ಆರ್ಥಿಕವಾಗಿ ಹಿಂದುಳಿದ ವ್ಯಕ್ತಿ ಅಥವಾ ಸಮುದಾಯಗಳ ಮಾನಸಿಕ ಸ್ಥಿತಿಗತಿಗಳು

ಹೊರಗಿನವರಿಗೆ ಚಿಕ್ಕದಾಗಿ ತೋರುವ ಸಮಸ್ಯೆಗಳು ಕೆಲವೊಮ್ಮೆ, ಅದನ್ನು ಅನುಭವಿಸುವ ವ್ಯಕ್ತಿಯ ಮಾನಸಿಕ ಸ್ವಾಸ್ಥ್ಯದ ಮೇಲೆ ದೀರ್ಘಕಾಲಿಕ ಪರಿಣಾಮವನ್ನೇ ಬೀರಿರುತ್ತವೆ…

ಅಂಚಿನಲ್ಲಿರುವ – ಅಂದರೆ ಆರ್ಥಿಕವಾಗಿ ಹಿಂದುಳಿದ ವ್ಯಕ್ತಿ ಅಥವಾ ಸಮುದಾಯಗಳು ಯಾವಾಗಲೂ ಒಂದು ಬಗೆಯ ನಿರ್ಲಕ್ಷಿತ ಮನೋಭಾವಕ್ಕೆ ಒಳಗಾಗಿರುತ್ತಾರೆ. ಬಹುತೇಕವಾಗಿ ಅಂತಹಾ ಅಭದ್ರತೆ ಮೂಡುವಂತೆ ಅವರನ್ನು ನಡೆಸಿಕೊಳ್ಳಲಾಗಿರುತ್ತದೆ. ಈ ಸಮುದಾಯಗಳು ಸಮಾಜದಲ್ಲಿ ಹೆಚ್ಚಿನ ಅಂತಸ್ತು, ಸಂಪತ್ತು, ಗೌರವವುಳ್ಳ ಜನರಿಂದ ಅವಮಾನಿತರೂ ಶೋಷಿತರೂ ಆಗಿರುತ್ತಾರೆ. ಈ ಕಾರಣಗಳಿಂದ ಸೌಲಭ್ಯವಂಚಿತ ಸಮುದಾಯಗಳ / ವ್ಯಕ್ತಿಗಳ ಮನಸ್ಥಿತಿಯು ವಿಚಲಿತಗೊಂಡಿರುತ್ತದೆ.

ಈ ಹಿನ್ನೆಲೆಯಲ್ಲಿ ರೂಪುಗೊಳ್ಳುವ ಅವರ ಆಲೋಚನೆ ಮತ್ತು ವರ್ತನೆಗೆ ಅನುಗುಣವಾಗಿ ಅವರನ್ನು “ಮುಖ್ಯವಾಹಿನಿ”ಯಿಂದ ಹೊರಗಿಡಲಾಗುತ್ತದೆ. ಸಮಾಜದ ಈ ತಾರತಮ್ಯವು ಜಾತಿ, ಜನಾಂಗ, ಧರ್ಮ, ಮನಸ್ಥಿತಿ, ದೈಹಿಕ ಸಾಮರ್ಥ್ಯ, ಸಮಾಜೋಆರ್ಥಿಕ ಪರಿಸ್ಥಿತಿ, ಲೈಂಗಿಕ ಆಯ್ಕೆಗಳು, ವಯಸ್ಸು, ತೂಕ ಇನ್ನಿತರ ವಿಷಯಗಳನ್ನು ಒಳಗೊಂಡಿರುತ್ತದೆಯಾದರೂ; ಅಷ್ಟಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಹೀಗೆ ನಿರ್ಲಕ್ಷ್ಯ ಧೋರಣೆಗೆ ಒಳಗಾದವರು ಮತ್ತು ಸಮಾಜದಿಂದ ಹೊರತುಗೊಳಿಸಲ್ಪಟ್ಟವರು ಈ ಕಾರಣದಿಂದ ಅನುಭವಿಸುವ ಮಾನಸಿಕ ಹಿಂಸೆ ದೀರ್ಘಕಾಲಿಕ ಪರಿಣಾಮವನ್ನು ಉಂಟುಮಾಡುತ್ತದೆ. ಅವರ ಮಾನಸಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ.

