ಚಿಕಿತ್ಸೆಯಲ್ಲಿ ನಿಮ್ಮ ಕುಟುಂಬವನ್ನು ಸೇರಿಸುವುದು ನಿಮ್ಮ ವೈಯಕ್ತಿಕ ಪ್ರಗತಿಗೆ ಪ್ರಯೋಜನವಾಗುತ್ತದೆ

ವ್ಯಕ್ತಿಗಳ ನಡುವಿನ ಸಮಸ್ಯೆಗಳ ನಿವಾರಣೆಗೆ ಫ್ಯಾಮಿಲಿ ಥೆರಪಿ ಸಹಾಯವಾಗಬಲ್ಲದು ಮತ್ತು ಒಟ್ಟಾರೆಯಾಗಿ ವೈಯಕ್ತಿಕ ಅಭಿವೃದ್ಧಿಯೂ ಉಂಟಾಗುವುದು.

ಯಾವುದೇ ವ್ಯಕ್ತಿಯ ಮಾನಸಿಕ ಆರೋಗ್ಯ ಮತ್ತು ಸಂಬಂಧಗಳ ಮೇಲೆ ಕುಟುಂಬ ಮತ್ತು ಸಮಾಜದ ಪಾತ್ರ ಪ್ರಮುಖವಾಗಿರುತ್ತದೆ. ಆದ್ದರಿಂದ, ಕುಟುಂಬ ಮತ್ತು ಸಮಾಜಗಳ ಸೂಕ್ತ ಸಹಕಾರ ದೊರೆಯದೇ ಹೋದರೆ ವ್ಯಕ್ತಿಯ ಮನಸ್ಸು ಸ್ವಸ್ಥವಾಗಿರಲು ಸಾಧ್ಯವೇ? ನಾವು ಮತ್ತು ನಮ್ಮ ಕುಟುಂಬದ ಸದಸ್ಯರು ಸಮಾಜದಲ್ಲಿನ ಒಂದು ಭಾಗವಾಗಿರುತ್ತೇವೆ. ಮತ್ತು ಇದರಿಂದ “ಕುಟುಂಬ ವ್ಯವಸ್ಥೆ” ನಿರ್ಮಾಣವಾಗುತ್ತದೆ. ಒಂದು ಕುಟುಂಬ ವ್ಯವಸ್ಥೆ ಸುಸ್ಥಿರವಾಗಿದ್ದರೆ ಅದರಲ್ಲಿನ ಪ್ರತಿಯೊಬ್ಬಸದಸ್ಯರಲ್ಲೂ ಹೊಂದಾಣಿಕೆಯಿರುತ್ತದೆ. ಯಾವುದೇ ವ್ಯಕ್ತಿಯ ಮೇಲೆ ಅವರ ಕುಟುಂಬವು ಸಕಾರಾತ್ಮಕ ಅಥವಾ ನಕಾರಾತ್ಮಕ ಪರಿಣಾಮ ಬೀರಿಯೇ ಇರುತ್ತದೆ ಅನ್ನುವ ಮಾತನ್ನು ಬಹುತೇಕ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ನೀವೇನಾದರೂ ಒಂದು ಆರೋಗ್ಯಕರ, ಸುಂದರ ಮತ್ತು ಸದಾ ನಿಮ್ಮನ್ನು ಬೆಂಬಲಿಸುವ ಫ್ಯಾಮಿಲಿ ಆಫ್ ಓರಿಜಿನ್ (ಎಫ್ ಓ ಓ) ಕುಟುಂಬದಿಂದ ಬಂದಿದ್ದರೆ ನೀವು ನಿಜಕ್ಕೂ ಅದೃಷ್ಟವಂತರು. ನೀವು ಎಲ್ಲರೊಂದಿಗೆ ಹೊಂದಾಣಿಕೆಯಿಂದ ಇರುತ್ತೀರಿ ಮತ್ತು ಎಲ್ಲರೊಡನೆ ನಿಮ್ಮ ಸಂಬಂಧಗಳು ಆರೋಗ್ಯಕರವಾಗಿ ಮತ್ತು ಸಮತೋಲನದಿಂದ ಇರುತ್ತದೆ. ದುರದೃಷ್ಟವಶಾತ್ ನೀವೇನಾದರೂ ಬಾಲ್ಯದಲ್ಲಿ ತೀವ್ರ ಯಾತನೆಯನ್ನು ಎದುರಿಸಿದ್ದರೆ ಅಥವಾ ಛಿದ್ರ ಕುಟುಂಬದ ಹಿನ್ನೆಲೆಯಿಂದ ನೀವು ಬಂದಿದ್ದರೆ, ಇದು ನಿಮ್ಮ ಜೀವನದಲ್ಲಿ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಗಳೇ ಹೆಚ್ಚು ಮತ್ತು ಇದು ಮುಂದಿನ ನಿಮ್ಮ ಇತರ ಸಂಬಂಧಗಳ ಮೇಲೂ ಪರಿಣಾಮ ಬೀರಬಹುದು.

