ಛಾಯಾಗ್ರಹಣ ನಿಮ್ಮ ಆರೋಗ್ಯವನ್ನು ಕಾಪಾಡುವುದೇ

ಛಾಯಾಗ್ರಹಣ ನಿಮ್ಮ ಆರೋಗ್ಯವನ್ನು ಕಾಪಾಡುವುದೇ

ಛಾಯಾಗ್ರಹಣ ನಿಮ್ಮ ಆರೋಗ್ಯವನ್ನು ಕಾಪಾಡುವುದೇ ?

ನೀವು ನಿಮ್ಮ ಸ್ಮಾರ್ಟ್ ಫೋನ್ ಮೂಲಕ ಅಥವಾ ಕ್ಯಾಮರಾ ಮೂಲಕ ನಿಮ್ಮ ಪೋಟೋ ತೆಗೆದುಕೊಳ್ಳುವುದನ್ನು ಇಷ್ಟಪಡುತ್ತೀರಾ ? ಹಾಗಾದಲ್ಲಿ ಫೋಟೋ ತೆಗೆಯುವುದು ಕೇವಲ ಒಂದು ಹವ್ಯಾಸವಾಗಿರದೆ ನಿಮ್ಮ ವೈಯಕ್ತಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಒಂದು ಮಾರ್ಗವಾಗಿರುತ್ತದೆ ಅಥವಾ ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳುವ ಒಂದು ಮಾರ್ಗವಾಗಿರುತ್ತದೆ ಎನ್ನುವುದನ್ನು ಬಲ್ಲಿರಾ ?

ಸಕಾರಾತ್ಮಕ ಮನಶ್ಶಾಸ್ತ್ರ ಪಂಡಿತರು ಈ  ಜಟಿಲ ಪ್ರಶ್ನೆಯನ್ನು ಜನರ ಮುಂದಿಡುತ್ತಿರುವುದೇ ಅಲ್ಲದೆ ಇತ್ತೀಚಿನ ದಿನಗಳಲ್ಲಿ ಹಾಲಿವುಡ್ ಚಿತ್ರಗಳಲ್ಲೂ ಇದರ ಪ್ರಭಾವವನ್ನು ಗಮನಿಸಬಹುದಾಗಿದೆ.  ದ ಸ್ಕಾರ್ಲೆಟ್ ಲೈಫ್ ಆಫ್ ವಾಟರ್ ಮಿಟಿ ಎಂಬ ಹಾಲಿವುಡ್ ಚಿತ್ರದಲ್ಲಿ ಪ್ರಸಿದ್ಧ ನಟ ಸೀನ್ ಪೆನ್  ನಿರ್ವಹಿಸಿರುವ ಸೀನ್ ಒ ಕಾನೆಲ್ ಹೆಸರಿನ ಕಥಾನಾಯಕ ಒಬ್ಬ ಸಾಹಸ ಪ್ರಧಾನ ಪತ್ರಿಕಾ ಛಾಯಾಗ್ರಾಹಕನಾಗಿರುತ್ತಾನೆ.  ತನ್ನ ಕಚೇರಿಯಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಸಹಾಯಕ ವಾಲ್ಟರ್, ಸೀನ್ ಒ ಕಾನೆಲ್ ನನ್ನು ಹೀರೋ ತರಹ ನೋಡುತ್ತಾನೆ. ಹಲವಾರು ವರ್ಷಗಳ ಕಾಲ ಕೇವಲ ಇ ಮೇಲ್ ಮೂಲಕವೇ ಸಂಪರ್ಕ ಹೊಂದಿರುವ ಇಬ್ಬರೂ ಒಮ್ಮೆ ಹಿಮಾಲಯ ಶಿಖರವನ್ನು ಏರುವ ಸಂದರ್ಭದಲ್ಲಿ ಪರ್ವತಗಳ ಮೇಲಿದ್ದಾಗ ಪರಸ್ಪರ ಭೇಟಿಯಾಗುತ್ತಾರೆ. ಸದಾ ಹಗಲುಗನಸು ಕಾಣುವ ವಾಲ್ಟರ್ , ತನ್ನ ಹೀರೋ ಕಾನೆಲ್ ಹಿಮಗಡ್ಡೆಯಲ್ಲಿ ಕಾಣುವ ಚಿರತೆಯಂತಹ ಆಕೃತಿಯನ್ನು ತನ್ನ ಕ್ಯಾಮರಾದಲ್ಲಿ ಸೆರೆಹಿಡಿಯುವುದನ್ನು ಕಂಡು, ನಿಜವಾದ ಚಿರತೆಯಂತೆಯೇ ಕಾಣುವ ಫೋಟೋ ನೋಡಿ, ಸಂಪೂರ್ಣ ಬದಲಾಗಿಬಿಡುತ್ತಾನೆ.

