ನೆಲೆ ಬದಲಾಯಿಸುವ ಕಷ್ಟಸುಖ: ಸಂಸ್ಥೆಗಳು ಉದ್ಯೋಗಿಗಳಿಗೆ ಹೊಂದಿಕೊಳ್ಳುವಂತಿರಬೇಕು

ಹೊಸತೊಂದು ನಗರಕ್ಕೆ ಹೋಗಿ ನೆಲೆಸುವುದು ಅಂದರೆ, ಹತ್ತು ಹಲವು ಥರದ ಸಮಸ್ಯೆಗಳನ್ನು ಎದುರಿಸುವುದು ಎಂದೇ ಅರ್ಥ. ಇಂಥ ಸಂದರ್ಭದಲ್ಲಿ ಉದ್ಯೋಗಿಗಳನ್ನು ಕರೆಸಿಕೊಳ್ಳುವ ಸಂಸ್ಥೆಗಳು ಅವರಿಗೆ ಯಾವ ಬಗೆಯಲ್ಲಿ ಸಹಾಯ ನೀಡಬಹುದು

ಇತ್ತೀಚೆಗೆ ಅಮೆರಿಕದಲ್ಲಿರುವ ಸಂಸ್ಥೆಯೊಂದರಿಂದ ಕರೆ ಬಂದಿತ್ತು. ಈ ಸಂಸ್ಥೆಯಲ್ಲಿ ಭಾರತೀಯ ಉದ್ಯೋಗಿಗಳು ಬಹಳ ದೊಡ್ಡ ಸಂಖ್ಯೆಯಲ್ಲಿದ್ದಾರೆ ಮತ್ತು ಇವರಲ್ಲಿ ಬಹುತೇಕರು 20ರಿಂದ 30 ವರ್ಷದ ಒಳಗಿನ ಯುವಜನರು. ಅವರಲ್ಲಿ ಕೆಲವರು ಹೊಸತಾಗಿ ಮದುವೆಯಾದವರು, ಕೆಲವರು ಇನ್ನೂ ಒಂಟಿಯಾಗಿರುವವರು. ಕಳೆದ ಕೆಲವು ಸಮಯದಿಂದ ಈ ಸಂಸ್ಥೆಗೆ ಸಂಬಂಧಿಸಿದಂತೆ ಆತಂಕಕಾರಿ ಸಂಗತಿಯೊಂದು ಜರುಗಿದೆ.

ಸಂಸ್ಥೆಯ ಕೆಲವು ಉದ್ಯೋಗಿಗಳ ಜೀವನ ಸಂಗಾತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಗಮನಿಸಿದ ಸಂಸ್ಥೆಯು ಯಾಕೆ ಹೀಗಾಗುತ್ತಿದೆ ಎಂದು ಯೋಚಿಸತೊಡಗಿತು. ಹಾಗೆಯೇ ಬಿಟ್ಟರೆ ಮುಂದೆ ಇದೊಂದು ರೂಢಿಯಾಗಿ ಬಿಡುವ ಅಪಾಯವೂ ಇದ್ದುದರಿಂದ, ತಾವು ತಮ್ಮ ಉದ್ಯೋಗಿಗಳ ಸಾಂಸಾರಿಕ ನೆಮ್ಮದಿಗೆ ಯಾವ ಸಹಕಾರ ನೀಡಬಹುದು ಎಂದು ಚರ್ಚಿಸಿತು. ಉದ್ಯೋಗಿಗಳು ತಮ್ಮ ಸಂಪೂರ್ಣ ಮನಸ್ಸಿನಿಂದ ಕೆಲಸದಲ್ಲಿ ತೊಡಗಿಕೊಳ್ಳುವುದು ಸಾಧ್ಯವಾಗಬೇಕು, ಅದೇ ವೇಳೆಗೆ ಅವರ ವೈಯಕ್ತಿಕ ಜೀವನವನ್ನೂ ಸಂಭಾಳಿಸಿಕೊಳ್ಳಬೇಕು. ಅದು ಹೇಗೆ?

