ಸಂಭಾಷಣೆ ಒಂದು ಜೀವ ಉಳಿಸಬಹುದು

ಸಂಭಾಷಣೆ ಒಂದು ಜೀವ ಉಳಿಸಬಹುದು

ಆತ್ಮಹತ್ಯೆ ಬಗ್ಗೆ ಯೋಚಿಸುತ್ತಿರುವವರನ್ನು ಗುರುತಿಸಿ ಸಹಾಯ ನೀಡುವುದು ಕಷ್ಟವಾಗಿರಬಹುದು. ಆದರೆ ಕೆಲವು ವೇಳೆ ಒಂದು ಅನುಭೂತಿಯ ಸಂಭಾಷಣೆ ಒಂದು ಜೀವ ಉಳಿಸಬಹುದು ಎನ್ನುತ್ತಾರೆ ವೈದ್ಯರು.

ನೀವು ಬಹಳ ಸಮಯದ ಬಳಿಕ ನಿಮ್ಮ ನೆರೆಹೊರೆಯವರ ಬಳಿ ಮಾತನಾಡಲು ನಿಂತಿದ್ದೀರಿ. ದಿನನಿತ್ಯದ ಸಂಗತಿಗಳು, ಮಕ್ಕಳು, ಸಂಸಾರ, ಟ್ರಾಫಿಕ್ ಇತ್ಯಾದಿ ವಿಚಾರಗಳ ಕುರಿತು ಮಾತನಾಡುತ್ತೀರಿ. ಹೀಗೆ ಕೆಲ ಕಾಲ ಮಾತಾಡುತ್ತ ನಿಂತಿರುವಾಗ ಇದ್ದಕ್ಕಿದ್ದಂತೆ ಆಕೆ ತುಸು ಹಿಂಜರಿಕೆಯಿಂದಲೇ ತನ್ನ ಜೀವನ ಬದುಕಲು ಯೋಗ್ಯವಲ್ಲ ಎಂಬ ತನ್ನೊಳಗಿನ ಆಲೋಚನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾಳೆ. ಸಹಜವಾಗಿ ಈ ಹೇಳಿಕೆ ಒಂದು ಕ್ಷಣ ನಿಮ್ಮನ್ನು ತಲ್ಲಣಗೊಳಿಸಬಹುದು. ಆದರೆ ತಕ್ಷಣ ಆಕೆಗೆ ನೀವೇನು ಹೇಳುತ್ತೀರಿ ಅಥವಾ ನೀವೇನು ಮಾಡುತ್ತೀರಿ? ನೀವೇನಾದರೂ ಸಹಾಯ ಮಾಡುವಿರಾ ಎಂಬುದು ಇಲ್ಲಿ ಬಹಳ ಮುಖ್ಯ.

ಮೊದಲು ನೀವು ಆಕೆ ಹೇಳುವುದನ್ನು ಪೂರ್ತಿಯಾಗಿ ಕೇಳಿಸಿಕೊಳ್ಳಲು ನಿಮ್ಮ ಸಮಯ ನೀಡಿ. ಆಕೆಯ ಸಮಸ್ಯೆ ಬಗ್ಗೆ ಕಾಳಜಿ ತೋರಿಸುವುದು ಅತ್ಯಂತ ಮುಖ್ಯ. ಯಾವುದೇ ತರಹದ ಆತ್ಮಹತ್ಯೆ ಆಲೋಚನೆ ಖಂಡಿತ ಒಂದು ಸಲ ಸಹಾಯಕ್ಕೆ ಕೈಚಾಚುತ್ತದೆ. ನೀವು ಆತ್ಮಹತ್ಯೆ ಯೋಚನೆ ಬಗ್ಗೆ ಆಕೆಯ ಬಳಿ ಮತ್ತಷ್ಟು ಮಾಹಿತಿ ಕೇಳುವುದರಿಂದ ಆಕೆಯನ್ನು ಪರೋಕ್ಷವಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಿದಂತಾಗುತ್ತದೆ ಎಂಬುದಾಗಿ ಚಿಂತಿಸಬಹುದು. ಆದರೆ ಇಂಥ ಸಮಯದಲ್ಲಿ ಆಕೆಯ ಆಲೋಚನೆ ಕುರಿತು ಮುಕ್ತವಾಗಿ ಮಾತನಾಡುವುದು ಆಕೆಗೆ ಅತ್ಯಂತ ಸಹಾಯಕಾರಿ.