ಮನಸ್ಪೂರ್ವಕ ಛಾಯಾಗ್ರಹಣದ ಈ ಪರಿಕಲ್ಪನೆಯನ್ನು ಮೊದಲು ಪರಿಚಯಿಸಿದವರು ಮೈನರ್ ವೈಟ್. ಕಲಾತ್ಮಕ ಛಾಯಾಗ್ರಹಣದಲ್ಲಿ ಜಗದ್ವಿಖ್ಯಾತರಾದ ಆಲ್ಫ್ರೆಡ್ ಸ್ಟೀಗ್ಲಿಜ್, ಅನ್ಸೆಲ್ ಅಡಮ್ಸ್ ಮತ್ತು ಎಡ್ವರ್ಡ್ ವೆಸ್ಟನ್ ಮುಮತಾದವರೊಡನೆ 1940ರಲ್ಲಿ ಒಡನಾಟ ಹೊಂದಿದ್ದ ಮೈನರ್ ವೈಟ್ , ಸ್ಟೀಗ್ಲಿಜ್ ಅನುಸರಿಸುತ್ತಿದ್ದ ಸಮಾನಾರ್ಥದ ಪರಿಕಲ್ಪನೆಯಿಂದ ಪ್ರಭಾವಿತರಾಗಿದ್ದರು. ಈ ಪರಿಕಲ್ಪನೆಯ ಮೂಲಕ ಸ್ಟೀಗ್ಲಿಜ್ ಛಾಯಾಗ್ರಹಣದಲ್ಲಿ ಕಾಣುವ ಬಿಂಬವನ್ನು ವಾಸ್ತವ ವಸ್ತುವಿನ ರೂಪಕದಂತೆ ಕಾಣುತ್ತಿದ್ದರು. ನಂತರ ಎಮ್ಐಟಿ ಸಂಸ್ಥೆಯ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಮೈನರ್ ವೈಟ್ ಛಾಯಾಗ್ರಹಣದಲ್ಲಿ ತೊಡಗುವವರಿಗೆ ಧ್ಯಾನ ಮತ್ತು ಏಕಾಗ್ರತೆ ಅತ್ಯಗತ್ಯವಾದ ಜೀವನ ಶೈಲಿಯಾಗಬೇಕು ಎಂದು ಪ್ರತಿಪಾದಿಸಿದ್ದರು. “ ನೀವು ಗಮನ  ಹರಿಸುವ ವಸ್ತು ನಿಮ್ಮ ಇರುವಿಕೆಯನ್ನು ಖಚಿತಪಡಿಸುವವರೆಗೂ ನೀವು ನಿಮ್ಮತನವನ್ನು ಕಾಪಾಡಿಕೊಂಡಿರಿ ” ಎಂದು ವೈಟ್ ಹೇಳುತ್ತಿದ್ದರು. ವಿಶಾಲ ಅರ್ಥದಲ್ಲಿ ಛಾಯಾಗ್ರಹಣವನ್ನು ವಿವರಿಸುತ್ತಿದ್ದ ವೈಟ್ “ ಕಣ್ಣುಗಳ ಅಮಾಯಕತೆ ತನ್ನದೇ ಆದ ಗುಣಮಟ್ಟವನ್ನು ಹೊಂದಿರುತ್ತದೆ, ಅಂದರೆ ಎಳೆಯ ಮಕ್ಕಳಂತೆ ನೋಡುತ್ತದೆ, ಅಚ್ಚರಿಯಿಂದ ಹಚ್ಚ ಹಸಿರಾಗಿ ನೋಡುತ್ತದೆ ” ಎಂದು ಹೇಳುತ್ತಿದ್ದರು.

