ಉದ್ಯೋಗ ಸ್ಥಳದಲ್ಲಿ ಮಾನಸಿಕ ಸ್ವಾಸ್ಥ್ಯ : ಉದ್ಯೋಗಿಯ ಯೋಗಕ್ಷೇಮಕ್ಕೆ ಹಣ ವ್ಯಯಿಸುವುದು ಲಾಭದಾಯಕವೇ?

ಉದ್ಯೋಗ ಸ್ಥಳದಲ್ಲಿ ಮಾನಸಿಕ ಸ್ವಾಸ್ಥ್ಯ : ಉದ್ಯೋಗಿಯ ಯೋಗಕ್ಷೇಮಕ್ಕೆ ಹಣ ವ್ಯಯಿಸುವುದು ಲಾಭದಾಯಕವೇ?

ಉದ್ಯೋಗಿಗಳ ಮಾನಸಿಕ ಸ್ವಾಸ್ಥ್ಯವನ್ನು ಕಾಯ್ದಿಟ್ಟು, ಅವರ ಯೋಗಕ್ಷೇಮ ನೋಡಿಕೊಳ್ಳಲು ಸಂಸ್ಥೆಗಳು ಮಾಡಬೇಕಾದುದೇನು?

“ನಾನು ಮೊದಲ ಕೆಲಸಕ್ಕೆ ಸೇರಿದಾಗ, ನಮಗೆ ಮೇಲ್ವಿಚಾರಕರು ಇರಲಿಲ್ಲ. ಇದ್ದ ಒಬ್ಬರ ಜೊತೆ, ಅಲ್ಲಿದ್ದಷ್ಟೂ ದಿನ ನಾನು ಪಡೆದ ಪ್ರತಿಕ್ರಿಯೆ ನಕಾರಾತ್ಮಕವೇ ಆಗಿತ್ತು. ಅವರು ನನ್ನೊಡನೆ ಮಾತನಾಡುತ್ತಿದ್ದುದು, ನಾನು ಕೆಲಸ ಮಾಡುವಾಗ ಏನಾದರೂ ತಪ್ಪಾಗಿದ್ದರೆ ಮಾತ್ರವಾಗಿತ್ತು. ಅದು ಕೂಡಾ ಮೀಟಿಂಗ್’ಗಳಲ್ಲಿ ಸೀನಿಯರ್’ಗಳ ಎದುರು ನೀಡುತ್ತಿದ್ದ ಪ್ರತಿಕ್ರಿಯೆ ಆಗಿರುತ್ತಿತ್ತು. ಅದರ ಹೊರತಾಗಿ ನಾನು ಕೆಲಸ ಸರಿಯಾಗಿ ಮಾಡುತ್ತಿದ್ದೇನೆಯೇ? ನನ್ನ ಕಾರ್ಯಕ್ಷಮತೆ ಹೇಗಿದೆ? ಇತ್ಯಾದಿ ನನಗೆ ಗೊತ್ತೇ ಆಗುತ್ತಿರಲಿಲ್ಲ. ನನಗೆ ನಾನು ಆ ಸಂಸ್ಥೆಗೆ ಸೇರಿದವಳಲ್ಲ ಅನ್ನುವ ಭಾವ ಮೂಡುತ್ತಿತ್ತು. ಇನ್ನೂ ಹೇಳಬೇಕೆಂದರೆ, ನಾನು ಅಲ್ಲಿ ಯಾವ ಲೆಕ್ಕಕ್ಕೂ ಇಲ್ಲ ಅನ್ನಿಸಿಬಿಡುತ್ತಿತ್ತು.”

