ಸಾಧನೆಯ ಕತೆ: ಶಿವಮೊಗ್ಗ: ಅರಿವಿನ ಸಲಹೆಗಳು

ಮನೋ ವೈದ್ಯರು ಪ್ರತಿಪಾದಿಸುವಂತೆ ಮಾನಸಿಕ ಆರೋಗ್ಯದ ಅರಿವಿನಿಂದಾಗಿ ಶಿವಮೊಗ್ಗದ ಜನತೆಯ ಅಭಿಪ್ರಾಯವೇ ಬದಲಾಗಿದೆ

ಡಾ. ಶ್ರೀಧರ್‍ರವರು 1978 ರಲ್ಲಿ ಮನೋವಿಜ್ಞಾನದಲ್ಲಿ ‘ನಿಮ್ಯಾನ್ಸ್’ ಬೆಂಗಳೂರಿನಲ್ಲಿ ಎಂ ಡಿ ಪೂರ್ಣಗೊಳಿಸಿ ತಮ್ಮ ಸ್ವಂತ ಊರಾದ ಶಿವಮೊಗ್ಗಕ್ಕೆ ಹಿಂದಿರುಗಿದರು. ಅವರು ಅಲ್ಲಿ ಒಂದು ನರ್ಸಿಂಗ್ ಹೋಮ್‍ನ್ನು ತೆರೆದರು. ಆಗ ಶಿವಮೊಗ್ಗ ಜನತೆಯ ಮಾನಸಿಕ ಆರೋಗ್ಯ ಸಮಸ್ಯೆಯ ತಪ್ಪು ಕಲ್ಪನೆಗಳ ಬಗ್ಗೆ ಮೊದಲ ಅನುಭವ ಅವರಿಗಾಯಿತು.

 ವೈದ್ಯರಾದ ಡಾ. ಶ್ರೀಧರ್‍ರವರಿಗೆ ತಮ್ಮ ವೃತ್ತಿಯನ್ನು ಯಶಸ್ವಿಯಾಗಿ ಮುಂದುವರೆಸುವ ಹಂಬಲವಿತ್ತು. ಆದರೆ ಹೊಸದಾಗಿ ತೆರೆದ ಶ್ರೀಧರ್ ನರ್ಸಿಂಗ್ ಹೋಂಗೆ ಯಾವುದೇ ರೋಗಿಗಳು ಬರುತ್ತಿರಲಿಲ್ಲ. ಹಾಗೆಯೇ ತಮ್ಮ ಇತರ ವೈದ್ಯ ಮಿತ್ರರಿಗೂ ಮಾನಸಿಕ ಆರೋಗ್ಯದ ಬಗ್ಗೆ  ತಮ್ಮದೇ ಆದ ಕಲ್ಪನೆಗಳಿರುವುದು ಎಂದು ತಿಳಿಯಿತು.

“ಒಂದು ರಾತ್ರಿ 11 ಗಂಟೆಗೆ ನನ್ನ ಆತ್ಮೀಯ ವೈದ್ಯ ಗೆಳೆಯರಲ್ಲೊಬ್ಬರು ನಮ್ಮ ಮನೆಗೆ ಬಂದರು. ನಾನು ಅವರಿಗೆ ಇಷ್ಟು ತಡವಾದ ಭೇಟಿ ಏಕೆಂದು" ಸಾಮಾನ್ಯವಾಗಿಯೇ ಕೇಳಿದೆನು. "ನಾನೇನಾದರೂ ಬೆಳಗಿನ ಸಮಯದಲ್ಲಿ ನಿಮ್ಮನ್ನು ಭೇಟಿ ಮಾಡಿದರೆ, ನನ್ನ ಮಾನಸಿಕ ತೊಂದರೆಗಳ ಬಗ್ಗೆ ವಿಚಾರಿಸಲು ಬಂದಿದ್ದೇನೆ ಎಂದು ಜನರು ತಪ್ಪು ತಿಳಿಯುತ್ತಾರೆ” ಎಂದು ಅವರು ಹೇಳಿದರು.

