ಯೋಗದ ಹಿಂದಿನ ವಿಜ್ಞಾನ

ಸಂಶೋಧಕರು ಯೋಗ ಪರಿಣಾಮಗಳ ಬಗ್ಗೆ ವಸ್ತುನಿಷ್ಠ ವೈಜ್ಞಾನಿಕ ಪುರಾವೆಗಳನ್ನು ಕಲೆಹಾಕಲು ಆರಂಭಿಸಿದ್ದಾರೆ.

ಯೋಗ ಸಾವಿರಾರು ವರ್ಷಗಳಿಂದ ಒಂದು ಕಲೆಯಾಗಿ ಹಾಗೂ ಪ್ರಯೋಗಾತ್ಮಕ ವಿಜ್ಞಾನವಾಗಿ ಅಸ್ತಿತ್ವದಲ್ಲಿದೆ. ಅದಾಗ್ಯೂ ಗಂಭೀರ ಹಾಗೂ ವಸ್ತುನಿಷ್ಠ ವೈಜ್ಞಾನಿಕ ಶೋಧನೆ ಕಳೆದ ಕೆಲ ವರ್ಷಗಳಿಂದೀಚೆಗಷ್ಟೇ ನಡೆದಿದೆ. ಯೋಗದ ಎಲ್ಲ ಪ್ರಯೋಜನಗಳನ್ನು ಪಡೆಯಲು ಮತ್ತು ಇಡೀ ಮಾನವತೆಗೆ ಇದು ಆಕರ್ಶಕವಾಗುವಂತೆ ಮಾಡಲು ಇತರ ಯಾವುದೇ ವಿಜ್ಞಾನ ಶಾಖೆಗಳಂತೆ ಯೋಗವನ್ನು ಕೂಡಾ ಆಳವಾಗಿ ಅಧ್ಯಯನ ಮಾಡಿ, ಅದರ ಕಲಾತ್ಮಕತೆಯನ್ನು ಬಿಂಬಿಸುವುದು
ಅಗತ್ಯ.

ಪತಂಜಲಿಯ ವ್ಯವಸ್ಥಿತ ದೃಷ್ಟಿಕೋನ: 
ಪತಂಜಲಿ ನಿರೂಪಿಸಿದ ಎಂಟು ಯೋಗಶಾಖೆಗಳು, ಯೋಗ ಅನುಸರಿಸುವ ವ್ಯವಸ್ಥಿತ ದೃಷ್ಟಿಕೋನಕ್ಕೆ ಸಾಕ್ಷಿ. ಇದು ಯೋಗವನ್ನು ಇತರ ಯಾವುದೇ ಮುಖ್ಯವಾನಿಯ ವಿಜ್ಞಾನದ ರೀತಿಯಲ್ಲೇ ಕಾಣುತ್ತದೆ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಹಾಗೂ ಸಮಾಧಿ ಇವುಗಳು ಯೋಗದ ಅಷ್ಟಾಂಗಗಳು. ಯಮ ಮತ್ತು ನಿಯಮ ನಡವಳಿಕೆಯ ಪರಿಷ್ಕರಣೆಗೆ ಸಂಬಂಧಿಸಿದ್ದು. ಆಸನ ಹಾಗೂ ಪ್ರಾಣಾಯಾಮಗಳು ದೈಹಿಕ ಸುಸ್ಥಿತಿಗೆ, ಪ್ರತ್ಯಾಹಾರ ಹಾಗೂ ಧಾರಣ ಮಾನಸಿಕ ಗುರಿಗೆ ಸಂಬಂಧಿಸಿದ್ದಾದರೆ, ಧ್ಯಾನ ಮತ್ತು ಸಮಾಧಿ ಆತ್ಮಜ್ಞಾನಕ್ಕೆ ಸಂಬಂಧಿಸಿದ್ದು.

