ನೆಲೆ ಬದಲಾಯಿಸುವ ಕಷ್ಟಸುಖ: ಜನರೊಡನೆ ಬೆರೆಯತೊಡಗಿದ್ದು ನನ್ನಲ್ಲೂ ಬದಲಾವಣೆ ತಂದಿತು

ಅಮೆರಿಕಾದಲ್ಲಿ ವಾಸ್ತವ್ಯ ಹೂಡಿದ ರಿತು ಮೆಹ್ತಾ ಆರಂಭದ ದಿನಗಳಲ್ಲಿ ಅಲ್ಲಿಗೆ ಹೊಂದಿಕೊಳ್ಳಲು ವಿಪರೀತ ಕಷ್ಟಪಟ್ಟರು. ನಂತರದ ದಿನಗಳಲ್ಲಿ ಹೊಂದಾಣಿಕೆ ಮಾಡಿಕೊಂಡು, ಸಮಸ್ಯೆಗಳಿಂದ ಹೊರಬರಲು ಅವರಿಗೆ ಸಾಧ್ಯವಾಯಿತು.

2006ರ ಅವಧಿಯಲ್ಲಿ ನಾನು ದೆಹಲಿಯ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ನನ್ನ ಔದ್ಯೋಗಿಕ ಜೀವನ ಅದ್ಭುತವಾಗಿತ್ತು. ಪ್ರಯಾಣಗಳು ಮತ್ತು ವೃತ್ತಿ ಜೀವನದ ಪ್ರಗತಿಗಳೆರಡೂ ವೇಗವಾಗಿ ಸಾಗಿದ್ದವು. ನನ್ನ ಕುಟುಂಬ ಸದಾ ನನ್ನ ಬೆನ್ನಿಗಿದ್ದು, ಪ್ರತಿಯೊಂದು ಬಗೆಯ ಸಹಕಾರವನ್ನು ನೀಡುತ್ತಿತ್ತು.

ನಾನು ಮದುವೆಯಾದ ನಂತರ ಗಂಡನೊಡನೆ ಅಮೆರಿಕಾದಲ್ಲಿ ನೆಲೆಸಬೇಕಾಗಿ ಬಂತು. ಈ ಬದಲಾವಣೆ ನನ್ನ ಪಾಲಿಗೆ ಭಯಾನಕವಾಗಿತ್ತು. ಮಹಾನಗರದಲ್ಲಿ ಹಗಲಿರುಳೂ ಕೆಲಸದಲ್ಲಿ ಮುಳುಗಿರುತ್ತಿದ್ದ ನಾನು, ಮಿಚಿಗನ್’ನ ಪುಟ್ಟ ಪಟ್ಟಣದಲ್ಲಿ ನಿಧಾನವಾಗಿ ಸರಿಯುವ ಬದುಕಿಗೆ ಹೊಂದಿಕೊಳ್ಳಬೇಕಿತ್ತು. ನನ್ನ ಜಗತ್ತು ಈಗ ಕೇಲವ ಒಬ್ಬನೇ ವ್ಯಕ್ತಿ ಹಿಡಿಸುವಷ್ಟು ಕುಗ್ಗಿಹೋಗಿತ್ತು.