ನಿಮಗೆ ಆಕೆಯ ಬದುಕಿನ ಬಗ್ಗೆ ಕಾಳಜಿ ಇದೆ ಎಂದು ಹೇಳುವ ಮೂಲಕ ಒಂದು ಪುಟ್ಟ ಹೆಜ್ಜೆ ಮುಂದಿಡಿ. ಆಕೆಯ ಕಥೆಯನ್ನು ಸಮಾಧಾನದಿಂದ ಮತ್ತು ಸ್ವೀಕಾರದ ಭಾವದಲ್ಲಿ ಕೇಳಿ. ಇದು ಆಕೆಗೆ ತಾನು ಏಕಾಂಗಿಯಲ್ಲ ಮತ್ತು ತನಗೆ ಸಹಾಯ ಲಭ್ಯವಿದೆ ಎಂಬ ಭಾವನೆ ಮೂಡಿಸುತ್ತದೆ. “ನಿಮ್ಮ ಯೋಚನೆ ಮತ್ತು ಭಾವನೆ ಏನು ಎಂಬುದು ನನಗೆ ಖಚಿತವಾಗಿ ಗೊತ್ತಿಲ್ಲ. ಆದರೆ, ನಾನು ನಿಮ್ಮ ಬಗ್ಗೆ ಕಾಳಜಿ ಹೊಂದಿದ್ದೇನೆ ಮತ್ತು ನಿಮಗೆ ಸಹಾಯ ಮಾಡಲು ಬಯಸುತ್ತೇನೆ.’’ ಎಂಬುದಾಗಿ ಹೇಳಿ. ಅಥವಾ “ಯಾವಾಗಿನಿಂದ ನೀವು ಈ ಭಾವನೆ ತಳೆದಿರುವಿರಿ? ಬದುಕಿನಲ್ಲಿ ಯಾವುದಾದರೂ ಘಟನೆ ನಿಮ್ಮನ್ನು ಈ ರೀತಿ ಆಲೋಚಿಸುವಂತೆ ಮಾಡಿದೆಯಾ?” ಎಂದು ಕೇಳಿ.

ಕೆಲವು ಸಲ ಆಕೆಯ ಮನಃಪರಿವರ್ತನೆ ನಿಟ್ಟಿನಲ್ಲಿ ನಾವು ತ್ವರಿತವಾಗಿ ಬುದ್ಧಿವಾದ ಹೇಳಲು ಮುಂದಾಗಬಹುದು. ಇದೇ ಅವಸರದಲ್ಲಿ ‘ನೀವು ಬದುಕಬೇಕು’, "ಜನರಿಗೆ ಮತ್ತಷ್ಟು ದೊಡ್ಡ ಸಮಸ್ಯೆಗಳಿರುತ್ತವೆ", ಅಥವಾ ‘ನಿಮ್ಮ ಆತ್ಮಹತ್ಯೆ ಕುಟುಂಬಕ್ಕೆ ನೋವು ಉಂಟು ಮಾಡುತ್ತದೆ’ ಎಂದು ಹೇಳಬಹುದು. ‘ನೀವು ಸ್ವಾಭಿಮಾನಿ ಮತ್ತು ದುರ್ಬಲರು’ ಎಂದು ಆಕೆಯ ಬಳಿ ಹೇಳಬಹುದು. ಈ ಎಲ್ಲ ಹೇಳಿಕೆಗಳನ್ನು ನಾವು ಸಹಾಯ ಮಾಡಲೆಂದು ಹೇಳಿರುತ್ತೇವೆ, ಆದರೆ ಇಂಥ ಹೇಳಿಕೆಗಳು ಒಳಿತಿಗಿಂತ ಹೆಚ್ಚು ಹಾನಿ ಮಾಡುತ್ತವೆ. ಹೀಗಾಗಿ ನಾವು ಅವರ ಮಾತುಗಳಿಗೆ ಪ್ರತಿಕ್ರಿಯಿಸುವಾಗ ಬಹಳ ಎಚ್ಚರಿಕೆ ವಹಿಸಬೇಕು. ಅನುಭೂತಿಯಿಂದ ಆಕೆಯ ಮನದಲ್ಲೇನಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಆತ್ಮಹತ್ಯೆ ಬಗ್ಗೆ ಯೋಚಿಸುತ್ತಿರುವವರ ಜೊತೆ ಅನುಭೂತಿಯಿಂದ ಕೂಡಿದ ಒಂದು ಯಥಾರ್ಥ ಸಂಭಾಷಣೆ ತುಂಬಾ ಉಪಯುಕ್ತವಾಗಿರುತ್ತದೆ. ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುತ್ತಿರುವವರ ಅಗತ್ಯತೆ ಏನು? ಅಂದರೆ, ಅವರು ಹಾಗೆ ಯೋಚಿಸಲು ಕಾರಣವೇನು ಎಂಬುದನ್ನು ತಿಳಿದುಕೊಳ್ಳಲು ಸಮಯ ತೆಗೆದುಕೊಳ್ಳಿ. 

ಆತ್ಮವಿಶ್ವಾಸ ಮುರಿಯುವಿಕೆ:

ಮುಂದೇನು ಮಾಡುವಿರಿ? ಆತ್ಮಹತ್ಯೆ ಕುರಿತು ಬಹಳ ಕಾಲದಿಂದ ಯೋಚಿಸುತ್ತಿದ್ದೆ ಎಂಬ ಸಂಗತಿಯನ್ನು ನಿಮ್ಮ ಪಕ್ಕದ ಮನೆಯವಳು ಹೊರಹಾಕಬಹುದು. ಇದಕ್ಕಾಗಿ ಹಲವು ಭಿನ್ನ ಮಾರ್ಗಗಳನ್ನು ಆಲೋಚಿಸಿರುವೆ ಎಂದು ತಿಳಿಸಬಹುದು.

ಇದೇ ವೇಳೆ ಆಕೆ, ‘ಇದು ಗಂಭೀರವಾಗಿದ್ದಲ್ಲ. ನಾನೇ ಇದನ್ನು ನಿಭಾಯಿಸಿಕೊಳ್ಳುತ್ತೇನೆ. ಹೀಗಾಗಿ ನೀವು ಈ ಮಾಹಿತಿಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ’ ಎಂಬುದಾಗಿ ನಿಮಗೆ ಮನವರಿಕೆ ಮಾಡಲು ಪ್ರಯತ್ನಿಸಬಹುದು. ಆಗ ನೀವು ಈ ನಿಮ್ಮ ಚರ್ಚೆಯನ್ನು ರಹಸ್ಯವಾಗಿಡುತ್ತೇನೆ ಎಂದು ಭರವಸೆ ನೀಡಬೇಡಿ. ಅವರ ಬದಲಾವಣೆಯ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಬೇಡಿ. ಬದಲಾಗಿ ಆಕೆಯ ಅಗತ್ಯತೆಗಳನ್ನು ಪೂರೈಸಲು ಬೇಕಾದ ಸಹಾಯವನ್ನು ಆಕೆಗೆ ದೊರಕಿಸಿ. ನಿಮ್ಮ ಕೈಲಾದಷ್ಟು ಎಷ್ಟು ಸಹಾಯ ಮಾಡಬಹುದೋ ಅಷ್ಟು ಮಾಡಿ ಮತ್ತು ಅವರಿಗೆ ಬೇಕಾದ ನೆರವು ನೀಡಲು ಪ್ರಯತ್ನಿಸಿ. ತಮ್ಮ ಬದುಕನ್ನು ಅಂತ್ಯಗೊಳಿಸಿಕೊಳ್ಳಬೇಕು ಎಂದು ನಿರ್ದಿಷ್ಟವಾಗಿ ಯೋಚಿಸುತ್ತಿರುವವರು ಅಥವಾ ಆತ್ಮಹತ್ಯೆ ಪ್ರಯತ್ನ ಮಾಡುತ್ತಿರುವವರನ್ನು ಏಕಾಂಗಿಯಾಗಿ ಬಿಡಬೇಡಿ. ಸಮಸ್ಯೆ ನಿರ್ವಹಣೆ ಸಹಾಯವಾಣಿ ಅಥವಾ ಮಾನಸಿಕ ಆರೋಗ್ಯ ವೃತ್ತಿಪರರನ್ನು ಭೇಟಿ ಮಾಡಲು ಅವರಿಗೆ ಸಲಹೆ ನೀಡಿ. ಅವರು ಆಶಾರಹಿತ ಮನೋಭಾವ ಹೊಂದಿ ನಿಮ್ಮ ಸಹಾಯವನ್ನು ನಿರಾಕರಿಸಬಹುದು, ಆದರೆ ನೀವು ನಿಮ್ಮ ಪ್ರಯತ್ನವನ್ನು ಮುಂದುವರಿಸಿ.

