ತಾರತಮ್ಯವು ಲಿಂಗಾಂತರಿಗಳಲ್ಲಿ ಯಾತನೆ ಹಾಗೂ ಮಾನಸಿಕ ಅನಾರೋಗ್ಯವನ್ನು ಉಂಟುಮಾಡುತ್ತದೆ

ಲಿಂಗಾಂತರಿಗಳಿಗೆ ಮಾನಸಿಕ ಆರೋಗ್ಯ ಸಹಾಯ ಒದಗಿಸುವ ಕುರಿತು ಬೆಂಗಳೂರಿನಲ್ಲಿ ಚರ್ಚೆ ನಡೆಸಲಾಯಿತು.

ಬೆಂಗಳೂರಿನಲ್ಲಿ ಸ್ಟೂಡೆಂಟ್ ಕ್ರಿಶ್ಚಿಯನ್ ಮೂವ್ಮೆಂಟ್ ಆಫ್ ಇಂಡಿಯಾ, ಮಿಶನ್ ರೋಡ್ ಆಶ್ರಯದಲ್ಲಿ ‘ಮಾನಸಿಕ ಆರೋಗ್ಯ ಮತ್ತು ವಿಭಿನ್ನ ಲಿಂಗಿಗಳ ಸಮುದಾಯ : ಯಾತನೆಗೆ ಕಾರಣಗಳು ಮತ್ತು ಆಪ್ತಸಮಾಲೋಚನೆಯ ಸಾಧ್ಯತೆಗಳು’ ಎಂಬ ವಿಷಯದ ಕುರಿತು ಸಂವಾದ ನಡೆಯಿತು. ವಿಭಿನ್ನ ಲಿಂಗಿಗಳು ಅನುಭವಿಸುವ ಮಾನಸಿಕ ಯಾತೆನೆಯ ಕಾರಣಗಳನ್ನು ಅರ್ಥ ಮಾಡಿಕೊಳ್ಳುವುದು ಹಾಗೂ ಶೀಘ್ರದಲ್ಲೇ ಅವರ ಸಹಾಯಕ್ಕಾಗಿ ಸಕ್ರಿಯ ಬೆಂಬಲಿಗರ ತಂಡಗಳನ್ನು ರೂಪಿಸುವ ಕುರಿತು ಈ ಸಂವಾದದ ಮುಖ್ಯ ಉದ್ದೇಶವಾಗಿತ್ತು. ಬೆಂಗಳೂರಿನ ಸ್ವಭಾವ ಟ್ರಸ್ಟ್’ನ ಕಾರ್ಯಕಾರಿ ನಿರ್ದೇಶಕ ವಿನಯ್ ಚಂದ್ರನ್ ಈ ಅಧಿವೇಶನವನ್ನು ಮುನ್ನಡೆಸಿದರು. ಈ ಕಾರ್ಯಕ್ರಮವು ಸಾರ್ವಜನಿಕರಿಗೆ ಮುಕ್ತವಾಗಿದ್ದು, ಸ್ವಭಾವ, (All Sorts of Queer), ಗುಡ್ ಆ್ಯಸ್ ಯು, ಜೀವ ಮತ್ತು ಕ್ವೀರ್ ಕ್ಯಾಂಪಸ್ ಬೆಂಗಳೂರು – ಸಹಯೋಗದಲ್ಲಿ ಆಯೋಜನೆಗೊಂಡಿತ್ತು.