ನಾನು ಕಳೆದ ದಿನಗಳು ನೆನಪಾದವು. ಹೌದು ನಾನೂ ಕೂಡ ಇದನ್ನು ಅನುಭವಿಸಿದ್ದೆ. ಅಪರಿಚಿತ ದೇಶದಲ್ಲಿ, ಮೊದಲ ಬಾರಿಗೆ ಮನೆಯಲ್ಲೇ ಉಳಿದು ಮಗುವನ್ನು ನೋಡಿಕೊಳ್ಳುವ ಯುವ ತಾಯಿಯಾಗಿ ನಾನು ಕೆಲ ಕಾಲ ಕಳೆದಿದ್ದೆ. ಆದ್ದರಿಂದ, ಉದ್ಯೋಗಿಗಳ ಸಂಗಾತಿಗಳು ಯಾವ ಮನಸ್ಥಿತಿಯನ್ನು ಹಾದುಹೋಗುತ್ತಿದ್ದಾರೆ ಅನ್ನುವುದನ್ನು ನಾನು ಊಹಿಸಬಲ್ಲವಳಾಗಿದ್ದೆ. ಅವರಿಗೆ ನಾನು ಖಂಡಿತ ಸಹಾಯ ನೀಡಬಲ್ಲೆ ಅನ್ನಿಸಿತು.

ನಾನಿದ್ದ ಸನ್ನಿವೇಶದಲ್ಲಿ ಯಾರೇ ಇದ್ದಿದ್ದರೂ ಅದನ್ನು ಅನುಭವಿಸಲೇಬೇಕಿತ್ತು. ಕೆಲವರು ಪರಿಸ್ಥಿತಿಯನ್ನು ಇತರರಿಗಿಂತ ಸುಲಭವಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿರುತ್ತಾರೆ, ಕೆಲವರಿಗೆ ಸಾಧ್ಯವಾಗುವುದಿಲ್ಲ - ಅಷ್ಟೇ. ಇಂದು ನನ್ನಲ್ಲಿರುವ ತಿಳುವಳಿಕೆ ಆ ದಿನಗಳಲ್ಲಿ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತೆಂದು ನಾನು ಯೋಚಿಸುತ್ತೇನೆ. ಆ ಎಲ್ಲ ಅನುಭವಗಳೂ ಸಹಜವಾದದ್ದು ಎಂದು ನನಗೆ ಅಂದೇ ತಿಳಿದಿದ್ದರೆ, ನಾನು ನನ್ನ ಅವಸ್ಥೆಗೆ ಮರುಕ ಪಡುವ ಅಗತ್ಯವೇ ಬೀಳುತ್ತಿರಲಿಲ್ಲ!

ಯಾವುದೇ ಸ್ಥಳ ಬದಲಾವಣೆ; ಅದು ಬೇರೆ ನಗರ ಇರಬಹುದು ಅಥವಾ ದೇಶ, ಮೂರು ಹಂತದಲ್ಲಿ ಹೊಂದಾಣಿಕೆ ಬೇಕಾಗುತ್ತದೆ. ಜೀವನದ ಅತಿ ಅವಶ್ಯಕ ಸಂಗತಿಗಳಾದ ವಾತಾವರಣ, ಆಹಾರ ಮತ್ತು ವಾಸ್ತವ್ಯ. ಮೂಲಸೌಕರ್ಯಗಳು ಹಾಗೂ ಜೀವನ ನಿರ್ವಹಣೆಯ ವೆಚ್ಚವೂ ಈ ಅಂಶಗಳಿಗೆ ಸೇರಿಕೊಳ್ಳುತ್ತವೆ. ನಂತರದ್ದು ಸಂಬಂಧಗಳ ಹೊಂದಾಣಿಕೆ. ಇಲ್ಲಿ ಎರಡು ಬಗೆಯ ಸವಾಲುಗಳು ಎದುರಾಗುತ್ತವೆ - ಸಂಗಾತಿ ಅಥವಾ ಸಂಬಂಧಿಕರೊಡನೆ ಹೊಸ ಜಾಗದಲ್ಲಿ ಹೊಂದಿಕೊಳ್ಳುವುದು ಮತ್ತು ಹೊಸ ಸಂಬಂಧಗಳಿಗೆ ಹೊಂದಿಕೊಳ್ಳುವುದು ಮತ್ತು ಅಂತಿಮವಾಗಿ, ಉದ್ಯೋಗ ಸ್ಥಳಕ್ಕೆ ಹೊಂದಿಕೊಳ್ಳುವುದು. ಹೊಸ ಉದ್ಯೋಗ, ಹೊಸ ಆಫೀಸ್, ಹೊಸ ಸಹೋದ್ಯೋಗಿಗಳು – ಈ ಎಲ್ಲದರ ಜೊತೆಗಿನ ಹೊಂದಾಣಿಕೆಯು ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ.

