ಉಪಕಾರ ಸ್ಮರಣೆ: ಒಂದು ಪ್ರಮುಖ ಭಾವನೆ

ನಿಮ್ಮ ಜೀವನದಲ್ಲಿ ನೀವು ಯಾವ ವಿಷಯಕ್ಕಾಗಿ ಅತ್ಯಂತ ಕೃತಜ್ಞರಾಗಿದ್ದೀರಿ? ನೀವು ಯಾವಾಗೆಲ್ಲಾ ಕೃತಜ್ಞಾ ಭಾವವನ್ನು ಅನುಭವಿಸಿದ್ದೀರಿ? ನೀವು ಸುಲಭವಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಬಲ್ಲಿರಾ? ಮಾನವ ಇತಿಹಾಸದುದ್ದಕ್ಕೂ, ಜಗತ್ತಿನ ಎಲ್ಲಾ ಸಂಸ್ಕøತಿಗಳಲ್ಲಿಯೂ ಕೃತಜ್ಞತೆಗೆ ಮಹತ್ವದ ಸ್ಥಾನವಿರುವುದರಿಂದ, ಪಾಸಿಟಿವ್ ಸೈಕಾಲಜಿಯಂತಹ ಹೊಸ ಕ್ಷೇತ್ರದಲ್ಲಿಯೂ ಇದಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ.

ಇದು ಭಾರತದ ವಿಷಯದಲ್ಲಂತೂ ನೂರಕ್ಕೆ ನೂರರಷ್ಟು ನಿಜ. ಉದಾಹರಣೆಗೆ, ಸುಮಾರು 1200 ವರ್ಷಗಳಷ್ಟು ಹಳೆಯದಾದ, ಹಿಂದು ಕವಿ, ತತ್ವಜ್ಞಾನಿಯೊಬ್ಬರು ರಚಿಸಿದ ತಮಿಳು ಗ್ರಂಥ, ‘ಕುರಳ್’ನಲ್ಲಿ ನಿತ್ಯ ಜೀವನದಲ್ಲಿ ಕೃತಜ್ಞತೆಯ ಮಹತ್ವದ ಕುರಿತು ಈ ರೀತಿ ಹೇಳಲಾಗಿದೆ,-“ಬೇರೆಲ್ಲಾ ರೀತಿಯ ಪಾಪಗಳಿಂದ ಮುಕ್ತಿ ಪಡೆದವರು ಇದ್ದಾರೆ. ಆದರೆ, ಕೃತಘ್ನತೆಯ ಪಾಪದಿಂದ ಮುಕ್ತರಾದವರು ಯಾರೂ ಇಲ್ಲ. (ಜಿ. ಎನ್ ದಾಸ್‍ ಅವರ ತಿರುಕ್ಕುರಳ್, ಪು.32)

ಪಾಸಿಟಿವ್ ಸೈಕಾಲಜಿ ತಜ್ಞರು ಕೃತಜ್ಞತೆಯನ್ನು ಯಾವ ರೀತಿ ವ್ಯಾಖ್ಯಾನಿಸುತ್ತಾರೆ? ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಮಾಡಿರುವ ಡಾ. ರಾಬರ್ಟ್ ಎಮ್ಮಾನ್ಸ್ ಅವರ ಪ್ರಕಾರ, “ಕೃತಜ್ಞತೆಯು ಯಾವುದೇ ಕೊಡುಗೆಗಳಿಗೆ ನೀಡುವ ಭಾವನಾತ್ಮಕ ಪ್ರತಿಕ್ರಿಯೆಯಾಗಿದೆ. ಇನ್ನೊಬ್ಬರ ಪರೋಪಕಾರದ ಕ್ರಿಯೆಯಿಂದ ಪ್ರಯೋಜನ ಪಡೆದವರಲ್ಲಿ ಉಂಟಾಗುವ ಭಾವನೆಯಾಗಿದೆ.”

