ಪುರುಷರು ಮತ್ತು ಮಾನಸಿಕ ಆರೋಗ್ಯ

Published on
34ರ ಅನಿಲ್ ಕಳೆದ ಒಂದೆರಡು ವರ್ಷದಿಂದ ಮಾನಸಿಕ ತೊಂದರೆಯಿಂದ ಬಳಲುತ್ತಿದ್ದಾರೆ. ಹಿಂಸೆ ತೀವ್ರವಾದಾಗ ಈ ಹಿಂದೆ ಎಷ್ಟೋ ಬಾರಿ ತಜ್ಞರ ಬಳಿ ಹೋಗಲೇಬೇಕೆಂದು ತೀರ್ಮಾನಿಸಿದ್ದರಾದರೂ ಪೂರ್ವಾಗ್ರಹ, ದ್ವಂದ್ವಗಳು ತೆರಳದಂತೆ ತಡೆಹಿಡಿದುಬಿಟ್ಟಿದ್ದವು. ಇತ್ತೀಚೆಗಷ್ಟೇ ಪತ್ನಿಯ ಒತ್ತಾಯದ ಮೇರೆಗೆ ತಜ್ಞ ಸಹಾಯಕ್ಕೆ ಮೊರೆ ಹೋಗಿರುವ ಅನಿಲ್ ಹಿಂಜರಿಕೆ, ಸಂಕೋಚದಿಂದಲೇ ಹೀಗೆ ಹೇಳುತ್ತಾರೆ “ ಒತ್ತಡದ ಜೀವನದಲ್ಲಿ ಮಾನಸಿಕ ತೊಂದರೆಗಳೆಲ್ಲಾ ಸಾಮಾನ್ಯ ಎಂದೇ ತಿಳಿದಿದ್ದೆ. ಪತ್ನಿ ಸಲಹೆ ನೀಡಿದಾಗಲೆಲ್ಲಾ ಅವಳು ನನ್ನನ್ನು ಅಸಮರ್ಥ ಎಂದು ಭಾವಿಸಿದ್ದಾಳೆ ಎಂದು ಕೋಪ ಬರುತ್ತಿತ್ತು. ಬಹಳಷ್ಟು ಬಾರಿ ಅಸಾಧ್ಯ ಎನ್ನುವಷ್ಟು ಆತಂಕ, ವ್ಯಾಕುಲತೆ ಕಾಡುತ್ತಿತ್ತಾದರೂ ಅದಕ್ಕೆಲ್ಲಾ ಚಿಕಿತ್ಸೆಗೆ ಎಂದು ಹೋದರೆ ಸಂಬಂಧಿಕರು, ಸಹೋದ್ಯೋಗಿಗಳು ಏನೆಂದುಕೊಂಡಾರು ಎಂಬ ಅಳುಕು. ಸಾಧ್ಯವಾದಷ್ಟೂ ನಾನೇ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದೆ. ಆದರೆ ಮನಸ್ಸಿನ ಹಿಂಸೆ ಕೈ ಮೀರಿ ಬಿಟ್ಟಿತು. ಕಡೆಗೆ ಸಂಸಾರ, ವೃತ್ತಿಯ ಮೇಲೆ ಪ್ರತಿಕೂಲ ಪರಿಣಾಮ ವಿಪರೀತವಾಗಲಾರಂಭಿಸಿದಾಗ ಪತ್ನಿಯ ಒತ್ತಾಯಕ್ಕೆ ಮಣ ದು ಬರಲೇಬೇಕಾಯ್ತು. ನಿಜವಾಗಲೂ ಮಾನಸಿಕ ಸಮಸ್ಯೆಗೆ ಚಿಕಿತ್ಸೆ ಪಡೆಯುವಷ್ಟು ವೀಕ್ ಆಗುತ್ತೇನೆ ಎಂದು ನಾನು ಯಾವತ್ತೂ ಭಾವಿಸಿರಲಿಲ್ಲ.” 
