ನಿಮ್ಮ ಶಕ್ತಿಯನ್ನು ಮರಳಿ ಪಡೆಯುವ ಬಗ್ಗೆ ”

ನಿಮ್ಮ ಶಕ್ತಿಯನ್ನು ಮರಳಿ ಪಡೆಯುವ ಬಗ್ಗೆ ”
“ನಿಮ್ಮ ಶಕ್ತಿಯನ್ನು ಮರಳಿ ಪಡೆಯುವ ಬಗ್ಗೆ”
ನೀವು ತಿಳಿದಿರುವುದಕ್ಕಿಂತಲೂ ಹೆಚ್ಚಿನ ಶಕ್ತಿ ನಿಮ್ಮೊಳಗಿದೆಯೇ ?
ಯಾವುದೋ ಒಂದು ಮುಖ್ಯವಾದ ಕೆಲಸದಲ್ಲಿ ತೊಡಗಿರುವಾಗ ನಿಮಗೆ ಸುಸ್ತಾಗುತ್ತಿದೆ ಎನಿಸುತ್ತದೆಯೇ? ಹಠಾತ್ತನೆ , ನಿಮಗೇ ಅರಿವಿಲ್ಲದೆ, ಪುನಃ ನಿಮ್ಮ ಶಕ್ತಿಯನ್ನು ಮರಳಿ ಪಡೆದಂತೆ ಎನಿಸಿದೆಯೇ ? ಇದನ್ನೇ “ ನಿಮ್ಮ ಶಕ್ತಿಯನ್ನು ಮರಳಿ ಪಡೆಯುವುದು ” ಎಂದು ಹೇಳಲಾಗುತ್ತದೆ. (1800ರ ಸಂದರ್ಭದಲ್ಲಿ ಈ ನಾಣ್ಣುಡಿ ಅಮೆರಿಕದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿತ್ತು).  ಆದರೆ ಈ ವಿದ್ಯಮಾನವನ್ನು ಒಂದು ಶತಮಾನದ ಹಿಂದೆ ಬೆಳಕಿಗೆ ತಂದವರು ಅಮೆರಿಕದ ಮನಶ್ಶಾಸ್ತ್ರ ವಿಜ್ಞಾನವನ್ನು ಕಂಡುಹಿಡಿದ ಅಪ್ರತಿಮ ತತ್ವಶಾಸ್ತ್ರಜ್ಞ ವಿಲಿಯಂ ಜೇಮ್ಸ್. ಬಾಲ್ಯದಲ್ಲಿ ಒಬ್ಬ ಚಿತ್ರ ಕಲಾವಿದನಾಗಲು ಆಸೆ ಪಟ್ಟಿದ್ದ ವಿಲಿಯಂ ಜೇಮ್ಸ್ ತಮ್ಮಲ್ಲಿ ಕಲಾ ಪ್ರತಿಭೆಯ ಕೊರತೆ ಇರುವುದನ್ನು ಗಮನಿಸಿ ಭಿನ್ನ ಮಾರ್ಗ ಅನುಸರಿಸಿದ್ದರು. ಹಾಗಾಗಿ ಅಧ್ಯಯನ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದರು.
