ಉತ್ತಮ ಯೋಗಾಭ್ಯಾಸ ಮಾಡಲು ಐದು ಯೋಗ ಆ್ಯಪ್ ಗಳು

ಸ್ವಯಂ ಶಿಸ್ತು ಯೋಗಾಭ್ಯಾಸದಲ್ಲಿ ಹೇಗೆ ನೆರವಾಗುತ್ತದೆ
Published on

ಸ್ವಯಂ ಶಿಸ್ತು ಯೋಗಾಭ್ಯಾಸದಲ್ಲಿ ಹೇಗೆ ನೆರವಾಗುತ್ತದೆ

ನಾವು ಯಾವುದೇ ರೀತಿಯ ವ್ಯಾಯಾಮವನ್ನು ಕುರಿತು ಯೋಚಿಸುವಾಗ, ನಮ್ಮ ಮನಸ್ಸಿಗೆ ತಕ್ಷಣ ಬರುವ ಆಲೋಚನೆ ಎಂದರೆ ಈ ಚಟುವಟಿಕೆಯನ್ನು ನಡೆಸಲು ಬೇಕಾಗುವ ಸಮಯ ಮತ್ತು ಶ್ರಮ. ನಾವು ಎಷ್ಟು ಬಾರಿ ಅಭ್ಯಾಸ ಮಾಡಬೇಕು, ಅಭ್ಯಾಸ ಮಾಡುವುದು ಎಷ್ಟು ಕಷ್ಟ ಅಥವಾ ಎಷ್ಟು ಸುಲಭ, ಹೀಗೆ ಹಲವು ಆಲೊಚನೆಗಳು ಮೂಡುತ್ತವೆ. ಆದರೆ ಯಾವುದೇ ರೀತಿಯ ವ್ಯಾಯಾಮ ಅಥವಾ ಚಟುವಟಿಕೆಯಲ್ಲಿ ತೊಡಗಲು ಬೇಕಾಗುವ ಅತಿ ಮುಖ್ಯ ಲಕ್ಷಣ ಎಂದರೆ ಸ್ವಯಂ ಶಿಸ್ತು. ಯೋಗ ಒಂದು ಸಮಗ್ರ ವ್ಯಾಯಾಮ ಕಲೆ ಎನ್ನುವುದನ್ನು ಇಡೀ ಜಗತ್ತು ಒಪ್ಪಿಕೊಂಡಿದೆ. ವಿಶ್ವದಾದ್ಯಂತ ಎಲ್ಲ ದೇಶಗಳಲ್ಲೂ ಜನರು ವಿವಿಧ ವಿಧಾನಗಳ ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಪ್ರತಿಯೊಂದು ವಿಧಾನವೂ ತನ್ನದೇ ಆದ ಮಹತ್ವ ಹೊಂದಿದ್ದು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುವಲ್ಲಿ ನೆರವಾಗುತ್ತದೆ.

