ಸಮಾಜ ಮತ್ತು ಮಾನಸಿಕ ಆರೋಗ್ಯ

ನೆಲೆ ಬದಲಾಯಿಸುವ ಕಷ್ಟಸುಖ: ಭಾಷೆಯ ಮೂಲಕ ಸಂಬಂಧಗಳನ್ನು ನಿರ್ಮಿಸುವುದು

ಅಪರಿಚಿತ ದೇಶದಲ್ಲಿ ವಾಸ್ತವ್ಯ ಹೂಡಿದ ರೋಹಿಣಿ, ಅಲ್ಲಿಗೆ ಹೊಂದಿಕೊಳ್ಳಲು ನಡೆಸಿದ ಪ್ರಯತ್ನಗಳ ಅನುಭವ…

ರೋಹಿಣಿ ಕಪೂರ್

ನನ್ನ ಜೀವಿತದ ಸಂಪೂರ್ಣ ಭಾಗವನ್ನು ಅಂದರೆ ಸುಮಾರು 2015ರ ಜೂನ್ ತಿಂಗಳವರೆಗೂ ಮುಂಬಯಿಯಲ್ಲೇ ವಾಸವಾಗಿದ್ದೆ.ನಂತರದ ದಿನಗಳನ್ನು ನಾನು ಮಾಯನ್ಮಾರ್ ಪಕ್ಕದಲ್ಲಿರುವ ಯಂಗಾನ್ (ರಂಗೂನ್)ನಲ್ಲಿ ವಾಸ ಮಾಡಬೇಕಾಗಿ ಬಂತು. ಯಂಗಾನ್’ನಲ್ಲಿ ನಾನು ಮೊದಲ ಮೂರು ತಿಂಗಳುಗಳನ್ನು ಕಳೆದಿದ್ದು ಹೀಗೆ:  
  • ಸಾಮಾಜಿಕ ಜೀವನವಿಲ್ಲ; ಏಕೆಂದರೆ ನನಗೆ ಅಲ್ಲಿ ಯಾರ ಪರಿಚಯವೂ ಇರಲಿಲ್ಲ. ನಾನು ಮಾತನಾಡಬಹುದಾಗಿದ್ದ ಏಕೈಕ ವ್ಯಕ್ತಿ ಎಂದರೆ ನನ್ನ ಗಂಡನಾಗಿದ್ದ. ಅವನು ಕೂಡ ದಿನದ ಬಹುಪಾಲು ಕೆಲಸದಲ್ಲಿರುತ್ತಿದ್ದ.
  • ನನಗೆ ಬರ್ಮೀಸ್ ಭಾಷೆ ಸ್ವಲ್ಪವೂ ಬರುತ್ತಿರಲಿಲ್ಲ. ಆದ್ದರಿಂದ ತರಕಾರಿ ಕೊಳ್ಳಲಿಕ್ಕೂ ಹೊರಗೆ ಹೋಗುತ್ತಿರಲಿಲ್ಲ. ಟ್ಯಾಕ್ಸಿಯಲ್ಲಿ ಹೊರಟರೆ ಅವರ ಭಾಷೆಯಲ್ಲಿ ದಾರಿ ಹೇಳಲು ನನಗೆ ತಿಳಿಯುತ್ತಿರಲಿಲ್ಲ. ಹೀಗಾಗಿ ಮನೆಯಲ್ಲೇ ಉಳಿದುಬಿಡುತ್ತಿದ್ದೆ.
  • ನನಗೆ ಕೆಲಸ ಹುಡುಕಿಕೊಳ್ಳಲೂ ಸಾಧ್ಯವಾಗಲಿಲ್ಲ.
  • ನನಗೆ ತಾಜಾ ಮೊಸರು, ಒಳ್ಳೆಯ ಬ್ರೆಡ್ ಹುಡುಕಿ ಕೊಂಡು ತರಲಿಕ್ಕೂ ಸಾಧ್ಯವಾಗುತ್ತಿರಲಿಲ್ಲ.