ಕೆಲವೊಮ್ಮೆ ನಮ್ಮ ಹಿಂದಿನ ನಡವಳಿಕೆಗಳು ಮತ್ತು ಭಾವನೆಗಳನ್ನು ಬದಲಾಯಿಸಿಕೊಳ್ಳುವುದು ಕಷ್ಟಕರವಾಗಿರುತ್ತದೆ. ಕೆಲವು ನಿದರ್ಶನಗಳ ಮೂಲಕ ಇದನ್ನು ಅರ್ಥೈಸಿಕೊಳ್ಳಲು ಯತ್ನಿಸೋಣ.  

ರಮೇಶ್ ಎಂಬ ವ್ಯಕ್ತಿ ಒಮ್ಮೆ ಸಮಾಲೋಚನೆಗಾಗಿ ಬಂದಿದ್ದರು. ಅವರು ಜೀವನದಲ್ಲಿ ತುಂಬಾ ಬೇಸತ್ತಿದ್ದರು. ತಾವು ಮಾನಸಿಕ ಒತ್ತಡಕ್ಕೊಳಗಾಗಿರುವುದರಿಂದ ಸೂಕ್ತ ಚಿಕಿತ್ಸಕರೊಡನೆ ಮಾತನಾಡಬೇಕೆಂದು ಅವರು ಬಯಸಿದ್ದರು. ಚಿಕಿತ್ಸಾ ಕೊಠಡಿಯಲ್ಲಿ ಕೆಲವು ಗಂಟೆಗಳ ಸಮಾಲೋಚನೆ ನಡೆಯಿತು. ಅವರು, ಇತ್ತೀಚೆಗೆ ತಮ್ಮ ಮದುವೆಯಾಗಿರುವುದಾಗಿಯೂ, ಹೆಂಡತಿಯೊಡನೆ ತಂದೆ, ತಾಯಿ ಹಾಗೂ ಒಬ್ಬ ಸಹೋದರನಿರುವ ಕೂಡು ಕುಟುಂಬದಲ್ಲಿ ಜೀವನ ನಡೆಸುತ್ತಿರುವುದಾಗಿಯೂ ತಿಳಿಸಿದರು.

