ಸಮಾಜ ಮತ್ತು ಮಾನಸಿಕ ಆರೋಗ್ಯ

ವಾಸುವಿನ ಪ್ರಪಂಚ- ಭ್ರಮೆಯಿಂದ ವಾಸ್ತವದ ಕಡೆಗೆ

ಬಿ. ಎಂ. ರವಿ

ನಗರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪದವಿ ವ್ಯಾಸಾಂಗ ಮಾಡುತ್ತಿದ್ದ ವಾಸು, ಅನುದಿನವೂ ಉತ್ಸಾಹದಿಂದ ಕಾಲ್ನಡಿಗೆಯಲ್ಲಿ ಕಾಲೇಜಿಗೆ ಹೋಗಿ ಬರುತ್ತಿದ್ದ. ಒಂದಿನ ಇದ್ದಕ್ಕಿದ್ದಂತೆ ಕಾಲೇಜಿಗೆ ಹೋಗುವುದಿಲ್ಲವೆಂದೂ, ದಾರಿ ಮಧ್ಯೆ ತಡೆದು ನನ್ನನ್ನು ಹೊಡೆಯಲು ಯಾರೋ ಬರುತ್ತಾರೆಂದೂ ಹಠ ಹಿಡಿದು ಮನೆಯ ಮೂಲೆಯೊಂದರಲ್ಲಿ ಅನ್ಯಮನಸ್ಕನಾಗಿ ಕುಳಿತುಬಿಟ್ಟ. ದಿನಗಳೆದಂತೆ ಅವನಲ್ಲಿ ಅಸಹಜ ವರ್ತನೆ ಮತ್ತು ಅಸಹಜ ಚಟುವಟಿಕೆಗಳು ತೀವ್ರಗತಿಯಲ್ಲಿ ಕಂಡುಬರತೊಡಗಿದವು. ಇದು ಅವನ ಪಾಲಕರಿಗೆ ಏನೆಂದು ಅರ್ಥವಾಗದೇ, ಅವನಿಗೆ ಧೈರ್ಯ ತುಂಬುವುದು ಹೇಗೆ ಮತ್ತು ಸಮಾಧಾನ ಮಾಡುವುದು ಹೇಗೆ ಎಂಬ ಹತಾಶೆ ಶುರುವಾಯಿತು. 

“ಇನ್ಮುಂದೆ ನಾನು ಇಲ್ಲಿರಲಾರೆ, ನನ್ನನ್ನು ಅಜ್ಜಿಯ ಊರಿಗೆ ಕಳಿಸಿಬಿಡಿ” ಅಂತ ಒಂದೇ ಸಮನೇ ಒತ್ತಾಯ ಮಾಡತೊಡಗಿದ. ಅವನ ಒತ್ತಾಸೆಯಂತೆ ಅವನನ್ನು ಅಜ್ಜಿಯ ಊರಿಗೆ ಕರೆದೊಯ್ದರು. ಆದರೆ ಅಲ್ಲಿಯೂ ಕೂಡ ಇದೇ ಸಮಸ್ಯೆ ಶುರುವಾಯಿತು. ಯಾರೋ ರೌಡಿಗಳು ನನ್ನ ಮನೆಯೊಳಗೆ ನುಗ್ಗಿ ನನ್ನನ್ನು ಹೊಡೆಯಲು ಬರುತ್ತಾರೆಂದು ಪೇಚಾಡತೊಡಗಿದ. ಈತನ ಈ ಅಸಹಜ ವರ್ತನೆಯನ್ನು ಕಂಡ ಅಜ್ಜ-ಅಜ್ಜಿಯರಿಗೆ ಮೊಮ್ಮಗನ ಬಗ್ಗೆ ಯೋಚನೆ ಪ್ರಾರಂಭವಾಯಿತು.

