ಮತ್ತೊಬ್ಬರ ಜಾಗದಲ್ಲಿ ನಿಮ್ಮನ್ನು ಕಲ್ಪಿಸಿಕೊಳ್ಳುವ ಮೂಲಕ ಪರಿಹಾರ ಹುಡುಕುವ ಪ್ರಯತ್ನ

ನಾನು ಹಲವು ಬಗೆಯ ಜನರನ್ನು ಭೇಟಿ ಮಾಡುತ್ತೇನೆ. ಅವರಲ್ಲಿ ಕೆಲವರಿಗೆ ಉದಾಹರಣೆಗಳನ್ನು ನೀಡುವ ಮೂಲಕ ಚಿಕಿತ್ಸೆ ನೀಡಬೇಕಾಗುತ್ತದೆ, ಮತ್ತೆ ಕೆಲವರಿಗೆ ಉದಾಹರಣೆಗಳನ್ನು ನೀಡದೆಯೇ ಚಿಕಿತ್ಸೆ ಕೊಡಬೇಕಾಗುತ್ತದೆ. ಮನಶ್ಶಾಸ್ತ್ರಜ್ಞರು ಚಿಕಿತ್ಸೆಗಾಗಿ ಬಂದವರಿಗೆ ನೇರವಾಗಿ ಸಲಹೆ ಸೂಚನೆಗಳನ್ನು ನೀಡುತ್ತಾರೆ. ಅವರು ಈ ಸಲಹೆ ಸೂಚನೆಗಳ ಆಧಾರದ ಮೇಲೆ ಚಿಕಿತ್ಸಾ ಕ್ರಮಗಳನ್ನು ಅನುಸರಿಸಬಹುದು. ಮನೋರೋಗಿಯು ತನ್ನ ಚಿಕಿತ್ಸೆಯ ದಾರಿಯನ್ನು ತಾನೇ ಹುಡುಕಿಕೊಳ್ಳುವಂತೆ ಪ್ರೇರೇಪಿಸುತ್ತಾರೆ. ಸಹಕಾರ ನೀಡುತ್ತಾರೆ. ಇದನ್ನು ಎಂಪ್ಟಿ ಚೇರ್ ಟೆಕ್ನಿಕ್ ಅಥವಾ ‘ಖಾಲಿ ಕುರ್ಚಿ ತಂತ್ರ’ ಎನ್ನಲಾಗುತ್ತದೆ.

ಸಮಸ್ಯೆ ಅನುಭವಿಸುತ್ತಿರುವವರು ತಮ್ಮನ್ನು ತಾವು ಒಂದು ಅಂತರದಲ್ಲಿ ನಿಂತು ನೋಡಿಕೊಳ್ಳುವ ಮೂಲಕ ತಮ್ಮ ಸಮಸ್ಯೆಯ ಸ್ವರೂಪವನ್ನು ಅರ್ಥೈಸಿಕೊಳ್ಳಬಹುದಾಗಿದೆ. ಹೀಗೆ ಮಾಡುವ ಮೂಲಕ ಇತರರನ್ನೂ ಅರ್ಥ ಮಾಡಿಕೊಳ್ಳುವ ಜೊತೆಗೆ, ಇತರರು ತಮ್ಮ ಸಮಸ್ಯೆಯನ್ನು ಹೇಗೆ ನೋಡುತ್ತಾರೆ ಅನ್ನುವುದನ್ನೂ ಅರಿಯಬಹುದು. ತಾನು ಹಾಗೇಕೆ ವರ್ತಿಸುತ್ತಿದ್ದೇನೆ ಎಂಬುದನ್ನು ಅರಿಯಲು ಸಹಕಾರಿಯಾಗುತ್ತದೆ.

