ಆತ್ಮಹತ್ಯೆ ಪ್ರಕರಣಗಳು- ಬೇಜವಾಬ್ದಾರಿಯುತ ವರದಿಯ ಅಡ್ಡ ಪರಿಣಾಮಗಳು

ಆತ್ಮಹತ್ಯೆ ಪ್ರಕರಣಗಳು- ಬೇಜವಾಬ್ದಾರಿಯುತ ವರದಿಯ ಅಡ್ಡ ಪರಿಣಾಮಗಳು

ಸಮಾಜದಲ್ಲಿ ಆತ್ಮಹತ್ಯೆಗಳನ್ನು ತಡೆಗಟ್ಟಲು ಕಳೆದ ಎರಡು ವರ್ಷಗಳಿಂದ ನಾನು ಕಾರ್ಯಕರ್ತೆಯಾಗಿ ದುಡಿಯುತ್ತಿದ್ದೇನೆ. ಈ ವಿಚಾರದಲ್ಲಿ ನನ್ನಲ್ಲಿ ಗಾಬರಿ ಹುಟ್ಟಿಸಿದ ಅಂಶಗಳೆಂದರೆ , ಜನಸಾಮಾನ್ಯರಲ್ಲಿ ಸಂವೇದನೆಯ ಕೊರತೆ ಇದ್ದು ಉದಾಸೀನ ಮನೋಭಾವವೂ ಹೆಚ್ಚಾಗಿದೆ.

ಇತ್ತೀಚಿಗೆ ಒಂದು ಘಟನೆ ನನ್ನಲ್ಲಿ ಅಚ್ಚರಿ ಮೂಡಿಸಿತ್ತು. ಕೆಲವು ದಿನಗಳ ಹಿಂದೆ ಪ್ರತಿಷ್ಠಿತ ಆಕಾಶವಾಣಿ ಕೇಂದ್ರವೊಂದರಲ್ಲಿ ಮಹಿಳಾ ದಿನದ ಪ್ರಯುಕ್ತ ಉಪನ್ಯಾಸ ನೀಡಲು ನನ್ನನ್ನು ಆಹ್ವಾನಿಸಲಾಗಿತ್ತು. ಕಾರ್ಯಕ್ರಮ ಮುಗಿದ ನಂತರ, ನನ್ನ ಉಪನ್ಯಾಸ ಸ್ಫೂರ್ತಿದಾಯಕವಾಗಿತ್ತು ಎಂದು ಹೊಗಳಿದ ರೇಡಿಯೋ ಜಾಕಿ, “ನಿಮ್ಮ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದರಲ್ಲವೇ?” ಎಂಬ ಇಂಗಿತವನ್ನೂ ವ್ಯಕ್ತಪಡಿಸಿದ್ದರು. ಮಾಧ್ಯಮಗಳಲ್ಲಿನ ಆತ್ಮಹತ್ಯೆಯನ್ನು ಕುರಿತ ವರದಿಗಳಲ್ಲಿ ಕಂಡುಬರುವ ಹಲವು ಸಮಸ್ಯಾತ್ಮಕ ಅಂಶಗಳನ್ನು ಈ ಘಟನೆ ಎತ್ತಿ ತೋರುತ್ತದೆ.

ಮೊದಲನೆಯದಾಗಿ, ನನ್ನ ಸಮ್ಮತಿ ಇಲ್ಲದೆಯೇ, ನಾನು ಆತ್ಮಹತ್ಯೆಯಿಂದ ಸಂಗಾತಿಯನ್ನು ಕಳೆದುಕೊಂಡ ಸಂತ್ರಸ್ತೆ ಎಂದು ಸೂಚಿಸುವ ಅವಶ್ಯಕತೆ ರೇಡಿಯೋ ಜಾಕಿಗೆ ಇರಲಿಲ್ಲ, ಏಕೆಂದರೆ ಈ ಸಂದರ್ಭದಲ್ಲಿ ಇದು ಪ್ರಸ್ತುತವಲ್ಲ ಎಂದು ಭಾವಿಸಿ ನಾನೇ ಬಹಿರಂಗಪಡಿಸಿರಲಿಲ್ಲ. ತಮ್ಮ ಮಾತಿನ ಮೂಲಕ ರೇಡಿಯೋ ಜಾಕಿ ಆತ್ಮಹತ್ಯೆಯ ಬಗ್ಗೆ ಅಸಂಬದ್ಧ ಉಲ್ಲೇಖ ಮಾಡಿದ್ದರು. ಅಲ್ಲದೆ ಅದನ್ನು ಭಾವನಾತ್ಮಕವಾಗಿ ಬಿಂಬಿಸಲು ಪ್ರಯತ್ನಿಸಿದ್ದರು.

