ನಿಮ್ಮ ದೇಹವೇ ನಿಮಗೆ ಆತಂಕ ತಂದೊಡ್ಡಿದಾಗ.

ದಾರಿ ಹೋಕರು ನೀಡುವ ಕಿರುಕುಳ ಮಹಿಳೆಯರ ಮಾನಸಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಬಲ್ಲದು

19 ವರ್ಷದ ಆ ತರುಣಿ ಅದೇ ಮೊದಲ ಬಾರಿಗೆ ಒಬ್ಬಳೇ ಪ್ರಯಾಣಿಸುತ್ತಿದ್ದಳು. ಮೊದಲ ನಿಲ್ದಾಣವನ್ನೇನೋ ಅವಳು ಯಾವುದೇ ಅಡ್ಡಿ ಆತಂಕವಿಲ್ಲದೆ ತಲುಪಿದಳು. ಆದರೆ ಅವಳಿಗಾಗಿ ಕೆಟ್ಟ ಅನುಭವವೊಂದು ಕಾಯುತ್ತಿತ್ತು. ಅವಳು ಆಗಷ್ಟೆ ಆಟೋದಲ್ಲಿ ಕುಳಿತಿದ್ದಳು. ಆಟೋ ಇನ್ನೂ ಸ್ಟ್ಯಾಂಡಿನಿಂದ ಹೊರಟಿರಲಿಲ್ಲ. ಅದೇ ವೇಳೆಗೆ ಯಾವುದೋ ಅಪರಿಚಿತ ಗಂಡಸಿನ ಕೈ ತನ್ನ ಮೈಮೇಲೆ ಆಡುತ್ತಿರುವ ಅನುಭವ ಅವಳಿಗಾಯಿತು. ಎಡಕ್ಕೆ ತಿರುಗಿ ನೋಡಿದರೆ, ಆಟೋದ ಸ್ಟೀಲ್ ರಾಡಿನ ಮೇಲೆ ವಾಲಿಕೊಂಡು ಆಚೆಯಿಂದ ಒಬ್ಬ ಗಂಡಸು ಅಶ್ಲೀಲವಾಗಿ ಆಕೆಯ ದೇಹವನ್ನು ಸವರತೊಡಗಿದ್ದ. ಆ ಧೈರ್ಯ ಆತನಿಗೆ ಆ ಕ್ಷಣಕ್ಕೆ ಬಂದದ್ದಲ್ಲವೆಂದು ಆತನ ನಡವಳಿಕೆ ನೋಡಿಯೇ ಹೇಳಬಹುದಿತ್ತು. ಆ ತರುಣಿ ಒಂದು ಕ್ಷಣ ಅಸಹ್ಯದ ಭಾವ ಆವರಿಸಿ ಅದುರಿಹೋದಳು. ಅಸಹಾಯಕತೆಯನ್ನು ಅನುಭವಿಸಿದಳು. ಕುಳಿತಲ್ಲಿಂದ ಅಲುಗಾಡಲೂ ಆಗದಷ್ಟು ಆಘಾತಗೊಂಡಳು.

ವರ್ಷಗಳು ಕಳೆದರೂ ಆ ಅಘಾತ ಅವಳಿಂದ ಮಾಸಲಿಲ್ಲ. ಆಗಾಗ ಅವಳು ಅದು ನೆನಪಾದಂತೆ ಗಾಬರಿಯಾಗುತ್ತಿದ್ದಳು. ತಾನು ಕುಳಿತಿರುವ ಹಾಗೇ ಎಲ್ಲಿಂದಲೋ ಬಂದ ಕೈಗಳು ತನ್ನ ದೇಹವನ್ನು ಸವರುತ್ತಿರುವಂತೆ ಭಾವಿಸಿ ಚಡಪಡಿಸುತ್ತಿದ್ದಳು. ತಾನೇಕೆ ಅಂದು ಅಷ್ಟು ನಿಸ್ಸಹಾಯಕಳಾಗಿ ಕುಳಿತುಬಿಟ್ಟೆ? ತಾನೇಕೆ ಆಟೋದಿಂದ ಜಿಗಿದು ಆ ಅಸಭ್ಯ ವ್ಯಕ್ತಿಯನ್ನು ಅಟ್ಟಿಸಿಕೊಂಡು ಹೋಗಿ ಹೊಡೆಯಲಿಲ್ಲ? ಪಾಠ ಕಲಿಸುವ ಪ್ರಯತ್ನವನ್ನೂ ಮಾಡಲಿಲ್ಲ? ಎಂದೆಲ್ಲ ಅವಳು ಯೋಚಿಸುತ್ತಿದ್ದಳು. ಆ ವ್ಯಕ್ತಿ ಒಂದೇ ಕ್ಷಣದಲ್ಲಿ ಆಕೆಗೆ ತನ್ನ ದೇಹದೊಡನೆ ಇದ್ದ ಭಾವನೆಗಳೇ ಬದಲಾಗುವಂತೆ ಮಾಡಿಬಿಟ್ಟಿದ್ದ. ಅವಳೀಗ ಆ ಅಸಹ್ಯ ಸ್ಪರ್ಶದ ನೆನಪಿನ ಕಾರಣದಿಂದ ತನ್ನದೇ ದೇಹವನ್ನು ಇಷ್ಟಪಡಲಾರದ ಸ್ಥಿತಿಗೆ ಬಂದಿದ್ದಳು.