ಹಾಗೆ ನೋಡಿದರೆ, ಪ್ರತಿಯೊಂದು ಬದಲಾವಣೆಯೂ ಸವಾಲಿನದ್ದೇ ಆಗಿರುತ್ತದೆ. ಆದರೆ ಬದಲಾವಣೆಗೆ ಹಲವು ಹಂತಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಸಾಕಷ್ಟು ಶ್ರಮವನ್ನೂ ಸಾಮರ್ಥ್ಯವನ್ನೂ ಬೇಡುವ ಸಂಗತಿ. ಒಂದು ಹಂತದಲ್ಲಂತೂ ವ್ಯಕ್ತಿ ಹುಟ್ಟಿಲ್ಲದ ದೋಣಿಯಂತೆ ದಿಕ್ಕೆಟ್ಟು ಹೋಗುತ್ತಾನೆ.

ಹೊಸ ಸ್ಥಳಕ್ಕೆ ಹೊಂದಿಕೊಳ್ಳುವ ಕಷ್ಟಸುಖಗಳ ಕುರಿತು ಸಾಕಷ್ಟು ಅಧ್ಯಯನಗಳು ನಡೆದಿವೆ ಮತ್ತು ಪರಿಣಿತರ ಸಲಹೆಗಳು ಲಭ್ಯವಿದೆ. ಇದೊಂದು ರೀತಿಯಲ್ಲಿ ಮಿಶ್ರ ಭಾವ. ಹನಿಮೂನ್ ಹಂತವೂ ಇಲ್ಲಿದೆ. ಆರಂಭದಲ್ಲಿ ಹೊಸ ಜಾಗ, ಹೊಸ ಕೆಲಸ, ಹೊಸ ಅವಕಾಶ ಮತ್ತು ಅನುಭವಗಳನ್ನು ಹೊಂದುವ ಖುಷಿ ಆವರಿಸಿಕೊಂಡಿರುತ್ತದೆ. ಕ್ರಮೇಣ ಅವೆಲ್ಲವೂ ಸ್ಥಳಕ್ಕೆ ಹೊಂದಾಣಿಕೆಯಾಗದ ಚಟಪಡಿಕೆಯಲ್ಲಿ ಕೋಪ ಮತ್ತು ಅಸಹನೆಯಾಗಿ ಮಾರ್ಪಡುತ್ತವೆ. ಹೊಂದಿಕೊಳ್ಳುವ ಕಸರಿತ್ತನಲ್ಲಿ ಉಂಟಾಗುವ ಆಯಾಸ ಎಲ್ಲ ಉತ್ಸಾಹವನ್ನೂ ನುಂಗಿ ಹಾಕುತ್ತದೆ.

ನನಗೆ ಆ ದಿನದ ಅನುಭವ ಚೆನ್ನಾಗಿ ನೆನಪಿದೆ. ಮೂರು ತಿಂಗಳ ಮಗುವನ್ನು ಎದೆಗವಚಿಕೊಂಡು ಅಪರಿಚಿತ ದೇಶದಲ್ಲಿ ಕಾಲಿಟ್ಟಾಗ ಅಕ್ಷರಶಃ ಬೀದಿಯಲ್ಲಿ ನಿಂತಿದ್ದೆ. ನನ್ನ ಮನೆಯನ್ನು ದುರಸ್ಥಿಗೆ ನೀಡಲಾಗಿತ್ತು. ನನ್ನ ಸಾಮಾನುಗಳನ್ನು ಇಳಿಸಿದ ಹಡಗೂ ಬಹಳ ದೂರ ಹೊರಟುಹೋಗಿತ್ತು. ನಾನು ಮನೆಯಿಲ್ಲದೆ ಬೀದಿ ಪಾಲಾಗಿರುವಂತೆ ಅನ್ನಿಸತೊಡಗಿತು. ತಿಂಗಳ ನಂತರ ನನ್ನ ಹೊಸ ಮನೆ ಸಿದ್ಧವಾಗಿ ಅಲ್ಲಿಗೆ ಹೋಗಿ ನೆಲೆಸುವವರೆಗೂ ನನಗೆ ಬೀದಿಯಲ್ಲೇ ಇರುವಂತೆ ಭಾಸವಾಗುತ್ತಿತ್ತು.

ಹೊಸ ನಗರ ಅಥವಾ ದೇಶಕ್ಕೆ ಹೋಗಿ ನೆಲೆಸುವಾಗ ನಿಮ್ಮನ್ನು ಮೊದಲು ವಿಚಲಿತಗೊಳಿಸುವುದು ಸಾಂಸ್ಕೃತಿಕ ಭಿನ್ನತೆ. ನಿಮ್ಮ ಬಗ್ಗೆ ನಿಮಗೇ ಕೀಳರಿಮೆ ಮೂಡತೊಡಗಿದರೆ, ಹೊಂದಾಣಿಕೆ ಮತ್ತಷ್ಟು ಕಷ್ಟ. ಜನ ನಿಮ್ಮ ಬಗ್ಗೆ ಏನು ತಿಳಿಯುತ್ತಾರೆ, ಮಾತಾಡುತ್ತಾರೆ ಅನ್ನುವುದರಿಂದ ಹಿಡಿದು, ಅವರೇನು ತಿನ್ನುತ್ತಾರೆ, ಕುಡಿಯುತ್ತಾರೆ, ಧರಿಸುತ್ತಾರೆ ಎನ್ನುವವರೆಗೆ ನಿಮ್ಮ ಯೋಚನೆ ಪ್ರಾರಂಭವಾಗುತ್ತವೆ.

