ಮಲಗುವ ಸಮಯದಲ್ಲಿ ಮೊಬೈಲ್ ಫೋನ್ / ಕಂಪ್ಯೂಟರ್ ಬಳಕೆ ಸರಿಯೇ?

ರಾತ್ರಿಯ ವೇಳೆ, ಜಾಲತಾಣಗಳನ್ನು ಮತ್ತು ಇ-ಮೇಲ್ ಜಾಲಾಡುವ ಅಭ್ಯಾಸವು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

 ನಿಮಗೆ  ತಡ ರಾತ್ರಿಯವರೆಗೂ ಮೊಬೈಲ್ ಫೋನ್ ಬಳಸುವ ಹವ್ಯಾಸವಿದೆಯೇ? ಅಥವಾ ಲ್ಯಾಪ್ ಟಾಪ್ ನಿಮ್ಮ ಜೊತೆಗಿರುತ್ತದೆಯೇ? ಈ ಅಭ್ಯಾಸಗಳು ನಿಮಗೆ ಇರುವುದೇ ಆದರೆ, ಈಗಾಗಲೇ ನೀವು ನಿದ್ರಾಹೀನತೆಗೆ ತುತ್ತಾಗಿರುತ್ತೀರಿ ಅಥವಾ ಶೀಘ್ರದಲ್ಲೇ ನಿದ್ರಾಹೀನತೆ ಸಮಸ್ಯೆಯು ನಿಮ್ಮನ್ನು ಮುತ್ತಿಕೊಳ್ಳುವ ಸಾಧ್ಯತೆಯಿದೆ.

ತಂತ್ರಜ್ಞಾನ ಮತ್ತು ವಿದ್ಯುನ್ಮಾನ ಉಪಕರಣಗಳು ನಮ್ಮ ಜೀವನವನ್ನು ಆವರಿಸಿಕೊಂಡುಬಿಟ್ಟಿವೆ. ಅವುಗಳ ಹಿತಮಿತ ಬಳಕೆಗಿಂತ ದುರ್ಬಳಕೆ ಮಾಡುವ ಪ್ರಮಾಣವೇ ಹೆಚ್ಚಾಗಿದೆ. ತಂತ್ರಜ್ಞಾನದ ಬಳಕೆ ನಿಮ್ಮ ನಿದ್ರೆಯನ್ನು ಹಾಳುಗೆಡವಿದೆ ಎಂದರೆ, ನಿಮ್ಮ ವಿದ್ಯುನ್ಮಾನ ಉಪಕರಣಗಳ ಬಳಕೆ ಮಿತಿಮೀರಿದೆ ಎಂದೇ ಅರ್ಥ.

ಯಾವುದೇ ವ್ಯಕ್ತಿಯ ದೇಹಸ್ಥಿತಿ ಆರೋಗ್ಯದಿಂದ ಕೂಡಿದ್ದು, ಉತ್ತಮವಾಗಿರಬೇಕಾದರೆ ಪ್ರತಿನಿತ್ಯ ಕನಿಷ್ಟ 6 ರಿಂದ 8 ಗಂಟೆಗಳ ಕಾಲ ನಿದ್ರಿಸುವುದು ಅತ್ಯವಶ್ಯ. ಆದರೆ, ರಾತ್ರಿಯ ವಿಶ್ರಾಂತಿ ಯಸಮಯದಲ್ಲಿ ವಿದ್ಯುನ್ಮಾನ ಉಪಕರಣಗಳ ಬಳಕೆಗೆ ಸಮಯ ವ್ಯಯಿಸಿದರೆ; ಉದಾಹರಣೆಗೆ, ಮೊಬೈಲ್ ಫೋನ್ ಅಥವಾ ಇ-ಮೇಲ್ ವೀಕ್ಷಣೆ, ಸಾಮಾಜಿಕ ಜಾಲತಾಣಗಳನ್ನು ಜಾಲಾಡುವುದು ಮುಂತಾದವುಗಳಲ್ಲಿ  ತೊಡಗಿದರೆ ನಿದ್ದೆಗೆ ಅಡೆತಡೆಯುಂಟಾಗುತ್ತದೆ.

