ಆಪ್ತ ಸಮಾಲೋಚನೆ ಅಥವಾ ಕೌನ್ಸೆಲಿಂಗ್ ಯಾವಾಗ ಮತ್ತು ಹೇಗೆ ನೆರವಾಗುತ್ತದೆ?

ನಿಮ್ಮ ಆಂತರಿಕಭಾವನೆಗಳನ್ನು ಪ್ರತಿಬಿಂಬಿಸಲು, ಹೇಳಿಕೊಳ್ಳಲು ಮತ್ತು ನಿಮ್ಮಲ್ಲಿ ಸೂಕ್ತ ಅರಿವುಮೂಡಿಸಲು “ಆಪ್ತ ಸಮಾಲೋಚನೆ “ ಸುರಕ್ಷಿತವಾದ ಅವಕಾಶವನ್ನು ಕಲ್ಪಿಸುತ್ತದೆ.

ನಮ್ಮ ಜೀವನದಲ್ಲಿ ಕೆಲವೊಮ್ಮೆ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಂಕೀರ್ಣವಾದ, ಕ್ಲಿಷ್ಟಕರವಾದ ಸಮಸ್ಯೆಗಳನ್ನು ಎದುರುಗೊಳ್ಳುತ್ತೇವೆ. ಅತಿ ಭಾವುಕತೆ, ದಣಿವು, ಕೋಪ, ಅಸಹಾಯಕತೆ, ಭಯ, ನಿರಾಶೆ, ದುಃಖ ಅಥವಾ ಅಸಮರ್ಥತೆ ಮುಂತಾದ ಮಾನಸಿಕ ಸಮಸ್ಯೆಗಳನ್ನು ಅನುಭವಿಸುತ್ತೇವೆ. ಕೆಲವು ಸಂದರ್ಭಗಳಲ್ಲಿ ಮನಸ್ಥಿತಿಗೆ ತಕ್ಕಂತೆ ನಮ್ಮ ಪ್ರತಿಕ್ರಿಯೆಗಳು ಇರುವುದಿಲ್ಲ. ಅಥವಾ ನಮ್ಮಲ್ಲಿ ಅನಿಶ್ಚಿತತೆಯ ಭಾವ ಮೂಡಿರುತ್ತದೆ.

ಜೀವನದಲ್ಲಿ ಒಂದು ರೀತಿಯ ಅಡ್ಡಿ - ಆತಂಕಗಳು ಕಂಡುಬರುತ್ತವೆ. ಅಂತಹ ಸಮಯದಲ್ಲಿ ಯಾರಾದರೂ ಒಬ್ಬ ವಿಶ್ವಾಸಾರ್ಹ ವ್ಯಕ್ತಿಯೊಡನೆ ಮಾತಾಡಿದರೆ ಮನಸ್ಸು ಹಗುರವಾಗುತ್ತದೆ. ನಮ್ಮ ಸಮಸ್ಯೆಗಳನ್ನು ಗೌಪ್ಯವಾಗಿರಿಸಿ, ಸಹಾನುಭೂತಿಯಿಂದ ಸರಿಯಾಗಿ ಆಲಿಸಿ, ಅದನ್ನು ಅರ್ಥಪೂರ್ಣವಾಗಿ ಪರಿಹರಿಸಲು “ಸಮಾಲೋಚನೆ” ಅಥವಾ “ಕೌನ್ಸೆಲಿಂಗ್” ಸೂಕ್ತ ಮಾರ್ಗವಾಗಿದೆ.

ಕೆಲವು ನಿದರ್ಶನಗಳನ್ನು ನೋಡೋಣ :

