ನಿಮ್ಮ ಪ್ರೇಮ ಸಂಬಂಧ ಆರೋಗ್ಯಕರವಾಗಿದೆಯೇ?

ನಿಮ್ಮ ಪ್ರೇಮ ಸಂಬಂಧ ಆರೋಗ್ಯಕರವಾಗಿದೆಯೇ?

ಸಂಗಾತಿಗಳ ನಡುವೆ ಕಲಹ, ಭಿನ್ನಾಭಿಪ್ರಾಯಗಳು ಸಾಮಾನ್ಯ. ಈ ಗೊಂದಲ, ಗೋಜಲುಗಳನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಪರಸ್ಪರ ಸೂಕ್ತ ವರ್ತನೆಗಳನ್ನು ಪ್ರದರ್ಶಿಸುವುದು ಬಹುಮುಖ್ಯ. ಹಾಗಲ್ಲದೇ ಒಬ್ಬರನ್ನೊಬ್ಬರು ದೂಷಿಸುತ್ತಾ ಶೋಷಿಸುವ ಹಾದಿಯನ್ನು ಹಿಡಿದರೆ ಸಂಬಂಧದ ಆರೋಗ್ಯ ಹದಗೆಟ್ಟಿದೆ, ಅದು ಸಕಾರಾತ್ಮಕವಾದ ಸಂಬಂಧವಾಗಿರದೇ ಅನಾರೋಗ್ಯಕರವಾದ, ನಿಂದನೀಯ ಸಂಬಂಧವಾಗಿ ಬದಲಾಗುತ್ತಿದೆ ಎಂದರ್ಥ. ವ್ಯಕ್ತಿಯನ್ನು ಮಾನಸಿಕವಾಗಿ ಕುಗ್ಗಿಸುವ, ಆಸೆ-ಆಕಾಂಕ್ಷೆಗಳನ್ನು ಜರ್ಝರಿತಗೊಳಿಸುವ, ಭಾವನಾತ್ಮಕವಾಗಿ ಶೋಷಿಸುವ, ಆತ್ಮಗೌರವಕ್ಕೆ ಚ್ಯುತಿ ತರುವ ಪ್ರೇಮ ಸಂಬಂಧಗಳು ಮಾನಸಿಕ-ಭಾವನಾತ್ಮಕ ಆರೋಗ್ಯದ ದಿಕ್ಕುತಪ್ಪಿಸುವುದು ಖಚಿತ.

ಪ್ರೇಮ ಸಂಬಂಧಗಳ ಬಯಕೆಯೇಕೆ?

ಸಾಮಾನ್ಯವಾಗಿ ಸಂಗಾತಿಯನ್ನು ಹೊಂದುವ ಬಯಕೆ ಹದಿಹರೆಯದಲ್ಲೇ ಪ್ರಾರಂಭವಾಗುವುದು. ಪ್ರೇಮ ಸಂಬಂಧ ನಾವು ಹಿಂದೆ ಅನುಭವಿಸಿದ ಸಂಬಂಧಗಳಿಗಿಂತಲೂ ಬಹು ಭಿನ್ನ. ಪ್ರೇಮ ಸಂಬಂಧಗಳು ಮನಸ್ಸನ್ನು ಸಂಪೂರ್ಣವಾಗಿ ಆವರಿಸಿ, ಭಾವತೀವ್ರತೆಯನ್ನು, ಉತ್ಕಟತೆಯನ್ನುಂಟು ಮಾಡುವುದು. ಒಬ್ಬರ ಮನಸ್ಸಿನಲ್ಲಿ ಒಬ್ಬರಿರುವ ಕಲ್ಪನೆ, ಪ್ರೇಮಿಯ ಇರುವಿಕೆಯಿಂದ ತಾನು ಪರಿಪೂರ್ಣವಾಗುವೆನೆಂಬ ಭಾವನೆ, ತನಗಾಗೇ ಮತ್ತೊಬ್ಬರಿರುವುದು ಎಂಬ ಆಲೋಚನೆ... ಇವು ಪ್ರೇಮಸಂಬಂಧವನ್ನು ಹೊಂದುವ, ಸಾಂಗತ್ಯಕ್ಕೆ ಹವಣಿಸುವ ಬಯಕೆಯನ್ನು ತೀವ್ರಗೊಳಿಸುವುದು. ಆದರೆ ಎಷ್ಟೋ ಬಾರಿ ಸಂಬಂಧ ಸಕಾರಾತ್ಮಕವಾಗಿದೆಯೇ? ತನ್ನ ಭಾವನೆ, ವ್ಯಕ್ತಿತ್ವಕ್ಕೆ ಗೌರವ ಸಿಗುತ್ತಿದೆಯೇ? ಇದು ಬರಿಯ ವ್ಯಾಮೋಹವೇ, ಪ್ರೇಮವೇ? ಎಂದು ಅವಲೋಕಿಸಿ ನಿರ್ಧರಿಸಲು ಯುವ ಮನಸ್ಸುಗಳು ಸೋಲುವುದರಿಂದ ನಿಂದನೀಯ ಸಂಬಂಧದೊಳಗೆ ನರಳುತ್ತಾ ಶೋಚನೀಯವಾದ ಸಂಬಂಧಗಳನ್ನು ಸಲಹುತ್ತಿರುತ್ತಾರೆ. 

