ಆತ್ಮಹತ್ಯೆಯಿಂದ ಕುಟುಂಬದಲ್ಲಾಗುವ ತಲ್ಲಣ

ಕುಟುಂಬದಲ್ಲಿ ಯಾರಾದರೂ ಆತ್ಮಹತ್ಯೆಗೆ ಶರಣಾದರೆ, ಅದು ಆ ಕುಟುಂಬದ ಮೇಲೆ ಬೀರುವ ಪರಿಣಾಮ ಭೀಕರವಾದುದು
Published on

ಒಂದು ಕುಟುಂಬದಲ್ಲಿ ಯಾರಾದರೂ ಆತ್ಮಹತ್ಯೆಗೆ ಶರಣಾದರೆ, ಅದು ಆ ಕುಟುಂಬದ ಮೇಲೆ ಬೀರುವ ಪರಿಣಾಮ ಭೀಕರವಾದುದು. ಮುಖ್ಯವಾಗಿ ಹಿತೈಶಿಗಳು ಅಥವಾ ಪೋಷಕರು ಈ ಆತ್ಮಹತ್ಯೆ ಕುರಿತು ನಾನಾ ಬಗೆಯಲ್ಲಿ ಯೋಚಿಸಬಹುದು. ತೀವ್ರ ದುಃಖ ಎದುರಿಸಲು ಅವರಿಗೆ ಕಷ್ಟಕರವಾಗಬಹುದು ಅಥವಾ ಸಾಧ್ಯವಾಗದೆ ಇರಬಹುದು. ನೋವು ಕಾಡಬಹುದು. ‘ನನಗೇಕೆ ಹೀಗಾಯಿತು?’. ‘ನಾನೇಕೆ ಆತನ/ಅವಳ ಮನಃಶಾಂತಿ ಅಥವಾ ಆತ್ಮಹತ್ಯೆ ಸಂಜ್ಞೆಗಳನ್ನು ಗುರುತಿಸಲಿಲ್ಲ’ ಅನ್ನಿಸಬಹುದು. ‘ಯಾಕೆ ಅವನು/ಅವಳು ಆತ್ಮಹತ್ಯೆಗೆ ಪ್ರಯತ್ನಿಸುವ ಮುನ್ನ ನನಗೆ ಕರೆ ಮಾಡಲಿಲ್ಲ?’ ಎನ್ನಿಸಬಹುದು. ‘ನಾನು ಅವನ/ಅವಳ ಉತ್ತಮ ಅಪ್ಪ/ಅಮ್ಮ ಅಥವಾ ಪೋಷಕನಾಗಿರಲಿಲ್ಲ’ ಎಂಬ ತಪ್ಪಿತಸ್ಥ ಮನೋಭಾವ ಹುಟ್ಟಬಹುದು. ಪ್ರತಿಯೊಂದು ಆತ್ಮಹತ್ಯೆ ಕನಿಷ್ಟ ಪಕ್ಷ ಆರು ಜನರ ಮೇಲೆ ಪರಿಣಾಮ ಬೀರುತ್ತದೆ. ಪ್ರಮುಖವಾಗಿ ಕುಟುಂಬದ ಸದಸ್ಯರು, ಸಹೋದ್ಯೋಗಿಗಳು, ನೆರೆಹೊರೆಯವರು, ಸಹಪಾಠಿಗಳು ಅಥವಾ ಹತ್ತಿರದ ಸ್ನೇಹಿತರ ಮೇಲೆ ಪರಿಣಾಮ ಬೀರುತ್ತದೆ.