ಎರಡನೆಯದಾಗಿ, “ ಆತ್ಮಹತ್ಯೆ ಮಾಡಿಕೊಂಡರು” (commit suicide) ಎಂದು ಹೇಳುವುದೇ ಆತ್ಮಹತ್ಯೆಯನ್ನು ಒಂದು ಅಪರಾಧದ ಚೌಕಟ್ಟಿನಲ್ಲಿ ಬಿಂಬಿಸಿದಂತಾಗುತ್ತದೆ. ಮತ್ತು ಆತ್ಮಹತ್ಯೆಯ ಸುತ್ತಲೂ ಆವರಿಸಿರುವ ಕಳಂಕವನ್ನು ಶಾಶ್ವತಗೊಳಿಸಿದಂತಾಗುತ್ತದೆ.

ಇಲ್ಲಿ ಆತ ತನ್ನ ಮಾತು ಸದುದ್ದೇಶದಿಂದ ಕೂಡಿತ್ತು ಎಂದು ಹೇಳಬಹುದು. ಆದರೆ ಆ ಮಾತು ನನ್ನ ವ್ಯಕ್ತಿತ್ವವನ್ನು ಉಲ್ಲಂಘಿಸಿದಂತಾಗುತ್ತದೆ. ನನ್ನ ಖಾಸಗಿ ಬದುಕಿನಲ್ಲಿ ಅನಗತ್ಯ ಹಸ್ತಕ್ಷೇಪ ಮಾಡಿದಂತೆ ನನಗೆ ಭಾಸವಾಗಿತ್ತು.

ಆತ್ಮಹತ್ಯೆ ಎನ್ನುವುದು ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಒಂದು ಗಂಭೀರವಾದ ವಿಚಾರ. ಆತ್ಮಹತ್ಯೆಯನ್ನು ತಡೆಗಟ್ಟುವುದು ಮತ್ತು ನಿಯಂತ್ರಿಸುವುದು ಮಹತ್ತರ ಸವಾಲು ಸಹ ಹೌದು. ಆತ್ಮಹತ್ಯೆಯನ್ನು ತಡೆಗಟ್ಟುವ ಪ್ರಕ್ರಿಯೆಯಲ್ಲಿ ಇದಕ್ಕೆ ಸಂಬಂಧಪಟ್ಟ ಹಲವಾರು ವ್ಯಕ್ತಿ, ಸಂಸ್ಥೆ ಮತ್ತು ಸಂಘಟನೆಗಳ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ. ಆರೋಗ್ಯ ಸೇವೆಯನ್ನು ಒದಗಿಸುವವರು, ಕಾನೂನು ಜಾರಿಗೊಳಿಸುವ ಸಂಸ್ಥೆಗಳು, ಮಾಧ್ಯಮಗಳು, ಸರ್ಕಾರ, ಸಾಮಾಜಿಕ ಸಂಸ್ಥೆ ಮತ್ತು ಸಂಘಟನೆಗಳು, ಮತಧಾರ್ಮಿಕ ನಾಯಕರು, ಕುಟುಂಬಗಳು ಮತ್ತು ಜನಸಮುದಾಯಗಳ ಸಹಕಾರ ಇಲ್ಲಿ ಅತ್ಯಗತ್ಯ .

