ನೆಲೆ ಬದಲಾಯಿಸುವ ಕಷ್ಟಸುಖ: ಪೋಷಕರಿಂದ ದೂರವಿದ್ದು, ಕಾಲೇಜ್ ಹಾಸ್ಟೆಲ್’ನ ವಾಸ ನನಗೆ ಸುಲಭವಾಗಿರಲಿಲ್ಲ

ಶಿಕ್ಷಣಕ್ಕಾಗಿ ಬೆಂಗಳೂರಿಗೆ ವಲಸೆ ಬಂದ ಯುವಕನೊಬ್ಬ ಹಾಸ್ಟೆಲ್’ನಲ್ಲಿ ತಾನು ಅನುಭವಿಸಿದ ಒಂಟಿತನ ಮತ್ತು ಸಂಕಷ್ಟಗಳ ಬಗ್ಗೆ ಮಾತನಾಡಿದ್ದಾರೆ.

ನಾನು ಹುಟ್ಟಿದ್ದು, ಬೆಳೆದಿದ್ದು ಎಲ್ಲಾ ಮುಂಬಯಿಯಲ್ಲೇ. ನನಗೆ 23 ವರ್ಷ ತುಂಬುವ ವೇಳೆಗೆ ಬೆಂಗಳೂರಿನ ಪ್ರತಿಷ್ಠಿತ ಕಾಲೇಜ್ ಒಂದರಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯಲು ದಾಖಲಾದೆ. ಕಾಲೇಜ್ಗೆ ಪ್ರವೇಶ ದೊರೆತ ಕೂಡಲೇ ನಾನು ಮಾಡಿದ ಮೊದಲ ಕೆಲಸ ಸಮೀಪದಲ್ಲೇ ಪಿಜಿಗಾಗಿ ಹುಡುಕಾಡಿದ್ದು. ಅಲ್ಲಿ ಸಾಕಷ್ಟು ಪಿಜಿಗಳು ಇದ್ದವಾದರೂ ಅತ್ಯಂತ ಚಿಕ್ಕ ಕೋಣೆಗಳಿಂದ ಕೂಡಿದ್ದವು. ಮತ್ತೆ ಕೆಲವು ಪಿಜಿಗಳಲ್ಲಿ ವಿಪರೀತ ಸಂದಣಿ ಇತ್ತು. ಉಸಿರುಗಟ್ಟಿಸುವಂಥ ಕೋಣೆಯಲ್ಲಿ ವಾಸ ಮಾಡಲು ನನಗೆ ಸಾಧ್ಯವಿರಲಿಲ್ಲ. ಅದೃಷ್ಟವಶಾತ್ ನನಗೆ ಕಾಲೇಜ್’ನಲ್ಲೇ ಹಾಸ್ಟೆಲ್ ಕೋಣೆ ದೊರಕಿತು. ನಾನು ಖುಷಿಯಿಂದ ಹಾಸ್ಟೆಲ್’ ಸೇರಿಕೊಂಡೆ.

ನಾನು ಸದಾ ಕಾಲವೂ ಕುಟುಂಬದೊಡನೆಯೇ ಇರುತ್ತಿದ್ದವನು. ಬೆಂಗಳೂರಿಗೆ ಬರುವ ಮೊದಲು ಮನೆಯವರನ್ನು ಬಿಟ್ಟು ಹೊರಗೆ ಹೋಗಿದ್ದೇ ಇಲ್ಲ. ಹೀಗಾಗಿ ಹಾಸ್ಟೆಲ್’ನಲ್ಲಿ ಇರತೊಡಗಿದೆ. ಮೊದಲ ವಾರದಲ್ಲೇ ನಾನು ಮನೆಯವರನ್ನು ವಿಪರೀತ ಮಿಸ್ ಮಾಡಿಕೊಳ್ಳತೊಡಗಿದೆ. ಸದಾ ಅವರ ನೆನವರಿಕೆಯಲ್ಲೇ ಹೋಮ್ ಸಿಕ್ ಆಗಿಹೋದೆ. ಕಾಯಿಲೆ ಬಿದ್ದೆ; ಹೊಟ್ಟೆ ಕೆಟ್ಟು ಒಂದು ವಾರದವರೆಗೆ ಅನಾರೋಗ್ಯ ಪೀಡಿತನಾದೆ.

