ಮನೋರೋಗ ಚಿಕಿತ್ಸಾ ವಿಜ್ಞಾನ

ಮನೋರೋಗ ಚಿಕಿತ್ಸೆ, ಸಾಕ್ಷ್ಯ ಆಧಾರಿತ ವೈದ್ಯಕೀಯ ವಿಜ್ಞಾನ. ಇದು ಕೂಡ ಹೃದಯ ಅಥವಾ ಗ್ರಂಥಿಶಾಸ್ತ್ರದಂತೆ ವೈದ್ಯಶಾಸ್ತ್ರದ ಒಂದು ಶಾಖೆಯಾಗಿದೆ...

ಆಶಾ ಮೊದಲ ಪಿಯುಸಿ ವಿದ್ಯಾರ್ಥಿನಿ. ಕೆಲವು ತಿಂಗಳುಗಳಿಂದ ಮೂರ್ಛೆ ತಪ್ಪುತ್ತಿದ್ದಳು ಮತ್ತು ಅವಳಲ್ಲಿ ಅಸ್ವಾಭಾವಿಕ ವರ್ತನೆಗಳು ಕಂಡುಬರುತ್ತಿತ್ತು. ಇದರಿಂದಾಗಿ ಆತಂಕಗೊಂಡ ಆಕೆಯ ಕುಟುಂಬದವರು, ಅವಳನ್ನು ಹಲವು ದೇವಸ್ಥಾನಗಳಿಗೆ ಹಾಗೂ ಮಂತ್ರವಾದಿಗಳ (faith healers) ಹತ್ತಿರ ಕರೆದುಕೊಂಡು ಹೋದರು. ಅಲ್ಲಿ ಆಕೆಯ ಮೇಲೆ ದೆವ್ವ  ಹಿಡಿದಿರುವುದಾಗಿ (possessed) ಹೇಳಿದರು. ಹೀಗೆ ಬಹಳಷ್ಟು ಹಣ ವ್ಯರ್ಥ ಮಾಡಿದ ನಂತರ ಅವರು ಆಶಾಳನ್ನು  ತಮ್ಮ ವೈದ್ಯರ (general physician) ಹತ್ತಿರ ಕರೆದುಕೊಂಡು ಹೋದರು. ಅವರು ಮನೋವೈದ್ಯರಿಗೆ ಶಿಫಾರಸ್ಸು ಮಾಡಿದರು. ಆದರೆ ಅವಳ ಪಾಲಕರು ಮನೋವೈದ್ಯರು ಅವಳಿಗೆ ಶಾಕ್ ಟ್ರೀಟ್ಮೆಂಟ್ ಅಥವಾ ನಿದ್ರೆ ಮಾತ್ರಗಳನ್ನು ನೀಡಬಹುದೆ?  ಅವಳನ್ನು ಹುಚ್ಚಿ ಎನ್ನಬಹುದೆ? ಎಂಬ ಹಲವು ಪ್ರಶ್ನೆಗಳು ಅವರನ್ನು ಕಾಡುತ್ತಿತ್ತು.

