ಮಾನಸಿಕ ದೌರ್ಬಲ್ಯ ಎಂದರೇನು ?

ನಮ್ಮಲ್ಲಿ ತಿಳುವಳಿಕೆ ಇಲ್ಲದಿರುವುದೇ ನನ್ನನ್ನು ಹೆಚ್ಚು ಬಾಧಿಸುತ್ತದೆ.

ನಮ್ಮಲ್ಲಿ ತಿಳುವಳಿಕೆ ಇಲ್ಲದಿರುವುದೇ ನನ್ನನ್ನು ಹೆಚ್ಚು ಬಾಧಿಸುತ್ತದೆ. ಇದು ಶುರುವಾದದ್ದು ರಾಜಸ್ಥಾನದ ಜೋಧ್‍ಪುರದಲ್ಲಿದ್ದಾಗ, ಸರಿಸುಮಾರು 2000ದ ಇಸವಿಯಲ್ಲಿ. ನಾನು ನನ್ನ 12ನೆ ತರಗತಿಯ ಪರೀಕ್ಷೆ ಮುಗಿಸಿದ್ದೆ. ಕಾಲೇಜು ಪ್ರವೇಶಿಸಲು ಮೊದಲ ಮೆಟ್ಟಿಲು ಹತ್ತುತ್ತಿದ್ದೆ.  ಇದೇ ವೇಳೆ ನಾನು ಚಾರ್ಟರ್ಡ್ ಅಕೌಂಟೆಂಟ್ ಕೋರ್ಸ್‍ಗೂ ಪ್ರವೇಶಿಸಿದ್ದೆ.  ನಮ್ಮದು ಮಧ್ಯಮ ವರ್ಗದ ಸಣ್ಣ ಕುಟುಂಬ. ನಾನು ಚಿಕ್ಕವನಾಗಿದ್ದಾಗಲೇ, 1989ರಲ್ಲಿ ನನ್ನ ತಂದೆ ತೀರಿಕೊಂಡಿದ್ದರಿಂದ ಜೀವನದಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಯಿತು. ನನ್ನ ತಾಯಿಯೇ ನನ್ನನ್ನು ಮತ್ತು ನನ್ನ ತಂಗಿಯನ್ನು ದೆಹಲಿಯ ಶಾಲೆಯೊಂದರಲ್ಲಿ ಶಿಕ್ಷಕಿಯ ಕೆಲಸ ಮಾಡುವ ಮೂಲಕ ಸಾಕಿ ಸಲಹಿದ್ದರು. ನಮ್ಮ ಸಂಬಂಧಿಕರಿಂದ ಯಾವುದೇ ಬೆಂಬಲ ಇರಲಿಲ್ಲ.  ಅಮ್ಮನಿಗೆ ಮಾನಸಿಕ ಅನಾರೋಗ್ಯದ ವಂಶವಾಹಿ ಸೂಚನೆಗಳೇನೂ ಇರಲಿಲ್ಲ. ಆದರೂ ನಾವು ಚಿಕ್ಕವರಾಗಿದ್ದಾಗ ಅವರಿಗೆ ಪದೇ ಪದೇ ಈ ಸಮಸ್ಯೆ ಎದುರಾಗುತ್ತಿತ್ತು. ಮನೆಗೆ ಬೀಗ ಹಾಕಿದೆಯೋ ಇಲ್ಲವೋ ಎಂದು ಹಲವು ಬಾರಿ ನೋಡುತ್ತಿದ್ದರು. ಅಥವಾ ಒಲೆಯನ್ನು ಆರಿಸಿದ್ದೇನೋ ಇಲ್ಲವೋ ಎಂದು ಪದೇ ಪದೇ ನೋಡುತ್ತಿದ್ದರು. ಸಾಕಷ್ಟು ವರ್ಷಗಳ ನಂತರವಷ್ಟೇ, ಅಮ್ಮನಿಗೆ Obsessive Compulsive Disorder(ಒಸಿಡಿ) ಸಮಸ್ಯೆ ಇರುವುದು ಗೊತ್ತಾಗಿತ್ತು.  