ದೈಹಿಕ ಸಮಸ್ಯೆಗೆ, ಸಮಸ್ಯೆಗೊಳಗಾದವರಿಗೆ ಸಿಗುವಷ್ಟು ರಾಜಮರ್ಯಾದೆ ಮಾನಸಿಕ ಸಮಸ್ಯೆಗಳ ಪಾಲಿಗೆ ಸಿಗುವುದಿಲ್ಲವೆನ್ನುವುದು ಹೌದಾದರೂ ಮಾನಸಿಕ ಹಿಂಸೆಯಿಂದ ಪ್ರತಿಕ್ಷಣ ವೇದನೆ ಅನುಭವಿಸುವುದರ ಬದಲು, ಶುಶ್ರೂಷೆ ಪಡೆದು ನೋವಿನಿಂದಾದರೂ ಮುಕ್ತರಾಗೋಣ ಎಂದೂ ಹೊರಡಲೂ ಅದೆಷ್ಟೋ ಮಂದಿ ಹಿಂದೇಟು ಹಾಕಿ ಬಿಡುವುದು ದುರದೃಷ್ಟಕರ. ಮಾನಸಿಕವಾಗಿ, ಸಾಮಾಜಿಕವಾಗಿ ವಿಪರೀತ ಕಷ್ಟ-ನಷ್ಟಗಳನ್ನು ಅನುಭವಿಸುತ್ತಿದ್ದರೂ ಅದು ತನಗಿರುವ ಮಾನಸಿಕ ತೊಂದರೆಯ ಪರಿಣಾಮ ಎಂದು ಒಪ್ಪಿಕೊಂಡು ಪರಿಹರಿಸಿಕೊಳ್ಳಲು ಮುಂದಾಗದೇ ಸಂಕಷ್ಟದಲ್ಲೇ ದಿನಗಳೆಯುವ ಅನಿಲ್‍ನವರಂತಹ ಪುರುಷರು ಸಾಕಷ್ಟು ಸಂಖ್ಯೆಯಲ್ಲಿ ಸುತ್ತಮುತ್ತಲೂ ಕಾಣಸಿಗುವರು.
 ಮನಬಿಚ್ಚಿ ಮಾತನಾಡುವುದು, ನೋವನ್ನು ಹಂಚಿಕೊಳ್ಳುವುದು, ಸಹಾಯಕ್ಕೆ ಮುಂದಾಗುವುದು ಇವು ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬಂದರೆ ಮನದೊಳಗೇ ಬಚ್ಚಿಟ್ಟುಕೊಳ್ಳುವುದು, ತನ್ನಷ್ಟಕ್ಕೇ ಸುಮ್ಮನಾಗುವುದು, ಸಹಾಯ ಕೇಳುವುದೇ ಅಸಮರ್ಥತೆ ಎಂದು ತಿಳಿಯುವುದು ಪುರುಷರಲ್ಲಿ ಹೆಚ್ಚಾಗಿ ಕಾಣಸಿಗುವುದು.
ಹೀಗಾಗೇ ಮಾನಸಿಕ ತೊಂದರೆಗೆ ಒಳಪಟ್ಟ ಸಂದರ್ಭದಲ್ಲೂ ತನ್ನ ಮಾನಸಿಕ ಸ್ಥಿತಿಯ ಏರುಪೇರುಗಳನ್ನು ಗುರುತಿಸಿಕೊಳ್ಳುವುದರಿಂದ ಹಿಡಿದು ಶುಶ್ರೂಷೆಗೆ ಮುಂದಾಗುವ ತನಕ ತೀವ್ರವಾದ ವೈಯಕ್ತಿಕ, ಸಾಮಾಜಿಕ ದ್ವಂದ್ವಗಳಿಗೆ ತೆರೆದುಕೊಳ್ಳುವ ಪುರುಷರು ಸಹಾಯ ಪಡೆಯುವುದನ್ನು ಮುಂದೂಡುತ್ತಾ ಮತ್ತಷ್ಟು ಸಮಸ್ಯೆಯ ತೀವ್ರತೆಗೆ ಸಿಲುಕುವರು.