ಆರಂಭದ ದಿನಗಳಲ್ಲಿ ಶಿವಮೊಗ್ಗ ಜನತೆಗೆ ಮಾನಸಿಕ ಆರೋಗ್ಯದ ಬಗ್ಗೆ ಎಷ್ಟರಮಟ್ಟಿಗೆ ಅರಿವಿದೆ ಎನ್ನುವುದರ ಬಗ್ಗೆ ಡಾ.ಶ್ರೀಧರ್ ಹೀಗೆಂದು ಹೇಳುತ್ತಾರೆ. ಆ ಸಮಯದಲ್ಲಿ ಶಿವಮೊಗ್ಗ ನಗರದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಎಷ್ಟು ಕನಿಷ್ಟ ಮಟ್ಟದ ಅರಿವಿತ್ತು ಎಂದರೆ ಅವರ ವೈದ್ಯ ಮಿತ್ರರೇ ಹೇಳುವಂತೆ 2 ಲಕ್ಷದ ಜನರಲ್ಲಿ 3 ರಿಂದ 4% ಮನೋರೋಗಿಗಳು ಇದ್ದಾರೆ ಎಂದು ಅಂದಾಜಿಸಲಾಗಿತ್ತು. “ನನ್ನನ್ನು ಅವರು, ಕೇವಲ ಮನೋರೋಗಿಗಳ ಚಿಕಿತ್ಸೆಯಿಂದ ನರ್ಸಿಂಗ್ ಹೋಂ ನಡೆಸಲು ಸಾಧ್ಯವಿಲ್ಲ, ಅದರ ಜೊತೆಯಲ್ಲಿ ಸಾಮಾನ್ಯ ವೈದ್ಯ ಚಿಕಿತ್ಸೆಯನ್ನು ನೀಡುವಂತೆ ಸಲಹೆ ಕೊಟ್ಟರು”. ಎಂದು ಡಾ. ಶ್ರೀಧರ್ ನೆನಪಿಸಿಕೊಳ್ಳುತ್ತಾರೆ. 

ಡಾ. ಶ್ರೀಧರ್ ರವರಿಗೆ ಅಜ್ಞಾನದಿಂದಲೇ ತಪ್ಪು ಕಲ್ಪನೆಗಳು ಉಂಟಾಗುತ್ತಿವೆ ಎಂದು ತಿಳಿಯಲು ಹೆಚ್ಚು ಸಮಯ ಬೇಕಾಗಿರಲಿಲ್ಲ. "ಜನರಿಗೆ ಮಾನಸಿಕ ಆರೋಗ್ಯದ ಬಗ್ಗೆ ಅರಿವನ್ನು ಮೂಡಿಸುವುದೇ ನನ್ನ ಮೊದಲ ಹೆಜ್ಜೆ ಎಂದು ತೀರ್ಮಾನಿಸಿದೆ’’ ಎಂದು ಹೇಳುತ್ತಾರೆ.

ಒಂದು ಭಾನುವಾರ ಕೆಲವು ಸಾಮಾನ್ಯ ಮಾನಸಿಕ ಅಸ್ವಸ್ಥತೆ ಮತ್ತು ಅದರ ಲಕ್ಷಣಗಳನ್ನು ಕರಪತ್ರದಲ್ಲಿ ಮುದ್ರಿಸಿ ಸೈಕಲ್ಲಿನಲ್ಲಿ ಒಂದು ಹಳ್ಳಿಗೆ ಹೋಗಿ ಹಂಚಿದರು. ಅದರ ನಂತರದ ಭಾನುವಾರದಂದು ಉಚಿತ ಮಾನಸಿಕ ಆರೋಗ್ಯದ ಶಿಬಿರವನ್ನು ನಡೆಸಿದರು. "ಈ ಶಿಬಿರದ ನಂತರ ಮಾನಸಿಕ ಅಸ್ವಸ್ಥತೆ, ಇದರ  ಕಾರಣಗಳು, ಲಕ್ಷಣಗಳು ಮತ್ತು ಯಾವ ಚಿಕಿತ್ಸೆ ಕೊಡಬೇಕು ಎನ್ನುವ ಅಂಶಗಳ ಬಗ್ಗೆ ಉಪನ್ಯಾಸ ಕೊಡಬೇಕು ಎಂದು ತೀರ್ಮಾನಿಸಿದೆ ಹಾಗೂ ಚಿಕಿತ್ಸೆ ಕೊಡದಿದ್ದರೆ ಮಾನಸಿಕ ಅಸ್ವಸ್ಥೆಯು  ವ್ಯಕ್ತಿಗೆ ಮತ್ತು ಅವರ ಕುಟುಂಬಕ್ಕೆ ಯಾವ ರೀತಿ ಪರಿಣಾಮವಾಗುತ್ತದೆ ಎಂದು ವಿವರಿಸಿದೆ. ಈ ಕಾರ್ಯಕ್ರಮವನ್ನು ಸ್ವಲ್ಪ ಸಮಯದವರೆಗೂ ಮುಂದುವರೆಸಿದೆ. ಇದರಿಂದ ಜನರು ಕ್ರಮೇಣ ಚಿಕಿತ್ಸೆಗೆ ಬರತೊಡಗಿದರು ಹಾಗೂ ತಿಂಗಳ ಒಳಗೆ ಚಿಕಿತ್ಸೆಗೆ ಬರುವವರ ಸಂಖ್ಯೆ ಹೆಚ್ಚಾಯಿತು” ಹೀಗೆಂದು ಡಾ.ಶ್ರೀಧರ್ ಹೇಳುತ್ತಾರೆ.