ನಾನು ಈ ಲೇಖನವನ್ನು ಬರೆಯುವಾಗ, ಈ ಸಮುದಾಯಗಳ ಎಲ್ಲ ಆಯಾಮಗಳನ್ನೂ ಸ್ಪರ್ಶಿಸಲು ಸಾಧ್ಯವಾಗಿಲ್ಲ. ಎಲ್ಲ ಬಗೆಯ ಸೌಲಭ್ಯಗಳನ್ನು ಹೊಂದಿರುವ, ಮುಂದೆಯೂ ಹೊಂದಲಿರುವ ನನ್ನಿಂದ ಸೌಲಭ್ಯವಂಚಿತ ಸಮುದಾಯದ ಮನಸ್ಥಿತಿಯನ್ನು ಯಥಾವತ್ತಾಗಿ ನಿರೂಪಿಸುವುದು ಸಾಧ್ಯವಾಗುವುದಿಲ್ಲ ಎಂದು ತಿಳಿದಿದೆ. ಒಂದು ಸುರಕ್ಷಿತ ಅಂತರದಲ್ಲಿ ಇದ್ದುಕೊಂಡೇ ಇದನ್ನು ಬರೆಯುತ್ತಿದ್ದೇನೆ ಎಂದು ನನಗೆ ತಿಳಿದಿದೆ.

ಸಮಾಜದಲ್ಲಿ ಇಂತಹ ತಾರತಮ್ಯಕ್ಕೆ ಈಡಾಗಿರುವ ವ್ಯಕ್ತಿಗಳು ತೀವ್ರ ಮಾನಸಿಕ ಒತ್ತಡವನ್ನು ಅನುಭವಿಸುತ್ತಾರೆ. ಶೋಷಣೆ, ದುರ್ಬಳಕೆ, ಅವಮಾನ ಮೊದಲಾದವುಗಳ ಪರಿಣಾಮದಿಂದ ಉಂಟಾಗುವ ಆಘಾತವು, ಅವರು ಅವುಗಳಿಂದ ಹೊರಬರುವ ಪ್ರಯತ್ನವನ್ನೇ ಮಾಡದ ಹಾಗೆ ತಡೆಯುತ್ತವೆ. ಇದು ಅವರ ದೌರ್ಬಲ್ಯವಾಗಿ ಮಾರ್ಪಟ್ಟು, ಅವರ ಮೇಲಿನ ದೌರ್ಜನ್ಯ ಮತ್ತಷ್ಟು ಹೆಚ್ಚಾಗುತ್ತಾ ಹೋಗುತ್ತದೆ.

ಸಮಾಜದ ನಿರ್ಲಕ್ಷ್ಯಕ್ಕೆ ಒಳಗಾದ ಇಂಥಾ ವ್ಯಕ್ತಿಗಳು ಭಾವುಕ ಮತ್ತು ಮಾನಸಿಕ ಸ್ತರಗಳಲ್ಲಿ ತೀವ್ರ ಚಡಪಡಿಕೆಯನ್ನು ಅನುಭವಿಸುತ್ತಾ ಇರುತ್ತಾರೆ. ಇದು ಅವರನ್ನು ಒಂದು ಬಗೆಯ ಭ್ರಮೆಗೆ ನೂಕುತ್ತದೆ. ತಮ್ಮನ್ನು ಇತರರು ಹೇಗೆ ಕಾಣುತ್ತಾರೆ, ಹೇಗೆ ಭಾವಿಸುತ್ತಾರೆ ಎಂಬ ಕಲ್ಪನೆಗಳು ಅವರನ್ನು ಬಾಧಿಸತೊಡಗುತ್ತವೆ. ಅವರಿಗೆ ಸಮಾಜದಲ್ಲಿ ತಾವು ಅಸ್ತಿತ್ವದಲ್ಲಿಯೇ ಇಲ್ಲವೇನೋ, ನಾವು ಯಾರಿಗೂ ಕಾಣುತ್ತಿಲ್ಲ, ನಮ್ಮ ದನಿ ಯಾರಿಗೂ ಕೇಳುತ್ತಿಲ್ಲವೇನೋ ಎಂಬ ಭ್ರಮೆ ಕಾಡತೊಡಗುತ್ತದೆ.