“ನನ್ನ ಕೊನೆಯ ಉದ್ಯೋಗ ಸ್ಥಳದಲ್ಲಿ ಗುರಿ ಮುಟ್ಟುವುದಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿತ್ತು. ಆದರೆ ಅದನ್ನು ಮುಟ್ಟುವಲ್ಲಿ ನಾವು ಒಂದಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತಿತ್ತು. “ಇದನ್ನು ಮಾಡದೆ ಹೋದರೆ ನಿನಗೆ ಬೋನಸ್ ಸಿಗುವುದಿಲ್ಲ” ಎಂಬ ಇತ್ಯಾದಿ ಬೆದರಿಕೆಗಳು ನಮ್ಮೊಳಗೆ ಸುಪ್ತವಾಗಿ ಭೀತಿಯನ್ನು ಹುಟ್ಟುಹಾಕುತ್ತಿದ್ದವು. ಆಗೆಲ್ಲ ನಾನು ಅದೆಷ್ಟು ವ್ಯಗ್ರಗೊಳ್ಳುತ್ತಿದ್ದೆ ಅನ್ನುವುದು ಈಗ ಅರಿವಾಗುತ್ತಿದೆ. ಅಂಥ ಸಂದರ್ಭಗಳಲ್ಲಿ ನಾನು ಕೆಲಸ ಮಾಡುವ ಉತ್ಸಾಹವನ್ನೆ ಕಳೆದುಕೊಂಡುಬಿಡುತ್ತಿದ್ದೆ. ನನ್ನ ಸಮಸ್ಯೆಯನ್ನು ಅರ್ಥಮಾಡಿಕೊಂಡು ಸಹಕಾರ ನೀಡುವವರು ಇಲ್ಲದ ಕಡೆ ಕೆಲಸ ಮಾಡುವುದು ಅರ್ಥಹೀನ ಅನ್ನಿಸಿಬಿಟ್ಟಿತ್ತು”

“ನಾನು ದಿನಪತ್ರಿಕೆಯೊಂದರ ಬ್ಯೂರೋದಲ್ಲಿ ಕೆಲಸ ಮಾಡುತ್ತಿದ್ದೆ. ಅದು ನನಗೆ ನೀಡಿದಷ್ಟು ಪರಕೀಯ ಭಾವನೆ ಬಹುಶಃ ಇನ್ಯಾವುದೂ ನೀಡಿಲ್ಲ. ನವದೆಹಲಿಯಲ್ಲಿದ್ದ ನನ್ನ ಯುವ ಉತ್ಸಾಹೀ ತಂಡದ ಜೊತೆ ಹೆಚ್ಚಿನ ಸಂವಹನವೇ ಸಾಧ್ಯವಾಗುತ್ತಿರಲಿಲ್ಲ. ವಾರಕ್ಕೊಮ್ಮೆ ನಡೆಯುತ್ತಿದ್ದ ಮೀಟಿಂಗ್’ಗಳೂ ವಿಡಿಯೋ ಕಾನ್ಫರೆನ್ಸ್ ಮೂಲಕ ಆಗಿಹೋಗುತ್ತಿದ್ದವು.

(ಈ ಮೂರು ನೈಜ ಅನುಭವ ಕಥನಗಳು. ಕೋರಿಕೆಯ ಮೇರೆಗೆ ಹೆಸರುಗಳನ್ನು ಗೌಪ್ಯವಾಗಿಡಲಾಗಿದೆ)

ಇವು ಉದ್ಯೋಗಿಗಳು ತಮ್ಮ ಉದ್ಯೋಗ ಸ್ಥಳದಲ್ಲಿ ಎದುರಿಸುತ್ತಿರುವ ಹಲವಾರು ಸಮಸ್ಯೆಗಳಲ್ಲಿ ಕೆಲವು ಉದಾಹರಣೆಗಳು ಮಾತ್ರ. ಇಂಥ ಅದೆಷ್ಟೋ ಕಾರಣಗಳಿಂದ ಉದ್ಯೋಗಿಗಳು ಭಾವನಾತ್ಮಕವಾಗಿ ಸಮಸ್ಯೆಗಳನ್ನು ಎದುರಿಸುತ್ತಲೇ ಇದ್ದಾರೆ. ಇದು ಅವರ ಕಾರ್ಯಕ್ಷಮತೆಯ ಮೇಲೆ ಹಾಗೂ ಆ ಮೂಲಕ ಒಟ್ಟು ಉತ್ಪನ್ನದ ಮೇಲೆ ಪರಿಣಾಮ ಬೀರುತ್ತದೆ. ಹಾಗೆಂದು, ಉದ್ಯೋಗಿಗಳ ಮಾನಸಿಕ ಸ್ವಾಸ್ಥ್ಯವನ್ನು ಕಾಯ್ದಿಡಲು ಹಣ ವ್ಯಯಿಸುವುದರಿಂದ ಸಂಸ್ಥೆಗೆ ಹೆಚ್ಚಿನ ಪ್ರಯೋಜನವಿದೆಯೇ?