ಎಂಪ್ಟಿ ಚೇರ್ ಟೆಕ್ನಿಕ್’ನಲ್ಲಿ ಸಮಸ್ಯೆಯಲ್ಲಿರುವ ವ್ಯಕ್ತಿಯ ಎದುರು ಒಂದು ಖಾಲಿ ಖುರ್ಚಿ ಇರಿಸಲಾಗುತ್ತದೆ. ಈ ಖಾಲಿ ಕುರ್ಚಿಯು ವ್ಯಕ್ತಿಯು ಎದುರಿಸುತ್ತಿರುವ ಸಮಸ್ಯೆ ಅಥವಾ ವ್ಯಕ್ತಿಯನ್ನು ಪ್ರತಿನಿಧಿಸುತ್ತದೆ. ಸಮಸ್ಯೆ ಅನುಭವಿಸುತ್ತಿರುವವರು ಈ ಖಾಲಿ ಕುರ್ಚಿಯ ಬಳಿ ತಮ್ಮ ಭಾವನೆಗಳನ್ನು ಹೇಳಿಕೊಳ್ಳಲು ಸೂಚಿಸಲಾಗುತ್ತದೆ. ನಂತರ ಆ ವ್ಯಕ್ತಿಯೇ ಖಾಲಿ ಕುರ್ಚಿಯಲ್ಲಿ ಕುಳಿತು (ತಮ್ಮನ್ನು ತಾವು ಯಾರೊಂದಿಗೆ ಸಂಘರ್ಷದಲ್ಲಿದ್ದಾರೋ ಆ ವ್ಯಕ್ತಿ ಎಂದು ಪರಿಭಾವಿಸಿ) ತಮ್ಮದೇ ಮಾತುಗಳಿಗೆ ಪ್ರತಿಕ್ರಿಯೆ ನೀಡಬೇಕು. ಈ ಚಟುವಟಿಕೆಯಲ್ಲಿ ವ್ಯಕ್ತಿಯು ಹಲವು ಬಾರಿ ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಎದ್ದು – ಕುಳಿತು ಮಾಡಬೇಕಾಗಿ ಬರಬಹುದು. ಈ ವಿಧಾನವು ಆಪ್ತ ಸಮಾಲೋಚಕರಿಗೆ ಮತ್ತು ಮನಶ್ಶಾಸ್ತ್ರಜ್ಞರಿಗೆ ಮುಂದಿನ ಪ್ರಕ್ರಿಯೆ ನಡೆಸಲು ಬೇಕಾದ ಸುಳಿವನ್ನು ನೀಡಿ, ಚಿಕಿತ್ಸೆಯನ್ನು ಸುಗಮಗೊಳಿಸುವುದು.   

ಈ ಚಿಕಿತ್ಸಾ ತಂತ್ರವನ್ನು ವಿವರಿಸಲು, ನನ್ನ ಬಳಿ ಚಿಕಿತ್ಸೆಗಾಗಿ ಬಂದಿದ್ದ ಗೃಹಿಣಿಯ ನಿದರ್ಶನವನ್ನಿಲ್ಲಿ ಕೊಡುತ್ತೇನೆ. ಆ ಗೃಹಿಣಿಯು ಖಿನ್ನತೆಯನ್ನು ಹೊಂದಿದ್ದರು. ತಮ್ಮ ಕೆಲಸ ಮಾಡುವ ಸಾಮರ್ಥ್ಯದ ಬಗ್ಗೆಅತಿಯಾದ ನಿರೀಕ್ಷೆಯನ್ನಿಟ್ಟುಕೊಂಡಿದ್ದ ಆಕೆ, ಮನೆಯನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಚಿಂತಿತರಾಗಿದ್ದರು. ಮನೆಗೆಲಸವನ್ನು ಅಷ್ಟಾಗಿ ಇಷ್ಟಪಡದೆ ಇದ್ದರೂ ಕೂಡಾ, ದಿನದಲ್ಲಿ ಗಂಟೆಗಟ್ಟಲೆ ಸಮಯವನ್ನು ಮನೆ ಶುಚಿಗೊಳಿಸಲು ವಿನಿಯೋಗಿಸುತ್ತಿದ್ದರು.

