ಮಾನಸಿಕ ಆರೋಗ್ಯದಲ್ಲಿನ ಅಂತರವನ್ನು ಕಡಿಮೆ ಮಾಡುವುದು ಹೇಗೆ?

ಮಾನಸಿಕ ಆರೋಗ್ಯದಲ್ಲಿನ ಅಂತರವನ್ನು ಕಡಿಮೆ ಮಾಡುವುದು ಹೇಗೆ?

ಪ್ರಖ್ಯಾತ ಒಡಿಯಾ ಲೇಖಕಿ ಸುಷ್ಮಿತಾ ಬಾಗ್ಚಿಯವರ ಪ್ರಪ್ರಥಮ ಆಂಗ್ಲ ಕಾದಂಬರಿ, ಬಿನೀತ್ ಎ ರಫರ್ ಸೀ ಮಾನಸಿಕ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕೃತಿಗಳ ಶ್ರೇಣಿಯಲ್ಲಿ ಮತ್ತೊಂದು ಮಹತ್ವದ ಸೇರ್ಪಡೆಯಾಗಿದೆ. ನಮ್ಮ ಸಮಾಜದಲ್ಲಿ ಮಾನಸಿಕ ಆರೋಗ್ಯ ಕ್ಷೇತ್ರದ ಕೇಂದ್ರದಲ್ಲೇ ದೊಡ್ಡ ಕಂದರ ಇದೆ. ಇದು ಕಳಂಕದ ಭೀತಿಯಿಂದ ಸೃಷ್ಟಿಯಾಗಿರುವ ಅಜ್ಞಾನದ ಅಂತರವಾಗಿದೆ. ಮಾನಸಿಕ ಕಾಳಜಿಯ ಅವಶ್ಯಕತೆ ಇರುವವರಿಗೂ ವೃತ್ತಿಪರರು ಕಾರ್ಯ ನಿರ್ವಹಿಸುವ ಕ್ಷೇತ್ರಕ್ಕೂ ನಡುವೆ ಇರುವ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಉತ್ತಮ ಸಂವಹನ ಮತ್ತು ಜ್ಞಾನದ ಹರಡುವಿಕೆ ಅತ್ಯವಶ್ಯವಾಗಿದೆ. ಕಳೆದ ಒಂದು ದಶಕದಲ್ಲಿ ಮಾನಸಿಕ ರೋಗದಿಂದ ಬಳಲುವ ಮತ್ತು ಅವರ ಬಗ್ಗೆ ಕಾಳಜಿ ವಹಿಸುವವರ ಸಂಘರ್ಷವನ್ನು ಬಿಂಬಿಸುವ ಅನೇಕ ಪುಸ್ತಕಗಳು, ಸಾಕ್ಷ್ಯಾಧಾರಗಳು ಮತ್ತು ಘಟನೆಗಳನ್ನು ಪ್ರಕಟಿಸಲಾಗಿದೆ. ಆದರೂ ಮಾನಸಿಕ ಆರೋಗ್ಯದ ಕಾಳಜಿ ವಹಿಸುವ ವೃತ್ತಿಪರರು ಈ ವ್ಯಾಪ್ತಿಯಿಂದ ಹೊರಗೇ ಇದ್ದಾರೆ. ಸಾರ್ವಜನಿಕರಿಂದ ತೀವ್ರ ಟೀಕೆ ನಿಂದನೆಗೊಳಗಾಗುವ ಮಾನಸಿಕ ತಜ್ಞರು ಮತ್ತು ಇತರ ವೃತ್ತಿಪರರು ಇವರ ಕಥೆಗಳನ್ನು ಎಲ್ಲಿಯೂ ಹೇಳುವುದಿಲ್ಲ.