ರಮೇಶ್ ಹಿರಿಯ ಮಗನಾದ್ದರಿಂದ ಅವರ ಮೇಲೆ ತುಂಬಾ ಜವಾಬ್ದಾರಿಗಳಿದ್ದವು ಮತ್ತು ಅಗತ್ಯ ಬಿದ್ದಾಗಲೆಲ್ಲಾ ಕುಟುಂಬದವರಿಗೆ ಆರ್ಥಿಕ ಸಹಾಯವನ್ನು ಅವರೇ ಮಾಡಬೇಕಾಗಿತ್ತು. ಅವರ ತಾಯಿ ಅವರಿಗಿಷ್ಟವಾಗಿರುವ ತಿಂಡಿ-ತಿನಿಸುಗಳನ್ನು ತಯಾರಿಸುತ್ತಿದ್ದರು ಮತ್ತು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಅವರ ತಂದೆ ಮತ್ತು ಸಹೋದರಿನಿಗಿಂತಲೂ ರಮೇಶ್’ಗೇ ಹೆಚ್ಚಿನ ಆರೈಕೆ ಅವರಿಂದ ದೊರೆಯುತ್ತಿತ್ತು. ರಮೇಶ್ ತಾಯಿ ತಾವು ಜೀವನದಲ್ಲಿ ಎದುರಿಸಿದ್ದ ತೊಂದರೆಗಳನ್ನು ಮಗನೊಡನೆ ಹಂಚಿಕೊಳ್ಳುತ್ತಿದ್ದರು. ತಾಯಿ ತೋರುತ್ತಿದ್ದ ಪ್ರೀತಿ - ಮಮತೆಯಿಂದ ರಮೇಶ್ ತಾಯಿಗೆ ತುಂಬಾ ಹತ್ತಿರವಾಗಿದ್ದರು. ತಾವು ಮದುವೆಯಾಗುವುದರಿಂದ ತಾಯಿಗೆ ಕೆಲಸ ಕಾರ್ಯಗಳಲ್ಲಿ ಸಹಕರಿಸಲು ಒಬ್ಬಸಂಗಾತಿ ಸಿಗುತ್ತಾಳೆಂಬುದು ರಮೇಶ್ ಅನಿಸಿಕೆಯಾಗಿತ್ತು. ಆದರೆ ಮದುವೆಯ ನಂತರದಲ್ಲಿ ಸನ್ನಿವೇಶಗಳು ಪೂರ್ತಿಯಾಗಿ ಬದಲಾದವು. ಮಧುಚಂದ್ರವೇನೋ ಸಂತಸ ನೀಡಿತ್ತು. ಆದರೆ ಮನೆಯಲ್ಲಿ ಕೆಲವು ಸಣ್ಣಪುಟ್ಟ ಘರ್ಷಣೆಗಳಾಗತೊಡಗಿದವು.

ರಮೇಶ್ ಹೆಂಡತಿ ಯಾವಾಗಲೂ ಅವರ ತಾಯಿ ಮಾಡುವ ಅಡುಗೆಯನ್ನು ಟೀಕಿಸುತ್ತಿದ್ದರು. ಅವರನ್ನು ಚುಚ್ಚುಮಾತುಗಳಿಂದ ನಿಂದಿಸುತ್ತಿದ್ದರು. ರಮೇಶ್ ತಮ್ಮ ತಾಯಿಯ ಜೊತೆ ಸುಖ - ದುಃಖಗಳನ್ನು ಹಂಚಿಕೊಳ್ಳುವುದು ಮತ್ತು ಹೆಚ್ಚುಸಮಯ ಕಳೆಯುತ್ತಿದ್ದುದು ಅವರ ಹೆಂಡತಿಗೆ ಇಷ್ಟವಾಗುತ್ತಿರಲಿಲ್ಲ. ಇದರಿಂದಾಗಿ ತಾವು ತಮ್ಮ ತಾಯಿಗೆ ಹೆಚ್ಚಿನ ಸಮಯ ನೀಡಲಾಗುತ್ತಿಲ್ಲವೆಂದು ರಮೇಶ್ ತುಂಬಾ ಬೇಸರಗೊಂಡಿದ್ದರು. ಅವರ ತಾಯಿ ಯಾವಾಗಲೂ ನೇರವಾಗಿ ಏನನ್ನೂ ಹೇಳುತ್ತಿರಲಿಲ್ಲ. ತಾಯಿಗೆ ತಮ್ಮ ಅಗತ್ಯ ಬಹಳಷ್ಟಿದೆ ಎಂದು ರಮೇಶ್ ಗೆ ತಿಳಿದಿತ್ತು. ಅವರ ತಾಯಿಗಾದರೂ ರಮೇಶರನ್ನು ಬಿಟ್ಟರೆ ಇನ್ಯಾರು?

