ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ವಿಶ್ವ ಆರೋಗ್ಯ ದಿನಾಚರಣೆ

ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ವಿಶ್ವ ಆರೋಗ್ಯ ದಿನಾಚರಣೆ - 8 ಏಪ್ರಿಲ್ 2017

ಇದೇ ಶನಿವಾರ, ನಿಮ್ಹಾನ್ಸ್ ಆಸ್ಪತ್ರೆಯ ಸಭಾಂಗಣದಲ್ಲಿ, ರಾಜ್ಯ ಆರೋಗ್ಯ ಮತ್ತು ಕಲ್ಯಾಣ ಇಲಾಖೆಯೊಂದಿಗಿನ ಸಹಯೋಗದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವರ್ಷದ ಥೀಮ್-’ ಖಿನ್ನತೆ’- ಬನ್ನಿ ಮಾತಾಡೋಣ. ಈ ಕಾರ್ಯಕ್ರಮದಲ್ಲಿ ಆಂಕೋಲಜಿ, ಕಾರ್ಡಿಯಾಲಜಿ, ಗೈನಕಾಲಜಿ, ರಕ್ತದೊತ್ತಡ ಮತ್ತು ಎಂಡೋಕ್ರೈನಾಲಜಿ ಹಾಗು ಶಿಶು ಮತ್ತು ತರುಣರ ಮನೋವೈದ್ಯಶಾಸ್ತ್ರ , ಮನೋವೈದ್ಯಕೀಯ ಮತ್ತು ಸಾಮಾಜಿಕ ಸೇವೆ, ಮತ್ತಿತರ ವಿಭಾಗಕ್ಕೆ  ಸೇರಿದ ಹಲವಾರು ತಜ್ಞರು ಭಾಗವಹಿಸಿದ್ದರು.  

ರಾಷ್ಟ್ರೀಯ ಆರೋಗ್ಯ ಮಿ‍ಷನ್ ನ ನಿರ್ದೇಶಕರಾದ  ಶ್ರೀ ರತನ್ ಕೇಳ್ಕರ್ ಮಾತನಾಡುತ್ತಾ ‘ಬನ್ನಿ ಮಾತಾಡೋಣ’ ಎಂಬ ಪರಿಕಲ್ಪನೆ ಹಲವು ಅರ್ಥ ಕೊಡುತ್ತದೆ. ಆದರೆ ಖಿನ್ನತೆಯ ಬಗ್ಗೆ ಕೇವಲ ಮಾತನಾಡಿದರೆ ಸಾಲದು. ಬದಲಾಗಿ, ಸಮಸ್ಯೆಯಲ್ಲಿರುವ ವ್ಯಕ್ತಿ ಮಾತನಾಡುವಾಗ ತಾಳ್ಮೆಯಿಂದ ಕೇಳುವ ಮತ್ತು ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಬೆಳಸಿಕೊಳ್ಳಬೇಕು”ಎಂಬ ಸಂದೇಶ ನೀಡಿದರು. ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕರಾದ ಡಾ. ಲಿಂಗೇಗೌಡ ಮಾತನಾಡುತ್ತಾ, ಕ್ಯಾನ್ಸರ್ ರೋಗಿಗಳಿಗೆ ತಮ್ಮ ರೋಗದ ಬಗ್ಗೆ ತಿಳಿದ ನಂತರ ತೀರ್ವ ಒತ್ತಡಕ್ಕೆ ಸಿಲುಕುತ್ತಾರೆ. ಇದರಿಂದ ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.  

