ಸಪೋರ್ಟ್ ಗ್ರೂಪ್ ಗಳು ಆರೈಕೆದಾರರ ಹೊರೆಯನ್ನು ಕಡಿಮೆ ಮಾಡಬಲ್ಲವು

ಹಿಂದಿನ ಲೇಖನದಲ್ಲಿ ನಾವು ಆರೈಕೆದಾರರ ಮೇಲಿರುವ ಹೊರೆಯನ್ನು ಗುರುತಿಸುವುದನ್ನು ಮತ್ತು ಆ ಹೊರೆಯಿಂದಾಗಿ ಅವರ ಮಾನಸಿಕ ಆರೋಗ್ಯದ ಮೇಲಾಗುವ ಪರಿಣಾಮದ ಕುರಿತು ಚರ್ಚಿಸಿದ್ದೆವು. ಅವರ ಹೊರೆಯನ್ನು ಗುರುತಿಸಿ ಸಮಯಕ್ಕೆ ಸರಿಯಾಗಿ ಬೆಂಬಲ ನೀಡುವುದರಿಂದ ಅವರ ಭಾವನಾತ್ಮಕ ಸಮಸ್ಯೆ ಹಾಗೂ ಮಾನಸಿಕ ಒತ್ತಡಗಳು ಕಾಲಾಂತರದಲ್ಲಿ ಗಂಭೀರ ಮಾನಸಿಕ ಸಮಸ್ಯೆಗಳಾಗಿ ರೂಪುಗೊಳ್ಳುವುದನ್ನು ತಡೆಯಬಹುದಾಗಿದೆ.

ಸಹದ್ಯೋಗಿಗಳು, ಸ್ನೇಹಿತರು ಮತ್ತು ಮನೆಯವರು ಆರೈಕೆದಾರರಿಗೆ ಯಾವತ್ತಿಗೂ ಸೂಕ್ತವಾದ ಬೆಂಬಲವನ್ನು ನೀಡಬಲ್ಲರು. ನಿಮಗೆ ತಿಳಿದಿರುವ ಆರೈಕೆದಾರರಿಗೆ ಸಹಾಯ ಮಾಡುವುದರಿಂದ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಬಹುದಾಗಿದೆ. ಅವರು ಆರೋಗ್ಯಪೂರ್ಣವಾದ ಆಹಾರವನ್ನು ಸೇವಿಸುವಂತೆ ಮತ್ತು ಸಾಕಷ್ಟು ನಿದ್ರಿಸುವಂತೆ ನೋಡಿಕೊಳ್ಳಿ.

ನೀವು ಅವರಿಗೆ ಊಟ ಅಥವಾ ಉಪಹಾರವನ್ನು ತೆಗೆದುಕೊಂಡು ಹೋಗಿ ಕೊಡಬಹುದು, ಅವರೊಂದಿಗೆ ಆಹಾರ ಸೇವಿಸಬಹುದು ಅಥವಾ ನೀವು ಬೆಳೆದ ಇಲ್ಲವೇ ಖರೀದಿಸಿದ ಹಣ್ಣು, ತರಕಾರಿಗಳನ್ನು ನೀಡಬಹುದು. ನಿದ್ರಾಹೀನತೆಯು ಒತ್ತಡ ಮತ್ತು ಖಿನ್ನತೆಯನ್ನು ಹೆಚ್ಚಿಸುತ್ತದೆ. ಅವರು ನಿದ್ರೆಯನ್ನು ಪೂರೈಸಿಕೊಳ್ಳುವುದು ಹೇಗೆಂಬ ಕುರಿತು ಆಲೋಚಿಸಿ. ವಾರದಲ್ಲಿ ಒಂದು ದಿನ ಅವರಿಗೆ ವಿಶ್ರಾಂತಿ ನೀಡಬಹುದೇ ಅಥವಾ ಹಗಲಿನಲ್ಲಿ ಸ್ವಲ್ಪ ವೇಳೆ ನಿದ್ರಿಸಬಹುದೇ? ಎಂಬ ಬಗ್ಗೆ ಗಮನನೀಡಿ.