2000ದ ಸಮಯದಲ್ಲೇ ಅಮ್ಮ ಕೆಲವೊಮ್ಮೆ ತನ್ನ ತಲೆಯಲ್ಲಿ ಏನೋ ಸದ್ದು ಉಂಟಾಗುತ್ತಿದೆ ಎಂದೋ ಅಥವಾ ಯಾರೋ ತನ್ನೊಡನೆ ಮಾತನಾಡುತ್ತಿದ್ದಾರೆ ಎಂದೋ ಹೇಳುತ್ತಿದ್ದರು. ಮೊದಮೊದಲು ನಮಗೆ ಇದು ಅರ್ಥವಾಗಲಿಲ್ಲ, ಭಯವೂ ಆಗುತ್ತಿತ್ತು. ಒಂದು ಸಲ ಅಮ್ಮ ಪೊಲೀಸರನ್ನು ಮನೆಗೆ ಕರೆಸಿ ಮನೆಯಲ್ಲಿ ಯಾವುದಾದರೂ ಉಪಕರಣವನ್ನು ಕದ್ದು ಅಳವಡಿಸಲಾಗಿದೆಯೇ ಎಂದು ಹುಡುಕಿಸಿದ್ದರು. ಕಾಲ ಕಳೆದಂತೆ ಇದು ಅವರಿಗೆ ಮಾಮೂಲಿಯಾಗಿಬಿಟ್ಟಿತು. ಕ್ರಮೇಣ ಅಮ್ಮ ಆ ಸದ್ದಿಗೆ ತಲೆದೂಗಿಸುವುದು, ಉತ್ತರಿಸುವುದಕ್ಕೆ ಆರಂಭಿಸಿದರು. ಚಿಕ್ಕ ಮಕ್ಕಳಾದ ನಾವು ಸ್ಕಿಜೋಫ್ರೀನಿಯಾ ಬಗ್ಗೆ ಕೇಳಿಯೂ ಇರಲಿಲ್ಲ. ನಮ್ಮ ತಾಯಿಗೆ ಇಂತಹ ಸಮಸ್ಯೆ ಉಂಟಾಗುತ್ತದೆ ಎಂದು ಊಹಿಸಿಯೂ ಇರಲಿಲ್ಲ. ಹಾಗಾಗಿ ನಾವು ಸಮಸ್ಯೆ ತಂತಾನೇ ಸರಿಹೋಗುತ್ತದೆ ಎಂದು ಸುಮ್ಮನಾಗಿಬಿಟ್ಟೆವು. ಆದರೆ ಸಮಸ್ಯೆ ಇನ್ನೂ ಹೆಚ್ಚಾಗತೊಡಗಿತು.  ದಿನ ಕಳೆದಂತೆ ಅಮ್ಮ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ , ಅವರಿಗೆ ಕೇಳಿಬರುತ್ತಿದ್ದ ದನಿಗೆ ಸ್ಪಂದಿಸತೊಡಗಿ ಅದರಂತೆಯೇ ನಡೆದುಕೊಳ್ಳಲಾರಂಭಿಸಿದರು. ಆ ದನಿ ಹೇಳಿದಂತೆ ಕೆಲಸ ಮಾಡಲಾರಂಭಿಸಿದರು. ಕೆಲವೊಮ್ಮೆ ಆ ದನಿ ಅವರಿಗೆ ತಿನ್ನ ಬೇಡ ಎಂದು ಹೇಳುತ್ತಿತ್ತು, ಕೆಲವೊಮ್ಮೆ ನಿದ್ರೆ ಮಾಡಬೇಡ ಎಂದು ಹೇಳುತ್ತಿತ್ತು. ಕೆಲವೊಮ್ಮೆ ನನ್ನನ್ನು ಯಾರೋ ಕೊಲ್ಲಲು ಬರುತ್ತಿದ್ದಾರೆ ಎಂದು ಅಮ್ಮನಿಗೆ ಭಾಸವಾಗುತ್ತಿತ್ತು. ಅಥವಾ ತಾನು ಹನುಮಾನ್ ಎಂದು ಭಾವಿಸುತ್ತಿದ್ದರು. ನಿಧಾನವಾಗಿ ಆ ದನಿ ಅವರನ್ನು ನಿಯಂತ್ರಿಸತೊಡಗಿದವು. ಏನಾಗುತ್ತಿದೆ ಎಂದೇ ತಿಳಿಯದೆ ನಾನು ಮತ್ತು ನನ್ನ ತಂಗಿ ಭಯಭೀತರಾಗುತ್ತಿದ್ದೆವು.  