ಅಂದು ತಾವು ಹುಟ್ಟಿದ ಊರಿನಲ್ಲಿ ಜಾತ್ರಾ ಮಹೋತ್ಸವ ಇತ್ತು. ಸಂಜೆಯ ವೇಳೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪುಷ್ಪಾಲಂಕೃತ ರಥವನ್ನು ಭಕ್ತಾದಿಗಳು ಎಳೆಯುವ ಕಾರ್ಯಕ್ರಮ ಇತ್ತು. ಪ್ರತಿನಿತ್ಯ ಸಂಜೆಯಿಂದ ಮಧ್ಯರಾತ್ರಿಯವರೆಗೆ ಪ್ರವಚನ-ಸಂಗೀತ-ಭಜನೆ-ನಾಟಕಗಳ ಪ್ರದರ್ಶನಗಳಿದ್ದು, ಅಲ್ಲಿಯ ವಾತಾವರಣದಿಂದ ಮೊಮ್ಮಗನಿಗೆ ಒಳ್ಳೆಯದಾಗಬಹುದು ಎಂದು ಆಲೋಚಿಸಿದ ಅಜ್ಜ-ಅಜ್ಜಿ, ಈ ವಿಷಯವನ್ನು ವಾಸುವಿನ ಪೋಷಕರಿಗೆ ತಿಳಿಸಿದರು.

ಅವರ ಸಲಹೆಯಂತೆ ಮರುದಿನವೇ ಹಳ್ಳಿಯತ್ತ ಪಯಣ ಬೆಳಸಲಾಯಿತು. ಆ ದಿನ ಮಠದಲ್ಲಿ ಯಾವುದೇ ಅಡೆತಡೆಯಿಲ್ಲದೇ ಪೂಜಾ ಕಾರ್ಯಕ್ರಮ ಸುಗಮವಾಗಿ ನೆಡೆಯುತ್ತಿತ್ತು. ಇದೇ ಸಮಯಕ್ಕೆ ಇದ್ದಕ್ಕಿದ್ದಂತೆ ವಾಸು ನೆಲದ ಮೇಲೆ ಉರುಳಾಡತೊಡಗಿದ. ಅವನ ದೇಹ ಆಳೆತ್ತರಕ್ಕೆ ಹಾರಿ, ಎಚ್ಚರ ತಪ್ಪಿ ದೊಪ್ಪೆಂದು ಕೆಳಗೆ ಬಿದ್ದ. ಇದನ್ನು ಕಂಡ ಮಠದ ಸ್ವಾಮೀಜಿಯೊಬ್ಬರು ತಮ್ಮ ಕೈಯಲ್ಲಿದ್ದ ನೀರಿನ ಕುಂಡಲಿಯಿಂದ ನೀರನ್ನು ತಮ್ಮ ಕೈಗೆ ಸುರುವಿಕೊಂಡು ವಾಸುವಿನ ಮುಖಕ್ಕೆ ಚಿಮುಕಿಸಿದರು. ಕೆಲವು ನಿಮಿಷಗಳ ನಂತರ ಎಚ್ಚರಗೊಂಡ ವಾಸು, ಸಹಜ ಸ್ಥಿತಿಗೆ ಮರಳಿದ. ಅವನಿಗೆ ಹಸಿವಾಗಿರಬಹುದೆಂದು ಊಹಿಸಿದ ಸ್ವಾಮೀಜಿ, ತಿನ್ನಲು ಏನಾದರೂ ಕೊಡುವಂತೆ ಮಠದ ಭಕ್ತಾದಿಗಳಿಗೆ ಹೇಳಿದರು.

ವಾಸು, ಗುಣಮುಖವಾಗುವವರೆಗೂ ಮಠದಲ್ಲಿಯೇ ಇರಬೇಕಾಗುತ್ತದೆ ಎಂದು ಸ್ವಾಮೀಜಿಯವರು ಕಟ್ಟಪ್ಪಣೆ ಮಾಡಿದಾಗ, ಅವರ ಮಾತನ್ನು ಮೀರಲಾರದ ವಾಸುವಿನ ತಂದೆ ತಾಯಿ ಅವನೊಂದಿಗೆ ಮಠದಲ್ಲಿಯೇ ಇರಲು ನಿರ್ಧರಿಸಿದರು. ಸ್ವಲ್ಪ ದಿನಗಳವರೆಗೂ ಅಲ್ಲೇ ಇದ್ದು ಹಲವಾರು ಕಷ್ಟಗಳನ್ನು ಎದುರಿಸಿದ ಪೋಷಕರು, ಜೊತೆಜೊತೆಗೆ ವಾಸುವಿನ ಆರೈಕೆ ಮಾಡುತ್ತಿದ್ದರು. ಪರಿಣಾಮವಾಗಿ ವಾಸು, ದಷ್ಟಪುಷ್ಟವಾಗತೊಡಿಗಿದ್ದ. ಈಗ ಸಂಪೂರ್ಣ ಗುಣಮುಖನಾಗಿರಬೇಕೆಂದು ಭಾವಿಸಿದ ಸ್ವಾಮೀಜಿ, ಅವನನ್ನು ಕರೆದುಕೊಂಡು ಊರಿಗೆ ವಾಪಸ್ಸಾಗಲು ಪೋಷಕರಿಗೆ ತಿಳಿಸಿದರು.