ಮಾನಸಿಕ ಆರೋಗ್ಯದ ಅರಿವಿನ ಶಿಬಿರಗಳನ್ನು ಮುಂದುವರೆಸಿದರು. ಜಿಲ್ಲೆಯಾದ್ಯಂತ ಉಚಿತ ಶಿಬಿರಗಳನ್ನು ಪ್ರತೀ ತಿಂಗಳು ನಡೆಸಿದರು. “ಶ್ರೀಧರ್ ನರ್ಸಿಂಗ್ ಹೋಂ” ಇಂದು “ಶ್ರೀಧರ್ ನ್ಯೂರೋ ಸೈಕಿಯಾಟ್ರಿಕ್ ಸೆಂಟರ್” ಎಂದು ಮರು ನಾಮಕರಣವಾಗಿದೆ. ಈ ಕೇಂದ್ರದಲ್ಲಿ ಒಂದು ದಿನ ಸರಾಸರಿ 100 ಹೊರರೋಗಿಗಳು ಬರುತ್ತಾರೆ. ಇಂದಿಗೂ ಹಳ್ಳಿಗಳಲ್ಲಿ ಮಾನಸಿಕ ಆರೋಗ್ಯದ ಶಿಬಿರಗಳನ್ನು ನಡೆಸುತ್ತಾರೆ. 

ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳನ್ನು ಇಂದಿಗೂ ಈ ಕೇಂದ್ರವು ಎದುರಿಸುತ್ತಿದೆ. ಡಾ.ಶ್ರೀಧರ್ ಅವರ ತಂಡದ ಪ್ರಯತ್ನದ ನಡುವೆಯೂ ಮಾನಸಿಕ ರೋಗಿಗಳ ಮನೆಯವರು ವೈದ್ಯರನ್ನು ಕಾಣುವ ಮೊದಲು ಧಾರ್ಮಿಕ ಕೇಂದ್ರಗಳಿಗೆ ಭೇಟಿ ಕೊಡುತ್ತಾರೆ. 

ಮಾನಸಿಕ ರೋಗಿಗಳ ವೈವಿದ್ಯ ಕತೆಗಳಿವೆ. “26 ವರ್ಷದ ಹೆಂಗಸು ಸ್ಕಿಜ಼ೋಫ್ರೇನಿಯ (ಛಿದ್ರ ಮನಸ್ಕತೆ) ಖಾಯಿಲೆಯಿಂದ ಬಳಲುತ್ತಿದ್ದರು. ಇವರ ತಾಯಿ ತನ್ನ ಮಗಳ ಮದುವೆಯ ಅರಿಷಿಣದ ಶಾಸ್ತ್ರದ ದಿನ ಅವಳನ್ನು ಒಂದು ಆತ್ಮ ಕರೆದುಕೊಂಡು ಹೋಯಿತು ಎಂದು ಹೇಳಿದಳು. ಅವರು ಇಲ್ಲಿ ಬರುವ ಮೊದಲು ಎಲ್ಲಾ ರೀತಿಯ ಮೂಢನಂಬಿಕೆಗಳ ಆಚರಣೆಗಳನ್ನು ಪ್ರಯತ್ನಿಸಿದ್ದರು” ಎಂದು ಡಾ.ಶ್ರೀಧರ್ ಹೇಳುತ್ತಾರೆ.  

