ನೆಲೆ ಬದಲಾಯಿಸುವ ಕಷ್ಟಸುಖ: ಅಪರಿಚಿತ ನಗರದಲ್ಲಿ ಚಿಕ್ಕಪುಟ್ಟ ಸಂಗತಿಗಳೂ ನನ್ನನ್ನು ಬಾಧಿಸತೊಡಗಿದ್ದವು

ಹೊಸ ನಗರದಲ್ಲಿ ನೆಲೆ ಕಂಡುಕೊಂಡ ಅನುಭವ

"ನನ್ನ ಪರಿಚಯವೇ ಯಾರಿಗೂ ಇರದಂಥ ಕಡೆಗೆ ಹೋಗಿದ್ದು ಬಿಡಬೇಕು!"

ಇಂಥದೊಂದು ಯೋಚನೆಯೊಂದಿಗೆ ನಾನು ಬರೋಡಾದಿಂದ ಮುಂಬಯಿಗೆ ಬಂದು ನೆಲೆಸಿದೆ. ನಾನು ಕೆಲಸ ಮಾಡುತ್ತಿದ್ದ ಕಂಪನಿಯ ಮುಖ್ಯ ಕಚೇರಿ ಅಲ್ಲಿತ್ತು. ಈ ಹಿನ್ನೆಲೆಯ ಓಡಾಟದಲ್ಲಿ ನನಗೆ ಈ ನಗರದ ಅಲ್ಪಸ್ವಲ್ಪ ಪರಿಚಯವಿತ್ತು. ಮುಂಬಯಿಯಲ್ಲಿ ನನಗೆ ಯಾವುದೇ ಗೆಳೆಯರಾಗಲೀ ಸಂಬಂಧಿಕರಾಗಲೀ ಇರಲಿಲ್ಲ. ಇಲ್ಲಿಯ ಕಾಸ್ಮೋಪಾಲಿಟನ್ ಪರಿಸರದಲ್ಲಿ ಭಾಷೆ ಅಡ್ಡಿಯಾಗಲಾರವು, ಆದ್ದರಿಂದ ಇಲ್ಲಿಗೆ ಸ್ಥಳಾಂತರವಾಗುವುದು ಸುಲಭ ಎಂದು ನಾನು ನಿರೀಕ್ಷಿಸಿದ್ದೆ.

ಹತ್ತು ವರ್ಷಗಳ ಕಾಲ ಕೆಲಸ ಮಾಡಿದ್ದ ಆಫೀಸ್ ತೊರೆದು, ಮನೆಯನ್ನೂ, ನನಗೆ ಆರಾಮ ನೀಡುತ್ತಿದ್ದ ಪ್ರತಿಯೊಂದು ಸವಲತ್ತುಗಳನ್ನೂ, ಪರಿಚಿತರನ್ನೂ ತೊರೆದು, ಉತ್ಸಾಹದಿಂದ ನಾನು ಅಪರಿಚಿತ ನಗರಕ್ಕೆ ಬಂದೆ. ಆದರೆ ಅದು ನಾನು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ.

ಆರಂಭದ ಆರು ತಿಂಗಳು ಭಯಾನಕವಾಗಿದ್ದವು. ನನ್ನ ಅಗತ್ಯಗಳನ್ನು ಪೂರೈಸಿಕೊಳ್ಳುವುದು ಒಂದು ಸವಾಲಾಗಿತ್ತು. ಆಹಾರದಿಂದ ಹಿಡಿದು ನನ್ನೆಲ್ಲಾ ಅಗತ್ಯಗಳು ಎಲ್ಲವನ್ನೂ ಹೊಂದಿಸಿಕೊಳ್ಳಬೇಕಿತ್ತು. ಜೊತೆಗೆ, ಬಹಳ ಬೇಗ ಒತ್ತಡಕ್ಕೆ ಒಳಗಾಗುತ್ತಿದ್ದ ನಾನು ಅದರಿಂದ ಕಾಯಿಲೆ ಬೀಳುತ್ತಿದ್ದೆ. ನನ್ನ ಕಾಲಮೇಲೆ ನಾನು ನಿಲ್ಲುವುದು ಒಂದು ಬಹಳ ದೊಡ್ಡ ಸವಾಲಾಗಿತ್ತು..