ಈ ಎಲ್ಲದರಿಂದ ನಾನು ನಿರಾಶೆಗೊಂಡಿದ್ದೆ. ನನ್ನ ಊರಿನಲ್ಲಿ, ನನ್ನ ಮನೆಯಲ್ಲಿ ದಿನಾಲು ತಿನ್ನುತ್ತಿದ್ದ ಯಾವ ತಿನಿಸೂ ಇಲ್ಲಿ ನನಗೆ ಸಿಗುತ್ತಿರಲಿಲ್ಲ. ನನಗೆ ನಾನು ಮುಂಬಯಿಯಲ್ಲೇ ಉಳಿದುಬಿಡಬೇಕಿತ್ತು ಎಂದು ತೀವ್ರವಾಗಿ ಅನ್ನಿಸತೊಡಗಿತು. ಕೆಲವು ಸಲ ತತ್ ಕ್ಷಣ ಫ್ಲೈಟ್ ಹತ್ತಿ ಭಾರತಕ್ಕೆ ಮರಳಿಬಿಡಬೇಕು ಅನ್ನಿಸುತ್ತಿತ್ತು.

ಯಂಗಾನ್’ನಲ್ಲಿ ನಾನು ಅನುಭವಿಸಿದ ಮತ್ತೊಂದು ಸಮಸ್ಯೆ ನಿದ್ರೆಯದ್ದು. ರಾತ್ರಿಯಿಡೀ ಹೊರಳಾಡಿ ಮುಂಜಾನೆ 5 – 5.30ಗೆ ನಿದ್ರೆ ಹೋಗುತ್ತಿದ್ದೆ. ಏಳುವಾಗ ಮಧ್ಯಾಹ್ನವಾಗಿರುತ್ತಿತ್ತು ಮತ್ತು ವಿಪರೀತ ಹೊಟ್ಟೆ ಹಸಿದಿರುತ್ತಿತ್ತು. ಪುಸ್ತಕಗಳನ್ನು ಓದುತ್ತಾ, ಟೀವಿ ನೋಡುತ್ತಾ, ಬ್ಲಾಗ್ ಬರಹಗಳನ್ನು ಬರೆಯುತ್ತಾ, ಫ್ರೀಲಾನ್ಸ್ ಪ್ರಾಜೆಕ್ಟ್’ಗಳಿಗೆ ಕೆಲಸ ಮಾಡುತ್ತಾ ನನ್ನನ್ನು ಸಂತೈಸಿಕೊಳ್ಳಲು ಯತ್ನಿಸಿದೆ. ಆದರೆ ಯಾವ ಉಪಾಯವೂ ಕೈಹಿಡಿಯಲಿಲ್ಲ. ಯಾವುವೂ ನನ್ನಲ್ಲಿ ಭರವಸೆ ತುಂಬಲಿಲ್ಲ.

ತುಂಬಾ ಸಮಯದವರೆಗು ನನಗೆ ಪ್ರತಿ ಮಧ್ಯಾಹ್ನ ನಾನು ನನ್ನ ಊರನ್ನು, ನನ್ನ ಮನೆಯನ್ನು ನೆನೆಯುತ್ತ ನಿಟ್ಟುಸಿರು ಬಿಡುತ್ತಿದ್ದೆ. ಗೆಳೆಯರ ಜೊತೆಗಿನ ಡಿನ್ನರ್, ಅಣ್ಣನ ಮಕ್ಕಳನ್ನು ಐಸ್ ಕ್ರೀಂ ತಿನ್ನಿಸಲು ಕರೆದೊಯ್ಯುತ್ತಿದ್ದುದು, ಕುಟುಂಬದೊಂದಿಗೆ ನಡೆಸುತ್ತಿದ್ದ ವಾರಾಂತ್ಯದ ಭೋಜನ ಕೂಟಗಳೆಲ್ಲ ನೆನಪಾಗಿ ಕಾಡತೊಡಗಿದವು. ಮುಂಬಯಿಯ ಮುಂಗಾರನ್ನು ಕೂಡಾ ನಾನು ವಿಪರೀತ ಮಿಸ್ ಮಾಡಿಕೊಂಡೆ.