ನಿಯಮಿತ ವ್ಯಾಯಾಮದಿಂದಲೂ ಒತ್ತಡ ನಿವಾರಣೆಯಾಗುತ್ತದೆ. ಅವರು ಯೋಗ ತರಬೇತಿಯಿಂದ ಬರುವವರೆಗೆ ಅಥವಾ ವಾಯುವಿಹಾರದಿಂದ ಬರುವವರೆಗೆ ನೀವು ಅವರು ಆರೈಕೆ ಮಾಡಬೇಕಾದ ವ್ಯಕ್ತಿಯ ಬಳಿ ಇರಿ. ಅವರಿಗೆ ಒಬ್ಬರೇ ಹೋಗಲು ಮನಸ್ಸಿಲ್ಲದಿದ್ದರೆ ಅವರ ಜೊತೆ ಸೇರಿಕೊಳ್ಳಿ. ಇದರಿಂದ ಅವರಿಗೆ ನಿಮ್ಮ ಬಳಿ ತಮ್ಮ ಚಿಂತೆ ಆತಂಕಗಳನ್ನು ಹಂಚಿಕೊಳ್ಳಲು ಅವಕಾಶ ಸಿಗುತ್ತದೆ. ಅದೇ ಸಂದರ್ಭದಲ್ಲಿ ಆರೈಕೆ ಮಾಡುವ ವಿಚಾರವನ್ನು ಹೊರತುಪಡಿಸಿ ಆದಷ್ಟು ಬೇರೆ ವಿಷಯಗಳ ಕುರಿತು ಮಾತನಾಡಿ.

ಇದರ ಜೊತೆಗೆ ಉಳಿದ ಆರೈಕೆದಾರರನ್ನು ಭೇಟಿ ಮಾಡುವುದರಿಂದಲೂ ಕೂಡ ಅವರಿಗೆ ತಮ್ಮ ನಡುವಿನ ಸಾಮಾನ್ಯವಾದ ವಿಷಯಗಳನ್ನು ಹಂಚಿಕೊಂಡು ಪರಸ್ಪರರ ಸಹಕಾರವನ್ನು ಪಡೆಯುವುದು ಸಾಧ್ಯವಾಗುತ್ತದೆ. ಕಳೆದ ಎರಡು ವರ್ಷಗಳಿಂದ ಕೇರರ್ಸ್ ವಲ್ಡ್ ವೈಡ್ ಸಂಸ್ಥೆಯು ಭಾರತದಾದ್ಯಂತ ಆರೈಕೆಯಲ್ಲಿ ತೊಡಗಿರುವವರನ್ನು ಆರೈಕೆದಾರರ ಸಪೋರ್ಟ್ ಗ್ರೂಪುಗಳ ಹತ್ತಿರ ತರಲು ಪ್ರಯತ್ನಿಸುತ್ತಿದೆ.

ಈ ಗುಂಪುಗಳು ಸ್ಥಳೀಯ ಅವಶ್ಯಕತೆಗಳು, ಭೌಗೋಳಿಕ ಪ್ರದೇಶ ಹಾಗೂ ಸದಸ್ಯರ ಸಂಖ್ಯೆಯ ಮೇಲೆ ಆಧರಿಸಿ ರಚಿತವಾಗಿರುತ್ತವೆ.ಕೆಲವೊಂದು ಗ್ರಾಮಮಟ್ಟದಲ್ಲಿ ಸಂಘಟಿತವಾಗಿದ್ದು ಪ್ರತಿ ಎರಡು ವಾರಕ್ಕೊಮ್ಮೆ ಸಭೆ ಸೇರುತ್ತವೆ. ಉಳಿದವರು ತಿಂಗಳಿಗೊಮ್ಮೆ ಸೇರುತ್ತಾರೆ. ಈ ಗುಂಪುಗಳೊಂದಿಗೆ ನಮ್ಮ ಸಹ ಸಂಸ್ಥೆಗಳ- ದೈಹಿಕ ನ್ಯೂನ್ಯತೆ ಅಥವಾ ಮಾನಸಿಕ ಅನಾರೋಗ್ಯವಿರುವ ವ್ಯಕ್ತಿಗಳೊಂದಿಗೆ ಕೆಲಸ ಮಾಡಿದ ಅನುಭವವಿರುವ ಸ್ಥಳಿಯ ಎನ್ ಜಿಓಗಳು-ಅನುಭವವಿರುವ ಕಾರ್ಯಕರ್ತರು ಮಾರ್ಗದರ್ಶನ ಮಾಡುತ್ತಾರೆ.

