ಹಾವರ್ಡ್ ವಿಶ್ವವಿದ್ಯಾಲಯದಲ್ಲಿ ಅಮೆರಿಕದ ಮೊಟ್ಟ ಮೊದಲ ಮನಶ್ಶಾಸ್ತ್ರ ಪ್ರಯೋಗಾಲಯವನ್ನು ಆರಂಭಿಸಿದ ಜೇಮ್ಸ್ ನಂತರದಲ್ಲಿ ತಮ್ಮ ಬುದ್ಧಿಶಕ್ತ್ತಿಯನ್ನು ಬಳಸಿಕೊಂಡು ಧಾರ್ಮಿಕ ಅನುಭವಗಳು (ನಿಗೂಢತೆ ಮತ್ತು ಪ್ರಾರ್ಥನೆ), ಆರೋಗ್ಯ ಮತ್ತು ಅನಾರೋಗ್ಯಕ್ಕೆ ಸಂಬಂಧಿಸಿದಂತೆ ದೇಹ ಮತ್ತು ಮನಸ್ಸಿನ ಸಂಬಂಧಗಳು, ಮನುಷ್ಯನ ಮನಸ್ಸಿನ ಲಕ್ಷಣಗಳು ಮುಂತಾದ ವಿಷಯಗಳಲ್ಲಿ ಅಧ್ಯಯನ ನಡೆಸಿದ್ದರು. ಈ ವಿಷಯಗಳನ್ನು ಶೋಧಿಸುತ್ತಲೇ ಜೇಮ್ಸ್ ಅವರು ಭಾರತದ ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿ ತೋರಲಾರಂಭಿಸಿದರು. ಯೋಗ ಮತ್ತು ಯೋಗಾಭ್ಯಾಸವನ್ನು ಕುರಿತು ಅಧ್ಯಯನ ನಡೆಸಿದ್ದರು. 1906ರ ಡಿಸೆಂಬರ್‍ನಲ್ಲಿ ನ್ಯೂಯಾರ್ಕ್‍ನಲ್ಲಿರುವ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅಮೆರಿಕದ ತತ್ವಶಾಸ್ತ್ರೀಯ ಸಂಘಟನೆ ಆಶ್ರಯದಲ್ಲಿ ಜೇಮ್ಸ್ ಅದ್ಭುತವಾದ ಉಪನ್ಯಾಸ ನೀಡಿದ್ದರು. ಈ ಉಪನ್ಯಾಸವನ್ನು ಕೆಲವು ದಿನಗಳ ಬಳಿಕ ತತ್ವಶಾಸ್ತ್ರೀಯ ವಿಮರ್ಶೆ ಎನ್ನುವ ಪತ್ರಿಕೆಯೊಂದರಲ್ಲಿ ಮನುಷ್ಯನ ಶಕ್ತಿ ಸಾಮಥ್ರ್ಯಗಳು ಎಂಬ ಶೀರ್ಷಿಕೆಯಡಿ ಪ್ರಕಟಿಸಲಾಗಿತ್ತು. ಕೆಲವೇ ದಿನಗಳಲ್ಲಿ ಈ ಉಪನ್ಯಾಸವನ್ನು ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು. ಇದು ಅತ್ಯಂತ ಜನಪ್ರಿಯವಾಗಿದ್ದೇ ಅಲ್ಲದೆ, ಈ ವೃತ್ತಿಯಲ್ಲಿ ತೊಡಗಿರುವವರ ಮೇಲೆ ಗಾಢವಾದ ಪ್ರಭಾವ ಬೀರಿತ್ತು. ಸಾಮಾನ್ಯವಾಗಿ ಜನರು ತಮ್ಮ ಉದ್ದೇಶಿತ ಕೆಲಸ ಅಥವಾ ಗುರಿಯನ್ನು ತಲುಪುವುದಕ್ಕೆ ಮುನ್ನವೇ, ಅಂದರೆ ಅವರ ಶಕ್ತಿಯನ್ನು ಮರಳಿ ಪಡೆಯುವ ಮುನ್ನವೇ, ಕೈಬಿಟ್ಟುಬಿಡುತ್ತಾರೆ ಎಂದು ಈ ಪ್ರಬಂಧದಲ್ಲಿ ವಿಲಿಯಂ ಜೇಮ್ಸ್ ಹೇಳಿದ್ದರು. ನಮ್ಮ ಅಂಗರಚನೆಯಲ್ಲಿ ಅಡಗಿರುವ ಶಕ್ತಿಯನ್ನು ನಾವು ಸಾಮಾನ್ಯವಾಗಿ ಬಳಸಿಕೊಳ್ಳುವುದಿಲ್ಲ ಎಂದು ಹೇಳುವ ಜೇಮ್ಸ್ ಈ ಶಕ್ತಿಯನ್ನು ನಾವು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂದೂ ಹೇಳುತ್ತಾರೆ.