ವಾಸು, ತನ್ನ ಪೋಷಕರೊಂದಿಗೆ ತಮ್ಮೂರಿಗೆ ಸುರಕ್ಷಿತವಾಗಿ ಹಿಂದುರಿಗಿದ. ಮೊದಲಿನಂತೆ ತನ್ನ ಹಳೆಯ ಸ್ನೇಹಿತರೊಡನೆ ಸ್ವತಃ ತಾನೇ ಬೆರೆತು ನಿರ್ಭಯದಿಂದ ಮನೆಯಿಂದಾಚೆ ಓಡಾಡತೊಡಗಿದ. ಆದರೆ ಮತ್ತೆ ಈ ಸಮಸ್ಯೆ ಅವನಿಗರಿವಿಲ್ಲದೇ ಆರಂಭವಾಯಿತು. ಮತ್ತೆ ಮೊದಲಿನಂತೆಯೇ ದಿನವಿಡೀ ಆಲೋಚಿಸುತ್ತಾ, ತೀವ್ರ ಅನ್ಯಮನಸ್ಕನಾಗಿ ಮನೆಯ ಮೂಲೆಯೊಂದರಲ್ಲಿ ಕುಳಿತುಕೊಳ್ಳತೊಡಗಿದ.

ವಾಸುವಿನ ಈ ಪರಿಸ್ಥಿತಿಯನ್ನು ನೋಡಿ ಕಂಗಾಲಾದ ಪೋಷಕರು ಮತ್ತು ಮನೆಯ ಇತರ ಸದಸ್ಯರು ಒಂದುಗೂಡಿ, ಏನೆಲ್ಲಾ ಪ್ರಯತ್ನ ಪಟ್ಟರೂ ಯಾವುದೇ ಪ್ರಯೋಜನ ಆಗದಿದ್ದಾಗ, ಅವನನ್ನು ಕುಟುಂಬದ ವೈದ್ಯರ ಬಳಿ ಕರೆದುಕೊಂಡು ಹೋಗಲು ತೀರ್ಮಾನಿಸಿದರು. ಅವನನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಿದ ವೈದ್ಯರು, ಮಾನಸಿಕ ತಜ್ಞರ ಬಳಿ ಕರೆದೊಯ್ಯಲು ಸಲಹೆ ನೀಡಿದರು. ಒಂದು ಚೀಟಿಯಲ್ಲಿ ಮಾನಸಿಕ ಆಸ್ಪತ್ರೆಯ ವಿಳಾಸ ಬರೆದು ಪೋಷಕರ ಕೈಗಿತ್ತರು.