ಯಾರೂ ಬಳಸದೆ ಖಾಲಿ ಇರುವ ಮಕ್ಕಳ ಕೋಣೆಯೂ ಸೇರಿದಂತೆ, ಪ್ರತಿಯೊಂದು ಕೋಣೆಯನ್ನೂ ಸ್ವಚ್ಛಗೊಳಿಸುವ ಜೊತೆಗೆ, ಗ್ಯಾರೇಜ್ ಅನ್ನೂ ತೊಳೆಯುತ್ತಿದ್ದರು. ಒಟ್ಟಾರೆ ಆಕೆಗೆ ತಾನು ಮನೆಗೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತೇನೆಂದು ತೋರಿಸಿಕೊಳ್ಳುವುದು ಬೇಕಿತ್ತು. ಮನೆಗೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದೇನೆ ಎಂದು ಸಾಬೀತುಪಡಿಸಬೇಕಿತ್ತು. ಆಕೆ ಹೀಗೆ ಯೋಚಿಸಲು ಕಾರಣವೂ ಇತ್ತು. ಆಕೆ ಬಾಲ್ಯದಿಂದಲೂ ತನ್ನ ತಾಯಿ ಮನೆಯ ಶುಚಿತ್ವ ಹಾಗೂ ಮನೆಗೆಲಸಕ್ಕೆ ಹೆಚ್ಚಿನ ಮಹತ್ವ ನೀಡುವುದನ್ನು ನೋಡಿದ್ದಳು. ಗಂಡನ ಮನೆಯವರು ಮತ್ತು ಮಕ್ಕಳು ಹೆಣ್ಣನ್ನು ಗೌರವದಿಂದ ಕಾಣಬೇಕೆಂದರೆ, ಹೆಣ್ಣಾದವಳು ಮನೆಗೆಲಸವನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಆಕೆ ಹೇಳುತ್ತಿದ್ದರು.

ಈ ಗೃಹಿಣಿ ತಮ್ಮೆಲ್ಲಾ ಶಕ್ತಿಯನ್ನೂ ವಿನಿಯೋಗಿಸಿ ಕೆಲಸ ಮಾಡಿದರೂ ತೃಪ್ತರಾಗುತ್ತಿರಲಿಲ್ಲ. ಇದರಿಂದ ಖಿನ್ನತೆ ಆವರಿಸಿ ಕೆಲಸದ ಉತ್ಸಾಹ ಕುಂದುತ್ತಾ ಹೋಯಿತು. ಇದನ್ನು ಸರಿಪಡಿಸಲು ಆಕೆಯ ಮೇಲೆ ಹಲವು ಬಗೆಯ ಮನೋಚಿಕಿತ್ಸೆಯ ತಂತ್ರಗಳನ್ನು ಪ್ರಯೋಗಿಸಲಾಯ್ತು. ಆದರೂ ಆಕೆ ಕೀಳರಿಮೆ, ತಾನು ಅಪ್ರಯೋಜಕಳೆಂಬ ಭಾವನೆಯಿಂದ ಸಂಪೂರ್ಣವಾಗಿ ಹೊರ ಬರುವುದು ಸಾಧ್ಯವಾಗಲಿಲ್ಲ. ಕೊನೆಗೆ ಆಕೆಯ ಮೇಲೆ ಎಂಪ್ಟಿ ಚೇರ್ ಟೆಕ್ನಿಕ್ ಅನ್ನು ಪ್ರಯೋಗಿಸಲಾಯಿತು.