ಪತಂಜಲಿ ಬಹುವಿಧಾನಗಳ ಮೂಲಕ ಮಧ್ಯಸ್ಥಿಕೆ ವಹಿಸಿದ್ದನ್ನು ನಾವು ಕಾಣಬಹುದು. ವಿವಿಧ ಹಂತದ ಅಸ್ತಿತ್ವ ಹೊಂದಿದ ಮನುಷ್ಯರ ಮನೋನಿಗ್ರಹದ ಏಕೈಕ ಉದ್ದೇಶದಿಂದ ಈ ಮಾರ್ಗಗಳನ್ನು ಪತಂಜಲಿ ಕಂಡುಕೊಂಡಿದ್ದಾರೆ. ನಿರ್ದಿಷ್ಟ ವಿಷಯವನ್ನು ಪ್ರವೇಶಿಸುವ ವ್ಯವಸ್ಥಿತ ವಿಧಾನ ಯಾವುದೇ ವಿಜ್ಞಾನದ ತಿರುಳು. ಇವು ಯೋಗದ ಅಷ್ಟಾಂಗಗಳಲ್ಲಿ ಕಾಣುತ್ತವೆ. ಹಲವು ವಾಸ್ತವ ಕಾರಣಗಳಿಂದಾಗಿ ವಿಜ್ಞಾನಿಗಳ ಸಮೂಹಕ್ಕೆ ಯೋಗ ಪ್ರಖರವಾಗಿ ಕಾಣಲು ಇದು ಕಾರಣ. ಹಲವು ಸವಾಲುಗಳ ನಡುವೆಯೂ ಸಂಶೋಧಕರು ಇದೀಗ, ವಸ್ತುನಿಷ್ಠ ವೈಜ್ಞಾನಿಕ ಪುರಾವೆಗಳ ಆಧಾರದಲ್ಲಿ ಯೋಗಕ್ಕೆ ಪ್ರಬಲ ವೈಜ್ಞಾನಿಕ ಹಿನ್ನೆಲೆ ಒದಗಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಈ ನಿಟ್ಟಿನಲ್ಲಿ ಸಂಶೋಧಕರು ಯೋಗದ ಹಲವು ಅಂಶಗಳನ್ನು ಮಹತ್ವದ್ದೆಂದು ಪರಿಗಣಿಸಿದ್ದಾರೆ. ಅವುಗಳೆಂದರೆ:

ನಿಗದಿತ ಸಮತೋಲನಕ್ಕೆ ಮರುಚಾಲನೆ:
ಮಾನವ ಶರೀರದ ಪ್ರತಿ ಅಂಗಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುತ್ತವೆ. ಪ್ರತಿ ಕೋಶ ಕೂಡಾ ತನ್ನ ಸಹಜತೆಯ ಪರಿಧಿಯಲ್ಲಿ ಕೆಲಸ ಮಾಡುತ್ತದೆ. ಅದರ ವ್ಯಾಪ್ತಿಯಲ್ಲಿ ಆಗುವ ಬದಲಾವಣೆಗಳಿಗೆ ಅನುಗುಣವಾಗಿ ಸಣ್ಣ ಪುಟ್ಟ ಹೊಂದಾಣಿಕೆ ಮಾಡಿಕೊಳ್ಳುತ್ತವೆ. ಕೆಲ ಅಂಗಾಂಶಗಳ ಸ್ವಯಂ ನಿಯಂತ್ರಣ ಸಾಮರ್ಥ್ಯ ಕಡಿಮೆ ಇರುತ್ತದೆ. ಕೆಲವಕ್ಕೆ ಅಧಿಕ ಸಾಮರ್ಥ್ಯ ಇರುತ್ತದೆ. ರಸದೂತಗಳ ಬೇರ್ಪಡಿಸುವಿಕೆಯಂಥ ಕೆಲ ಕಾರ್ಯಗಳು ಉಂಟಾದಾಗ, ಎರಡು ಹಂತದ ಅಂಗಾಂಶಗಳ ನಡುವೆ ಪ್ರತಿಕ್ರಿಯೆ ಸೃಷ್ಟಿಯಾಗುತ್ತದೆ. ಸಹಜತೆಯನ್ನು ಕಾಪಾಡಿಕೊಂಡು ಬರಲು ಮತ್ತು ಕೋಶಗಳ ಕಾರ್ಯನಿರ್ವಹಣೆಯಲ್ಲಿ ಸ್ಥಿರತೆ ತರಲು ಇಂಥ ಪ್ರತಿಕ್ರಿಯೆಗಳು ಬಳಕೆಯಾಗುತ್ತವೆ. ಸುತ್ತಮುತ್ತಲಿನ ಬದಲಾವಣೆಗಳಿಗೆ ಅನುಗುಣವಾಗಿ ಆಂತರಿಕ ವಾತಾವರಣದಲ್ಲಿ ಈ ಸ್ಥಿರತೆಯನ್ನು ಕಾಪಾಡುವ ಪ್ರಕ್ರಿಯೆಯನ್ನು ಸಮತೋಲನ ಎಂದು ಕರೆಯುತ್ತೇವೆ. ಬೇಕಾಬಿಟ್ಟಿ ಜೀವನಶೈಲಿಯಿಂದ ಉದ್ಭವಿಸುವ ಅಸಮತೋಲನವನ್ನು ನಿವಾರಿಸುವ ಸಾಮರ್ಥ್ಯವನ್ನು ಯೋಗ ಹೊಂದಿದೆ.