ನಮ್ಮ ಕಾಳಜಿಗಳಿಗೆ ಸಮಾಜದಲ್ಲಿ ಬೆಲೆಯೇ ಇಲ್ಲ ಅನ್ನುವುದು ಗಮನಕ್ಕೆ ಬಂದಾಗ ತಮ್ಮನ್ನು ತಾವು ನಿರುಪಯುಕ್ತವೆಂದು ಭಾವಿಸುವುದೂ ಉಂಟು. ಇದರಿಂದಾಗಿ ತಮ್ಮ ಮೇಲೆ ತಾವೇ ಸಂಶಯ ಪಟ್ಟುಕೊಳ್ಳುವುದು, ಸಿಟ್ಟಾಗುವುದು – ಇವೇ ಮೊದಲಾದ ಮಾನಸಿಕ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಕೆಲವು ಸಂದರ್ಭಗಳಲ್ಲಿ ಈ ಮಾನಸಿಕ ತುಮುಲಗಳನ್ನು ನಿಭಾಯಿಸಲಾಗದೆ ಕೆಲವರು ಆತ್ಮಹತ್ಯೆಯಂಥ ತೀವ್ರ ನಿರ್ಧಾರಗಳನ್ನು ತೆಗೆದುಕೊಳ್ಳುವುದೂ ಉಂಟು.

ಅಂಚಿಗೆ ತಳ್ಳುವ, ಅಥವಾ ಹೊರತಾಗಿಡುವ ತಾರತಮ್ಯಕ್ಕೆ ದುರದೃಷ್ಟವಶಾತ್ ಕೆಲವರು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಈಡಾಗಿಬಿಡುತ್ತಾರೆ. ನಾನು ಅಂತಹ ಕೆಲವು ಪ್ರಕರಣಗಳನ್ನು ನೋಡಿದ್ದೇನೆ. ನನ್ನ ಕಚೇರಿಗೆ 9 ವರ್ಷದ ಒಬ್ಬ ಹುಡುಗ ಬರುತ್ತಾನೆ. ಅವನು ತನ್ನ ವಯಸ್ಸಿಗೆ ಮಿತಿ ಮೀರಿದ ತೂಕವಿದ್ದು, ಆ ಕಾರಣಕ್ಕಾಗಿಯೇ ವಾರಗೆಯವರಿಂದ ಟೀಕೆ, ಅಣಕ ಮೊದಲಾದ ಅವಮಾನಗಳನ್ನು ಅನುಭವಿಸಿದ್ದಾನೆ.

ಕೆಲವೊಮ್ಮೆ ಸಹಪಾಠಿಗಳು ಗುಂಪುಗೂಡಿ ಅವನ ಮೇಲೆ ದೌರ್ಜನ್ಯ ನಡೆಸಿದ್ದೂ ಇದೆ. ಅವರ ಹೆಸರನ್ನು ಹೇಳುವಾಗ ಆ ಹುಡುಗ ಗಾಬರಿಯಿಂದ ತಡಬಡಾಯಿಸುತ್ತಿದ್ದ. ಅವರೆಲ್ಲ ಯಾವಕಾರಣಕ್ಕಾಗಿ ರೇಗಿಸುತ್ತಿದ್ದಾರೆ ಎಂದು ಅರ್ಥಮಾಡಿಕೊಳ್ಳಲು ಅವನಿನ್ನೂ ಚಿಕ್ಕವನು ಆದರೆ ತನ್ನ ಸಾಮರ್ಥ್ಯ ಮತ್ತು ದೈಹಿಕಶಿಕ್ಷಣದ ತರಗತಿಯಲ್ಲಿ ಪ್ರತಿನಿತ್ಯ ತಾನು ಅನುಭವಿಸುವ ತಾರತಮ್ಯವನ್ನು ಅರ್ಥಮಾಡಿಕೊಳ್ಳಲಾರದಷ್ಟು ಚಿಕ್ಕವನೇನಲ್ಲ.