ಬಿನೀತ್ ಎ ರಫರ್ ಸೀ ( ಒರಟು ಕಡಲ ಅಡಿಯಲ್ಲಿ) ಕೃತಿ ಆದಿತ್ಯ ಎಂಬ ಹೆಸರಿನ ಮಾನಸಿಕ ತಜ್ಞರ ಕಥೆ. ಕಥಾನಾಯಕ ಆದಿತ್ಯನ ಅನೇಕ ವೈದ್ಯಕೀಯ ಪ್ರಸಂಗಗಳನ್ನು ವಿವರಿಸುವ ಮೂಲಕ ಕಾದಂಬರಿ ಮುಂದುವರೆಯುತ್ತದೆ. ಇದು ಮನಸ್ಸಿಗೆ ಸಂಬಂಧಿಸಿರುವ ಕಥೆಯಾಗಿರುವುದರಿಂದ ಕಥೆಯಲ್ಲಿ ಪ್ರತಿಯೊಂದು ಪ್ರಸಂಗದಲ್ಲೂ ಕೆಲವು ತಿರುವುಗಳು ಸಂಭವಿಸುತ್ತವೆ. ಹಾಗಾಗಿ ಇಲ್ಲಿ ಕಥೆಯ ಪೂರ್ಣ ವಿವರ ನೀಡುವುದು ವ್ಯರ್ಥ. ಮೂಲತಃ ಕಥೆ ಹೀಗೆ ಸಾಗುತ್ತದೆ : ಆದಿತ್ಯ ಒಬ್ಬ ಯಶಸ್ವಿ ವೈದ್ಯನಾಗಿದ್ದು ಬೆಂಗಳೂರಿನಲ್ಲಿ ಖಾಸಗಿ ಕ್ಲಿನಿಕ್ ಹೊಂದಿರುತ್ತಾನೆ. ಅವನು ವೈದ್ಯಕೀಯ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ದೀಪಾ ಎನ್ನುವ ಹುಡುಗಿಯ ಬಗ್ಗೆ ಒಲವು ತೋರುತ್ತಾನೆ. ಆದರೆ ದೀಪಾ ನರೇನ್ ಎಂಬುವನನ್ನು ಮದುವೆಯಾಗಿ ಲಂಡನ್‍ಗೆ ಹೊರಟುಹೋಗುತ್ತಾಳೆ. ಹಠಾತ್ತನೆ ನರೇನ್ ಸತ್ತುಹೋಗುತ್ತಾನೆ. ಅವರ ಕಿರಿಯ ಮಗ ರಾಜ್‍ಗೆ ಇದರಿಂದ ಆಘಾತವಾಗುತ್ತದೆ. ದೀಪಾ ಮತ್ತು ರಾಜ್ ಬೆಂಗಳೂರಿಗೆ ಹಿಂದಿರುಗುತ್ತಾರೆ. ಆದಿತ್ಯ ರಾಜ್‍ಗೆ ಚಿಕಿತ್ಸೆ ನೀಡುತ್ತಾನೆ. ರಾಜ್ ಚೇತರಿಸಿಕೊಳ್ಳುತ್ತಾನೆ. ದೀಪಾ ಮತ್ತೆ ಲಂಡನ್ನಿಗೆ ಹಿಂದಿರುಗುತ್ತಾಳೆ. ಇವೆಲ್ಲಾ ನಡೆದ ಕೆಲ ಸಮಯದ ನಂತರ ಆದಿತ್ಯನಿಗೆ ಏನೋ ಕಳೆದುಕೊಂಡಂತೆ ಭಾಸವಾಗುತ್ತದೆ. ತನ್ನೊಳಗೆ ಏನೋ ಕೊರತೆ ಇದೆ ಎಂದು ಭಾವಿಸತೊಡಗುತ್ತಾನೆ. ಆದಿತ್ಯ ಏನು ಮಾಡುತ್ತಾನೆ ? ಆದಿತ್ಯ ಚೇತರಿಸಿಕೊಳ್ಳುತ್ತಾನೆಯೇ ?

ಈ ಕಾದಂಬರಿಯ ಸತ್ವ ಇರುವುದು ಕಥೆಯ ಸರಳತೆಯಲ್ಲಿ ಮತ್ತು ಪಾರದರ್ಶಕತೆಯಲ್ಲಿ. ಈ ರೀತಿ ಸರಳವಾದ ಭಾಷೆಯನ್ನು ಬಳಸಿರುವ ಲೇಖಕರಿಗೆ, ಬಹುಶಃ ಕಾದಂಬರಿಯಲ್ಲಿ ಬರುವ ಪ್ರತಿಯೊಂದು ಮಾನಸಿಕ ಸಮಸ್ಯೆಯ ಚಿಕಿತ್ಸೆ, ಲಕ್ಷಣ ಮತ್ತು ಸಾಮಾಜಿಕ ವಿಚಾರಗಳ ಬಗ್ಗೆ ನಡೆಸಿರುವ ಅಳವಾದ ಅಧ್ಯಯನ ಮತ್ತು ಸಂಶೋಧನೆ ನೆರವಾಗಿರಬಹುದು. ಈ ಪ್ರಸಂಗಗಳು ಸಂಕೀರ್ಣವಾಗಿದ್ದು ಪಾತ್ರಧಾರಿಯ ಜಗತ್ತಿನ ಮೇಲೆ ಪ್ರಭಾವ ಬೀರುವುದಾದರೂ ಇದು ಓದುಗರನ್ನು ಸಂಪೂರ್ಣವಾಗಿ ಆವರಿಸುವುದಿಲ್ಲ. ಇಲ್ಲಿ ಕಾದಂಬರಿಕಾರರ ಉದ್ದೇಶ, ಓದುಗರಲ್ಲಿಯೇ ಕಥೆಯ ಪಾತ್ರಧಾರಿಗಳಿಗೆ ಏನಾಗುತ್ತದೆ ಮತ್ತು ಹೇಗೆ ಪರಿಹಾರ ಕಂಡುಕೊಳ್ಳುತ್ತಾರೆ ಎಂಬ ಪ್ರಶ್ನೆಗಳನ್ನು ಸೃಷ್ಟಿಸುವುದಾಗಿದೆ.