  • 43 ವರ್ಷದ ರಾಜನ್ ಒಬ್ಬ ಯಶಸ್ವಿ ವಾಣಿಜ್ಯೋದ್ಯಮಿ. ಅವರು ಆರ್ಥಿಕವಾಗಿ ಸದೃಢರಾಗಿದ್ದಾರೆ ಮತ್ತು ಅವರಿಗೆ ಮುದ್ದಾದ ಕುಟುಂಬವಿದೆ. ಬಾಲ್ಯದಲ್ಲಿ ಅವರು ಹಲವಾರು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿದ್ದರು. ಆದರೆ,  ಕಷ್ಟಪಟ್ಟು ದುಡಿದು, ತಮ್ಮ ಸಂಕಷ್ಟಗಳಿಂದ ಹೊರಬಂದು, ಅನುಕೂಲಕರ ಜೀವನ ನಡೆಸುತ್ತಿದ್ದರು.  ಆದರೂ ರಾಜನ್ ಅವರು ಸದಾ ಆತಂಕದಲ್ಲಿರುತ್ತಿದ್ದರು, ಕಿರಿಕಿರಿಗೆ ಒಳಗಾಗುತ್ತಿರುತ್ತಿದ್ದರು. ಮತ್ತು ಯಾವಾಗಲೂ ಒತ್ತಡದಲ್ಲಿರುತ್ತಿದ್ದರು. ಒಟ್ಟಿನಲ್ಲಿ, ಎಲ್ಲ ಅನುಕೂಲಗಳಿದ್ದರೂ ಅವರಿಗೆ ಸಂತೋಷದಿಂದಿರಲು ಸಾಧ್ಯವಾಗುತ್ತಿರಲಿಲ್ಲ. ಇದರ ಪರಿಣಾಮವಾಗಿ ಅವರು ಎಲ್ಲರ ಮೇಲೆ ಸಿಡಿಮಿಡಿಗೊಳ್ಳುತ್ತಿದ್ದರು. ಅವರ ಈ ವರ್ತನೆ ಅವರ ವೈಯಕ್ತಿಕ ಮತ್ತು ಔದ್ಯೋಗಿಕ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತಿತ್ತು.
  • 35ರ ಹರೆಯದ ಲಕ್ಷ್ಮಿ, ದೀರ್ಘಕಾಲದವರೆಗೆ ಒಂದು ಸಭೆಯಲ್ಲಿ ಪಾಲ್ಗೊಂಡು ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಮಾನಸಿಕ ಒತ್ತಡದ ಜೊತೆಗೆ ದೈಹಿಕವಾಗಿಯೂ ಅವರು ದಣಿದಿದ್ದರು. ಮನೆಗೆ ಹಿಂತಿರುಗಿದ ಬಳಿಕ ಕೆಲಕಾಲ ವಿಶ್ರಮಿಸಬೇಕು ಮತ್ತು ಆಯಾಸ ಮರೆಯಬೇಕೆಂದು ಬಯಸಿದ್ದರು. ನಂತರ, ವಿರಾಮದಲ್ಲಿ ಕುಳಿತು ಗಂಡನೊಡನೆ ಮಾತನಾಡಬೇಕೆಂದು ಬಯಸಿದ್ದರು. ಆದರೆ, ಅವರು ಎಣಿಸಿದಂತೆ ಯಾವುದೂ ನಡೆಯಲಿಲ್ಲ. ಮನೆಗೆ ಬರುತ್ತಲೇ ಮಾಮೂಲಿನಂತೆ ಆರಂಭವಾದ ಮಾತುಕತೆ, ವಾಗ್ವಾದಕ್ಕೆ ತಿರುಗಿ, ಜಗಳದೊಡನೆ ಅಂತ್ಯವಾಯಿತು. ಯಾವಾಗಲೂ ಇದು ಹೀಗೇ ಆಗುತ್ತಿದ್ದು, ಲಕ್ಷ್ಮಿ ವಿಪರೀತ ಬೇಸರಗೊಂಡಿದ್ದಳು. ಯಾವಾಗಲೂ ಹೊರಗೇ ಇರಬೇಕು, ಮನೆಗೆ ಹೋಗುವುದೇ ಬೇಡ ಎಂದು ಅವಳಿಗೆ ಅನ್ನಿಸುತ್ತಿತ್ತು.
  • ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ 19ರ ಹರಯದ ಅಮಿತ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಅವನು ಎಲ್ಲರೊಡನೆ ಗೆಳೆತನ ಹೊಂದಿದ್ದ ಮತ್ತು ಉತ್ಸಾಹಿ ಯುವಕನಾಗಿದ್ದ. ಒಮ್ಮೆ ಅವನ ತಂದೆಯ ಆರೋಗ್ಯ ಹದಗೆಟ್ಟು ಹಾಸಿಗೆ ಹಿಡಿದರು. ಆಗಿನಿಂದ ಸಂಪೂರ್ಣ ಚಿತ್ರಣ ಬದಲಾಯಿತು. ಮನೆಯ ಪರಿಸ್ಥಿತಿ ಚಿಂತಾಜನಕವಾಗತೊಡಗಿತು. ಅವನ ತಾಯಿಯು ತಂದೆಯ ಆರೈಕೆಯಲ್ಲಿ ಸಂಪೂರ್ಣವಾಗಿ ತೊಡಗಿರುತ್ತಿದ್ದರು ಮತ್ತು ಅವರಿಗೆ ನೆರವಾಗಲು ಅಮಿತನ ಅಜ್ಜ - ಅಜ್ಜಿ ಕೂಡಾ ಅಲ್ಲಿಗೆ ಬಂದರು. ಆ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಆರ್ಥಿಕ ಮುಗ್ಗಟ್ಟು ಎದುರಾಯಿತು. ಇವೆಲ್ಲದರ ನಡುವೆಯೂ ಅಮಿತ್ ತನ್ನ ಓದಿನ ಕಡೆಗೆ ಹೆಚ್ಚಿನ ಗಮನ ಕೊಡುತ್ತಿದ್ದನಾದರೂ ಕಾಲೇಜಿಗೆ ಹೋಗಲು ಮನಸಾಗುತ್ತಿರಲಿಲ್ಲ. ಅವನು ಗೆಳೆಯರಿಂದ ದೂರ, ಏಕಾಂಗಿಯಾಗಿ ಇರತೊಡಗಿದನು. ಅವನಿಗೆ ತನ್ನ ತಂದೆ ಸಾಯಬಹುದು ಎಂಬ ಚಿಂತೆ ಕಾಡುತ್ತಿತ್ತು. ತಂದೆ ಇಲ್ಲವಾದ ಮೇಲೆ ತನಗೆ ಮತ್ತು ತನ್ನ ಕುಟುಂಬದವರಿಗೆ ಮುಂದೆ ತುಂಬಾ ಕಷ್ಟವಾಗುತ್ತದೆ ಎಂಬ ಭಯ ಕಾಡುತ್ತಿತ್ತು. ಆದರೆ ಮನೆಯಲ್ಲಿ ಯಾರೂ ಇದರ ಬಗ್ಗೆ ಮಾತನಾಡುತ್ತಿರಲಿಲ್ಲ.