ಹಾವರ್ಡ್ ವಿಶ್ವವಿದ್ಯಾಲಯದಲ್ಲಿ ಅಮೆರಿಕದ ಮೊಟ್ಟ ಮೊದಲ ಮನಶ್ಶಾಸ್ತ್ರ ಪ್ರಯೋಗಾಲಯವನ್ನು ಆರಂಭಿಸಿದ ಜೇಮ್ಸ್ ನಂತರದಲ್ಲಿ ತಮ್ಮ ಬುದ್ಧಿಶಕ್ತ್ತಿಯನ್ನು ಬಳಸಿಕೊಂಡು ಧಾರ್ಮಿಕ ಅನುಭವಗಳು (ನಿಗೂಢತೆ ಮತ್ತು ಪ್ರಾರ್ಥನೆ), ಆರೋಗ್ಯ ಮತ್ತು ಅನಾರೋಗ್ಯಕ್ಕೆ ಸಂಬಂಧಿಸಿದಂತೆ ದೇಹ ಮತ್ತು ಮನಸ್ಸಿನ ಸಂಬಂಧಗಳು, ಮನುಷ್ಯನ ಮನಸ್ಸಿನ ಲಕ್ಷಣಗಳು ಮುಂತಾದ ವಿಷಯಗಳಲ್ಲಿ ಅಧ್ಯಯನ ನಡೆಸಿದ್ದರು. ಈ ವಿಷಯಗಳನ್ನು ಶೋಧಿಸುತ್ತಲೇ ಜೇಮ್ಸ್ ಅವರು ಭಾರತದ ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿ ತೋರಲಾರಂಭಿಸಿದರು. ಯೋಗ ಮತ್ತು ಯೋಗಾಭ್ಯಾಸವನ್ನು ಕುರಿತು ಅಧ್ಯಯನ ನಡೆಸಿದ್ದರು. 1906ರ ಡಿಸೆಂಬರ್‍ನಲ್ಲಿ ನ್ಯೂಯಾರ್ಕ್‍ನಲ್ಲಿರುವ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅಮೆರಿಕದ ತತ್ವಶಾಸ್ತ್ರೀಯ ಸಂಘಟನೆ ಆಶ್ರಯದಲ್ಲಿ ಜೇಮ್ಸ್ ಅದ್ಭುತವಾದ ಉಪನ್ಯಾಸ ನೀಡಿದ್ದರು. ಈ ಉಪನ್ಯಾಸವನ್ನು ಕೆಲವು ದಿನಗಳ ಬಳಿಕ ತತ್ವಶಾಸ್ತ್ರೀಯ ವಿಮರ್ಶೆ ಎನ್ನುವ ಪತ್ರಿಕೆಯೊಂದರಲ್ಲಿ ಮನುಷ್ಯನ ಶಕ್ತಿ ಸಾಮಥ್ರ್ಯಗಳು ಎಂಬ ಶೀರ್ಷಿಕೆಯಡಿ ಪ್ರಕಟಿಸಲಾಗಿತ್ತು. ಕೆಲವೇ ದಿನಗಳಲ್ಲಿ ಈ ಉಪನ್ಯಾಸವನ್ನು ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು. ಇದು ಅತ್ಯಂತ ಜನಪ್ರಿಯವಾಗಿದ್ದೇ ಅಲ್ಲದೆ, ಈ ವೃತ್ತಿಯಲ್ಲಿ ತೊಡಗಿರುವವರ ಮೇಲೆ ಗಾಢವಾದ ಪ್ರಭಾವ ಬೀರಿತ್ತು. ಸಾಮಾನ್ಯವಾಗಿ ಜನರು ತಮ್ಮ ಉದ್ದೇಶಿತ ಕೆಲಸ ಅಥವಾ ಗುರಿಯನ್ನು ತಲುಪುವುದಕ್ಕೆ ಮುನ್ನವೇ, ಅಂದರೆ ಅವರ ಶಕ್ತಿಯನ್ನು ಮರಳಿ ಪಡೆಯುವ ಮುನ್ನವೇ, ಕೈಬಿಟ್ಟುಬಿಡುತ್ತಾರೆ ಎಂದು ಈ ಪ್ರಬಂಧದಲ್ಲಿ ವಿಲಿಯಂ ಜೇಮ್ಸ್ ಹೇಳಿದ್ದರು. ನಮ್ಮ ಅಂಗರಚನೆಯಲ್ಲಿ ಅಡಗಿರುವ ಶಕ್ತಿಯನ್ನು ನಾವು ಸಾಮಾನ್ಯವಾಗಿ ಬಳಸಿಕೊಳ್ಳುವುದಿಲ್ಲ ಎಂದು ಹೇಳುವ ಜೇಮ್ಸ್ ಈ ಶಕ್ತಿಯನ್ನು ನಾವು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂದೂ ಹೇಳುತ್ತಾರೆ. 
ಸಾಮಾನ್ಯವಾಗಿ ನಾವು ಉದ್ದೇಶಿಸದಿದ್ದರೂ ಅಥವಾ ಪ್ರಯತ್ನಿಸದಿದ್ದರೂ ಈ ಬೆಳವಣಿಗೆಗಳು ನಡೆಯುತ್ತವೆ. ಆದರೆ ನಮ್ಮೊಳಗೆ ಅಡಗಿರುವ ಶಕ್ತಿಯನ್ನು ಕಂಡುಹಿಡಿಯಲು ಮನಶ್ಶಾಸ್ತ್ರವೇ ನೆರವಾಗುವ ಕಾಲವೂ ಬರುತ್ತದೆ ಎಂದು ಹೇಳುವ ಜೇಮ್ಸ್, ನಾವು ದೈಹಿಕವಾಗಿ, ಮಾನಸಿಕವಾಗಿ, ನೈತಿಕವಾಗಿ, ಆಧ್ಯಾತ್ಮಿಕವಾಗಿ ಯಾವುದೇ ಕೆಲಸದಲ್ಲಿ ನಿರತರಾಗಿದ್ದಾಗಲೂ ಇದು ಸಾಧ್ಯವಾಗಬಹುದು ಎಂದು ಹೇಳುತ್ತಾರೆ. 
