ನನಗೆ ಕೊರೋನಾ ಇತ್ತು- ಜನರು ನನ್ನನ್ನೇ ದೂಷಿಸಿದರು

ನನಗೆ ಕೊರೋನಾ ಇತ್ತು- ಜನರು ನನ್ನನ್ನೇ ದೂಷಿಸಿದರು

ನನಗೆ ಕೊರೋನಾ ಪಾಸಿಟಿವ್ ಇತ್ತು- ಜನರು ನನ್ನನ್ನೇ ದೂಷಿಸಿದರು

ಇದೆಲ್ಲಾ ಶುರುವಾದದ್ದು 2020ರ ಮಾರ್ಚ್ 9ರಂದು, ನಾನು ಸ್ವಿಜರ್‍ಲೆಂಡ್‍ನಿಂದ ಫ್ರಾನ್ಸ್ ಮೂಲಕ ಭಾರತಕ್ಕೆ ಬಂದಾಗ. ಆಗ ಲಾಕ್ ಡೌನ್ ಇರಲಿಲ್ಲ. ವಿದೇಶದಿಂದ ಭಾರತಕ್ಕೆ ಬರುವವರಿಗೆ ಸ್ವಯಂ ಕ್ವಾರಂಟೈನ್ ನಿಯಮಗಳೂ ಇರಲಿಲ್ಲ. ವಿಮಾನ ನಿಲ್ದಾಣದಲ್ಲಿ ಕೋವಿಡ್-19 ಪರೀಕ್ಷೆಯನ್ನೂ ಮಾಡುತ್ತಿರಲಿಲ್ಲ. ಈ ಸಂದರ್ಭದಲ್ಲಿ ಇದ್ದ ನಿಯಮಗಳ ಅನುಸಾರ ಕೆಲವು ನಿರ್ದಿಷ್ಟ ದೇಶಗಳಿಂದ ಬರುವವರನ್ನು ಮಾತ್ರ ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಸ್ವಿಜರ್‍ಲೆಂಡ್ ಈ ಪಟ್ಟಿಯಲ್ಲಿ ಇರಲಿಲ್ಲ. ನನಗೆ ಸೋಂಕು ತಗುಲಿರುವ ಯಾವುದೇ ಲಕ್ಷಣಗಳಿರಲಿಲ್ಲ.

ಕೆಮ್ಮು, ನೆಗಡಿ, ಜ್ವರ ಇರಲಿಲ್ಲ. ಆದರೆ ನಾನು ಪರೀಕ್ಷೆ ಮಾಡಿಸಿಕೊಳ್ಳಲು ಬಯಸಿದ್ದೆ. ಏಕೆಂದರೆ ನನಗೆ ಭಯವಾಗಿತ್ತು. ಭಾರತಕ್ಕೆ ಹಿಂದಿರುಗಿದ ಮೇಲೆ ನಾಲ್ಕೈದು ದಿನಗಳು ನನಗೆ ವಾಸನೆ ಗೊತ್ತಾಗುತ್ತಿರಲಿಲ್ಲ, ರುಚಿ ತಿಳಿಯುತ್ತಿರಲಿಲ್ಲ. ಆಗ ಇದು ಕೊರೋನಾ ಲಕ್ಷಣ ಎಂದು ಗುರುತಿಸಿರಲಿಲ್ಲ.  ನನಗೆ ತಪಾಸಣೆಯ ನಿಯಮಗಳು ತಿಳಿದಿರಲಿಲ್ಲ. ಹಾಗಾಗಿ ಸಾಮಾನ್ಯ ಫಿಸಿಷಿಯನ್ ಬಳಿ ಪರೀಕ್ಷೆ ಮಾಡಿಸುವುದು ಒಳಿತು ಎಂದು ಯೋಚಿಸಿದೆ. ನನಗೆ ಆರಂಭದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಲು ಅವಕಾಶ ಕೊಡಲಿಲ್ಲ ನಂತರ ಸ್ವಿಜರ್‍ಲೆಂಡ್ ಇತರ ದೇಶಗಳ ಪಟ್ಟಿಯಲ್ಲಿ ಸೇರ್ಪಡೆಯಾದ ನಂತರ ಪರೀಕ್ಷೆ ಮಾಡಿಸಲು ಸಾಧ್ಯವಾಗಿತ್ತು.