ಇಷ್ಟಕ್ಕೂ ಸಂಸ್ಕೃತಿ ಎಂದರೆ ಏನು? ಕೇವಲ ಮೇಲೆ ತೋರುವ ನಡೆ, ನುಡಿ, ತೊಡುಗೆಗಳಷ್ಟೇ ಸಂಸ್ಕೃತಿಯಲ್ಲ. ಅದು ಪಾಪ ಪುಣ್ಯಗಳ ಪರಿಕಲ್ಪನೆ, ಪಾಲನೆ, ಪೋಷಣೆ, ಸೌಂದರ್ಯದ ಪರಿಕಲ್ಪನೆ, ಕಲೆ ಮೊದಲಾದ ಹತ್ತು ಹಲವು ಅಂಶಗಳ ಮೊತ್ತ. ಇವು ಕಣ್ಣಿಗೆ ಕಾಣುವಂಥವಲ್ಲ.

ಒಂದು ಚಿಕ್ಕ ಉದಾಹರಣೆ ನೋಡಿ. ಅಮೆರಿಕನ್ನರು ಮಕ್ಕಳನ್ನು ಅವು ಬಹಳ ಚಿಕ್ಕವರಿರುವಾಗಿಂದಲೇ ತಮ್ಮ ಹಾಸಿಗೆಯಲ್ಲಿ ಪ್ರತ್ಯೇಕವಾಗಿ ಮಲಗಬೇಕೆಂದು ಬಯಸುತ್ತಾರೆ. ಚಿಕ್ಕ ಮಗುವನ್ನು ಅದರ ಕೋಣೆಯ ತೊಟ್ಟಿಲಲ್ಲಿ ಮಲಗಿಸಿ ಬಾಗಿಲುಹಾಕಿಕೋಂಡು ಹೋಗುತ್ತಾರೆ. ಮಗು ಎಚ್ಚರವಾಗಿ ಅತ್ತರೂ ಮತ್ತೆ ತನಗೆ ತಾನೆ ನಿದ್ದೆ ಹೋಗುತ್ತದೆ. ಆದರೆ ಭಾರತದಲ್ಲಿ ಇಂಥದನ್ನು ಯೋಚಿಸಲಾದರೂ ಸಾಧ್ಯವೇ? ಇಲ್ಲಿ ಅವರ ಚಿಂತನೆ ತಪ್ಪು, ನಮ್ಮದು ಸರಿ; ಅಥವಾ ನಮ್ಮದು ತಪ್ಪು, ಅವರದು ಸರಿ ಅನ್ನುವ ಅಂಶವಿಲ್ಲ. ಅವರ ಚಿಂತನಾಕ್ರಮ ನಮಗಿಂತ ಕೇವಲ ಭಿನ್ನವಾಗಿದೆ, ಅಷ್ಟೇ.

ಕ್ರಮೇಣ ನಾನು ಈ ಭಿನ್ನತೆಯನ್ನು ಅರಿತುಕೊಳ್ಳತೊಡಗಿದೆ. ಮೊದಲೆಲ್ಲ ನಮ್ಮ ರೂಢಿಗಿಂತ ಬೇರೆಯಾದದ್ದನ್ನು ಕೆಟ್ಟದ್ದೆಂದು ನಂಬಿದ್ದೇವೆ. ಇಲ್ಲಿ ಮೇಲರಿಮೆ ಅಥವಾ ಕೀಳರಿಮೆಗೆ ಜಾಗವೇ ಇಲ್ಲ. ನಮ್ಮ ಸುತ್ತಲಿನ ವಿದ್ಯಮಾನಗಳ ಕುರಿತು ನಾವು ಪೂರ್ವಾಗ್ರಹಪೀಡಿತರಾಗುವುದು ಕಡಿಮೆಯಾದಷ್ಟೂ ನಾವು ಹೆಚ್ಚು ಹೊಂದಾಣಿಕೆಯಿಂದ, ನೆಮ್ಮದಿಯಿಂದ ಬದುಕುವುದು ಸಾಧ್ಯವಾಗುತ್ತದೆ.