ನಿಮ್ಮ ಮರಳುವ ಶಕ್ತಿಯನ್ನು ಬೆಳೆಸಿಕೊಳ್ಳುವುದು
ನಿಗೂಢತೆ ಮತ್ತು ಧಾರ್ಮಿಕ ಅನುಭವಗಳಲ್ಲೇ ಹೆಚ್ಚು ಆಸಕ್ತಿ ಹೊಂದಿದ್ದರೂ ವಿಲಿಯಂ ಜೇಮ್ಸ್ ಔಷಧ ಕ್ಷೇತ್ರದಲ್ಲಿ ತರಬೇತಿ ಪಡೆದು ಪ್ರಯೋಗಾಲಯದಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡಿದ್ದರು. ಇದರ ಪರಿಣಾಮ ವೈಜ್ಞಾನಿಕ ಜ್ಞಾನವನ್ನು ಹೆಚ್ಚಿಸುವಲ್ಲಿ ಮಾಹಿತಿಯ ಮಹತ್ವವನ್ನು ಮನಗಂಡಿದ್ದರು. ಮಾನವನ ಶಕ್ತಿಯ ಇತಿಮಿತಿಗಳ ಲಕ್ಷಣಗಳನ್ನು ನಿರ್ಧರಿಸಲು ಮನಶ್ಶಾಸ್ತ್ರವನ್ನು ಬಳಸುವಂತೆ ಹೇಳುವ ಜೇಮ್ಸ್, ಮನುಷ್ಯನ ದೃಷ್ಟಿಯನ್ನು ಅಳೆಯಲು ಕಣ್ಣಿನ ವೈದ್ಯರು ಬಳಸುವ ವಿಧಾನವನ್ನೇ ಬಳಸಲು ಹೇಳುತ್ತಾರೆ. ಹಾಗೆಯೇ “ ಮನುಷ್ಯರಲ್ಲಿ ಅಡಗಿರುವ ಮರಳಿ ಬಳಕೆಯಾಗುವ ಶಕ್ತಿ ವಿವಿಧ ರೀತಿಯ ಜನರಲ್ಲಿ ಯಾವ ರೀತಿಯಲ್ಲಿ ಅಡಗಿರುತ್ತದೆ ಮತ್ತು ಹೇಗೆ ಬಳಕೆಯಾಗುತ್ತದೆ ” ಎಂದು ತಿಳಿದುಕೊಳ್ಳಲು ಜೇಮ್ಸ್ ಬಯಸುತ್ತಾರೆ.  ಈ ರೀತಿಯಾಗಿ ನಾವು ನಮ್ಮ ನಿಜವಾದ ಸಾಮಥ್ರ್ಯವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ಹೇಳುವ ಜೇಮ್ಸ್ ಅವರ ವಾದವನ್ನು ಇನ್ನೂ ನಿರೂಪಿಸಲಾಗಿಲ್ಲ. ಆದರೂ ಮನುಕುಲದ ಲಕ್ಷಣಗಳನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಇದು ಹೆಚ್ಚು ಪ್ರಯೋಜನಕಾರಿಯಾಗಿರುವುದು ಸತ್ಯ.
