ಮಾನಸಿಕ ಆರೋಗ್ಯವನ್ನು -ಅರ್ಥಮಾಡಿಕೊಳ್ಳುವುದು

ಸಂದರ್ಶನ: ಮಾನಸಿಕ ಆರೋಗ್ಯ ಮತ್ತು ಆರ್ಥಿಕ ಪರಿಸ್ಥಿತಿ

ಪ್ರೊಫೆಸರ್ ಬಿ.ಎಂ. ಕುಮಾರಸ್ವಾಮಿ ಅವರು ಶಿವಮೊಗ್ಗದಲ್ಲಿ ವಾಸಿಸುವ ಹೆಸರಾಂತ ಅರ್ಥಶಾಸ್ತ್ರಜ್ಞ ಮತ್ತು ಪರಿಸರವಾದಿ. ಅವರು ಕರ್ನಾಟಕ ಸರ್ಕಾರದ ಪಶ್ಚಿಮ ಘಟ್ಟಗಳ ಕಾರ್ಯಪಡೆಯ ಮಾಜಿ ಸದಸ್ಯರಾಗಿದ್ದರು. ಈ ಸಂದರ್ಶನದಲ್ಲಿ ಇವರು ಮಾನಸಿಕ ಆರೋಗ್ಯದ

ಪ್ರೊಫೆಸರ್ ಬಿ.ಎಂ. ಕುಮಾರಸ್ವಾಮಿ

ಪ್ರಶ್ನೆ: ಜನರು ಮಾನಸಿಕ ಖಾಯಿಲೆಗಳಿಂದ ಬಳಲುತ್ತಿರುವಾಗ ಮತ್ತು ಕೆಲಸಕಾರ್ಯಗಳನ್ನು ನಿರ್ವಹಿಸಲು ಸಮರ್ಥರಿಲ್ಲ ಎಂದು ಪರಿಗಣಿಸಲ್ಪಟ್ಟಿದ್ದಾಗ (ಅವರು ಸಮರ್ಥರಿದ್ದಾಗಲೂ) ಅವರ ಆರ್ಥಿಕ ಜೀವನದ ಗುಣಮಟ್ಟದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ?

ಉತ್ತರ: ಖಂಡಿತವಾಗಿಯೂ ಪರಿಣಾಮ ಇದ್ದೇ ಇರುತ್ತದೆ. ಯಾಕೆಂದರೆ, ಆರ್ಥಿಕವಾಗಿ ದುಡಿಮೆ ಮಾಡುವಲ್ಲಿ ಸಫಲನಾಗಬೇಕಾದರೆ ವ್ಯಕ್ತಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರುವುದು ತುಂಬ ಅವಶ್ಯಕ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಆರೋಗ್ಯವೆಂದರೆ ಕೇವಲ ದೈಹಿಕ ಆರೋಗ್ಯವಷ್ಟೇ ಅಲ್ಲ. ದೈಹಿಕ, ಮಾನಸಿಕ ಮತ್ತು ಪಾರಮಾರ್ಥಿಕ ಆರೋಗ್ಯ ಈ ಎಲ್ಲವನ್ನೂ ಅದು ಒಳಗೊಂಡಿರುತ್ತದೆ, ಈ ಎಲ್ಲ ದೃಷ್ಟಿಯಿಂದಲೂ ಮನುಷ್ಯ ಆರೋಗ್ಯವಾಗಿದ್ದಾಗ ಅವನನ್ನು ಒಟ್ಟಾಗಿ ಆರೋಗ್ಯಪೂರ್ಣ ವ್ಯಕ್ತಿ ಎನ್ನಬಹುದು. ಆದ್ದರಿಂದ, ಮಾನಸಿಕ ಆರೋಗ್ಯವು ದೈಹಿಕ ಆರೋಗ್ಯದಷ್ಟೇ ಪ್ರಮುಖವಾಗಿರುತ್ತದೆ.