ಗೃಹಿಣಿಯನ್ನು ಖಾಲಿ ಕುರ್ಚಿಯ ಮೇಲೆ ಕೂರಿಸಿ, ಆಕೆಯ ತಾಯಿಯ ಪಾತ್ರವನ್ನು ನಿರ್ವಹಿಸಲು ಸೂಚಿಲಾಯಿತು. ಮತ್ತು, ತಾಯಿಯು ಶುಚಿತ್ವ ಹಾಗೂ ಮನೆಗೆಲಸದ ಮಹತ್ವದ ಕುರಿತು ಏನೆಲ್ಲ ಹೇಳುತ್ತಿದ್ದರೋ ಅವನ್ನು ಪುನರುಚ್ಚರಿಸುವಂತೆ ಸೂಚಿಸಲಾಯಿತು. ಗೃಹಿಣಿಯು ತನ್ನ ತಾಯಿಯ ಪಾತ್ರವನ್ನು ಆವಾಹಿಸಿಕೊಂಡು ಶುಚಿತ್ವದ ಮಹತ್ವ, ಸದ್ಗೃಹಿಣಿಯ ಕೆಲಸಗಳು, ಒಳ್ಳೆಯ ಹೆಂಡತಿ ಅನ್ನಿಸಿಕೊಳ್ಳಲು ಅನುಸರಿಸಬೇಕಾದ ಉಪಾಯಗಳು, ಮನೆಯೇ ಸರ್ವಸ್ವ – ಮನೆ ಮಂದಿಯ ಸೇವೆಯೇ ಜೀವನದ ಗುರಿ ಅನ್ನುವ ಉಪದೇಶಗಳು, ಎಲ್ಲವನ್ನೂ ಹೇಳಿದರು. ನಂತರ ಆಕೆಗೆ ತಮ್ಮ ಕುರ್ಚಿಯಲ್ಲಿ ಕುಳಿತು ತಾಯಿಯ ಮಾತುಗಳಿಗೆ ಪ್ರತಿಕ್ರಿಯೆ ನೀಡಲು ಸೂಚಿಸಲಾಯಿತು. ಅವರ ಪ್ರತಿಕ್ರಿಯೆಯಲ್ಲಿ ಸಾಕಷ್ಟು ಕೋಪ ಎದ್ದು ಕಾಣುತ್ತಿತ್ತು. “ಇಲ್ಲ! ನನಗೆ ಇವನ್ನೆಲ್ಲ ಮಾಡಲು ಇಷ್ಟವಿಲ್ಲ. ಇಡೀ ದಿನ ಕೆಲಸ ಮಾಡಿ ನನಗೆ ಸಾಕಾಗಿ ಹೋಗಿದೆ. ಮತ್ತೊಬ್ಬರ ಕೆಲಸಗಳನ್ನು ಮಾಡಿ ಮಾಡಿ ನಾನು ಸುಸ್ತಾಗಿ ಹೋಗಿದ್ದೇನೆ” ಎಂದು ಅವರು ತಮ್ಮ ಮನಸ್ಸಲ್ಲಿದ್ದ ಕ್ರೋಧವನ್ನು ಹೊರಹಾಕಿದರು.

ಈ ಚಟುವಟಿಕೆಯಲ್ಲಿ ಗೃಹಿಣಿಯು ತಮ್ಮ ಸಮಸ್ಯೆಯ ಮೂಲವನ್ನು ಕಂಡುಕೊಂಡರು. ತಮ್ಮ ಮೇಲೆ ತಾವಾಗಿಯೇ ಹೇರಿಕೊಂಡಿದ್ದ ನಿರೀಕ್ಷೆಗಳ ಭಾರ ಅವರನ್ನು ಖಿನ್ನತೆಗೆ ದೂಡಿತ್ತು ಅನ್ನುವುದನ್ನು ಮನಗಂಡರು. ಬಾಲ್ಯದಲ್ಲಿ ತಮಗೆ ಬೇರೆ ಆಯ್ಕೆಯಿಲ್ಲದೆ ತಾಯಿಯ ಮಾತು ಕೇಳಬೇಕಾಗಿತ್ತು, ಈಗ ತಾವು ತಮ್ಮ ಇಚ್ಛಾನುಸಾರ ಬದುಕುವ ಅವಕಾಶವಿದೆ ಅನ್ನುವುದೂ ಅವರಿಗೆ ಮನದಟ್ಟಾಯಿತು. ಎಲ್ಲಕ್ಕಿಂತ ಮುಖ್ಯವಾಗಿ, ತಾವೆಂದೂ ತಾಯಿಯ ಬಳಿ ತಮ್ಮ ಅಸಮ್ಮತಿಯನ್ನೂ ಅಸಮಾಧಾನವನ್ನೂ ತೋಡಿಕೊಂಡಿರಲಿಲ್ಲ ಅನ್ನುವ ಅರಿವೂ ಮೂಡಿತು. ಈ ಖಾಲಿ ಕುರ್ಚಿ ತಂತ್ರದಿಂದ ಆ ಗೃಹಿಣಿಯು ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತಾಯಿತು.