ಸಂಬಂಧಿಕರೊಡನೆ ಈ ಮೊದಲೇ ಕೆಟ್ಟ ಅನುಭವ ಹೊಂದಿದ್ದ ನಾವು ಅವರಿಂದ ಯಾವುದೇ ಬೆಂಬಲ ನಿರೀಕ್ಷಿಸಲಾಗುತ್ತಿರಲಿಲ್ಲ. ನೆರೆಹೊರೆಯವರ ಬಳಿ ಈ ಸಮಸ್ಯೆ ಕುರಿತು ಮಾತನಾಡಲೂ ನಾವು ಸಿದ್ಧವಾಗಿರಲಿಲ್ಲ. ಅಂತರ್ಮುಖಿಯಾಗಿದ್ದ ನನಗೆ ಯಾರೂ ಸ್ನೇಹಿತರಿರಲಿಲ್ಲ. ಹಾಗಾಗಿ ನಾನು ಎದುರಿಸುತ್ತಿದ್ದ ಸಮಸ್ಯೆಯನ್ನು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ.  ಅನೇಕ ವೇಳೆ ನಾನು ತಾಯಿ ಮಕ್ಕಳಿಗೆ ತಿಳಿ ಹೇಳುವಂತೆ ಅಮ್ಮನಿಗೆ ಬುದ್ಧಿ ಹೇಳುತ್ತಿದ್ದೆ. ಅವರು ಆ ಪರಿಸ್ಥಿತಿಯಿಂದ ಪಾರಾಗುವುದು ನನಗೆ ಮುಖ್ಯವಾಗಿತ್ತು. ಆದರೆ ಆ ವೇಳೆಗೆ ಪರಿಸ್ಥಿತಿ ಕೈಮೀರಿ ಹೋಗಿತ್ತು. ಅಮ್ಮ ಆ ದನಿಗಳನ್ನು ನಿಜವಾದ ಮಾತುಗಳು ಎಂದೇ ನಂಬಲಾರಂಭಿಸಿದ್ದರು. ನನ್ನ ಮಾತನ್ನು  ಸುತರಾಂ ಕೇಳುತ್ತಿರಲಿಲ್ಲ. ಅವರು ಹಾಗೆ ಕೇಳುವ ಪರಿಸ್ಥಿತಿಯಲ್ಲೂ ಇರಲಿಲ್ಲ. ಸರಿಯಾಗಿ ಊಟ ಮಾಡುತ್ತಿರಲಿಲ್ಲ. ಅಥವಾ ಆ ದನಿಗಳು ಹೇಳಿದಷ್ಟನ್ನು ಮಾತ್ರ ತಿನ್ನುತ್ತಿದ್ದರು. (ಅದು ಸಾಮಾನ್ಯವಾಗಿ ಅರ್ಧ ಚಪಾತಿ ಮಾತ್ರ ತಿನ್ನುವಂತಾಗುತ್ತಿತ್ತು).  ಅಮ್ಮ ನಿಶ್ಶಕ್ತಿಯಿಂದ ಬಳಲುತ್ತಿದ್ದರು, ದುರ್ಬಲರಾಗಿದ್ದರು, ಅವರ ದನಿ ಕ್ಷೀಣವಾಗತೊಡಗಿತ್ತು.  ಒಂದು ದಿನ ಅಮ್ಮ ಮನೆಯಲ್ಲಿದ್ದ ಪಾತ್ರೆಗಳನ್ನು ಒಂದೊಂದಾಗಿ ರಸ್ತೆಗೆ ಬಿಸಾಡಲು ಆರಂಭಿಸಿದರು. ಆಗ ಪಕ್ಕದ ಮನೆಯ ಆಂಟಿ ಇದನ್ನು ನೋಡಲಾರದೆ ತಮ್ಮ ಮಗಳನ್ನು ನಮ್ಮ ಮನೆಗೆ ಕಳುಹಿಸಿ ಅಮ್ಮನೊಡನೆ ಮಾತನಾಡುವಂತೆ ಹೇಳಿದರು. ನಾವು ಅವರೊಡನೆ ಇದ್ದ ವಿಷಯವನ್ನು ಹೇಳಲಾರಂಭಿಸಿದಾಗ  ನಾವು ಇನ್ನೂ ಹೆಚ್ಚು ತೊಂದರೆಯನ್ನು ಎದುರಿಸಬೇಕಾಯಿತು.