ಇಲ್ಲೀಗ ಕೆಲವು ಅಂಶಗಳನ್ನು ಗಮನಿಸೋಣ. 2015ರ ಸಮೀಕ್ಷೆಯೊಂದರ ಪ್ರಕಾರ ಭಾರತದಲ್ಲಿ 10 ರಲ್ಲಿ 4 ಮಂದಿ ಖಾಸಗಿ ವಲಯದ ಉದ್ಯೋಗಿಗಳು ಉದ್ಯೋಗ ಸ್ಥಳದ ಸಮಸ್ಯೆಗಳಿಂದಾಗಿ ಖಿನ್ನತೆ ಮತ್ತು ಆತಂಕಗಳನ್ನು ಎದುರಿಸುತ್ತಿದ್ದಾರೆ. ಮತ್ತೊಂದು ಸಮೀಕ್ಷೆಯ ಪ್ರಕಾರ ಸುಮಾರು 35ರಿಂದ 40 ಶೇಕಡಾ ಹಾಜರಿ ಕೊರತೆಗೆ ಮಾನಸಿಕ ಆರೋಗ್ಯ ಸಮಸ್ಯೆಗಳು ಕಾರಣವಾಗಿರುತ್ತವೆ. 2016ರಲ್ಲಿ ಭಾರತ ಮೂಲದ ಹ್ಯೂಮನ್ ರಿಸೋರ್ಸ್ ಮ್ಯಾನೇಜ್ಮೆಂಟ್ ಸಂಸ್ಥೆಯು ನಡಸಿದ ಸಂಶೋಧನಾ ವರದಿ ಹೇಳುವಂತೆ, ಉದ್ಯೋಗಿಗಳು ಅನುಭವಿಸುವ ಒತ್ತಡದ ಪರಿಣಾಮವಾಗಿ ಉದ್ಯೋಗದಾತ ಸಂಸ್ಥೆಗೆ 10 ಕೋಟಿಯಿಂದ 100 ಕೋಟಿಯವರೆಗೆ ವಾರ್ಷಿಕ ನಷ್ಟ ಉಂಟಾಗುವ ಸಾಧ್ಯತೆಗಳಿರುತ್ತವೆ.

ಈ ಸಂಖ್ಯೆಯೇ ಸನ್ನಿವೇಶದ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಲು ಸಾಕಷ್ಟಾಯಿತು ಮತ್ತು ಈ ಅಂಕಿ ಅಂಶಗಳು ಖಾಸಗಿ ವಲಯವನ್ನು ಪ್ರತಿನಿಧಿಸುತ್ತವೆ. ಆರ್ಥಿಕ ನಷ್ಟ ಮಾತ್ರವಲ್ಲ, ಉದ್ಯೋಗ ಸ್ಥಳದ ಒತ್ತಡದಿಂದಾಗಿ ಇನ್ನಿತರ ಪರೋಕ್ಷ ನಷ್ಟಗಳೂ ಉಂಟಾಗುತ್ತವೆ. ಸಂವಹನ ಸಮಸ್ಯೆಯಿಂದಾಗಿ ಉದ್ಯೋಗಿಗಳ ಹಾಗೂ ವ್ಯಾವಹಾರಿಕ ಸಂಬಂಧಗಳು ಹಾಳಾಗುವುದು, ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳು ಕೆಲಸ ತೊರೆಯುವುದರಿಂದ ಸಂಸ್ಥೆಯ ಹೆಸರು ಕೆಡುವುದು ಇವೇ ಮೊದಲಾದ ಸಂಗತಿಗಳು ಒಟ್ಟು ಸಂಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತವೆ.