ಈ ನಿದರ್ಶನವು  ಸಮಸ್ಯೆಯಲ್ಲಿರುವ ಯಾವುದೇ ವ್ಯಕ್ತಿಯು ಹೇಗೆ ತನ್ನನ್ನು ತಾನು ನೋಡಿಕೊಳ್ಳಬಹುದು ಮತ್ತು ತನ್ನ ಸಮಸ್ಯೆಯನ್ನು ಅರಿಯಬಹುದು ಅನ್ನುವುದನ್ನು ಸೂಚಿಸುತ್ತದೆ. ಈ ತಂತ್ರದ ಮೂಲಕ ಬದುಕನ್ನು ಬೇರೊಂದು ದೃಷ್ಟಿಕೋನದ ಮೂಲಕ ನೋಡಲು ಸಾಧ್ಯವಾಗುತ್ತದೆ, ಮತ್ತು ಈ ಮೂಲಕ ಬದುಕಿನ ಇನ್ನಿತರ ಆಯಾಮಗಳೂ ಗೋಚರವಾಗತೊಡಗುತ್ತವೆ. ಇದರ ಸಾಧ್ಯತೆಗಳು ಅಗಾಧವಾಗಿದ್ದು, ದಿನ ನಿತ್ಯದ ಬದುಕಿನ ಗೊಂದಲಗಳ ಪರಿಹಾರಕ್ಕೂ ಅನ್ವಯಿಸಿಕೊಳ್ಳಬಹುದಾಗಿದೆ. ವೈಯಕ್ತಿಕ ಸಂಘರ್ಷಗಳು, ದುಗುಡ ಅಥವಾ ಕೋಪ, ಸಂಬಂಧಗಳ ಘರ್ಷಣೆ ಮೊದಲಾದವುಗಳಿಗೆ ಪರಿಹಾರ ಕಂಡುಕೊಳ್ಳಲು ಈ ತಂತ್ರವನ್ನು ಬಳಸಬಹುದು. ಇದು ಕೇವಲ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಮಾತ್ರವಲ್ಲ; ನಮ್ಮನ್ನು ನಾವು ಸಮಸ್ಯೆಗಳಿಂದ, ಸಂಘರ್ಷದ ಸನ್ನಿವೇಶಗಳಿಂದ ದೂರ ಇಟ್ಟುಕೊಳ್ಳಲು ಕೂಡಾ ಸಹಕಾರಿ. ನಮ್ಮ ಸಮಸ್ಯೆಗಳ ಜೊತೆಯಲ್ಲೇ ಇತರರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲೂ ಇದು ಉಪಯುಕ್ತವಾಗಿದೆ.

ಇವನ್ನೂ ಓದಿ: Facilitating Emotional Change: The Moment-by-Moment Process by Leslie Greenberg, Laura Rice, and Robert Elliott.

ಡಾ.ಗರಿಮಾ ಶ್ರೀವಾಸ್ತವ ದೆಹಲಿ ಮೂಲದ ಕ್ಲಿನಿಕಲ್ ಸೈಕಾಲಜಿಸ್ಟ್ ಆಗಿದ್ದು, ಆಲ್ ಇಂಡಿಯಾ ಇನ್ಸ್’ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಇಂದ ಪಿ ಎಚ್ ಡಿ ಪದವಿಯನ್ನು ಪಡೆದಿದ್ದಾರೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org