ಯೋಗದ ಅತ್ಯಂತ ಮುಖ್ಯವಾದ ಗುರಿ ಎಂದರೆ ಸ್ವಯಂ ಶಿಸ್ತು ರೂಢಿಸಿಕೊಳ್ಳುವುದು ಮತ್ತು ಸ್ವಯಂ ತಿಳುವಳಿಕೆಯನ್ನು ಪಡೆಯುವುದು. ಒಬ್ಬ ವ್ಯಕ್ತಿ ಯಾವುದೇ ವಿಧಾನದ ಯೋಗಾಭ್ಯಾಸ ಅನುಸರಿಸಲಿ, ಅತಿ ಮುಖ್ಯವಾದ ಮತ್ತು ಮಹತ್ತರವಾದ ಅವಶ್ಯಕತೆ ಎಂದರೆ ಸ್ವಯಂ ಶಿಸ್ತು. ಇದು ಇಲ್ಲದಿದ್ದರೆ ಯೋಗದಿಂದ ಸಕಾರಾತ್ಮಕ ಫಲವನ್ನು ನಿರೀಕ್ಷಿಸಲಾಗುವುದಿಲ್ಲ. ಪತಂಜಲಿ ಯೋಗಸೂತ್ರದಲ್ಲಿ ಸ್ವಯಂ ಶಿಸ್ತನ್ನು ತಪಸ್ ಎಂದು ಕರೆಯಲಾಗುತ್ತದೆ. ಕಲಿಯುವ ಆಕಾಂಕ್ಷೆ ಮತ್ತು ಒಂದು ಕೆಲಸ ಮಾಡಲು ಇಚ್ಚಾಶಕ್ತಿ ಇರುವುದನ್ನು ತಪಸ್ ಎನ್ನಲಾಗುತ್ತದೆ. ಸ್ವಯಂ ಶಿಸ್ತನ್ನು ಯಾವುದೇ ಚಟುವಟಿಕೆಯ ಸಂದರ್ಭದಲ್ಲಿ ಅನುಸರಿಸಬಹುದು. ಕಾರ್ಯಕ್ಷೇತ್ರದಲ್ಲಿ ಹೆಚ್ಚು ದಕ್ಷತೆಯಿಂದಿರುವುದು, ಹೆಚ್ಚು ಫಲಪ್ರದವಾಗಿರುವುದು, ವೈಯಕ್ತಿಕ ನೆಲೆಯಲ್ಲಿ ಅಂತರ್ ಸಂಬಂಧಗಳನ್ನು ಹೆಚ್ಚಿಸಿಕೊಳ್ಳುವುದು, ಆರೋಗ್ಯಕರವಾದ ಆಹಾರ ಪದ್ಧತಿ ಅನುಸರಿಸುವುದು, ಹೊಸ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು, ಕೋಪ ಮತ್ತು ಭಾವಾವೇಷವನ್ನು ನಿಯಂತ್ರಿಸುವುದು ಹೀಗೆ ಹಲವು ಲಕ್ಷಣಗಳನ್ನು ಸ್ವಯಂ ಶಿಸ್ತಿನ ಮೂಲಕ ಪಡೆಯಬಹುದು. ಯೋಗದಲ್ಲಿ ಸ್ವಯಂ ಶಿಸ್ತು ಎನ್ನುವುದು ಅಭ್ಯಾಸದ ಬಗ್ಗೆ ಇರುವ ಬದ್ಧತೆಯಲ್ಲಿ ಕಾಣುತ್ತದೆ.

ಈ ಕೆಳಕಂಡ ಕೆಲವು ಲಕ್ಷಣಗಳು ಯೋಗಾಭ್ಯಾಸದ ಸಮಯದಲ್ಲಿ  ನಿಮ್ಮ ಸ್ವಯಂ ಶಿಸ್ತನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ :

ತಿಳುವಳಿಕೆ : ಯಾವುದೇ ಚಟುವಟಿಕೆಯ ಉದ್ದೇಶಿತ ಗುರಿಯನ್ನು ಅರಿತುಕೊಳ್ಳುವುದು ಮತ್ತು ಚಟುವಟಿಕೆಯ ಫಲಿತಾಂಶವನ್ನು ಕುರಿತು ತಿಳುವಳಿಕೆ ಹೊಂದಿರುವುದರಿಂದ ಅಗತ್ಯ ಫಲಿತಾಂಶವನ್ನು ಪಡೆಯಲು ನೆರವಾಗುತ್ತದೆ. ಯೋಗಾಭ್ಯಾಸದಲ್ಲೂ ಇದು ಅನ್ವಯಿಸುತ್ತದೆ. ನಿಮ್ಮ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳಿ, ಯೋಗಾಭ್ಯಾಸವನ್ನು ಮಾಡಲು ನೀವು ಏಕೆ ನಿರ್ಧರಿಸಿರುವಿರಿ ಎಂಬ ಕಾರಣಗಳನ್ನು ಅರಿತುಕೊಳ್ಳಿ, ನಿರ್ದಿಷ್ಟ ಅವಧಿಯ ಯೋಗಾಭ್ಯಾಸದ ನಂತರ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಯಾವ ರೀತಿಯ ಸಕಾರಾತ್ಮಕ ಬದಲಾವಣೆಗಳನ್ನು ನೀವು ಅಪೇಕ್ಷಿಸುತ್ತೀರಿ ಎನ್ನುವುದನ್ನು ಅರಿತುಕೊಳ್ಳಿ.  ತಿಳುವಳಿಕೆ ಮತ್ತು ಅರ್ಥಮಾಡಿಕೊಳ್ಳುವಿಕೆಯ ಮೂಲಕ ನಿಮ್ಮಲ್ಲಿ ಸ್ಪಷ್ಟ ದೃಷ್ಟಿಕೋನ ರೂಪುಗೊಳ್ಳುತ್ತದೆ ಇದರಿಂದ ಯೋಗಾಭ್ಯಾಸವನ್ನು ನಿರಂತರವಾಗಿ ಮುನ್ನಡೆಸಿಕೊಂಡು ಹೋಗಲು ಪ್ರೇರಣೆ ನೀಡುತ್ತದೆ.

• ಯೋಗಾಸನಗಳು ಮತ್ತು ಅದರಿಂದಾಗುವ ಪ್ರಯೋಜನಗಳ ಬಗ್ಗೆ ತಿಳುವಳಿಕೆ ಪಡೆಯಿರಿ.

• ನಿಮ್ಮ ಯೋಗಾ ಮಾಸ್ತರರೊಂದಿಗೆ ಮಾತನಾಡಿ ನಿಮ್ಮ ಕಾಳಜಿಯನ್ನು ಹಂಚಿಕೊಳ್ಳಿ.

• ಸಮಾನ ಮನಸ್ಕರೊಂದಿಗೆ ಚರ್ಚೆ ನಡೆಸುವ ಮೂಲಕ ಯೋಗವನ್ನು ಕುರಿತು ನಿಮ್ಮ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳಿ

ಸ್ಥಿರತೆ : ಯಶಸ್ಸಿಗೆ ಮೊಟಕು ದಾರಿಗಳಿಲ್ಲ ಎಂಬ ಮಾತು ಅಕ್ಷರಶಃ ಸತ್ಯ. ಯಾವುದೇ ರೀತಿಯ ಪ್ರಗತಿ ಸಾಧಿಸಲು ಸ್ಥಿರವಾದ ಸಮಂಜಸ ಶ್ರಮ ಅಗತ್ಯ. ದಿನನಿತ್ಯ ನಿಯಮಬದ್ಧತೆಯಿಂದ ಯೋಗಾಭ್ಯಾಸ ಮಾಡುವುದರ ಮೂಲಕ ಮಾನಸಿಕ ಶಿಸ್ತು ರೂಢಿಸಿಕೊಳ್ಳಬಹುದು. ಆಗ ಯೋಗಾಭ್ಯಾಸ ಮತ್ತು ಯೋಗಾಸನಗಳು ನಿಮ್ಮ ನಿತ್ಯ ಜೀವನದ ಒಂದು ಭಾಗವಾಗಿಬಿಡುತ್ತದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ, ಹವ್ಯಾಸಗಳಲ್ಲಿ, ಜೀವನ ಶೈಲಿಯಲ್ಲಿ ಸಕಾರಾತ್ಮಕ ಬದಲಾವಣೆಯಾಗುವುದನ್ನು ನೀವು ಗಮನಿಸಬಹುದು. ಈ ಬದಲಾವಣೆಗಳು ನಿಮಲ್ಲೇ ಮೆಚ್ಚುಗೆ ಮೂಡಿಸುತ್ತವೆ. ಜೀವನ ಪರ್ಯಂತ ಒಂದು ಉತ್ತಮ ಹವ್ಯಾಸವನ್ನು ಅನುಸರಿಸುವ ಮನಸ್ಥಿತಿಯಿಂದ ನಿಮ್ಮ ಬಗ್ಗೆ ನಿಮಗೇ ಹೆಮ್ಮೆಯುಂಟಾಗಿ ನೀವು ಯೋಗಾಭ್ಯಾಸಕ್ಕೆ ಕೃತಜ್ಞರಾಗಿರುತ್ತೀರಿ.