ಹೊಸ ಸಂಸ್ಕೃತಿಯನ್ನು ಅರಿತು, ಹೊಸ ಸಹಜತೆಯನ್ನು ಸೃಷ್ಟಿಸಿಕೊಂಡಿದ್ದು ನನ್ನ ಬೆಳವಣಿಗೆ ಹಾಗೂ ಕಲಿಕೆಗೆ ಪೂರಕವಾದವು. ಅದು ಸಾಧ್ಯವಾದ ನಂತರವಷ್ಟೇ ನನಗೆ ಅಪರಿಚಿತ ದೇಶದಲ್ಲಿ ಹೊಂದಾಣಿಕೆ ಮಾಡಿಕೊಂಡು ಸಂಪೂರ್ಣವಾಗಿ ನೆಲೆಯೂರಲು ಸಾಧ್ಯವಾಗಿದ್ದು. ನಂತರದಲ್ಲಿ ನಾನು ಅನುಭವಿಸುತ್ತಿದ್ದ ಅಭದ್ರತೆ, ಅಸುರಕ್ಷತೆ, ಒಂಟಿತನ – ಇವೆಲ್ಲವೂ ಕಡಿಮೆಯಾಗುತ್ತಾ ಸಾಗಿದವು. ಇವು ಕಟ್ಟಿಕೊಟ್ಟ ಆತ್ಮವಿಶ್ವಾಸದಿಂದ ನಾನು ಹೊಸ ಅವಕಾಶಗಳನ್ನು ಹುಡುಕಲು ಸಾಧ್ಯವಾಯಿತು.

ಕೆಲವು ಕಾಲದ ನಂತರ, ಅನಿರೀಕ್ಷಿತವಾಗಿ ನಾನು ತಾಯ್ನೆಲಕ್ಕೆ ಮರಳಬೇಕಾದ ಸಂದರ್ಭ ಒದಗಿ ಬಂತು. ಈಗ ನನಗೆ ಮತ್ತೊಂದು ರೀತಿಯ ಆತಂಕ ಶುರುವಾಯಿತು. ಇದು ವಾಪಸಾಗುವುದರ ಬಗ್ಗೆ ಆತಂಕ. ಒಂದು ಸಂಸ್ಕೃತಿಗೆ ಹೊಂದಿಕೊಂಡು ಅದರಂತೆ ಬದುಕು ಕಟ್ಟಿಕೊಂಡಿರುವಾಗ, ಮತ್ತೆ ಮೂಲಕ್ಕೆ ಮರಳುವ ಪ್ರಯಾಣವನ್ನು ನಾನೀಗ ಮಾಡಬೇಕಿತ್ತು. ಮರಳಿದ ನಂತರ ತಾಯ್ನೆಲದಲ್ಲಿ, ಸ್ವಂತ ಊರಿನಲ್ಲಿ ನೆಲೆಯೂರುವುದು ಕೂಡ ಸವಾಲಿನ ಕೆಲಸವೇ ಆಗಿತ್ತು.

ಏಕೆಂದರೆ ಒಮ್ಮೆ ವಿದೇಶಕ್ಕೆ ಹೋಗಿ ಅಲ್ಲಿಯ ವಿಸ್ತಾರಕ್ಕೆ ತೆರೆದುಕೊಂಡ ನಂತರ ಮತ್ತೆ ವಾಪಸಾಗಿ ಸೀಮಿತ ಅವಕಾಶದಲ್ಲಿ ಬದುಕುವುದು ಸುಲಭವೇನಲ್ಲ. ಜೊತೆಗೆ ಹಳೆಯ ಪರಿಚಿತರು. ಸಂಬಂಧಿಕರು, ಸಾಮಾಜಿಕ ಸಂಪರ್ಕಗಳು, ಎಲ್ಲವನ್ನೂ ನವೀಕರಣಗೊಳಿಸಿಕೊಳ್ಳಬೇಕು. ಏಕೆಂದರೆ, ನಾವು ಜಾಗ ಬಿಟ್ಟು ತೆರಳಿದ ನಂತರ ಕಾಲದ ಜೊತೆ ಜನರೂ ಸಾಕಷ್ಟು ಮುಂದೆ ನಡೆದಿರುತ್ತಾರೆ. ಅವರು ನಿಮ್ಮತ್ತ ಹಳೆಯ ಸ್ನೇಹ ಸಂಬಂಧವನ್ನು ಸ್ಥಾಪಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ.