ನನಗೆ ಕೋವಿಡ್-19 ಪಾಸಿಟಿವ್ ಎಂದು ತಿಳಿದಾಗ ಆಘಾತವಾಯಿತು. ಹೇಗೆ ಪ್ರತಿಕ್ರಯಿಸಬೇಕು ತಿಳಿಯಲಿಲ್ಲ. ನನ್ನ ಮಟ್ಟಿಗೆ ಇದು ಭಯ ಭೀತಿಯ ಸನ್ನಿವೇಶವಾಗಿತ್ತು. ನನ್ನಿಂದ ಯಾರಾದರೂ ಸಾಯುತ್ತಾರಾ, ವೈದ್ಯರಿಗೆ ಅವರು ಏನು ಮಾಡುತ್ತಿದ್ದಾರೆ ಎಂದು ಗೊತ್ತಿದೆಯಾ, ನನಗೆ ಬೇರೆ ದಾರಿಯೇ ಇಲ್ಲವೇ, ಇದು ನನ್ನನ್ನು ಸಾಯಿಸುತ್ತಾ ಹೀಗೆ ಹಲವು ಪ್ರಶ್ನೆಗಳು ನನ್ನನ್ನು ಕಾಡಿದವು. ಪರೀಕ್ಷೆ ಮಾಡಿಸಿದ ದಿನವೇ ಫಲಿತಾಂಶವೂ ಬಂದಿತ್ತು. ಬಿಬಿಎಂಪಿ ಅಧಿಕಾರಿಗಳು ನನ್ನ ಮನೆಗೆ ಬಂದು ನನ್ನ ಮನೆಯ ಮಾಲಿಕನಿಗೆ ಪರಿಸ್ಥಿತಿಯನ್ನು ವಿವರಿಸಿದರು. ಕ್ಷಣ ಮಾತ್ರದಲ್ಲಿ ನೆರೆಹೊರೆಯವರಿಗೆಲ್ಲರಿರೂ ವಿಷಯ ತಿಳಿಯಿತು. ಅನೇಕ ಪ್ರಶ್ನೆಗಳನ್ನು ಕೇಳಲಾರಂಭಿಸಿದರು. ನನ್ನ ಮನೆಯ ಕಡೆ ಬೆಟ್ಟು ಮಾಡಲಾರಂಭಿಸಿದರು. ನಂತರ ನನ್ನನ್ನು ಪ್ರತ್ಯೇಕಿಸಲಾಯಿತು. 

ಪ್ರತ್ಯೇಕವಾಗಿದ್ದಾಗ

ನನ್ನನ್ನು ಪ್ರತ್ಯೇಕವಾಗಿರಿಸುವ ಸ್ಥಳಕ್ಕೆ ನಾನು ತಲುಪಿದಾಗ ನಾನು ಗಾಬರಿಯಾಗಿದ್ದೆ. ಒಂಟಿಯಾಗಿದ್ದೆ. ಒತ್ತಡ ಹೆಚ್ಚಾಗಿ ದುರ್ಬಲನಾಗಿದ್ದೆ. ಖಾಲಿ ಖಾಲಿ ಇದ್ದ ರೂಮುಗಳು ಸಾಲುಸಾಲಾಗಿದ್ದವು. ಇಡೀ ದಿನ ನಾನು ಒಬ್ಬಂಟಿಯಾಗಿಯೇ ಇದ್ದೆ. ಒಬ್ಬ ವಾರ್ಡ್ ಬಾಯ್ ಇದ್ದ. ಪ್ರತಿ ಎರಡು ಗಂಟೆಗೊಮ್ಮೆ ವೈದ್ಯರು ಬಂದು ನನ್ನ ಪರೀಕ್ಷೆ ಮಾಡಿ ಹೋಗುತ್ತಿದ್ದರು.