ಈಗ ಹೇಳಿ. ಇಂಥಾ ಪರಿಸ್ಥಿತಿಗಳಲ್ಲಿ ರಾಜನ್, ಲಕ್ಷ್ಮಿ ಹಾಗು ಅಮಿತ್’ಗೆ  ಕೌನ್ಸೆಲಿಂಗ್’ನಿಂದ ಸಹಾಯವಾಗುತ್ತದೆಯೇ? ಈ ಮೂವರ ಸನ್ನಿವೇಶದಲ್ಲೂ ಒಂದೇ ಉತ್ತರ; “ಹೌದು, ಕೌನ್ಸೆಲಿಂಗ್ ನೆರವಾಗುತ್ತದೆ”.

ಕೌನ್ಸೆಲಿಂಗ್ ಅವಶ್ಯಕತೆ ಪ್ರತಿಯೊಬ್ಬರಿಗೂ ಇದೆ

ಕೌನ್ಸೆಲಿಂಗ್ ಪ್ರತಿಯೊಬ್ಬರಿಗೂ ಅಗತ್ಯವಿರುವ ಪ್ರಕ್ರಿಯೆ. ಅದರಲ್ಲೂ, ತೀವ್ರ ಒತ್ತಡಕ್ಕೊಳಗಾದವರಿಗೆ ಹಾಗೂ ಭಾವೋದ್ವೇಗವೇ ಮೊದಲಾದ ಸಮಸ್ಯೆಗಳು ಇರುವವರಿಗೆ ಇದರ ಸಹಾಯ ಅತ್ಯಗತ್ಯ.

ಕೌನ್ಸೆಲಿಂಗ್ ನಮ್ಮನ್ನುನಾವು ಅರಿತುಕೊಳ್ಳಲು; ನಾವು ಎದುರಿಸುತ್ತಿರುವ ಮಾನಸಿಕ ಸಮಸ್ಯೆಗಳ ವಾಸ್ತವ ಸ್ಥಿತಿಯನ್ನು ಗ್ರಹಿಸಲು, ಹಾಗೂ ಅಂತಹ ಸಮಸ್ಯೆಗಳನ್ನು ಎದುರಿಸಲು ಬೇಕಾದ ರಚನಾತ್ಮಕ ಮಾರ್ಗಗಳನ್ನು ಕಂಡುಕೊಳ್ಳಲು ನೆರವಾಗುವ ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆಯಿಂದ ನಮ್ಮಲ್ಲಿ ಬದಲಾವಣೆ ತಂದುಕೊಳ್ಳಬಹುದು, ಆತ್ಮ ಗೌರವವನ್ನು ಹೆಚ್ಚಿಸಿಕೊಳ್ಳಬಹುದು ಮತ್ತು ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು. ಈ ಎಲ್ಲ ಸಂಗತಿಗಳೂ ನಮ್ಮ ವೈಯಕ್ತಿಕ ಬೆಳವಣಿಗೆಗೆ ಮತ್ತು ಸಂತೃಪ್ತಿಯ ಬದುಕಿಗೆ ನೆರವಾಗುತ್ತವೆ.