ಒತ್ತಡ ಮಂದಗೊಳಿಸುವಿಕೆ:
ಇತ್ತೀಚಿನ ದಿನಗಳಲ್ಲಿ ಮನುಷ್ಯರು ಹೆಚ್ಚು ಒತ್ತಡಗಳಿಗೆ ಒಳಗಾಗುತ್ತಿದ್ದು, ಇದಕ್ಕೆ ಯೋಗ ಸೂಕ್ತ ಮದ್ದು ಎನಿಸಿದೆ. ನರಮಂಡಲ ವ್ಯವಸ್ಥೆಯಲ್ಲಿ ಇಂಥ ಒತ್ತಡಗಳ ವಿರುದ್ಧ ಹೋರಾಡುವ ಶಕ್ತಿ ಅಂತರ್ಗತವಾಗಿರುತ್ತದೆ. ಆದರೆ ಧೀರ್ಘಕಾಲದವರೆಗೆ ನಾವು ಇಂಥ ಒತ್ತಡವನ್ನು ನಿವಾರಿಸುವ ತಂತ್ರವನ್ನು ಕಂಡುಕೊಳ್ಳದಿದ್ದಾಗ ಈ ಶಕ್ತಿ ಬರಿದಾಗುತ್ತದೆ. ಇದು ಅಧಿಕ ಒತ್ತಡದಂಥ ಋಣಾತ್ಮಕ ಪರಿಣಾಮಗಳಿಗೆ ಕಾರಣವಾಗುವ ಹಾರ್ಮೋನ್‌ಗಳನ್ನು ಸೃಜಿಸಿ, ಇಡೀ ವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತವೆ. ಆದರೆ ಯೋಗ ಪ್ರಮುಖ ಹಂತದಲ್ಲಿ ಒತ್ತಡವನ್ನು ನಿವಾರಿಸಿ, ಇಡೀ ಶರೀರ ಹಾಗೂ ಮನಸ್ಸನ್ನು ಆರಾಮದಾಯಕವಾಗಿ ಮಾಡುತ್ತದೆ. ಹೀಗೆ ಕೋಶಗಳಿಗೆ ವಿರಾಮ ನೀಡುವ ಈ ವ್ಯವಸ್ಥಿತ ವಿಧಾನವು ಒತ್ತಡದ ನಿವಾರಣೆಯ ಅಂಶಗಳನ್ನು ಹೆಚ್ಚಿಸುವಲ್ಲಿ ನೆರವಾಗುತ್ತದೆ.

ಸ್ವಾಯತ್ತ ನರವ್ಯೂಹಕ್ಕೆ ಚಾಲನೆ:
ಸ್ವಾಯತ್ತ ನರಮಂಡಲ ಪ್ರಮುಖವಾಗಿ ಎರಡು ಅಂಶಗಳನ್ನು ಒಳಗೊಂಡಿರುತ್ತದೆ. ಸಹಾನುಭೂತಿ ಮತ್ತು ಅರೆಸಹಾನುಭೂತಿ ವ್ಯವಸ್ಥೆ. ಅರೆಸಹಾನುಭೂತಿ ವ್ಯವಸ್ಥೆ ನಮ್ಮ ಬುದ್ಧಿ ಮತ್ತು ದೇಹವನ್ನು ಅಪಾಯಕಾರಿ ಪರಿಸ್ಥಿತಿಯಲ್ಲಿ ಹೋರಾಡಲು ಅಥವಾ ಪಲಾಯನ ಮಾಡುವ ಕ್ರಿಯೆಗೆ ಪ್ರಚೋದಿಸುತ್ತದೆ. ಆದರೆ ಸಹಾನುಭೂತಿ ವ್ಯವಸ್ಥೆ ವಿಶ್ರಾಂತಿಯ ಸಮಯದಲ್ಲಿ ಕೂಡಾ ನಮ್ಮ ಜೀರ್ಣವ್ಯವಸ್ಥೆ ಹಾಗೂ ಲೈಂಗಿಕ ಪ್ರಚೋದನೆಗೆ ಕಾರಣವಾಗುತ್ತದೆ. ಇವೆರಡೂ ವ್ಯವಸ್ಥೆಗಳು ಆರೋಗ್ಯವಂತ ಸ್ಥಿತಿಯನ್ನು ಕಾಪಾಡುವ ನಿಟ್ಟಿನಲ್ಲಿ ಪರಸ್ಪರ ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ. ಅದಾಗ್ಯೂ ಸಹಾನುಭೂತಿ ವ್ಯವಸ್ಥೆಯನ್ನು ಅಧಿಕವಾಗಿ ಬಳಸಿದಾಗ, ಈ ಸಮತೋಲನ ತಪ್ಪಿ, ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಈ ನರಮಂಡಲದ ಎರಡು ವ್ಯವಸ್ಥೆಗಳ ನಡುವೆ ಸಮತೋಲನವನ್ನು ಮರುಸ್ಥಾಪಿಸುವಲ್ಲಿ ಯೋಗ ಸಹಾಯ ಮಾಡುತ್ತದೆ. ಈ ಮೂಲಕ ಸಮಗ್ರ ಆರೋಗ್ಯ ವರ್ಧಿಸಲು ನೆರವಾಗುತ್ತದೆ.