ಈ ಕಾದಂಬರಿಯಲ್ಲಿ ಬಂದುಹೋಗುವ ಪ್ರಸಂಗಗಳು ವೈವಿಧ್ಯಮಯವಾಗಿವೆ. ತನುಶ್ರೀ ತನ್ನದೇ ಆದ ಭ್ರಮಾಲೋಕದಲ್ಲಿ ಬದುಕುತ್ತಿರುತ್ತಾಳೆ. ಸತೀಶ್ ತನ್ನ ತಾಯಿಯ ಭೀತಿಯನ್ನು ನಿವಾರಿಸಿದ ದೇವಮಾತೆಯ ಚಿಕಿತ್ಸೆಯಿಂದ ತನಗೆ ಬರುವ ಲಾಭ ಕಡಿಮೆಯಾಯಿತು ಎಂದು ಕೊರಗುತ್ತಾನೆ. ದಾಸ್ ಕೇವಲ ತನ್ನ ಜೀವನವನ್ನು ನಿರ್ವಹಿಸುವುದೇ ಅಲ್ಲದೆ ಕಟ್ಟುನಿಟ್ಟಾಗಿ ವೈದ್ಯಕೀಯ ನಿಯಮಗಳನ್ನು ಅನುಸರಿಸುವ ಮೂಲಕ ಮಾನಸಿಕ ಆರೋಗ್ಯ ಕಾರ್ಯಕರ್ತನಾಗಿ ಯಶಸ್ವಿಯಾಗುತ್ತಾನೆ. ಅಲಿ ಮಧ್ಯದಲ್ಲೇ ಚಿಕಿತ್ಸೆಯನ್ನು ನಿಲ್ಲಿಸುವುದರಿಂದ ಅವನ ಸಮಸ್ಯೆ ನಿವಾರಣೆಯಾಗುವುದಿಲ್ಲ. ಸ್ಮಿತಾಳ ತಂದೆಯನ್ನು ಪಾಲನೆ ಮಾಡುವವರು , ವೈದ್ಯರ ಸಲಹೆಗೆ ಕಿವಿಗೊಡದೆ, ಚಿಕಿತ್ಸಾ ಪ್ರಕ್ರಿಯೆಗೆ ಸೂಕ್ತವಾಗಿ ಸ್ಪಂದಿಸದಿರುವುದರಿಂದ ಅವರ ಅನಾರೋಗ್ಯ ಉಲ್ಬಣಿಸುತ್ತದೆ. ಈ ಕಾದಂಬರಿಯಲ್ಲಿ ಲೇಖಕಿ ಬಾಗ್ಚಿ ಒಬ್ಬ ಮನಶ್ಶಾಸ್ತ್ರಜ್ಞರು ತಮ್ಮ ನಿತ್ಯ ಜೀವನದಲ್ಲಿ ಅನುಭವಿಸುವ ಕತ್ತಿಯಲುಗಿನ ಮೇಲಿನ ನಡಿಗೆಯನ್ನು ಬಿಂಬಿಸುತ್ತಾರೆ. ಕೊನೆಯಲ್ಲಿ ಮಾನಸಿಕ ಆರೋಗ್ಯ ವೃತ್ತಿಯನ್ನು ಹೇಗೆ ಸಮಚಿತ್ತದಿಂದ ನಿರ್ವಹಿಸುವುದು ಎಂದು ನಿರೂಪಿಸುತ್ತಾರೆ. ಜಗತ್ತಿನ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಒಬ್ಬ ಮನಶ್ಶಾಸ್ತ್ರಜ್ಞರು ಹೇಗೆ ಏಕಾಂಗಿ ಹೋರಾಟ ಮಾಡುತ್ತಾರೆ ಎನ್ನುವುದನ್ನು ಈ ಕಾದಂಬರಿಯಲ್ಲಿ ಗುರುತಿಸಬಹುದು. ವಿವಿಧ ಪಾತ್ರಧಾರಿಗಳ ನಡುವಿನ ಸಂಭಾಷಣೆಯ ಮೂಲಕ, ಯಾವುದೇ ಒತ್ತಾಯವಿಲ್ಲದೆ, ಲೇಖಕಿ ಮಾನಸಿಕ ಸಮಸ್ಯೆ ಹೊಂದಿರುವವರು ಮತ್ತು ಅವರ ಪಾಲಕರು ತಿಳಿದಿರಬೇಕಾದ ಮಾಹಿತಿಯನ್ನು, ಜೀವನದ ಏಳುಬೀಳುಗಳನ್ನು ನಿಭಾಯಿಸಲು ಅನುಸರಿಸಬೇಕಾದ ವಿಧಾನಗಳನ್ನು, ಹೇಗೆ ತೀರ್ಮಾನ ಕೈಗೊಳ್ಳಬೇಕು ಎನ್ನುವುದನ್ನು ತಿಳಿಸುವ ಮೂಲಕ ಮಾನಸಿಕ ಆರೋಗ್ಯದ ಸುತ್ತ ನಿರ್ಮಾಣವಾಗಿರುವ ಕಳಂಕವನ್ನು ತೊಡೆದುಹಾಕುತ್ತಾರೆ.