ನಾವು ಆತ್ಮಹತ್ಯೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಮ್ಮ ಸ್ಪೀಕ್ (SPEAK) ಸಂಸ್ಥೆಯನ್ನು ಹುಟ್ಟುಹಾಕಲು ಯೋಚಿಸಿದಾಗ ತಮಿಳು ನಾಡಿನ ಮಧುರೈ ನಗರದಲ್ಲಿ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದೆವು. ಮಾಧ್ಯಮಗಳಲ್ಲಿ ಆತ್ಮಹತ್ಯೆಗಳ ಬಗ್ಗೆ ಜವಾಬ್ದಾರಿಯುತವಾಗಿ ವರದಿ ಮಾಡಲು ನೆರವಾಗುವ ಕಾರ್ಯಕ್ರಮವೊಂದಕ್ಕೆ ಪತ್ರಕರ್ತರನ್ನು ಆಹ್ವಾನಿಸಿದ್ದೆವು. ಆದರೆ ಕೇವಲ ಇಬ್ಬರು ಮಾಧ್ಯಮ ಪ್ರತಿನಿಧಿಗಳು ಮಾತ್ರ ಹಾಜರಿದ್ದರು. ಆತ್ಮಹತ್ಯೆ ಒಂದು ಸಂಕೀರ್ಣ ಮತ್ತು ಜಟಿಲ ಸಮಸ್ಯೆಯಾಗಿದೆ.

ಇದು ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದವರ ಮತ್ತು ಆತ್ಮಹತ್ಯೆಯಿಂದ ತಮ್ಮ ಸಂಬಂಧಿಗಳನ್ನು ಕಳೆದುಕೊಂಡ ಸಂತ್ರಸ್ತರ ಮೇಲೆ ದೀರ್ಘಕಾಲಿಕ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಭಾವನಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಜಾಗತಿಕ ಮಟ್ಟದಲ್ಲಿ ಪ್ರತಿ ವರ್ಷ ಎಂಟು ಲಕ್ಷ ಜನರು ಆತ್ಮಹತ್ಯೆಯಿಂದ ಸಾಯುತ್ತಿದ್ದಾರೆ. ಪ್ರತಿಯೊಂದು ಆತ್ಮಹತ್ಯೆಯ ಪ್ರಕರಣ ಕನಿಷ್ಠ ಆರು ಜನರ ಮೇಲೆ ಪರಿಣಾಮ ಬೀರುತ್ತಿದೆ. ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವಲ್ಲಿ ಮತ್ತು ಗ್ರಹಿಸುವ ನಿಟ್ಟಿನಲ್ಲಿ ಮಾಧ್ಯಮಗಳು ಹೆಚ್ಚಿನ ಪ್ರಭಾವ ಹೊಂದಿರುತ್ತವೆ. ಜನಸಾಮಾನ್ಯರ ವರ್ತನೆಯಲ್ಲಿ ಬದಲಾವಣೆಗಳನ್ನು ತರಲು ಮಾಧ್ಯಮಗಳು ಮಹತ್ತರವಾದ ಪಾತ್ರ ವಹಿಸಬೇಕಿದೆ.

ಮಾಧ್ಯಮಗಳಲ್ಲಿ ಆತ್ಮಹತ್ಯೆಗಳನ್ನು ಕುರಿತು ಜವಾಬ್ದಾರಿಯುತವಾಗಿ ಮತ್ತು ಸೂಕ್ಷ್ಮತೆಯಿಂದ ವರದಿ ಮಾಡಲು ನೆರವಾಗುವಂತೆ, ಈ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬಹುದು:

ಆತ್ಮಹತ್ಯೆಯನ್ನು ಕುರಿತ ವರದಿ ಕರಾರುವಾಕ್ಕಾಗಿರಲಿ ಮತ್ತು ಜವಾಬ್ದಾರಿಯುತವಾಗಿರಲಿ: ಆತ್ಮಹತ್ಯೆ ನಾಲ್ಕು ನಿಷಿದ್ಧ ಅಂಶಗಳಿಂದ ಆವರಿಸಲ್ಪಟ್ಟಿದೆ. ಕಳಂಕ, ಅಪಮಾನ, ಗೋಪ್ಯತೆ ಮತ್ತು ಮೌನ ಈ ನಾಲ್ಕೂ ಅಂಶಗಳು ಆತ್ಮಹತ್ಯೆಯನ್ನು ಒಂದು ನಿಷಿದ್ಧ ವಿದ್ಯಮಾನವಾಗಿಸುತ್ತವೆ. ಸುದ್ದಿಯೋಗ್ಯ ಎನಿಸಿದ ಮಾತ್ರಕ್ಕೆ ಆತ್ಮಹತ್ಯೆಯನ್ನು ರಂಜನೀಯವಾಗಿ ವರದಿಮಾಡುವುದು, ಸಾಮಾನ್ಯೀಕರಣಗೊಳಿಸುವುದು ಅಥವಾ ಆತ್ಮಹತ್ಯೆಯನ್ನೇ ಒಂದು ಪರಿಹಾರ ಎಂದು ಬಿಂಬಿಸುವುದು ತಪ್ಪು. ಇದರಿಂದ ಈ ಮಿಥ್ಯೆಗಳನ್ನು ಮತ್ತು ತಪ್ಪು ಕಲ್ಪನೆಗಳನ್ನು ಇನ್ನೂ ಬಲಪಡಿಸಿದಂತಾಗುತ್ತದೆ.