ರೋಗಿಗಳು ಮತ್ತು ಪಾಲಕರು ನಂಬಿರುವ ಕಳಂಕ ಅಜ್ಞಾನಗಳ ನಡುವಿನ ಹೋರಾಟದ ಜೊತೆಗೆ ವೈದ್ಯ ತಂಡವು ಮಾಧ್ಯಮಗಳ (media) ತಪ್ಪು ಮಾಹಿತಿಯ ಬಗ್ಗೆಯು ಹೋರಾಡಬೇಕು. “ವೃತ್ತಿ ನಿರತ ಮನೋಚಿಂತಕರ ಒಂದು ಲೇಖನಕ್ಕೆ ವಿರುದ್ದವಾಗಿ ಇದೇ ವಿಷಯಕ್ಕೆ ಸಂಬಂದಿಸಿದಂತೆ ಮನೋಚಿಕಿತ್ಸೆ ತಿಳಿಯದವರು ಬರೆದ ಹತ್ತು ಲೇಖನಗಳನ್ನು ಪ್ರಕಟಿಸುತ್ತಾರೆ. ಇವರು ತಪ್ಪು ಮಾಹಿತಿಯನ್ನು ಪ್ರಸಾರ ಮಾಡುತ್ತಾರೆ” ಎಂದು ಡಾ.ಶ್ರೀಧರ್ ಹೇಳುತ್ತಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ಹತ್ತು ಮನೋವೈದ್ಯರಿದ್ದರೂ (ಡಾ.ಶ್ರೀಧರ್ ಮತ್ತು ಇದೇ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಅವರ ಪುತ್ರಿಯಾದ ಡಾ.ಕೆ.ಎಸ್. ಪವಿತ್ರ ಹಾಗೂ ಡಾ.ಶುಭ್ರತ) ಇವರ ಪ್ರಕಾರ ಶಿವಮೊಗ್ಗದ ಸುತ್ತಲಿನ ಜಿಲ್ಲೆಗಳಲ್ಲಿ ಒಂದೊಂದು ಜಿಲ್ಲೆಗೂ ಕೊನೆಯ ಪಕ್ಷ ಒಬ್ಬ ಮನೋವೈದ್ಯರ ಅವಶ್ಯಕತೆ ಇದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಾನಸಿಕ ಆರೋಗ್ಯದ ನರ್ಸ್ಗಳು, ಕ್ಲಿನಿಕಲ್ ಮನೋವೈದ್ಯರು ಮತ್ತು ಸಾಮಾಜಿಕ ಮನೋವೈದ್ಯ ಕಾರ್ಯಕರ್ತರ ಕೊರತೆಯಿದೆ. ಮನೋಚಿಕಿತ್ಸಾ ತಂಡದ ಕಠಿಣ ಪರಿಶ್ರಮವನ್ನು ಜೊತೆಯ ಸಾಮಾನ್ಯ ವೈದ್ಯರು ಸರಿಯಾಗಿ ಗುರುತಿಸುತ್ತಿಲ್ಲ. ಮತ್ತು ರೋಗಿಯನ್ನು ಮನೋಚಿಕಿತ್ಸಕರಲ್ಲಿ ಕಳಿಸಲು ತಡ ಮಾಡುತ್ತಾರೆ. ಈ ಕಾರಣದಿಂದ ಜನರಲ್ಲಿ ಮನೋವೈದ್ಯರು ವೈದ್ಯರಲ್ಲ, ಮನೋರೋಗದ ಔಷಧಗಳು ವ್ಯಸನದ  ಔಷಧಗಳು ಎನ್ನುವ ಭಾವನೆಯಿದೆ.