ಮಾನಸಿಕ ತೊಂದರೆಗೆ ಸಿಲುಕುವ ಬಹಳಷ್ಟು ಪುರುಷರಲ್ಲಿ ಕಾಣಸಿಗುವ ಅಂಶವೆಂದರೆ:
  • ಮಾನಸಿಕ ತೊಂದರೆ ತೀವ್ರ ಅಸ್ವಸ್ಥತೆಗೆ ತಿರುಗುವ ತನಕ ಸಹಾಯ ಪಡೆಯುವುದನ್ನು ಮುಂದೂಡುವುದು,
  • ಆಪ್ತರಲ್ಲಿಯೂ ಹಂಚಿಕೊಳ್ಳಲು ಹಿಂದೇಟು ಹಾಕುವುದು
  • ತನ್ನನ್ನು ತಾನು ಸಂಭಾಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದಾಗಲೂ ತನ್ನ ಸಮಸ್ಯೆಯನ್ನು ಸ್ವೀಕರಿಸಿ ಹೊರಗಿನ ಸಹಾಯವನ್ನು ಪಡೆಯುವುದನ್ನು ನಿರಾಕರಿಸುವುದು
  • ಮನಸ್ಸಿನ ಸಮಸ್ಯೆಯಿಂದ ದೈಹಿಕ ಲಕ್ಷಣಗಳು ಕಾಣ ಸಿಕೊಳ್ಳಲು ಪ್ರಾರಂಭಿಸಿದ ನಂತರ ತಜ್ಞರ ಸಂಪರ್ಕಕ್ಕೆ ಬರುವುದು  ಉದಾ: ತೀವ್ರವಾದ ದೈಹಿಕ ನೋವುಗಳು, ಲೈಂಗಿಕ ತೊಂದರೆಗಳು, ದೀರ್ಘಕಾಲಿಕ ಅನಾರೋಗ್ಯ ಮುಂತಾದವು
  • ಮಾನಸಿಕ ತೊಂದರೆ ತೀವ್ರವಾಗಿ ಕುಟುಂಬ, ವೃತ್ತಿಯ ಮೇಲೆ, ಸಾಮಾಜಿಕ-ಆರ್ಥಿಕವಾಗಿ ಅತಿಯಾದ ಪರಿಣಾಮ ಬೀರಲಾರಂಭಿಸಿದ ನಂತರವಷ್ಟೇ ಶುಶ್ರೂಷೆಗೆ ಮುಂದಾಗುವುದು
  • ಭಾವನಾತ್ಮಕ ಸಮಸ್ಯೆಯ ಪರಿಹಾರಕ್ಕೆ ಮಾದಕ ವಸ್ತು, ಮದ್ಯಪಾನದ ಮೊರೆ ಹೋಗುವುದು
  • ಸ್ವಲ್ಪ ಚೇತರಿಕೆ ಕಂಡರೂ ಅರ್ಧಕ್ಕೇ ಚಿಕಿತ್ಸೆಯನ್ನು ನಿಲ್ಲಿಸಿಬಿಡುವುದು
ಶುಶ್ರೂಷೆಯಿಂದ ಪುರುಷರು ದೂರವೇ ಉಳಿಯುವುದೇಕೆ?
ಒಂದೇ ತೆರನಾದ ಮಾನಸಿಕ ಖಾಯಿಲೆಗಳೇ ಪರುಷರು-ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣ ಸಿಕೊಳ್ಳುವುದಾದರೂ ಅದನ್ನು ಅವರು ಕಾಣುವ ರೀತಿ, ಅನುಭವಿಸುವ ರೀತಿ, ಅದರ ಬಗ್ಗೆ ಮಾತನಾಡುವ ರೀತಿ ಹಾಗೂ ಸಮಸ್ಯೆಯಿಂದ ಹೊರಬರಲು ಅನುಸರಿಸುವ ಕ್ರಮಗಳಲ್ಲಿಯೂ ಸಾಕಷ್ಟು ವ್ಯತ್ಯಾಸಗಳು ಕಾಣುತ್ತವೆ. ಹಾಗಾಗಿ ಖಾಯಿಲೆಯ ಲಕ್ಷಣಗಳಲ್ಲೂ ಮಹಿಳೆ-ಪುರುಷರಲ್ಲಿ ಗಮನೀಯವಾದ ವ್ಯತ್ಯಾಸವನ್ನು ನೋಡಬಹುದು. ಉದಾ: ಖಿನ್ನತೆ, ಆತಂಕದ ಖಾಯಿಲೆಯಿರುವ ಮಹಿಳೆ ಹೆಚ್ಚಾಗಿ ದುಃಖ, ವೇದನೆಯ ಲಕ್ಷಣ ಅನುಭವಿಸಿದರೆ ಅದೇ ಸಮಸ್ಯೆಯಿರುವ ಪುರುಷರಲ್ಲಿ ವಿಪರೀತ ಕೋಪ, ಆಕ್ರೋಶ ಅನುಭವಕ್ಕೆ ಬರುತ್ತಿರಬಹುದು.
ಮಾನಸಿಕ ತೊಂದರೆ ದೈಹಿಕ ಲಕ್ಷಣ, ಖಾಯಿಲೆಯ ಮೂಲಕ ವ್ಯಕ್ತವಾಗಬಹದು ಹಾಗೂ ಮಾನಸಿಕ ಸಮಸ್ಯೆಯ ನಿವಾರಣೆಗಾಗಿ ತಾನೇನು ಮಾಡಬೇಕು ಎಂಬುದರ ಬದಲು  ಪರಿಹಾರಕ್ಕಾಗಿ ಪುರುಷರೇನು ಮಾಡುವರು ಎಂಬುದರ ಮೇಲೆ ಪುರುಷರ ಆಲೋಚನೆಗಳು ಹೆಚ್ಚು ಕೇಂದ್ರಿತವಾಗಿರಬಹುದು
ಮಾನಸಿಕ ಸಮಸ್ಯೆಯನ್ನು ಅನುಭವಿಸುವ, ಗುರುತಿಸಿಕೊಳ್ಳುವ, ಸ್ವೀಕರಿಸುವ ಮನೋಭಾವ ಬಹಳಷ್ಟು ಪುರುಷರಲ್ಲಿ ಸಾಕಷ್ಟು ಭಿನ್ನವಾಗಿರುವುದರಿಂದ ಆರೈಕೆಯಿಂದ ದೂರವೇ ಉಳಿಯುವುದಕ್ಕೂ ಅವೂ ಕಾರಣಗಳಾಗಿ ಪರಿಣಮಿಸಿ ಬಿಡುತ್ತವೆ.
ಪುರುಷರು ಚಿಕಿತೆಯನ್ನ್ಸು ಪಡೆಯದಿರಲು, ಮುಂದೂಡಲು ಇರುವ ಕಾರಣಗಳಿವು: 
ಸಾಮಾಜಿಕ ಕಾರಣಗಳು: 
ಪುರುಷರು ಭಾವನಾತ್ಮಕವಾಗಿ ತೆರೆದುಕೊಳ್ಳಬಾರದು ಎಂಬ ಸಾಮಾಜಿಕ ಪೂರ್ವಾಗ್ರಹ- ಅಳುವುದು ಪುರುಷ ಲಕ್ಷಣವಲ್ಲ, ಭಾವನೆಗಳೇನಿದ್ದರೂ ಹೆಣ್ಣು ಮಕ್ಕಳ ಸ್ವತ್ತು, ಏನೇ ಬಂದರೂ ಗಂಡಸು ಜಯಿಸಿಕೊಳ್ಳುತ್ತಾನೆ, ನಿಜವಾದ ಗಂಡಸರು ಅಂಜುತ್ತಾ ಅಳುಕುತ್ತಾ ಸಹಾಯ ಕೇಳುವುದಿಲ್ಲ ಎನ್ನುವಂತಹ ಪೂರ್ವಾಗ್ರಹಗಳ ಕಾರಣದಿಂದ ಹೊರಗಿನ ಸಹಾಯವನ್ನು ನಿರಾಕರಿಸುವುದು
ಮಾನಸಿಕ ತೊಂದರೆಯೆಂದರೆ ಬಲಹೀನತೆ, ದೌರ್ಬಲ್ಯ ಎಂದು ಬಿಂಬಿತವಾಗುವುದರಿಂದ ಆಪ್ತರೆದುದುರು ಹಂಚಿಕೊಳ್ಳಲೂ ಹಿಂಜರಿಯುವುದು
ಸಂಬಂಧಿಕರು, ಉದ್ಯೋಗ ವಲಯಗಳಲ್ಲಿ ಅಸಮರ್ಥ ಎಂದು ಹಣೆಪಟ್ಟಿ ಪಡೆದರೆ ಇನ್ನೆಲ್ಲಿ ಸಾಮಾಜಿಕ ಸ್ಥಾನಮಾನ, ವೃತ್ತಿ ಜೀವನದ ಏಳಿಗೆಗೆ ಚ್ಯುತಿ ಉಂಟಾಗಬಹುದೋ ಎನ್ನುವ ಆತಂಕದಿಂದ
ಸಾಮಾಜಿಕ ಯಶಸ್ಸು, ಸಂಪಾದನೆ, ಸಾಂಸಾರಿಕ ಜವಾಬ್ದಾರಿಗಳಷ್ಟೇ ಪುರುಷರಿಗೆ ಬಹುಮುಖ್ಯ ಎಂದು ಚಿತ್ರಿತವಾಗಿರುವುದರಿಂದ ಅದನ್ನೇ ಪ್ರಮುಖವಾಗಿಸಿಕೊಂಡು ಮಾನಸಿಕ ಸಮಸ್ಯೆಯನ್ನು ನಿರ್ಲಕ್ಷಿಸುವುದು. 