ಅವರು ನನ್ನಲ್ಲಿ ಬಂದಾಗ, ಆಶಾ ಮಾನಸಿಕ ತೊಂದರೆ ಅನುಭವಿಸುತ್ತಿರುವಂತೆ ನನಗೆ ಕಂಡುಬಂದಿತು. ಒಂದಾದ ಬಳಿಕ ಇನ್ನೊಂದು ಮಂತ್ರವಾದಿ ಹತ್ತಿರ ಕರೆದುಕೊಂಡು ಹೋಗಿದ್ದರಿಂದ ಆಕೆ ಬೇಸತ್ತು ಹೋಗಿದ್ದಳು. ನಿಧಾನವಾಗಿ ಆಕೆಯನ್ನು ಪರೀಕ್ಷಿಸಿದಾಗ, ಅವಳು ಹನ್ನೊಂದನೆ ತರಗತಿಯ ಅಪಾರವಾದ ಶೈಕ್ಷಣಿಕ ಒತ್ತಡ ಎದುರಿಸುತ್ತಿದ್ದಾಳೆ ಮತ್ತು ಅವಳ ಕುಟುಂಬದ ನಿರೀಕ್ಷೆಯ ಭಾರ ಅವಳನ್ನು ಕುಗ್ಗಿಸಿದೆ ಎಂದು ತಿಳಿಯಿತು. ಅವಳು ಪ್ರತೀ  ಪರೀಕ್ಷೆಯ ಮೊದಲು ಆತಂಕಗೊಳ್ಳುತ್ತಿದ್ದಳು ಮತ್ತು ಅಂತಿಮ ಪರೀಕ್ಷೆಯ ವೇಳೆಗೆ ಅವಳ ಆತಂಕ ಮಿತಿಮೀರುತ್ತಿತ್ತು. ಇದು ಅವಳನ್ನು ಪದೆಪದೆ ಮೂರ್ಛೆಹೋಗುವಂತೆ ಹಾಗೂ ಅಸಹಜವಾಗಿ ವರ್ತಿಸುವಂತೆ ಮಾಡಿತ್ತು. ಪರಿಣಾಮವಾಗಿ ಅವಳು ಸರಿಯಾಗಿ ಊಟ ಅಥವಾ ನಿದ್ರೆ ಮಾಡಲಾರದೆ ಹೋದಳು.

ಮನೋ ವೈದ್ಯರು ಆಶಾಳನ್ನು ಪರೀಕ್ಷಿಸಿ ಆತಂಕ ತೊಂದರೆಗಳನ್ನು ನಿಭಾಯಿಸುವ ಕೌಶಲ್ಯವನ್ನು ಹೇಳಿಕೊಟ್ಟರು. ಮನಸ್ಸು ಮತ್ತು ಶರೀರದ ನಡುವಿನ ಸಂಬಂಧದ ಬಗ್ಗೆ ಚರ್ಚಿಸಿದರು. ಹಾಗೂ ಕುಟುಂಬದವರಿಗೆ ಇವಳ ಬಗ್ಗೆ ಇರುವ ಕಾಳಜಿ ಮತ್ತು ಅತಿಯಾದ ಆಕಾಂಕ್ಷೆಯಿಂದ ಅವಳಿಗೆ ಒತ್ತಡ ಉಂಟಾಗಿದೆ ಎಂದು ವೈದ್ಯರು ವಿವರಿಸಿದಾಗ ಕುಟುಂಬದವರು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡರು. ಕ್ರಮೇಣ ಉತ್ತಮ ಶುಶ್ರೂಷೆಯಿಂದ ಆಶಾ ಚೇತರಿಸಿಕೊಂಡಳು.

ಒಂದು ವೈದ್ಯಕೀಯ ಶಾಖೆಯಾಗಿ ಸೈಕಿಯಾಟ್ರಿ ಕಳೆದ ನಾಲ್ಕು ದಶಕಗಳಲ್ಲಿ ಗಣನೀಯವಾಗಿ ವಿಕಾಸಗೊಂಡಿದೆ. 1930 ಮತ್ತು 40ರ ದಶಕದಲ್ಲಿ ಹೆಚ್ಚಿನ ಚಿಕಿತ್ಸೆಗಳಲ್ಲಿ ಮನಃಶಾಸ್ತ್ರ ಮತ್ತು ಮನೋವಿಶ್ಲೇಷಣೆಯನ್ನು ಬಳಸಿಕೊಳ್ಳಲಾಯಿತು. (ವ್ಯಕ್ತಿಯೊಂದಿಗೆ ಅನೇಕ ಗಂಟೆಗಳ ಕಾಲ ಚರ್ಚಿಸಿಸುವುದು, ಇದು ಕೆಲವು ವರ್ಷಗಳವರೆಗೆ ಕೂಡ ನಡೆದು ನಂತರ ಬಾಲ್ಯದ ಹಾಗೂ ಕೆಲವು ಆಘಾತಗಳಿಂದ ಉಂಟಾದ ಸಮಸ್ಯೆಗಳನ್ನು ವಿಶ್ಲೇಷಿಸುವುದು ಚಿಕಿತ್ಸೆಯ  ವಿಧಾನವಾಗಿತ್ತು ). ಮೊದಮೊದಲು ಚಿಕಿತ್ಸೆಯನ್ನು ಉತ್ಸಾಹದಿಂದ ಪ್ರಾರಂಭಿಸಿದರೂ, ನಿಖರತೆಯಿಲ್ಲದ ಚೇತರಿಕೆಯ ವಿಧಾನ  ಸಂದೇಹವನ್ನುಂಟುಮಾಡುತ್ತಿತ್ತು.