ವಿದ್ಯುನ್ಮಾನ ಉಪಕರಣಗಳ ಮಿತಿಮೀರಿದ ಬಳಕೆಯಿಂದ ಉಂಟಾಗುವ ಕೆಲವು ಸಮಸ್ಯೆಗಳು ಹೀಗಿವೆ:

  • ವಿಶ್ರಾಂತಿಯ ಅವಧಿಯು ಕುಗ್ಗುತ್ತದೆ.
  • ದೀರ್ಘಕಾಳಿಕ ನಿದ್ರಾಹೀನತೆಯ ಸಮಸ್ಯೆ ಉಂಟಾಗಬಹುದು.
  • ವಿವೇಚನಾ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಲ್ಲದು.
  • ಉದ್ಯೋಗ ಸ್ಥಳಗಳಲ್ಲಿ ಕಾರ್ಯಕ್ಷಮತೆ ಕಡಿಮೆಯಾಗಬಹುದು ಅಥವಾ ಶಾಲೆಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿ ಕಳೆದುಕೊಳ್ಳಬಹುದು.
  • ಉದ್ವೇಗ, ಕಳವಳ ಮತ್ತು ಇನ್ಸೋಮ್ನಿಯಾದಂತಹ ಮಾನಸಿಕ ಅಸ್ವಸ್ಥತೆಯುಂಟಾಗಬಹುದು.

“ನಮ್ಮ ಮಕ್ಕಳು ರಾತ್ರಿ ಮಲಗುವ ವೇಳೆಯಲ್ಲಿ ನಿದ್ದೆಬಿಟ್ಟು ಆನ್ ಲೈನ್ ಗೇಮ್ ಆಡುತ್ತಿರುತ್ತಾರೆ ಎಂದು ಪೋಷಕರು ದೂರುವುದು ಇತ್ತೀಚೆಗೆ ಹೆಚ್ಚುತ್ತಿದೆ” ಎಂದು “ಎಸ್ ಹೆಚ್ ಯು ಟಿ” (ಸರ್ವೀಸ್ ಫಾರ್ ಹೆಲ್ತಿ ಯೂಸ್ ಆಫ್ ಟೆಕ್ನಾಲಜಿ)ಯ ಸಂಸ್ಥಾಪಕರು ಹಾಗೂ ಸೈಕಾಲಜಿಸ್ಟ್ ಆಗಿರುವ ಡಾ.ಮನೋಜ್ ಶರ್ಮಾ ಹೇಳುತ್ತಾರೆ. ಎಸ್ ಹೆಚ್ ಯು ಟಿಯಲ್ಲಿ ಈ ರೀತಿಯ ಉಪಕರಣಗಳ ಅತಿಯಾದ ಬಳಕೆಯಿಂದ ಸಮಸ್ಯೆಗೀಡಾದವರಿಗೆ ಚಿಕಿತ್ಸೆ ನೀಡಲಾಗುತ್ತದೆ. ”ಬಹಳಷ್ಟು ಮಕ್ಕಳು ಇತರೆ ರಾಷ್ಟ್ರಗಳಲ್ಲಿನ ಮಕ್ಕಳಜೊತೆಗೆ ಆನ್ಲೈನ್ ಟೀಮ್ ಗೇಮ್ ಗಳನ್ನು ಆಡುತ್ತಿರುತ್ತಾರೆ. ಅಲ್ಲಿನ ಸಮಯವು ನಮ್ಮ ಸಮಯಕ್ಕಿಂತ ವಿಭಿನ್ನವಾಗಿರುತ್ತದೆ. ಇದು ನಮ್ಮಮಕ್ಕಳ ರಾತ್ರಿಯ ನಿದ್ದೆಯನ್ನು ಹಾಳುಮಾಡುತ್ತದೆ ಮತ್ತು ಬೆಳಗಿನ ಸಮಯದಲ್ಲಿ ತೂಕಡಿಕೆ ಮತ್ತು ದಣಿವನ್ನುಂಟುಮಾಡುತ್ತದೆ.” ಎಂದು ಡಾ.ಶರ್ಮಾ ವಿವರಿಸುತ್ತಾರೆ.

“ಒಬ್ಬವ್ಯಕ್ತಿ ಹೆಚ್ಚಾಗಿ ರಾತ್ರಿಯ ವೇಳೆಯಲ್ಲೇ ಏಕೆ “ಆನ್ ಲೈನ್”ನಲ್ಲಿರುತ್ತಾನೆ?” ಈ ಪ್ರಶ್ನೆಗೆ “ಒಂಟಿತನ, ಬೇಸರ, ಉತ್ಸುಕತೆ ಮತ್ತು ಒತ್ತಡಗಳು ಸದಾ ಆನ್ ಲೈನ್ ನಲ್ಲಿರುವುದಕ್ಕೆ ಮತ್ತು ವಿದ್ಯುನ್ಮಾನ ಉಪಕರಣಗಳನ್ನು ಹೆಚ್ಚುಹೆಚ್ಚಾಗಿ ಬಳಸುವುದಕ್ಕೆ ಪ್ರಮುಖ ಕಾರಣಗಳಾಗಿವೆ. ಮತ್ತೆ ಕೆಲವರಿಗೆ ಮಲಗುವಾಗ ವಿಡಿಯೋಗಳನ್ನು ನೋಡುವ ಅಥವಾ ಸಂಗೀತವನ್ನು ಆಲಿಸುವ ಅಭ್ಯಾಸವಿರುತ್ತದೆ. ಇದು ಜನರನ್ನು ತಂತ್ರಜ್ಞಾನ ಮತ್ತು ವಿದ್ಯುನ್ಮಾನ ಉಪಕರಣಗಳ ವ್ಯಸನಕ್ಕೆ ಬೀಳಿಸುತ್ತದೆ” ಎಂದು ತಜ್ಞರು ಉತ್ತರಿಸುತ್ತಾರೆ.