ರಸ್ತೆಯಲ್ಲಿ ಇಂಥ ದೌರ್ಜನ್ಯಗಳು ಸಾಮಾನ್ಯ ಅನ್ನುವಂತಾಗಿಬಿಟ್ಟಿದೆ. ಅದನ್ನು ಹತ್ತಿಕ್ಕುವ ಸಲುವಾಗಿ ಒಂದಷ್ಟು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡಲಾಗಿದೆ. ಒಂದಷ್ಟು ತಂತ್ರಗಳನ್ನೂ ಪರಿಚಯಿಸಲಾಗಿದೆ. ಆದರೆ ಪ್ರತಿದಿನ ರಸ್ತೆಯಲ್ಲಿ ಓಡಾಡುವ ಮಹಿಳೆಯರಿಗೆ ಅವನ್ನು ಆಪ್ತವಾಗಿಸುವ, ಕೈಗೆಟಕುವಂತೆ ದೊರಕಿಸುವ ನಿಟ್ಟಿನಲ್ಲಿ ಕೆಲಸಗಳಾಗಿಲ್ಲ. ಇಂಥ ಮಹಿಳೆಯರಿಗೆ ಯಾವತ್ತಿದ್ದರೂ ತಮ್ಮ ದೇಹ ತಮಗೆ ಹೊರೆ ಎಂಬ ಭಾವನೆ ಇರುತ್ತದೆ. ತಾನು ನೆಚ್ಚಿಕೊಂಡಿರುವ ತನ್ನ ದೇಹ ಯಾವಾಗ ಬೇಕಾದರೂ ಯಾರಿಂದಲಾದರೂ ದೌರ್ಜನ್ಯಕ್ಕೆ ಒಳಗಾಗಬಹುದು ಅನ್ನುವ ಭಯವನ್ನು ಹೊತ್ತು ಮಹಿಳೆಯರು ಅದು ಹೇಗೆ ನೆಮ್ಮದಿಯಿಂದ ಇರಬಲ್ಲರು? ಈ ಆತಂಕ ಹೊತ್ತುಕೊಂಡೇ ಹೇಗೆ ಮನೆಯನ್ನೂ ಕೆಲಸವನ್ನೂ ನಿಭಾಯಿಸುವರು?

“ಸಾಮಾನ್ಯವಾಗಿ ಯುವತಿಯರು ವಾಸ್ತವ ಜಗತ್ತಿಗೆ ತೆರೆದುಕೊಂಡಾಗ ಇಂಥಹ ದೌರ್ಜನ್ಯಗಳನ್ನು ಎದುರಿಸುತ್ತಾರೆ. ಪರಿಣಾಮವಾಗಿ ಅವರು ಉದ್ವೇಗ ಹಾಗೂ ತೀವ್ರತರ ಯಾತನೆಯನ್ನು ಅನುಭವಿಸುತ್ತಾರೆ. ನನ್ನ ಬಳಿ ಆಪ್ತ ಸಮಾಲೋಚನೆಗೆ ಬರುವ ಕೆಲವು ಯುವತಿಯರು ಇಂಥ ಅನುಭವಗಳಿಂದಾಗಿ ತಮ್ಮ ಉದ್ಯೋಗವನ್ನೇ ಬದಲಿಸಿದ ಉದಾಹರಣೆಗಳೂ ಇವೆ” ಎನ್ನುತ್ತಾರೆ ಪೀಪಲ್ ಟ್ರೀ ಮಾರ್ಗ ಮಾನಸಿಕ ರೋಗ ಆಸ್ಪತ್ರೆಯಲ್ಲಿ ಕನ್ಸಲ್ಟೆಂಟ್ ಆಗಿರುವ ಡಾ.ಸಂದೀಪ್ ದೇಶ್’ಪಾಂಡೆ. “ವಿಶೇಷವಾಗಿ ನೈಟ್ ಶಿಫ್ಟ್’ನಲ್ಲಿ ಕೆಲಸ ಮಾಡುವ ಮಹಿಳೆಯರು ಪುರುಷರಿಂದ ಹೆಚ್ಚು ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಇದು ಪದೇಪದೇ ನಡೆದರೆ ಮಹಿಳೆಯು ಮಾನಸಿಕವಾಗಿ ಕುಗ್ಗಿಹೋಗುತ್ತಾಳೆ ಮಾತ್ರವಲ್ಲ, ತನ್ನ ದೇಹದ ಬಗ್ಗೆ ಜಿಗುಪ್ಸೆಪಡಲು ಆರಂಭಿಸುತ್ತಾಳೆ. ಇದರಿಂದ ತನ್ನ ಸಂಗಾತಿಯೊಡನೆ ಲೈಂಗಿಕವಾಗಿ ಪ್ರೇಮದಿಂದ ಸಹಕರಿಸುವುದು ಕೂಡ ಕಷ್ಟವಾಗುತ್ತದೆ. ರಸ್ತೆ ಹಾಗೂ ಉದ್ಯೋಗಸ್ಥಳದಲ್ಲಿ ಮಹಿಳೆ ಅನುಭವಿಸುವ ದೌರ್ಜನ್ಯದ ಪರಿಣಾಮವು ಆಕೆಯ ಕುಟುಂಬದ ಮೇಲಾಗುತ್ತದೆ” ಎನ್ನುತ್ತಾರೆ ಡಾ.ದೇಶ್’ಪಾಂಡೆ.