(ಇದು ನಮಗೆ ತಿಳಿದದ್ದು ನಂತರದಲ್ಲಿ).  ಮನೆಗೆ ಬಂದಿದ್ದ ಆ ಹೆಂಗಸು ಕೀರ್ತನೆಗಳನ್ನು ಹಾಡುವ ಗುಂಪನ್ನು ರಚಿಸಿಕೊಂಡಿದ್ದರು. ನಮ್ಮಂತೆಯೇ ಅವರಿಗೂ ಸಹ ಮಾನಸಿಕ ಅನಾರೋಗ್ಯದ ಬಗ್ಗೆ ತಿಳುವಳಿಕೆ ಇಲ್ಲದಿದ್ದುದರಿಂದ, ಆ ಹೆಂಗಸರು ಇದು ಯಾವುದೇ ಕೆಟ್ಟ ಶಕ್ತಿಯ ಕಾಠ, ನಮ್ಮ ಅಮ್ಮನ ದೇಹದಲ್ಲಿ ಯಾವುದೋ ಪೈಶಾಚಿಕ ಶಕ್ತಿ ಹೊಕ್ಕಿದೆ ಎಂದು ಭಾವಿಸಿದ್ದರು. ಆಗ ಅನೇಕ ಬಾಬಾಗಳ ಮತ್ತು ಗುರೂಜಿಗಳ ಹೋಗುವುದು ಹೆಚ್ಚಾಯಿತು. ಅಪಾರ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಬಾಬಾ ಒಬ್ಬರ ಬಳಿ ವಾರಕ್ಕೊಮ್ಮೆ ಹೋಗುತ್ತಿದ್ದೆವು. ಅವರು ಈ ಅನಾರೋಗ್ಯವನ್ನು ಗುಣಪಡಿಸಲು ವಿಭೂತಿಯನ್ನು ನೀಡುತ್ತಿದ್ದರು.  ಆದರೆ ಇದರಿಂದ ಅಮ್ಮ ಗುಣಮುಖರಾಗಲಿಲ್ಲ. ಅಮ್ಮನ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಯಾರೋ ಒಬ್ಬರು ಜ್ಯೋತಿಷಿಯನ್ನು ಸಂಪರ್ಕಿಸಲು ಹೇಳಿದರು. ಆ ಜ್ಯೋತಿಷಿ, ಪಿತೃದೋಷ ಇರುವುದರಿಂದ ಹೀಗಾಗುತ್ತಿದೆ ಎಂದು ಹೇಳಿ ಪೂಜೆ ಮಾಡಿಸಲು ಸಲಹೆ ನೀಡಿದರು. ನಾನು ಅವರು ಹೇಳಿದಂತೆ ಅಜ್ಮೇರ್‍ನಲ್ಲಿರುವ ಪುಷ್ಕರ್‍ಗೆ ಹೋದೆ. ಅಲ್ಲಿ ಪವಿತ್ರ ಕೊಳದಲ್ಲಿ ನಾನು ಪೂಜೆ ಮಾಡುತ್ತಿದ್ದಾಗ ಕಾಲು ಜಾರಿ ಬಿದ್ದೆ. ಈಜು ಬಾರದಿದ್ದುದರಿಂದ ಬಹುತೇಕ ಮುಳುಗಿಹೋಗಿದ್ದೆ. ಅದು ಸಾವಿನೊಡನೆ ಅತಿ ಹತ್ತಿರದ ಸಂಘರ್ಷವಾಗಿತ್ತು.  