ಈ ಕಾದಂಬರಿಗೆ ಮತ್ತೊಂದು ಆಯಾಮವಿದೆ ; ಈಗ ಆದಿತಗ್ಯ ಯಶಸ್ವಿ ವೈದ್ಯನಾಗಿರುತ್ತಾನೆ. ನಂತರ ಅವನು ಏನು ಮಾಡಬೇಕು ? ಮತ್ತೊಬ್ಬ ವೈದ್ಯೆ ಪ್ರಾಚಿಯನ್ನು ಮದುವೆಯಾಗುತ್ತಾನೆ. ಆದಿತ್ಯ ತನ್ನ ವೈದ್ಯಕೀಯ ವೃತ್ತಿಯನ್ನು ವಿಸ್ತರಿಸಿ, ಒಂದು ಸಂಸ್ಥೆಯನ್ನು ಸ್ಥಾಪಿಸಿ ಹೆಚ್ಚಿನ ತಜ್ಞರನ್ನು, ವೈದ್ಯರನ್ನು ನೇಮಿಸಿಕೊಳ್ಳಬೇಕೆಂದು ಪ್ರಾಚಿ ಬಯಸುತ್ತಾಳೆ. ಆದಿತ್ಯ ಹಿಂಜರಿಯುತ್ತಾನೆ. ಪ್ರಾಚಿ ಮತ್ತು ದಾಸ್ ಅವನ ಬಗ್ಗೆ ಏಕೆ ಅಷ್ಟೊಂದು ಆಕಾಂಕ್ಷೆ ಹೊಂದಿದ್ದಾರೆ ಎಂದು ಪ್ರಶ್ನಿಸುತ್ತಾನೆ. ಈ ಪ್ರಶ್ನೆಯೇ ದೇಶದಲ್ಲಿ ಮಾನಸಿಕ ಆರೋಗ್ಯ ಚಿಕಿತ್ಸೆಯಲ್ಲಿ ಸಾಮಾನ್ಯವಾಗಿ ಕೇಳಿಬರುವ ಪ್ರಶ್ನೆಯೂ ಆಗಿದೆ. ಈ ಕ್ಷೇತ್ರದಲ್ಲಿ ನಾವು ಕೆಲವೇ ತಜ್ಞರನ್ನು ಹೊಂದಿದ್ದು, ಸಮಸ್ಯೆಗಳು ಹೆಚ್ಚಾಗುತ್ತಲೇ ಇವೆ. ಒಂದು ಸಮಾಜವಾಗಿ ನಾವು ಈ ಕ್ಷೇತ್ರದಲ್ಲಿನ ಸವಾಲುಗಳನ್ನು ಹೇಗೆ ಎದುರಿಸಲು ಸಾಧ್ಯ ?