ಉತ್ತರ ಅಮೇರಿಕಾದ ಹಿಂದು ಟೆಂಪಲ್ ಸೊಸ್ಯಾಟಿಯ ಅಧ್ಯಕ್ಷರು ಮತ್ತು ಸಮಕಾಲೀನ ಚಿಂತಕರಾದ ಡಾ.ಉಮಾ ಮೈಸೂರ್‍ಕರ್‍ ಅವರು ಕೃತಜ್ಞತೆಯ ಬಗ್ಗೆ ಈ ರೀತಿ ವಿವರಿಸುತ್ತಾರೆ. “ಪರೋಪಕಾರ ಸ್ಮರಣೆಗೆ ಹಿಂದೂ ಸಂಸ್ಕøತಿಯಲ್ಲಿ ಬಹಳ ಮಹತ್ವದ ಸ್ಥಾನವಿದೆ. ಇದಕ್ಕೆ ಎರಡು ಮುಖಗಳಿವೆ. ನಮಗೆ ದೊರೆಯುವ ಪ್ರತಿಯೊಂದೂ ಕೊಡುಗೆಗೂ ನಾವು ಕೃತಜ್ಞರಾಗಿರಬೇಕು, ಆದರೆ ನಾವು ಮಾಡುವ ಕಾರ್ಯಕ್ಕೆ ಕೃತಜ್ಞತೆಯನ್ನು ಆಶಿಸಬಾರದು. ಹಿಂದೂ ಪರಂಪರೆಯು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಉಪಕಾರ ಮಾಡಬೇಕೆಂದು ಬೋಧಿಸುತ್ತದೆ.” ಜಗತ್ತಿನ ಇತರ ಧರ್ಮಗಳು ಕೂಡಾ ಕೃತಜ್ಞತೆಗೆ ಬಹಳ ಮಹತ್ವ ನೀಡಿವೆ. ಸನಾತನ ಗ್ರೀಕ್ ತತ್ವಜ್ಞಾನಿಯಾದ ಸಿಸೆರೋನು, “ಕೃತಜ್ಞತೆಯು ಅತ್ಯಂತ ಶ್ರೇಷ್ಟವಾದ ಸದ್ಗುಣ ಮಾತ್ರವಲ್ಲದೇ, ಎಲ್ಲಾ ಸದ್ಗುಣಗಳ ಮೂಲವಾಗಿದೆ,” ಎಂದಿದ್ದಾನೆ.

ಇಷ್ಟಾದರೂ ಕೂಡಾ, ಮನಃಶಾಸ್ತ್ರದಲ್ಲಿ ಈ ವಿಷಯದ ಬಗ್ಗೆ ಅತೀ ಕಡಿಮೆ ತಿಳಿಸಲಾಗಿದೆ. ಇದಕ್ಕೆ ಇಂದು ಅಪವಾದವೆಂದರೆ, ಅಬ್ರಹಾಂ ಮಾಸ್ಲೊವ್. 20ನೆಯ ಶತಮಾನದ ಮಧ್ಯಭಾಗದಲ್ಲಿ ಆತನು (ಕ್ರಿಯಾಶೀಲ, ರಚನಾತ್ಮಕ ಮತ್ತು ಸಂತೃಪ್ತ) ಮಹಿಳೆ ಮತ್ತು ಪುರುಷರ ಮೇಲೆ ನಡೆಸಿದ ಅಧ್ಯಯನಗಳಿಂದಾಗಿ, ಕೃತಜ್ಞತೆಯನ್ನು ಸುಲಭವಾಗಿ ಅನುಭವಿಸುವ ಮತ್ತು ವ್ಯಕ್ತಪಡಿಸುವ ಸಾಮರ್ಥ್ಯವು ಮಾನಸಿಕ ಆರೋಗ್ಯಕ್ಕೆ ಬಹಳ ಪ್ರಮುಖವಾದ ಅಂಶವಾಗಿದೆ ಮತ್ತು ಆ ರೀತಿ ಮಾಡಲು ಅಸಮರ್ಥರಾದವರಿಗೆ ಆ ಗುಣಗಳನ್ನು ಬೆಳೆಸಿಕೊಳ್ಳಲು ತಿಳಿಸಬೇಕು ಎಂಬ ನಿರ್ಧಾರಕ್ಕೆ ಬಂದನು. ಜೀವನದ ಖುಷಿಯ ಕ್ಷಣಗಳನ್ನು ನೆನೆಸಿಕೊಳ್ಳುವ ಮತ್ತು ಭೂಮಿಯ ಮೇಲೆ ನಮಗಿರುವ ಸಮಯ ಅತೀ ಕಡಿಮೆ ಎಂದು ಅರಿಯುವ ಮೂಲಕ ಕೃತಜ್ಞತೆಯ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಅವರು ತಿಳಿಸುತ್ತಾರೆ. ಮಾಸ್ಲೋವ್‍ ಪ್ರಕಾರ, ಈ ವಿಷಯದಲ್ಲಿ ‘ಕೌಂಟ್ ಯುವರ್ ಬ್ಲೆಸಿಂಗ್ಸ್’ ಎಂಬ ಪುರಾತನ ಗಾದೆಯು ಬಹಳ ಸೂಕ್ತವಾಗಿದೆ.