ಅವನು ಸದ್ಯಕ್ಕೆ ನನ್ನ ಕಚೇರಿಗೆ ಬರುತ್ತಿದ್ದಾನೆ, ಅವನಿಗೆ ಬೇಕಾದ ಸಹಾಯ ಸೌಲಭ್ಯಗಳು ಇಲ್ಲಿ ದೊರೆಯುತ್ತವೆ ಅನ್ನುವುದು ಸಮಾಧಾನದ ವಿಷಯ. ಆದರೆ ಅವನಂಥಾ ಅದೆಷ್ಟೋ ಹಡುಗ/ಗಿಯರು ಬೇರೆಬೇರೆ ಕಾರಣಗಳಿಗೆ ಇಂಥಾ ದೌರ್ಜನ್ಯವನ್ನು ಅನುಭವಿಸುತ್ತಾ ಇರುತ್ತಾರೆ; ಅವರ ಕಥೆ ಏನು ಎಂದು ನನಗೆ ಆತಂಕವಾಗುತ್ತದೆ. ಎಷ್ಟೋ ವೇಳೆ ಇಂಥವು ಗಮನಕ್ಕೆ ಬರುವುದೂ ಇಲ್ಲ. ಹೀಗಿರುವಾಗ ಪರಿಹಾರ ಹೇಗೆ ಸಾಧ್ಯ?

ಹಾಗಾದರೆ, ಮಾಡಬೇಕಿರುವುದೇನು?

ಈ ನಿಟ್ಟಿನಲ್ಲಿ ಮಾಡಬೇಕಾದ ಕೆಲಸಗಳು ಸಾಕಷ್ಟಿವೆ. ಮೊದಲಿಗೆ ಅವೆಲ್ಲವನ್ನೂ ಒಂದು ಪಟ್ಟಿ ಮಾಡಿಕೊಂಡು, ಯಾವುದಕ್ಕೆ ಎಷ್ಟು ಸಮಯ ನೀಡಬೇಕು, ಯಾವುದು ಮೊದಲ ಆದ್ಯತೆಯಾಗಬೇಕು ಎಂದು ಗುರುತು ಹಾಕಿಟ್ಟುಕೊಳ್ಳಬೇಕು. ವೈಯಕ್ತಿಕವಾಗಿ, ಕುಟುಂಬದ ಸದಸ್ಯರೊಂದಿಗೆ, ಶಾಲೆಗಳಲ್ಲಿ, ಕಚೇರಿಗಳಲ್ಲಿ, ಕಾನೂನು ಮತ್ತು ಆಡಳಿತ ವಲಯಗಳಲ್ಲಿ ಏನೇನು ಮಾಡಬಹುದು ಎಂದು ಯೋಚಿಸಬೇಕು.