ಈ ಘಟನೆಯು ತೀವ್ರ ಕೌಟುಂಬಿಕ ಕಲಹಗಳಿಗೆ ನಾಂದಿ ಹಾಡಿತು ಮತ್ತು ಮನೆಯಲ್ಲಿ ಶಾಂತಿ-ನೆಮ್ಮದಿಯಿಲ್ಲದಾಯಿತು. ರಮೇಶ್ ರ ಹೆಂಡತಿ ಅವರನ್ನು ತೊರೆದು ತವರು ಮನೆಗೆ ತೆರಳುವುದಾಗಿ ಹೆದರಿಸುತ್ತಿದ್ದರು. ಹಾಗೇನಾದರೂ ನಡೆದರೆ ಜನ ಏನು ತಿಳಿದುಕೊಳ್ಳುತ್ತಾರೆ ಅನ್ನುವ ಯೋಚನೆ ಅವರನ್ನು ಕಾಡತೊಡಗಿತು. ಇದೇ ಸಂದರ್ಭದಲ್ಲಿ ಅವರು ಮದುವೆ ಮತ್ತು ಮಧುಚಂದ್ರಕ್ಕೆಂದು ಹೆಚ್ಚಿನ ರಜೆ ತೆಗೆದುಕೊಂಡಿದ್ದರಿಂದ ಕಚೇರಿಯಲ್ಲಿ ಕೆಲಸದ ಒತ್ತಡವೂ ಹೆಚ್ಚಿತ್ತು. ತಮ್ಮಿಂದ ಏನನ್ನೂ ಸರಿಪಡಿಸಲಾಗುತ್ತಿಲ್ಲವೆಂದು ಅವರು ತುಂಬಾ ಬೇಸರಗೊಂಡಿದ್ದರು.

ರಮೇಶ್ ರವರ ದೃಷ್ಟಿಯಲ್ಲಿ ಎಲ್ಲರನ್ನೂ ಸಂತೋಷವಾಗಿಡಲು ತಾವು ಎಲ್ಲಾ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಿದ್ದೇನೆ ಎಂಬ ಭಾವನೆ ಇತ್ತು. ಹಾಗೆಯೇ, ತಾವು ಅಷ್ಟೆಲ್ಲ ಮಾಡಿದರೂ, ಎಲ್ಲರನ್ನೂ ಸಂತೋಷಪಡಿಸಲು ಸಾಧ್ಯವಾಗಲಿಲ್ಲ ಅನ್ನುವ ವೇದನೆಯೂ ಇತ್ತು. ಅವರ ಪ್ರಕಾರ ಎಲ್ಲಾ ಜವಾಬ್ದಾರಿಗಳನ್ನು ತಾವು ಸಮರ್ಥವಾಗಿ ನಿಭಾಯಿಸಿರುವಾಗ ಇಂತಹ ಘಟನೆಗಳು ನಡೆಯಲೇಬಾರದಿತ್ತು.

ದುರಾದೃಷ್ಟವಶಾತ್ ಆಪ್ತಸಮಾಲೋಚನೆಗೆ ಆಗಮಿಸುವ ವ್ಯಕ್ತಿಗಳು ಇಂತಹ ಕೌಟುಂಬಿಕ ಘರ್ಷಣೆಗಳಿಂದ ರೋಸಿಯೇ ಬಂದಿರುತ್ತಾರೆ.

ರಮೇಶ್ ಅವರಿಗೆ ಕೆಲವು ಸಲಹೆಗಳನ್ನು ನೀಡಲಾಯಿತು ಮತ್ತು ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂದು ಕೆಲವು ಟಿಪ್ಸ್ ಗಳನ್ನೂ ಕೊಡಲಾಯಿತು. ರಮೇಶ್ ತಮ್ಮ ಕರ್ತವ್ಯಗಳನ್ನು ಸಮರ್ಥವಾಗಿ ನಿಭಾಯಿಸಿದ್ದರೂ ಅವರು ಹತಾಶರಾಗಿದ್ದರು. ಪೋಷಕರ ಆರೈಕೆ, ಹೆಂಡತಿಯೊಡನೆ ಸಂಬಂಧ, ಮನೆಯ ಖರ್ಚುವೆಚ್ಚ, ಉದ್ಯೋಗದ ಜವಾಬ್ದಾರಿ  – ಎಲ್ಲವನ್ನೂ ಅವರು ಸರಿದೂಗಿಸಬೇಕಾಗಿತ್ತು. ಜೊತೆಗೆ, ಸುತ್ತಲಿನ ಜನ ತಮ್ಮ ಕುಟುಂಬದ ಬಗ್ಗೆ ಏನು ತಿಳಿದುಕೊಳ್ಳುತ್ತಾರೆ ಅನ್ನುವ ಆತಂಕವೂ ಅವರನ್ನು ಭಾಧಿಸುತ್ತಿತ್ತು.