ವೈಯಕ್ತಿಕ ಕಾರಣಗಳು :
ಸಮಸ್ಯೆಯನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವುದರಿಂದ: ಸಾಮಾಜಿಕವಾಗಿ ಪುರುಷರ ಪಾತ್ರದ ಬಗ್ಗೆ ಅನಪೇಕ್ಷಿತವಾದ ನಿರೀಕ್ಷೆ, ಪೂರ್ವಾಗ್ರಹಗಳಿರುವುದರಿಂದ ಮಾನಸಿಕ ಸಮಸ್ಯೆಯನ್ನು ಪರುಷರು ತನ್ನ ವ್ಯಕ್ತಿತ್ವ, ಅಸ್ಥಿತ್ವದ ಮೇಲಾದ ಆಘಾತ ಎಂದು ಪರಿಗಣ ಸಿ ಬಿಡುತ್ತಾರೆ. ಹಾಗಾಗೇ ಸಮಸ್ಯೆಯ ಸ್ವೀಕೃತಿ, ಚಿಕಿತ್ಸೆ ಪಡೆಯಬೇಕೆಂಬ ಮನಃಸ್ಥಿತಿ ಎರಡಕ್ಕೂ ತೆರೆದುಕೊಳ್ಳುವುದು ಕಷ್ಟವಾಗಿ ಬಿಡುವುದು
ಋಣಾತ್ಮಕ ದೃಷ್ಟಿಕೋನ: ತಾನು ದುರ್ಬಲ, ಪುರುಷನಾಗಿ ತನ್ನನ್ನು ತಾನು ನಿಯಂತ್ರಿಸಿಕೊಳ್ಳಲಾಗಲಿಲ್ಲ, ಚಿಕಿತ್ಸೆಗೆ ಕಡೆಗೂ ಬರಬೇಕಾಯ್ತು ಎಂಬಂತಹ ಮಾನಸಿಕವಾಗಿ ಹಿಂಸಿಸುವ ಋಣಾತ್ಮಕ ಹೇಳಿಕೆಗಳನ್ನು ಪದೇಪದೇ ಹೇಳಿಕೊಳ್ಳುವುದರಿಂದ
ಪುರುಷನಾಗಿ ತಾನು ಮಾನಸಿಕ ತೊಂದರೆಗೊಳಗಾಗುವುದು ಅಸಾಧ್ಯ, ತನಗೆ ಮಾನಸಿಕ ಸಮಸ್ಯೆ ಇರುವುದು ಯಾರಿಗೂ ತಿಳಿಯಬಾರದು ಎಂಬಂತಹ ಧೋರಣೆ, ಆತಂಕಗಳು
ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು ಕುಟುಂಬ, ವೃತ್ತಿ ವಲಯದಲ್ಲಿ ಪೂರಕವಾದ, ಸ್ಪಂದಿಸುವ ವಾತಾವರಣವಿಲ್ಲದಿದ್ದಾಗ ಸಮಸ್ಯೆಗೆ ಸಹಾಯ ಪಡೆಯುವ ನಿಟ್ಟಿನಲ್ಲಿ ಒಂದು ಹೆಜ್ಜೆಯಿಡುವುದೂ ಕಷ್ಟಕರವೆನಿಸಿರಬಹುದು. ಆದರೆ ನೆನಪಿನಲ್ಲಿರಿಸಿ, ನಿಮ್ಮ ಆರೋಗ್ಯ ಸೌಖ್ಯ ನಿಮ್ಮ ಜವಾಬ್ದಾರಿ ಮತ್ತು ಹಕ್ಕು. ಈ ನಿಟ್ಟಿನಲ್ಲಿ ಧೈರ್ಯದ ಒಂದೊಂದೇ ಹೆಜ್ಜೆಯನ್ನಿರಿಸಿ ಸಮಸ್ಯೆಯಿಂದ ಮುಕ್ತರಾಗಲು ಸಾಧ್ಯವಿದೆ. ಮಾನಸಿಕ ಸ್ವಾಸ್ಥ್ಯಕ್ಕಾಗಿ ಸಹಾಯ ಪಡೆಯಲು ಹಿಂಜರಿಯುತ್ತಿದ್ದಲ್ಲಿ ಕೆಳಗಿನ ಆಲೋಚನೆಗಳು ಸಹಕಾರಿಯಾಗಬಲ್ಲವು
ನೆನಪಿನಲ್ಲಿಡಬೇಕಾದ ಅಂಶಗಳು:
ದೈಹಿಕ ಸಮಸ್ಯೆಗಳು ಹೇಗೆ ಮಹಿಳೆ-ಪರುಷ ಎಂದು ಬೇಧ ತೋರಿಸುವುದಿಲ್ಲವೋ ಮಾನಸಿಕ ಖಾಯಿಲೆಗಳೂ ಹಾಗೇ ಬೇಧಭಾವ ಮಾಡುವುದಿಲ್ಲ
ಸಮಸ್ಯೆ ಹಂಚಿಕೊಂಡು ಸಹಾಯ ಪಡೆಯುವುದರಿಂದ ನಾವು ಪರರಿಗೆ ಹೊರೆಯಾಗಿ ಬಿಡುವುದಿಲ್ಲ. ಹಂಚಿ, ಪರಿಹರಿಸಿಕೊಳ್ಳದಿದ್ದರೆ ಎಂದಿಗೂ ಹೊರೆಯಾಗೇ ಉಳಿದು ಬಿಡುತ್ತೇವೆ
ಚಿಕಿತ್ಸೆ ಪಡೆಯುವುದು ಅಸಮರ್ಥತೆಯಲ್ಲ. ಶುಶ್ರೂಷೆಗೆ ಮುಂದಾಗದೇ ಒಳಗೊಳಗೇ ಹಿಂಸೆ ಪಡುವುದು ನಿಜವಾದ ಅಸಮರ್ಥತೆ
ಮಾನಸಿಕ ಖಾಯಿಲೆಗೊಳಗಾಗುವುದು ದೌರ್ಬಲ್ಯವಲ್ಲ. ದೇಹದಂತೆಯೇ ಮನಸ್ಸೂ ನೋವು, ಸಮಸ್ಯೆಗಳನ್ನು ಎದುರಿಸುತ್ತದೆ.
ಪುರುಷರಲ್ಲಿ ಜಾಗೃತಿ ಮೂಡಿಲು ಮಾಡಬಹುದಾದುದ್ದಿಷ್ಟು:
ಮಾನಸಿಕ ತೊಂದರೆಗೊಳಗಾದವರು ನೀವೇ ಆಗಿದ್ದಲ್ಲಿ :
  • ಆಪ್ತರೊಡನೆ ಸಮಸ್ಯೆಯನ್ನು ಹಂಚಿಕೊಳ್ಳಿ. ಎಷ್ಟೋ ಬಾರಿ ಹೇಳಿಕೊಳ್ಳುವಂತದ್ದು ನನಗೇನೂ ಆಗಿಲ್ಲ ಎನಿಸಿದರೂ ಹಂಚಿಕೊಂಡ ನಂತರ ಮನಸ್ಸು ನಿರಾಳವಾಗುತ್ತಾ, ದಾರಿ ಗೋಚರಿಸುವುದನ್ನು ಕಾಣಬಹುದು.