ಆತ್ಮಹತ್ಯೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಅವಕಾಶಗಳನ್ನು ಬಳಸಿಕೊಳ್ಳಿ : ಯಾವುದೇ ಆತ್ಮಹತ್ಯೆಯ ಹಿಂದೆ ಹಲವಾರು ಕಾರಣಗಳು ಇರುತ್ತವೆ. ಜೈವಿಕ, ಮಾನಸಿಕ, ಸಾಮಾಜಿಕ ಮತ್ತು ಸುತ್ತಲಿನ ಪರಿಸರದ ಅಂಶಗಳು ಆತ್ಮಹತ್ಯೆಗೆ ಕಾರಣವಾಗಿರುತ್ತವೆ. ಯಾವುದೋ ಒಂದು ಅಂಶವನ್ನೇ ಪ್ರಮುಖ ಕಾರಣವೆಂದು ಪರಿಗಣಿಸಲಾಗುವುದಿಲ್ಲ. ಆದರೆ ಬಹುಪಾಲು ಮಾಧ್ಯಮ ವರದಿಗಳಲ್ಲಿ ಯಾವುದಾದರೂ ಒಂದು ಅಂಶವನ್ನೇ ಮೂಲ ಕಾರಣದಂತೆ ಬಿಂಬಿಸಲಾಗುತ್ತದೆ. ಉದಾಹರಣೆಗೆ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವುದು ಅಥವಾ ಪರಸ್ಪರ ಸಂಬಂಧಗಳಲ್ಲಿನ ಒಡಕು ಆತ್ಮಹತ್ಯೆಯ ಕಾರಣಗಳೆಂದು ಬಿಂಬಿಸಲಾಗುತ್ತದೆ. ವಾಸ್ತವ ಎಂದರೆ ವರದಿಯಾಗುವ ಈ ಕಾರಣಗಳು ಕೇವಲ ಪ್ರಚೋದನಕಾರಿಯಾಗಿರುತ್ತವೆ. ವಾಸ್ತವ ಸನ್ನಿವೇಶವನ್ನು ಬಿಂಬಿಸುವುದಿಲ್ಲ.

ಆತ್ಮಹತ್ಯಾ ಪ್ರವೃತ್ತಿಯನ್ನು ಕರಾರುವಾಕ್ಕಾಗಿ, ಪ್ರಚೋದಿಸದೆ ವಿವರಿಸಿ: ಆತ್ಮಹತ್ಯೆ ಪ್ರಕರಣವನ್ನು ವರದಿ ಮಾಡುವಾಗ ಸೂಚಕ ಭಾಷೆಯನ್ನು ಬಳಸಿ, ಅತಿಶಯೋಕ್ತಿಯ ಅಗತ್ಯವಿಲ್ಲ. ಉದಾಹರಣೆಗೆ “ಆತ್ಮಹತ್ಯೆ ಪ್ರಮಾಣ ಹೆಚ್ಚಾಗುತ್ತಿದೆ” ಎನ್ನುವುದು ಸರಿ ಆದರೆ “ ಗಗನಕ್ಕೇರುತ್ತಿದೆ ” ಅಥವಾ “ ಮಹಾ ಘಟನೆ ”ಎಂದು ವಿವರಿಸುವ ಅಗತ್ಯವಿಲ್ಲ. ಆತ್ಮಹತ್ಯೆಯನ್ನು ರಂಜನೀಯಗೊಳಿಸುವ ಅಥವಾ