ಕೇರರ್ಸ್ ವರ್ಲ್ಡ್ ವೈಡ್ ನಲ್ಲಿ ಅಗತ್ಯ ತರಬೇತಿ ಪಡೆದ ಈ ಎನ್ ಜಿಓಗಳು ಆರೈಕೆದಾರರು ಸಮಾಜದಲ್ಲಿ ನಿರ್ವಹಿಸುವ ಪ್ರಮುಖ ಪಾತ್ರವನ್ನು ಗುರುತಿಸಿವೆ ಮತ್ತು ಆರೈಕೆಗೆ ಒಳಗಾದ ವ್ಯಕ್ತಿಗಳ ಜೊತೆಗೆ ಆರೈಕೆಮಾಡುವವರ ಅಗತ್ಯಗಳನ್ನು ಕೂಡಾ ಪೂರೈಸುವ ಅವಶ್ಯಕತೆಗಳನ್ನು ಕೂಡಾ ಮನಗಂಡಿವೆ.

ಹೆಚ್ಚಿನ ಆರೈಕೆದಾರರಿಗೆ ಇಂತಹ ಸಪೋರ್ಟ್ ಗ್ರೂಪುಗಳಿಂದ ಹೊಸ ಜೀವನ ದೊರಕಿದೆಯಲ್ಲದೇ ಅವರಲ್ಲಿ ಎಷ್ಟೋ ಜನ ಆರೈಕೆಯಲ್ಲಿ ತೊಡಗಿದ ಮೇಲೆ ಮೊದಲ ಬಾರಿಗೆ ಮನೆಯಿಂದ ಹೊರಬರಲು ಅವಕಾಶ ದೊರಕಿದೆ. ಈ ಗುಂಪುಗಳ ಮೊದಲ ಕೆಲವು ಮೀಟಿಂಗುಗಳು ಭಾವನಾತ್ಮಕವಾಗಿರುತ್ತವೆ. ಆರೈಕೆದಾರರು ಈವರೆಗೆ ಹೇಳಿಕೊಳ್ಳಲಾಗದೇ ಅದುಮಿಟ್ಟ ಭಾವನೆಗಳನ್ನು ಇಲ್ಲಿ ವ್ಯಕ್ತಪಡಿಸುತ್ತಾರೆ.

ಆರೈಕೆ ಮಾಡುತ್ತಿರುವ ವ್ಯಕ್ತಿಗಳ ಬಗ್ಗೆಯೂ ಉಳಿದವರು ಆಸಕ್ತಿ ತೋರಿಸುವುದರಿಂದ ಅವರು ಮೊದಲ ಬಾರಿಗೆ ಭಾವಾತಿರೇಕಕ್ಕೆ ಒಳಗಾಗುತ್ತಾರೆ. ಎಲ್ಲಾ 100% ಆರೈಕೆದಾರರು ತಂತಮ್ಮ ಗುಂಪುಗಳಿಗೆ ಬದ್ಧರಾಗಿರುತ್ತಾರೆ. ತಾವು ಒಬ್ಬಂಟಿಯಲ್ಲವೆಂದು ತಿಳಿಯುವುದಿಂದ ಹಾಗೂ ಈ ಗುಂಪುಗಳಲ್ಲಿ ದೊರೆಯುವ ಭಾವನಾತ್ಮಕ ಬೆಂಬಲ ಹಾಗೂ ಸ್ನೇಹದಿಂದ ಅವರಿಗೆ ಚೈತನ್ಯ ದೊರೆಯುತ್ತದೆ. ಇದರಿಂದ ಅವರ ಆತ್ಮವಿಶ್ವಾಸ ಮತ್ತು ಆತ್ಮಗೌರವ ವೃದ್ಧಿಯಾಗಿ ಸಬಲೀಕರಣ ಸಾಧ್ಯವಾಗುತ್ತದೆ.