ನೊಂದ ಕುಟುಂಬದಲ್ಲಿನ ಭಾವನೆಗಳು

ಕೆಳಗೆ ಕೊಟ್ಟಿರುವಂಥ ಹಂತಗಳು ಆತ್ಮಹತ್ಯೆಯ ನಂತರ ಮನೆಯವರು ಮತ್ತು ಹತ್ತಿರದವರು ಅನುಭವಿಸುವ ದುಃಖದ ಹಂತಗಳಾಗಿರುತ್ತವೆ. ಅದು ಕ್ಷಣಿಕವಾಗಿರಬಹುದು ಅಥವಾ ಧೀರ್ಘ ಕಾಲದವರೆಗೆ ಇರಬಹುದು. ಹೀಗಾಗಿ ಇಂಥ ಭಾವನೆಗಳನ್ನು ಎಚ್ಚರದಿಂದ ಹಾಗು ತಾಳ್ಮೆಯಿಂದ ಚಿಕಿತ್ಸೆಗೆ ಒಳಪಡಿಸಬೇಕು. 

ಆಘಾತ (ಶಾಕ್)
ಆತ್ಮಹತ್ಯೆಯಿಂದ ಬದುಕುಳಿದವರು ಅಥವಾ ಆತ್ಮಹತ್ಯೆ ಮಾಡಿಕೊಂಡವರಿಗೆ ಹತ್ತಿರದವರ ತಕ್ಷಣದ ದೈಹಿಕ ಮತ್ತು ಭಾವನಾತ್ಮಕ ಪ್ರತಿಕ್ರಿಯೆ ಆಘಾತ(ಶಾಕ್)ದಿಂದ ಕೂಡಿರುತ್ತದೆ. 

  • ಕೋಪ: ಕುಟುಂಬದ ಸದಸ್ಯರು ತಮ್ಮ ಪ್ರೀತಿಪಾತ್ರರು ಅವರ ಮೌಲ್ಯಯುತ ಬದುಕನ್ನು ದುರಂತವಾಗಿಸಿಕೊಂಡಿದಕ್ಕೆ ಸಿಟ್ಟಾಗಬಹುದು. ಸಿಟ್ಟು ಕೂಡ ಒಂದು ರೀತಿಯ ದುಃಖದ ಪ್ರತಿಕ್ರಿಯೆ. ಈ ಕೋಪವನ್ನು ತಮ್ಮ ಮೇಲೆ, ಕುಟುಂಬದವರ ಮೇಲೆ ಅಥವಾ ಸತ್ತವರ ಮೇಲೆ ತೋರಿಸಬಹುದು ಅಥವಾ ಕೋಪವನ್ನು ನಿಗ್ರಹಿಸುವುದಕ್ಕೆ ಪ್ರಯತ್ನಿಸಬಹುದು.
  • ತಪ್ಪಿತಸ್ಥ ಮನೋಭಾವ: ಆತ್ಮಹತ್ಯೆಯಿಂದಾದ ಸಾವಿನ ನಂತರ ಕುಟುಂಬದ ಸದಸ್ಯರು ತಮ್ಮಿಂದ ಎಲ್ಲಿ ತಪ್ಪಾಯಿತೆಂದು ಯೋಚಿಸಲು ಶುರು ಮಾಡುತ್ತಾರೆ, ಹೇಗೆ ಆತ್ಮಹತ್ಯೆಯಿಂದ ರಕ್ಷಿಸಬಹುದಿತ್ತು ಎಂದು ಚಿಂತಿಸುತ್ತಾರೆ. ತಾವು ಏನು ಹೇಳಬಹುದಾಗಿತ್ತು, ಏನು ಹೇಳಬಾರದಿತ್ತು, ಅವರ ಬಗ್ಗೆ ಹೆಚ್ಚು ಕಾಳಜಿ ವಹಿಸಲಿಲ್ಲವೇ ಅಥವಾ ಪ್ರೀತಿ ವ್ಯಕ್ತಪಡಿಸಲಿಲ್ಲವೇ ಎಂಬ ಹಲವಾರು ವಿಷಯಗಳ ಬಗ್ಗೆ ಚಿಂತಿಸುತ್ತಾರೆ. ಈ ಸ್ವಯಂ ತಪ್ಪಿತಸ್ಥ ಮನೋಭಾವ ಅವರ ಪ್ರೀತಿಪಾತ್ರರನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಾದ ವೈಫಲವನ್ನು ಬಿಂಬಿಸುತ್ತದೆ. 
  • ಭಯ: ಕುಟುಂಬದ ಓರ್ವ ಸದಸ್ಯ ಆತ್ಮಹತ್ಯೆಗೆ ಶರಣಾದರೆ, ನಂತರ ಮತ್ತೋರ್ವ ಇದೇ ಪ್ರಯತ್ನ ಮಾಡುವ ಭಯ ಹುಟ್ಟುಹಾಕುತ್ತದೆ.
  • ಖಿನ್ನತೆ: ಇದು ನಿದ್ರಾಹೀನತೆ ಅಥವಾ ನಿದ್ದೆಗೆ ಧಕ್ಕೆ ತರಬಹುದು. ಬದುಕಿನ ಸಂತಸವನ್ನು ಕಸಿದುಕೊಳ್ಳಬಹುದು. ಈ ತರಹದ ಒಳ ಭಾವನೆಗಳು ಕಾಲ ಕಳೆದಂತೆ ಕಡಿಮೆಯಾಗಬಹುದು. ಇನ್ನೂ ಕೆಲವು ಭಾವನೆಗಳು ಶಾಶ್ವತವಾಗಿ ಹೋಗಲಾರದು. ಈ ಭಾವನೆಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಇದರೊಂದಿಗೆ ಒಂದಷ್ಟು ಪ್ರಶ್ನೆಗಳು ಉತ್ತರವಿಲ್ಲದೆ ಹಾಗೆ ಉಳಿಯುತ್ತವೆ.