ಸಾಮಾನ್ಯೀಕರಿಸುವ ಭಾಷೆಯನ್ನು ಬಳಸದಿರಿ: ಆತ್ಮಹತ್ಯೆ ಪಾಪವೂ ಅಲ್ಲ ಅಪರಾಧವೂ ಅಲ್ಲ. ಅಥವಾ ಹೇಡಿತನದ ಲಕ್ಷಣವೂ ಅಲ್ಲ ವೀರೋಚಿತವೂ ಅಲ್ಲ. ಇದೇ ತರ್ಕವನ್ನು ಮುಂದುವರೆಸಿ ಹೇಳುವುದಾದರೆ ಮಾಡಿಕೊಂಡವರು ಮತ್ತು ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕುಳಿದವರು ಹೀರೋಗಳೂ ಅಲ್ಲ ಹೇಡಿಗಳೂ ಅಲ್ಲ.

ಶೀರ್ಷಿಕೆಯಲ್ಲಿ ಆತ್ಮಹತ್ಯೆ ಪದವನ್ನು ಬಳಸದಿರಿ, ವರದಿಯನ್ನು ಮುಖಪುಟದಲ್ಲಿ ಅಪರಾಧಗಳ ಪುಟದಲ್ಲಿ ಪ್ರಕಟಿಸದಿರಿ: ಇಲ್ಲಿ ಸುದ್ದಿಯೋಗ್ಯ ಎಂದರೇನು ಮತ್ತು ರಂಜನೀಯಗೊಳಿಸುವುದು ಎಂದರೇನು ಎಂಬುದರ ಬಗ್ಗೆ ಜಾಗೃತಿ ಮುಖ್ಯವಾಗುತ್ತದೆ. ಒಂದು ಆತ್ಮಹತ್ಯೆ ಪ್ರಕರಣವನ್ನು ರಂಜನೀಯವಾಗಿ ಬಿತ್ತರಿಸುವುದು ಅಥವಾ ಪ್ರಕಟಿಸುವುದರಿಂದ ದುರ್ಬಲರಲ್ಲಿ ಆತ್ಮಹತ್ಯೆಯ ಪ್ರವೃತ್ತಿಗೆ ಪ್ರಚೋದನೆ ನೀಡಿದಂತಾಗುತ್ತದೆ. ಅದರಲ್ಲೂ ಸಾರ್ವಜನಿಕ ವಲಯದ ಪ್ರಸಿದ್ಧ ವ್ಯಕ್ತಿಗಳ ಆತ್ಮಹತ್ಯೆ ಪ್ರಕರಣಗಳು ಇಂತಹ ಪ್ರಚೋದನೆಯನ್ನು ಹೆಚ್ಚಿಸುತ್ತವೆ. ಸಾಮಾನ್ಯವಾಗಿ ತಟಸ್ಥ ಶೀರ್ಷಿಕೆಗಳನ್ನು ಬಳಸಿ. ಪ್ರಕರಣದ ಸುತ್ತ ಓದುಗರಲ್ಲಿ ಕುತೂಹಲ ಇರುವುದು ಸಹಜವೇ ಆದರೂ, ಈ ವರದಿಗಳನ್ನು ಪ್ರಕಟಿಸುವಾಗ ಅಗತ್ಯವಾಗಿ ಇರಬೇಕಾದ ಸೂಕ್ಷ್ಮತೆ ಮತ್ತು ಹೊಣೆಗಾರಿಕೆಯಿಂದ ನುಣುಚಿಕೊಳ್ಳಲಾಗುವುದಿಲ್ಲ.