ಹಾಸ್ಟೆಲ್’ಗೆ ಹೊಂದಿಕೊಳ್ಳುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ನನಗೆ ಸರಿ ಹೊಂದಬಲ್ಲ ಗೆಳೆಯರು ಬೇಕೆಂದು ತೀವ್ರವಾಗಿ ಅನ್ನಿಸುತ್ತಿತ್ತು. ಮೊದಲೇ ಒಂಟಿಯಾಗಿದ್ದ ನಾನು ಹೊಸ ಗೆಳೆಯರನ್ನು ಮಾಡಿಕೊಳ್ಳಲು ಹೆಣಗಾಡಿದೆ. ನನ್ನ ಹಾಸ್ಟೆಲ್ ಮೇಟ್’ಗಳು ತಮ್ಮ ಊರು, ಭಾಷೆಗಳಿಗೆ ಅನುಗುಣವಾಗಿ  ತಮ್ಮದೇ ಗುಂಪುಗಳನ್ನು ಸೃಷ್ಟಿಸಿಕೊಂಡಿದ್ದರು. ಉತ್ತರ ಭಾರತದವರದ್ದೇ ಒಂದು ಗುಂಪು ಇತ್ತು. ದಕ್ಷಿಣ ರಾಜ್ಯಗಳವರದ್ದೂ ಒಂದು ಗುಂಪು ಇತ್ತು. ಆದರೆ ಮುಂಬಯಿಯವನಾದ ನಾನು ಎಲ್ಲಿಗೆ ಸೇರಿಕೊಳ್ಳಲಿ ಎಂದು ಗೊಂದಲವಾಯಿತು.

ಇದು ಕೇವಲ ಸಂಸ್ಕೃತಿಯ ವಿಷಯವಾಗಿರಲಿಲ್ಲ. ಹೋಮೋಫೋಬಿಯಾ ಇರುವ ಜನರ ನಡುವೆ ನಾನಿದ್ದೇನೆ ಅನ್ನುವ  ಅರಿವೂ ನನಗಿತ್ತು. ಅವರು ಮಾತನಾಡುವಾಗ ನಾನದನ್ನು ಗ್ರಹಿಸಿದ್ದೆ. ಆದರೆ ನಾನೊಬ್ಬ ‘ಗೇ’ ಎಂದು ಅವರ ಬಳಿ ಹೇಳಿಕೊಳ್ಳುವ ಸಾಹಸ ನಾನು ಮಾಡಲಿಲ್ಲ. ಅವರು ನನ್ನನ್ನು ಹೇಗೆ ಸ್ವೀಕರಿಸುವರು ಅನ್ನುವುದನ್ನು ನಾನು ಊಹಿಸಬಲ್ಲವನಾಗಿದ್ದೆ. ನಾನು ಹೇಳಿಕೊಂಡಿದ್ದರೆ ಬಹುಶಃ ಅವರು ಒಂದೇ ಕೋಣೆಯಲ್ಲಿ ನನ್ನ ಜೊತೆ ವಾಸಿಸಲು, ಒಂದೇ ವಾಶ್ ರೂಂ ಹಂಚಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಆದ್ದರಿಂದ ನಾನು ನನ್ನ ಸೆಕ್ಷುಯಾಲಿಟಿಯ ಬಗ್ಗೆ ಮೌನ ವಹಿಸಿದೆ. ಹೀಗಿರುವುದು ನನಗೆ ಹೊಸತೂ ವಿಚಿತ್ರವೂ ಆಗಿತ್ತು. ಮನೆಯಲ್ಲಿದ್ದಾಗ ನಾನಿದನ್ನು ಮಾಡಬೇಕಾಗಿರಲಿಲ್ಲ.