ತಂತ್ರಜ್ಞಾನವನ್ನು ಬಳಸುವ, ಖಾಸಗಿ ಮತ್ತು ಸರ್ಕಾರಿ ವಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 250 ಕಾರ್ಮಿಕರ ಮೇಲೆ ಎಸ್ ಹೆಚ್ ಯು ಟಿ ಅಧ್ಯಯನ ನಡೆಸಿದೆ. ಶೇಕಡಾ 58.8ರಷ್ಟು ಮಂದಿ ತಮ್ಮ ಕಛೇರಿಗಳಲ್ಲಿ ಅಥವಾ ಮನೆಗಳಲ್ಲಿ ಮೊಬೈಲ್ ಫೋನ್, ಡೆಸ್ಕ್ ಟಾಪ್ ಅಥವಾ ಲ್ಯಾಪ್ ಟಾಪ್ ಬಳಸುತ್ತಾರೆ ಎಂದು ಅಧ್ಯಯನದಿಂದ ಕಂಡುಕೊಂಡಿದೆ. ಅಂತರ್ಜಾಲ ಬಳಕೆಯ ಕಾರಣದಿಂದ ಸುಮಾರು ಶೇಕಡಾ 42ರಷ್ಟು ಮಂದಿಯ ಬಹಳಷ್ಟು ಕೆಲಸಕಾರ್ಯಗಳು ಮುಂದೂಡಲ್ಪಡುತ್ತಿವೆ ಅಥವಾ ವಿಳಂಬವಾಗುತ್ತಿವೆ ಎಂದು ಸಂಸ್ಥೆಯು ವರದಿಮಾಡಿದೆ. ಶೇಕಡಾ 5ರಷ್ಟು ಮಂದಿ ತಮ್ಮ ಊಟ - ನಿದ್ದೆಯನ್ನುಬಿಟ್ಟು ಆನ್ ಲೈನಲ್ಲಿ ತೊಡಗಿರುತ್ತಾರೆ ಎಂದೂ ಅಧ್ಯಯನ ವರದಿಯು ಹೇಳುತ್ತದೆ.

ಕೆಲವರು ನಡುರಾತ್ರಿಯಲ್ಲಿ ತಮ್ಮ ನಿದ್ದೆಯನ್ನು ಬಿಟ್ಟು ಕನಿಷ್ಟ 4ಬಾರಿ ತಮ್ಮ ಸಾಮಾಜಿಕ ಜಾಲತಾಣಗಳನ್ನು ಜಾಲಾಡುವುದು ಮತ್ತು ಇ-ಮೇಲ್ ಗಳನ್ನು ವೀಕ್ಷಿಸುವುದು ಮುಂತಾದ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ ಎಂದೂ ಅದು ತಿಳಿಸಿದೆ. ಇದರಿಂದ ಸುಮಾರು ಒಂದೂವರೆ ಗಂಟೆಗಳ ಕಾಲ ಅವರ ನಿದ್ರೆಯ ಅವಧಿಯಲ್ಲಿ; ಮತ್ತು ಬೆಳಗ್ಗೆ ಏಳುವ ಸಮಯದಲ್ಲಿ ವಿಳಂಬ ಉಂಟಾಗುತ್ತದೆ ಎಂದೂ ಅಧ್ಯಯನ ವರದಿಯು ಹೇಳುತ್ತದೆ.

ರಾತ್ರಿಯ ವೇಳೆಯಲ್ಲಿತಂತ್ರಜ್ಞಾನವನ್ನು - ವಿದ್ಯುನ್ಮಾನ ಉಪಕರಣಗಳನ್ನು ಬಳಸುವುದರಿಂದ ನಿದ್ರೆಯ ಚಕ್ರವನ್ನು ನಿಯಂತ್ರಿಸುವ ಮೆಲಟೊನಿನ್ ಎಂಬ ಹಾರ್ಮೋನ್ ಹೆಚ್ಚು ಬಾಧೆಗೊಳಗಾಗುತ್ತದೆ. ಇದರಿಂದ ನಿದ್ರೆಯ ಮೇಲೆ ನೇರ ಪರಿಣಾಮ ಉಂಟಾಗುತ್ತದೆ.