ಇತ್ತೀಚೆಗೆ ಕೆಲವು ಸಂಸ್ಥೆಗಳು ಉದ್ಯೋಗಿಗಳ ಮಾನಸಿಕ ಆರೋಗ್ಯದ ಯೋಗಕ್ಷೇಮಕ್ಕಾಗಿ ಎಂಪ್ಲಾಯೀಸ್ ಅಸಿಸ್ಟೆನ್ಸ್ ಪ್ರೋಗ್ರಾಮ್ಸ್ (EAPs) ಜೊತೆಗೆ ಕೈಜೋಡಿಸಿವೆ. ಎಲ್ಲ ಸಂಸ್ಥೆಗಳೂ ಇಂಥ ಕಾರ್ಯಕ್ರಮಗಳನ್ನು ನಡೆಸುತ್ತಿಲ್ಲ. ಅದೇನಿದ್ದರೂ ಆಯಾ ಸಂಸ್ಥೆಗಳ ಹ್ಯೂಮನ್ ರಿಸೋರ್ಸ್ ಡಿಪಾರ್ಟ್’ಮೆಂಟಿನ ಆಸಕ್ತಿಯನ್ನು ಅವಲಂಬಿಸಿರುತ್ತದೆ. ಉದ್ಯೋಗಸ್ಥಳದ ಒತ್ತಡಗಳನ್ನು ನಿಯಂತ್ರಿಸಿ ಮಾನಸಿಕ ಯೋಗಕ್ಷೇಮವನ್ನು ಕಾಯ್ದಿಡುವ ನಿಟ್ಟಿನಲ್ಲಿ ಸಂಸ್ಥೆಯ ಕಾಳಜಿ ಮುಖ್ಯವಾಗುತ್ತದೆ.

ಉದ್ಯೋಗಿಗಳಿಗೆ ಇಂಥದೊಂದು ಸಹಕಾರ ನೀಡಲು ತಾವು ಮುಂದಾಗಿದ್ದೇಕೆ ಎಂದು ನಾವು ಕೆಲವು ಪರಿಣಿತರನ್ನು ಪ್ರಶ್ನಿಸಿದೆವು. ಸಂಸ್ಥೆಯೊಂದರಲ್ಲಿ HR ಮ್ಯಾನೇಜರ್ ಆಗಿರುವ ಮೋನಿಕಾ ಕಾಮತ್ ಅವರನ್ನು ಮಾತನಾಡಿಸಿದಾಗ ಅವರು, “ಇದು ಉನ್ನತ ಹಂತದಿಂದ ತಳಮಟ್ಟದವರೆಗೂ ಸಂವಹಿಸಬೇಕಾದ ವಿಷಯ. ಇದು ಮೊದಲು ಉನ್ನತ ಮಟ್ಟದಿಂದ ಶುರುವಾಗಬೇಕು. ಅನಂತರವಷ್ಟೇ ಏನಾದರೂ ಬದಲಾವಣೆ ಸಾಧ್ಯವಾಗುವುದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. “ಸಂಸ್ಥೆಗಳು ಉದ್ಯೋಗಿಗಳನ್ನು ಸಂಪರ್ಕಿಸಿ, ಪ್ರೋತ್ಸಾಹ ನೀಡುವ ಅಗತ್ಯ ಒಂದೆಡೆಯಾದರೆ, ಉದ್ಯೋಗಿಗಳು ಈ ನಿಟ್ಟಿನ ಸಹಾಯ ಕೇಳುವುದರ ಕುರಿತೇ ಒಂದು ಬಗೆಯ ಹಿಂಜರಿಕೆ ಇದೆ” ಎನ್ನುವ EAP ಸೇವೆಗಳನ್ನು ಒದಗಿಸುವ ಕ್ಲಿನಿಕಲ್ ಡೈರೆಕ್ಟರ್ ಎಲ್ಲೆನ್ ಶಿಂಧೆ, “ಇದೊಂದು ಸಹಜ ಸಂಗತಿ ಅನ್ನುವುದನ್ನು ಮನದಟ್ಟು ಮಾಡಬೇಕು. ದೇಹಾರೋಗ್ಯದಂತೆಯೇ ಮಾನಸಿಕ ಆರೋಗ್ಯದ ಕಾಳಜಿಯೂ ಮುಖ್ಯ ಅನ್ನುವ ಜಾಗೃತಿ ಮೂಡಿಸಬೇಕು” ಎಂದರು.