ಅಸೂಕ್ಷ್ಮ ಭಾಷೆಯನ್ನು ಬಳಸದಿರಿ: ಭಾಷೆ ಚಿಂತನೆಯನ್ನು ಬಿಂಬಿಸುತ್ತದೆ ಹಾಗೆಯೇ ಸಾಮಾಜಿಕ ನಡವಳಿಕೆಯನ್ನೂ ಪ್ರತಿಬಿಂಬಿಸುತ್ತದೆ. ಹಾಗಾಗಿ “ ಆತ್ಮಹತ್ಯೆ ಮಾಡಿಕೊಂಡರು ” ಎಂಬ ಪದಗಳನ್ನು ಬಳಸದಿರಿ, ಏಕೆಂದರೆ ಇದು ಆತ್ಮಹತ್ಯೆಯನ್ನು ಅಪರಾಧದ ಚೌಕಟ್ಟಿನಲ್ಲಿ ನಿಲ್ಲಿಸುತ್ತದೆ. ಹಾಗೆಯೇ ಆತ್ಮಹತ್ಯೆಯನ್ನು ಸಂದರ್ಭದಿಂದ ಹೊರತಾಗಿ ಬಳಸಬೇಡಿ ಅಥವಾ “ಆತ್ಮಹತ್ಯೆಯ ವಿಫಲ ಯತ್ನ ” “ ಆತ್ಮಹತ್ಯೆಯ ಪಿಡುಗು” “ ರಾಜಕೀಯ ಆತ್ಮಹತ್ಯೆ ” ಇಂತಹ ಅಸೂಕ್ಷ್ಮ ಪದಗಳನ್ನು ಬಳಸದಿರಿ. ಈ ರೀತಿಯ ಪದಗಳ ಬಳಕೆಯಿಂದ ನಕಾರಾತ್ಮಕ ಏಕರೂಪಿ ವರದಿಗಾರಿಕೆಗೆ ಪುಷ್ಟಿ ನೀಡಿದಂತಾಗುತ್ತದೆ. ಬದಲಾಗಿ ಸೂಕ್ಷ್ಮ ಸಂವೇದನೆಯ ಮೂಲಕ ಮಾಹಿತಿಯುಕ್ತ ಪದ ಬಳಕೆ ಮಾಡುವುದರಿಂದ ವಿಷಯವನ್ನು ಸಮರ್ಥವಾಗಿ ಮಂಡಿಸಲು ನೆರವಾಗುತ್ತದೆ. ಉದಾಹರಣೆಗೆ “ ಆತ್ಮಹತ್ಯೆ ಮಾಡಿಕೊಂಡರು ” ಎಂದು ಹೇಳುವ ಬದಲು “ ಆತ್ಮಹತ್ಯೆಯಿಂದ ಮೃತಪಟ್ಟರು ಅಥವಾ ಆತ್ಮಹತ್ಯೆಯ ಸಾವು ” ಎಂಬ ಪದಗಳನ್ನು ಬಳಸಬಹುದು. “ ಆತ್ಮಹತ್ಯೆಯ ಪಿಡುಗು ” ಎನ್ನುವ ಬದಲು “ ಹೆಚ್ಚಾಗುತ್ತಿರುವ ಆತ್ಮಹತ್ಯೆಯ ಪ್ರಮಾಣ ” ಎಂದು ಹೇಳಬಹುದು.

ಆತ್ಮಹತ್ಯೆಯ ವಿಧಾನವನ್ನು ನೇರವಾಗಿ ವಿವರಿಸುವುದನ್ನು ತಪ್ಪಿಸಿ: ಈ ರೀತಿಯ ವಿವರಣೆ ಮೃತರ ಮತ್ತು ಮೃತರ ಕುಟುಂಬದವರ ಘನತೆ ಮತ್ತು ಗೋಪ್ಯತೆಯ ಉಲ್ಲಂಘನೆಯಾಗುತ್ತದೆ. ಅಷ್ಟೇ ಅಲ್ಲದೆ ಈ ರೀತಿಯ ವಿವರಣೆಯಿಂದ ಆತ್ಮಹತ್ಯೆಯನ್ನು ಭಾವನಾತ್ಮಕವಾಗಿ ಎದುರಿಸುತ್ತಿರುವವರನ್ನು ಪ್ರಚೋದಿಸಿದಂತಾಗುತ್ತದೆ.