ರಂಗಾದೊರೆ ಮೆಮೊರಿಯಲ್ ಆಸ್ಪತ್ರೆಯ ಪ್ರಸೂತಿ ತಜ್ಞರಾದ ಡಾ. ಲತಾ ವೆಂಕಟರಾಮ್ ಮಾತನಾಡುತ್ತಾ ಪ್ರಸವಾನಂತರ ಬೆಂಗಳೂರಿಗೆ ವಲಸೆ ಬಂದ ಹಲವಾರು ಮಹಿಳೆಯರಿಗೆ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲಾಗದೇ ಒಂಟಿತನ ಕಾಡುತ್ತದೆ. ಕ್ರಮೇಣ ಖಿನ್ನತೆಯ ಲಕ್ಷಣ ಕಾಣಿಸಿಕೊಳ್ಳುತ್ತದೆ. ಅಂತಹವರನ್ನು ಗುರುತಿಸಿ ಮನೋಸಾಮಾಜಿಕ ಮಧ್ಯಸ್ಥಿಕೆ ನೀಡಲು  ಹಲವಾರು ಪ್ರಸೂತಿ ತಜ್ಞರು  ಸೋಲುತ್ತಾರೆ ಎಂದು ತಮ್ಮ ಅನುಭವ ಹಂಚಿಕೊಂಡರು.

ರಾಜೀವ್ ಗಾಂಧಿ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಡಾ. ಶಶಿಧರ್ ಬುಗ್ಗಿ ಮಾತನಾಡುತ್ತಾ,  ಕ್ಷಯರೋಗ ಇರುವವರಲ್ಲಿ ಖಿನ್ನತೆ  ಸಾಮಾನ್ಯವಾಗಿರುತ್ತದೆ.  ಮಾನಸಿಕ ಆರೋಗ್ಯ ಸೇವೆಯ ಸಹಯೋಗವಿದ್ದಾಗ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ನಿಮ್ಹಾನ್ಸ್ ಆಸ್ಪತ್ರೆಯ ಮಕ್ಕಳ ಮತ್ತು ತರುಣರ ಮನೋವೈದ್ಯರಾದ ಡಾ. ಜಾನ್ ವಿಜಯ್ ಸಾಗರ್ ಮಾತನಾಡುತ್ತಾ ಮಕ್ಕಳಲ್ಲಿ ಖಿನ್ನತೆಯ ಲಕ್ಷಣಗಳು ವಿಭಿನ್ನವಾಗಿರುತ್ತದೆ ಮತ್ತು ಮಕ್ಕಳು ತಮ್ಮ ಭಾವನೆಯನ್ನು ವ್ಯಕ್ತಪಡಿಸಲು ಸಾಧ್ಯವಾಗದಿದ್ದಾಗ, ನಡವಳಿಕೆಯಲ್ಲಿ ಬದಲಾವಣೆ ಕಾಣಿಸುತ್ತದೆ. ಸೂಕ್ತ ಸಮಯದಲ್ಲಿ ಪೋಷಕರು ಇದನ್ನು ಗುರುತಿಸಿ ಸಹಾಯ ಪಡೆಯಬೇಕು ಎಂದು ಹೇಳಿದರು. ಮನೋವೈದ್ಯಕೀಯ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕರಾದ ಡಾ.ಶಿವರಾಮ ವರಾಂಬಲ್ಲಿ ಮಾತನಾಡುತ್ತಾ, ಚಿಕಿತ್ಸೆಯಿಂದ ಮಾನಸಿಕ ಸಮಸ್ಯೆಗಳನ್ನು ಗುಣಪಡಿಸುವ ಹಾಗೆಯೇ, ಯೋಗ ಮತ್ತು ಆಯುರ್ವೇದ  ಮೆದುಳಿನ ಅಂಗಾಂಶವನ್ನು ಸದೃಢಗೊಳಿಸಿ, ಅದರ ಕಾರ್ಯಚಟುವಟಿಕೆಗಳನ್ನು ಉತ್ತಮಗೊಳಿಸಬಹುದು ಮತ್ತು ಇದರಿಂದ ಖಿನ್ನತೆಯನ್ನು ತಡೆಗಟ್ಟಬಹುದು ಮತ್ತು  ಯೋಗ ಮಾಡುವುದರಿಂದಲೂ ಸಹ ಖಿನ್ನತೆ ತಡೆಗಟ್ಟಬಹುದು ಎಂದು ಹೇಳಿದರು.