ಕಾಲಕ್ರಮೇಣ ಈ ಸ್ಥಳಾಂತರಕ್ಕೆ ನಾನು ಹೊಂದಿಕೊಂಡೆ. ನಂತರವಷ್ಟೇ ನನಗೆ ಈ ಸ್ಥಳಾಂತರಗಳು, ಹೊಂದಾಣಿಕೆಗಳು – ಇವೆಲ್ಲ ಅದೆಷ್ಟು ಸರಳ ಹಾಗೂ ಸಹಜ ಸಂಗತಿಗಳು ಎಂದು ಅರ್ಥವಾಗತೊಡಗಿತು. ನಿಜಕ್ಕೂ ಇದು ಬಹಳ ಸುಲಭದ್ದಾಗಿದೆ. ಕೆಲವರು ಅದರ ಜೊತೆ ಹೊಂದಿಕೊಳ್ಳಲು ಹೆಣಗಾಡುತ್ತಾರೆ, ಕೆಲವರು ಸುಲಭವಾಗಿ ಸಂಭಾಳಿಸುತ್ತಾರೆ. ಅಷ್ಟೇ.

ಜನರು ಒಂದು ದೇಶದಿಂದ ಅಥವಾ ಸ್ಥಳದಿಂದ ಮತ್ತೊಂದಕ್ಕೆ ಹೋಗಿ ನೆಲೆಸಿ ಯಶಸ್ಸು ಪಡೆಯಲು ಸುಲಭದ ದಾರಿಗಳಿವೆ. ಬಹಳ ಮುಖ್ಯವಾಗಿ, ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಅದು ಭಾಷೆಯಿರಲಿ, ಆಹಾರವಿರಲಿ, ಉಡುಗೆ ತೊಡುಗೆಗಳಿರಲಿ, ಸಂಪ್ರದಾಯಗಳಿರಲಿ; ಅಥವಾ ನಂಬಿಕೆ. ಶ್ರದ್ಧೆ, ಸಾಮಾಜಿಕತೆಯಂಥ ಮೌಲಿಕ ಸಂಗತಿಗಳೇ ಇರಲಿ - ಯಾವುದನ್ನೂ ಹೆಚ್ಚು ಅಥವಾ ಕಡಿಮೆಯದ್ದಾಗಿ ನೋಡದೆ ಹೋದರೆ ಸಮಸ್ಯೆಯೇ ಉಂಟಾಗುವುದಿಲ್ಲ.

ಈ ನಿಟ್ಟಿನಲ್ಲಿ ಉದ್ಯೋಗಿಗಳನ್ನು ಸಿದ್ಧಗೊಳಿಸುವ ಜವಾಬ್ದಾರಿ ಉದ್ಯೋಗದಾತ ಸಂಸ್ಥೆಯದ್ದು. ಬದಲಾವಣೆಗಳನ್ನ ಮತ್ತು ಭಿನ್ನತೆಯನ್ನು ಅವು ಇರುವಂತೆಯೇ ನೋಡುವುದನ್ನು ರೂಢಿಸಿಕೊಳ್ಳಬೇಕು. ಇಂಥಾ ನಡವಳಿಕೆಗಳು ಸಂಗಾತಿಯ ಮೇಲೂ ಪರಿಣಾಮ ಬೀರಿ ಅವರ ಆತಂಕವನ್ನು ಹೋಗಲಾಡಿಸುತ್ತವೆ. ಅಷ್ಟೇ ಅಲ್ಲ, ಕುಟುಂಬವು ಹೆಚ್ಚಿನ ಲಾಭವನ್ನೂ ಪಡೆಯುತ್ತದೆ.

ಸ್ಥಳಾಂತರದ ಸಂಪೂರ್ಣ ಯಶಸ್ಸು ದೊರೆಯಬೇಕೆಂದರೆ, ಕೇವಲ ಉದ್ಯೋಗಿ ಮಾತ್ರವಲ್ಲ, ನೆಲೆ ಬದಲಾಯಿಸುವ ಕುಟುಂಬದ ಪ್ರತಿಯೊಬ್ಬ ಸದಸ್ಯರೂ ಯಶಸ್ಸಿನ ದಾರಿಯಲ್ಲಿ ನಡೆಯಬೇಕಾಗುತ್ತದೆ. ಸಂಗಾತಿಯು ಖಿನ್ನರಾಗಿ ಮುದುಡಿ ಕುಳಿತರೆ, ಅಥವಾ ಮಕ್ಕಳು ಶಾಲೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗದೆ ಹೋದರೆ, ಸಾಮಾಜಿಕ ಸವಾಲುಗಳನ್ನು ಎದುರಿಸಲು ಸೋತರೆ, ಅವೆಲ್ಲವೂ ಉದ್ಯೋಗಿಯ ಸೋಲೇ ಆಗಿರುತ್ತದೆ. ಇವುಗಳಿಂದ ಉದ್ಯೋಗಿಯು ಹೆಚ್ಚು ಸಂಕಷ್ಟಕ್ಕೆ ಸಿಲುಕುತ್ತಾನೆ. ಇದರ ಪರಿಣಾಮ ಕೆಲಸದಲ್ಲಿ ಹಿನ್ನಡೆ ಉಂಟಾಗುತ್ತದೆ. ಹೀಗಾದರೆ, ಯಾವ ಕಾರಣಕ್ಕಾಗಿ ಸಂಸ್ಥೆಯು ಅವರನ್ನು ಮತ್ತೊಂದು ದೇಶಕ್ಕೆ ಕರೆಸಿಕೊಂಡಿತ್ತೋ ಅದು ಈಡೇರದೆ ಹೋಗುತ್ತದೆ.