ಆಪ್ತಸಮಾಲೋಚನೆಯ ಚಿಕಿತ್ಸಾ ಪದ್ಧತಿಯಲ್ಲಿನ ಸಮಸ್ಯೆಯೆಂದರೆ, ಇದರಲ್ಲಿ ಕುಟುಂಬದ ಸದಸ್ಯರಿಂದ ಉಂಟಾಗುವ ಸಮಸ್ಯೆಗಳನ್ನು, ತೊಂದರೆಗಳನ್ನು ಪರಿಗಣಿಸಲಾಗುವುದಿಲ್ಲ. ರಮೇಶ್ ತಮ್ಮ ಹೆಂಡತಿಗಿಂತ ಹೆಚ್ಚಾಗಿ ತಾಯಿಯೊಡನೆ ಸುಖ ದುಃಖಗಳನ್ನು ಹಂಚಿಕೊಳ್ಳುತ್ತಿದ್ದರಿಂದ ಅವರ ಹೆಂಡತಿಗೆ ತಾನು ಏಕಾಂಗಿ ಎಂಬ ಭಾವನೆಯುಂಟಾಗುತ್ತಿತ್ತು ಮತ್ತು ಅಸೂಯೆಯಾಗುತ್ತಿತ್ತು. ಅವರು ಈ ಭಾವನೆಯನ್ನು ವ್ಯಕ್ತಪಡಿಸುವ ಬದಲು ರಮೇಶ್ ಮೇಲೆ ಸಿಟ್ಟಾಗುತ್ತಿದ್ದರು ಮತ್ತು ತಾಯಿಯನ್ನು ದೂರುತ್ತಿದ್ದರು. ಇದರಿಂದ ರಮೇಶ್ ಗೂ ಸಿಟ್ಟು ಬರುತ್ತಿತ್ತು ಮತ್ತು ಬೇಸರವಾಗುತ್ತಿತ್ತು. ಆಪ್ತಸಮಾಲೋಚನೆಯ ನಂತರ ರಮೇಶ್ ಅವರಲ್ಲಿ ಸ್ವಲ್ಪ ಬದಲಾವಣೆಗಳು ಕಂಡು ಬಂದರೂ ಅವರ ಕುಟುಂಬದವರಿಂದ ಯಾವುದೇ ಬದಲಾವಣೆ ಬಯಸುವಂತಿರಲಿಲ್ಲ.

ವ್ಯಕ್ತಿಯ ಸಮಸ್ಯೆ ಕುಟುಂಬ ಅಥವಾ ಸಂಬಂಧಗಳ ಜೊತೆಗೆ ಹೆಣೆದುಕೊಂಡಿರುವಾಗ ಆಪ್ತಸಮಾಲೋಚಕರು ಅದನ್ನು ಪರಿಗಣಿಸುವ ಬಗೆಯೇ ಬೇರೆ. ರಮೇಶ್ ಪ್ರಕರಣದಲ್ಲಿ, ಅವರ ಮತ್ತು ಪೋಷಕರ ನಡುವಿನ ಸಂಬಂಧಗಳು ಯಾವ ರೀತಿಯಲ್ಲಿ ಕುಟುಂಬದ ಮೇಲೆ ಪರಿಣಾಮ ಬೀರಿದೆ ಮತ್ತು ಅವರಿಗೆ ಹೇಗೆ ಸಹಾಯ ಮಾಡಬಹುದು ಎಂದು ಯೋಚಿಸಲಾಗುತ್ತದೆ.