ಪ್ರಶ್ನೆ: ಭಾರತದಲ್ಲಿ ಕೇವಲ ಸುಮಾರು 5000 ಮನೋವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ದೇಶಮಟ್ಟದಲ್ಲಿ ತುಲನಾತ್ಮಕವಾಗಿ ವಿಚಾರ ಮಾಡಿದಾಗ ಇದು ತುಂಬ ಕಳವಳಕಾರಿ ಸಂಗತಿ. ಯಾಕೆಂದರೆ ನಮ್ಮಲ್ಲಿ ಪ್ರತಿ ನಾಲ್ಕು ಜನರಲ್ಲಿ ಒಬ್ಬರು ಜೀವನದ ಒಂದಲ್ಲ ಒಂದು ಹಂತದಲ್ಲಿ, ಯಾವುದಾದರೂ ಒಂದು ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲಬಹುದು.. ದೇಶದ/ರಾಜ್ಯದ ಆರ್ಥಿಕ ಗುಣಮಟ್ಟವನ್ನು ಪರಿಗಣಿಸಿದರೆ, ಈ ಸಂಗತಿಯನ್ನು ನಾವು ಹೇಗೆ ಪರಿಹರಿಸಬಹುದು?

ಉತ್ತರ: ಮಾನಸಿಕ ಅಥವಾ ದೈಹಿಕ ರೋಗ್ಯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವೈದ್ಯರ, ನರ್ಸುಗಳ ಕೊರತೆ ಇಡೀ ದೇಶಾದ್ಯಂತ ತುಂಬಾನೇ ಇದೆ. ಆದರೆ, ಭಾರತದಲ್ಲಿ ಹೆಚ್ಚು ಪಾಲು ಅಧ್ಯಯನ ಮಾಡುವ ವೈದ್ಯರುಗಳು ಪರದೇಶಗಳಿಗೆ ಹೋಗಿಬಿಡುತ್ತಾರೆ. ‘ವೈದ್ಯಕೀಯ ಮಾನವ ಸಂಪನ್ಮೂಲವನ್ನು ರಫ್ತುಮಾಡುವಲ್ಲಿ ಭಾರತ ಜಗತ್ತಿನಲ್ಲಿಯೇ ಮೊದಲ ಸ್ಥಾನವನ್ನು ಪಡೆದಿದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳುತ್ತದೆ.. ಇದಕ್ಕೆ ತಡೆ ಹಾಕುವ ಕಾನೂನುಗಳು ಬೇಕು. ಯಾಕೆಂದರೆ ನಾವು ಈ ವೈದ್ಯರನ್ನು ಓದಿಸಿ, ಸರಕಾರ ಅವರ ಮೇಲೆ ಹಣ ಖರ್ಚು ಮಾಡಿ, ಅವರು ಇನ್ನೇನು ಇಲ್ಲಿಯೇ ಸೇವೆಗೆ ಸಿಗಲಿದ್ದಾರೆ ಎಂಬ ಹಂತದಲ್ಲಿ ಅಮೇರಿಕಾಕ್ಕೋ, ಇಂಗ್ಲೆಂಡಿಗೋ ಹೊರಟುಬಿಟ್ಟರೆ, ಅದು ನಮ್ಮ ಸಂಪನ್ಮೂಲಗಳ ಸೋರಿಕೆಯೇ ಅಲ್ಲವೆ? ಹಾಗಾಗಿ ಈರೀತಿಯ ಪ್ರತಿಭಾ ಫಲಾಯನಕ್ಕೆ ತಡೆಯೊಡ್ಡುವ ಅವಶ್ಯಕತೆಯಿದೆ. ಕನಿಷ್ಟ ಐದು ಅಥವಾ ಹತ್ತು ವರ್ಷಗಳ ಕಾಲ ಅವರು ನಮ್ಮ ದೇಶದಲ್ಲಿಯೇ ಸೇವೆಸಲ್ಲಿಸುವಂತಾಗಬೇಕು..