ವ್ಯವಸ್ಥಿತ ಸಂಶೋಧನೆ ಅಷ್ಟಾಗಿ ನಡೆದಿಲ್ಲವಾದರೂ, ಆರೋಗ್ಯ ಕ್ಷೇತ್ರದ ಪರಿಣತರು ಛಾಯಾಗ್ರಹಣವನ್ನು ಭಾವನಾತ್ಮಕ ಪ್ರಯೋಜನಗಳಿಗಾಗಿ ಬಳಸುತ್ತಲೇ ಇದ್ದಾರೆ. 2008ರಲ್ಲಿ  ಛಾಯಾಗ್ರಹಣ ಮತ್ತು ಚಿಕಿತ್ಸಕ ಛಾಯಾಗ್ರಹಣದ ಮೊದಲನೆಯ ಜಾಗತಿಕ ಸಮಾವೇಶ ನಾರ್ವೆಯಲ್ಲಿ ನಡೆದ ಸಂದರ್ಭದಲ್ಲಿ  ಕಲಾ ಚಿಕಿತ್ಸಕರು, ಮನಶ್ಶಾಸ್ತ್ರಜ್ಞರು ಮತ್ತು ಸಾಮಾಜಿಕ ಕಾರ್ಯಕರ್ತರು ತಮ್ಮ ವಿಚಾರಗಳನ್ನು ಮಂಡಿಸಿದ್ದರು.  ಇವರಲ್ಲಿ ಪ್ರಮುಖವಾಗಿ  ಛಾಯಾಗ್ರಹಣ ಚಿಕಿತ್ಸಾ ತಂತ್ರಜ್ಞಾನಗಳು ಎಂಬ ಕೃತಿಯನ್ನು ಬರೆದಿರುವ ಜೂಡಿ ವೈಸರ್, ವೈಯಕ್ತಿಕ ಭಾವಚಿತ್ರ, ಕುಟುಂಬದ ಆಲ್ಬಮ್ ಮತ್ತು ತಮ್ಮನ್ನೇ ಬಿಂಬಿಸಲು ಇತರರು ತೆಗೆದ ಫೋಟೋಗಳು ಹೇಗೆ ಚಿಕಿತ್ಸಕ ಸಂವಾದವನ್ನು ಉತ್ತಮಗೊಳಿಸುವ ಬಗ್ಗೆ ಹಲವು ತಂತ್ರಗಾರಿಕೆಗಳನ್ನು ಕುರಿತು ಮಾಹಿತಿ ನೀಡಿದ್ದರು. ಮೂಲತಃ ಕಲಾ ಚಿಕಿತ್ಸೆಯಿಂದಲೇ ರೂಪುಗೊಂಡ ಚಿಂತನೆಯಾಗಿ, ಉತ್ತಮ ಆರೋಗ್ಯಕ್ಕಾಗಿ ಛಾಯಾಗ್ರಹಣವನ್ನು ಬಳಸುವ ವಿಧಾನಗಳು ಅನೇಕ ಕಾರ್ಯಾಗಾರಗಳಲ್ಲಿ, ವಯಸ್ಕರ ತರಗತಿಗಳಲ್ಲಿ ಬೋಧಿಸಲ್ಪಡುತ್ತಿದೆ. ಈ ರೀತಿಯ ಕಾರ್ಯಕ್ರಮಗಳಲ್ಲಿ ಫೋಟೋಗಳು ಹೇಗೆ ಸ್ವಯಂ ಒಳನೋಟದ ದೃಶ್ಯ ಮಾದರಿಯಾಗಿ ಕಾರ್ಯನಿರ್ವಹಿಸುತ್ತದೆ, ಹೇಗೆ ಸಕಾರಾತ್ಮಕ ನೆನಪಿನ ಶಕ್ತಿಯನ್ನು ಉತ್ತಮಗೊಳಿಸುತ್ತದೆ, ಹೇಗೆ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ ಮತ್ತು ಹೇಗೆ ಮನುಷ್ಯರ ನಡುವಿನ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ ಎನ್ನುವುದನ್ನು ವಿವರಿಸಲಾಗುತ್ತದೆ.