ದೌರ್ಜನ್ಯದ ಪರಿಣಾಮ

“ನಾನು ಪ್ರಜ್ಞಾಪೂರ್ವಕವಾಗಿ ಹಾಗೆ ಮಾಡಿದೆನೋ ಇಲ್ಲವೋ ಗೊತ್ತಿಲ್ಲ. ಆದರೆ, ಆ ಘಟನೆಯ ನಂತರ ನನ್ನ ಉಡುಗೆ ತೊಡುಗೆಯ ಶೈಲಿಯಲ್ಲಿ ಬದಲಾವಣೆಯಾಗಿದ್ದಂತೂ ಹೌದು. ನಂತರದಲ್ಲಿ ನಾನು ಸ್ವಲ್ಪ ದೊಗಲೆಯಿರುವ ಬಟ್ಟೆಯನ್ನು ತೊಟ್ಟುಕೊಳ್ಳತೊಡಗಿದ್ದೇನೆ. ಹೆಚ್ಚು ಜಾಗ್ರತೆಯಿಂದ, ಆಚೀಚೆ ಗಮನ ಹರಿಸುತ್ತ ಓಡಾಡತೊಡಗಿದ್ದೇನೆ. ಮತ್ತೊಮ್ಮೆ ಅಂಥ ಅನುಭವವನ್ನು ಎದುರಿಸಲು ನಾನಂತೂ ತಯಾರಿಲ್ಲ” ಎನ್ನುತ್ತಾರೆ ಇಂಡಿಯನ್ ಇನ್ಸ್’ಟಿಟ್ಯೂಟ್ ಫಾರ್ ಹ್ಯೂಮನ್ ಸೆಟಲ್’ಮೆಂಟ್ಸ್ (IIHS)ನ ಉದ್ಯೋಗಿ, ಸೈಕ್ಲಿಸ್ಟ್ ಕೂಡಾ ಆಗಿರುವ ಶ್ಯಾಮಲಾ ಸುರೇಶ್.

ಅವರು 10 – 12 ವರ್ಷದವರಾಗಿದ್ದಾಗಲೇ ಅಂಥ ದೌರ್ಜನ್ಯವನ್ನು ಅನುಭವಿಸಿದ್ದರು. ಚಿತ್ರಕಲೆ ತರಗತಿಗೆ ಇನ್ನಿಬ್ಬರು ಸಹಪಾಠಿಗಳೊಡನೆ ರಸ್ತೆಯಲ್ಲಿ ಹೋಗುತ್ತಿರುವಾಗ ಹಿಂಬಾಲಿಸಿ ಬಂದ ಪುರುಷನೊಬ್ಬ ಆಕೆಯ ಹಿಂಭಾಗವನ್ನು ಅವುಚಿ ಹಿಡಿದಿದ್ದ. ಆಕೆ ಆತನಿಂದ ತಪ್ಪಿಸಿಕೊಂಡು, ಸಹಪಾಠಿಗಳೊಡನೆ ತರಗತಿಯೊಳಗೆ ನುಗ್ಗಿದ್ದರು.