ಎರಡನೆಯದಾಗಿ, ನಗರಗಳಲ್ಲಿ ಇಂದು ಸಾಕಷ್ಟು ಸಂಖ್ಯೆಯಲ್ಲಿ ವೈದ್ಯರು ಲಭ್ಯರಿದ್ದಾರೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯ ಖಾಯಿಲೆಗಳಿಗೆ ಔಷಧ ಕೊಡಲೂ ವೈದ್ಯರು ಸಿಗುವುದು ಕಷ್ಟ. ಹಾಗಾಗಿ ಇತ್ತೀಚೆಗೆ ಕರ್ನಾಟಕ ಸರಕಾರ ವೈದ್ಯರುಗಳ ಗ್ರಾಮೀಣ ಸೇವೆಯನ್ನು ಕಡ್ಡಾಯಗೊಳಿಸಿ ಕಾನೂನನ್ನೇ ರೂಪಿಸುವ ಮೂಲಕ ಆ ಕೊರತೆಯನ್ನು ನೀಗಿಸಲು ಗಮನಹರಿಸಿದೆ. ವೈದ್ಯರು ಗ್ರಾಮೀಣ ಭಾಗಗಳಿಗೆ ಹೋಗಲು ಮನಸ್ಸು ಮಾಡದೇ ಇರುವುದಕ್ಕೆ ಬಹುಮುಖ್ಯ ಕಾರಣ, ಅಲ್ಲಿ ಅವರಿಗೆ ವಾಸಮಾಡಲು, ಕೆಲಸಮಾಡಲು ಬೇಕಾಗಿರುವ ಕನಿಷ್ಟ ಮೂಲಭೂತ ಸೌಕರ್ಯಗಳ ಕೊರತೆಯಿರುವುದು. ಅಂತಹ ಕಡೆಗಳಲ್ಲಿ ವರ್ಷಗಟ್ಟಲೆ ಕೆಲಸ ನಿರ್ವಹಿಸುವುದು ಕೂಡ ಕಷ್ಟಕರವಾಗುತ್ತದೆ. ಹಾಗಾಗಿ ಸರಕಾರ ಕೂಡ ಗ್ರಾಮೀಣ ಪ್ರದೇಶಗಳ ಆಸ್ಪತ್ರೆಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳಾದ ನೀರು, ವಿದ್ಯುತ್, ವಸತಿ ವ್ಯವಸ್ಥೆ ಮುಂತಾದವುಗಳನ್ನು ಕಲ್ಪಿಸಿಕೊಡುವತ್ತ ಹೆಚ್ಚು ಗಮನ ನೀಡುವುದು ಅತ್ಯವಶ್ಯಕ.

ಮೂರನೆಯದಾಗಿ, ವೈದ್ಯಕೀಯ ಶಿಕ್ಷಣ ಕುರಿತು. ಈಗ ವೈದ್ಯಕೀಯ ಪದವಿ ಶಿಕ್ಷಣ ಐದು ವರ್ಷಗಳ ಅವಧಿಯದ್ದಾಗಿದೆ. ಅದನ್ನು ಮೂರುವರ್ಷಗಳಿಗೆ ಇಳಿಸಬೇಕೆಂಬ ಒಂದು ಪ್ರಸ್ತಾವನೆಯಿದೆ. ಇದನ್ನು ‘ಕಾನ್ಸೆಪ್ಟ್ ಆಫ್ ಬೇರ್ ಫುಟ್ ಡಾಕ್ಟರ್ಸ್’ ಎನ್ನಲಾಗುತ್ತದೆ. ಅಂದರೆ ಈ ರೀತಿಯಲ್ಲಿ ಶಿಕ್ಷಣ ಪಡೆಯುವ ವೈದ್ಯರು ಹೆಚ್ಚಿನ ವಿಶೇಷಜ್ಞರು ಅಥವಾ ಶಸ್ತ್ರಚಿಕಿತ್ಸೆ ಇತ್ಯಾದಿ ಸಂಕೀರ್ಣ ವೈದ್ಯಕೀಯ ಪ್ರಕ್ರಿಯೆಗಳನ್ನು ನಿರ್ವಹಿಸುತ್ತಾರೆ ಅಂತ ಅಲ್ಲ. ಆದರೆ, ದೈನಂದಿನ ಆರೋಗ್ಯ ಕಿರುಕುಳಗಳಿಗೆ, ಅದು ಮಾನಸಿಕ ಅಥವಾ ದೈಹಿಕವಾದ ಸಮಸ್ಯೆಗಳಿರಬಹುದು, ಅಂತವುಗಳನ್ನು ಚಿಕಿತ್ಸೆಗೊಳಪಡಿಸುವ ಮಟ್ಟಿಗಿನ ತಜ್ಞತೆಯನ್ನು ಹೊಂದಿರುವ ಮಟ್ಟಿಗೆ ಕನಿಷ್ಠ ವೈದ್ಯಕೀಯ ಶಿಕ್ಷಣವನ್ನು ನೀಡಿ, ವೈದ್ಯಕೀಯ ಶಿಕ್ಷಣವನ್ನು ಕಡಿಮೆ ಖರ್ಚಿನಲ್ಲಿ ಪೂರೈಸುವಂತೆ ಮಾಡುವ ಪ್ರಸ್ತಾವನೆಯೂ ಇದೆ. ಹಾಗಾಗಿ ‘ಬೇರ್ ಫುಟ್ ಡಾಕ್ಟರ್ಸ್’ ಪರಿಕಲ್ಪನೆಯನ್ನು ಸರಕಾರ ಜಾರಿಯಲ್ಲಿ ತರಬೇಕು.