ಕೆಲವು ದಿನಗಳ ನಂತರ ಒಂದು ಸಂದರ್ಭದಲ್ಲಿ ನಾನು ಈ ಎಲ್ಲ ಗೊಡ್ಡು ಬೊಗಳೆಗಳಿಂದಲೂ ಹೊರಬರಲು ಸಾಧ್ಯವಾಗುವಂತಹ ಘಟನೆ ನಡೆದಿತ್ತು. ಒಂದು ದಿನ ಬೆಳಿಗ್ಗೆ ಅಮ್ಮ ಫಿನೈಲ್ ಬಾಟಲಿಯನ್ನು ತೆಗೆದುಕೊಂಡು ಕುಡಿಯುತ್ತಿದ್ದುದನ್ನು ಕಂಡೆ. ನನಗೆ ಆಘಾತವಾಗಿತ್ತು. ಏನು ಮಾಡುತ್ತಿದ್ದೀಯ ಎಂದು ಕೇಳಿದಾಗ ಅಮ್ಮ, ನನಗೆ ಅದನ್ನು ಕುಡಿಯಲು ಹೇಳುತ್ತಿದ್ದಾರೆ ಕುಡಿಯುತ್ತಿದ್ದೇನೆ ಎಂದು ಹೇಳಿದಳು. ತಕ್ಷಣವೇ ನಾನು ಅಮ್ಮನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದೆ. ಅವರ ದೇಹದಿಂದ ಫಿನೈಲ್ ಹೊರತೆಗೆಯಲಾಯಿತು. ದೇವರ ದಯೆಯಿಂದ ಅಮ್ಮ ಬದುಕುಳಿದಳು. ಈ ವೇಳೆಗೆ ಎಲ್ಲವೂ ಸಾಕಾಗಿ ಹೋದಂತಿತ್ತು. ಮುಂಜಾನೆ ಬೆಳಗಾಗುವ ಮುನ್ನವೆ ಅತಿ ಕರಾಳ ರಾತ್ರಿ ಬರುತ್ತದೆ ಎಂದು ಹೇಳಲಾಗುತ್ತದೆ. ಹಾಗೆಯೇ ನಮ್ಮ ಸಂಬಂಧಿಕರೊಬ್ಬರು ಅಮ್ಮನನ್ನು ಮನಶ್ಶಾಸ್ತ್ರಜ್ಞರ ಬಳಿ ಕರೆದೊಯ್ಯಲು ಸಲಹೆ ನೀಡಿದರು. ಒಂದು ರೀತಿಯಲ್ಲಿ ದೇವರೇ ಮಧ್ಯ ಪ್ರವೇಶ ಮಾಡಿದ್ದರು ಎಂದು ಹಿಂದಿರುಗಿ ನೋಡಿದಾಗ ಭಾಸವಾಗುತ್ತದೆ. ಕೊಂಚವೂ ತಡ ಮಾಡದೆ ನಾನು ಮನೋವೈದ್ಯರ ಬಳಿ ಕರೆದೊಯ್ದೆ. ಮೊದಲನೆಯ ಬಾರಿ ವೈದ್ಯರನ್ನು ಕಂಡಾಗ ಬಹಳ ಹೊತ್ತು ಮಾತನಾಡಿದರು. ಕಳೆದ ಒಂದು ವರ್ಷದಲ್ಲಿ ನಡೆದ ಎಲ್ಲವನ್ನೂ ಅಮ್ಮ ಅವರ ಬಳಿ ಚಾಚೂ ತಪ್ಪದೆ ಒಪ್ಪಿಸಿದರು. ತಲೆಯಲ್ಲಿ ಸದ್ದಾಗುತ್ತಿದ್ದುದು, ಯಾರದೋ ದನಿ ಕೇಳಿಬರುತ್ತಿದ್ದುದು, ಅವರ ನರಗಳನ್ನು ಯಾರೋ ಒತ್ತುತ್ತಿದ್ದಂತೆ ಭಾಸವಾಗುತ್ತಿದ್ದುದು ಹೀಗೆ ಎಲ್ಲವನ್ನೂ ವಿವರಿಸಿದರು. ಆ ಸಮಯದಲ್ಲಿ ವೈದ್ಯರು