ನಿಮ್ಮ ಜೀವನದಲ್ಲಿ ಈ ಲಕ್ಷಣಗಳನ್ನು ಅಳವಡಿಸಿಕೊಳ್ಳಲು ಈ ಕೆಲವು ಚಟುವಟಕೆಗಳನ್ನು ಅನುಸರಿಸಿ :
1. ನೀವು ನಿಮ್ಮ ಜೀವನದಲ್ಲಿ ಎಂದಾದರೂ, ಮಾನಸಿಕವಾಗಿ ಅಥವಾ ದೈಹಿಕವಾಗಿ ಸಂಪೂರ್ಣವಾಗಿ ಸುಸ್ತಾಗಿ ನಂತರ ಕೂಡಲೇ ಉತ್ಸಾಹವನ್ನು ಮರಳಿ ಪಡೆದು ಉಲ್ಲಾಸ ಹೊಂದಿದ್ದ ಅನುಭವವನ್ನು ವಿವರಿಸಿ. ಇಲ್ಲಿ ನಿಮ್ಮ ಶಕ್ತಿ ಮರಳಿ ಬಂದದ್ದಕ್ಕೆ ಏನು ಕಾರಣ ಎಂದು ಭಾವಿಸುತ್ತೀರಿ ? ನಿಮ್ಮ ಗೆಳೆಯರೋ, ಕುಟುಂಬದ ಸದಸ್ಯರೋ ನಿಮಗೆ ಉತ್ತೇಜನ ನೀಡಿದ್ದರೇ ಅಥವಾ ನಿಮ್ಮ ಆತ್ಮ ವಿಶ್ವಾಸದಿಂದಲೇ ನೀವು ಶಕ್ತಿಯನ್ನು ಮರಳಿ ಪಡೆದಿರೋ ಅಥವಾ ಈ ಎರಡೂ  ಕಾರಣಗಳು ಇದ್ದವೋ ಯೋಚಿಸಿ. ಇಲ್ಲವಾದಲ್ಲಿ ಏನು ಕಾರಣ ಎಂದು ಯೋಚಿಸಿ.
2. ನಿಮಗೆ ಶಿಕ್ಷಣ ಅಥವಾ ಕ್ರೀಡೆಯಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಬೋಧನೆ ಮಾಡುವ ಕೌಶಲ್ಯ ಇದ್ದರೆ ಅವರು ತಮ್ಮ ಶಕ್ತಿಯನ್ನು ಮರಳಿ ಪಡೆಯುವಂತೆ ಯಾವ ರೀತಿಯ ಸಲಹೆಯನ್ನು ನೀಡಲು ಸಾಧ್ಯ ?  ಈ ಸಾಮಥ್ರ್ಯವನ್ನು ಗಳಿಸಲು ಮಕ್ಕಳಿಗೆ ಉಂಟಾಗುವ ದೊಡ್ಡ ಅಡೆತಡೆ ಯಾವುದು ಎಂದು ಭಾವಿಸುತ್ತೀರಿ ? ಹರೆಯದ ಮಕ್ಕಳಿಗೆ ಈ ರೀತಿ ತಮ್ಮ ಶಕ್ತಿಯನ್ನು ಮರಳಿ ಪಡೆಯುವುದು ಸುಲಭ ಎಂದು ಅಂದುಕೊಂಡಿದ್ದೀರಾ ? ಹಾಗಾದರೆ ಏಕೆ ಸುಲಭ ಎಂದು ಭಾವಿಸುತ್ತೀರಿ ?
3. ಮುಂಬರುವ ಎರಡು ವಾರಗಳು ನಿಮಗೆ ಬೇಸರವಾಗಿ, ಸುಸ್ತಾಗಿ ಕೂಡಲೇ ನಿಮ್ಮ ಶಕ್ತಿಯನ್ನು ಮರಳಿ ಪಡೆದು ಉತ್ಸಾಹ ಮರಳಿ ಪಡೆದ ಅನುಭವವಾಗಿದ್ದರೆ ಅದನ್ನು ಒಂದು ಕಡೆ ಬರೆದಿಡಿ. ಇದಕ್ಕೆ ಕಾರಣವೇನು ಎಂದು ಕಂಡುಹಿಡಿಯಲು ಸಾಧ್ಯವೇ ನೋಡಿ.
4. ಕೊನೆಯದಾಗಿ ಮೇಲೆ ಹೇಳಿದ ಚಟುವಟಿಕೆಗಳನ್ನು ನಡೆಸಿದ ನಂತರ, ಧ್ಯಾನ ಮಾಡುವುದೋ, ಮೆಲು ನಿದ್ದೆ ಮಾಡುವುದೋ, ಯೋಗ ಮುಂತಾದ ದೈಹಿಕ ಕಸರತ್ತು ನಡೆಸುವುದೋ ಇಂತಹ ಚಟುವಟಿಕೆಯಲ್ಲಿ ಪಾಲ್ಗೊಂಡು ನಿಮ್ಮ ಶಕ್ತಿಯನ್ನು ಮರಳಿ ಪಡೆಯಲು ಸಾಧ್ಯವೇ ನೋಡಿ. ನಿಮ್ಮ ಪ್ರಯತ್ನದ ಪರಿಣಾಮವನ್ನು ವಿವರಿಸಿ.
