ ಹಿಂಸೆಗೆ ತುತ್ತಾಗಿ ಪಾರಾದ ಯುವಜನರ ಮಾನಸಿಕತೆ ಕುರಿತು ಅಧ್ಯಯನ ನಡೆಸಿ, ಆ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org