ತಾನು ಹೇಳಿದ ಕೂಡಲೆ ಉದ್ಯೋಗಿಯು ತಾನಿದ್ದ ಜಾಗದಿಂದ ಪೂರ್ಣವಾಗಿತನ್ನ ಸಂಸಾರದೊಂದಿಗೆ ಸ್ಥಳಾಂತರಗೊಳ್ಳಬೇಕು ಎಂದು ಸಂಸ್ಥೆ ಬಯಸುವುದು ಸರಿಯಲ್ಲ. ಹಾಗೆ ಬಯಸಿದರೂ ಅದು ಸಾಧ್ಯವಾಗುವ ಮಾತಲ್ಲ. ಆದ್ದರಿಂದ, ಉದ್ಯೋಗಿಗಳನ್ನು ಈ ಪ್ರಕ್ರಿಯೆಗಾಗಿ ಮಾನಸಿಕವಾಗಿ ಸಿದ್ಧಪಡಿಸುವುದು ಸಂಸ್ಥೆಯ ಕರ್ತವ್ಯವಾಗಿರುತ್ತದೆ.

ಉದ್ಯೋಗಿಯು ಸ್ಥಳಾಂತರಗೊಂಡಾಗ ಸಂಸ್ಥೆಯುಮಾಡದೆ ಗಮನಿಸಬೇಕಾದ ಸಂಗತಿಗಳಿವು :

1. ಉದ್ಯೋಗಿಯು ಹೊಸ ಸ್ಥಳ ಅಥವಾ ದೇಶಕ್ಕೆ ಬಂದಾಗ, ಅಲ್ಲಿನ ಸಾಂಸ್ಕೃತಿಕ ಪರಿಸರದ ಪರಿಚಯ ಮಾಡಿಸಬೇಕು. ಅಪರಿಚಿತ ವಾತಾವರಣದಲ್ಲಿ ಏನೆಲ್ಲ ಭಿನ್ನವಾಗಿದೆ, ಅದರೊಂದಿಗೆ ಹೇಗೆ ಹೊಂದಿಕೊಳ್ಳಬೇಕು ಅನ್ನುವುದನ್ನು ಅರ್ಥ ಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. ಕೇವಲ ಉದ್ಯೋಗಿಗೆ ಮಾತ್ರವಲ್ಲ, ಅವರ ಸಂಗಾತಿ ಮತ್ತು ಮಕ್ಕಳನ್ನೂ ಇದರಲ್ಲಿ ಒಳಗೊಳಿಸಿಕೊಳ್ಳಬೇಕು ಹಾಗೂ ಅವರ ಅಗತ್ಯಕ್ಕೆ ತಕ್ಕಂತೆ ಸಹಕಾರ ನೀಡಬೇಕು.

2. ಉದ್ಯೋಗಿಗಳು ಮತ್ತು ಅವರ ಕುಟುಂಬ ಎರಡು ಸ್ಥಳಗಳ ವ್ಯತ್ಯಾಸವನ್ನು ಗ್ರಹಿಸಲು ಶಕ್ತವಾಗುವಂಥ ಸನ್ನಿವೇಶಗಳನ್ನು ಕಲ್ಪಿಸಬೇಕು. ಭಿನ್ನತೆಯನ್ನು ಗ್ರಹಿಸಿ ಒಳಗೊಳ್ಳುವ ಬಗ್ಗೆ ಇಲ್ಲಿ ಹೆಚ್ಚಿನ ಒತ್ತು ನೀಡಬೇಕು.