ನೀವೇನು ಮಾಡಬಹುದು?

ನಿಮ್ಮ ದೇಹವನ್ನು ಸಹಜ ನಿದ್ರೆಗೆ ಒಗ್ಗಿಸಿಕೊಳ್ಳಲು ಅನುಕೂಲವಾಗುವಂತಹ ಕೆಲವು ಸೂತ್ರಗಳನ್ನು ಇಲ್ಲಿ ನೀಡಲಾಗಿದೆ :

  • ಮಲಗುವುದಕ್ಕೆ ಕನಿಷ್ಟ ಒಂದು ಗಂಟೆ ಮುಂಚಿತವಾಗಿಯೇ ನಿಮ್ಮ ವಿದ್ಯುನ್ಮಾನ ಉಪಕರಣಗಳನ್ನು ಸ್ವಿಚ್ ಆಫ್ ಮಾಡಿ.
  • ಮೊಬೈಲ್ ಫೋನಲ್ಲಿ ಅಲಾರಾಂ ಇರಿಸಿಕೊಳ್ಳುವ ಬದಲು, ನಿಜವಾದ ಅಲಾರಾಂ ಗಡಿಯಾರಗಳನ್ನೇ ಬಳಸಿ. ಇದರಿಂದ ನಿಮಗೆ ಮೊಬೈಲ್ ಫೋನನ್ನು ಬಳಸುವ ತುಡಿತ ಕಡಿಮೆಯಾಗಬಹುದು.
  • ಮಲಗುವ ಹಾಗೂ ಏಳುವ ಸಮಯ ಸ್ಥಿರವಾಗಿರಲಿ. ಹೀಗೆ ಮಾಡುವುದರಿಂದ ದೇಹವು ಒಂದೆರಡು ವಾರಗಳಲ್ಲಿ ತನ್ನಿಂದ ತಾನೇ ನಿರ್ದಿಷ್ಟ ಅವಧಿಗೆ ಹೊಂದಿಕೊಂಡು ನಿದ್ರಾಚಕ್ರವನ್ನು ರೂಪಿಸಿಕೊಳ್ಳುತ್ತದೆ.
  • ರಾತ್ರಿವೇಳೆ ನಿಮ್ಮ ನಿದ್ರೆಯು ಅಪೂರ್ಣವಾಗಿದ್ದರೆ, ಅದನ್ನು ಹಗಲಿನಲ್ಲಿ ಸರಿದೂಗಿಸಲು ಪ್ರಯತ್ನಿಸಬೇಡಿ.
  • ಮಲಗುವ ಮುನ್ನ ಕಾಫಿ ಅಥವಾ ಯಾವುದೇ ರೀತಿಯ ಉತ್ತೇಜಕ ಪಾನೀಯ (ಎನರ್ಜಿ ಡ್ರಿಂಕ್ಸ್) ಸೇವಿಸಬೇಡಿ. ನಿಮ್ಮ ನಿದ್ರೆಗೆ ಭಂಗವಾಗದಂತೆ ಯಾವ ಸಮಯದಲ್ಲಿ ಈ ಪಾನೀಯಗಳನ್ನು ಸೇವಿಸಬಹುದು ಎಂದು ನೀವೇ ಗಮನಿಸಿ, ಸಮಯ ನಿಗದಿ ಮಾಡಿಕೊಳ್ಳಿ.
  • ದೈನಂದಿನ ಶಾರೀರಿಕ ಚಟುವಟಿಕೆಗಳು ನಿಮ್ಮ ಸುಖನಿದ್ರೆಗೆ ಸಹಕರಿಸುತ್ತವೆ.
  • ರಾತ್ರಿಯ ಊಟ ಮಿತವಾಗಿರಲಿ, ಮಲಗುವುದಕ್ಕೆ ಕನಿಷ್ಠ ಎರಡು ಗಂಟೆ ಮುಂಚಿತವಾಗಿ ಆಹಾರ ಸೇವಿಸಿ.

References

Shrivastava, Apoorva, Manoj Kumar Sharma, and Palaniappan Marimuthu. "Internet addiction at workplace and it implication for workers life style: Exploration from Southern India." Asian journal of psychiatry 32 (2018): 151-155.

Shyam, H. R., Manoj Kumar Sharma, and T. Palanichamy. "Exploration of technology use pattern among teenagers and its relationship with psychological variables." ASEAN J Psychiatry 17 (2016): 239-49.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org