ಮೃತರ ಮತ್ತು ಅವರ ಕುಟುಂಬದವರ ಭಾವಚಿತ್ರ ಅಥವಾ ವಿಡಿಯೋ ಚಿತ್ರಣವನ್ನು ಬಿತ್ತರಿಸದಿರಿ ; ಆತ್ಮಹತ್ಯೆಯ ಮುನ್ನ ಬರೆದಿರುವ ಟಿಪ್ಪಣಿಯನ್ನು ಪ್ರಕಟಿಸದಿರಿ: ಆತ್ಮಹತ್ಯೆಗೊಳಗಾದ ವ್ಯಕ್ತಿಯ ಕುಟುಂಬದ ಸದಸ್ಯರು ಸಾಮಾನ್ಯವಾಗಿ ಘಟನೆಯಿಂದ ಆಘಾತ ಎದುರಿಸಿರುತ್ತಾರೆ. ಈ ಸುದ್ದಿಯನ್ನು ಭಾವಚಿತ್ರ, ವಿಡಿಯೋಗಳನ್ನು ಬಳಸಿ ಪ್ರಕಟಿಸುವುದು, ಬಿತ್ತರಿಸುವುದು ಕುಟುಂಬ ಸದಸ್ಯರ ಘನತೆ ಮತ್ತು ಗೋಪ್ಯತೆಯ ಉಲ್ಲಂಘನೆಯಾಗುತ್ತದೆ. ಇಂತಹ ಸನ್ನಿವೇಶಗಳಲ್ಲಿ ಮೃತರ ಘನತೆಯೂ ಅಷ್ಟೇ ಮುಖ್ಯವಾಗುತ್ತದೆ. ಒಂದು ಭಾವಚಿತ್ರವನ್ನು ಪ್ರಕಟಿಸುವ ಅವಶ್ಯಕತೆ ಇದ್ದರೂ ಅವರ ಹಳೆಯ ಭಾವಚಿತ್ರವನ್ನು ಪ್ರಕಟಿಸಬಹುದು.

ಸಹಾಯವಾಣಿಗಳ ಬಗ್ಗೆ ಮಾಹಿತಿ ಒದಗಿಸಿ: ಆತ್ಮಹತ್ಯೆ ಸಂಭವಿಸಿದ ಸಂದರ್ಭಗಳಲ್ಲಿ ವ್ಯಾಪಕವಾಗಿ ಲಭ್ಯವಿರುವ ಸಹಾಯಕ ಸಂಪನ್ಮೂಲಗಳ ಮಾಹಿತಿಯನ್ನು ಒದಗಿಸಿ. ಈ ಮೂಲಕ ಆತ್ಮಹತ್ಯೆಯನ್ನು ತಡೆಗಟ್ಟಬಹುದು ಎಂಬ ಸಂದೇಶವನ್ನು ರವಾನಿಸಬಹುದು. ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕುಳಿದವರಿಗೆ ಪ್ರಸ್ತುತವಾಗುವಂತಹ ಮಾಹಿತಿಯನ್ನು ಒದಗಿಸಿ. ಇದರಿಂದ ಅವರು ಸೂಕ್ತ ಮಾನಸಿಕ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಇದರಿಂದ ಆತ್ಮಹತ್ಯೆಯಿಂದ ಸಾವಿಗೀಡಾದವರ ಕುಟುಂಬದವರೂ ಸಹ ಈ ಆಘಾತದಿಂದ ಹೊರಬಂದು ತಮ್ಮ ಬದುಕು ಸುಧಾರಿಸಿಕೊಳ್ಳಲು ನೆರವಾದಂತಾಗುತ್ತದೆ.

ಆತ್ಮಹತ್ಯೆಯಿಂದ ಸಾವಿಗೀಡಾದವರ ಕುಟುಂಬದವರಿಗೆ ಸಹಾನುಭೂತಿ ತೋರಿಸಿ: ಯಾವುದೇ ಆತ್ಮಹತ್ಯೆಯ ಘಟನೆ ಸಂಭವಿಸಿದ ಕೂಡಲೇ ಅವರ ಕುಟುಂಬದವರ ಸಂದರ್ಶನ ನಡೆಸುವುದು, ಮಾತುಗಳನ್ನು ದಾಖಲಿಸುವುದು, ಭಾವಚಿತ್ರಗಳನ್ನು ತೆಗೆದುಕೊಳ್ಳುವುದು ಸಮರ್ಥನೀಯವಲ್ಲ. ಅವರ ನೋವು ಮತ್ತು ಸಂಕಟಕ್ಕೆ ಸ್ಪಂದಿಸುವುದೇ ಅಲ್ಲದೆ ಸಂತ್ರಸ್ತರ ಕುಟುಂಬದವರಿಗೂ ಸಹ ತಮ್ಮ ಘನತೆಯನ್ನು ರಕ್ಷಿಸಿಕೊಳ್ಳುವ ಹಕ್ಕು ಇರುತ್ತದೆ ಎನ್ನುವುದನ್ನು ಗಮನಿಸಿ. ಇಲ್ಲಿ ನೀವು ಸಂಗ್ರಹಿಸುವ ಮಾಹಿತಿ ನಿಮ್ಮ ವರದಿಯನ್ನು ಮತ್ತಷ್ಟು ಸುದ್ದಿಯೋಗ್ಯವಾಗಿಸುತ್ತದೆ ಎನ್ನುವುದು ಮುಖ್ಯವಾಗುವುದಿಲ್ಲ.