ಜೀವನ ಗುಣಮಟ್ಟ ಹೆಚ್ಚಿಸಲು ಸಹಕಾರಿ:

ನಮ್ಮ ಜೀವನದ ಹಲವು ಆಯಾಮಗಳಲ್ಲಿ ಯೋಗ ಧನಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಯೋಗನಿರತರು ಈ ಪ್ರಯೋಜನವನ್ನು ಗುರುತಿಸಬಲ್ಲರು. ಆದರೆ ಇದನ್ನು ವೈಜ್ಞಾನಿಕ ಮಾಪಕಗಳ ಮೂಲಕ ಅಳೆಯಲಾಗದು. ಮನಃಶ್ಶಾಂತಿ, ನೆಮ್ಮದಿ, ಸಂತೋಷ, ಆತ್ಮಜ್ಞಾನ ಮತ್ತಿತರ ಆಯಾಮಗಳು ಯೋಗದ ಧನಾತ್ಮಕ ಪರಿಣಾಮಗಳು. ಈ ಧನಾತ್ಮಕ ಅನುಭವಗಳು ಆರೋಗ್ಯಕರ ಜೀವನದ ಅಡಿಗಲ್ಲು ಮಾತ್ರವಲ್ಲದೇ, ಕ್ಯಾನ್ಸರ್‌ಪೀಡಿತರು, ತೀವ್ರ ಅಸ್ವಸ್ಥರು, ಹಾಸಿಗೆಹಿಡಿದವರು ಹೀಗೆ ಜೀವನದ ಕೊನೆಯ ಹಂತದಲ್ಲಿರುವವರಿಗೆ ಕೂಡಾ ಪ್ರಯೋಜನಕಾರಿ. ಕೆಲ ಧನಾತ್ಮಕ ಅಂಶಗಳನ್ನು ಹಿಡಿದಿಟ್ಟುಕೊಳ್ಳಲು ಇದು ಅವರಿಗೆ ಸಹಕಾರಿ ಎನಿಸುತ್ತದೆ. ಈ ಪರಿಣಾಮಗಳಿಂದಾಗಿ, ದೇಹದ ಹಲವು ವ್ಯವಸ್ಥೆಗಳಿಗೆ ಯೋಗ ಪ್ರಯೋಜನಕಾರಿಯಾಗುತ್ತದೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ:

* ರಕ್ತದ ಒತ್ತಡ ಇಳಿಸುವುದು
* ಹೃದಯದ ಬಡಿತ ಇಳಿಸುವುದು
* ಆಮ್ಲಜನಕದ ಸಮರ್ಪಕ ಬಳಕೆ
* ಸುಧಾರಿತ ಜೀರ್ಣವ್ಯವಸ್ಥೆ
* ವಿಷಕಾರಿ ಅಂಶಗಳು ಉತ್ಪತ್ತಿಯಾಗುವುದನ್ನು ಕಡಿಮೆ ಮಾಡುತ್ತದೆ.
* ಉತ್ತಮ ರೋಗನಿರೋಧಕ ಶಕ್ತಿ
* ನರ ಹಾಗೂ ಮಾಂಸಖಂಡಗಳ ನಡುವೆ ಪರಸ್ಪರ ಹೊಂದಾಣಿಕೆ
* ರಸದೂತಗಳ ಸಮತೋಲನ
ಈ ಎಲ್ಲ ಅಂಶಗಳಿಂದ, ಯೋಗದ ಮೂಲಭೂತ ತತ್ವಗಳೆನಿಸಿದ, ವಿಶ್ರಾಂತ ಶರೀರ, ನಿಧಾನ ಉಸಿರಾಟ ಹಾಗೂ ಶಾಂತಚಿತ್ತ ಇವು ಮೇಲಿನ ಎಲ್ಲ ಪ್ರಯೋಜನಗಳನ್ನು ಅನುಭವಿಸಲು ಸಹಕರಿಸುತ್ತವೆ.

(ಡಾ.ಜಿ.ರಾಮಜಯಂ ಅವರು ನಿಮ್ಹಾನ್ಸ್‌ನ ಯೋಗವಿಭಾಗದ ಸಂಶೋಧನಾ ವಿದ್ಯಾರ್ಥಿ)

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org