ಆರೈಕೆದಾರರ ಸಪೋರ್ಟ್ ಗ್ರೂಪುಗಳ ಚಟುವಟಿಕೆ ಹಾಗೂ ಪ್ರಭಾವವು ನಾವು ಆರಂಭದಲ್ಲಿ ಯೋಜಿಸಿದಕ್ಕಿಂತಲೂ ಪರಿಣಾಮಕಾರಿಯಾಗಿದೆ. ಉತ್ತರ ಕರ್ನಾಟಕದ ಹಳ್ಳಿಯೊಂದರಲ್ಲಿ ಆರೈಕೆದಾರರು ತುರ್ತು ಸಹಾಯಕ್ಕಾಗಿ ತಮ್ಮ ಗುಂಪಿನ ಕಾರ್ಯಚಟುವಟಿಕೆಯ ಹೊರತಾಗಿಯೂ ಮೊಬೈಲಿನಲ್ಲಿ ತಮ್ಮದೇ ಗುಂಪುಗಳನ್ನು ರಚಿಸಿಕೊಂಡಿದ್ದಾರೆ.

ಸದಸ್ಯರಲ್ಲಿ ಯಾರಾದರೂ ಮೀಟಿಂಗನ್ನು ತಪ್ಪಿಸಿಕೊಂಡಾಗ ಉಳಿದ ಸದಸ್ಯರು ಕೂಡಲೇ ಅವರಿಗೆ ಕರೆಮಾಡಿ ಯೋಗಕ್ಷೇಮ ವಿಚಾರಿಸುತ್ತಾರೆ. ಮತ್ತು ಅವರ ಸಮಸ್ಯೆಗೆ ಸ್ಪಂದಿಸುತ್ತಾರೆ. ಮೀಟಿಂಗುಗಳ ನಡುವೆ ಸದಸ್ಯರು ಏನಾದರೂ ಹಂಚಿಕೊಳ್ಳಬೇಕಿದ್ದಲ್ಲಿ ಪರಸ್ಪರ ಕರೆ ಮಾಡಿಕೊಳ್ಳುತ್ತಾರೆ. ಅವರಲ್ಲಿ ಯಾರಿಗಾದರೂ ಸಮಸ್ಯೆಯಿದ್ದಲ್ಲಿ ಉಳಿದ ಸದಸ್ಯರು ಸಹ ಸಂಸ್ಥೆಗಳಿಂದ ಸಲಹೆಯನ್ನು ಪಡೆದು ಅದನ್ನು ಪರಿಹರಿಸಲು ಪ್ರಯತ್ನಿಸುತ್ತಾರೆ.

ಪರಸ್ಪರರಿಗೆ ಆರೈಕೆಯಿಂದ ಸ್ವಲ್ಪ ಮಟ್ಟಿನ ವಿಶ್ರಾಂತಿ ನೀಡುವವರೆಗೆ ಅವರ ಗುಂಪು ಬೆಳೆದಿದೆ. ಜಾರ್ಖಂಡಿನಲ್ಲಿ ನಮ್ಮ ವ್ಯಾಪ್ತಿಯಲ್ಲಿರುವ ಗುಂಪಿನ ಸದಸ್ಯೆಯಾದ ತಿಲೋತ್ತಮಾ ಎಂಬುವವರು ಆರೈಕೆದಾರರ ಸಂಬಂಧಿಗಳನ್ನು ಸ್ವಲ್ಪ ಸಮಯ ನೋಡಿಕೊಳ್ಳುತ್ತಾರೆ. ಇದರಿಂದ ಆರೈಕೆದಾರರು ಮಾರುಕಟ್ಟೆಗೆ ಹೋಗಿ ಅಗತ್ಯ ಸಾಮಾನುಗಳನ್ನು ಕೊಳ್ಳುವುದು ಸಾಧ್ಯವಾಗುತ್ತದೆ.