ಈ ಅನುಭವದ ನಂತರ ತಾವು ಸೈಕ್ಲಿಸ್ಟ್ ಆಗಲು ಹಾಗೂ ದೇಹವನ್ನು ಹುರಿಗಟ್ಟಿಸಿಕೊಳ್ಳಲು ನಿರ್ಧಾರ ಮಾಡಿದ್ದಾಗಿ ಶ್ಯಾಮಲಾ ಹೇಳುತ್ತಾರೆ. ಕಾಲೇಜಿಗೆ ಹೋಗುವಾಗ ಅವರ ಗೆಳತಿಯರು ಅಸಭ್ಯ ವರ್ತನೆ ತೋರುವ ಗಂಡಸಿನ ಕಾಲು ತುಳಿಯುವುದು, ಇಲ್ಲವೇ ಅವರ ದೇಹ ತಾಕದಂತೆ ಬ್ಯಾಗ್ ಅಡ್ಡವಿಟ್ಟುಕೊಳ್ಳುವುದು ಮಾಡುತ್ತಿದ್ದರಂತೆ. “ಆದರೆ, ಹೀಗೆ ಮಾಡುವುದರಿಂದ ಗಂಡಸರು ಪ್ರಚೋದನೆಗೆ ಒಳಗಾಗಬಹುದು. ನಾಳೆ ದಿನ ಅವರು ನಮ್ಮ ಮೇಲೆ ಆ್ಯಸಿಡ್ ಎರಚಲೂಬಹುದು” ಎಂದು ಶ್ಯಾಮಲಾ ಆತಂಕಪಡುತ್ತಾರೆ.

ಬೆಂಗಳೂರಿನಲ್ಲಿ ಬಹುತೇಕ ಸೈಕಲ್’ನಲ್ಲಿಯೇ ಓಡಾಡುವ ಮಹಿಳೆಯೊಬ್ಬರು ನಡೆಯುವುದು ಅಥವಾ ಆಟೋದಲ್ಲಿ ಓಡಾಡುವುದಕ್ಕಿಂತ ಸೈಕಲ್ ತುಳಿದುಕೊಂಡು ಪ್ರಯಾಣಿಸುವುದೇ ಹೆಚ್ಚು ಸುರಕ್ಷಿತ ಎಂದು ಅಭಿಪ್ರಾಯಪಡುತ್ತಾರೆ. ಅವರು ಒಮ್ಮೆ ಸಲ್ವಾರ್ ಧರಿಸಿ ನಡೆದು ಹೋಗುತ್ತಿರುವಾಗ ಬೈಕ್’ನಲ್ಲಿ ಹೋಗುತ್ತಿದ್ದ ಪುರುಷನೊಬ್ಬ ಅವರ ದೇಹವನ್ನು ಸವರಿಕೊಂಡು ಹೋದನಂತೆ. ಅಂದಿನಿಂದ ನಾನು ಹೆಚ್ಚಿನದಾಗಿ ಪ್ಯಾಂಟ್ – ಷರಟುಗಳನ್ನೆ ಧರಿಸುತ್ತೇನೆ. ದೇಹ ಮುಚ್ಚುವಂತೆ ಅವನ್ನು ತೊಡುತ್ತೇನೆ. ಮಕ್ಕಳಿಂದ ಹಿಡಿದು ಮುದುಕರವರೆಗೆ ಜನರು ನನ್ನನ್ನು ಕೇಳುವುದು ಒಂದೇ ಪ್ರಶ್ನೆ : “ಹುಡುಗನಾ ಹುಡುಗೀನಾ?” ಎಂದು! ನಮ್ಮ ಲಿಂಗವೂ ಮತ್ತೊಬ್ಬರ ಪ್ರತಿಕ್ರಿಯೆಯನ್ನು ಪ್ರಚೋದಿಸುವ ಅಂಶವಾಗಿರುತ್ತದೆ” ಎನ್ನುತ್ತಾರವರು.

ಕ್ಲಿನಿಕಲ್ ಸೈಕಾಲಜಿಸ್ಟ್ ಹಾಗೂ ಸ್ಟುಡೆಂಟ್ ಕೌನ್ಸೆಲರ್ ಆಗಿರುವ ಸೋನಮ್ ಮನೋಜ್ ತಮ್ಮ ಬಳಿ ಬಂದ ಕೇಸ್ ಒಂದರ ಕುರಿತು ಹೇಳುತ್ತಾರೆ. ಮನೆಯಲ್ಲಾಗಲೀ, ಹೊರಗಡೆಯಾಗಲೀ, ಯಾವುದೇ ಗಂಡಸಿನ ಉಪಸ್ಥಿತಿಯಲ್ಲಿ ತನ್ನ ಮಗಳು ಎಷ್ಟು ಸುರಕ್ಷಿತ ಅನ್ನುವ ಬಗ್ಗೆಯ ತಾಯಿಯೊಬ್ಬರು ವಿಪರೀತ ಆತಂಕಪಟ್ಟು ಬಂದಿದ್ದರಂತೆ. “ಅವರು ಪ್ರತಿಯೊಬ್ಬ ಗಂಡಸನ್ನೂ ಅನುಮಾನಿಸುತ್ತಿದ್ದರು. ಸ್ವತಃ ತನ್ನ ಗಂಡ ಹಾಗೂ ಮಾವನನ್ನು ಕೂಡಾ” ಸುಮಾರು ಒಂದೂವರೆ ವರ್ಷ ಕಾಲ ಚಿಕಿತ್ಸೆ ನೀಡಿದ ಮೇಲೆ, ಅವರ ಆತಂಕ ಸ್ವತಃ ಅವರದೇ ಅನುಭವದ ಜೊತೆ ತಿಳಿದುಬಂದಿತ್ತು.