22ರ ನಿಶಾಂತ್ ಹೇಳಿದ್ದಿಷ್ಟು: ಕಾಲೇಜಿನ ಗೆಳತಿ ಮತ್ತು ನಾನು ಇಷ್ಟಪಡಲಾರಂಭಿಸಿ ಮೂರು ವರ್ಷಗಳಾಗಿವೆ. ಮೊದಲಿಗೆ ಎಲ್ಲವೂ ಚೆನ್ನಾಗಿಯೇ ಇತ್ತು. ಈಗೀಗ ನಮ್ಮ ಸಂಬಂಧ ಗೊಂದಲದ ಗೂಡಾಗಿದೆ. ಆಕೆಯ ಮನಸ್ಸಿನಲ್ಲೇನಿದೆ, ಸಂಬಂಧದ ಬಗ್ಗೆ ನಿಜಕ್ಕೂ ಸೀರಿಯಸ್ ಆಗಿದ್ದಾಳಾ ಎಂಬುದೇ ತಿಳಿಯದು. ಆಕೆ ಎಲ್ಲವುದಕ್ಕೂ ನಿಬಂಧನೆ ಹಾಕುತ್ತಾಳೆ. ಗೆಳೆಯರೊಡನೆ ಹೊರ ಹೋಗುವಂತಿಲ್ಲ, ನನ್ನ ವೀಕೆಂಡ್ ಪ್ಲಾನ್, ಡ್ರೆಸಿಂಗ್ ಹೇಗಿರಬೇಕೆಂಬುದು ಆಕೆ ಹೇಳಿದಂತೆಯೇ ನಡೆಯಬೇಕು. ಬಿಟ್ಟಿರಲು ಸಾಧ್ಯವಿಲ್ಲ ಎನ್ನುತ್ತಾಳೆ. ಆದರೆ ಚಿಕ್ಕದೇನಾದರೂ ನಡೆದರೂ ನನ್ನನ್ನು ದಿನಗಟ್ಟಲೆ ಅವಾಯ್ಡ್ ಮಾಡಿ ಹಿಂಸಿಸುತ್ತಾಳೆ. ಅನಿಸಿದ್ದನ್ನು ಹಂಚಿಕೊಳ್ಳಲೂ ದಿಗಿಲಾಗುತ್ತದೆ. ಸಣ್ಣದಕ್ಕೂ ಕೋಪಿಸಿಕೊಳ್ಳುವುದು, ಟೀಕಿಸಿ ಅವಮಾನಿಸುವುದು, ಸಂಬಂಧ ಮುಂದುವರೆಸುವುದು ಬೇಡ ಎಂದು ಹೆದರಿಸುವುದು ಮಾಡುತ್ತಾಳೆ. ಸಂಬಂಧವನ್ನು ಹೇಗೆ ಮುಂದುವರೆಸಬೇಕೋ ತಿಳಿಯುತ್ತಿಲ್ಲ. ಇದು ವೃತ್ತಿಯ ಮೇಲೂ ಪರಿಣಾಮವನ್ನುಂಟು ಮಾಡುತ್ತಿದೆ. ಹಲವು ಬಾರಿ ಸಹಿಸಿಕೊಂಡು ಸಾಕಾಗಿದೆ ಎನಿಸುತ್ತದೆ. ಸಂಬಂಧದಲ್ಲಿ ನಾನು ಸಂತೋಷವಾಗಿಯೂ ಇಲ್ಲ. ಬಿಡಲೂ ಆಗುತ್ತಿಲ್ಲ.