ಕೆಲವೊಮ್ಮೆ ನಮ್ಮ ಬದುಕಿನಲ್ಲಿ ಅತಿ ಹೆಚ್ಚಿನ ಕಾಳಜಿ ಬೇಡುವ, ಅಥವಾ ನಮ್ಮನ್ನು ಯಾತೆನೆಗೆ ಗುರಿಪಡಿಸುವಂಥ ಸಮಸ್ಯೆಗಳು ಎದುರಾಗಬಹುದು. ಇನ್ನು ಕೆಲವೊಮ್ಮೆ ಹಿಂದಿನ ಅನುಭವಗಳು, ನಮ್ಮ ಇಂದಿನ ನಡವಳಿಕೆಗಳು ಹಾಗೂ ಬಾಂಧವ್ಯದ ಮೇಲೆ ಪರಿಣಾಮ ಬೀರಬಹುದು. ಅಂತಹ ಸಂದರ್ಭಗಳಲ್ಲಿ ನಾವು ಭವಿಷ್ಯದಲ್ಲಿ ತಲೆದೋರಬಹುದಾದ ಸಮಸ್ಯೆಗಳ ಬಗ್ಗೆ ಎಚ್ಚರವಿಟ್ಟುಕೊಂಡು ಪರಿಹಾರ ಹುಡುಕಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕೌನ್ಸೆಲಿಂಗ್ ನಮಗೆ ಸಹಕಾರಿ. ಏಕೆಂದರೆ ಕೌನ್ಸೆಲಿಂಗ್, ಕೇವಲ ಕಾಳಜಿ ತೋರುವುದಷ್ಟೆ ಅಲ್ಲ, ಪರಿಹಾರದತ್ತಲೂ ಕರೆದೊಯ್ಯುತ್ತದೆ. ನಮ್ಮ ಅಂತರಂಗದ ಭಾವನೆಗಳನ್ನು ಹಂಚಿಕೊಳ್ಳಲು ಸೂಕ್ತ ವೇದಿಕೆಯನ್ನೂ ಅದು ಕಲ್ಪಿಸಿಕೊಡುತ್ತದೆ.

ಕೌನ್ಸೆಲಿಂಗ್ ಪಡೆಯಲು ಕಾರಣವಾಗಿ ಒದಗಿಬರುವ ಸನ್ನಿವೇಶಗಳು ಯಾವುವು? ಇಲ್ಲಿವೆ ಕೆಲವು ಉದಾಹರಣೆಗಳು:

  • ಸಂಬಂಧಗಳಲ್ಲಿ ಬಿರುಕು : ವ್ಯಕ್ತಿಗತ ಭಿನ್ನಾಭಿಪ್ರಾಯಗಳು, ಬಾಂಧವ್ಯದಲ್ಲಿ ಒಡಕು, ವೈವಾಹಿಕ ಮತ್ತು ಕೌಟುಂಬಿಕ ಕಲಹಗಳು.
  • ಕೋಪ, ಭಯ, ಉದ್ವೇಗ, ನೋವು, ಏಕಾಂಗಿತನ, ಒತ್ತಡ ಮುಂತಾದ ಸಂಕೀರ್ಣ ಭಾವನೆಗಳನ್ನು ಹೊಂದಿರುವುದು.
  • ನಿಂದನೆಗ ಒಳಗಾಗುವುದು : ದೈಹಿಕವಾಗಿ, ಲೈಂಗಿಕವಾಗಿ, ಮೌಖಿಕವಾಗಿ ಅಥವಾ ಮಾನಸಿಕವಾಗಿ ನಿಂದನೆಗೆ ಒಳಗಾಗುವುದು
  • ಕೌಟುಂಬಿಕ ದೌರ್ಜನ್ಯ
  • ಲೈಂಗಿಕ ಗುರುತು ಮತ್ತು ಲೈಂಗಿಕತೆಯ ಆಯ್ಕೆಗಳು
  • ವಿವಿಧ ಹಂತದ ಪರಿವರ್ತನೆಗಳು ಮತ್ತು ಸವಾಲುಗಳು : ಉದಾ - ಉದ್ಯೋಗ, ವಿವಾಹ, ವಿಚ್ಛೇದನ, ಮಕ್ಕಳ ಪೋಷಣೆ, ಮುಪ್ಪು, ನಿವೃತ್ತಿ ಮುಂತಾದವು
  • ಉದ್ಯೋಗ ಸ್ಥಳದಲ್ಲಿನ ಸಮಸ್ಯೆಗಳು : ಆಡಳಿತ ಮಂಡಳಿಯೊಡನೆ ಸಂಘರ್ಷ, ಕಾರ್ಯಕ್ಷೇತ್ರದಲ್ಲಿ ಸಾಧನೆ, ವೃತ್ತಿ ಜೀವನದಲ್ಲಿನ ಆಸೆ – ಆಕಾಂಕ್ಷೆಗಳು, ಕಿರುಕುಳ ಇತ್ಯಾದಿ.
  • ಉದ್ವೇಗ, ಸ್ಕೀಜೋಫ್ರೇನಿಯಾ ಮೊದಲಾದ ಮಾನಸಿಕ ಸಮಸ್ಯೆಗಳನ್ನು ನಿಭಾಯಿಸುವುದು.
  • ದೈಹಿಕ ಸಮಸ್ಯೆಗಳನ್ನು ನಿಭಾಯಿಸುವುದು.
  • ದುಶ್ಚಟಗಳು, ಪ್ರಾಣಹಾನಿ ಮತ್ತು ಆತ್ಮಹತ್ಯೆಯಂತಹ ಆಲೋಚನೆಗೆ ಒಳಗಾಗುವುದು.
  • ಸಾವುನೋವುಗಳು, ಅಗಲುವಿಕೆ, ವಿಯೋಗ ಮೊದಲಾದವುಗಳು
  • ಅಪಘಾತ ಮತ್ತು ಅಂಗವೈಕಲ್ಯದ ಸಮಸ್ಯೆಗಳು.
  • ದೈಹಿಕವಾಗಿ ಅಥವಾ ಮಾನಸಿಕವಾಗಿ ಅನಾರೋಗ್ಯದಿಂದಿರುವ ವ್ಯಕ್ತಿಗಳಿಗೆ ಆರೈಕೆಮಾಡುವುದು.
  • ಮಕ್ಕಳಲ್ಲಿ ಮತ್ತು ಹದಿಹರೆಯದವರ ಸಮಸ್ಯೆಗಳು : ನಡವಳಿಕೆಯಲ್ಲಿನ ಬದಲಾವಣೆಗಳು, ಶೈಕ್ಷಣಿಕ ಒತ್ತಡಗಳು, ಕೌಟುಂಬಿಕ ಕಲಹದಿಂದ ಅವರ ಮೇಲಾಗುವ ಪರಿಣಾಮಗಳು, ಗೆಳೆತನ ನಿಭಾಯಿಸುವಿಕೆ, ಬೆದರಿಕೆ ಇತ್ಯಾದಿ.

ನನ್ನ ಮಿತ್ರರೊಡನೆ ಅಥವಾ ಕುಟುಂಬದವರ ಜೊತೆ ನಾನು ಸಮಸ್ಯೆಗಳನ್ನು ಹೇಳಿಕೊಳ್ಳುವ ಅವಕಾಶವಿದ್ದರೂ, ನಾನೇಕೆ ಕೌನ್ಸೆಲರ್’ಗಳೊಡನೆ ಮಾತನಾಡಬೇಕು ?

ಬಹುತೇಕರು ತಾವು ಅನುಭವಿಸುತ್ತಿರುವ ಸಮಸ್ಯೆಗಳನ್ನು ಮನಗಂಡು, ಸಹಾಯ ಪಡೆಯಲಿಕ್ಕಾಗಿ ಕೌನ್ಸೆಲರ್’ಗಳ ಬಳಿ ಹೋಗುತ್ತಾರೆ. ಆದರೆ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಜನರು ಕೌನ್ಸೆಲರ್ ಬಳಿ ಹೋಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. ಎಷ್ಟೇ ಅಗತ್ಯ ಬಿದ್ದರೂ ತಮ್ಮನ್ನು ತಾವು ನಿರ್ಬಂಧಿಸಿಕೊಳ್ಳುತ್ತಾರೆ. ಕೆಲವರು ಕೌನ್ಸೆಲಿಂಗ್ ಕೇವಲ ಯುವಜನರ ಮಾನಸಿಕ ಸಮಸ್ಯೆಗಳ ಪರಿಹಾರಕ್ಕಾಗಿ ಇದೆ ಎಂದು ತಪ್ಪು ತಿಳಿದಿರುತ್ತಾರೆ. ಇನ್ನು ಕೆಲವರು ಅದನ್ನು ಮಾನಸಿಕ ಅಸ್ವಸ್ಥರ ಚಿಕಿತ್ಸೆ ಎಂದು ಭಾವಿಸಿರುತ್ತಾರೆ. ಹಾಗೂ ಕೌನ್ಸೆಲಿಂಗ್ ಎಂದರೆ ಕೇವಲ ಸಲಹೆಗಳನ್ನು ನೀಡುವುದು ಅಂದುಕೊಂಡಿರುತ್ತಾರೆ. ಆದ್ದರಿಂದ, ಕೌನ್ಸೆಲರ್’ಗಳ ಬಳಿ ಹೋಗುವುದಕ್ಕಿಂತ ಮನೆಯಲ್ಲಿಯೇ ಯಾರದಾದರೂ ಬಳಿ ಹೇಳಿಕೊಳ್ಳುವುದು ಉತ್ತಮವೆಂದು ಭಾವಿಸುತ್ತಾರೆ. ಹೀಗೆ ಮಾಡುವುದರಿಂದ ಸಹಾಯಕ್ಕಿಂತ ಸಮಸ್ಯೆಯಾಗುವುದೇ ಹೆಚ್ಚು.