ಆತ್ಮಹತ್ಯೆಯಿಂದ ನೊಂದ ಕುಟುಂಬಕ್ಕೆ

  • ನಿಮ್ಮೆಲ್ಲ ತೀವ್ರವಾದ ಭಾವನೆಗಳು (ದುಖಃ, ಕೋಪ, ಪಶ್ಚಾತಾಪ ಇತ್ಯಾದಿ) ದುಃಖದ ಸಮಯದಲ್ಲಿ ಆಗುವ ಸಹಜ ಪ್ರತಿಕ್ರಿಯೆ ಎಂದು ಅರಿತುಕೊಳ್ಳಿ.
  • ನಿಮಗೆ ತೃಪ್ತಿಯಾಗುವವರೆಗೂ ನಿಮ್ಮಲ್ಲಿನ ಪ್ರಶ್ನೆಗೆ ಉತ್ತರಿಸಲು ಸಮಯ ನೀಡಿ. ನೀವು ಉತ್ತರ ಪಡೆದರೆ, ಅದೇ ಸಹಾಯಕರವಾಗಬಹುದು ಮತ್ತು ಅದರಿಂದ ನಿಮಗೆ ತೃಪ್ತಿಯಾಗಬಹುದು. ದುಖಃಪಡುವುದು ಉತ್ತರಗಳನ್ನು ಹುಡುಕಲು ಸಹಾಯ ಮಾಡುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಜೀವನವನ್ನು ಸಾಗಿಸಬಹುದು.
  • ಕುಟುಂಬದ ಇತರ ಸದಸ್ಯರೊಂದಿಗೆ ಸಂಪರ್ಕದಲ್ಲಿರಿ. ನಿಮ್ಮ ಪ್ರೀತಿಪಾತ್ರರು ಆತ್ಮಹತ್ಯೆಗೆ ಶರಣಾದರೆ 6 ತಿಂಗಳ ಕಾಲ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಸಂಪರ್ಕದಲ್ಲಿರುವುದು ಅತ್ಯಂತ ಮಹತ್ವದ್ದು. ಕುಟುಂಬದ ಸದಸ್ಯರೊಂದಿಗೆ ಮುಕ್ತವಾಗಿ ಮಾತನಾಡಿ ಮತ್ತು ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ. ಅವರ ಬಳಿ ಸಹಾಯ ಕೇಳಿ.
  • ಮಕ್ಕಳ ಕುರಿತು ವಿಶೇಷ ಗಮನಹರಿಸಿ-ಮಕ್ಕಳ ಪಾಲಿಗೆ ಇದು ಅತ್ಯಂತ ಸಂಕಷ್ಟದ ಸಮಯ. ಅವರಿಗೆ ಸಮಯ ಕೊಡಿ. ಇಂಥ ಸಮಯದಲ್ಲಿ ದುಃಖ ಪಡುವುದು ಸಹಜ ಎಂದು ಮಕ್ಕಳಿಗೆ ಹೇಳಿ ಸಾಂತ್ವನಗೊಳಿಸಿ. ನೀವು ಅವರನ್ನು ಈಗಲೂ ಪ್ರೀತಿಸುತ್ತಿರುವಿರಿ ಮತ್ತು ಅವರ ಜೊತೆ ಯಾವಾಗಲೂ ಇರುವಿರಿ ಎಂಬುವುದುನ್ನು ಅವರಿಗೆ ಮನದಟ್ಟು ಮಾಡಿಕೊಡುವುದು ಅತ್ಯಂತ ಮುಖ್ಯ.