ನಾನು ಈ ಹಿಂದೆ ಭೇಟಿ ನೀಡುತ್ತಿದ್ದ ಮುಂಬಯ್, ಈಗ ನಾನು ವಾಸಿಸುತ್ತಿರುವ ಮುಂಬಯಿಗಿಂತ ಬೇರೆಯದೇ ಬಗೆಯಲ್ಲಿತ್ತು. ಪ್ರತಿಯೊಬ್ಬರೂ ಈ ನಗರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದರು. ಆದರೆ ಯಾರೊಬ್ಬರೂ ಇಲ್ಲಿನ ಕೊರತೆಗಳ ಬಗ್ಗೆ ಹೇಳುತ್ತಿರಲಿಲ್ಲ. ನೀರಿನ ಸಮಸ್ಯೆ, ಗಂಟೆಗಟ್ಟಲೆ ಪ್ರಯಾಣ, ಚಿಕ್ಕ ಗೂಡುಗಳಂಥ ಮನೆಗಳು, ಗಿಜಿಗುಡುವ ಟ್ರಾಫಿಕ್, ವಾಯು ಮತ್ತು ಶಬ್ದ ಮಾಲಿನ್ಯ – ನಗರದ ಪ್ರತಿಯೊಂದು ಸಂದಿಮೂಲೆಗಳಲ್ಲೂ ಈ ಸಮಸ್ಯೆಗಳು ತುಂಬಿಕೊಂಡಿದ್ದವು. ಎಲ್ಲಕ್ಕಿಂತ ದೊಡ್ಡ ಸಮಸ್ಯೆ ಎಂದರೆ, ಒಂದು ಜಾಗದಿಂದ ಇನ್ನೊಂದು ಕಡೆಗೆ ಪ್ರಯಾಣಿಸಲು ತೆಗೆದುಕೊಳ್ತಿದ್ದ ಅವಧಿ. ನನ್ನ ಚಿಕ್ಕ ಪಟ್ಟಣದಲ್ಲಿ 2 ಗಂಟೆ ಪ್ರಯಾಣಿಸಿ ಬೇರೆ ಊರಿಗೆ ತಲುಪಬಹುದಾಗಿತ್ತು. ಆದರೆ ಇಲ್ಲಿ, ಮನೆಯಿಂದ ಹೊರಗೆ ಹೊರಟರೆ ಗಂಟೆಗಟ್ಟಲೆ ಪ್ರಯಾಣ ಮಾಡಬೇಕಿದ್ದುದು ನನ್ನಲ್ಲಿ ಚಡಪಡಿಕೆ ಹುಟ್ಟಿಸುತ್ತಿತ್ತು.

ಹೀಗೆ ಮೂರು ವರ್ಷಗಳನ್ನು ಕಳೆದಿರುವ ನಾನೀಗ ಬಹಳ ದೂರ ಸಾಗಿ ಬಂದಿದ್ದೇನೆ. ಇಲ್ಲಿಗೆ ಬಂದಾಗ ನಾನು ಸಂಕೋಚ ಹೆಚ್ಚಾಗಿತ್ತು. ಆದರೀಗ ನನ್ನಲ್ಲಿ ಆತ್ಮವಿಶ್ವಾಸ ತುಂಬಿಕೊಂಡಿದೆ. ನನ್ನ ಮಾತುಗಳನ್ನು ನಾನು ಕೇಳಿಸಿಕೊಳ್ಳುವುದು, ನನ್ನ ಆಲೋಚನೆಗಳೊಡನೆ ಹೆಜ್ಜೆ ಹಾಕುವುದು ಎಷ್ಟು ಮುಖ್ಯ ಎಂಬುದನ್ನು ಈ ನಗರ ನನಗೆ ಕಲಿಸಿಕೊಟ್ಟಿದೆ. ಇದರಿಂದ ನನ್ನನ್ನು ನಾನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿದೆ. ಯಾವೆಲ್ಲದರ ಬಗ್ಗೆ ನಾನು ಚಿಂತೆ ಮಾಡುತ್ತಾ ಒತ್ತಡಕ್ಕೆ ಒಳಗಾಗುತ್ತಿದ್ದೆನೋ, ಅವೆಲ್ಲವೂ ಈಗ ದೊಡ್ಡ ವಿಷಯ ಎನಿಸುವುದಿಲ್ಲ

ಆ ದಿನಗಳಲ್ಲಿ ನಾನು ಯಾವುದಾದರೂ ಒಂದು ಪರಿಚಿತ ಮುಖ ನನ್ನನ್ನು ನೋಡಿ ಮುಗುಳ್ನಗಬಾರದೇ, ಹೇಗಿದ್ದೀಯ ಎಂದು ವಿಚಾರಿಸಬಾರದೇ ಎಂದೆಲ್ಲ ಹಪಹಪಿಸುತ್ತಿದ್ದೆ. ಇವತ್ತಿನ ಪರಿಸ್ಥಿತಿ ಹೇಗಿದೆಯೆಂದರೆ, ನಾನು ಲೋಕಲ್ ಟ್ರೈನಿನಲ್ಲಿ ಪ್ರಯಾಣಿಸುವಾಗೆಲ್ಲ ಒಂದಲ್ಲ ಒಂದು ಪರಿಚಿತ ಮುಖ ನನ್ನತ್ತ ಮುಗುಳ್ನಗೆ ಬೀರುತ್ತದೆ. ನಾವು ಒಬ್ಬರೊಬ್ಬರ ಹೆಸರನ್ನು ತಿಳಿದಿರಬೇಕೆಂದಿಲ್ಲ. ಒಂದು ತಲೆದೂಗುವಿಕೆ, ಒಂದು ನಗೆ, ಮೃದುವಾದ ಹಾರೈಕೆ – ಪರಿಚಯಕ್ಕೆ ಇಷ್ಟು ಸಾಕು. ಬಹುತೇಕವಾಗಿ ನಾವಿದನ್ನು ಗಮನಿಸಿಯೇ ಇರುವುದಿಲ್ಲ.