ಉದಾಹರಣೆಗೆ; ಲಕ್ಷ್ಮಿ ತನ್ನ ಮನೆಯಲ್ಲಿನ ಪ್ರತಿನಿತ್ಯದ ಜಗಳದ ಬಗ್ಗೆ ಆಪ್ತಗೆಳತಿಯಲ್ಲಿ ಹೇಳಿಕೊಂಡಾಗ, ಅವಳ ಗೆಳತಿ “ಇದು ಎಲ್ಲರ ಮನೆಯಲ್ಲೂ ನಡೆಯುವಂಥದ್ದು, ಹಾಗೆ ನೋಡಿದರೆ ನಿನ್ನ ಸಮಸ್ಯೆ ದೊಡ್ಡದೇನಲ್ಲ, ಅರ್ಥ ಮಾಡಿಕೋ” ಎಂದು ಹೇಳಿಬಿಟ್ಟಳು. ಇದರಿಂದ ಲಕ್ಷ್ಮಿಗೆ ಸಮಾಧಾನವಾಗಲಿಲ್ಲ. ಬದಲಾಗಿ ಸಣ್ಣ ಬೆಟ್ಟದಂತಿದ್ದ ಸಮಸ್ಯೆಯನ್ನು ದೊಡ್ಡ ಪರ್ವತ ಮಾಡಿಕೊಂಡಳು. ಗೆಳತಿಯ ಜೊತೆ ಮಾತನಾಡಿದ ಲಕ್ಷ್ಮಿ ನಿರ್ಲಕ್ಷ್ಯಕ್ಕೆ ಒಳಗಾದಂತೆ ಭಾವಿಸಿದಳೇ?

ಹಾಗೆಯೇ, ರಾಜನ್ ತನ್ನ ಸಮಸ್ಯೆಗಳನ್ನು ಸೋದರ ಸಂಬಂಧಿಯೊಡನೆ ಹೇಳಿಕೊಂಡರು. ಆ ಸಂಬಂಧಿ, ”ಹಾಗೆಲ್ಲಾ ಹೇಳಬೇಡ! ನೀನು ನನ್ನ ಕುಟುಂಬಕ್ಕೆ ಮಾದರಿಯಾಗಿದ್ದೀಯ. ಮತ್ತು ನಮ್ಮೆಲ್ಲರಿಗೂ ನೀನೇ ಸ್ಪೂರ್ತಿಯಾಗಿದ್ದೀಯ. ಅಷ್ಟು ದೊಡ್ಡ ಕಂಪೆನಿಯನ್ನು ಮುನ್ನಡೆಸುವ ನಿನಗೆ ಇದು ಯಾವ ಲೆಕ್ಕ ? ಎಲ್ಲಾ ಸಂದರ್ಭದಲ್ಲೂ ನಿಶ್ಚಿಂತೆಯಿಂದಿರಲು ನೀನೇನು ಸಾಧು ಸಂತನಲ್ಲ, ಉತ್ಸಾಹದಿಂದಿರು!” ಎಂದು ಹೇಳಿ ಸಮಾಧಾನ ಪಡಿಸಿದರು. ಈ ಸಲಹೆಯಿಂದ ರಾಜನ್ ಮಿಶ್ರ ಭಾವಕ್ಕೊಳಗಾದರು. ಅವರು ಹಾಸ್ಯಧಾಟಿಯಲ್ಲಿ ಉತ್ತರ ನೀಡಿದ್ದು ರಾಜನ್’ಗೆ ಸಮಾಧಾನ ತರಲಿಲ್ಲ.