ನಿಂದಿಸುವ ಸಂಗಾತಿಯನ್ನು ಸಹಿಸಿಕೊಳ್ಳುವುದೇಕೆ?

ಆರ್ಥಿಕ ಅವಲಂಬನೆ, ಕೌಟುಂಬಿಕ ಜವಾಬ್ದಾರಿಗಳ ಕಾರಣದಿಂದ ಎಷ್ಟೋ ಬಾರಿ ವೈವಾಹಿಕ ಜೀವನದಲ್ಲಿ ಸಂಗಾತಿಯಿಂದ ನಡೆಯುವ ಅನಾದರ, ನಿಂದನೆಗಳನ್ನು ಸುಮ್ಮನೇ ಸಹಿಸಿಕೊಳ್ಳುತ್ತಿರುತ್ತಾರೆ. ಆದರೆ ಆ ರೀತಿಯಾದ ಯಾವುದೇ ಕಟ್ಟುಪಾಡುಗಳಿಗೆ ಒಳಪಡದ ಪ್ರೇಮ ಸಂಬಂಧಗಳಿಂದ ಹಿಂಸಿಸಲ್ಪಟ್ಟಿದ್ದರೂ ಸಹಿಸುವ ಕಾರಣಗಳು ಹಲವು:

  • ನಿಂದನೀಯ ಸಂಬಂಧದೊಳಗೆ ಸಿಲುಕಿದ್ದೇನೆಂಬ ಅರಿವಿಲ್ಲದಿರುವುದು: ಆರೋಗ್ಯಕರ ಸಂಬಂಧಗಳು ಹೇಗಿರುತ್ತವೆ ಎಂಬ ತಿಳುವಳಿಕೆಯೇ ಇಲ್ಲದಿದ್ದಾಗ ಅನಾರೋಗ್ಯಕರ ಸಂಬಂಧದೊಳಗಿದ್ದೇನೆ ಎಂಬುದೇ ತಿಳಿಯದು
  • ನಿಂದನೆ, ಶೋಷಣೆ ಮಾಮೂಲು ಎಂದು ಭಾವಿಸಿರುವುದು: ನಿಂದನೀಯ ಕುಟುಂಬ, ಅಂತಹುದೇÀ ಸಂಬಂಧಗಳನ್ನು ನೋಡಿ ಬೆಳೆದಿದ್ದಲ್ಲಿ ಸಂಬಂಧಗಳಲ್ಲಿ ನಿಂದನೆ ಮಾಮೂಲು ಎನಿಸಿರುವುದು
  • ಸಂಗಾತಿ ಸರಿಹೋಗುತ್ತಾರೆ, ಸಡಿಪಡಿಸಬಲ್ಲೆ ಎಂದುಕೊಳ್ಳುವುದು: ಪರಿಸ್ಥಿತಿಯ ಕಾರಣದಿಂದ ಈ ವರ್ತನೆಯಿದೆ. ಕ್ರಮೇಣ ಸರಿಹೋಗುತ್ತಾರೆ, ತಾನು ಸರಿಪಡಿಸುತ್ತೇನೆ ಎಂಬ ಭಾವ
  • ಸಂಗಾತಿಯನ್ನು ಹೊಂದುವುದೇ ಅತ್ಯಂತ ಮುಖ್ಯವೆಂಬ ಸಾಮಾಜಿಕ ಒತ್ತಡ: ಪ್ರೇಮಸಂಬಂಧ ಹೊಂದಿರದಿದ್ದರೆ ನಿಷ್ಪ್ರಯೋಜಕರೆಂದೂ, ಸಂಬಂಧ ಮುರಿದುಕೊಂಡರೆ ಸ್ನೇಹಿತರು-ಕುಟುಂಬ ವಲಯದಲ್ಲಿ ನಗೆಪಾಟಲಿಗೀಡಾಗುವೆನೆಂದೂ ಭಾವಿಸುವುದು
  • ಬಿಟ್ಟಿರಲಾರೆನೆಂಬ ಭಯ: ಸಂಗಾತಿಯ ಅಸ್ಥಿತ್ವದೊಡನೆ ವಿಪರೀತ ಗುರುತಿಸಿಕೊಳ್ಳುವುದರಿಂದ ಹಿಂಸೆಗೊಳಗಾಗಿದ್ದರೂ ಬಿಟ್ಟಿರಲಾರೆನೆಂಬ, ತನ್ನನ್ನು ತಾನು ಸಂಭಾಳಿಸಿಕೊಳ್ಳಲಾರೆನೆಂಬ ಭಯ.
  • ಕೀಳರಿಮೆ, ಆತ್ಮಗೌರವದ ಕೊರತೆ: ಸಂಗಾತಿಯ ವರ್ತನೆಗೆ ತಾನೇ ಕಾರಣ, ತನಗೆ ಅರ್ಹತೆ ಇರುವುದಿಷ್ಟು. ಇದಕ್ಕಿಂತ ಒಳ್ಳೆಯ ಸಂಬಂಧ ಸಿಗಲಾರದು ಎಂಬ ಆತಂಕವಿರುವುದರಿಂದ