ನಮಗೆ ದೇವಧೂತರಂತೆ ಕಂಡಿದ್ದರು. ಅವರು ನಮ್ಮ ನೋವಿಗೂ ಮಾನವೀಯತೆಯಿಂದ ಸ್ಪಂದಿಸಿದ್ದರು. ಆ ದಿನದಿಂದಲೇ ಅಮ್ಮನಿಗೆ ಕೆಲವು ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಸಲಹೆ ಮಾಡಿದ್ದರು.  ಈ ಔಷಧಿಗಳು ತಕ್ಷಣವೇ ಪರಿಣಾಮ ಬೀರಲಾರಂಭಿಸಿದ್ದು ಎಲ್ಲರ ಮನಸ್ಸೂ ನಿರಾಳವಾಗಿತ್ತು. ಅಮ್ಮನ ತಲೆಯಲ್ಲಿ ಕೇಳಿಬರುತ್ತಿದ್ದ ದನಿ ಕಡಿಮೆಯಾಗತೊಡಗಿತು, ಅವರ ಹಸಿವು ಹೆಚ್ಚಾಗತೊಡಗಿತು, ಅಮ್ಮ ಸಾಮಾನ್ಯರಂತೆ ವರ್ತಿಸತೊಡಗಿದ್ದರು. ಮನೆ ಕೆಲಸಗಳನ್ನು ಹೆಚ್ಚು ಉತ್ಸಾಹದಿಂದ  ಮಾಡಲಾರಂಭಿಸಿದರು. ನಮಗೆ ಯಾರ ಸಹಾಯವೂ ಇಲ್ಲ ಎನ್ನುವ ಸಂದರ್ಭದಲ್ಲಿ ನಮ್ಮ ನೆರವಿಗೆ ಧಾವಿಸಿದ ನೆರೆಹೊರೆಯವರೊಡನೆ ನಾವು ಮಾತನಾಡಲಾರಂಭಿಸಿದೆವು.  15 ವರ್ಷಗಳು ಕಳೆದಿವೆ, ಇಂದಿಗೂ ಅಮ್ಮ ಔಷಧಿಯನ್ನು ಸೇವಿಸುತ್ತಿದ್ದಾರೆ ಅವರ ಸಮಸ್ಯೆ ನಿಯಂತ್ರಣದಲ್ಲಿದೆ. ಈ ನಡುವೆ ಏರುಪೇರುಗಳಾಗಿದ್ದರೂ 2000-01ರಲ್ಲಿ ಆದಂತೆ ಆತಂಕ ಸೃಷ್ಟಿಸುವ ಘಟನೆಗಳು ಸಂಭವಿಸುತ್ತಿಲ್ಲ. ನನ್ನಲ್ಲಿರುವ ಒಂದೇ ಪರಿತಾಪ ಎಂದರೆ ನಮ್ಮಲ್ಲಿ ತಿಳುವಳಿಕೆಯ ಕೊರತೆ ಇದ್ದುದರಿಂದ ಅಮ್ಮನನ್ನು ಕಾಡುತ್ತಿದ್ದ ಮಾನಸಿಕ ಸಮಸ್ಯೆಯನ್ನು ಗುರುತಿಸುವುದರಿಂದ ಹಿಡಿದು ಚಿಕಿತ್ಸೆ ಆರಂಭಿಸುವವರೆಗೂ ನಾವು ವಿಳಂಬ ಮಾಡುತ್ತಲೇ ಬಂದೆವು. ಇದು ನಮ್ಮ ಅಮ್ಮನ ದೈಹಿಕ ಮತ್ತು ಮಾನಸಿಕ ಸ್ಥಿತಿಯ ಮೇಲೆ ಎಂತಹ ದುಷ್ಪರಿಣಾಮ ಬೀರಿರಬಹುದು ಎಂಬ ಪಶ್ಚಾತ್ತಾಪದ ಭಾವನೆ ನನ್ನನ್ನು ಕಾಡುತ್ತಿದೆ.  