ಮಿತ್ರರೊಡನೆ ಅಥವಾ ಕುಟುಂಬದವರೊಡನೆ ಮಾತನಾಡುವುದರಿಂದ ಮನಸ್ಸು ಹಗುರವಾಗಬಹುದು. ಕೆಲವೊಮ್ಮೆ ಅವರು ನೀಡುವ ಸಲಹೆಗಳಿಂದ ಪ್ರಯೋಜನವೂ ಆಗಬಹುದು. ಆದರೆ ಅವರು ಸಲಹೆ ನೀಡುವಾಗ ಅಥವಾ ಸ್ಪಂದಿಸುವಾಗ ಪಕ್ಷಪಾತ ಧೋರಣೆ ನುಸುಳುವ ಅಪಾಯಗಳಿರುತ್ತವೆ. ಅಥವಾ ಅವರು ನಿಮ್ಮ ಮಾತನ್ನು ಸಹಾನುಭೂತಿಯಿಂದ ಕೇಳಿಸಿಕೊಂಡರೂ ನಿಮ್ಮ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋಲಬಹುದು. ನಿಮ್ಮ ಮೇಲೆ ಕನಿಕರ ತೋರಿ ಸುಮ್ಮನಾಗುವ ಸಾಧ್ಯತೆಗಳೇ ಹೆಚ್ಚು.

ಆದರೆ, ಕೌನ್ಸೆಲರ್’ಗಳ ಹೋಗುವುದರಿಂದ ಇಂಥಾ ಯಾವ ಸಮಸ್ಯೆಯೂ ಉಂಟಾಗದು. ಅವರು ಯಾರ ಸಂಬಂಧಿಯೂ ಆಗಿರುವುದಿಲ್ಲವಾದ್ದರಿಂದ, ಸಲಹೆ ನೀಡುವಾಗ ಪಕ್ಷಪಾತ ತೋರುವ ಅನುಮಾನ ಇರುವುದಿಲ್ಲ. ಅವರು ಯಾವುದೇರೀತಿಯಲ್ಲಿ ತಮ್ಮ ಬಳಿ ಸಮಾಲೋಚನೆಗಾಗಿ ಬರುವವರ ಜೊತೆ ಯಾವುದೇ ಸಂಪರ್ಕ ಹೊಂದಿರುವುದಿಲ್ಲ.

ತಮ್ಮ ಜೊತೆ ಸಮಾಲೋಚಿಸಲು  ಬರುವ ವ್ಯಕ್ತಿಯು ಎಂಥದ್ದೇ ಕಠಿಣ ಸಮಸ್ಯೆಗಳನ್ನು ಹೇಳಿಕೊಳ್ಳಲಿ, ಅವರು ಅದನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವಷ್ಟೇ ಪ್ರತಿಕ್ರಿಯಿಸುತ್ತಾರೆ. ಅವರ ಸಮಸ್ಯೆಗಳನ್ನು, ವಿವರಗಳನ್ನು ಗೌಪ್ಯವಾಗಿಡುವ ಮೂಲಕ ವಿಶ್ವಾಸಾರ್ಹತೆ ಪಡೆದಿರುತ್ತಾರೆ. ಅವರಿಗೆ ಚಿಕಿತ್ಸೆಗೆ ಅಗತ್ಯವಿರುವ ನೈಪುಣ್ಯತೆ ಇರುತ್ತದೆ. ಯಾವುದನ್ನು ಯಾವ ದೃಷ್ಟಿಕೋನದಿಂದ ನೋಡಬೇಕು, ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂಬ ಅರಿವು ಇರುತ್ತದೆ. ಆ ಬಗ್ಗೆ ಅವರು ಆಳವಾದ ಅಧ್ಯಯನ ನಡೆಸಿರುತ್ತಾರೆ. ಹಾಗೂ ತಮ್ಮಲ್ಲಿ ಚಿಕಿತ್ಸೆಗೆ ಬರುವವರ ನೈಜ ಸಮಸ್ಯೆಯನ್ನು ಶೋಧಿಸಿ, ಅದಕ್ಕೆ ಪರಿಹಾರ ನೀಡಲು ಯತ್ನಿಸುತ್ತಾರೆ.

ಇದರ ಜೊತೆಗೆ, ಕೌನ್ಸೆಲರ್’ಗಳು ತಮ್ಮ ಬಳಿ ಚಿಕಿತ್ಸೆಗೆ ಬರುವವರಿಗೆ ನೈತಿಕ, ಭಾವನಾತ್ಮಕ ಬೆಂಬಲವನ್ನೂ ಸೂಚಿಸುತ್ತಾರೆ. ಅವರನ್ನು ಉಡಾಫೆಯಿಂದ ನಡೆಸಿಕೊಳ್ಳದೆ ಗೌರವಯುತವಾಗಿ ಆದರಿಸುತ್ತಾರೆ, ಚಿಕಿತ್ಸೆ ನೀಡುವುದು ಅಥವಾ ಕೌನ್ಸೆಲಿಂಗ್ ಅಂದರೆ ಕೇವಲ ಕೇಳಿಸಿಕೊಳ್ಳುವುದು ಮತ್ತು ಸಲಹೆಗಳನ್ನು ನೀಡುವುದಲ್ಲ. ಸಮಸ್ಯೆಯಲ್ಲಿರುವವರ ಜೊತೆಗೆ ಸಹಾನುಭೂತಿಯಿಂದ ವರ್ತಿಸುವುದೂ ಆಗಿದೆ. ಅವರಲ್ಲಿ ಸ್ಥೈರ್ಯ – ಆತ್ಮವಿಶ್ವಾಸಗಳನ್ನು ತುಂಬುವುದಾಗಿದೆ.