ಈ ಎಲ್ಲ ಸಮಸ್ಯೆಗಳಲ್ಲದೇ ಕುಟುಂಬದ ಸಂಪರ್ಕ ಇಟ್ಟುಕೊಳ್ಳುವುದೂ ನನಗೆ ಕಷ್ಟವಾಗಿತ್ತು. ನಮ್ಮ ಹಾಸ್ಟೆಲ್’ನಲ್ಲಿ ಮೊಬೈಲ್ ನೆಟ್ವರ್ಕ್ ಸರಿಯಾಗಿ ಸಿಗುತ್ತಿರಲಿಲ್ಲ. ಆದ್ದರಿಂದ ಹಾಸ್ಟೆಲ್’ನ ಹೊರಗೆ ಹೋಗಿ ಕರೆ ಮಾಡಬೇಕಾಗುತ್ತಿತ್ತು. ಹಾಗೆ ಹೋಗುವಾಗೆಲ್ಲ ಕಾಲೇಜ್’ನಲ್ಲಿ ಸೂಚಿಸಲಾದ ಫಾರ್ಮಲ್ ಬಟ್ಟೆಗಳನ್ನೇ ತೊಟ್ಟುಕೊಂಡು ಹೋಗಬೇಕಾಗುತ್ತಿತ್ತು. ಕಾಲೇಜ್ ಮುಗಿದ ನಂತರವೂ ನಾವು ಅದನ್ನು ಪಾಲಿಸಬೇಕಿತ್ತು. ಕ್ರಮೇಣ ನಾನು ಮನೆಗೆ ಕರೆ ಮಾಡುವುದನ್ನೇ ನಿಲ್ಲಿಸಿಬಿಟ್ಟೆ.  

ಇಷ್ಟೆಲ್ಲದರ ನಡುವೆ ನನಗೆ ಕಾಲೇಜಿಗೆ ಹೋಗುವುದೆಂದರೆ ಖುಷಿಯಾಗುತ್ತಿತ್ತು. ಅಲ್ಲಿ ನನಗೆ ಬುದ್ಧಿವಂತ ಗೆಳೆಯರು ಸಿಗುತ್ತಿದ್ದರು. ಅವರ ಜೊತೆ ಮಾತನಾಡುವುದು ನನಗೆ ಖುಷಿ ಕೊಡುತ್ತಿತ್ತು. ಆದರೆ ವಾರಾಂತ್ಯ ಬಂತೆಂದರೆ ನಾನು ಜಿಗುಪ್ಸೆಗೊಳ್ಳುತ್ತಿದ್ದೆ. ನನ್ನ ಗೆಳೆಯರನ್ನು ಮಿಸ್ ಮಾಡಿಕೊಳ್ಳುತ್ತಾ ಒಂಟಿತನ ಅನುಭವಿಸುತ್ತಿದ್ದೆ.

ಹಾಸ್ಟೆಲ್’ನಲ್ಲಿದ್ದ ಬಹುತೇಕರು ವಾರಾಂತ್ಯ ಬಂದೊಡನೆ ತಮ್ಮ ಮನೆಗಳಿಗೆ ಹೊರಟುಬಿಡುತ್ತಿದ್ದರು. ಹೀಗಾಗಿ ಹಾಸ್ಟೆಲ್ ಹೆಚ್ಚೂ ಕಡಿಮೆ ಖಾಲಿಯಾಗಿರುತ್ತಿತ್ತು. ಮುಂಬಯಿಗೆ ಪ್ರಯಾಣಿಸುವುದೆಂದರೆ ಅದೊಂದು ದೀರ್ಘಾವಧಿ ಪ್ರಯಾಣ. ವಿಮಾನಯಾನ ಮಾಡುವುದು ದುಬಾರಿಯೇ ಸರಿ. ಹೀಗಾಗಿ ನಾನು ಹಾಸ್ಟೆಲ್’ನಲ್ಲಿಯೇ ಉಳಿಯಬೇಕಾಗುತ್ತಿತ್ತು. ಸಮೀಪದ ದೇವಸ್ಥಾನದ ಕಟ್ಟೆಯ ಮೇಲೆ ಕುಳಿತು, ಇಲ್ಲವೇ ಧ್ಯಾನ ಮಾಡುತ್ತಾ ನನ್ನ ದಿನವನ್ನು ಕಳೆಯಲು ಯತ್ನಿಸುತ್ತಿದ್ದೆ. ಆದರೆ ದೇವಸ್ಥಾನದಲ್ಲಿ ಎಷ್ಟು ಹೊತ್ತು ಕೂರಲಾಗುತ್ತಿತ್ತು? ಹಾಸ್ಟೆಲ್’ಗೆ ಮರಳಿದರೆ ಮತ್ತದೇ ಖಾಲಿ ಕೋಣೆಗಳು, ಒಂಟಿತನ. ನಾನು ಕಾರಿಡಾರಿನ ದೀಪಗಳನ್ನೆಲ್ಲ ಹಾಕಿಕೊಂಡು ಮಲಗುತ್ತಿದ್ದೆ. ಕತ್ತಲಲ್ಲಿ ಒಬ್ಬನೇ ಮಲಗಲು ನನಗೆ ಭಯವಾಗುತ್ತಿತ್ತು.