3. ಹೊಸ ಸ್ಥಳಕ್ಕೆ ಬಂದು ವಾಸ್ತವ್ಯ ಹೂಡುವ ಉದ್ಯೋಗಿಗೆ ಅಗತ್ಯ ಸಂಪನ್ಮೂಲಗಳು ಎಲ್ಲಿ ದೊರೆಯುತ್ತವೆ ಅನ್ನುವ ಪಟ್ಟಿ ಒದಗಿಸಬೇಕು. ಇದು ಕೇವಲ ದೈಹಿಕವಾಗಿ ನೆಲೆಯಾಗಲು ಅಲ್ಲದೆ, ಮಾನಸಿಕವಾಗಿ, ಭಾವನಾತ್ಮಕವಾಗಿ, ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿಯೂ ಸಹಾಯವಾಗುವಂತೆ ಇರಬೇಕು.

4. ಉದ್ಯೋಗಿಯು ಹೊಸ ಸ್ಥಳದಲ್ಲಿ ಹೊಂದಿಕೊಂಡು ಕೆಲಸ ಮಾಡುವಂತೆ ಪ್ರೋತ್ಸಾಹಿಸುವ ಮಾರ್ಗದರ್ಶಿಯೊಬ್ಬರು ಸಂಸ್ಥೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಈ ಮಾರ್ಗದರ್ಶಿಯು ಆಫೀಸ್ ಮಾತ್ರವಲ್ಲ, ಉದ್ಯೋಗಿಯ ಕುಟುಂಬದ ಜೊತೆಯೂ ಯಾವುದೇ ಪೂರ್ವಾಗ್ರಹವಿಲ್ಲದೆ, ಅತ್ಯಂತ ಗೌರವಪೂರ್ವಕವಾಗಿ ಒಡನಾಡುತ್ತಾ ಅವರು ಹೊಸ ಸ್ಥಳದಲ್ಲಿ ನಿರಾತಂಕವಾಗಿ ನೆಲೆಗೊಳ್ಳಲು ಸಹಕಾರ ನೀಡುವಂತೆ ಇರಬೇಕು.

5. ಹೊಸ ದೇಶದಲ್ಲಿ EAP ಕೌನ್ಸೆಲಿಂಗ್ ದೊರೆಯುವಂತೆ ಮಾಡಬೇಕು. ಇದು ಉದ್ಯೋಗಿ ಹಾಗೂ ಕುಟುಂಬದವರು ಹೊಸ ಸ್ಥಳಕ್ಕೆ ಹೊಂದಿಕೊಳ್ಳಲಾರದ ಸಮಸ್ಯೆ ಹೆಚ್ಚಾಗದಂತೆ ತಡೆಯಲು ಬಳಸಬೇಕು. ತಾವು ಅನುಭವಿಸುತ್ತಿರುವ ಚಡಪಡಿಕೆಗಳು ಅತ್ಯಂತ ಸಹಜವಾಗಿರುವವು ಅನ್ನುವ ಅರಿವು ಮೂಡಿಸಬೇಕು.  

ಬೆಂಗಳೂರು ನಿವಾಸಿ ಮೌಲಿಕಾ ಶರ್ಮಾ ತಮ್ಮ ಕಾರ್ಪೊರೇಟ್ ವೃತ್ತಿಯನ್ನು ತ್ಯಜಿಸಿ, ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ; ಮತ್ತು ಆಪ್ತಸಮಾಲೋಚಕಿಯಾಗಿದ್ದಾರೆ. ಜಾಗತಿಕ ಉದ್ಯೋಗಿಗಳ ಕಲ್ಯಾಣಕ್ಕಾಗಿ ಕೆಲಸ ಮಾಡುವ ವರ್ಕ್ ಪ್ಲೇಸ್ ಆಪ್ಷನ್ಸ್ ಜೊತೆ ಕೆಲಸ ಮಾಡುತ್ತಿರುವ ಇವರು, ಬೆಂಗಳೂರಿನ ರೀಚ್ ಕ್ಲಿನಿಕ್’ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ಕಥನವನ್ನು ‘ಬಿಯಾಂಡ್ ರಿಲೊಕೇಶನ್’ ಸರಣಿಯಿಂದ ಆಯ್ದುಕೊಳ್ಳಲಾಗಿದೆ. ವಾಸ್ತವ್ಯ ಬದಲಾವಣೆಯು ಹೇಗೆ ಭಾವನಾತ್ಮಕ ಹಾಗೂ ಮಾನಸಿಕ ಪರಿಣಾಮಗಳನ್ನು ಬೀರುತ್ತದೆ ಅನ್ನುವುದನ್ನು ಈ ಸರಣಿಯು ಹೇಳುತ್ತದೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org