ಮರುದಿನವೇ ವಾಸುವನ್ನು ಮಾನಸಿಕ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಕೂಲಂಕುಷವಾಗಿ ತಪಾಸಣೆ ಮಾಡಲಾಯಿತು. ಈ ಹಿಂದೆ ಅವನು ಹೇಗಿದ್ದ? ಈಗ ಏನು ಮಾಡುತ್ತಿದ್ದಾನೆ? ಈ ಸ್ಥಿತಿ ಯಾವಾಗಿಂದ ಆರಂಭವಾಯಿತು, ಇದಕ್ಕೆ ಕಾರಣವೇನು? ಎಂದೆಲ್ಲಾ ಪ್ರಶ್ನಿಸಿದ ವೈದ್ಯರಿಗೆ ವಾಸುವಿನ ತಂದೆ  ಹೀಗೆ ಉತ್ತರವಿತ್ತರು, “ಈ ಹಿಂದೆ ಈತ ಚೆನ್ನಾಗಿಯೇ ಇದ್ದ. ಓದುಬರಹದಲ್ಲಿ ಎತ್ತಿದ ಕೈ. ಪರೀಕ್ಷೆಯಲ್ಲಿಯೂ ತುಂಬಾ ಅಂಕಗಳನ್ನು ಗಳಿಸುತ್ತಿದ್ದ. ಒಂದು ದಿನ ಇದ್ದಕ್ಕಿದ್ದಂತೆ ನನ್ನನ್ನು ಯಾರೋ ಹೊಡೆಯಲು ಬರುತ್ತಾರೆ. ನನ್ನ ಮಾನ, ಮರ್ಯಾದೆ ಮೂರುಕಾಸಿಗೆ ಹರಾಜಾಗುತ್ತದೆ ಎಂದು ಭೀತಿಗೊಳಗಾಗಿ ಮನೆಯ ಮೂಲೆಯೊಂದರಲ್ಲಿ ಯೋಚಿಸುತ್ತಾ ಕುಳಿತ. ಅಂದಿನಿಂದ ಈ ಸ್ಥಿತಿ ತೀವ್ರವಾಗುತ್ತಾ ಬಂತು. ಒಬ್ಬೊಬ್ಬನೇ ಮಾತಾಡಿಕೊಳ್ಳುತ್ತಾನೆ. ಯಾಕೆ? ಯಾರು ಬರುತ್ತಾರೆ ನಿನ್ನನ್ನು ಹೊಡೆಯಲು? ಎಂದು ಕೇಳಿದರೆ ಸುಮ್ಮನಾಗಿಬಿಡುತ್ತಾನೆ ಡಾಕ್ಟ್ರೇ “ಎಂದರು.

ಒಂದು ಸಾರಿ ವಿಶ್ವಾಸಕ್ಕೆ ತೆಗೆದುಕೊಂಡು ಆತ್ಮೀಯತೆಯಿಂದ ಮಾತನಾಡಿಸಿದರೆ, ಅವನನ್ನು ಸದಾ ಕಾಡುತ್ತಿರುವ ನಿಜವಾದ ಸಮಸ್ಯೆ ಏನು ಎಂಬುದು ಗ್ರಹಿಸಬಹುದು ಎಂದು ಭಾವಿಸಿದರು. ಮುಗುಳ್ನಗೆ ಬೀರುತ್ತಾ ವಾಸುವಿನ ಬಳಿ ಬಂದ ವೈದ್ಯರು ಕೆಲವೊಂದು ಪ್ರಶ್ನೆ ಕೇಳಿದರು. ಹಾಗೇ ಮಾತನಾಡುತ್ತಾ ಅವನ ಸಮಸ್ಯೆಗೆ ಕಾರಣವೇನು ಎಂಬ ವಿಷಯವನ್ನು ಪ್ರಸ್ತಾಪಿಸಿದರು. ವೈದ್ಯರ ಮೇಲೆ ನಂಬಿಕೆಯಿಟ್ಟ ವಾಸು ತನ್ನ ಸ್ಥಿತಿಯನ್ನು ಅವರೊಂದಿಗೆ ಹಂಚಿಕೊಳ್ಳತೊಡಗಿದ.