ಆಹಾರಕ್ಕೆ ಹೊಂದಿಕೊಳ್ಳುವುದು ನನಗೆ ಬಹಳ ದೊಡ್ಡ ಸವಾಲಾಗಿತ್ತು. ಮುಂಬಯಿಯಲ್ಲಿರುವಾಗ ನಾನು ಹೊರಗೆ ತಿನ್ನುತ್ತಿದ್ದುದು ಬಹಳ ಅಪರೂಪ. ಆದರೆ ಇಲ್ಲಿ ನನ್ನ ಬೆಳಗು ಶುರುವಾಗುತ್ತಿದ್ದುದೇ ಹೊರಗೆ ತಿನ್ನುವ ಮೂಲಕ. ಕ್ಯಾಂಟೀನ್ ಚೆನ್ನಾಗಿತ್ತಾದರೂ ಹಾಸ್ಟೆಲ್’ನಿಂದ 15 ನಿಮಿಷ ನಡೆದು ಹೋಗಬೇಕಿತ್ತು. ಸ್ವಲ್ಪ ದಿನಗಳ ನಂತರ ನಡೆಯುವುದು ತ್ರಾಸದಾಯಕವೆನ್ನಿಸಿ ಬಹುತೇಕವಾಗಿ ಊಟ – ತಿಂಡಿಗಳನ್ನು ಸ್ಕಿಪ್ ಮಾಡತೊಡಗಿದೆ. ಇಡೀ ದಿನ ಹಾಸಿಗೆಯ ಮೇಲೇ ಬಿದ್ದುಕೊಂಡಿರುತ್ತಿದ್ದೆ. ಹಾಸ್ಟೆಲ್ ಕ್ಯಾಂಪಸ್’ನಲ್ಲಿ ಇಂಟರ್ನೆಟ್ ಸೌಲಭ್ಯ ಇತ್ತಾದರೂ ಸೋಶಿಯಲ್ ಮೀಡಿಯಾ ಲಭ್ಯತೆ ಇರಲಿಲ್ಲ. ವಾರಾಂತ್ಯದಲ್ಲಿ ಕೂಡಾ ರಾತ್ರಿ 8 ಗಂಟೆಯ ಒಳಗೆ ಹಾಸ್ಟೆಲ್’ಗೆ ಹಿಂದಿರುಗಬೇಕು ಎನ್ನುವ ನಿಯಮವಿತ್ತು. ಉಡುಗೆ ತೊಡುಗೆಗಳ ಬಗ್ಗೆಯೂ ವಿಪರೀತ ಕಟ್ಟುನಿಟ್ಟಿನ ವಾತಾವರಣ. ಒಮ್ಮೆ ನಾನು ರೌಂಡ್ ನೆಕ್ ಟಿಷರ್ಟ್ ತೊಟ್ಟಿದ್ದೆನೆಂದು ವಾರ್ಡನ್ ನನ್ನ ಮೇಲೆ ಹರಿಹಾಯ್ದಿದ್ದರು. ಇವೆಲ್ಲವೂ ಸಹಜ ಸಂಗತಿಗಳು ಅನ್ನಿಸಿದರೂ ಪ್ರತಿದಿನ ಇವನ್ನು ಎದುರುಗೊಳ್ಳುವುದು ನನಗೆ ಸಹಿಸಲು ಕಷ್ಟವೆಂದು ತೋರತೊಡಗಿತು. ನಾನು ಜಗತ್ತಿನಿಂದಲೇ ದೂರವಾಗುತ್ತಿದ್ದೇನೆ ಎಂದು ಅನಿಸತೊಡಗಿತು.