ತರಗತಿಗಳಲ್ಲಿ ಎಚ್ಚರಿಕೆಯ ಛಾಯಾಗ್ರಹಣವನ್ನೂ ಬೋಧಿಸಲಾಗುತ್ತಿದೆ. ಉದಾಹರಣೆಗೆ  ಐರ್ಲೆಂಡಿನ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಉತ್ತಮ ಆರೋಗ್ಯ ನಿರ್ವಹಣೆಯನ್ನು ಕುರಿತು ಮಕ್ಕಳಿಗೆ ಬೋಧಿಸುವ ಸಂದರ್ಭದಲ್ಲಿ  ಡಾ ಸಾಯರ್ಸ್ ಗಭೈಯ್ನ್ ಮತ್ತು ಜೇಮನ್ ಸಿಕ್ಸ್ಮಿತ್  8 ರಿಂದ 12 ವಯಸ್ಸಿನ ಮಕ್ಕಳಿಗೆ ತಮಗಿಷ್ಟ ಬಂದ ವಸ್ತುವಿನ ಫೋಟೋ ತೆಗೆಯಲು ಹೇಳಿದ್ದರು. ನಂತರ ಮತ್ತೊಂದು ಗುಂಪು ಈ ಫೋಟೋಗಳನ್ನು ಕೆಲವು ವಿಭಾಗಗಳಲ್ಲಿ ವಿಂಗಡಿಸಿತ್ತು. ನಾವು ಮೆಚ್ಚುವ ಜನರು, ಆಹಾರ ಮತ್ತು ಪಾನೀಯ, ಪ್ರಾಣಿಗಳು ಮತ್ತು ಸಾಕುಪ್ರಾಣಿಗಳು ಹೀಗೆ ಹಲವು ವಿಭಾಗಗಳಲ್ಲಿ ವಿಂಗಡಿಸಲಾಗಿತ್ತು. ಸಂಶೋಧಕರ ಪ್ರಕಾರ ಛಾಯಾಗ್ರಹಣ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಒಂದು ಅತ್ಯುತ್ತಮ ಬೋಧಕ ಸಲಕರಣೆಯಾಗಿದೆ. ಇಂಗ್ಲೆಂಡಿನ ಶೆಫೀಲ್ಡ್ ಹಲ್ಲಮ್ ವಿಶ್ವವಿದ್ಯಾಲಯದ ಡಾ ಅನ್ನೆ ಕೆಲ್ಲಾಕ್ ನ್ಯೂಜಿಲೆಂಡಿನ ಮಾವೋರಿ ಎಂಬ ಪ್ರದೇಶದಲ್ಲಿ ಬಡ ಮಕ್ಕಳ ನಡುವೆ ತೆಗೆದ ಫೋಟೋಗಳು ಅಲ್ಲಿನ  8 ರಿಂದ 12 ವರ್ಷದ ವಯಸಿನ ಮಕ್ಕಳಿಗೆ ಅವರ  ಜೀವನದ ಮುಖ್ಯ ವಿಚಾರಗಳನ್ನು ತಿಳಿದುಕೊಳ್ಳಲು ನೆರವಾಗಿದ್ದವು. ಈ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಮನಶ್ಶಾಸ್ತ್ರಜ್ಞರು ಛಾಯಾಗ್ರಹಣವನ್ನು ವಯಸ್ಕ ವಿದ್ಯಾರ್ಥಿಗಳೊಡನೆಯೂ ಬಳಸುತ್ತಿದ್ದಾರೆ.