ಇವೆಲ್ಲವನ್ನೂ ನೆನೆಯುವಾಗ ನನಗೆ ನನ್ನ ಆಪ್ತ ಗೆಳೆಯನ ನೆನಪಾಗುತ್ತದೆ. ಅವನೀಗ ಮುಂಬಯಿಯಲ್ಲಿ ಇಲ್ಲ. ಅವನು ನನಗೆ ಈ ಮಹಾನಗರಿಗೆ ಹೊಂದಿಕೊಳ್ಳಲು ಅಗತ್ಯವಿರುವ ಪಾಠಗಳನ್ನು ಕಲಿಸಿದ್ದ. ಬದುಕುಳಿಯಲು ಮುಖ್ಯವಾಗಿ ಬೇಕಾದ ವಿಷಯಗಳ ಪರಿಚಯ ಮಾಡಿಸಿದ್ದ. ಆ ಗೆಳೆಯ ನನ್ನ ಸಂಕಟ ವನ್ನು ಪರಿಹರಿಸುವ ತಾಯಿಯಂತಿದ್ದ. ನನ್ನ ಎಮರ್ಜೆನ್ಸಿ ನಂಬರ್, ಹೆಲ್ಪ್ ಲೈನ್ ಎಲ್ಲವೂ ಆಗಿದ್ದ.

ಈ ನಗರದಲ್ಲಿ ಆರಾಮ ಕಂಡುಕೊಳ್ಳಲು ವಿಹಾರ, ಹೊಸ ಜಾಗಗಳ ಪರಿಚಯ, ನನ್ನದೇ ಆದ ವಿರಾಮ ಸ್ಥಳ – ಇತ್ಯಾದಿ. ಬೇಸರವಾದಾಗೆಲ್ಲ ಭೇಟಿ ಕೊಡಬಹುದಾದ, ಶಾಪಿಂಗ್ ಮಾಡಬಹುದಾದ ನನ್ನ ಮೆಚ್ಚುಗೆಯ ಜಾಗಗಳ ಲಿಸ್ಟ್ ತಯಾರಿಸಿಕೊಳ್ಳುವುದೂ ಅದರಲ್ಲಿ ಸೇರಿತ್ತು. ನಂತರದಲ್ಲಿ ನನಗೆ ಈ ನಗರ ನನ್ನ ಸ್ವಂತದ್ದೇ ಅನ್ನಿಸುವಷ್ಟು ಆಪ್ತವಾಗತೊಡಗಿತು.

ನಿಜ…ಅಪರಿಚಿತವಾದದ್ದು ನಿಮ್ಮನ್ನು ಹೆದರಿಸುತ್ತದೆ. ಪರಿಚಯ ಬೆಳೆಸಿಕೊಂಡರೆ, ಅದು ನಮ್ಮದೇ ಆಗಿಹೋಗುತ್ತದೆ, ಆರಾಮ ನೀಡುತ್ತದೆ.

ನಮ್ರತಾ ಮೂಲತಃ ಇನ್ವೆಸ್ಟ್’ಮೆಂಟ್ ಬ್ಯಾಂಕರ್ ಆಗಿದ್ದು, ಇದೀಗ ಪೂರ್ಣಪ್ರಮಾಣದ ಬರಹಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಇವರು ಮುಂಬೈನಲ್ಲಿ ನೆಲೆಸಿದ್ದಾರೆ.

(ಈ ಕಥನವನ್ನು ‘ಬಿಯಾಂಡ್ ರಿಲೊಕೇಶನ್’ ಸರಣಿಯಿಂದ ಆಯ್ದುಕೊಳ್ಳಲಾಗಿದೆ. ವಾಸ್ತವ್ಯ ಬದಲಾವಣೆಯು ಹೇಗೆ ಭಾವನಾತ್ಮಕ ಹಾಗೂ ಮಾನಸಿಕ ಪರಿಣಾಮಗಳನ್ನು ಬೀರುತ್ತದೆ ಅನ್ನುವುದನ್ನು ಈ ಸರಣಿಯು ಹೇಳುತ್ತದೆ.)

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org