ಈ ಎಲ್ಲದರ ಜೊತೆಗೆ ಕಾಲೇಜ್’ನ ಒತ್ತಡವೂ ಹೆಚ್ಚಾಯಿತು. ನಮಗೆ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ತರಗತಿಗಳು ಇರುತ್ತಿದ್ದವು. ಓದಿನ ಹೊರತಾಗಿ ಬೇರೆ ಸಂಗತಿಗಳ ಕಡೆ ಗಮನ ಹರಿಸಲು ಸಮಯವೇ ಸಿಗುತ್ತಿರಲಿಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ, ಕಾಲೇಜ್ ತೊರೆದು ಮನೆಗೆ ಮರಳಬೇಕು ಎಂಬ ಹಂಬಲ ತೀವ್ರವಾಗತೊಡಗಿತು.

ನೆಲೆ ಬದಲಾವಣೆ ಹಾಗೂ ನನ್ನ ಮಾನಸಿಕ ಕಾಯಿಲೆಯೊಡನೆ ಹೆಣಗಿದ ಸಂದರ್ಭ

ನಾನು ಮುಂಬಯಿಯಲ್ಲಿ ಇರುವಾಗ ಖಿನ್ನತೆ ಹಾಗೂ ಉದ್ವೇಗದ ಲಕ್ಷಣಗಳನ್ನು ಹೊಂದಿದ್ದೇನೆ ಎಂದು ವೈದ್ಯರು ಗುರುತಿಸಿದ್ದರು. ಹಾಗೂ ಅದಕ್ಕಾಗಿ ನನಗೆ ಚಿಕಿತ್ಸೆಯನ್ನು ನೀಡುತ್ತಿದ್ದರು. ನಿಯಮಿತವಾಗಿ ತೆಗೆದುಕೊಳ್ಳಲು ಔಷಧವನ್ನೂ ನೀಡಿದ್ದರು. ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಹೋಗುವುದು ನಿಶ್ಚಯವಾದಾಗ ನಾನು ತುಂಬಾ ಖುಷಿಯಾಗಿದ್ದೆ. ಹೊಸ ಜಾಗ, ಹೊಸ ಜನಗಳನ್ನು ನೋಡುವ ಅವಕಾಶ ಸಿಗುತ್ತದೆ ಅನ್ನುವ ಸಂಭ್ರಮದಲ್ಲಿ ಔಷಧವನ್ನು ಹಾಗೆಯೇ ಬಿಟ್ಟುಬಿಟ್ಟೆ.

ಈಗ ಗೊತ್ತಾಗುತ್ತಿದೆ, ಹಾಗೆ ಮಾಡಿದ್ದು ಬಹಳ ದೊಡ್ಡ ತಪ್ಪಾಗಿತ್ತು ಎಂದು... ಹೊಸ ನಗರ, ಆಹಾರ, ವಾತಾವರಣಗಳಿಗೆ ಹೊಂದಾಣಿಕೆಯಾಗದೆ ಒದ್ದಾಡುತ್ತಿರುವ ಜೊತೆಗೇ ಔಷಧಗಳನ್ನೂ ನಿಲ್ಲಿಸಿದ್ದು ನನ್ನ ಮನೋಸ್ವಾಸ್ಥ್ಯದ ಮೇಲೆ ಪರಿಣಾಮ ಬೀರತೊಡಗಿತ್ತು. ಬಹಳ ಸಲ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯನ್ನೂ ಮಾಡಿದ್ದೆ.