ನಾವು ಇತ್ತೀಚೆಗೆ ಗುಂಪಿನ ಸದಸ್ಯರನ್ನು ಭೇಟಿ ಮಾಡಿದಾಗ ಹಾಜರಿದ್ದ 100% ಸದಸ್ಯರು ಗುಂಪನ್ನು ಸೇರಿದ ಮೇಲೆ ತಮ್ಮ ಮಾನಸಿಕ ಆರೋಗ್ಯ ಸುಧಾರಿಸಿದೆ ಎಂದು ತಿಳಿಸಿದ್ದಾರೆ. ನಮ್ಮ ಅನುಭವದ ಪ್ರಕಾರ ಹೆಚ್ಚಿನ ಒತ್ತಡದಿಂದ ಬಳಲುತ್ತಿರುವ ಹಾಗೂ ಖಿನ್ನತೆ, ಆತಂಕಕ್ಕೆ ಒಳಗಾದ ಆರೈಕೆದಾರರಿಗೆ ವೃತ್ತಿಪರ ಆಪ್ತಸಮಾಲೋಚನೆಯ ಅಗತ್ಯವಿರುತ್ತದೆ. ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನೆರವಾಗಬಲ್ಲ ಆಪ್ತಸಮಾಲೋಚಕರನ್ನು ಯಾವುದೇ ಪೂರ್ವಾಗ್ರಹವಿಲ್ಲದೇ ಒದಗಿಸುವುದು ಅಗತ್ಯವಾಗಿರುತ್ತದೆ.

ಆರೈಕೆದಾರರು ಸಮಾಜದ ಪ್ರಮುಖ ಭಾಗವಾಗಿದ್ದಾರೆ. ಆರೈಕೆದಾರರ ಹೊರೆಯನ್ನು ಉಳಿದವರು ಅರ್ಥ ಮಾಡಿಕೊಳ್ಳುವುದು ಅಗತ್ಯವಾಗಿರುತ್ತದೆ. ಆರೈಕೆದಾರರಿಗೆ ಅಗತ್ಯವಾದ ಮಾನಸಿಕ ಮತ್ತು ಭಾವನಾತ್ಮಕ ಬೆಂಬಲವು ಕೂಡಾ ಸಮಯಕ್ಕೆ ಸರಿಯಾಗಿ ದೊರೆಯುವುದು ಕೂಡಾ ಮುಖ್ಯವಾಗಿರುತ್ತದೆ.

ಅಡ್ವಾನ್ಸಡ್ ಮಸ್ಕುಲರ್ ಡಿಸ್ಟ್ರೋಪಿಯಿಂದ ಬಳಲುತ್ತಿರುವ ತನ್ನ ಮೂವರು ಮಕ್ಕಳ ಆರೈಕೆಯಲ್ಲಿ ತೊಡಗಿರುವ ರಶೀದಾ ಬೇಗಂಳ ಪ್ರಕಾರ ಆರೈಕೆ ಮಾಡುವರಿಗೆ ಬೆಂಬಲದ ಅವಶ್ಯಕತೆಯಿದೆ. ಆಕೆಯು, “ಜೀವನ ಬಹಳ ಕಷ್ಟವಿದೆ. ನನ್ನ ಸಮಸ್ಯೆಗಳು ಇನ್ನೂ ಇವೆ. ಆದರೆ ನನಗೆ ಈಗ ಬೆಂಬಲ ದೊರಕಿದೆ ಮತ್ತು ಭವಿಷ್ಯವನ್ನು ಎದುರಿಸುವ ಧೈರ್ಯ ಬಂದಿದೆ,” ಎನ್ನುತ್ತಾಳೆ.

ನನ್ನ ಮುಂದಿನ ಲೇಖನದಲ್ಲಿ ನಾನು ಆರೈಕೆದಾರರಿಗೆ ಅಗತ್ಯವಾಗಿರುವ ಲಘು ವಿರಾಮ ಮತ್ತು ಅದಕ್ಕಾಗಿ ಇರುವ ಪರ್ಯಾಯ ಮಾರ್ಗಗಳ ಬಗ್ಗೆ ಚರ್ಚಿಸುತ್ತೇನೆ.

ಈ ಲೇಖನ ಮೂಲತಃ ಇಂಗ್ಲಿಷ್ನಲ್ಲಿ ಬರೆಯಲಾಗಿದೆ ಮತ್ತು ಕನ್ನಡಕ್ಕೆ ಭಾಷಾಂತರಿಸಲಾಗಿದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org