ಈ ಗಾಬರಿಯ ಸಮಯದಲ್ಲಿ, ಶಕ್ತಿ ಕಳೆದುಕೊಂಡ ಭಾವನೆಯಿದ್ದ ಸಮಯದಲ್ಲಿಲ ನಾನು ನನ್ನ ಆತ್ಮೀಯರಿಗೆ ಮೊಬೈಲ್ ಮೂಲಕ ಧ್ವನಿ ಟಿಪ್ಪಣಿ ಕಳುಹಿಸಿದ್ದೆ. ನಂತರ ಅದು ವಾಟ್ಸಪ್ ಮೂಲಕ ಇತರರಿಗೂ ರವಾನೆಯಾಗಿತ್ತು. ಇದು ನನ್ನಲ್ಲಿ ಭಯ ಉಂಟುಮಾಡಿತ್ತು. ವಿಶ್ವಾಸದ್ರೋಹದ ಭಾವನೆ ನನ್ನನ್ನು ಕಾಡಿತ್ತು.  ಆರಂಭದಲ್ಲಿ ಸಾಕಷ್ಟು ಗೊಂದಲ ಉಂಟಾಗಿತ್ತು. ಆರೋಗ್ಯಾಧಿಕಾರಿಗಳು ಹಲವು ರೀತಿಯ ಆರೋಗ್ಯವನ್ನು ಕುರಿತ ವಿವರ ಸಂಗ್ರಹಿಸುತ್ತಿದ್ದರು.

ನಾನು  ಕಳೆದ ಕೆಲವು ದಿನಗಳಲ್ಲಿ ಭೇಟಿಯಾಗಿದ್ದ ಜನರನ್ನು ಗುರುತಿಸುತ್ತೇವೆ ಎಂದು ಆರೋಗ್ಯ ಸಿಬ್ಬಂದಿ ಹೇಳಿದಾಗ, ಅದು ಎಷ್ಟು ಪರಿಣಾಮಕಾರಿಯಾಗುತ್ತದೆ ಎಂದು ನನಗೆ ಅಂದಾಜು ಇರಲಿಲ್ಲ. ನನ್ನ ಸ್ನೇಹಿತರಿಗೆ, ಕುಟುಂಬದವರಿಗೆ ತಿಳಿಸಲು ನಿರ್ಧರಿಸಿದೆ. ನನಗೆ ಕೋವಿಡ್-19 ಪಾಸಿಟಿವ್ ಇದೆ ಎಂದು ನನ್ನ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದೆ. ನನ್ನನ್ನು ಭೇಟಿ ಮಾಡಿದ್ದವರಿಗೆ, ಅವರ ಹಿರಿಯ ಸಂಬಂಧಿಕರನ್ನು ಭೇಟಿ ಮಾಡದಂತೆ, ಅಜ್ಜ ಅಜ್ಜಿಯರ ಬಳಿ ಹೋಗದಂತೆ ವಿನಂತಿಸಿದೆ. ನನಗೆ ಪ್ರತಿಕ್ರಯಿಸಿದವರೆಲ್ಲರೂ ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದರು. ಕೆಲವರು ನನ್ನ ವಿರುದ್ಧ ದ್ವೇಷ ಕಾರಿದ್ದರು. ನನ್ನನ್ನು ಹಂತಕ ಎಂದೆಲ್ಲಾ ಹೀಯಾಳಿಸಿ, ಪೊಲೀಸರು ನನ್ನನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದರು.

ಸಾಮಾಜಿಕ ಕಳಂಕ

ನನ್ನನ್ನು ಗಲಿಬಿಲಿಗೊಳಿಸುವ ಮತ್ತೊಂದು ಘಟನೆ ನಡೆದಿತ್ತು. ಒಂದು ದಿನ ನನ್ನ ಪರಿಚಯದ ವ್ಯಕ್ತಿಯೊಬ್ಬರು, ರಾತ್ರಿ 1 ಗಂಟೆಯ ವೇಳೆಯಲ್ಲಿ ವಿಡಿಯೋ ಕರೆ ಮಾಡಿದರು. “ನಿನ್ನ ಕೋಣೆಯಲ್ಲಿ ದೀಪ ಏಕೆ ಆರಿಸಲಾಗಿದೆ, ಅದನ್ನು ಆನ್ ಮಾಡು, ಕೊರೋನಾ ಸೋಂಕು ತಗುಲಿರುವವರು ಹೇಗಿರುತ್ತಾರೆ ನಾನು ನೋಡಬೇಕು ” ಎಂದು ಹೇಳಿದರು. ನನಗೆ ನಿಜಕ್ಕೂ ಗಾಬರಿಯಾಯಿತು.

ಇಡೀ ರಾತ್ರಿ ನಿದ್ರೆ ಮಾಡಲಿಲ್ಲ. ನಿಮಗೆ ಕೋವಿಡ್-19 ಪಾಸಿಟಿವ್ ಇರುವವರು ಪರಿಚಯವಿದ್ದರೆ ಅವರ ಹತ್ತಿರ ಹೀಗೆ ಹಗುರವಾಗಿ ಮಾತನಾಡಬೇಡಿ. ವೈರಾಣುವಿನಿಂದ ಸತ್ತವರ ಸಂಖ್ಯೆಯನ್ನು ಕುರಿತು ಮಾತನಾಡಬೇಡಿ. ಅವರಿಗೆ ಪ್ರೇರಣೆ, ಬೆಂಬಲ ಮತ್ತು ಅನುಕಂಪ ತೋರುವ ಸಮಯ ಇದು. ನೀವು ಇಂತಹ ಸನ್ನಿವೇಶವನ್ನು ಎದುರಿಸುವಾಗ ಪದೇಪದೇ ಗಾಬರಿಯಾಗುವುದು ಸಹಜ. ನಿಮ್ಮನ್ನು ಕಾಣಲು ಅಥವಾ ನಿಮ್ಮೊಡನೆ ಮಾತನಾಡಲು ಬರುವವರೂ ಗಾಬರಿ ಹುಟ್ಟಿಸುತ್ತಾರೆ. ನಾನು ಪ್ರತ್ಯೇಕ ಕೋಣೆಗೆ ಹೋಗುವವರೆಗೂ ನನ್ನ ಆರೋಗ್ಯದ ಬಗ್ಗೆ ಯೋಚಿಸಿರಲಿಲ್ಲ. ನಂತರ ನನಗೆ ಹೊರಜಗತ್ತಿನಲ್ಲಿ ಏನಾಗುತ್ತಿದೆ ಎನ್ನುವ ಚಿಂತೆ ಶುರುವಾಯಿತು. ಆದರೆ ಹೆಚ್ಚು ಹೆಚ್ಚು ದ್ವೇಷದ ಸಂದೇಶಗಳನ್ನೇ ನೋಡಿದೆನೇ ಹೊರತು ಮತ್ತೇನೂ ಸಹಾಯಕವಾಗಲಿಲ್ಲ. ಆಗ ನನಗೆ ನಾನು ಕುಸಿದುಹೋಗುತ್ತಿದ್ದೇನೆ ಎನಿಸಿತ್ತು. ತಲೆನೋವು ಹೆಚ್ಚಾಯಿತು, ಗಂಟಲು ಕೆರೆತ ಶುರುವಾಯಿತು. ಆಗ ನನಗೆ, ನಾನು ಇವೆಲ್ಲದರಿಂದ ದೂರವಾಗಬೇಕು ಎನಿಸಿತು. ನನ್ನ ತೊಂದರೆಗಳು ಇನ್ನೂ ಹೆಚ್ಚಾಗುವಂತೆ, ಅಧಿಕಾರಿಗಳು ನನ್ನ ಆರೋಗ್ಯದ ಬಗ್ಗೆ ಮನೆಯ ಮಾಲೀಕನಿಗೆ ಮಾಹಿತಿ ನೀಡಿದ ಕೂಡಲೇ, ಅವನು ನನಗೆ ಬೇರೆ ಮನೆ ನೋಡಿಕೊಳ್ಳುವಂತೆ ಒತ್ತಾಯಿಸತೊಡಗಿದ.

ಇವೆಲ್ಲ ಘಟನೆಗಳಿಂದ ನನ್ನ ಬಗ್ಗೆ ನನಗೇ ನಾಚಿಕೆ ಉಂಟಾಯಿತು. ಇದು ಒಂದು ರೀತಿ ತಮಾಷೆ ಎನಿಸಿದ್ದೂ ಹೌದು. ನಾವು ಒಂದು ವೈರಾಣು ಕುರಿತು ಮಾತನಾಡುತ್ತಿದ್ದೇವೆ. ಇಲ್ಲಿ ನೈತಿಕತೆಯ ಪ್ರಶ್ನೆ ಬರುವುದಿಲ್ಲ. ಆದರೂ ನಾವು ಪರಸ್ಪರ ದೂಷಿಸುತ್ತಾ ದ್ವೇಷ ಬೆಳೆಸಿಕೊಳ್ಳುತ್ತಿದ್ದೇವೆ. ಈ ಕಾರಣಕ್ಕಾಗಿಯೇ ನಾನು ನನ್ನ ಅನುಭವವನ್ನು ಹಂಚಿಕೊಳ್ಳಲು ಬಯಸಿದೆ. ಈ ಪರಿಸ್ಥಿತಿಯಲ್ಲಿ ಮಾನಸಿಕ ಆರೋಗ್ಯ ಮುಖ್ಯ. ಇತರರಲ್ಲಿ ನಾಚಿಕೆ ಹುಟ್ಟಿಸುವಂತೆ, ಅಪಮಾನ ಉಂಟಾಗುವಂತೆ ಮಾಡಿದರೆ ಏನೂ ಪ್ರಯೋಜನವಾಗುವುದಿಲ್ಲ. 