ಈಗ ಅನ್ನಿಸುತ್ತದೆ, ಹಾಸ್ಟೆಲ್’ನಲ್ಲಿ ನನಗೆ ಇತರ ವಿದ್ಯಾರ್ಥಿಗಳ ಜೊತೆ ಹೊಂದಿಕೊಳ್ಳಲು ಸಾಧ್ಯವಾಗದೆ ಹೋದುದಕ್ಕೆ ನನ್ನ ಉದ್ವಿಗ್ನ ಮನಸ್ಥಿತಿ ಹಾಗೂ ಒತ್ತಡವೇ ಕಾರಣ. ಚಿಕ್ಕವನಿರುವಾಗಿಂದಲೂ ನಾನು ಹುಡುಗಿಯರೊಡನೆ ಹೆಚ್ಚು ಅರಾಮದಿಂದ ಇದ್ದು ರೂಢಿಯಾಗಿತ್ತು. ಆದರೆ ಇಲ್ಲಿ ಸ್ಮೋಕ್ ಮಾಡುವ, ಕುಡಿಯುವ, ಮಸ್ತಿ ಮಾಡುವ ಹುಡುಗರ ನಡುವೆ ನನಗೆ ನಾನು ಒಬ್ಬಂಟಿ ಅನ್ನಿಸತೊಡಗಿತ್ತು.

ಕಾಲೇಜಿಗೆ ಸೇರಿ ನಾಲ್ಕು ತಿಂಗಳಾಗುತ್ತ ಬಂತು. ನನಗೆ ಅಲ್ಲಿ ಸ್ವಲ್ಪವೂ ಹೊಂದಿಕೊಳ್ಳಲಾಗಲಿಲ್ಲ. ವರ್ಗಾವಣೆಗಾಗಿ ಅರ್ಜಿ ಹಾಕಿದೆ. ಆಡಳಿತ ಮಂಡಳಿ ಅರ್ಧಕ್ಕೇ ಕೋರ್ಸ್ ತೊರೆದು ಹೋಗುತ್ತಿರುವುದರ ಕಾರಣವನ್ನು ವಿಚಾರಿಸಲೂ ಇಲ್ಲ. ಇದು ಕೊಂಚ ನಿರಾಸೆ ಉಂಟು ಮಾಡಿತು. ಯೂನಿವರ್ಸಿಟಿಗಳು ಮಾನಸಿಕವಾಗಿ ಸೂಕ್ಷ್ಮವಾಗಿರುವ ವಿದ್ಯಾರ್ಥಿಗಳ ವಿಷಯದಲ್ಲಿ ಸ್ವಲ್ಪವಾದರೂ ಕಾಳಜಿ ವಹಿಸಬೇಕೆಂದು ನಾನು ಆಶಿಸುತ್ತೇನೆ. ಬೇರೆಡೆಯಿಂದ ಬಂದು ಹೊಸ ವಾತಾವರಣಕ್ಕೆ ಒಗ್ಗಿಕೊಳ್ಳಲು ಅವರಿಗೆ ಪೂರಕ ವಾತಾವರಣ ಸೃಷ್ಟಿಸಬೇಕಾಗುತ್ತದೆ. ಹೊಂದಿಕೊಳ್ಳಲಾಗದೆ ಒದ್ದಾಡುವ ವಿದ್ಯಾರ್ಥಿಗಳ ಸಹಾಯಕ್ಕಾಗಿ ಯೂನಿವರ್ಸಿಟಿಗಳಲ್ಲಿ ಸೈಕಾಲಜಿಸ್ಟ್’ಗಳನ್ನು ನೇಮಿಸಿದರೆ ಒಳ್ಳೆಯದು. ಇದರಿಂದ ನನ್ನಂಥ ಅದೆಷ್ಟೋ ವಿದ್ಯಾರ್ಥಿಗಳು ಯಾತನೆ ಪಡುವುದು ತಪ್ಪುತ್ತದೆ.

ವೈಟ್ ಸ್ವಾನ್ ಫೌಂಡೇಷನ್ ಜೊತೆ ಹೇಳಿಕೊಂಡ ಅನುಭವ. ಕೋರಿಕೆಯ ಮೇರೆಗೆ ಹೆಸರನ್ನು ಗೌಪ್ಯವಾಗಿಡಲಾಗಿದೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org