ಕ್ರಮೇಣ ನಾನು ಸ್ವಲ್ಪವಾದರೂ ಬರ್ಮೀ ಭಾಷೆ ಕಲಿಯಲು ನಿರ್ಧರಿಸಿದೆ. ಇದರಿಂದ ಹೊತ್ತು ಹೋಗುವುದರ ಜೊತೆಗೆ ನಾನು ಅಲ್ಪಸ್ವಲ್ಪವಾದರೂ ಚಟುವಟಿಕೆಯಲ್ಲಿ ತೊಡಗಲು ಸಾಧ್ಯವಾಗುವುದು ಎಂದು ಯೋಚಿಸಿದೆ. ಬರ್ಮೀಸ್ ಆನ್ ಲೈನ್ ಆಡಿಯೋ ಲೆಸನ್’ಗಳನ್ನು ಅಭ್ಯಾಸ ಮಾಡಿದೆ. ಇದರಿಂದ ಕೊನೆಪಕ್ಷ ಮಾರ್ಕೆಟ್’ನಲ್ಲಿ ಶಾಪಿಂಗ್ ಮಾಡಲು ಸಾಕಾಗುವಷ್ಟು ಭಾಷೆ ಕಲಿಯಲು ಸಾಧ್ಯವಾಯಿತು.

ಹಾಗೆಯೇ ನಾನು ಆನ್ ಲೈನ್ ಫೋರಮ್’ಗಳಲ್ಲಿ ವಿಹರಿಸತೊಡಗಿದೆ. ಒಂದು ಕಡೆ ವಲಸಿಗ ರಷ್ಯನ್ ಮಹಿಳೆಯೊಬ್ಬಳು ತನ್ನ ಮಗನಿಗೆ ಸ್ಪಾನಿಷ್ ಟ್ಯೂಟರ್ ಬೇಕಾಗಿದ್ದಾರೆಂದು ಬರೆದುಕೊಂಡಿದ್ದಳು. ನನಗೆ ಸ್ಪಾನಿಷ್ ಬರುತ್ತದೆ. ಕೂಡಲೇ ಅವಳಿಗೆ ಮೇಲ್ ಮಾಡಿದೆ. ಅವಳು ಕೂಡ ತತ್ ಕ್ಷಣ ಪ್ರತಿಕ್ರಿಯಿಸಿದಳು. ಹೀಗೆ ಆಕೆಯ 7 ವರ್ಷದ ತುಂಟ, ಮುದ್ದು ಮಗ ಮಾಯನ್ಮಾರ್’ನಲ್ಲಿ ನನ್ನ ಮೊದಲ ಗೆಳೆಯನಾದ.

ಅದೇ ವೇಳೆಗೆ ನನ್ನ ತಾಯಿ ನಮ್ಮನ್ನು ಕಾಣಲು ಬಂದರು. ಅವರು ಇರುವಷ್ಟೂ ದಿನ ತಾವೇ ಅಡುಗೆ ಮಾಡುತ್ತಿದ್ದರು, ನಾನು ಸಹಾಯ ಮಾಡುತ್ತಿದ್ದೆ. ಅವರು ಇರುವಾಗ ನನ್ನ ಮೊದಲಿನ ದಿನಚರಿಗೆ ಹೊಂದಿಕೊಳ್ಳಲು ಅಲ್ಪಸ್ವಲ್ಪ ಸಾಧ್ಯವಾಯಿತು. ಅವರು ಮರಳಿದ ಮೇಲೆ ಅದನ್ನು ಕಾಯ್ದುಕೊಳ್ಳಲು ತುಂಬಾ ಕಷ್ಟಪಟ್ಟೆ. ಸ್ವಲ್ಪ ಬೇಗ ಏಳಲು ಶುರು ಮಾಡಿದೆ. ಯೋಗಾಭ್ಯಾಸವನ್ನು ಪುನರಾರಂಭಿಸಿದೆ. ಅನಂತರದಲ್ಲಿ ನನ್ನ ನಿದ್ರೆಯ ಸಮಸ್ಯೆ ದೂರವಾಗತೊಡಗಿತು.