ಇಂದು ಶ್ರೀಧರ್ ನ್ಯೂರೋಸೈಕಿಯಾಟ್ರಿಕ್ ಸೆಂಟರ್ ಅನೇಕ ಮಾನಸಿಕ ಆರೊಗ್ಯದ ಸಮಸ್ಯೆಗಳಿಂದ ಬಳಲುವವರಿಗೆ ಚಿಕಿತ್ಸೆಯನ್ನು ನೀಡುತ್ತಿದೆ. ಜೀರಿಯಾಟ್ರಿಕ್‍ನಂತ ವಿಶೇಷ ಕ್ಲೀನಿಕ್‍ಗಳನ್ನು ನಡೆಸುತ್ತಿದೆ. ಮಕ್ಕಳ ಮತ್ತು ಇವರಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಒಳ ರೋಗಿಗಳ ಸೇವೆಯನ್ನು ಮಾಡುತ್ತಿದೆ.

ಕೇಂದ್ರವು `ಕ್ಷೇಮ’ದಿಂದ (ಸಮೂಹ ಶಿಕ್ಷಣ) ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಉಪನ್ಯಾಸಗಳನ್ನು ಪುಸ್ತಕ ಮತ್ತು ಕರ ಪತ್ರಗಳನ್ನು ವಿಶೇಷ ಕೋಶಗಳ ಮೂಲಕ ಪ್ರಕಟಿಸುತಿದ್ದಾರೆ. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ರಸಪ್ರಶ್ನೆಗಳು ಮತ್ತು ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದಾರೆ. `ಕ್ಷೇಮ` ವು ಕೆಲವು ಸರ್ಕಾರೇತರ ಸಂಸ್ಥೆಗಳು (Non Government Organization), ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (Indian Council of Medical Research) ಸಹಯೋಗದೊಂದಿಗೆ ಮತ್ತು ಸ್ವತಂತ್ರವಾಗಿಯೂ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ಶಾಲೆಗಳಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆಯ ಕಾರ್ಯಕ್ರಮಗಳನ್ನು ಮತ್ತು ಹಳ್ಳಿಗಳಲ್ಲಿ ಶಿಬಿರಗಳನ್ನು ನಡೆಸುತ್ತಿದ್ದಾರೆ. 

ಡಾ. ಶ್ರೀಧರ್ ಮತ್ತು ತಂಡದವರ ಯಶಸ್ಸಿನಿಂದ ತಿಳಿಯುವುದೇನೆಂದರೆ ಸಮಯಕ್ಕೆ ಸರಿಯಾದ ಮಾಹಿತಿಯನ್ನು ಕೊಡುವುದರಿಂದ ಜನರು ಮಾನಸಿಕ ಅಸ್ವಸ್ಥತೆಗಳನ್ನು ಅರ್ಥಮಾಡಿಕೊಳ್ಳುವರು ಮತ್ತು ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಎದುರಿಸಬಲ್ಲರು. ಇದು ಒಂದು ಆರೋಗ್ಯಕರ ಸೂಚನೆ ಯಾಗಿದೆ.

ಡಾ. ಕೆ. ಎಸ್. ಪವಿತ್ರರವರು ಡಾ. ಕೆ.ಎಸ್. ಶ್ರೀಧರ್ ಮತ್ತು ಕೆ.ಎಸ್. ಶುಭ್ರತರವರ ನೆರವಿನಿಂದ ಈ ಲೇಖನವನ್ನು ಬರೆದಿದ್ದಾರೆ. ಇವರು ಮೂವರು ಶ್ರೀಧರ್ ನ್ಯೂರೋಸೈಕಿಯಾಟ್ರಿಕ್ ಸೆಂಟರ್ ಅನ್ನು ಜೊತೆಯಾಗಿ ನಡೆಸುತ್ತಿದ್ದಾರೆ. ಈ ಹಾಸ್ಪಿಟಲ್ ಶಿವಮೊಗ್ಗ ಜನತೆಯ ಮಾನಸಿಕ ಆರೋಗ್ಯ ಮತ್ತು ಮಾನಸಿಕ ಸುಸ್ಥಿತಿ ಬಗ್ಗೆಯ ದೃಷ್ಟಿಕೋನವನ್ನೇ ಬದಲಾಯಿಸಿದೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org