ನಿಮ್ಮ ಉದ್ಯೋಗ ಸ್ಥಳ ಒತ್ತಡದ ವಾತಾವರಣವನ್ನು ಸೃಷ್ಟಿಸುತ್ತಿದೆಯೆ?

ನಿಮ್ಮ ಉದ್ಯೋಗ ಸ್ಥಳ ಒತ್ತಡದ ವಾತಾವರಣವನ್ನು ಸೃಷ್ಟಿಸುತ್ತಿದೆಯೆ?

ಉದ್ಯೋಗ ಸ್ಥಳದಲ್ಲಿ ಒತ್ತಡ ಉಂಟುಮಾಡಬಹುದಾದ ಅಂಶಗಳನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಪಟ್ಟಿ ಮಾಡಿದೆ. ಜೊತೆಗೆ, ಸಂಸ್ಥೆಗಳು ತನ್ನ ಉದ್ಯೋಗಿಗಳಿಗೆ ಒತ್ತಡರಹಿತ ವತಾವರಣವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕೆಲವು ಸಲಹೆ ಸೂಚನೆಗಳನ್ನೂ ನೀಡಿದೆ.

ಉದ್ಯೋಗ ಸ್ಥಳದ ಒತ್ತಡ ಎಂದರೇನು?

ಕೆಲಸಕ್ಕೆ ಸಂಬಂಧಪಟ್ಟ ಬೇಡಿಕೆಗಳನ್ನು ಪೂರೈಸುವಲ್ಲಿ ವ್ಯಕ್ತಿಯು ಶ್ರಮ ವಹಿಸುವಂತೆ ಉಂಟು ಮಾಡುವ ಒತ್ತಡವನ್ನು ಉದ್ಯೋಗ ಸ್ಥಳದ ಒತ್ತಡ ಎನ್ನಲಾಗುತ್ತದೆ.

ಉದ್ಯೋಗ ಸ್ಥಳದ ಒತ್ತಡವು ಕೆಲಸದ ಒತ್ತಡಕ್ಕಿಂತ ಹೇಗೆ ಭಿನ್ನ?

ಒತ್ತಡವು ಯಾವುದೇ ಉದ್ಯೋಗ ಸ್ಥಳದಲ್ಲಿ ಮುಖ್ಯವಾಗಿ ತೋರುವ ಅಂಶವಾಗಿರುತ್ತದೆ. ಇದು ಉದ್ಯೋಗಿಯು ಸದಾ ಜಾಗೃತನಾಗಿದ್ದು, ಕೆಲಸ ಮಾಡಲು ಉತ್ಸಾಹ ತುಂಬುತ್ತದೆ. ಆದರೆ, ಈ ಒತ್ತಡವು ಅತಿಯಾದರೆ ಕೆಲಸ ಕೆಡುತ್ತದೆಯೇ ಹೊರತು ಪ್ರಯೋಜನ ಬಹಳ ಕಡಿಮೆ.

ಉದ್ಯೋಗ ಸ್ಥಳದಲ್ಲಿ ಒತ್ತಡ ಹೇರುವ ಅಂಶಗಳು ಯಾವುದು?

ಒತ್ತಡವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಉದ್ಯೋಗ ಸ್ಥಳದಲ್ಲಿ ಕಡಿಮೆ ಬೆಂಬಲ ಹೊಂದಿರುವ ವ್ಯಕ್ತಿಯು ಹೆಚ್ಚು ಒತ್ತಡವನ್ನು ಅನುಭವಿಸುತ್ತಾರೆ.

ವಿಶ್ವ ಆರೋಗ್ಯ ಸಂಸ್ಥೆಯು ಈ ನಿಟ್ಟಿನಲ್ಲಿ ಅಧ್ಯಯನ ನಡೆಸಿ, ಉದ್ಯೋಗಿಗಳಿಗೆ ಅಪಾಯಕಾರಿಯಾಗುವ ಅಂಶಗಳ ಪಟ್ಟಿ ನೀಡಿದೆ. ಕೆಲವು ಸಂಸ್ಥೆಗಳಲ್ಲಿ ಈ ಸಮಸ್ಯೆಗಳ ಮೇಲೆ ಗಮನ ಹರಿಸಲು ಕಾರ್ಮಿಕ ಸಂಘಟನೆಗಳು ಕೆಲಸ ಮಾಡುತ್ತಿವೆ.