ಎಂ.ಎಸ್.ರಾಮಯ್ಯ ಮೆಡಿಕಲ್ ಕಾಲೇಜ್ & ಹಾಸ್ಪಿಟಲ್ಸ್’ನ ಕ್ಲಿನಿಕಲ್ ಸೈಕಾಲಜಿಸ್ಟ್ ಮೋಹನ್ ರಾಜು, ಭಿನ್ನ ಲಿಂಗಿಗಳ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಚಟುವಟಿಕೆ ನಡೆಸುತ್ತಿರುವ NGO ಸಂಸ್ಥೆ ‘ಜೀವ’ದ ಸಂಸ್ಥಾಪಕ ಉಮೇಶ್ ಪಿ., ಕ್ವೀರ್ ಕ್ಯಾಂಪಸ್ ಬೆಂಗಳೂರು ಸಂಸ್ಥೆಯ ಅನುರಾಗ್ ನಾಯರ್ ಹಾಗೂ ASQ ಸಂಸ್ಥೆಯ ರೋಹಿಣಿ ವೆಂಕಟೇಶ್ ಮಳೂರ್ ಈ ಕಾರ್ಯಕ್ರಮದ ಪ್ರಮುಖ ಮಾತುಗಾರರಾಗಿದ್ದರು. ಇವರು ತಮ್ಮ ವಿಷಯ ಮಂಡನೆಯ ಮೂಲಕ ಚರ್ಚೆಗೆ ಚಾಲನೆ ನೀಡಿದರೆ, ಸಭಿಕರು ಪ್ರಶ್ನೋತ್ತರಗಳ ಮೂಲಕ ಸಂವಾದವನ್ನು ಮುಂದಕ್ಕೆ ಕೊಂಡೊಯ್ದರು.

ಲಿಂಗಾಂತರ ಶಸ್ತ್ರಚಿಕಿತ್ಸೆ (Sex Reassignment Surgery), ಹಾರ್ಮೋನ್ ಚಿಕಿತ್ಸೆ, ಸ್ವಯಂವೈದ್ಯದಿಂದ ಉಂಟಾಗುವ ಸಮಸ್ಯೆಗಳು, ಭಿನ್ನಲಿಂಗಿಗಳ ಸಮುದಾಯದೊಳಗಿನ ಸಂಬಂಧಗಳು, ಸಮಾಜದೊಳಗಿನ ತಾರತಮ್ಯ – ಇವು ಸಂವಾದದಲ್ಲಿ ಚರ್ಚೆಯಾದ ಪ್ರಮುಖ ವಿಷಯಗಳು. ಈ ಸಮುದಾಯದವರು ಮನೆ ಪಡೆಯುವುದು, ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣ ಮೊದಲಾದ ವಿಷಯಗಳಲ್ಲಿಯೂ ಸಾಕಷ್ಟು ಸಮಸ್ಯೆ ಅನುಭವಿಸುತ್ತಾರೆ.

ಮತ್ತು ಈ ಮೇಲಿನ ಕಾರಣಗಳ ಜೊತೆಗೆ ಇನ್ನೂ ಹಲವು ಕಾರಣಗಳಿಂದ ಮಾನಸಿಕ ಸಮಸ್ಯೆಗೆ ಒಳಗಾಗುವ ಇವರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ, ಅದು ಉಲ್ಬಣಗೊಳ್ಳುವ ಅಪಾಯವೇ ಹೆಚ್ಚು. ಔಷಧಗಳು, ಚಿಕಿತ್ಸೆ, ಸಮಾಲೋಚನೆ, ಸಹಾಯವಾಣಿ ಮತ್ತು ವೈದ್ಯರು ತೋರುವ ತಾರತಮ್ಯಗಳ ಬಗ್ಗೆಯೂ ಚರ್ಚೆಗಳು ನಡೆದವು.

ಸಕಾರಾತ್ಮಕ ಸಂಕಲ್ಪದೊಂದಿಗೆ ಸಮಾರೋಪ ಮಾತುಗಳನ್ನಾಡಿದ ವಿನಯ್ ಚಂದ್ರನ್; “ಭಿನ್ನ ಲಿಂಗಿಗಳನ್ನು ನಮ್ಮೊಳಗೆ ಒಬ್ಬರಂತೆ ಸಹಜವಾಗಿ ಸ್ವೀಕರಿಸುವ, ಅವರನ್ನು ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಮೂಲಕ ತಾರತಮ್ಯವನ್ನು ಹೋಗಲಾಡಿಸಲು ಪ್ರಯತ್ನಿಸಬಹುದು” ಎಂದು ಅಭಿಪ್ರಾಯಪಟ್ಟರು. ಮತ್ತು. ಈ ನಿಟ್ಟಿನಲ್ಲಿ, ಶೀಘ್ರದಲ್ಲಿಯೇ ಕಾರ್ಯಪ್ರವೃತ್ತರಾಗುವ ಸಂಕಲ್ಪ ತೊಟ್ಟರು.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org