1950ರಲ್ಲಿ ಮಾನಸಿಕ ಸಮಸ್ಯೆಗಳಿಗೆ ಮೊದಲ ಬಾರಿಗೆ ‍ಔಷಧ (drugs) ಕಂಡುಹಿಡಿಯಲಾಯಿತು. ಇದರಿಂದ ಮನೋರೋಗ ನಿರ್ವಹಣೆಯಲ್ಲಿ ಬಹಳಷ್ಟು ಬದಲಾವಣೆಗಳಾದವು. ವ್ಯಕ್ತಿಯು ಮೊದಲು ಆಸ್ಪತ್ರೆಗಳಲ್ಲಿ ಉಳಿದು ಚಿಕಿತ್ಸೆ ಪಡೆಯಬೇಕಿತ್ತು. ಆದರೆ ಔಷಧಗಳ ಸಂಶೋಧನೆಯ ನಂತರ ವ್ಯಕ್ತಿಯು ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆದು, ಅನಾರೋಗ್ಯದಿಂದ ಚೇತರಿಸಿಕೊಂಡು ಎಲ್ಲರಂತೆ ಸಾಮಾನ್ಯ ಜೀವನವನ್ನು ನಡೆಸಲು ಸಾಧ್ಯವಾಯಿತು.

ಆ ನಂತರ, ಮನೋರೋಗಗಳ ಕುರಿತು ಮತ್ತು ಅವುಗಳ ಚಿಕಿತ್ಸೆಯ ಬಗ್ಗೆ ದೊಡ್ಡಪ್ರಮಾಣದ ಬೆಳವಣಿಗೆಗಳಾದವು. ಮಿದುಳಿನ ಕಾರ್ಯಚಟುವಟಿಕೆಗಳ ಕುರಿತಾಗಿ ನಡೆಸಿದ ಹೊಸ  ಅಧ್ಯಯನಗಳು ಮನೋರೋಗವನ್ನು ಸರಿಯಾಗಿ ತಿಳಿದುಕೊಳ್ಳಲು ಕಾರಣವಾದವು. ವಿಸ್ತಾರವಾದ ಸಂಶೋಧನೆಗಳು ಹೊಸ ಹೊಸ ಔಷಧ ಹಾಗೂ ರೋಗ ಚಿಕಿತ್ಸಾ ವಿಧಾನಗಳಿಗೆ ಸಹಕಾರ ನೀಡಿದವು. ಅಲ್ಲದೇ ಆಯಾ ರೋಗಕ್ಕೆ ತಕ್ಕಂತೆ ನಿರ್ಧಿಷ್ಟವಾದ ಔಷಧ ನೀಡಲು ಸಾಧ್ಯವಾಯಿತು. ಪ್ರಸ್ತುತ ಮಾನಸಿಕ ರೋಗವನ್ನು ಪ್ರಮುಖವಾಗಿ, ಸಾಂಕ್ರಾಮಿಕವಲ್ಲದ ರೋಗಗಳು (non-communication disease), ಜೊತೆಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಎಂಬ ನಾಲ್ಕು ವಿಭಾಗಗಳಲ್ಲಿ ವರ್ಗೀಕರಿಸಲಾಗಿದೆ.

ಯಾರಾದರೂ ಮನೋವೈದ್ಯರನ್ನು ನೋಡಿ ಏನನ್ನು ನಿರೀಕ್ಷಿಸಬಹುದು?