ಬಿನೀತ್ ಎ ರಫರ್ ಸೀ ಕಾದಂಬರಿ ಮೂಲತಃ ಬೆಂಗಳೂರು ಕೇಂದ್ರಿತ ಕಾದಂಬರಿಯಾಗಿದೆ. ಇದು ಒಂದೇ ಬದಿಯ ಸಮಸ್ಯೆಗಳನ್ನು ಬಿಂಬಿಸುವಂತೆ ಕಾಣುತ್ತದೆ. ಆದರೆ ವಿಭಿನ್ನ ಜನಸಮುದಾಯಗಳನ್ನು ಆರೋಗ್ಯಕರ ರೀತಿಯಲ್ಲಿ ಬಿಂಬಿಸುತ್ತದೆ. ಒಡಿಯಾ, ಬಂಗಾಲಿ, ಮಲಯಾಳಿ ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರನ್ನು ಬಿಂಬಿಸುತ್ತದೆ. ಈ ಕಥೆಯಲ್ಲಿನ ಪ್ರಸಂಗಗಳು ಬೆಂಗಳೂರಿನ ಚಿರಪರಿಚಿತ ಕೋರಮಂಗಲ ಮತ್ತು ಬುಲ್‍ಟೆಂಪಲ್ ರಸ್ತೆಯ ಆಸುಪಾಸಿನಲ್ಲೇ ನಡೆಯುವುದು ಆಸಕ್ತಿದಾಯಕವಾದ ವಿಚಾರ. ನಮ್ಮಲ್ಲಿ ಕೇವಲ ಗ್ರಾಮೀಣ ಕ್ಷೇತ್ರದಲ್ಲಿ ಮಾತ್ರವೇ ಅಲ್ಲದೆ ನಗರ ಪ್ರದೇಶಗಳಲ್ಲೂ ಈ ಸಮಸ್ಯೆಗಳನ್ನು ಕುರಿತ ಚರ್ಚೆಗಳು ಕಡಿಮೆಯಾಗುತ್ತಿರುವಾಗ ಇದು ಅತ್ಯಗತ್ಯ ಎನಿಸುತ್ತದೆ. ಶೈಲಿ ಮತ್ತು ಭಾಷೆಯಲ್ಲಿ ಈ ಕಾದಂಬರಿ ಚೆನ್ನಾಗಿ ಮೂಡಿಬಂದಿದೆ. ದೀಪಾ ಅವರ ಪುನರ್ ನಿರ್ಮಿತ ಪತ್ರಿಕೆಯನ್ನು ಸಂಕ್ಷಿಪ್ತವಾಗಿ ಹೇಳುವುದರ ಬದಲು ಮತ್ತಷ್ಟು ಆಳವಾಗಿ ನೋಡುವ ಆಶಯ ನನಗಿದ್ದರೂ, ಇದು ಕಥೆ ಮತ್ತು ವಿಷಯದ ಬಗ್ಗೆ ಇನ್ನೂ ಹೆಚ್ಚಿನ ಆಸಕ್ತಿ ಮೂಡಿಸುತ್ತಿತ್ತು ಎಂದು ಹೇಳಬಯಸುತ್ತೇನೆ. ಒಟ್ಟಾರೆ ಹೇಳುವುದಾದರೆ ಬಿನೀತ್ ಎ ರಫರ್ ಸೀ ಕಾದಂಬರಿ ದಿಟ್ಟತನದ ಪ್ರಯತ್ನವಾಗಿದ್ದು ಲೇಖಕಿ ಬಾಗ್ಚಿ , ನಮ್ಮ ಸುತ್ತಲಿನ ಸಮಾಜದಲ್ಲಿ ಮಾನಸಿಕ ಸಮಸ್ಯೆಯ ಬಗ್ಗೆ ತೋರುವ ಕಾಳಜಿಯ ಅಗೋಚರ ಮುಖವನ್ನು ಯಶಸ್ವಿಯಾಗಿ ಪರಿಚಯಿಸುತ್ತಾರೆ. ತಮ್ಮ ಕಾದಂಬರಿಯ ಪಾತ್ರಧಾರಿಗಳ ಮೂಲಕವೇ ಇದನ್ನು ಬಿಂಬಿಸುತ್ತಾರೆ.

Related Stories

No stories found.