ಆಕೆ 12 ವರ್ಷದವಳಾಗಿದ್ದಾಗ ಮನೆಯ ಎದುರಲ್ಲೇ ಅಂಗಡಿ ಹಾಕಿಕೊಂಡಿದ್ದ ಚಹಾ ವ್ಯಾಪಾರಿಯ ಅಸಭ್ಯ ವರ್ತನೆಯಿಂದ ಆಘಾತಗೊಂಡಿದ್ದರು. ಆ ವ್ಯಕ್ತಿ ಬಹಳ ವರ್ಷಗಳಿಂದ ಅವರ ಮನೆ ಎದುರಲ್ಲಿದ್ದು, ಕುಟುಂಬದವರ ವಿಶ್ವಾಸ ಗಳಿಸಿದ್ದ. ಆದರೆ ಆ ಹುಡುಗಿಯ ಜೊತೆ ಅನುಚಿತವಾಗಿ ವರ್ತಿಸಿದ್ದ. ಇದು ಆಕೆಯಲ್ಲಿ ಅಸಹ್ಯ ಹುಟ್ಟುಹಾಕಿತ್ತು. ಒಮ್ಮೆ ಆತನಿಗೆ ನೀರು ಕೊಡು ಎಂದು ತಂದೆ ಹೇಳಿದಾಗ ಆಕೆ ಅದನ್ನು ನಿರ್ಲಕ್ಷಿಸಿದ್ದಳು. ಇದರಿಂದ ತಂದೆ ಮಗಳ ಮಧ್ಯೆ ಮುನಿಸು ಬೆಳೆದು ಎರಡು ವರ್ಷಗಳ ಕಾಲ ಅವರು ಮಾತುಕತೆಯಾಡಿರಲಿಲ್ಲ. ಮುಂದೆ ಆಕೆ ಸ್ವತಂತ್ರ, ದಿಟ್ಟ ಮಹಿಳೆಯಾಗಿ ಬೆಳೆದಳು. ದೂರದೂರದ ನಗರಗಳಲ್ಲಿ ಕೆಲಸ ಮಾಡುತ್ತಾ ಒಬ್ಬರೇ ವಾಸವಿದ್ದು ಬದುಕು ಕಟ್ಟಿಕೊಂಡರು. ಆದರೆ ಬಾಲ್ಯದ ಅನುಭವ ಅವರೊಳಗೆ ಮಡುಗಟ್ಟಿದ್ದು, ಈಗ, ತಮ್ಮ ಮಗಳ ಬಗೆಗಿನ ಭಯವಾಗಿ ಹೊರಹೊಮ್ಮಿತ್ತು.

ಮೇಲಿಂದ ಮೇಲೆ ದೌರ್ಜನ್ಯವನ್ನು ಅನುಭವಿಸಿದ್ದರೆ ಅಥವಾ ಅಂಥದ್ದನ್ನು ನೋಡುತ್ತಿದ್ದರೆ, ಯಾವುದೇ ಹೆಣ್ಣಿನ ಮನಸ್ಸು ಅತ್ಯಂತ ಸೂಕ್ಷ್ಮವಾಗಿ ಹೋಗುತ್ತದೆ ಎನ್ನುತ್ತಾರೆ ನಿಮ್ಹಾನ್ಸ್’ನಲ್ಲಿ ಸೈಕಿಯಾಟ್ರಿ ವಿಭಾಗದ ಮುಖ್ಯಸ್ಥರೂ ಪ್ರಾಧ್ಯಾಪಕರೂ ಆಗಿರುವ ಡಾ.ಪ್ರಭಾ ಚಂದ್ರ. “ಇಂತ ಅನುಭವಗಳಿಂದ ಹೆಣ್ಣು ತಾನು ವಂಚನೆಗೆ ಒಳಗಾದೆನೆಂಬ ಭಾವನೆ ಬೆಳೆಸಿಕೊಳ್ಳುತ್ತಾಳೆ. ಸಮಾಜದ ಕುರಿತು ಆಕ್ರೋಶ ಹಾಗೂ ದ್ರೋಹವೆಸಗಿದ ಭಾವನೆಯೂ ಬೆಳೆಯುತ್ತದೆ. ಪದೇ ಪದೇ ಯಾರಾದರೂ ಮುಟ್ಟಿದರೆ ಅನ್ನುವ ಆತಂಕದಲ್ಲಿ ತನ್ನ ಹೆಗಲನ್ನೇ ಗಮನಿಸುತ್ತಾ, ಪ್ರತಿ ಮೋಟಾರ್ ಬೈಕ್ ಸದ್ದಿಗೂ ಬೆಚ್ಚಿ ಬೀಳುತ್ತಾ ನಡೆಯುವುದು ಆಕೆಯನ್ನು ಅಸಹಾಯಕ ಸ್ಥಿತಿಗೆ ದೂಡುತ್ತದೆ. ಅಷ್ಟೇ ಅಲ್ಲ, ಹೆಣ್ಣು ತನ್ನ ದೇಹದ ಬಗ್ಗೆ ಅಸಹ್ಯಪಟ್ಟುಕೊಳ್ಳಲು ಆಕೆಯನ್ನು ಗಂಡು ಅಸಭ್ಯವಾಗಿ ಮುಟ್ಟಲೇಬೇಕೆಂದಿಲ್ಲ; ಯಾರಾದರೂ ಆಕೆಯನ್ನು ಮೇಲಿಂದ ಕೆಳಗೆ ಅಶ್ಲೀಲವಾಗಿ ದಿಟ್ಟಿಸಿ ನೋಡಿದರೂ ಆಕೆ ಮುಜುಗರಕ್ಕೆ, ಚಡಪಡಿಕೆಗೆ ಒಳಗಾಗುತ್ತಾಳೆ. ಆಕೆಯ ಪಾಲಿಗೆ ಅದೊಂದು ಕೆಟ್ಟ ಅನುಭವವಾಗಿರುತ್ತದೆ” ಅನ್ನುತ್ತಾರೆ ಡಾ.ಪ್ರಭಾ ಚಂದ್ರ.