ಮತ್ತು ಆತ, ನಾನು ಆವರೆಗೆ ಸಂಪೂರ್ಣವಾಗಿ ಅರಿತಿರದೆ ಇದ್ದ ನನ್ನ ಗಂಡನಾಗಿದ್ದ. ನನ್ನ ಕುಟುಂಬ, ಗೆಳೆಯರ ಬಳಗ, ಉದ್ಯೋಗ ಎಲ್ಲವೂ ನನ್ನಿಂದ ದೂರವಾಗಿದ್ದವು. ಮೊದಲ ಕೆಲವು ತಿಂಗಳ ಕಾಲ ನಾನು ನಾನಾಗಿರಲಿಲ್ಲ. ಹೊಸ ಬಗೆಯ ಬದುಕಿಗೆ ಹೊಂದಿಕೊಳ್ಳಲು ವಿಪರೀತ ಕಷ್ಟವಾಗತೊಡಗಿತು. ನನ್ನ ಗಂಡನನ್ನೇ ಆಪ್ತಗೆ ಳೆಯನನ್ನಾಗಿ ಮಾಡಿಕೊಳ್ಳುವ ಬದಲು ಒಂಟಿತನ ಅನುಭವಿಸತೊಡಗಿದೆ. ಈ ನಡುವೆ ನನ್ನ ತಂದೆಗೆ ಚಿಕ್ಕದೊಂದು ಸರ್ಜರಿ ನಡೆಯಿತು. ಇದೇ ಮೊದಲ ಬಾರಿಗೆ ನಾನು ನನ್ನ ಕುಟುಂಬದಲ್ಲಿ ಜರುಗಿದ ಮುಖ್ಯ ಘಟನೆಯಲ್ಲಿ ಜೊತೆಗಿಲ್ಲವಾಗಿದ್ದೆ. ಇದು ನನಗೆ ಭಾವನಾತ್ಮಕವಾಗಿ ವಿಪರೀತ ನೋವು ನೀಡಿತು. ಬೇಕೆಂದಾಗ ಭಾರತಕ್ಕೆ ಪ್ರಯಾಣ ಬೆಳೆಸಿ ನನ್ನ ತಂದೆ ತಾಯಿಯರನ್ನು ಭೇಟಿ ಮಾಡುವುದು ಸುಲಭ ಸಾಧ್ಯವಲ್ಲ ಎಂಬುವುದು ನನ್ನ ಒಂಟಿತನವನ್ನು ಮತ್ತಷ್ಟು ಹೆಚ್ಚಾಯಿತು.

ಕ್ರಮೇಣ ನನ್ನ ಬದುಕು ಬದಲಾವಣೆಗೆ ತೆರೆದುಕೊಳ್ಳತೊಡಗಿತು. ವಾರಾಂತ್ಯಗಳಲ್ಲಿ ನನ್ನ ಗಂಡನ ಸಹೋದ್ಯೋಗಿಗಳನ್ನು ಮನೆಗೆ ಆಹ್ವಾನಿಸಿ ಚಿಕ್ಕ ಸಂತೋಷ ಕೂಟಗಳನ್ನು ಏರ್ಪಡಿಸತೊಡಗಿದೆ. ನನ್ನ ವಾರಾಂತ್ಯಗಳು ಉಲ್ಲಸಿತಗೊಳ್ಳತೊಡಗಿದವು. ಮನೆಯಲ್ಲಿ ನಗು, ಮಾತು, ಹರಟೆಗಳು ಕೇಳತೊಡಗಿದವು. ನಾನು ಪಟ್ಟಣದ ಸಾಮಾಜಿಕ ಗುಂಪುಗಳನ್ನು ಪರಿಚಯ ಮಾಡಿಕೊಂಡು ಒಡನಾಡತೊಡಗಿದೆ. ಆನ್ಲೈನ್ ಕೋರ್ಸ್’ಗಳನ್ನು ಮಾಡಿಕೊಂಡೆ. ಒಂದು ಸಂಸ್ಥೆಯೊಡನೆ ಒಪ್ಪಂದ ಮಾಡಿಕೊಂಡು ಅದಕ್ಕಾಗಿ ಕೆಲಸ ಮಾಡಿದೆ. ಈ ವೇಳೆಗೆ ನನ್ನ ವರ್ಕ್ ಪರ್ಮಿಟ್ ದೊರೆಯಿತು. ಈ ಎಲ್ಲವೂ ನನ್ನ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತುಂಬಿದವು. ನಾನು ಒಂಟಿತನದ ಭಾವನೆಯಿಂದ ಹೊರಬಂದೆ.

ಆಗ ನಾನು ಖುಷಿಯಾಗಿದ್ದೆ. ಮೊದಲ ಬಾರಿಗೆ ಕಾಫಿಯ ಘಮವನ್ನು ಆಸ್ವಾದಿಸಬಲ್ಲವಳಾಗಿದ್ದೆ. ನನ್ನ ಕೂದಲನ್ನು ಸವರಿ ಸುಳಿಯುವ ಗಾಳಿಯನ್ನು ಅನುಭವಿಸತೊಡಗಿದೆ. ನನ್ನ ನಕಾರಾತ್ಮಕ ಚಿಂತನೆಗಳನ್ನು ಬಿಟ್ಟೆ.