  • ಆತ್ಮಹತ್ಯೆ ಮಾಡಿಕೊಂಡವರ ಕುಟುಂಬದವರಿಗೆ ಗತಿಸಿಹೋದ ಪ್ರೀತಿಪಾತ್ರರ ಹುಟ್ಟುಹಬ್ಬ, ಮದುವೆಯ ವಾರ್ಷಿಕೋತ್ಸವ ಮತ್ತು ಇತರ ವಿಶೇಷ ದಿನಗಳಂದು ಬಹಳ ದುಃಖವಾಗಬಹುದು. ಈ ದಿನಗಳಲ್ಲಿ ನೀವು ಇತರರೊಂದಿಗೆ ಸಕ್ರಿಯರಾಗಿರಲು ಯೋಜನೆ ರೂಪಿಸಿಕೊಳ್ಳಿ.
  • ಈ ವ್ಯಥೆಯ ಪರಿಸ್ಥಿತಿಯಿಂದ ಗುಣಮುಖರಾಗಲು ನಿಮಗೆ ಸಮಯ ಬೇಕು. ಇದು ನಿರ್ದಿಷ್ಟ ಸಮಯದಲ್ಲಿ ಆಗುತ್ತದೆ ಎಂದು ನಿರೀಕ್ಷಿಸಬೇಡಿ. ಗುಣಮುಖವಾಗುವ ಪ್ರಕ್ರಿಯೆ ಹಾಗೂ ಸಮಯ ಪ್ರತಿಯೊಬ್ಬರಿಗೂ ಭಿನ್ನವಾಗಿರುತ್ತದೆ. 
  • ನಿಮ್ಮೊಂದಿಗೆ ಮತ್ತು ಇತರರ ಜೊತೆ ತಾಳ್ಮೆಯಿಂದಿರಿ. ಎಲ್ಲರೂ ನಿಮ್ಮ ಸಂಕಷ್ಟವನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ತಿಳಿದುಕೊಳ್ಳಿ. ಕುಟುಂಬದ ಸದಸ್ಯರು ಈ ದುಃಖದಿಂದ ಹೊರಬರಲು ಅವರದೇ ಆದ ಸಮಯ ತೆಗೆದುಕೊಳ್ಳುತ್ತಾರೆ. 
  • ವೃತ್ತಿಪರರ ಸಹಾಯ ಮತ್ತು ಸಲಹೆ ತೆಗೆದುಕೊಳ್ಳುವುದು ಒಳ್ಳೆಯದು. 

ಡಾ.ಮನೋಜ್ ಶರ್ಮಾ, ಸಹಾಯಕ ಪ್ರಾಧ್ಯಾಪಕರು, ಕ್ಲಿನಿಕಲ್ ಸೈಕಾಲಜಿ, ನಿಮ್ಹಾನ್ಸ್

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org