ಮನಃಶಾಸ್ತ್ರಜ್ಞರು ಕೂಡ ವೈದ್ಯರು. ಸೂಕ್ತವಾದ ಔಷಧ ಹಾಗೂ ಮನಃಶಾಸ್ತ್ರ ಚಿಕಿತ್ಸೆಯನ್ನು ಬಳಸಿಕೊಂಡು ರೋಗಪರೀಕ್ಷೆ ಮತ್ತು ಮನೋರೋಗಕ್ಕೆ ಚಿಕಿತ್ಸೆ ನೀಡುವಲ್ಲಿ ಅವರು ಪರಿಣತಿ ಪಡೆದಿರುತ್ತಾರೆ. ನೀವು ಮೊದಲು ಅವರನ್ನು ಭೇಟಿ ಮಾಡಿದಾಗ ಅವರು ಸಾಮಾನ್ಯವಾಗಿ ನಿಮಗಿರುವ ತೊಂದರೆಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾರೆ ಮತ್ತು ನಿಮ್ಮ ಬಾಲ್ಯ, ಕುಟುಂಬ ಹಾಗೂ ಈ ಹಿಂದಿನ ವೈದ್ಯಕೀಯ ಸಮಸ್ಯೆಗಳ ಬಗ್ಗೆ ಕೇಳುತ್ತಾರೆ.

ಆ ನಂತರ ಅವರು ನಿಮ್ಮ ದೈಹಿಕ ತಪಾಸಣೆ ನಡೆಸಿ, ಯಾವುದಾದರೂ ದೈಹಿಕವಾದ ವೈದ್ಯಕೀಯ ಸಮಸ್ಯೆ ಮಾನಸಿಕ ಸಮಸ್ಯೆಯಾಗಿ ರೂಪುಗೊಂಡಿರುವುದೆ ಎಂದು ಪರೀಕ್ಷಿಸುತ್ತಾರೆ. ನಂತರ ಅವರು ನಿಮ್ಮ ಮಾನಸಿಕ ಸ್ಥಿತಿಯನ್ನು ಪರೀಕ್ಷಿಸುತ್ತಾರೆ. ಅಲ್ಲಿ ಅವರು ನಿಮ್ಮ ಮನಸ್ಥಿತಿ, ಚಿಂತನೆ, ಬುದ್ಧಿವಂತಿಕೆ, ಬೌದ್ಧಿಕ ಸಾಮರ್ಥ್ಯ, ಯಾವುದಾದರೂ ಅನುಭವಗಳನ್ನು ನೀವು ಹೇಗೆ ಅರ್ಥಮಾಡಿಕೊಂಡಿರುವಿರಿ ಮತ್ತು ನಿಮ್ಮ ಸ್ವಂತ ತಿಳುವಳಿಕೆಗಳ ಕುರಿತು ಮೌಲ್ಯಮಾಪನ (assessment) ನಡೆಸುತ್ತಾರೆ.

ಮನೋವೈದ್ಯರು ವ್ಯಕ್ತಿಯನ್ನು ಸಂಪೂರ್ಣವಾಗಿ ಪರೀಕ್ಷಿಸುತ್ತಾರೆ. ಅಲ್ಲದೆ ವ್ಯಕ್ತಿಯೊಂದಿಗೆ ಪರಸ್ಪರ ಚರ್ಚಿಸುತ್ತಾರೆ ಮತ್ತು ಅಸ್ವಸ್ಥತೆಗೆ ಕಾರಣವಾದ ವಾತಾವರಣದ ಬಗ್ಗೆ ವಿಚಾರಿಸುತ್ತಾರೆ. ಚಿಕಿತ್ಸೆಯು ಸಾಮಾನ್ಯವಾಗಿ ಔಷಧ ಮತ್ತು ಮನಃಶಾಸ್ತ್ರೀಯ ಚಿಕಿತ್ಸೆಗಳನ್ನು ಒಳಗೊಂಡಿರುತ್ತದೆ. ಚಿಕಿತ್ಸೆಯಲ್ಲಿ ಕುಟುಂಬದವರ ಪಾತ್ರ ಪ್ರಾಮುಖ್ಯವಾಗಿರುತ್ತದೆ.  ಚಿಕಿತ್ಸೆಯು ಸಾಮಾನ್ಯವಾಗಿ ಮಾನಸಿಕ ಆರೋಗ್ಯ ವೃತ್ತಿಪರರ ಗುಂಪನ್ನು ಒಳಗೊಂಡಿರುತ್ತದೆ. ಅದರಲ್ಲಿ ಮನೋವೈದ್ಯರು, ಸಾಮಾಜಿಕ ಕಾರ್ಯಕರ್ತರು ಮತ್ತು ನರ್ಸ್ ಇರುತ್ತಾರೆ. 