ಆರೋಗ್ಯಕರ ಸಂಬಂಧಗಳು ಹೇಗಿರುವವು?

ಉತ್ತಮ ಪ್ರೇಮ ಸಂಬಂಧಗಳು ಎಷ್ಟು ಸಂತೋಷ, ಸಂತೃಪ್ತಿಯನ್ನು ಮೂಡಿಸಬಲ್ಲವೋ ಅಷ್ಟೇ ವೇದನೆ, ಗೊಂದಲಗಳನ್ನು ನಿಂದನೀಯ ಸಂಬಂಧಗಳು ತರಬಲ್ಲವು. ಸಕಾರಾತ್ಮಕ ಸಂಬಂಧಗಳು ವ್ಯಕ್ತಿಯ ಭಾವನಾತ್ಮಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತವೆ. ಭಾವನಾತ್ಮಕವಾಗಿಯೂ ಆರೋಗ್ಯವಂತನಾಗಿರುವ ವ್ಯಕ್ತಿಯ ದೇಹ-ಮನಸ್ಸುಗಳಷ್ಟೇ ಪ್ರಫುಲ್ಲಿತವಾಗಿಯೂ ಆರಾಮವಾಗಿಯೂ ಇರಲು ಸಾಧ್ಯ.

ತಾನು ಋಣಾತ್ಮಕ ಪ್ರೇಮ ಸಂಬಂಧದೊಳಗೆ ಸಿಲುಕಿದ್ದೇನೆಯೇ ಎಂದು ಅರಿಯಲು ಸಕಾರಾತ್ಮಕ ಸಂಬಂಧಗಳು ಯಾವ ರೀತಿಯಲ್ಲಿರುತ್ತವೆ ಎಂದು ತಿಳಿಯುವುದು ಮುಖ್ಯ. ಆರೋಗ್ಯಕರ ಸಂಬಂಧದ ಕೆಲ ಲಕ್ಷಣಗಳು ಇಂತಿವೆ:

  • ಮುಕ್ತ ಸಂವಹನ, ಸ್ಪಂದನೆ: ತನ್ನ ಭಾವನೆ, ಅನಿಸಿಕೆಗಳನ್ನು ಮುಕ್ತವಾಗಿ, ಪ್ರಾಮಾಣಿಕವಾಗಿ ಹಂಚಿಕೊಳ್ಳುವುದರ ಜೊತೆಗೆ ಸಂಗಾತಿಯ ಭಾವವನ್ನು ಗ್ರಹಿಸಿ, ಅಭಿಪ್ರಾಯಗಳನ್ನು ಆಲಿಸಿ ಪರಿಗಣಿಸುವುದು.
  • ಪರಸ್ಪರ ಗೌರವ, ಬೆಂಬಲ: ಸಂಗಾತಿಯ ಮೌಲ್ಯ, ಜೀವನ ಕ್ರಮ, ಆಸಕ್ತಿಗಳನ್ನು ಆದರಿಸುವುದು.  ಕುಟುಂಬ-ಸ್ನೇಹ ವರ್ಗದವರ ಬಗ್ಗೆ ಗೌರವದ ಭಾವ ಹೊಂದಿರುವುದು. ಕನಸುಗಳು, ಆಕಾಂಕ್ಷೆಗಳನ್ನು ಬೆಂಬಲಿಸುತ್ತಾ ಪರಸ್ಪರ ಬೆಳವಣಿಗೆಗ ಸಹಕರಿಸುವುದು.
  • ನಿಯಂತ್ರಿಸದಿರುವುದು: ಎಲ್ಲಿ ಹೋಗಬೇಕು, ಏನು ಮಾಡಬೇಕು ಎಂದು ಆದೇಶಿಸುತ್ತಾ ನಿಯಂತ್ರಿಸದೇ ವೈಯಕ್ತಿಕ ಆಯ್ಕೆಯನ್ನು ಪುರಸ್ಕರಿಸುವುದು
  • ವೈಯಕ್ತಿಕ ಸ್ಪೇಸ್ ನೀಡುವುದು: ಸಂಗಾತಿಗೆ ತನ್ನದೇ ಆದ ವೈಯಕ್ತಿಕ ಬದುಕಿದೆ ಎಂದು ಅರಿತಿರುವುದು. ಹವ್ಯಾಸ, ಆಸಕ್ತಿಗಳನ್ನು ಇಬ್ಬರೂ ಮುಂದುವರೆಸುತ್ತಾ, ತಮ್ಮದೇ ಸ್ನೇಹ-ಸಂಬಂಧದ ವಲಯದಲ್ಲಿ ಆನಂದಿಸುವುದನ್ನು ರೂಡಿಸಿಕೊಂಡಿರುವುದು
  • ಸಂಬಂಧದ ಮೌಲ್ಯ ಅರಿತಿರುವುದು: ಮನಸ್ತಾಪ, ಚರ್ಚೆಗಳಾದಾಗ ವಾದಿಸಿ ತಾನೇ ಗೆಲ್ಲಬೇಕೆಂಬ ಹಪಹಪಿಗಿಂತ ಸಂಬಂಧ ಮುಖ್ಯ ಎಂಬ ತಿಳುವಳಿಕೆ. ಭಿನ್ನಾಭಿಪ್ರಾಯಗಳನ್ನು ವೈಭವೀಕರಿಸದೇ ಬಗೆಹರಿಸಲು ಪ್ರಯತ್ನಿಸುವುದು.
  • ಸ್ವೀಕೃತಿ: ಸಂಗಾತಿಯನ್ನು ಅವರಲ್ಲಿರುವ ಲೋಪದೋಷಗಳು, ಹಿಂದಿನ ಸೋಲುಗಳು, ಮಾಡಿರುವ ತಪ್ಪುಗಳು ಎಲ್ಲವುದರೊಟ್ಟಿಗೆ ಸ್ವೀಕರಿಸುವುದು, ಪ್ರೀತಿಸುವುದು,
  • ಸಾಂಗತ್ಯವನ್ನು ಆನಂದಿಸುವುದು: ಒಟ್ಟಿಗೇ ಸಮಯ ಕಳೆಯುವ ಬಯಕೆ, ಮೆಚ್ಚುಗೆಯ ಮಾತುಗಳನ್ನಾಡುವುದು
  • ನಂಬಿಕೆ: ಸಂಗಾತಿಯ ಮೇಲೆ ದೃಢವಾದ ನಂಬಿಕೆ ಹಾಗೂ ನಂಬಿಕೆ ಗಳಿಸುವ, ಉಳಿಸಿಕೊಳ್ಳುವ ವರ್ತನೆಯನ್ನು ತಾನೂ ತೋರ್ಪಡಿಸುವುದು
  • ದೈಹಿಕ-ಮಾನಸಿಕ ಹಿಂಸೆ ನೀಡದಿರುವುದು: ಎಂತಹ ಸನ್ನಿವೇಶದಲ್ಲೂ, ಯಾವುದೇ ಕಾರಣಕ್ಕೂ ಮಾನಸಿಕವಾಗಿ ಭಯಭೀತಗೊಳಿಸುವ ಬ್ಲಾಕ್ಮೇಲ್ ತಂತ್ರಗಳನ್ನು ಉಪಯೋಗಿಸುವುದಾಗಲೀ, ಆತ್ಮಹತ್ಯೆ ಬೆದರಿಕೆ ಒಡ್ಡುವುದಾಗಲೀ, ಭಾವನಾತ್ಮಕವಾಗಿ ಹಿಂಸಿಸುವುದಾಗಲೀ, ದೈಹಿಕವಾಗಿ ಹಿಂಸಿಸುವುದಾಗಲೀ ಮಾಡದಿರುವುದು.