ವೈದ್ಯರು ಅವನ ಹೆಸರು, ಓದು, ಕುಟುಂಬದ ಬಗ್ಗೆ ಕೇಳಿದ ಪ್ರಶ್ನೆಗಳಿಗೆಲ್ಲಾ ವಾಸು ಸರಿಯಾಗಿ ಉತ್ತರಿಸಿದ. ಅಕ್ಕ, ತಂಗಿಯರಿಗಿಂತ ತನ್ನನ್ನು ಬಹಳ ಚೆನ್ನಾಗಿ ನೋಡಿಕೊಳ್ಳುವ ತಂದೆ ತಾಯಿಯ ಕಂಡರೆ ಹೆಚ್ಚು ಇಷ್ಟ ಎಂದು ಕೂಡ ಹೇಳಿದ. ಆದರೆ ವೈದ್ಯರು “ಹೇಗಿದ್ದೀಯಾ? ನಿನ್ನ ಮನಸಿನಲ್ಲಿ ಏನಾಗುತ್ತಿದೆ” ಎಂದು ಕೇಳಿದಾಗ ಮಾತ್ರ ವಾಸು ಮೌನವಾದ. ಹೋಗಲಿ ನಿನ್ನ ಈ ಸ್ಥಿತಿಗೆ ಯಾರು ಕಾರಣ ಎಂದು ಕೇಳಿದಾಗ ಸ್ನೇಹಿತರು ಎಂದು ಮಾತ್ರ ತಿಳಿಸಿದ. ಅವರೇನು ಮಾಡಿದರು? ಎಂದು ಮತ್ತೆ ಮತ್ತೆ ಪ್ರಶ್ನೆ ಕೇಳುತ್ತಿದ್ದಂತೆ ವಿಷಯ ಬಿಚ್ಚಿಡಲು ಶುರು ಮಾಡಿದ. “ಅವರು ಒಂದು ಹುಡುಗಿಗೆ ಪತ್ರ ಬರೆದರು. ಅದರಲ್ಲಿ ಏನಿತ್ತೋ ಗೊತ್ತಿಲ್ಲ. ಒಂದು ದಿನ ನನ್ನ ಸ್ನೇಹಿತನೊಬ್ಬ ಒಂದು ಪತ್ರವನ್ನು ನನ್ನ ಕೈಗಿತ್ತು, ಅದನ್ನು ಒಂದು ಹುಡುಗಿಗೆ ಕೊಡಲು ಒತ್ತಾಯ ಮಾಡಿದ. ಎಷ್ಟು ನಿರಾಕರಿಸದರೂ ಮಾತು ಕೇಳದ ಸ್ನೇಹಿತ, ನೀನು ಧೈರ್ಯವಂತ, ನಿನ್ನಿಂದ ಈ ಕೆಲಸ ಆಗುತ್ತದೆ, ನೀನು ನನ್ನ ಆಪ್ತ ಸ್ನೇಹಿತ ತಾನೇ? ಇಷ್ಟು ಸಹಾಯ ಮಾಡಬಾರದೇ? ಎಂದೆಲ್ಲಾ ಹುರಿದುಂಬಿಸಿದಾಗ, ಅವನ ಮಾತಿಗೆ ಬೆಲೆ ಕೊಟ್ಟು ಕಡೆಗೂ ಆ ಹುಡುಗಿಗೆ ಪತ್ರ ಕೊಟ್ಟೆ. ಆ ಪತ್ರವನ್ನು ಓದಿದ ಆ ಹುಡುಗಿ ಕೋಪದಿಂದ ಮನಬಂದಂತೆ ಬೈಯ್ದಳು. ಆ ಪತ್ರವನ್ನು ನನ್ನ ಸ್ನೇಹಿತ ಬರೆದು ನಿಮಗೆ ತಲುಪಿಸಲು ಹೇಳಿದ. ಆದ್ದರಿಂದ ನಿಮಗೆ ಕೊಟ್ಟೆ, ಇದಕ್ಕೂ ನನಗೂ ಏನೂ ಸಂಬಂಧವಿಲ್ಲ ಎಂದು ಹೇಳಿ ಅಲ್ಲಿಂದ ವಾಪಸ್ಸು ಹೊರಟುಬಿಟ್ಟೆ.

ಅಂದು ಮಧ್ಯರಾತ್ರಿಯಲ್ಲಿ ನನ್ನ ಸ್ನೇಹಿತನ ಮನೆಗೆ ನುಗ್ಗಿದ ಆ ಹುಡುಗಿಯ ಕಡೆಯವರು, ಅವನನ್ನು ಹಿಗ್ಗಾ ಮುಗ್ಗಾ ಥಳಿಸಿದರು. ಈ ಸುದ್ದಿ ಕೇಳಿದ ನನಗೆ ತುಂಬಾ ಭಯವಾಯಿತು ಡಾಕ್ಟ್ರೇ! ಅವನಂತೆ ನನ್ನ ಮೇಲೂ ಹಲ್ಲೆ ಮಾಡಿದರೆ ಗತಿಯೇನು? ಇಲ್ಲಿಯವರೆಗೂ ಕಾಪಾಡಿಕೊಂಡುಬಂದಿದ್ದ ನನ್ನ ಮಾನ-ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕುತ್ತಾರೆ” ಎಂದು ಆತಂಕದಿಂದ ವೈದ್ಯರ ಬಳಿ ಹೇಳಿಕೊಂಡ.

ಡಾಕ್ಟರ್ ಸಮಾಧಾನ ಮಾಡುತ್ತಾ “ವಾಸು, ನಾನು ನಿಮಗೆ ಭರವಸೆ  ಕೊಡುತ್ತೇನೆ. ನಿಮಗೆ ಯಾವ ತೊಂದರೆಯೂ ಆಗುವುದಿಲ್ಲ. ಯಾವ ಗೂಂಡಾಗಳು ಹೊಡೆಯಲು ಖಂಡಿತವಾಗಿಯೂ ಬರುವುದಿಲ್ಲ. ಧೈರ್ಯವಾಗಿರಿ“ಎಂದು ಭರವಸೆ ನೀಡಿದರು.