“ಇಂಥಾ ದೌರ್ಜನ್ಯಗಳು ಮೇಲಿಂದ ಮೇಲೆ ನಡೆದರೆ ಹಾಗೂ ಹೆಣ್ಣಿಗೆ ಯಾವುದೇ ದಿಟ್ಟ ಪ್ರತಿಕ್ರಿಯೆ ನೀಡಲು ಸಾಧ್ಯವಾಗದೆ ಹೋದರೆ, ಅದು ಆಕೆಯನ್ನು ಜೀವನದ ಉದ್ದಕ್ಕೂ ಬಾಧಿಸುತ್ತದೆ. ತೀವ್ರ ಸನ್ನಿವೇಶಗಳಲ್ಲಿ ಆಕೆ ಒಬ್ಬಳೇ ಹೊರಗೆ ಕಾಲಿಡಲಿಕ್ಕೂ ಹೆದರುವ ಸ್ಥಿತಿ ನಿರ್ಮಾಣವಾಗುತ್ತದೆ.” ಎಂದೂ ಅವರು ಹೇಳುತ್ತಾರೆ.

“ಇದೊಂದು ಜಾಗತಿಕ ಸಮಸ್ಯೆಯೇ ಆಗಿದ್ದರೂ ಎಲ್ಲ ಮಹಿಳೆಯರೂ ಹೀಗೆ ಇರುವುದಿಲ್ಲ. ಎಷ್ಟೋ ಯುವತಿಯರು ಏಕಾಂಗಿಯಾಗಿ ಎಲ್ಲವನ್ನೂ ಎದುರಿಸಿ ಆತ್ಮವಿಶ್ವಾಸ ಕಾಯ್ದಿಟ್ಟುಕೊಳ್ಳುತ್ತಾರೆ. ಪ್ರತಿರೋಧ ತೋರುತ್ತಾರೆ. ರಾತ್ರಿ ತಡಹೊತ್ತಿನವರೆಗೂ ಕೆಲಸ ಮಾಡಿ ಮನೆಗೆ ಮರಳುವುದು, ಒಬ್ಬರೇ ವಾಹನ ಚಲಾಯಿಸುವುದು, ಅಂಗಡಿಗೆ ಹೋಗುವುದು – ಇಂಥಾ ಯಾವುದಕ್ಕೂ ಅವರು ಹಿಂಜರಿಯುವುದಿಲ್ಲ. ಅವರು ಹೆಚ್ಚು ಸಬಲರಾಗಿ ಕಾಣಿಸಿಕೊಳ್ಳುತ್ತಾರೆ” ಎಂದೂ ಅವರು ಮಾತು ಸೇರಿಸುತ್ತಾರೆ.