ಮಕ್ಕಳು ಚಿಕ್ಕವರಿದ್ದಾಗ ಎಲ್ಲವೂ ಸರಿ ಇದ್ದಿರಬಹುದು. ಆದರೆ ಅವರು ದೊಡ್ಡವರಾದ ಮೇಲೆ ಪೋಷಕರ ಅಗತ್ಯಗಳನ್ನು ತಿಳಿದುಕೊಂಡು ಅವುಗಳನ್ನು ಪೂರೈಸಬೇಕಲ್ಲವೇ? ಆದರೆ ಅವರು ಕುಟುಂಬದ ಎಲ್ಲಾ ಅಗತ್ಯಗಳನ್ನು ಪೂರೈಸುವ ಸ್ಥಿತಿಯಲ್ಲಿರಲಿಲ್ಲ. ರಮೇಶ್ ಮತ್ತು ಅವರ ಸಹೋದರ ಕುಟುಂಬದಲ್ಲಿನ ಸಮಸ್ಯೆಗಳನ್ನು ನಿವಾರಿಸುವ ವಿಷಯದಲ್ಲಿ ಯಾವ ರೀತಿಯ ಭಾವನೆ ಹೊಂದಿದ್ದಾರೆ ಎಂದು ತಿಳಿದುಕೊಳ್ಳಬೇಕಾಗುತ್ತದೆ. ರಮೇಶ್ ರ ತಮ್ಮ ಹೆಚ್ಚಿನ ಒತ್ತಡವನ್ನು ಎದುರಿಸುತ್ತಿಲ್ಲದಿದ್ದರೂ ಅವನ ಮೇಲೆ ಯಾವುದೇ ಪರಿಣಾಮ ಬೀರಿಲ್ಲವೆಂದೇನಲ್ಲ. ಈ ಒಟ್ಟು ಪ್ರಕರಣದ ಸಮಸ್ಯೆಯನ್ನು ರಮೇಶ್ ಅವರ ಹತಾಶೆಯ ಮೂಲಕ ಅರ್ಥಮಾಡಿಕೊಳ್ಳಬಹುದು. ಅವರು ತಮ್ಮ ಕುಟುಂಬದಲ್ಲಿ ಯಾವುದೂ ಸರಿಯಿಲ್ಲವೆಂಬ ಭಾವನೆಯನ್ನು ಹೊಂದಿದ್ದರು. ರಮೇಶ್ ಮತ್ತು ಅವರ ಹೆಂಡತಿ ಪರಸ್ಪರ ಸಮಾಧಾನದ ಮಾತುಕತೆ ನಡೆಸುವ ಮೂಲಕ ಅದನ್ನು ಪರಿಹರಿಸಿಕೊಳ್ಳುವುದೊಂದೇ ಇದಕ್ಕೆ ಪರಿಹಾರ.

ಕೌಟುಂಬಿಕ ಘರ್ಷಣೆಯಿಂದ ಉಂಟಾಗುವ ಸಮಸ್ಯೆಗಳ ಪರಿಹಾರಕ್ಕೆ ಇಡಿಯ ಕುಟುಂಬದ ಪಾಲುದಾರಿಕೆ ಮುಖ್ಯವಾಗುತ್ತದೆ. ಹೀಗೆ ಎಲ್ಲರನ್ನೂ ಒಳಗೊಂಡು ನೀಡಲಾಗುವ ಚಿಕಿತ್ಸೆಯೇ ಫ್ಯಾಮಿಲಿ ಥೆರಪಿ. ರಮೇಶ್ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದರೆ, ಕುಟುಂಬದ ಎಲ್ಲಾ ಸದಸ್ಯರೂ ಪರಸ್ಪರ ಸಮಾಲೋಚನೆ ನಡೆಸಬೇಕಾಗುತ್ತದೆ ಮತ್ತು ಸಮಾಲೋಚಕರ ಸಲಹೆಗಳನ್ನು ಪಡೆಯಬೇಕಾಗುತ್ತದೆ.