ಗಮನವಿಡಬೇಕಾದ ಮುಖ್ಯ ಅಂಶವೆಂದರೆ, ಎಲ್ಲಾ ರೀತಿಯ ಮಾನಸಿಕ ಆರೋಗ್ಯ ಸಮಸ್ಯೆಗಳಿಗೂ ಒಂದೇ ತೆರನಾದ, ಒಂದೇ ಮಟ್ಟದ ಔಷಧೋಪಚಾರ ಮತ್ತು ಚಿಕಿತ್ಸೆ ಇರುವುದಿಲ್ಲ . ಸಣ್ಣ ಸಮಸ್ಯೆಗಳನ್ನು ಥೆರಪೀ ಮೂಲಕ ಗುಣಪಡಿಸಬಹುದು. ಕೆಲವು ಮಾನಸಿಕ ಅಸ್ವಸ್ಥತೆಗಳಿಗೆ ಔಷಧ ಹಾಗೂ ಚಿಕಿತ್ಸೆಯ ಅಗತ್ಯವಿರುತ್ತದೆ.

ಎಲ್ಲಾ ಸಮಸ್ಯೆಗಳಿಗೂ ಮನೋವೈದ್ಯರ ಸಲಹೆ ತೆಗೆದುಕೊಳ್ಳಬೇಕು ಎಂದೇನಿಲ್ಲ. ವಿಶೇಷವಾಗಿ ಕಡಿಮೆ ಪ್ರಮಾಣದ ಮಾನಸಿಕ ಸಮಸ್ಯೆಗಳಾದ ಸಣ್ಣ-ಪುಟ್ಟ ಆತಂಕ ಅಥವಾ ಸಂಕ್ಷಿಪ್ತ ಮತ್ತು ಗಂಭೀರವಲ್ಲದ ಖಿನ್ನತೆಗೆ ಆಪ್ತಸಮಾಲೋಚನೆ (counseling), ಸಾಮಾನ್ಯ ವೈದ್ಯರು, ಅಥವಾ ಮಾನಸಿಕ ಆರೋಗ್ಯ ವೃತ್ತಿಪರರ ಸಲಹೆ ಪಡೆಯಬಹುದು. ಒಂದುವೇಳೆ ಅಗತ್ಯವಿದೆ ಅಂತಾದರೆ ಈ ವೃತ್ತಿಪರರು ಮನೋವೈದ್ಯರಿಗೆ ಶಿಫಾರಸ್ಸು ಮಾಡುತ್ತಾರೆ.

ಮನಃಶಾಸ್ತ್ರದ ಕುರಿತಾದ ಕಲ್ಪನೆಗಳು

ಮನಃಶಾಸ್ತ್ರ ಸುಸ್ಥಾಪಿತ ವೈದ್ಯಕೀಯ ಕ್ಷೇತ್ರವಾಗಿದ್ದರೂ, ಮಾನಸಿಕ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುವುದರಲ್ಲಿ ಅನೇಕ ಅಡೆ-ತಡೆಗಳು ಹಾಗೂ ತಪ್ಪು ಕಲ್ಪನೆಗಳು ಇವೆ. ವೈದ್ಯರು ಹೇಗೆ ಚಿಕಿತ್ಸೆ ಮಾಡುವರೋ, ಯಾವ ಔಷಧ ನೀಡುವರೋ ಅಥವಾ ಆಸ್ಪತ್ರೆಯಲ್ಲಿ ಸೇರಿಸುವರೋ ಎಂಬ ಆತಂಕ. ಇದರ ಜೊತೆಗೆ ಮನೋರೋಗದ ಬಗ್ಗೆ ಸಮಾಜದಲ್ಲಿರುವ ಮೂಢ ನಂಬಿಕೆಗಳು, ಕಳಂಕ, ಹಾಗು ಮನಶಾಸ್ತ್ರ ತಜ್ಞರನ್ನು ಭೇಟಿ ಮಾಡಿದರೆ ಜನರು ತಮ್ಮನ್ನು "ಹುಚ್ಚ" ಎಂದು ತಿಳಿಯಬಹುದು ಎಂಬ ಭಯ.