ಮಹಿಳೆಯರು ಇಂಥ ಸಮಸ್ಯೆಗಳ ಬಗ್ಗೆ ಹೆಚ್ಚು ಮುಕ್ತವಾಗಿ ಮಾತನಾಡಬೇಕೆಂದು ಡಾ.ಪ್ರಭಾ ಚಂದ್ರ ಹೇಳುತ್ತಾರೆ. “ನಿಮ್ಮ ಭಯಗಳನ್ನೂ ಭಾವನೆಗಳನ್ನೂ ಮುಕ್ತವಾಗಿ ಹಂಚಿಕೊಳ್ಳಿ. ಇಂಥದ್ದು ನಿಮಗೆ ಮಾತ್ರ ಆಗುತ್ತಿದೆ ಎಂದು ತಿಳಿಯಬೇಡಿ. ನಿಮ್ಮೊಡನೆ ಅನುಚಿತವಾಗಿ ವರ್ತಿಸಿದವರ ಹೆಸರನ್ನು ಬಹಿರಂಗಪಡಿಸಿ. ವ್ಯವಸ್ಥಿತ ರೀತಿಯಲ್ಲಿ ‘ನೇಮಿಂಗ್ ಅಂಡ್ ಶೇಮಿಂಗ್’ (ಹೆಸರಿಸುವ ಮೂಲಕ ತಕ್ಕ ಶಾಸ್ತಿ ಮಾಡುವುದು) ಮೂಲಕ ಪಾಠ ಕಲಿಸಿ. ಇದು ಮಹಿಳೆಯರ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುತ್ತದೆ. ನಿಮ್ಮ ಬ್ಲಾಗ್’ನಲ್ಲಿ ಈ ಕುರಿತು ಬರೆಯಿರಿ. ಸ್ಥಳೀಯ ಪತ್ರಿಕೆಗಳಲ್ಲಿ ನಿಮ್ಮ ನಗರ – ಪಟ್ಟಣಗಳ ಅಸುರಕ್ಷಿತ ಸ್ಥಳಗಳ ಬಗ್ಗೆ ಬರೆದು ಗಮನ ಸೆಳೆಯಿರಿ ಹಾಗೂ ಅಲ್ಲಿ ಪೊಲೀಸರ ಅಗತ್ಯವಿರುವುದನ್ನು ಸಕಾರಣವಾಗಿ ತಿಳಿಸಿ, ಅದಕ್ಕಾಗಿ ಆಗ್ರಹಿಸಿ.” ಎಂದು ಅವರು ಸಲಹೆ ನೀಡುತ್ತಾರೆ.

ಸ್ವಿಮ್ಮಿಂಗ್ ಹಾಗೂ ವ್ಯಾಯಾಮ ಶಿಕ್ಷಕಿಯೂ ಆಗಿರುವ ನೃತ್ಯ ಕಲಾವಿದೆ ಪ್ರಿಯಾಂಕ ಪೈ, “ವಾರಕ್ಕೊಮ್ಮೆ ಆತ್ಮರಕ್ಷಣೆಯ ವಿದ್ಯೆಗಳನ್ನು ಅಭ್ಯಾಸ ಮಾಡುವುದು ಒಳ್ಳೆಯದು. ಇದರಿಂದ ನೀವು ಆತಂಕ ರಹಿತವಾಗಿ ಓಡಾಡಬಹುದು. ನಿಮ್ಮ ದೇಹವನ್ನು ಸದೃಢವಾಗಿಟ್ಟುಕೊಳ್ಳುವುದು ಕೂಡ ಈ ನಿಟ್ಟಿನಲ್ಲಿ ಸಹಕಾರಿ” ಎಂದು ಕಿವಿಮಾತು ಹೇಳುತ್ತಾರೆ. ಮಹಿಳೆಯರ ಸುರಕ್ಷತೆಗಾಗಿ ತರಬೇತಿ ನೀಡುವ ಕಾರ್ಯಾಗಾರವೊಂದರಲ್ಲಿ ತರಬೇತುದಾರರಾಗಿ ಭಾಗವಹಿಸಿದ್ದ ಪ್ರಿಯಾಂಕಾ, ದಿನಬಳಕೆಯ ಹೇರ್ ಪಿನ್, ಚತ್ರಿ ಹಾಗೂ ಕೀ ಗೊಂಚಲುಗಳನ್ನೇ ಬಳಸಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಮಾಹಿತಿ ನೀಡುತ್ತಿದ್ದರು. “ನಿಮ್ಮ ಹಾಗೆ ನಿಮ್ಮ ಮೇಲೆರಗುವ ಪುರುಷನೂ ಸಾಕಷ್ಟು ಸನ್ನದ್ಧನಾಗಿಯೇ ಇರುತ್ತಾನೆ ಅನ್ನುವುದನ್ನು ನೆನಪಿಡಿ. ಆದ್ದರಿಂದ ನೀವು ಅಂಥ ಸನ್ನಿವೇಶ ಎದುರಾದಾಗ ಸಾಧ್ಯವಾದಷ್ಟು ಗಟ್ಟಿ ದನಿಯಲ್ಲಿ ಕಿರುಚಿ ಜನರ ಗಮನ ಸೆಳೆಯಲು ಪ್ರಯತ್ನಿಸಿ. ನಿಮ್ಮ ದೇಹವನ್ನು ಓಡುವುದಕ್ಕೆ ಹೊಂದಾಣಿಕೆಯಾಗುವಂತೆ ಅಣಿಗೊಳಿಸಿಕೊಳ್ಳಿ” ಅನ್ನುವ ಪ್ರಿಯಾಂಕಾ, “ನಿಮ್ಮ ಫೋನ್ ಸದಾ ಸಂಪೂರ್ಣ ಚಾರ್ಜ್ ಆಗಿರಲಿ. ಕನಿಷ್ಠ 5 ಜನರ ನಂಬರ್’ಗಳು ನಿಮ್ಮ ನೆನಪಿನಲ್ಲಿರಲಿ.” ಎಂದೂ ಸೂಚಿಸುತ್ತಾರೆ.