ಮತ್ತು ಅವೆಲ್ಲರನ್ನೂ ಒಳಗೊಂಡು ಕಾರ್ಯಸೂಚಿ ಸಿದ್ಧಪಡಿಸಬೇಕು. ಮಕ್ಕಳ, ವಿದ್ಯಾರ್ಥಿಗಳ, ನೌಕರರ, ಕಾರ್ಮಿಕರ ಹಾಗೂ ನಾಗರಿಕರ ಹಕ್ಕುಗಳ ರಕ್ಷಣೆಯ ಕಾಳಜಿಯುಳ್ಳ ವ್ಯಕ್ತಿ/ ಸಂಸ್ಥೆಗಳಿಂದ ಸಲಹೆ ಸೂಚನೆಗಳನ್ನು ಪಡೆಯಬೇಕು. ಶೋಷಿತ ಸಮುದಾಯದ ನೋವುಗಳನ್ನು ಅರ್ಥ ಮಾಡಿಕೊಂಡು, ಅವರೊಡನೆ ಬೆರೆಯಬಲ್ಲ ಚಿಕ್ಕಚಿಕ್ಕ ಗುಂಪುಗಳು ಸಿದ್ಧವಾಗಬೇಕು. ಅಂತಹಾ ವ್ಯಕ್ತಿ/ಗುಂಪುಗಳು ಶೋಷಿತರ ಜೊತೆಗೆ ಒಡನಾಡುವ ಮೂಲಕ, ಅವರಲ್ಲಿ ನೆಲೆಯೂರಿರುವ ನಿರ್ಲಕ್ಷಿತ ಭಾವನೆಯನ್ನು ಅಳಿಸಿಹಾಕಲು ಪ್ರಯತ್ನಿಸಬೇಕು. ಅವರನ್ನು ನಾವು ನೋಡುತ್ತಿದ್ದೇವೆ, ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದೇವೆ ಅನ್ನುವುದನ್ನು ಖಾತ್ರಿಪಡಿಸುವ ಮೂಲಕ ಅವರಲ್ಲಿ ಭದ್ರತೆಯ ಭಾವನೆ ಮೂಡಿಸಬೇಕು. 

ಬಹುತೇಕವಾಗಿ ನಾವು ಇಂಥಹ ಸಂಗತಿಗಳನ್ನು ಗಮನಿಸುವುದೇ ಇಲ್ಲ. ಅಕಸ್ಮಾತ್ ಗಮನಿಸಿದರೂ ಸರಿಪಡಿಸುವ ನಿಟ್ಟಿನಲ್ಲಿ ಯಾವ ಪ್ರಯತ್ನವನ್ನೂ ಮಾಡುವುದಿಲ್ಲ. ಯಾವುದೇ ವ್ಯಕ್ತಿಯ ಗುರುತು ಅವರ ಸಂಪತ್ತು, ಆರೋಗ್ಯ, ವಯಸ್ಸು, ಲಿಂಗ, ಜಾತಿ, ಜನಾಂಗ ಮೊದಲಾದವುಗಳೊಡನೆ ಹೊಂದಿಕೊಂಡಿರುತ್ತದೆ.

ಈ ಎಲ್ಲವೂ ಸೇರಿ ವ್ಯಕ್ತಿಗೆ ಒಂದು ಬಗೆಯ ಸಂಕೀರ್ಣ ಗುರುತು ಉಂಟಾಗುತ್ತದೆ. ಈ ಎಲ್ಲಾ ಅಂಶಗಳು ಒಂದಕ್ಕೊಂದು ಬೆಸೆದುಕೊಂಡಿರುವ ಬಗೆಯನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಆಗಷ್ಟೇ ಒಳಗೊಳ್ಳುವಿಕೆಗೆ ತಡೆಯಾಗಿರುವ ಗೋಡೆಯನ್ನು ಕಿತ್ತು ಬಿಸುಟಲು ಸಾಧ್ಯವಾಗುವುದು. ಮತ್ತು ಈ ಮೂಲಕ ಎಲ್ಲರಿಗೂ ಸರಿಹೊಂದುವಂತಹ ಪರಿಹಾರ ದೊರಕಿಸಲು ಪ್ರಯತ್ನ ಮಾಡಬಹುದು.

ದಿವ್ಯಾ ಕಣ್ಣನ್,ಅಮೆರಿಕದ  Vanderbilt University in Nashville ಇಂದ PhD ಪಡೆದಿರುವ ಫಿಸಿಕಲ್ ಸೈಕಾಲಜಿಸ್ಟ್. ಪ್ರಸ್ತುತ ಇವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.   

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org