ಆತ್ಮಹತ್ಯೆಗೆ ಸಂಬಂಧಿಸಿದಂತೆ ಗಂಭೀರ ವಿಚಾರಗಳನ್ನು ಪ್ರಕಟಿಸಿ: ಆತ್ಮಹತ್ಯೆಯನ್ನು ಕುರಿತಂತೆ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಜಾಗೃತಿಯನ್ನು ಮೂಡಿಸಲು ಇದು ಉತ್ತಮ ಅವಕಾಶ ಒದಗಿಸುತ್ತದೆ. ಹೆಚ್ಚು ಪ್ರಸ್ತುತ ಎನಿಸುವ ಅಂಕಿ ಅಂಶಗಳನ್ನು ಒದಗಿಸಿ. ಮಾನಸಿಕ ಆರೋಗ್ಯ ಮತ್ತು ಆತ್ಮಹತ್ಯೆಯನ್ನು ಕುರಿತಂತೆ ತಜ್ಞರ ಅಭಿಪ್ರಾಯಗಳನ್ನು ಪ್ರಕಟಿಸಿ. ಆತ್ಮಹತ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಚ್ಚರಿಕೆಯ ಸೂಚನೆಗಳನ್ನು ಸಂಕೇತಗಳನ್ನು ಬಳಸಿ. ಇದರಿಂದ ಪ್ರತಿಯೊಬ್ಬರೂ ಆತ್ಮಹತ್ಯೆಯನ್ನು ತಡೆಗಟ್ಟಲು ಮುಂದಾಗಬಹುದು.

ಆಶಾಭಾವನೆ ಮತ್ತು ಭರವಸೆ ಮೂಡಿಸುವಂತೆ ಸುದ್ದಿಯನ್ನು ನಿರೂಪಿಸಿ: ಸೂಕ್ತ ಸಮಯದಲ್ಲಿ ಕ್ರಮ ಕೈಗೊಳ್ಳುವ ಮೂಲಕ ಆತ್ಮಹತ್ಯೆಯನ್ನು ಹೇಗೆ ತಡೆಗಟ್ಟಬಹುದು ಎಂಬ ತಜ್ಞರ ಅಭಿಪ್ರಾಯಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ಬಿತ್ತರಿಸಿ. ಹಾಗೆಯೇ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದವರು ಮತ್ತು ಆತ್ಮಹತ್ಯೆಯಿಂದ ತಮ್ಮ ಸಂಬಂಧಿಗಳನ್ನು ಕಳೆದುಕೊಂಡವರು ಅವರ ಬದುಕನ್ನು ಹೇಗೆ ಕಟ್ಟಿಕೊಂಡಿದ್ದಾರೆ ಎನ್ನುವುದನ್ನು, ಸೂಕ್ತ ಸಲಹೆ ಮತ್ತು ಸಹಕಾರದ ಮೂಲಕ ಹೇಗೆ ತಮ್ಮ ಜೀವನವನ್ನು ಅರ್ಥಪೂರ್ಣವಾಗಿಸಿಕೊಂಡಿದ್ದಾರೆ ಎನ್ನುವುದನ್ನು ತಜ್ಞರ ಅಭಿಪ್ರಾಯಗಳ ಮುಖೇನ ಬಿತ್ತರಿಸಿ. ಕೊನೆಯದಾಗಿ, ನಮ್ಮ ಸ್ವಂತ ಅನುಭವ ಇಲ್ಲದೆಯೇ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲದ ವಿಚಾರದಲ್ಲಿ ತೀರ್ಪುಗಾರರಂತೆ ವರ್ತಿಸುವುದು ಸಲ್ಲದು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org