ದೈಹಿಕ ಆರೋಗ್ಯಕ್ಕೆ ಅಪಾಯವಾಗುವುದೇ ಅಲ್ಲದೆ, ಆರ್ಥಿಕ ಕುಸಿತವೂ ಹೆಚ್ಚಾಗುತ್ತದೆ ಎನ್ನಲಾಗುತ್ತಿದೆ. ಇದು ಸಾಲದೆಂಬಂತೆ ಭಾವಾವೇಶದಿಂದ ಮಾನಸಿಕ ಆರೋಗ್ಯಕ್ಕೆ ಅಪಾಯ ಉಂಟುಮಾಡಿದರೆ ಯಾರಿಗೆ ಸಹಾಯವಾಗುತ್ತದೆ ? ನಿಮ್ಮ ಭಯದ ಹೊರತಾಗಿಯೂ ನೀವು ಆರೋಗ್ಯ ಸಿಬ್ಬಂದಿಯನ್ನು ನಂಬಬೇಕು. ಅವರು ಅವರ ಕೆಲಸ ಮಾಡುತ್ತಾರೆ. ನೀವು ನಿಮ್ಮ ಹಾಗೂ ನಿಮ್ಮ ಕುಟುಂಬದವರ ಕಾಳಜಿ ವಹಿಸಿ. ಈಗ ನಿಯಮಗಳು ಕಠಿಣ ಎನಿಸಬಹುದು ಆದರೆ ಆರೋಗ್ಯ ಸಿಬ್ಬಂದಿ ತಮ್ಮ ಕೈಲಾದಷ್ಟೂ ಶ್ರಮ ಪಡುತ್ತಿದ್ದಾರೆ. ನನ್ನ ಪ್ರತ್ಯೇಕ ವಾಸ ಕೊನೆಯಾಗಿದೆ. ನಾವು ಕೋವಿಡ್-19ರಿಂದ ಪಾರಾಗಿದ್ದೇನೆ.

ಎಲ್ಲೆಡೆಯೂ ನಾವು ದಯೆ, ಕರುಣೆಯನ್ನು ಕಾಣುತ್ತಿದ್ದೇವೆ. ಹಾಗೆಯೇ ದ್ವೇಷ, ಕಠೋರ ವರ್ತನೆಯನ್ನೂ ನೋಡುತ್ತಿದ್ದೇವೆ. ನಾವು ಮತ್ತು ಅವರು ಎನ್ನುವ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಈ ರೀತಿಯ ವರ್ತನೆಯಿಂದ ಆರೋಗ್ಯ ಸಿಬ್ಬಂದಿಗೆ ಏನೂ ಸಹಾಯವಾಗುತ್ತಿಲ್ಲ. ನಾವು ತಪ್ಪು ಮಾಡುತ್ತಿದ್ದೇವೆ ಎಂಬ ಅರಿವು ನಮಗಿರಬೇಕು. ಈ ಬಿಕ್ಕಟ್ಟು ಪರಿಹರಿಸಲು ಒಗ್ಗಟ್ಟಿನಿಂದ ಮುನ್ನಡೆಯಬೇಕು.

ಈ ವ್ಯಕ್ತಿಯ ಆಗ್ರಹದ ಮೇರೆಗೆ ಹೆಸರನ್ನು ಪ್ರಕಟಿಸಲಾಗುತ್ತಿಲ್ಲ. ವೈಟ್ ಸ್ವಾನ್ ಫೌಂಡೇಷನ್ ಗೆ ನೀಡಿದ ಮಾಹಿತಿ ಇದು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org