ಕ್ರಮೇಣ ನನ್ನಲ್ಲಿ ಆತ್ಮವಿಶ್ವಾಸ ಮೂಡತೊಡಗಿತು. ನಾನು ಸೇರಿಕೊಳ್ಳಬಹುದಾದಂಥ ಗುಂಪುಗಳನ್ನು ಹುಡುಕಿಕೊಂಡೆ. ಸ್ಪಾನಿಷ್ ಸ್ಪೀಕಿಂಗ್ ಕ್ಲಬ್’ನ ಕಾಯಂ ಸದಸ್ಯಳಾದೆ. ವಲಸಿಗ ಮಹಿಳೆಯರ ಗುಂಪನ್ನು ಸೇರಿಕೊಂಡೆ. ಅವರ ಚಟುವಟಿಕೆಗಳಲ್ಲಿ ಭಾಗವಹಿಸತೊಡಗಿದೆ. ಅವರ ಬುಕ್ ಕ್ಲಬ್’ಗೂ ಸದಸ್ಯಳಾದೆ. ಇವೆಲ್ಲದರ ಜೊತೆಗೆ ಯಂಗಾನ್ ರೈಟಿಂಗ್ ಗ್ರೂಪ್’ಗೆ ಕೂಡ ಸೇರಿಕೊಂಡೆ. ಮುಂದೆ ಅದು ನನ್ನ ವಾರಾಂತ್ಯಗಳ ಬಹುಮುಖ್ಯ ತಾಣವಾಯಿತು.

ಯಂಗಾನ್’ನಲ್ಲಿ ನೆಲೆಸಿ 6 ತಿಂಗಳು ಕಳೆಯುವ ವೇಳೆಗೆ ಅದು ನನ್ನ ಮನೆಯಂತೆಯೇ ಆಗಿಹೋಯ್ತು. ನಿಧಾನವಾಗಿ ಅಲ್ಲಿನ ಜೀವನ ಶೈಲಿಗೆ ನಾನು ಹೊಂದಿಕೊಂಡೆ. ಸ್ಥಳೀಯ ಆಹಾರವನ್ನು ಇಷ್ಟ ಪಡತೊಡಗಿದೆ. ಮಾಯನ್ಮಾರ್ ಸಂಸ್ಕೃತಿಯೂ ಮೆಚ್ಚುಗೆಯಾಗತೊಡಗಿತು. ಅಲ್ಲಿಯ ಜನರ ಸಜ್ಜನಿಕೆಯಿಂದಲೂ ಸಾಕಷ್ಟು ಕಲಿತೆ (ಒಮ್ಮೆ ನಾನು ಟ್ಯಾಕ್ಸಿಯಲ್ಲಿ ಮರೆತಿದ್ದ ಮೊಬೈಲನ್ನು ಡ್ರೈವರ್ ಮನೆಗೆ ಬಂದು ಮರಳಿಸಿದ್ದ), ಮಾಯನ್ಮಾರಿನ ಭವ್ಯ ಇತಿಹಾಸವನ್ನು ಅರಿಯತೊಡಗಿದೆ. ಹಾಗೂ ಮಾಯನ್ಮಾರಿನಲ್ಲಿ ಬೌದ್ಧ ಧರ್ಮಕ್ಕಿರುವ ಮಹತ್ವವನ್ನೂ ತಿಳಿಯತೊಡಗಿದೆ.

ವಿವಿಧ ಗುಂಪುಗಳ ಮೂಲಕ ನಾನು ಬಗೆ ಬಗೆಯ, ಆಸಕ್ತಿಕರ ಜನರನ್ನು ಭೇಟಿ ಮಾಡಿದೆ. ಹೊಸ ಗೆಳೆಯರು ನನ್ನ ಪಟ್ಟಿಗೆ ಸೇರಿಕೊಂಡರು. ಅವರ ಜೀವನದ ಕಥೆಗಳು ನನಗೆ ಬದುಕಿನ ಹೊಸ ದೃಷ್ಟಿಕೋನವನ್ನು ತೋರಿಸಿಕೊಟ್ಟವು.  