ಈ ನಿಟ್ಟಿನಲ್ಲಿ ಕೌನ್ಸೆಲರ್’ಗಳ ಕಾರ್ಯಶೈಲಿ ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ. ಚಿಕಿತ್ಸೆ ಪಡೆಯುವ ಮೊದಲು ಇದನ್ನು ನಾವು ಅರಿತಿರಬೇಕು. ಯಾರದೋ ಕಾರ್ಯಶೈಲಿಯನ್ನು ಮನಸಿನಲ್ಲಿಟ್ಟುಕೊಂಡು, ಇವರಿಂದಲೂ ಅದನ್ನೇ ಅಪೇಕ್ಷಿಸಬಾರದು. ಕೆಲವು ಕೌನ್ಸಲೆರ್’ಗಳು ತಮ್ಮ ಬಳಿ ಬರುವವರ ಸಮಸ್ಯೆಯ ಮೂಲವನ್ನು ಅರಿಯಲು ಸಾಕಷ್ಟು ಶ್ರಮ ವಹಿಸುತ್ತಾರೆ.

ಅವರ ಕುಟುಂಬದವರ ಜೊತೆಯೂ ಮಾತನಾಡಿ, ಸಮಗ್ರವಾದ ಪರಿಹಾರ ಹುಡುಕಿಕೊಡಲು ಯತ್ನಿಸುತ್ತಾರೆ. ಚಿಕಿತ್ಸೆ ಬಯಸುವವರ ಗುಣ ಸ್ವಭಾವಗಳು, ಚಟುವಟಿಕೆಗಳು ಮೊದಲಾದವನ್ನು ಅರಿತುಕೊಂಡು, ನಂತರವಷ್ಟೆ ಚಿಕಿತ್ಸೆ ಆರಂಭಿಸುತ್ತಾರೆ. ಈ ವಿಧಾನವು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆಯಾದರೂ ಅವರ ಪ್ರಯತ್ನ ಫಲ ನೀಡುವುದು ಖಾತ್ರಿ ಇರುತ್ತದೆ.

ಕೌನ್ಸೆಲರ್’ಗಳ ಕಾರ್ಯವ್ಯಾಪ್ತಿ ದೊಡ್ಡದು. ಇವರು ಕೇವಲ ವೈದ್ಯರಲ್ಲ ಮತ್ತು ಅವರು ಯಾವುದೇ ಔಷಧ ನೀಡುವುದಿಲ್ಲ. ಮನೋವೈದ್ಯರ ಚಿಕಿತ್ಸೆಗೆ ಪೂರಕವಾಗಿ, ಪೇಷೆಂಟ್’ನ ಪರಿಸ್ಥಿತಿಗೆ ಅನುಗುಣವಾಗಿ ಚಿಕಿತ್ಸೆ ನೀಡುತ್ತಾರೆ. ಆದ್ದರಿಂದ, ಸಂಬಂಧಿಗಳು ಅಥವಾ ಗೆಳೆಯರ ಬಳಿ ಸಮಾಲೋಚನೆ ನಡೆಸುವುದಕ್ಕಿಂತ ಕೌನ್ಸೆಲರ್’ಗಳ ಬಳಿ ಮಾತನಾಡುವುದು ಉತ್ತಮ ಆಯ್ಕೆ ಎನ್ನಿಸುತ್ತದೆ.

** ಈ ಕಿರು ಪ್ರಬಂಧದಲ್ಲಿ ನೀಡಲಾಗಿರುವ ವಿಷಯಗಳು, ವಿವರಣೆಗಳು ಕಾಲ್ಪನಿಕ ಮತ್ತು ಯಾವುದೇ ವ್ಯಕ್ತಿಗೆ ಸಂಬಂಧಿಸಿರುವುದಿಲ್ಲ.

ಅರ್ಚನಾ ರಾಮನಾಥನ್, ಪರಿವರ್ತನ್ ಕೌನ್ಸೆಲಿಂಗ್ ಟ್ರೈನಿಂಗ್ ಅಂಡ್ ರಿಸರ್ಚ್ ಸೆಂಟರ್’ನಲ್ಲಿ ಕೌನ್ಸೆಲರ್ 

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org