  • ನಿಮಗೆ ವಿಶ್ವಾಸವಿರುವ ಸೂಕ್ತ, ಸಮರ್ಥ ಮಾನಸಿಕ ತಜ್ಞರನ್ನು ಆಯ್ಕೆ ಮಾಡಿ. ಸಂಪರ್ಕಿಸುವ ಮನಸ್ಸು ಮಾಡಿ. ಹಂತಹಂತವಾಗಿ ನಡೆಯುವ, ಕೆಲ ನಿಮಿಷಗಳಲ್ಲಿ ಮುಗಿಯುವ ತಜ್ಞ ಸಹಾಯ ಮಾನಸಿಕ ಬವಣೆಯನ್ನು ಪರಿಹರಿಸಬಲ್ಲದು
  • ಭಾವನಾತ್ಮಕವಾಗಿ ವ್ಯಕ್ತಪಡಿಸಿಕೊಳ್ಳುವ ಮಾರ್ಗಗಳನ್ನು ಆಯ್ದುಕೊಳ್ಳಿ ಉದಾ: ಸೃಜಾನಾತ್ಮಕ ಬರವಣ ಗೆ, ಕಲೆ ಮೊದಲಾದವು
  • ನನ್ನ ಮಾನಸಿಕ ಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳಲು ನಾನೇನು ಮಾಡಬಹುದು ಪ್ರಶ್ನಿಸಿಕೊಂಡು, ಉತ್ತರವನ್ನು ಶೋಧಿಸಿ. ಹೊಸತೇನಾದರೂ ಕಲಿಯುವುದು, ಸ್ನೇಹಿತರು-ಆಪ್ತರ ಭೇಟಿ, ವ್ಯಾಯಾಮ ಹೀಗೆ... ನಿಮಗಿಷ್ಟದ್ದು
  • ನಿಮ್ಮದೇ ಊರಿನಲ್ಲಿ ಬೆಂಬಲಿಸುವ ಸಪೋರ್ಟ್ ಗ್ರೂಪ್‍ಗಳ ಸದಸ್ಯರಾಗಿ ಸಕ್ರಿಯರಾಗಿ. ಅಂತರ್ಜಾಲದಲ್ಲಿ ದೊರೆಯುವ ಸವಲತ್ತುಗಳ ಪೂರ್ಣ ಸಹಾಯ ಪಡೆದುಕೊಳ್ಳಿ
  • ಮಾನಸಿಕ ತೊಂದರೆಯ ಸವಾಲನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ಪುರುಷರ ಜೀವನಗಾಥೆಯ ಬಗ್ಗೆ ತಿಳಿದುಕೊಳ್ಳಿ. ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಿ.
  • ಮಾನಸಿಕ ತೊಂದರೆಯಿಂದ ಬಾಧಿತರಾಗಿ ಎಲ್ಲರಿಂದ ದೂರಾಗದಿರಿ. ಒಂಟಿತನ ಸಮಸ್ಯೆಗೆ ಮತ್ತಷ್ಟು ಪುಷ್ಠಿ ನೀಡುವುದು.
ಪುರುಷರು ಹೆಚ್ಚುಹೆಚ್ಚು ಮಾನಸಿಕ ಸಮಸ್ಯೆಯ ಬಗ್ಗೆ ಕಾರ್ಯೋನ್ಮುಖವಾಗುವಂತೆ ಮಾಡಲು:
ಮಾನಸಿಕ ಸಮಸ್ಯೆಯ ಬಗ್ಗೆ ನಿಮ್ಮ ಪುರುಷ ಸ್ನೇಹಿತನೋ ಸಹೋದ್ಯೋಗಿಯೋ ಮಾತನಾಡಿದಾಗ ಇದೆಲ್ಲ ಸಾಮಾನ್ಯವೆಂದು ತಳ್ಳಿಹಾಕದೇ, ಕುಹಕವಾಡದೇ ಕಾಳಜಿಯಿಂದ ಕೇಳಿಸಿಕೊಳ್ಳಿ, 
ಶಾಲಾಕಾಲೇಜು, ಕಛೇರಿಗಳಲ್ಲಿ ಮಾನಸಿಕ ಆರೋಗ್ಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಮಾನಸಿಕ ತೊಂದರೆಯಿರುವವರ ಭಾವನೆಗಳು ಅಸಂಬದ್ಧ ಎಂದು ಅಲಕ್ಷಿಸದಿರಿ. ಭಾವನೆಗಳಿಗೆ ಕಿವಿಗೊಡಿ, ಆಯ್ಕೆಯನ್ನು ಗೌರವಿಸಿ,  ಮಾನಸಿಕ ತುಮುಲಗಳನ್ನು ಆಲಿಸಿ, ಸಂತೈಸಿ.
ಮಾನಸಿಕ ಸಮಸ್ಯೆಯನ್ನು ಗುರುತಿಸಿಕೊಳ್ಳುವ ಬಗ್ಗೆ, ಅದನ್ನು ಸಂಭಾಳಿಸುವುದರ ಬಗ್ಗೆ ಪೂರಕ, ಸಕಾರಾತ್ಮಕ ಮಾಹಿತಿ ನೀಡಿ. ಚಿಕಿತ್ಸೆಯ ಹಾದಿಯಲ್ಲಿರುವವರೊಡನೆ ಸಕಾರಾತ್ಮಕವಾಗಿ ಸ್ಪಂದಿಸಿ, ಜೊತೆಗಿರಿ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org