WHO ನೀಡಿರುವ ಪಟ್ಟಿಯಲ್ಲಿ ಕೊಟ್ಟಿರುವ ಅಂಶಗಳು ಹೀಗಿವೆ :

  • ಸಂಸ್ಥೆಯಿಂದ ಬೆಂಬಲದ ಕೊರತೆ (ಸಂಪನ್ಮೂಲ, ಸಹಾಯ ಇತ್ಯಾದಿ).
  •  ಸಂಸ್ಥೆಯ ಕಾರ್ಯದ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು.
  •  ಸಂವಹನದಲ್ಲಿ ಕೊರತೆ.
  •  ಅತಿ ಹೆಚ್ಚು ಅಥವಾ ಅತಿ ಕಡಿಮೆ ಕೆಲಸ.
  •  ಆರ್ಥಿಕ ಬೆಳವಣಿಗೆಗೆ ಪೂರಕವಲ್ಲದ ವಾತಾವರಣ.
  •  ವೇತನದಲ್ಲಿ ಅಸಮಾನತೆ.
  •  ಉದ್ಯೋಗದ ಅಭದ್ರತೆ.
  •  ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಅತ್ಯಂತ ಕಡಿಮೆ ಅಥವಾ ಸಂಪೂರ್ಣವಾಗಿ ಇಲ್ಲದಿರುವುದು.
  • ಬಳಕೆಯಾಗದೆ ವ್ಯರ್ಥವಾಗುತ್ತಿರುವ ಕೌಶಲ್ಯ.
  • ಕೆಲಸದ ಅವಧಿಯ ಅನಿಶ್ಚಿಯತೆ.
  • ಅಸಮರ್ಪಕ ಅಥವಾ ಬೆಂಬಲವಿಲ್ಲದ ಮೇಲ್ವಿಚಾರಣೆ.
  •  ಸಹೋದ್ಯೋಗಿಗಳ ಜೊತೆ ಉತ್ತಮವಲ್ಲದ ಬಾಂಧವ್ಯ.
  •  ದಬ್ಬಾಳಿಕೆ, ದೌರ್ಜನ್ಯ ಅಥವಾ ಹಿಂಸೆ.

ಉದ್ಯೋಗ ಸ್ಥಳವನ್ನು ಆರೋಗ್ಯಪೂರ್ಣವಾಗಿರಿಸಲು ಸಂಸ್ಥೆಯು ಏನು ಮಾಡಬಹುದು?

ಉದ್ಯೋಗ ಸ್ಥಳದಲ್ಲಿ ಒತ್ತಡವನ್ನು ನಿವಾರಿಸುವ ನಿಟ್ಟಿನಲ್ಲಿ ಸಂಸ್ಥೆಗಳು ತಮ್ಮ ಉದ್ಯೋಗ ಸ್ಥಳವನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅನುಸರಿಸಬಹುದಾದ ಕೆಲವು ಅಂಶಗಳು ಹೀಗಿವೆ:

  •  ಉದ್ಯೋಗಿಗಳು ಸಂಸ್ಥೆಯ ಕಾರ್ಯಸ್ವರೂಪ, ನಿಲುವುಗಳು ಹಾಗೂ ಉದ್ದೇಶಗಳ ಬಗ್ಗೆ ತಿಳಿದಿರುವಂತೆ ನೋಡಿಕೊಳ್ಳುವುದು.
  •  ಉದ್ಯೋಗಿಯ ಕೌಶಲ್ಯ ಮತ್ತು ಉದ್ಯೋಗ ಪರಸ್ಪರ ತಾಳೆಯಾಗುವುದನ್ನು ಖಾತ್ರಿಪಡಿಸಿಕೊಳ್ಳುವುದು.
  •  ಉದ್ಯೋಗದ ಸ್ಪಷ್ಟ ಸ್ವರೂಪ ಹಾಗೂ ನಿರೀಕ್ಷೆಗಳ ವಿವರ.
  • ಸಂಸ್ಥೆಯೊಳಗೆ ಸ್ಪಷ್ಟ ಸಂವಹನ ವ್ಯವಸ್ಥೆ.
  •  ಉದ್ಯೋಗ ಸ್ಥಳದಲ್ಲಿ ಸೌಹಾರ್ದತೆಯನ್ನು ಕಾಯ್ದಿಡುವುದು.

ಈ ಪಟ್ಟಿಯನ್ನು WHO ನ Work and Organization stress ಲೇಖನದಿಂದ ಸಂಗ್ರಹಿಸಲಾಗಿದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org