ಪಾಶ್ಚಿಮಾತ್ಯ ದೇಶಗಳಲ್ಲಿ ಫ್ಯಾಮಿಲಿ ಥೆರಪಿಯನ್ನು ಬಳಸಿಕೊಂಡು ಇಂತಹ ಸಮಸ್ಯೆಗಳನ್ನು ಗುರುತಿಸಿ, ಚಿಕಿತ್ಸೆ ನೀಡುವ ಪ್ರಯತ್ನಗಳು ನಡೆದಿವೆ. ಕುಟುಂಬದಲ್ಲಿ ಕಂಡುಬರುವ ಸಮಸ್ಯೆಗಳನ್ನು ಗುರುತಿಸುವ ಉದ್ದೇಶದಿಂದ ಮಕ್ಕಳು ಮತ್ತು ಯುವಕರ ನಡುವೆ ಮುಕ್ತ ಚರ್ಚೆಗಳನ್ನು ಏರ್ಪಡಿಸಲಾಗುತ್ತದೆ. ಮತ್ತು ವ್ಯಕ್ತಿಗತ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಎಂಪ್ಲಾಯ್ಮೆಂಟ್ ಅಸಿಸ್ಟೆನ್ಸ್ ಪ್ರೋಗ್ರಾಮ್ಸ್ (ಇ ಏ ಪಿ) ಗಳನ್ನು ನಡೆಸಲಾಗುತ್ತದೆ.

ಸಾಮಾನ್ಯವಾಗಿ ಎಲ್ಲಾ ಸಮಸ್ಯೆಗಳನ್ನು ವ್ಯವಸ್ಥಿತವಾದ ದೃಷ್ಟಿಕೋನದಲ್ಲಿ ನೋಡಬೇಕು ಅನ್ನುವುದು ಚಿಕಿತ್ಸಕರ ನಿಯಮ. ಇತರ ರಾಷ್ಟ್ರಗಳಿಗೆ ಹೋಲಿಸಿದರೆ ನಾವು ಭಾರತೀಯರು ನಮ್ಮ ಕುಟುಂಬದೊಡನೆ ಮತ್ತು ಸಮುದಾಯದ ಜೊತೆ ಉತ್ತಮ ಬಾಂದವ್ಯವನ್ನು ಹೊಂದಿದವರಾಗಿದ್ದೇವೆ. ಆದರೆ, ಹೊರಗಿನ ಸಮಾಜದಿಂದ ಉತ್ತಮ ಬೆಂಬಲವಿದ್ದಾಗಿಯೂ, ನಮ್ಮ ಕೌಟುಂಬಿಕ ವ್ಯವಸ್ಥೆ ಬೆನ್ನಿಗೆ ನಿಲ್ಲದೆ ಹೋದರೆ ಒತ್ತಡ ಮತ್ತು ಸಮಸ್ಯೆಗಳು ಕಟ್ಟಿಟ್ಟ ಬುತ್ತಿಯೇ ಸರಿ.

(ಇಲ್ಲಿ ಪ್ರಸ್ತುತಪಡಿಸಿರುವ ಸನ್ನಿವೇಶಗಳು ಕೇವಲ ವಿವರಣೆಗಾಗಿ; ಅವು ಯಾವುದೇ ನಿರ್ದಿಷ್ಟವ್ಯಕ್ತಿಯನ್ನು ಆಧರಿಸಿರುವುದಿಲ್ಲ)

ಶಬರಿ ಭಟ್ಟಾಚಾರ್ಯ ಪರಿವರ್ತನ್ ಕೌನ್ಸಲಿಂಗ್ ಟ್ರೈನಿಂಗ್ ಆ್ಯಂಡ್ ರೀಸರ್ಚ್ ಸೆಂಟರಿನ ತರಬೇತುದಾರರು ಮತ್ತು ಸಲಹೆಗಾರರಾಗಿದ್ದಾರೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org