ಡೇವಿಸ್ ನಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಡಾ. ರಾಬರ್ಟ್ ಎಮೋನ್ಸ್ ರವರು, ಪರೋಪಕಾರ ಸ್ಮರಣೆಯ ಕುರಿತ ಅಗ್ರಗಣ್ಯ ಸಂಶೋಧಕರಲ್ಲಿ ಒಬ್ಬರಾಗಿದ್ದಾರೆ. ಅವರು ಮತ್ತು ಅವರ ಸಹೋದ್ಯೋಗಿಗಳ ತಂಡವು ನಡೆಸಿದ ಸಂಶೋಧನೆಯಿಂದ ಪರೋಪಕಾರವನ್ನು ಸ್ಮರಿಸುವ ವ್ಯಕ್ತಿಗಳು ನಿತ್ಯ ಜೀವನದಲ್ಲಿ ಮಾನಸಿಕವಾಗಿ ಹಲವಾರು ಲಾಭಗಳನ್ನು ಪಡೆಯುತ್ತಾರೆ ಎಂದು ತಿಳಿದು ಬಂದಿದೆ. ಸಂತೋಷ, ಆಶಾವಾದಿತ್ವ, ಜೀವನೋತ್ಸಾಹ, ಉಳಿದವರೊಂದಿಗೆ ಆತ್ಮೀಯ ಸಂಬಂಧ, ಉಳಿದ ಜೀವಿಗಳೊಂದಿಗೂ ನಮಗಿರುವ ಸಂಬಂಧದ ಅರಿವು ಮತ್ತು ಪ್ರಾಪಂಚಿಕ ವಸ್ತುಗಳೆಡೆಗೆ ಕಡಿಮೆ ಆಸಕ್ತಿ ಮುಂತಾದ ಗುಣಗಳು ಬೆಳೆದು ಅವರ ವೈಯಕ್ತಿಕ ಆರೋಗ್ಯವು ಉತ್ತಮವಾಗಿರುತ್ತದೆ. ಕೃತಜ್ಞತೆಯು ಅಸೂಯೆಯ ಭಾವವನ್ನು ಕಡಿಮೆಮಾಡುತ್ತದೆ.

ಹಾಗಾದರೆ ವಿವಾಹದಂತಹ ಸಂಬಂಧಗಳಲ್ಲಿ ಕೃತಜ್ಞತೆಯ ಪಾತ್ರವೇನು? ಹೆಚ್ಚಿನ ಸಂಶೋಧನೆಗಳ ಪ್ರಕಾರ ಪರಸ್ಪರ ಕೃತಜ್ಞತೆಯ ಭಾವವಿರುವ ದಂಪತಿಗಳಲ್ಲಿ ಸಂಘರ್ಷವು ಕಡಿಮೆ ಇರುತ್ತದೆ. ಈ ಅಧ್ಯಯನವು ಸರಿಯಾಗಿದೆ: ಏಕೆಂದರೆ, ನಿಮ್ಮ ಜೀವನದ ಅತೀ ಪ್ರಮುಖ ವ್ಯಕ್ತಿಯೆಡೆಗೆ ನೀವು ಕೃತಜ್ಞತೆಯಂತಹ ಧನಾತ್ಮಕ ಭಾವನೆಯನ್ನು ಹೊಂದಿದ್ದರೆ ಸಹಜವಾಗಿಯೇ ಅಲ್ಲಿ ಕೋಪ ಮತ್ತು ನಿರಾಸೆಯಂತಹ ಋಣಾತ್ಮಕ ಅಂಶಗಳಿಗೆ ಜಾಗವಿರುವುದಿಲ್ಲ. ಚಾಪೆಲ್ ಹಿಲ್‍ನ ನಾರ್ಥ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಡಾ. ಸಾರಾ ಅಲ್ಗೆಯವರ ಅಧ್ಯಯನದ ಪ್ರಕಾರ, ರೋಮ್ಯಾಂಟಿಕ್ ಪಾರ್ಟನರ್ ಬಗೆಗಿರುವ ಕೃತಜ್ಞತಾ ಭಾವವು ಸಂಬಂಧಗಳಿಗೆ ಟಾನಿಕ್ಕಿನಂತೆ ಕಾರ್ಯನಿರ್ವಹಿಸುತ್ತದೆ. ದೈನಂದಿನ ಜೀವನದ ಕೆಲವು ಸರಳ ಕಾರ್ಯಗಳು ಈ ಭಾವನೆಯನ್ನು ಉಕ್ಕಿಸಿದರೆ ಅದರಿಂದ ಮಧುರ ಭಾವಗಳು ಉಂಟಾಗುತ್ತವೆ, ಆದ್ದರಿಂದಲೇ ವೈವಾಹಿಕ ಹಾಗೂ ಕೌಟುಂಬಿಕ ವಿಷಯಗಳ ತಜ್ಞರು, ಸಂಬಂಧವು ಗಟ್ಟಿಯಾಗಲು ನಾವು ಪ್ರತಿ ದಿನವು ಪ್ರೀತಿಪಾತ್ರರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಅಗತ್ಯವೆಂದು ಸಲಹೆ ಮಾಡುತ್ತಾರೆ. ಇವು ಸುಂದರವಾದ ಪ್ರವಾಸಗಳು ಉಂಟುಮಾಡುವ ಲಾಭಗಳಿಗಿಂತ ದೀರ್ಘಕಾಲೀನ ಲಾಭಗಳನ್ನು ನೀಡುತ್ತವೆ.