ಈ ಕೆಲವು ಅಂಶಗಳನ್ನು ಅನುಸರಿಸುವ ಮೂಲಕ HR ಇಲಾಖೆಯು ಉದ್ಯೋಗಿಗಳ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಪ್ರಯತ್ನಿಸಬಹುದು :

  • ಉದ್ಯೋಗಿಗಳಿಗೆ ಮಾನಸಿಕ ಆರೋಗ್ಯದ ಕುರಿತು ಅರಿವು ಮೂಡಿಸುವುದು; ಅದರ ಕಾಳಜಿಯ ಮಹತ್ವವನ್ನು ಮನದಟ್ಟು ಮಾಡಿಸುವುದು. ಇದು ಉದ್ಯೋಗಿಗಳಿಗೆ ತಮ್ಮ ಸಮಸ್ಯೆಯನ್ನು ಗುರುತಿಸಿಕೊಂಡು ಸೂಕ್ತ ಸಹಾಯ ಪಡೆಯಲು ಸಹಕಾರಿಯಾಗುವುದು.
  • ಉದ್ಯೋಗ ಸ್ಥಳದಲ್ಲಿ ಲಭ್ಯವಿರುವ ಯೋಗಕ್ಷೇಮ ಕಾರ್ಯಕ್ರಮಗಳ ಮಾಹಿತಿಯು ಪ್ರತಿ ಉದ್ಯೋಗಿಯನ್ನೂ ತಲುಪುವಂತೆ ನೋಡಿಕೊಳ್ಳುವುದು.
  •  ಸಂಸ್ಥೆಯೊಳಗೇ ಗುಂಪುಗಳನ್ನು ರಚಿಸಿ, ಉದ್ಯೋಗ ಸ್ಥಳದ ಒತ್ತಡಗಳು ಹಾಗೂ ಅವುಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಸಂವಾದಗಳನ್ನು ಏರ್ಪಡಿಸುವುದು.
  • ನಿಗದಿತ ಸಮಯಕ್ಕಿಂತ ಹೆಚ್ಚು ಅವಧಿ ದುಡಿಸಿಕೊಳ್ಳದೆ, ಜೀವನ ಶೈಲಿಯ ಸಮತೋಲನವನ್ನು ಕಾಯ್ದುಕೊಳ್ಳಲು ಅನುಕೂಲತೆಯನ್ನು ಒದಗಿಸುವುದು; ಇತ್ಯಾದಿ..

ಉದ್ಯೋಗ ಸ್ಥಳದ ಒತ್ತಡಗಳು ಒಟ್ಟು ಉದ್ಯೋಗ ಪರಿಸರದ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ ಅವುಗಳನ್ನು ಸಮರ್ಥವಾಗಿ ಪರಿಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯವಾಗಿದೆ. ಇದಕ್ಕಾಗಿ ಉದ್ಯೋಗಿಗಳ ಮಾನಸಿಕ ಆರೋಗ್ಯದ ಕಾಳಜಿಗೆ ಹೂಡಿಕೆ ಮಾಡಬೇಕಾಗುತ್ತದೆ. ಮತ್ತು ಈ ಹೂಡಿಕೆಯು ಸಂಸ್ಥೆಯ ಭವಿಷ್ಯದ ದೃಷ್ಟಿಯಿಂದ ಲಾಭದಾಯಕವೂ ಆಗಿರುತ್ತದೆ.

ಮಣಿಪಾಲ್ ಯುನಿವರ್ಸಿಟಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಬುಧಾದಿತ್ಯ ಸುಜೀರ್ ಅವರು ನೀಡಿದ ಪೂರಕ ಅಂಶಗಳೊಡನೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org