ಯೋಗಾಭ್ಯಾಸದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ಕೆಲವು ಮಾರ್ಗದರ್ಶಿ ಸಲಹೆಗಳು ನೆರವಾಗುತ್ತವೆ :

• ನೀವು ನಿದ್ರೆ ಮಾಡುವುದಕ್ಕೆ 2-3 ಗಂಟೆಗಳ ಮುನ್ನ ಅಲ್ಪ ಆಹಾರವನ್ನು ಸೇವಿಸಿ.

• ನಿತ್ಯ ನಿದ್ರೆಯ ಸಮಯವನ್ನು ನಿಗದಿಪಡಿಸಿಕೊಂಡು ಕನಿಷ್ಟ  7-8 ಗಂಟೆಯ ಕಾಲ ನಿದ್ದೆ ಮಾಡಿ.

• ರಾತ್ರಿ ವೇಳೆಯಲ್ಲಿ ದೀರ್ಘ ಕಾಲ ಲ್ಯಾಪ್‍ಟಾಪ್ ನೋಡುವುದು, ಟಿವಿ ನೊಡುವುದು, ಮೊಬೈಲ್ ಬಳಸುವುದನ್ನು ಬಿಡಿ. ಏಕೆಂದರೆ ಇದರಿಂದ ನಿಮ್ಮ ನಿದ್ರೆಗೆ ಭಂಗ ಉಂಟಾಗುತ್ತದೆ.

• ಯೋಗಾಭ್ಯಾಸವನ್ನು ನಿಗದಿತ ಸ್ಥಳದಲ್ಲಿ, ನಿರ್ದಿಷ್ಟ ಸಮಯದಲ್ಲಿ ಮಾಡಿ. ಇದರಿಂದ ಸಮಯ ಪ್ರಜ್ಞೆ ಹೆಚ್ಚಾಗುವುದೇ ಅಲ್ಲದೆ ಸ್ಥಳವನ್ನು ನಿಗದಿಪಡಿಸಲು ಸೋಮಾರಿತನ ಇರುವುದಿಲ್ಲ.

ಗುಂಪು ಚಟುವಟಿಕೆ : ಯೋಗಾಭ್ಯಾಸವನ್ನು ಅರ್ಧಕ್ಕೇ ಕೈಬಿಡುವುದನ್ನು ತಪ್ಪಿಸಲು ನಿಮ್ಮ ಯೋಗಾಭ್ಯಾಸವನ್ನು ಆಸಕ್ತಿದಾಯಕವಾಗಿ ರೂಪಿಸಿಕೊಳ್ಳಿ. ನಿಮ್ಮ ಸ್ನೇಹಿತರೊಡನೆ ಅಥವಾ ಒಂದು ತಂಡದೊಡನೆ ಯೋಗಾಭ್ಯಾಸ ನಡೆಸಿ. ಇದರಿಂದ ಗುಂಪು ಚಟುವಟಿಕೆ ಹೆಚ್ಚಾಗುತ್ತದೆ ಮತ್ತು ನೀವು ನಿಮ್ಮ ಚಟುವಟಿಕೆಯನ್ನು ಆಸ್ವಾದಿಸಬಹುದು. ಒಟ್ಟಾಗಿ ಇದರ ಪ್ರಯೋಜನ ಪಡೆಯಬಹುದು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org