ನಿಂದನೀಯ ಸಂಬಂಧದೊಳಗೆ ಸಿಲುಕಿದ್ದೀರಾ?

ನಿಂದನೆ, ಶೋóಷಣೆಗೆ ಒಳಗಾಗಿದ್ದೇವೆಯೇ ತಿಳಿಯಲು ಸಂಬಂಧದ ಬೆನ್ನು ಹತ್ತಿ ಓಡುವುದನ್ನು ನಿಲ್ಲಿಸಿ ಸಂಬಂಧ ಆರೋಗ್ಯ ಹೇಗಿದೆ ಎಂದು ವಿಮರ್ಶಿಸಿ ನೋಡಬೇಕು.

ಬಹಳ ಕಾಲ ಮುಂದುವರೆದ ಅನಾರೋಗ್ಯಕರ ಸಂಬಂಧಗಳು ಕ್ರಮೇಣ ನಿಂದನೀಯ ಸಂಬಂಧಗಳಾಗಿ ಬದಲಾಗುತ್ತವೆ. ವಿಪರೀತ ಅವಲಂಬನೆ, ಅತಿಯಾದ ಕಾಲ್-ಮೆಸೇಜುಗಳು, ಕೋಪ ಬಂದಾಗ ರೇಗಾಟ, ಕೇಳಿದ್ದನ್ನು ಕೊಡಿಸುವಂತೆ ಹಠಕ್ಕೆ ಬೀಳುವುದು, ಮೌನವಾಗಿದ್ದು ಹಿಂಸಿಸುವುದು ಮೊದಲಾದವು ಅನಾರೋಗ್ಯಕರ ಸಂಬಂಧದ ಪ್ರಾರಂಭಿಕ ಲಕ್ಷಣಗಳಾದರೆ ನಿಂದನೀಯ ಸಂಬಂಧಗಳು ಈ ರೀತಿ ಕಾಣಿಸುವುವು:

  • ಭಿನ್ನಾಭಿಪ್ರಾಯಗಳಾದಾಗ ಆರ್ಭಟಿಸುತ್ತಾ ಅಭಿಪ್ರಾಯಗಳನ್ನು ವ್ಯಕ್ತಪಡಿಸಲೂ ಭಯ ಹುಟ್ಟುವಂತೆ ವರ್ತಿಸುವುದು. ಕ್ಷುಲ್ಲಕ ವಿಚಾರ ದೊಡ್ಡದು ಮಾಡಿ ರಂಪಾಟ ಮಾಡುವುದು
  • ಹೋದ ಸ್ಥಳ, ಭೇಟಿಯಾದವರು, ಮಾಡಿದ ಕೆಲಸ ಎಲ್ಲವನ್ನೂ ಚಾಚೂ ತಪ್ಪದೇ ವಿವರಿಸಿ ಸಮಜಾಯಿಷಿ ಕೊಡಲು ಸಂಗಾತಿಗೆ ಆದೇಶಿಸುವುದು
  • ಅಸೂಯೆ, ಕೋಪದಿಂದ ಸಂಗಾತಿಗೆ ತನಗಿಷ್ಟವಾದವರನ್ನು ಭೇಟಿ ಮಾಡಲು ನಿರ್¨ಂಧಿಸುವುದು
  • ಇಚ್ಚೆ ಇರದಿದ್ದರೂ ದೈಹಿಕ ಸಂಪರ್ಕಕ್ಕೆ ಒತ್ತಾಯಿಸುವುದು.
  • ಸಂಬಂಧ ಮುರಿದಲ್ಲಿ ತೊಂದರೆ ಕೊಡುವುದಾಗಿ, ಇಲ್ಲವೇ ತಾನೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸುವುದು
  • ತನ್ನ ತಪ್ಪು, ದುರ್ವರ್ತನೆಗಳ ಜವಾಬ್ದಾರಿ ತೆಗೆದುಕೊಳ್ಳದೇ ಸಂಗಾತಿಯನ್ನೇ ದೂಷಿಸುವುದು.
  • ವಿಪರೀತ ನಿಯಂತ್ರಣ. ತಾನು ಹೇಳಿದಂತೆಯೇ ನಡೆಯಬೇಕೆಂಬ ಧೋರಣೆ
  • ಸುಲಭವಾಗಿ ಪ್ರೀತಿಯ ಮಾತುಗಳನ್ನಾಡುತ್ತಾ, ಬಿಟ್ಟಿರಲಾರೆ ಎನ್ನುವುದು. ಸ್ವಲ್ಪವೇ ಮನಸ್ತಾಪವಾದರೂ ಸಂಬಂಧ ಮುರಿದುಕೊಳ್ಳುವುದಾಗಿ ಹೆದರಿಸುವುದು.
  • ವಿಪರೀತ ಟೀಕೆ, ವ್ಯಂಗ್ಯ. ಸಂಗಾತಿಯನ್ನು ಅವಮಾನಕ್ಕೀಡುಮಾಡುವುದು.
  • ಆಸಕ್ತಿ-ಆಕಾಂಕ್ಷೆಗಳನ್ನು ತುಚ್ಚೀಕರಿಸುವುದು, ಬೆಳವಣಿಗೆಯನ್ನು ಸಹಿಸದಿರುವುದು, ಅಡ್ಡಪಡಿಸುವುದು ಮೊದಲಾದವು
  • ಮಾನಸಿಕ-ದೈಹಿಕ ಹಿಂಸೆ, ಭಾವನಾತ್ಮಕ ಶೋಷಣೆ, ದೌರ್ಜನ್ಯ.

ನಿಂದನೀಯ ಸಂಬಂಧ ನಿಮ್ಮದಾಗಿದ್ದರೆ ಏನು ಮಾಡಬೇಕು?

ತಮ್ಮ ಸಂಬಂಧದಲ್ಲಿ ಅನಾರೋಗ್ಯಕರ ಲಕ್ಷಣಗಳಿವೆ ಎಂದು ಗುರುತಿಸಿಕೊಳ್ಳುವುದು ಮುಖ್ಯ. ಹಾಗಿಲ್ಲದಿದ್ದಲ್ಲಿ ಮೊದಮೊದಲು ಕಾಣಿಸಿಕೊಂಡ ಅವಮಾನ, ದೂಷಣೆಗಳು ಕ್ರಮೇಣ ದೈಹಿಕ ಹಿಂಸೆ ಶೋಷಣೆಯಾಗಿ ಪರಿವರ್ತಿತವಾಗಬಲ್ಲವು. ಋಣಾತ್ಮಕ ಲಕ್ಷಣಗಳಿರುವ ಸಂಬಂಧ ಸಂಕೀರ್ಣವಾದ ನಿಂದನೀಯ ಸಂಬಂಧವಾಗಿಬಿಡಬಹುದು.