ಆತ್ಮಹತ್ಯೆ ತಡೆಗಟ್ಟುವ ಸಿದ್ದಾಂತಗಳು ಮತ್ತು ಮಾನಸಿಕ ಆರೋಗ್ಯ ವೃತ್ತಿಪರರನ್ನು ಹುಡುಕುವುದು, ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಸಂಶೋಧನೆ ಅಧ್ಯಯನಗಳ ಪ್ರಕಾರ ಆತ್ಮಹತ್ಯೆ ಕುರಿತು ಆಲೋಚಿಸುತ್ತಿರುವ ವ್ಯಕ್ತಿಯ ಜೊತೆಗೆ ಒಂದು ಸಹಾನುಭೂತಿ/ಅನುಕಂಪದ ಸಂಭಾಷಣೆ ಬಹಳ ಮುಖ್ಯ. ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಆತ್ಮಹತ್ಯೆ ಎಂಬುದು ಅತ್ಯಂತ ಮುಖ್ಯವಾದ ವಿಷಯವಾಗಿದ್ದು, ಸಮುದಾಯ ಆಧಾರಿತ ಹಸ್ತಕ್ಷೇಪ/ಮಧ್ಯಪ್ರವೇಶಗಳು ಆತ್ಮಹತ್ಯೆ ಪ್ರಮಾಣವನ್ನು ಕಡಿಮೆ ಮಾಡಿವೆ ಎಂದು ಸಂಶೋಧನೆ ಅಧ್ಯಯನಗಳು ಹೇಳುತ್ತವೆ.

‘ಲೈಫ್‌ಲೈನ್’ ಆಸ್ಟ್ರೇಲಿಯಾ ಮೂಲದ ವಿಪತ್ತು ನಿವಾರಣೆ ಸೇವೆಯಾಗಿದ್ದು ಆತ್ಮಹತ್ಯೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸದಸ್ಯರಿಗೆ ತರಬೇತಿ ನೀಡುತ್ತದೆ. ಶಾಲೆ, ಕಾಲೇಜು ಮತ್ತು ಸಂಸ್ಥೆಗಳಲ್ಲಿ ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಸಂಯೋಜಿಸುತ್ತದೆ. ಶಿಕ್ಷಕರು, ವಿದ್ಯಾರ್ಥಿಗಳು, ಉದ್ಯೋಗಿಗಳು, ಮುಂತಾದವರಿಗೆ ಅನುಭೂತಿಯಿಂದ ಹೇಗೆ ಮಾತನಾಡುವುದು, ಗಮನವಿಟ್ಟು ಪಕ್ಷಪಾತವಿಲ್ಲದೆ ಮತ್ತೊಬ್ಬರ ಮಾತನ್ನು  ಕೇಳಿಸಿಕೊಳ್ಳುವುದು, ಹಾಗು
ಸಹಾಯ ಬೇಕಿರುವ ಜನರಿಗೆ ಹೇಗೆ ಸಹಾಯ ಮಾಡುವುದು ಎಂಬ ಹಲವು ಮುಖ್ಯವಾದ ವಿಷಯಗಳ ಬಗ್ಗೆ ತರಬೇತಿ ನೀಡುತ್ತದೆ.

ನೀವು ಪ್ರತಿಯೊಬ್ಬರಿಗೂ ಸಹಾಯ ಮಾಡಲು ಸಾಧ್ಯವಾಗದಿರಬಹುದು. ಆದರೆ, ನೀವು ಆತ್ಮಹತ್ಯೆ ಬಗ್ಗೆ ಯೋಚಿಸುತ್ತಿರುವ ಒಬ್ಬ ವ್ಯಕ್ತಿಯನ್ನು ತಲುಪಿದರೆ, ಅವರ ಜೀವ ಉಳಿಸಬಹುದು.

ಡಾ ಪೂರ್ಣಿಮಾ ಭೊಲ ನಿಮ್ಹಾನ್ಸ್‌ನ ಕ್ಲಿನಿಕಲ್ ಸೈಕಾಲಜಿ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org