ಕಾಲೇಜು ಅಧ್ಯಾಪಕರಿಗಾಗಿ ಸಿದ್ಧಪಡಿಸಲಾಗಿರುವ ಕೈಪಿಡಿಯಲ್ಲಿ , ಜೇಮ್ಸ್ ಮ್ಯಾಡಿಸನ್ ವಿಶ್ವವಿದ್ಯಾಲಯದ ಡಾ ಜೇಮ್ ಕರ್ಜ್ ಮತ್ತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸೊನಿಯಾ ಲಿಬೋಮಿಸ್ಕಿ , ವಿದ್ಯಾರ್ಥಿಗಳು ತಮ್ಮ ನಿತ್ಯ ಜೀವನದಲ್ಲಿ ಖುಷಿ ಕೊಡುವ ಎಲ್ಲ ಚಟುವಟಿಕೆಗಳ ಫೋಟೋ ತೆಗೆಯಲು ಸಲಹೆ ನೀಡಿರುವುದೇ ಅಲ್ಲದೆ ನಂತರ ಆ ಫೋಟೋಗಳ ಬಗ್ಗೆ ಗುಂಪು ಚರ್ಚೆ ನಡೆಸಲು ಹೇಳಿದ್ದಾರೆ.

ಸ್ಮಾರ್ಟ್ ಫೋನ್ ಕ್ಯಾಮರಾಗಳು ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತಿರುವುದರಿಂದ ನಮ್ಮ ಮಾನಸಿಕ ಆರೋಗ್ಯ ಉತ್ತಮವಾಗುವುದೇ ? ಇರ್ವೈನ್ ನಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಡಾ ಯು ಜೆನ್ ಅವರ  ಇತ್ತೀಚಿನ ಅಧ್ಯಯನದಲ್ಲಿ ಈ ಪ್ರಶ್ನೆಗೆ ಆಶಾದಾಯಕ ಉತ್ತರ ದೊರೆಯುತ್ತದೆ.  ತಮ್ಮ ಸಂಶೋಧನೆಯ ಸಂದರ್ಭದಲ್ಲಿ ಡಾ ಜೆನ್ ಕಾಲೇಜು ವಿದ್ಯಾರ್ಥಿಗಳಿಗೆ  ಒಂದು ತಿಂಗಳ ಕಾಲ ಮೂರು ಸನ್ನಿವೇಶಗಳಲ್ಲಿ ದಿನಕ್ಕೊಂದು ಫೋಟೋ ತೆಗೆಯುವಂತೆ ಸಲಹೆ ನೀಡಿದ್ದರು : ನಗುಮುಖ ಇರುವ ಒಂದು ಸೆಲ್ಫಿ, ತಮಗೆ ಆನಂದ ನೀಡುವ ಯಾವುದೇ ಸಂದರ್ಭದಲ್ಲಿ ಒಂದು ಸೆಲ್ಫಿ ಮತ್ತು ಮತ್ತೊಬ್ಬರನ್ನು ಖುಷಿ ಪಡಿಸುತ್ತದೆ ಎಂದು ತಾವು ಭಾವಿಸುವ ಯಾವುದೇ ಒಂದು ಚಟುವಟಿಕೆಯ ಒಂದು ಸೆಲ್ಫಿ. ಈ ಮೂರು ಫೋಟೋಗಳನ್ನು ಕಳಿಸಲು ಕೋರಿದ್ದರು. ತಿಂಗಳ ಕೊನೆಯಲ್ಲಿ  ಈ ಚಟುವಟಿಕೆಯಲ್ಲಿ ಭಾಗವಹಿಸಿದ ಮೂರೂ ಗುಂಪುಗಳು ತಮ್ಮ ದೈನಂದಿನ ಮನಸ್ಥಿತಿ ಸುಧಾರಿಸಿದೆ ಎಂದು ಹೇಳಿದ್ದಾರೆ.  ಮತ್ತೊಬ್ಬರನ್ನು ಖುಷಿಪಡಿಸುವ ಚಟುವಟಿಕೆಯ ಫೋಟೋಗಳನ್ನು ಕಳುಹಿಸಿದ್ದವರು,  ಇನ್ನೆರಡು ಚಟುವಟಿಕೆಗಳಲ್ಲಿ ತೊಡಗಿದ್ದವರಿಗಿಂತಲೂ  ಹೆಚ್ಚು ಶಾಂತಚಿತ್ತರಾಗಿದ್ದರು. ಈ ಸಂಶೋಧನೆ ಅಚ್ಚರಿಯನ್ನೇನೂ  ಮೂಡಿಸುವುದಿಲ್ಲ. ಏಕೆಂದರೆ ತಮ್ಮ ಬಗ್ಗೆಯೇ ಹೆಚ್ಚು ಯೋಚಿಸುವುದರಿಂದಲೇ ವ್ಯಕ್ತಿಯಲ್ಲಿ ಆತಂಕ ಮತ್ತು ಖಿನ್ನತೆ ಹೆಚ್ಚಾಗುತ್ತದೆ. ಮಾನವೀಯ ಮನಶ್ಶಾಸ್ತ್ರವನ್ನು ಕಂಡುಹಿಡಿದ ಅಬ್ರಾಹಂ ಮಸ್ಲೋ ಹೇಳುವಂತೆ ಪ್ರಪಂಚದಲ್ಲಿ ಏಕಾಂಗಿತನವನ್ನು ಅನುಭವಿಸುವುದೇ ಅತ್ಯಂತ ನೋವಿನ ಮಾನಸಿಕ ಸ್ಥಿತಿಯನ್ನು ಸೃಷ್ಟಿಸುತ್ತದೆ.