ವಾಸುವಿನ ಮನಸ್ಸಿನಲ್ಲಿದ್ದ ಭಯ, ಆತಂಕ, ಬೇಸರ, ಗಾಬರಿಯನ್ನು ದೂರ ಮಾಡಲು ಹಲವಾರು ಸಲ ಆಪ್ತ ಸಮಾಲೋಚನೆ ನೆಡೆಸಿದರು. ಜೊತೆಗೆ ಚಿಕಿತ್ಸೆ ನೀಡಿದರು. ಒಂದೊಂದು ಸಲ ಬೇಸರವಾದರೆ, ಇನ್ನೊಂದು ಸಲ ಭಯ ಕಾಡುತ್ತಿತ್ತು. ಮತ್ತೊಂದು ಸಾರಿ ಅವನ ಕಣ್ಮುಂದೆ ರೌಡಿಗಳ ಆಕೃತಿಗಳು ಕಾಣಿಸುತ್ತಿತ್ತು. ಕೆಲವೊಮ್ಮೆ ಯಾರೋ ಅವನ ಕಿವಿಯಲ್ಲಿ ಏನೋ ಹೇಳುತ್ತಿರುವಂತೆ ಭಾಸವಾಗುತ್ತಿತ್ತು. ದಿನದಿಂದ ದಿನಕ್ಕೆ ಧೈರ್ಯ ತುಂಬುತ್ತಾ ವಾಸ್ತವದ ಬಗ್ಗೆ ವಾಸುವಿನ ಮನಸ್ಸಿಗೆ ತಟ್ಟುವಂತೆ ತಿಳಿ ಹೇಳಿದ ವೈದ್ಯರು ಕೆಲವೊಂದು ಮಾತ್ರೆಗಳನ್ನು, ಔಷಧಿಗಳನ್ನು ಬರೆದುಕೊಟ್ಟರು. ಪ್ರತಿದಿನವೂ ತಪ್ಪಿಸದಂತೆ ಅವುಗಳನ್ನು ತೆಗೆದುಕೊಳ್ಳಲು ಸಲಹೆ ನೀಡಿದರು. ಮತ್ತು ಆತನ ಪೋಷಕರಿಗೆ ವಾಸುವನ್ನು ಜೋಪಾನವಾಗಿ ನೋಡಿಕೊಳ್ಳಲು ಎಚ್ಚರ ಕೊಟ್ಟರು.

ದಿನ ಕಳೆದಂತೆ ವಾಸು ಚೇತರಿಸಿಕೊಂಡು ಗೆಳೆಯರೊಂದಿಗೆ ನಿರ್ಭೀತಿಯಿಂದ ಮನೆಯಿಂದ ಆಚೆಯೂ ಓಡಾಡತೊಡಗಿದ. ಸುಪ್ರಸಿದ್ಧ ಪ್ರವಾಸಿತಾಣಗಳಿಗೆ ಭೇಟಿ ಕೊಟ್ಟ. ಅಲ್ಲಿನ ಪ್ರಶಾಂತ ವಾತಾವರಣವನ್ನು ಆಸ್ವಾದಿಸುತ್ತಾ ಮನಸ್ಸನ್ನು ಹಗುರ ಮಾಡಿಕೊಂಡ. ಸಂಗೀತವನ್ನು ಕೇಳುವ, ಸಾಹಿತ್ಯವನ್ನು ಓದುವ ಹವ್ಯಾಸ ಬೆಳೆಸಿಕೊಂಡು ತನ್ನ ಬುದ್ಧಿಶಕ್ತಿಯನ್ನು ಹೆಚ್ಚಿಸಿಕೊಂಡ. ಮೊದಲಿನಂತೆಯೇ ಎಲ್ಲರೊಂದಿಗೆ ಬೆರೆಯುತ್ತಾ ಅರ್ಧಕ್ಕೆ ನಿಂತಿದ್ದ ತನ್ನ ಶಿಕ್ಷಣವನ್ನು ಮುಂದುವೆಸಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣನಾದ.  

ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org