ಮಾನಸಿಕ ಅಸ್ವಸ್ಥತೆಯ ಲಕ್ಷಣಗಳು ನಿಗೂಢ ಹಾಗೂ ಅರ್ಥಮಾಡಿಕೊಳ್ಳುವುದು ಕಷ್ಟ. ಆದ ಕಾರಣ ಜನರು ಮಂತ್ರವಾದಿಗಳು, ದೇವಾಲಯಗಳು ಅಥವಾ ದರ್ಗಾಗಳ ಸಹಾಯ ಪಡೆಯಲು ಹೋಗುತ್ತಾರೆ.

ಕೆಲವರು ತಮಗೆ ಸಮಸ್ಯೆಯಿದೆ ಎಂದು ಒಪ್ಪಿಕೊಳ್ಳಲು ಭಯಪಡುತ್ತಾರೆ ಅಥವಾ ಇದು ದೌರ್ಬಲ್ಯದ ಸಂಕೇತವಾಗಿದ್ದು, ಇದಕ್ಕೆ ಚಿಕಿತ್ಸೆಯ ಅಗತ್ಯವಿಲ್ಲ ಎಂದು ಭಾವಿಸುತ್ತಾರೆ. ಏನೇ ಆಗಲಿ, ವ್ಯಕ್ತಿಯು ಈ ಎಲ್ಲಾ ಅಡೆತಡೆಗಳಿಂದ ಹೊರ ಬರಲು ಮಾನಸಿಕ ಆರೋಗ್ಯ ವೃತ್ತಿಪರರ ಸಲಹೆ ಆದಷ್ಟು ಬೇಗ ಪಡೆಯುವುದು ಅಗತ್ಯ.

ಅನೇಕ ಸಲ, ಆರ್ಥಿಕವಾಗಿ ಹಾಗೂ ಅವರ ಶ್ರಮ ಕುಗ್ಗಿದ ನಂತರ ಕುಟುಂಬದವರು ವ್ಯಕ್ತಿಯನ್ನು ತಡವಾಗಿ ಮನೋವೈದ್ಯರಲ್ಲಿ ಕರೆದುಕೊಂಡು ಹೋಗುತ್ತಾರೆ. ಚಿಕಿತ್ಸೆ ಪಡೆಯಲು ತಡ ಮಾಡುವುದರಿಂದ ದೀರ್ಘ ಕಾಲ ಗಂಭೀರವಾದ ಪರಿಣಾಮ ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಮಾಹಿತಿಗಳ ಕೊರತೆ ಅಥವಾ ಸೇವೆಗಳ ಲಭ್ಯತೆಯ ಕೊರತೆಯಿಂದಾಗಿ ಚಿಕಿತ್ಸೆಯು ಹೆಚ್ಚಿನ ಕಾಲಾವಕಾಶ ತೆಗೆದುಕೊಳ್ಳಬಹುದು.

ಅದೃಷ್ಟವಶಾತ್ ಆಶಾ, ಪ್ರಾರಂಭದಲ್ಲಿಯೇ ಸಾಮಾನ್ಯ ವೈದ್ಯರಿಂದ ಮಾನಸಿಕ ಆರೋಗ್ಯ ವೃತ್ತಿಪರರಿಗೆ ಶಿಫಾರಸ್ಸು ಪಡೆದಿದ್ದರಿಂದ ಪರಿಸ್ಥಿತಿ ಹದಗೆಡಲಿಲ್ಲ. ಈಗ ಅವಳು ಆರಾಮಾಗಿ ಆತಂಕವನ್ನು ನಿಭಾಯಿಸುವ ಕೌಶಲ್ಯವನ್ನು ಕಲಿತಿದ್ದಾಳೆ.

ಡಾ. ಪ್ರಭಾ ಎಸ್. ಚಂದ್ರ (MD, FRCPsych), ಪ್ರಾಧ್ಯಾಪಕರು, ರಾಷ್ಟ್ರೀಯ ಮಾನಸಿಕ ಆರೋಗ್ಯ ಸಂಸ್ಥೆ ಮತ್ತು ನರ ವಿಜ್ಞಾನ ಸಂಸ್ಥೆ (NIMHANS), ಬೆಂಗಳೂರು.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org