ನಿಮ್ಮ ಸ್ಮಾರ್ಟ್ ಫೋನಿನ ಮೂಲಕ ಆಗಾಗ್ಗೆ ಫೋಟೋ ತೆಗೆಯಲು ಸುಲಭವಾಗುವುದೇ ಅಲ್ಲದೆ ನಿಮಗೆ ಉತ್ತೇಜನವೂ ಹೆಚ್ಚಾಗಬಹುದು. ಇಲ್ಲಿ ನಾನು ಕೆಲವು ಎಚ್ಚರಿಕೆಯ ಸಲಹೆ ಕೊಡುತ್ತೇನೆ. ಕನೆಕ್ಟಿಕಟ್ ನಲ್ಲಿರುವ ಫೇರ್ ಫೀಲ್ಡ್ ವಿಶ್ವವಿದ್ಯಾಯದ ಡಾ ಲಿಂಡಾ ಹೆಂಕಲ್ ನಡೆಸಿದ ಪ್ರಯೋಗಾತ್ಮಕ ಸಂಶೋಧನೆಯ ಪ್ರಕಾರ , ಯುವ ವಯಸ್ಕರು ಮ್ಯೂಸಿಯಂ ಒಂದರಲ್ಲಿದ್ದ ವಸ್ತುಗಳ, ಉದಾಹರಣೆಗೆ ಆಭರಣಗಳು, ಚಿತ್ರಕಲೆ, ಶಿಲ್ಪಕಲೆ, ಮಣ್ಣಿನ ವಸ್ತುಗಳು,  ಪೋಟೋ ತೆಗೆದುಕೊಂಡ ನಂತರ ಮರುದಿನ ತಮ್ಮ ಸ್ಮರಣ ಶಕ್ತಿಯ ಪರೀಕ್ಷೆ ನಡೆಸಿದಾಗ, ಪ್ರದರ್ಶಿತ ವಸ್ತುಗಳನ್ನು ಕೇವಲ ವೀಕ್ಷಿಸಿದವರಿಗಿಂಗಲೂ ಕಳಪೆ ಪ್ರದರ್ಶನ ನೀಡಿದ್ದರು. ಇದೇ ವ್ಯಕ್ತಿಗಳಿಗೆ ವಸ್ತುಗಳನ್ನು ಕೇವಲ ಚಿತ್ರೀಕರಿಸದೆ ನಿರ್ದಿಷ್ಟ ಭಾಗಗಳನ್ನು ಕೇಂದ್ರೀಕರಿಸಿ ಫೋಟೊ ತೆಗೆಯುವಂತೆ ಹೇಳಿದಾಗ, ಅವರು ಪೋಟೋ ತೆಗೆದ ಎಲ್ಲವಸ್ತುಗಳನ್ನೂ ನೆನಪಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದರು.