‘ವೈ ಲೋಯ್ಟರ್?’ (ಸಮೀರಾ ಖಾನ್, ಶಿಲ್ಪಾ ಫಡ್ಕೆ ಹಾಗೂ ಶಿಲ್ಪಾ ರಾನಡೆ ಜಂಟಿಯಾಗಿ ಬರೆದಿರುವ ಪುಸ್ತಕ) ಕೃತಿಯು ಹೆಣ್ಣುಮಕ್ಕಳಿಗೆ ಕೊಡಲಾಗಿರುವ ಸೀಮಿತ ಸಾಮಾಜಿಕ ಅವಕಾಶದ ಬಗ್ಗೆ ಚರ್ಚಿಸುತ್ತದೆ. ಮಹಿಳೆಯರು ಉಲ್ಲಸಿತರಾಗಲು ಅಥವಾ ಮನರಂಜನೆ ಪಡೆಯಲು ಇರುವ ಸುರಕ್ಷಿತ ಸ್ಥಳಗಳ ಸಂಖ್ಯೆ ಬಹಳ, ಬಹಳ ಕಡಿಮೆ. “ಉದ್ಯೋಗ, ಜವಾಬ್ದಾರಿ ಎಲ್ಲದರಲ್ಲೂ ಸಮಾನವಾಗಿ ಹೆಗಲು ಕೊಡುವ ಮಹಿಳೆಯರಿಗೆ ನಗರದಲ್ಲಿಯೂ ಸಮಾನ ಅವಕಾಶ ಸಿಗಬೇಕು. ಸಾರ್ವಜನಿಕ ಸ್ಥಳಗಳನ್ನು ಅವರು ಕೂಡ ತಮ್ಮ ಬಯಕೆಯಂತೆ ಬಳಸಿಕೊಳ್ಳಲು ಅವಕಾಶ ಇರಬೇಕು. ಅದನ್ನು ಹೆಚ್ಚು ಹೆಚ್ಚು ಪ್ರೋತ್ಸಾಹಿಸಬೇಕು. ಮಹಿಳೆಯರು, ತಾವು ವಾಸಿಸುವ ನಗರ ತಮ್ಮದೂ ಆಗಿದೆ ಎಂದು ಹೇಳಿಕೊಳ್ಳುವ ಕಾಲ ಬಂದಿದೆ. ಅದನ್ನು ನಾವು ಮಾಡಬೇಕೆಂದೇ ಈ ಪುಸ್ತಕ ಬರೆದೆವು” ಎನ್ನುತ್ತಾರೆ ಸಮೀರಾ ಖಾನ್.

ಸಾರ್ವಜನಿಕ ಸ್ಥಳದಲ್ಲಿ ನಿಮಗಿಷ್ಟ ಬಂದಂತೆ ಇರುವುದನ್ನು ಕಲ್ಪಿಸಿಕೊಳ್ಳಲು ನಿಮ್ಮಿಂದ ಸಾಧ್ಯವಾಗದೆ ಹೋದರೆ ನೀವು ಪುರುಷ ಚಿಂತನೆಯ ‘ಮುಖ್ಯವಾಹಿನಿ’ಗೆ ಸೇರಿಲ್ಲವೆಂದು ಪರಿಗಣಿಸಲ್ಪಡುತ್ತೀರಿ. ಹಾಗಿಲ್ಲದೆ, ಅಂಥದೊಂದು ಕಲ್ಪನೆ ನಿಮ್ಮಿಂದ ಸಾಧ್ಯವಾದರೆ, ನಿಮ್ಮ ತೋಳುಗಳನ್ನು ಅಗಲಿಸಿ, ನೋಟವನ್ನು ವಿಸ್ತರಿಸಿ, ಹೆಣ್ಣುಮಕ್ಕಳ ದೈನಂದಿನ ಬದುಕಿನಾಳಕ್ಕೆ ದೃಷ್ಟಿ ಹಾಯಿಸಿ ಅವಕಾಶವನ್ನು ಕಣ್ತುಂಬಿಸಿಕೊಳ್ಳಿ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org