ಪ್ರಶ್ನೆ: ರಾಜ್ಯವೊಂದರ ಆರ್ಥಿಕ ವ್ಯವಸ್ಥೆ ಅನೇಕ ಅಂಶಗಳನ್ನು ಆಧರಿಸಿದೆ. ಮಾನಸಿಕ ಅಥವಾ ದೈಹಿಕ ಖಾಯಿಲೆಗಳು ರಾಜ್ಯದ ಆರ್ಥಿಕತೆಯನ್ನು ಪ್ರಭಾವಿಸುತ್ತವೆಯೇ ? ಕರ್ನಾಟಕದಲ್ಲಿ ಜನರ ಮಾನಸಿಕ ಅಸ್ವಸ್ಥತೆಯಿಂದ ರಾಜ್ಯದ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ತೋರಿಸುವ ಯಾವುದಾದರೂ ಅಧ್ಯಯನ ನ ಡೆದಿದೆಯೇ ?

ಉತ್ತರ: ಇದು ನಿಶ್ಚಿತವಾಗಿಯೂ ಸತ್ಯ. ಏಕೆಂದರೆ, ಕರ್ನಾಟಕದ ಆರ್ಥಿಕ ವ್ಯವಸ್ಥೆ ಕೃಷಿ, ವ್ಯಾಪಾರ, ವಾಣಿಜ್ಯ, ಉದ್ಯಮ... ಹೀಗೆ ಬೇರೆ ಬೇರೆ ಸ್ತರಗಳ ಮೇಲೆ ಅವಲಂಬಿತವಾಗಿದೆ.. ಒಂದು ರಾಜ್ಯ ಮುಂದುವರೆದು ಅಭಿವೃದ್ಧಿ ಕಾಣಬೇಕಾದರೆ, ಅಲ್ಲಿ ಬೇರೆ ಬೇರೆ ರೀತಿಯ ಪ್ರತಿಭೆಗಳು ಕಾರ್ಯನಿರ್ವಹಿಸುವುದು ಅವಶ್ಯಕವಾಗಿರುತ್ತದೆ. ಉದಾಹರಣೆಗೆ, ಎಂಜನಿಯರುಗಳು, ಡಾಕ್ಟರುಗಳು ಹೀಗೆ. ಒಬ್ಬ ಎಂಜನಿಯರ್ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಅಂತಾದರೆ, ಅವನ ಕೈಕೆಳಗೆ ಡಿಪ್ಲೋಮಾ ಡಿಗ್ರಿ ಪಡೆದ ಹತ್ತಾರು ಜನರ ತಂಡವಿರಬೇಕು.. ಓರ್ವ ವೈದ್ಯರು ಪರಿಣಾಮಕಾರಿಯಾಗಿ ಕೆಲಸನಿರ್ವಹಿಸಲು ಅವರ ಕೈಕೆಳಗೆ ಐದಾರು ಜನ ನರ್ಸುಗಳು, ಪ್ಯಾರಾಮೆಡಿಕಲ್ ಸಿಬ್ಬಂದಿಗಳು ಇರಬೇಕಾಗುತ್ತದೆ. ಇದೊಂದು ರೀತಿಯ ಪ್ಯಾಕೇಜ್. ನೀವು ಬರೇ ಡಾಕ್ಟರುಗಳನ್ನು ಒದಗಿಸಿ, ಅಲ್ಲಿ ನರ್ಸಿಂಗ್ ಅಥವಾ ಪ್ಯಾರಾಮೆಡಿಕಲ್ ಸಿಬ್ಬಂದಿಗಳೇ ಇಲ್ಲ ಅಂತಾದರೆ ಡಾಕ್ಟರುಗಳ ಸೇವೆ ಪರಿಣಾಮಕಾರಿಯಾಗುವುದು ಸಾಧ್ಯವಿಲ್ಲ. ಹಾಗಾಗಿ ನಾವು ಮಾನಸಿಕ ಅಥವಾ ದೈಹಿಕ ಆರೋಗ್ಯ ಆರೈಕೆಗಳನ್ನು ಒಂದು ಪ್ಯಾಕೇಜ್ ರೂಪದಲ್ಲಿಯೇ ನೋಡಬೇಕು. ಕೇವಲ ಡಾಕ್ಟರರೊಬ್ಬರೇ, ಅಥವಾ ಕೇವಲ ಪ್ಯಾರಮೆಡಿಕಲ್ ಸಿಬ್ಬಂದಿಯೊಬ್ಬರಿಂದಲೇ ಇದು ಸಾಧ್ಯವಿಲ್ಲ. ವೈದ್ಯಕೀಯ ಶಿಕ್ಷಣವನ್ನೇ ನಾವು ಒಂದು ರೀತಿಯ ಪ್ಯಾಕೇಜ್ ರೂಪದಲ್ಲಿ ಸಿದ್ಧಪಡಿಸಬೇಕು.. ಇದಕ್ಕೆ ‘ಮಾನವ ಸಂಪನ್ಮೂಲ ಸಂಯೋಜನಾ ಯೋಜನೆ’ ಎಂದು ಕರೆಯುತ್ತಾರೆ. ಈಗಿನ ನಮ್ಮ ವೈದ್ಯಕೀಯ ಶಿಕ್ಷಣ ಪದ್ಧತಿಯಲ್ಲಿ ಮಾನವ ಸಂಪನ್ಮೂಲ ಸಂಯೋಜನೆಯ ಕೊರತೆಯಿದೆ.

ವ್ಯಕ್ತಿಯೋರ್ವ ಮಾನಸಿಕವಾಗಿ ಆರೋಗ್ಯವಾಗಿಲ್ಲ ಎಂದಾದಲ್ಲಿ, ಅವನು ಎಲ್ಲಿಯೂ ಒಂದು ಸರಿಯಾದ ದುಡಿಮೆ ಮಾರ್ಗವನ್ನು ಕಂಡುಕೊಳ್ಳುವುದು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಅವನು ಜೀವನೋಪಾಯದ ಅವಲಂಬನೆಯಿಂದ ವಿಮುಖನಾಗಿರುತ್ತಾನೆ. ಹೀಗಾಗುವುದರಿಂದ, ಆ ವ್ಯಕ್ತಿಯ ಅನಿಶ್ಚಿತ ನಡುವಳಿಕೆಗಳಿಂದಾಗಿ ಯಾರೂ ಅವನಿಗೆ ಉದ್ಯೋಗ ನೀಡಲು ಧೈರ್ಯಮಾಡುವುದಿಲ್ಲ. ಆ ದೃಷ್ಟಿಯಿಂದ ಮಾನಸಿಕ ಆರೋಗ್ಯ ತುಂಬ ಮಹತ್ವದ ಸಂಗತಿ. ಇದು ಯಾವುದೇ ಕೆಲಸವನ್ನು ಮಾಡಲೂ ಬೇಕೇ ಬೇಕಾಗಿರುವ ಪ್ರಾಥಮಿಕ ಅವಶ್ಯಕತೆ. ಈ ಬಗ್ಗೆ ಅತಿಶಯೋಕ್ತಿಯಿಲ್ಲ.

AD
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org