ಈ ಅನ್ವೇಷಣೆಗಳನ್ನು ಹೇಗೆ ವಿವರಿಸುವುದು ? ಡಾ ಹೆಂಕಲ್ ಅವರ  ಅಭಿಪ್ರಾಯದಲ್ಲಿ ಒಂದು ವಸ್ತು ಅಥವಾ ದೃಶ್ಯ ಎಷ್ಟೇ ಸುಂದರವಾಗಿದ್ದರೂ, ಕೇವಲ ಆ ವಸ್ತು ಅಥವಾ ದೃಶ್ಯದ ಫೋಟೋ ತೆಗೆಯುವುದರಿಂದ ಆ ಕ್ಷಣದಲ್ಲಿ ನಮ್ಮ ಗಮನವನ್ನು ಕೇಂದ್ರೀಕರಿಸಲಾಗುವುದಿಲ್ಲ. ಡಿಜಿಟಲ್ ಫೋಟೋಗ್ರಫಿ ಪರಿಚಯವಾದ ನಂತರ ಸಾಂಪ್ರದಾಯಿಕ ಮುದ್ರಿತ ಫೋಟೋಗಳು ಕ್ಷೀಣಿಸುತ್ತಿವೆ. ಹಾಗೆಯೇ ಆ ಫೋಟೋಗಳನ್ನು  ಹಳೆಯ ಪುಸ್ತಕಗಳಲ್ಲಿ ಜೋಡಿಸುವುದು, ಕುಟುಂಬದೊಡನೆ ಕುಳಿತು ಅದನ್ನು ನೋಡಿ ಆನಂದಿಸುವುದೂ ಸಹ ಇಲ್ಲವಾಗುತ್ತಿದೆ. ನಮ್ಮ ಪರವಾಗಿ ಕ್ಯಾಮರಾ ಎಲ್ಲವನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ನಾವು ಬಯಸಿದರೆ ನಾವು ಫೋಟೋ ತೆಗೆಯಬೇಕಾದ ವಸ್ತುವನ್ನು ಹತ್ತಿರದಿಂದ ನೋಡಬೇಕಾಗುತ್ತದೆ.

ಕಾರ್ಯ ಚಟುವಟಿಕೆ

ಒಂದು ನಿರ್ದಿಷ್ಟ ವಿಷಯವನ್ನು ಆಯ್ಕೆ ಮಾಡಿ, ಉದಾಹರಣೆಗೆ ಪ್ರಾಣಿಗಳು, ಜನರು, ವಾಸ್ತುಶಿಲ್ಪ ಇತ್ಯಾದಿ, ಮತ್ತು ವಿಶಿಷ್ಟ ಚಿತ್ರಗಳನ್ನು ಫೋಟೋ ತೆಗೆಯಿರಿ. ನಿಮ್ಮ ಗಮನವನ್ನು ಹೆಚ್ಚು ಕೇಂದ್ರೀಕರಿಸಲು ಈ ಕೆಲವು ಸಲಹೆಗಳನ್ನು ಅನುಸರಿಸಿ :