  • ಮೊದಲನೆಯದಾಗಿ,  ಆಸೆ-ಕನಸುಗಳಿರಿಸಿ ಮಾಡಿಕೊಂಡ ಪ್ರೇಮಸಂಬಂಧ ತನಗೇ ಹಾನಿಯುಂಟು ಮಾಡುತ್ತಿದೆ ಎಂದು ಕಂಡುಕೊಳ್ಳುವುದೇ ಕಷ್ಟ. ಸಂಬಂಧವನ್ನು ಅವಲೋಕಿಸಿ, ಋಣಾತ್ಮಕತೆಯನ್ನು ಒಪ್ಪಿಕೊಳ್ಳಿ
  • ವ್ಯಕ್ತಿತ್ವ, ಭಾವನೆಗಳನ್ನು ಅಗೌರವಿಸುವ, ಕಟ್ಟಿಹಾಕುವ ಸಂಬಂಧಗಳು ಹಾನಿಯನ್ನಷ್ಟೇ ಮಾಡಬಲ್ಲವು ಎಂಬುದು ನೆನಪಿರಲಿ.
  • ಆಪ್ತರೊಡನೆ ಹಂಚಿಕೊಳ್ಳುವುದು ಮುಖ್ಯ. ಸಂಬಂಧದ ಬಗ್ಗೆ ಅವರು ಹೇಗೆ ಭಾವಿಸುತ್ತಿದ್ದಾರೆ, ಯಾವ ಲೋಪ ಗುರುತಿಸುತ್ತಿದ್ದಾರೆಂಬುದು ನಿಮ್ಮ ಗೊಂದಲಗಳನ್ನು ನಿವಾರಿಸಬಲ್ಲದು.
  • ಸಂಬಂಧದಲ್ಲಿ ನಿಮಗಾಗುತ್ತಿರುವ ವೇದನೆಯೇನು ಪಟ್ಟಿಮಾಡಿ. ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಿ.
  • ಸಂಗಾತಿಯೊಡನೆ ಸ್ಪಷ್ಟವಾಗಿ ಮಾತನಾಡಿ. ಅವರ ವರ್ತನೆ ಬದಲಾಗದಿದ್ದಲ್ಲಿ ಸಂಬಂಧ ಮುಂದುವರೆಯುವುದಿಲ್ಲವೆಂದು ಸಂವಹಿಸಿ
  • ಸಂಬಂಧದಲ್ಲಿ ನೀವು ಏನನ್ನು ಸಹಿಸುವಿರಿ, ಯಾವುದನ್ನು ಸಹಿಸುವುದಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲೆತ್ನಿಸಿ.
  • ಹಿಂಸಿಸುವ ಸಂಬಂಧದಿಂದ ಹೊರನಡೆಯುವುದು ಸೋಲಲ್ಲ. ಅದು ಅಸ್ಥಿತ್ವ, ಆತ್ಮಗೌರವ, ಬೆಳವಣಿಗೆಗೆ ಅವಶ್ಯಕವೆಂಬುದು ಮನದಲ್ಲಿರಲಿ.
  • ಸಂಬಂಧ ನಿಂದನೀಯವಾಗಿದ್ದು ದೈಹಿಕ-ಮಾನಸಿಕ ಹಿಂಸೆಯನ್ನೊಳಗೊಂಡಿದ್ದರೆ ತಜ್ಞರ ಸಹಾಯ ಅತ್ಯವಶ್ಯ
  • ಸಂಬಂಧದ ಬಗ್ಗೆ ಗೊಂದಲಗಳಿದ್ದಲ್ಲಿ, ಸಂಗಾತಿಯ ದುರ್ವರ್ತನೆಯ ಭೀತಿಯಿಂದ ಅನಿಸಿದ್ದನ್ನು ಸಂವಹಿಸಲು ಅಸಾಧ್ಯವಾಗಿದ್ದಾಗ ತಜ್ಞರ ಸಹಾಯ ನೆರವಿಗೆ ಬರಬಲ್ಲದು.

ಜೊತೆಗೆ, ಹದಿಹರೆಯದ ಹಂತದಿಂದಲೇ ಆರೋಗ್ಯಕರ-ಅನಾರೋಗ್ಯಕರ ಸಂಬಂಧಕ್ಕೂ, ಕ್ಷಣಿಕ ವ್ಯಾಮೋಹ- ಪೊರೆಯುವ ಪ್ರೇಮ ಸಂಬಂಧಗಳಿಗೂ ಇರುವ ವ್ಯತ್ಯಾಸವನ್ನು ಪೋಷಕರು, ಶಿಕ್ಷಕರು ತಿಳಿಯಪಡಿಸಿ ಸಬಲರಾಗಿಸಿದಲ್ಲಿ ಪ್ರೇಮ ಸಂಬಂಧಗಳು ವ್ಯಕ್ತಿತ್ವವನ್ನೇ ಜರ್ಝರಿತವಾಗಿಸುವುದನ್ನು ತಪ್ಪಿಸಬಹುದು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org