ಜೇಮ್ಸ್ ಅವರ ಪ್ರಬಂಧಕ್ಕೆ ಒಂದು ಕುತೂಹಲಕಾರಿ ಟಿಪ್ಪಣಿ ಬರೆಯುವುದೇ ಆದರೆ, 1914ರಲ್ಲಿ ಈ ಪುಸ್ತಕವನ್ನು ಪ್ರಕಟಿಸಿದ ಬೋಸ್ಟನ್ನಿನ ಪ್ರಕಾಶಕರು ಪುಸ್ತಕದ ಕೊನೆಯಲ್ಲಿ ಹೀಗೆ ಹೇಳಿದ್ದರು : “ ಈ ಪ್ರಬಂಧದ ಸರಳ ಮತ್ತು ವಿವೇಕಯುತವಾದ ಸಂದೇಶವನ್ನು ಅಪಾರ್ಥ ಮಾಡಿಕೊಳ್ಳಲಾಗದಿದ್ದರೂ, ಸುದ್ದಿ ಪತ್ರಿಕೆಗಳಲ್ಲಿ ಬಂದ ಟೀಕೆಗಳಲ್ಲಿ ಇದನ್ನು ಅಪಾರ್ಥ ಮಾಡಿಕೊಂಡಿರುವುದನ್ನು ನೋಡಿದರೆ ನಾವು ಓದುಗರಿಗೆ ಎಚ್ಚರಿಕೆ ನೀಡಬೇಕಾಗುತ್ತದೆ. ಎಲ್ಲರೂ ಎಲ್ಲ ಸಮಯದಲ್ಲೂ ಈ ಪ್ರಬಂಧದಲ್ಲಿ ಹೇಳಿರುವಂತೆ ಪ್ರಯೋಗವನ್ನು ತಮ್ಮ ಇತಿಮಿತಿಯನ್ನು ಮೀರದೆ ಮಾಡುವಂತಿಲ್ಲ ಮತ್ತು ಶಕ್ತಿಯನ್ನು ಮರಳಿ ಪಡೆಯಲು ಮಾದಕ ದ್ರವ್ಯ ಅಥವಾ ಮದ್ಯಪಾನ ಮಾಡುವಂತಿಲ್ಲ ”
ಎಡ್ವರ್ಡ್ ಹಾಫ್‍ಮನ್ ನ್ಯೂಯಾರ್ಕ್ ನಗರದ ಯೆಶಿವಾ ವಿಶ್ವವಿದ್ಯಾಲಯದಲ್ಲಿ ಮನಶ್ಶಾಸ್ತ್ರದ ಸಹ ಪ್ರೊಫೆಸರ್ ಆಗಿದ್ದಾರೆ. ಖಾಸಗಿಯಾಗಿ ಮನಶ್ಶಾಸ್ತ್ರದ ಕ್ಲಿನಿಕ್ ಒಂದನ್ನು ನಡೆಸುತ್ತಾರೆ. ಮನಶ್ಶಾಸ್ತ್ರದ ಬಗ್ಗೆ 25ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ ಹಾಫ್‍ಮನ್ ಇತ್ತೀಚೆಗೆ ಸಕಾರಾತ್ಮಕ ಮನಶ್ಶಾಸ್ತ್ರವನ್ನು ಕುರಿತು ಡಾ ವಿಲಿಯಂ ಕಾಂಪ್ಟನ್ ಅವರೊಡನೆ ಜಂಟಿಯಾಗಿ, ಖುಷಿ ದ ಸೈನ್ಸ್ ಆಫ್ ಹ್ಯಾಪಿನೆಸ್ ಅಂಡ್ ಫ್ಲರಿಷಿಂಗ್ ಎಂಬ ಪುಸ್ತಕವನ್ನು ಪ್ರಕಟಿಸಿದ್ದಾರೆ. ಸಕಾರಾತ್ಮಕ ಮನಶ್ಶಾಸ್ತ್ರವನ್ನು ಕುರಿತ ಭಾರತೀಯ ಪತ್ರಿಕೆ ಮತ್ತು ಮಾನವೀಯ ಮನಶ್ಶಾಸ್ತ್ರದ ಪತ್ರಿಕೆಯೊಂದರಲ್ಲಿ ಸಂಪಾದಕ ಮಂಡಲಿಯಲ್ಲಿದ್ದಾರೆ. ಇವರನ್ನು ಸಂಪರ್ಕಿಸಲು ಇಲ್ಲಿಗೆ ಇ ಮೇಲ್ ಮಾಡಬಹುದು :columns@whiteswanfoundation.org 

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org