  1. ಬಣ್ಣದ ವಸ್ತುಗಳನ್ನು ಶೂಟ್ ಮಾಡುವುದರಿಂದ ನಿಮ್ಮ ಕಣ್ಣು ಮತ್ತು ಮನಸ್ಸು ಒಂದಾಗಿ ಕಾರ್ಯನಿರ್ವಹಿಸಬಹುದು, ಹಾಗಾಗಿ ವರ್ಣರಂಜಿತ ವಸ್ತುಗಳನ್ನು ಫೋಟೋ ತೆಗೆಯಲು ಆಯ್ಕೆ ಮಾಡಿ ಹತ್ತಿರದಿಂದ ಶೂಟ್ ಮಾಡಿ.
  2. ಬೆಳಕಿನ ಗುಣಮಟ್ಟದಿಂದ ಪ್ರಭಾವಕ್ಕೊಳಗಾಗುವ ಮೇಲ್ಪದರದ ಫೋಟೋ ತೆಗೆಯಿರಿ. ನೀವು ನೋಡುತ್ತಿರುವುದನ್ನು ನೀವು ಮುಟ್ಟುತ್ತಿಲ್ಲ ಎಂದು ಭಾವಿಸಿ.
  3. ಜನರನ್ನು ಪೋಟೋ ತೆಗೆಯುವಾಗ ನಿಮ್ಮ ಸ್ನೇಹಿತರು ಮತ್ತು ಕುಟುಂಬ ವರ್ಗದವರೊಂದಿಗೆ ಆರಂಭಿಸಿ. ತಾಳ್ಮೆಯಿಂದಿರಿ. ಒಂದು ಹಂತದಲ್ಲಿ ಅವರು ಚೆನ್ನಾಗಿ ಕಾಣುವ ಪ್ರಯತ್ನವನ್ನು ಕೈಬಿಡುತ್ತಾರೆ. ಆಗ ಆ ಕ್ಷಣದಲ್ಲಿ ಅವರು ಇದ್ದಂತೆಯೇ ಫೋಟೋ ತೆಗೆಯಲು ಸಾಧ್ಯವಾಗುತ್ತದೆ.

ಡಾ ಎಡ್ವರ್ಡ್ ಹಾಫ್ ಮನ್ ನ್ಯೂಯಾರ್ಕ್ ನಗರದ  ಏಶಿವಾ ವಿಶ್ವವಿದ್ಯಾಲಯದಲ್ಲಿ ಸಹಾಯಕ ಮನಶ್ಶಾಸ್ತ್ರ ಪ್ರೊಫೆಸರ್ ಆಗಿದ್ದಾರೆ. ಖಾಸಗಿಯಾಗಿ ಮನಶ್ಶಾಸ್ತ್ರ ಚಿಕಿತ್ಸಕರೂ ಆಗಿದ್ದಾರೆ. ಮನಶ್ಶಾಸ್ತ್ರ ಮತ್ತು ಸಂಬಂಧಿತ ವಿಷಯಗಳ ಬಗ್ಗೆ 25ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ. ಇತ್ತೀಚೆಗೆ ಡಾ ವಿಲಿಯಂ ಕಾಂಪ್ಟನ್ ಅವರೊಂದಿಗೆ ಸಕಾರಾತ್ಮಕ ಮನಶ್ಶಾಸ್ತ್ರ ಎಂಬ ಪುಸ್ತಕವನ್ನು ಪ್ರಕಟಿಸಿದ್ದಾರೆ. ಭಾರತದ ಪತ್ರಿಕೆಯಾದ ಸಕಾರಾತ್ಮಕ ಮನಶ್ಶಾಸ್ತ್ರದ ಸಂಪಾದಕೀಯ ಮಂಡಲಿ ಸದಸ್ಯರಾಗಿದ್ದಾರೆ. ಮಾನವೀಯ ಮನಶ್ಶಾಸ್ತ್ರ ಪತ್ರಿಕೆಯ ಸಂಪಾದಕರೂ ಆಗಿದ್ದಾರೆ. ಇವರನ್ನು ಸಂಪರ್ಕಿಸಲು ಇಲ್ಲಿಗೆ ಭೇಟಿ ನೀಡಿ : columns@whiteswanfoundation.org

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org