ಇವೆಲ್ಲಕ್ಕಿಂತ ಹೆಚ್ಚಾಗಿ ನಾನು ನನ್ನ ಬಗ್ಗೆ ಹೊಸ ವಿಷಯಗಳನ್ನು ತಿಳಿದುಕೊಂಡೆ! ನಾನು ಹೊಸ ಜಾಗಕ್ಕೆ ಹೊಂದಿಕೊಳ್ಳಬಲ್ಲೆ, ಹೊಸತನ್ನು ಕಲಿಯಬಲ್ಲೆ ಹಾಗೂ ನನ್ನದಾಗಿಸಿಕೊಂಡು ಬದುಕಬಲ್ಲೆ ಎಂದು ಕಂಡುಕೊಂಡೆ. ಮತ್ತೊಬ್ಬರ ಭಾಷೆಯನ್ನು ಕಲಿತು ವ್ಯವಹರಿಸುವುದರಿಂದ ಸಂಬಂಧಗಳು ಬೆಸೆದುಕೊಳ್ಳುತ್ತವೆ ಅನ್ನುವುದನ್ನು ಅರಿತೆ. ಸಮಾನಾಸಕ್ತರ ಗೆಳೆತನ ಮತ್ತಷ್ಟು ಹೊಸ ಗೆಳೆಯರನ್ನು ಹುಡುಕಿಕೊಡುತ್ತದೆ ಅನ್ನುವುದು ಅನುಭವಕ್ಕೆ ಬಂತು.

ಹೀಗೆ ಮಾಯನ್ಮಾರಿಗೆ ತೆರಳಿ ಒಂದೂವರೆ ವರ್ಷ ಆಗುವಷ್ಟರಲ್ಲಿ ನಾನು ಅಲ್ಲಿಯವಳೇ ಆಗಿಹೋದೆ. ಅಲ್ಲಿಂದ ಹೊರಡುವಾಗ ನನ್ನ ಗೆಳೆಯರು ಉಡುಗೊರೆಯಿತ್ತು ನನ್ನನ್ನು ಭಾರವಾದ ಹೃದಯದಿಂದ  ಬೀಳ್ಕೊಟ್ಟರು. ನಾನು ಕಣ್ಣೀರು ತುಂಬಿಕೊಂಡು ವಿದಾಯದ ಕೈಬೀಸಿದೆ.

ನಾನು ಮುಂಬಯಿಗೆ ಮರಳಿ 6 ತಿಂಗಳಾದವು. ನಾನೀಗ ಯಂಗಾನ್ ಅನ್ನು ಮಿಸ್ ಮಾಡಿಕೊಳ್ತಿದ್ದೇನೆ. ಬದುಕಿನ ಸರಳತೆಯನ್ನು, ಆಗ್ನೇಯ ಏಷ್ಯಾದ ಸ್ವಾದಭರಿತ ಹಣ್ಣುಗಳನ್ನು, ಕಿಕ್ಕಿರಿದ ಮಾರುಕಟ್ಟೆ ಗಲ್ಲಿಗಳನ್ನು, ಕಣ್ಣು ಹಾಯಿಸಿದಲ್ಲೆಲ್ಲ ಕಾಣುತ್ತಿದ್ದ ಬೌದ್ಧ ಬಿಕ್ಖುಗಳನ್ನು, ಅಲ್ಲಿಯ ಜನರನ್ನು ಮಿಸ್ ಮಾಡಿಕೊಳ್ತಿದ್ದೇನೆ.

ಎಷ್ಟೆಂದರೂ ಅದು ನನಗೆ ಮನೆಯೇ ಆಗಿಹೋಗಿತ್ತಲ್ಲವೆ?

ರೋಹಿಣಿ, ಮುಂಬಯ್ ಮೂಲದ ಬ್ಲಾಗ್ ಬರಹಗಾರ್ತಿ. ಅವರಾಗಲೇ ಮಾಯನ್ಮಾರಿಗೆ ಮತ್ತೊಮ್ಮೆ ತೆರಳುವ ಕನಸು ಕಾಣುತ್ತಿದ್ದಾರೆ.

ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org