ಪೆನ್ಸ್ವಿಲ್ವೇನಿಯಾ ವಿಶ್ವವಿದಯಾಲಯದ ಡಾ. ಮಾರ್ಟಿನ್ ಸೆಲಿಗ್‍ಮನ್ ಹಾಗೂ ತಂಡದವರು ಕೃತಜ್ಞತೆಯ ಸಹಾಯದಿಂದ ಆರೋಗ್ಯ ವೃದ್ಧಿಸಿಕೊಳ್ಳುವ ವಿಧಾನವನ್ನು ಕಂಡುಹಿಡಿದಿದ್ದಾರೆ. ಇದರಲ್ಲಿ ಬಹಳ ಮುಖ್ಯವಾದುದೆಂದರೆ ‘ಕೃತಜ್ಞತಾ ಭೇಟಿ. ನೀವು ಕೃತಜ್ಞರಾಗಿರುವ ವ್ಯಕ್ತಿಯೊಬ್ಬರಿಗೆ,ಉದಾಹರಣೆಗೆ ನಿಮ್ಮ ಹಳೆಯ ಶಿಕ್ಷಕರು, ಸ್ನೇಹಿತರು ಅಥವಾ ಸಂಬಂಧಿಗಳಿಗೆ ನಿಮ್ಮ ಭಾವನೆಗಳನ್ನು ನಿವೇದಿಸಿ ಪತ್ರವನ್ನು ಬರೆದು ಅದನ್ನು ನಿಮ್ಮ ಕೈಯಾರೆ ಅವರಿಗೆ ತಲುಪಿಸಬೇಕು. ಕೃತಜ್ಞತಾ ಭೇಟಿಯು ಸುಂದರವಾದ ಮತ್ತು ತೀವ್ರ ಭಾವನೆಗಳನ್ನು ಹೊರಹಾಕುವುದರಿಂದ ಭೇಟಿಯನ್ನು ಕೈಗೊಂಡ ವ್ಯಕ್ತಿಯ ಆರೋಗ್ಯದ ಮೇಲೆ ಇದು ತಿಂಗಳುಗಳವರೆಗೆ ಉತ್ತಮ ಪರಿಣಾಮ ಬೀರುತ್ತದೆ.

ನೆಮ್ಮದಿ, ಆರೋಗ್ಯ ವರ್ಧನೆಗೆ ಮಾರ್ಗದರ್ಶಿ ಸೂತ್ರಗಳು:

ನಿಮ್ಮ ಜೀವನದಲ್ಲಿ ನೀವು ಹೆಚ್ಚು ಹೆಚ್ಚು ಕೃತಜ್ಞತೆಯ ಭಾವವನ್ನು ಬೆಳೆಸಿಕೊಂಡಂತೆ, ನಿಮ್ಮ ನಿತ್ಯ ಜೀವನದ ಸಂತೋಷ ಮತ್ತು ಆರೋಗ್ಯ ವೃದ್ಧಿಸುತ್ತದೆ. ಇಲ್ಲಿ ಅಂತಹ ಐದು ಪರಿಣಾಮಕಾರಿ ಮಾರ್ಗಗಳನ್ನು ತಿಳಿಸಲಾಗಿದೆ:

  1. ಕೃತಜ್ಞತಾ ಯಾದಿಯನ್ನು ತಯಾರಿಸಿ: ಮುಂದಿನ ನಾಲ್ಕು ವಾರಗಳಲ್ಲಿ, ವಾರಕ್ಕೊಂದು ಬಾರಿ, ನೀವು ನಿಮ್ಮ ಜೀವನದಲ್ಲಿ ಸ್ಮರಿಸಲು ಬಯಸುವ ವಿಷಯಗಳ ಕುರಿತು ಬರೆದಿಡಲು ಸಮಯ ನಿಗದಿ ಪಡಿಸಿಕೊಳ್ಳಿ. ನಿಮ್ಮ ಯಾದಿಯಲ್ಲಿ ಅಗತ್ಯವಾಗಿ ನಿಮ್ಮ ಕುಟುಂಬದ ಸದಸ್ಯರು, ಸ್ನೇಹಿತರು, ಸಹೋದ್ಯೋಗಿಗಳು, ನೆರೆಹೊರೆಯವರು ಸೇರಿದಂತೆ ನಿಮ್ಮ ಆರೋಗ್ಯ, ಜೀವನೋಪಾಯ, ವೈಯಕ್ತಿಕ ಕೌಶಲ್ಯ ಮತ್ತು ಹವ್ಯಾಸಗಳಿಗೆ ಆಸ್ಪದವಿರಲಿ.
  2. ಕೃತಜ್ಞತಾ ಪುಸ್ತಕವನ್ನು ನಿರ್ವಹಿಸಿ: ಪ್ರತಿದಿನ ಮಲಗುವ ಮುನ್ನ ಆ ದಿನದÀ ಯಾವ ವಿಷಯವನ್ನು ನೀವು ನೆನಪಿಸಿಕೊಳ್ಳಲು ಬಯಸುತ್ತೀರಿ ಎಂದು ಬರೆಯಿರಿ. ಇದು ಯಾವುದೋ ದೊಡ್ಡ, ನಾಟಕೀಯ ವಿಷಯದ ಕುರಿತೇ ಇರಬೇಕೇಂದೇನಿಲ್ಲ. ಉದಾಹರಣೆಗೆ, ನೀವು ಕೆಲಸಕ್ಕೆ ಹೇಗೆ ಹೋದಿರಿ? ಅಥವಾ ಅಂಚೆ ಕಛೇರಿಯಲ್ಲಿ ಸರದಿಯಲ್ಲಿ ಎಂದಿಗಿಂತ ಕಡಿಮೆ ಸಮಯ ನಿಂತಿದ್ದರ ಕುರಿತು ಕೂಡಾ ನೀವು ಬರೆಯಬಹುದು. ನೀವು ಪ್ರತಿದಿನವೂ ಬರೆಯುವ ಮೂಲಕ ನಿಮ್ಮ ಕೃತಜ್ಞತೆಯ ಮಸಲ್ಸ್‍ಗಳನ್ನು ಬಲಪಡಿಸಿಕೊಳ್ಳುವುದು ಬಹುಮುಖ್ಯವಾಗಿರುತ್ತದೆ. ಒಂದುವೇಳೆ ನೀವು ಪ್ರತಿ ದಿನವೂ ಈ ಬರವಣಿಗೆಗೆ ನಿಗದಿತ ಸಮಯವನ್ನು ಮೀಸಲಿಡುವುದು ಸಾಧ್ಯವಾದರೆ ಬಹಳ ಉತ್ತಮ.
  3. ಸಂಬಂಧಿಗಳಿಗೆ ಕೃತಜ್ಞತಾ ಪತ್ರಗಳನ್ನು ಬರೆಯುವುದು: ನೀವು ವಿವಾಹಿತರಾದಲ್ಲಿ ನಿಮ್ಮ ಪತ್ನಿಗೆ ಬರೆಯಿರಿ, ಇಲ್ಲವಾದಲ್ಲಿ, ನಿಮ್ಮ ಪಾಲಕರು ಅಥವಾ ಒಡಹುಟ್ಟಿದವರಿಗೆ ಬರೆಯಿರಿ. ನಿಮ್ಮ ಪತ್ರವು ಸಾಮಾನ್ಯವಾದ ಆದರೆ ನಿರ್ದಿಷ್ಟ ವಿಷಯವನ್ನು, ಉದಾಹರಣೆಗೆ ಕಳೆದ ತಿಂಗಳಿನ ಕನಿಷ್ಟ ಒಂದು ವಿಷಯವನ್ನು ಉಲ್ಲೇಖಿಸಿ ಬರೆದಿದ್ದಾಗಿರಬೇಕು. ಉದಾಹರಣೆಗೆ, “ಕಳೆದ ವಾರ ನಾನು ಕಛೇರಿಯಲ್ಲಿ ನನ್ನ ಮೇಲಾಧಿಕಾರಿಯ ಬಗ್ಗೆ ಹೊಂದಿದ್ದ ಸಮಸ್ಯೆಗೆ ನೀನು ನೀಡಿದ ಸಲಹೆ ಮತ್ತು ಸಮಯಕ್ಕೆ ನಾನು ಆಭಾರಿಯಾಗಿದ್ದೇನೆ.
  4. ಸ್ನೇಹಿತರಿಗೆ ಕೃತಜ್ಞತಾ ಪತ್ರಗಳನ್ನು ಬರೆಯುವುದು: ಕೆಲವೊಮ್ಮೆ ನಾವು ನಮ್ಮ ಬ್ಯುಸಿ ಜೀವನದಿಂದಾಗಿ ಅತೀ ಹತ್ತಿರದ ಸ್ನೇಹಿತರಿಗೂ ಕೂಡಾ ನಮ್ಮ ಜೀವನದಲ್ಲಿ ಅವರ ಮಹತ್ವವೇನೆಂದು ತಿಳಿಸಲು ವಿಫಲರಾಗುತ್ತೇವೆ. ನಿಮ್ಮ ಜೀವನದಲ್ಲಿ ಹೀಗಾಗಲು ಬಿಡಬೇಡಿ. ಪ್ರತಿಯೊಬ್ಬರು ಅವರು ನಿಮಗೆ ನೀಡಿದ ಗಮನ, ಸಾಂಗತ್ಯ ಮತ್ತು ಕಾಳಜಿಗೆ ಅಭಿನಂದನೆಗಳನ್ನು ಸ್ವೀಕರಿಸಲು ಬಯಸುತ್ತಾರೆ. ಒಬ್ಬ ಆತ್ಮೀಯ ಸ್ನೇಹಿತ/ತೆ ಯನ್ನು ಗುರುತಿಸಿ ಅವರಿಗೆ ನಿಮ್ಮ ಕೈಯಿಂದಲೇ ಬರೆದ ಸ್ಮರಣಾ ಪತ್ರವನ್ನು ಕಳುಹಿಸಿ. ಚಟುವಟಿಕೆ 2ರಲ್ಲಿ ತಿಳಿಸಿರುವಂತೆ ನಿರ್ದಿಷ್ಟ ವಿಷಯ ಅಥವಾ ಘಟನೆಯನ್ನು ಉಲ್ಲೇಖಿಸುವುದು ಸೂಕ್ತ.
  5. ಕೃತಜ್ಞರಾಗಿರುತ್ತೇವೆಂದು ಸಂಕಲ್ಪ ಮಾಡಿ: ಸಂಶೋಧನೆಗಳ ಪ್ರಕಾರ ಒಂದು ಅಭ್ಯಾಸವನ್ನು ಅನುಸರಿಸುತ್ತೇವೆಂದು ಸಂಕಲ್ಪ ಮಾಡುವುದರಿಂದ ಅದರಂತೆ ನಡೆದುಕೊಳ್ಳುವ ಸಂಭವನೀಯತೆಯು ಅಧಿಕವಾಗುತ್ತದೆ. ಆದ್ದರಿಂದ, ನೀವು ನಿಮ್ಮ ಕೃತಜ್ಞತಾ ಪ್ರತಿಜ್ಞೆಯನ್ನು ಉದಾಹರಣೆಗೆ, ‘ನಾನು ಪ್ರತಿದಿನವೂ ಉಪಕಾರ ಸ್ಮರಣೆಯನ್ನು ಮಾಡುತ್ತೇನೆ’ ಎಂದು ಬರೆದು ನಿಮಗೆ ಸುಲಭವಾಗಿ ಕಾಣುವ ಜಾಗದಲ್ಲಿ ಅಂಟಿಸಿ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org