ವರ್ಷದ ನಂತರ, ನಾವು ಹೊಸ ಉದ್ಯೋಗದೊಡನೆ ಸ್ಯಾನ್ ಡಿಯಾಗೋ, ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದೆವು. ಅದರ ಜೊತೆಗೆ ಬದುಕೂ ಬದಲಾವಣೆ ಕಂಡಿತು. ಆದರೆ ನಾನೀಗ ಅವೆಲ್ಲವನ್ನೂ ನಿಭಾಯಿಸಲು ಕಲಿತಿದ್ದೇನೆ.

ಕೆಲವು ವರ್ಷಗಳ ಹಿಂದೆ ನಾವು ಭಾರತಕ್ಕೆ ಮರಳಿದೆವು. ಈಗ ನಮ್ಮ ಕುಟುಂಬಕ್ಕೆ ಅತಿ ಹತ್ತಿರದಲ್ಲಿಯೇ ವಾಸಿಸುತ್ತಿದ್ದೇವೆ. ನಾನೀಗ ಮತ್ತೆ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುತ್ತಿದ್ದೇನೆ. ಮಾಸದ ನಗು ನನ್ನ ಮುಖದಲ್ಲಿ ನೆಲೆಸಿರುತ್ತದೆ.

ಇಷ್ಟು ವರ್ಷಗಳ ಅನುಭವದಿಂದ ನನ್ನಲ್ಲಿ ಒಂದು ವಿಷಯವಂತೂ ಮನದಟ್ಟಾಗಿದೆ. ಆ ದಿನಗಳಲ್ಲಿ ನನ್ನನ್ನು ಕಷ್ಟಕ್ಕೀಡು ಮಾಡಿದ್ದು ಅಮೆರಿಕವೂ ಅಲ್ಲ, ನಾನಿದ್ದ ಯಾವುದೇ ಪಟ್ಟಣವೂ ಅಲ್ಲ. ಭರವಸೆಯಿಂದ ಬೆಳಕಿನ ಕಡೆ ನೋಡಲು ಸಾಧ್ಯವಾಗದ ನನ್ನ ವೈಫಲ್ಯವೇ ಕಷ್ಟಗಳಿಗೆ ಕಾರಣ. ನಾನು ನನ್ನ ಬಳಿ ಏನಿಲ್ಲವೋ ಅದರ ಬಗ್ಗೆ ಯೋಚಿಸುತ್ತಿದ್ದೆ ಹೊರತು ಏನಿದೆಯೋ ಅದರ ಬಗ್ಗೆ ಅಲ್ಲ.

ಈಗ ನಾನು ಭಾರತಕ್ಕೆ, ನನ್ನ ಜನರ ಜೊತೆ ಇರಲು ಮರಳಿದ್ದೇನೆ. ಆದರೂ ಅಮೆರಿಕದ ಬದುಕನ್ನು ಮಿಸ್ ಮಾಡಿಕೊಳ್ತಿದ್ದೇನೆ.

ರಿತು ಮೆಹ್ತಾ ಚಾರ್ಟರ್ಡ್ ಅಕೌಂಟೆಂಟ್ ಹಾಗೂ 15 ವರ್ಷಕ್ಕೂ ಹೆಚ್ಚು ಅನುಭವ ಇರುವ ಸರ್ಟಿಫೈಡ್ ಕ್ಯಾರೀರ್ ಕೋಚ್ ಆಗಿದ್ದಾರೆ.

ಈ ಕಥನವನ್ನು ‘ಬಿಯಾಂಡ್ ರಿಲೊಕೇಶನ್’ ಸರಣಿಯಿಂದ ಆಯ್ದುಕೊಳ್ಳಲಾಗಿದೆ. ವಾಸ್ತವ್ಯ ಬದಲಾವಣೆಯು ಹೇಗೆ ಭಾವನಾತ್ಮಕ ಹಾಗೂ ಮಾನಸಿಕ ಪರಿಣಾಮಗಳನ್ನು ಬೀರುತ್ತದೆ ಅನ್ನುವುದನ್ನು ಈ ಸರಣಿಯು ಹೇಳುತ್ತದೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org