ಸ್ವತಃ ನಾನೇ ಈ ಸಂಕಷ್ಟದ ಸಮಯವನ್ನು ಎದುರಿಸಿರುವುದರಿಂದ, ಇಂತಹ ಮಾನಸಿಕ ಸಮಸ್ಯೆ ಇರುವವರ ಕುಟುಂಬ ಸದಸ್ಯರೂ ಸಹ ಅವರಂತೆಯೇ ಅತಂಕ ಮತ್ತು ಆಘಾತದ ದಿನಗಳನ್ನು ಕಳೆಯಬೇಕಾಗುತ್ತದೆ ಎಂದು ಈಗ ಅರಿವಾಗಿದೆ. ಹಾಗಾಗಿ ಮಾನಸಿಕ ಸಮಸ್ಯೆ ಇರುವವರನ್ನು ಆರೈಕೆ ಮಾಡುವವರಿಗೂ ಸಹ ಪ್ರೇರಣೆ, ಬೆಂಬಲ ನೀಡುವ ಗುಂಪು ಅವಶ್ಯವಾಗಿರುತ್ತದೆ. ಆಗ ಅವರು ತಮ್ಮ ನೋವಿನ ಅನುಭವಗಳನ್ನು ಹಂಚಿಕೊಳ್ಳಬಹುದು ಮತ್ತು ತಮ್ಮ ಮುಂದಿರುವ ಸವಾಲುಗಳನ್ನು ಧೈರ್ಯವಾಗಿ ಎದುರಿಸುವ ಚೈತನ್ಯವನ್ನು ಪಡೆಯಬಹುದು. ಜನರು ಮಾನಸಿಕ ಅನಾರೋಗ್ಯವನ್ನು , ಸಾಧಾರಣ ಹೃದಯ ಸಂಬಂಧಿ ಖಾಯಿಲೆಯಂತೆ, ಅಥವಾ ಪಾರ್ಕಿನ್‍ಸನ್ ಖಾಯಿಲೆಯಂತೆಯೇ ಪರಿಗಣಿಸುವ ಮೂಲಕ ಸಮಸ್ಯೆ ಎದುರಿಸುತ್ತಿರುವರು ಮತ್ತು ಅವರ ಕುಟುಂಬದವರು ಮುಕ್ತವಾಗಿ ಅವರ ಸಮಸ್ಯೆಗಳನ್ನು ಹಂಚಿಕೊಳ್ಳಲು ನೆರವಾಗಬೇಕು. ಆಗಲೇ ನಾವು ಇದರಿಂದಾಗುವ ದುಷ್ಪರಿಣಾಮಗಳನ್ನು ನಿಲ್ಲಿಸಬಹುದು.  ಅಂತಿಮವಾಗಿ ಈ ಮಾತುಗಳೊಂದಿಗೆ ನನ್ನ ಲೇಖನವನ್ನು ಮುಗಿಸುತ್ತೇನೆ : ನಮ್ಮ ಅಮ್ಮನ ಕಾಲೇಜು ದಿನಗಳಲ್ಲಿ ಅಮ್ಮನನ್ನು ರಾಣಿ ಲಕ್ಷ್ಮಿಬಾಯಿ ಎಂದು ಕರೆಯುತ್ತಿದ್ದರಂತೆ. ಇದು ಅಕ್ಷರಃ ಸತ್ಯ ಎಂದು ನಾನು ಭಾವಿಸುತ್ತೇನೆ.  ಅಮ್ಮ ಅವರ ಜೀವನದ ಅತಿ ದೊಡ್ಡ ಸಮರವನ್ನು ಎದುರಿಸಿ ಹೋರಾಡಿರುವುದೇ ಅಲ್ಲದೆ ಇಂದಿಗೂ ಹೋರಾಡುತ್ತಲೇ ಇದ್ದಾರೆ. ಎಂದೂ ಸಹ ಬಿಟ್ಟುಕೊಟ್ಟಿಲ್ಲ, ಎದೆಗುಂದಿಲ್ಲ. ನಮಗೆ ಅವರು ನೀಡಿರುವ ಅತ್ಯುತ್ತಮ ಸಂದೇಶ ಎಂದರೆ ಆಕೆಯ ಬದುಕಿನ ತತ್ವಜ್ಞಾನ, ಒಂದೇ ಪದದಲ್ಲ್ಲಿ ಹೇಳುವುದಾದರೆ “ ಧೈರ್ಯದಿಂದಿರು”. 

Related Stories

No stories found.