ಈ ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಸೇವಾ ಇಲಾಖೆಯ ಹಿರಿಯ ಮುಖ್ಯ ವೈದ್ಯಾಧಿಕಾರಿ ಡಾ.ರಾಜೇಂದ್ರೆ ಪಿ.ಜೋಷಿ, ನಿಮ್ಹಾನ್ಸ್ ಆಸ್ಪತ್ರೆಯ ಸೈಕಿಯಾಟ್ರಿಕ್ ಸೋಷಿಯಲ್ ವರ್ಕ್ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಪ್ರಿಯಾ ಟ್ರೀಸಾ ಥಾಮಸ್, ವಿಶ್ವ ಆರೋಗ್ಯ ಸಂಸ್ಥೆಯ ದಕ್ಷಿಣ ಭಾರತ ಪ್ರಾದೇಶಕ ತಂಡದ ಮುಖ್ಯಸ್ಥರಾದ ಆಶೀಷ್ ಸತ್ಪತಿ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ನ ನಿರ್ದೇಶಕರಾದ ರತನ್ ಕೇಳ್ಕರ್ ಭಾಗವಹಿಸಿದ್ದರು.

ಕಾರ್ಯಕ್ರಮದ ಎರಡನೇ ಭಾಗದಲ್ಲಿ ಭಾಗವಹಿಸಿದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ  ಮಾನಸಿಕ ಸಮಸ್ಯೆಗಳ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಲು ಎಲ್ಲರೂ ಕೈಜೋಡಿಸಬೇಕೆಂಬ ಸಂದೇಶ ನೀಡಿದರು. ರಾಜ್ಯ ಆರೋಗ್ಯ ಮತ್ತು ಕಲ್ಯಾಣ ಇಲಾಖೆಯ ಮಂತ್ರಿಗಳಾದ ಕೆ.ಆರ್.ರಮೇಶ್ ಕುಮಾರ್ ಮಾತನಾಡುತ್ತಾ ಇಂದಿನ ಸಮಾಜದಲ್ಲಿ ಜನರ ಒತ್ತಡಗಳಿಗೆ ಚಿಕ್ಕ ಕುಟುಂಬ ಮತ್ತು ನಗರೀಕರಣವೇ ಕಾರಣ. ಸಾಮಾನ್ಯವಾಗಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಕುಟುಂಬದಲ್ಲಿ ಯಾರೂ ಇಲ್ಲದಿದ್ದಾಗ ಒತ್ತಡ ಹೆಚ್ಚಾಗಿ ಮಾನಸಿಕ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ದುಗುಡ ವ್ಯಕ್ತ ಪಡಿಸಿದರು. ಕೇಂದ್ರ ಸಚಿವ ಶ್ರೀ ಅನಂತ್ ಕುಮಾರ್ ರವರು ಮಾತನಾಡುತ್ತಾ ದೇಶದಲ್ಲಿ ಸುಮಾರು 6% ಜನರು ದೈಹಿಕ ಅನಾರೋಗ್ಯ, ಸಂಬಂಧಗಳಲ್ಲಿ ಬಿರುಕು, ಪ್ರೀತಿಪಾತ್ರರನ್ನು ಕಳೆದುಕೊಂಡಾಗ, ಇತ್ಯಾದಿ ಕಾರಣದಿಂದ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇದು ಬಹಳ ಸೂಕ್ಷ್ಮ ವಿಷಯವಾಗಿದ್ದು ಇದರ ಬಗ್ಗೆ ಎಲ್ಲರೂ ಜಾಗೃತರಾಗಬೇಕಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು. ಕಾರ್ಯಕ್ರಮದಲ್ಲಿ  ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ  ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್, ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಮತ್ತು ಮುಖ್ಯ ಆರೋಗ್ಯ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್, ಮತ್ತಿತರು ಭಾಗವಹಿಸಿದ್ದರು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org