ಮೇಲಧಿಕಾರಿಗಳು ಹಾಗೂ ಸಹೋದ್ಯೋಗಿಗಳು ಡಿಪ್ರೆಷನ್‌ (ಖಿನ್ನತೆ)ಗೆ ಒಳಗಾದ ಉದ್ಯೋಗಿಯ ಸಹಾಯ ಮಾಡಬೇಕೇ?

ನಡವಳಿಕೆ ಅಥವಾ ಕೆಲಸದಲ್ಲಿ ಧೀಡೀರ್ ಬದಲಾವಣೆ ಕಂಡುಬಂದರೆ, ಅದು ಭಾವನಾತ್ಮಕ ಏರಿಳಿತದ ಸಂಕೇತವಾಗಿರುವ ಸಾಧ್ಯತೆಗಳಿರುತ್ತವೆ.

ನಿಮ್ಮ ಯಾವುದಾದರೂ ಸಹೋದ್ಯೋಗಿಯ ನಡವಳಿಕೆಯಲ್ಲಿ ಧಿಡೀರ್ ಬದಲಾವಣೆಯಾಗಿದ್ದನ್ನು ಯಾವಾಗಲಾದರೂ ಗಮನಿಸದ್ದೀರಾ? ಒಂದು ಸುವ್ಯವಸ್ಥಿತ ರೀತಿಯಲ್ಲಿ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿದ್ದ ಉದ್ಯೋಗಿಯು ಇದ್ದಕ್ಕಿದ್ದ ಹಾಗೆ ಕೆಲಸದ ಮೇಲೆ ಗಮನ ಕೊಡಲು ಕಷ್ಟಪಡುವುದು ನಿಮ್ಮ ಗಮನಕ್ಕೆ ಬಂದಿದೆಯೇ? ಅಥವಾ ನಿಮ್ಮ ಸಹೋದ್ಯೋಗಿಗಳಲ್ಲಿ ಯಾರಾದರೂ ಮೇಲಿಂದ ಮೇಲೆ ಗೈರು ಹಾಜರಾಗುವುದು, ತಮಗೆ ತಾವೇ ಕೇಡು ತಂದೊಡ್ಡಿಕೊಳ್ಳುವ ಬಗ್ಗೆ ಮಾತನಾಡುವುದು ನೀವು ಗಮನಿಸಿದ್ದೀರಾ?

ಹಾಗಿದ್ದಲ್ಲಿ, ಅವರ ಈ ನಡವಳಿಕೆಗಳು ಭಾವನಾತ್ಮಕ ಯಾತನೆಯಿಂದ ಬಂದಿರುತ್ತದೆ ಅಥವಾ ಅವರು ಮನೋರೋಗದಿಂದ ವ್ಯಥೆ ಪಡುತ್ತಿದ್ದಾರೆ ಎಂಬುದನ್ನು ತಿಳಿಯಿರಿ. ಇಂಥ ಸಂದರ್ಭಗಳಲ್ಲಿ ಅವರು ಯಾರಿಂದಲೂ ಸಹಾಯ ಕೋರಲಾರರು. ಒಬ್ಬ ಮೇಲಧಿಕಾರಿ ಅಥವಾ ಸಹೋದ್ಯೋಗಿಯಾಗಿ ನೀವೇ ಅವರ ಸಹಾಯಕ್ಕೆ ಮುಂದಾಗುವುದು ಸೂಕ್ತ. ಈ ನಿಟ್ಟಿನಲ್ಲಿ ನೀವು ಮಾಡಬಹುದಾದ ಮೊದಲ ಕೆಲಸವೆಂದರೆ, ಅವರ ಮಾತುಗಳನ್ನು ಆಲಿಸುವುದು.

ಉದ್ಯೋಗ ಸ್ಥಳದಲ್ಲಿ ಇಂಥ ಲಕ್ಷಣಗಳನ್ನು ತೋರುವ ಉದ್ಯೋಗಿಗಳು ಇರುವುದು ಸಾಮಾನ್ಯ. ಆರಂಭದಲ್ಲಿ ನಿಮ್ಮ ಗಮನಕ್ಕೆ ಇದು ಬರದೆ ಹೋಗಬಹುದು. ಆದರೆ ಕ್ರಮೇಣ ನಿಮಗೆ ಅದರ ಅರಿವಾಗುವುದು. ಆದ್ದರಿಂದ ಮೇಲಧಿಕಾರಿ ಅಥವಾ ಸಹೋದ್ಯೋಗಿಯಾಗಿ ನೀವು ಅವರಿಗೆ ಸಹಾಯಕ ಮಾಡಿ ಅವರಲ್ಲಿ ಬದಲಾವಣೆಯನ್ನು ತರಲು ಪ್ರಯತ್ನಿಸುವುದು ಸೂಕ್ತ.

ಯಾವಾಗ ಸಹಾಯ ಕೇಳಬೇಕು?

  • ನಿಮ್ಮ ಸಹೋದ್ಯೋಗಿಯ ಗೈರು ಹಾಜರಿ ವಿಪರೀತ ಮಟ್ಟ ತಲುಪಿದಾಗ ಮತ್ತು ಗೈರು ಹಾಜರಿಗೆ ಸೂಕ್ತ ವಿವರಣೆಗಳನ್ನು ನೀಡದೆ ಹೋದಾಗ.
  • ಆಫೀಸಿಗೆ ಹಾಜರಾದರೂ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಕಷ್ಟ ಪಡುತ್ತಿರುವಾಗ.
  • ಇದ್ದಕ್ಕಿದ್ದಂತೆ ತಮ್ಮ ಬಾಹ್ಯ ನಿಲುವಿನ ಬಗ್ಗೆ ಹಾಗೂ ಶುಚಿತ್ವದ ಬಗ್ಗೆ ನಿರ್ಲಕ್ಷ್ಯ ತೋರತೊಡಗಿದಾಗ.
  • ಬಾಹ್ಯ ಪ್ರಪಂಚವೇ ಕಳೆದವರಂತೆ ಇರತೊಡಗಿದಾಗ.
  • ತಮ್ಮ ಬಗ್ಗೆ ತಾವೇ ಕೊರಗಲು ಆರಂಭಿಸಿದಾಗ.
  • ವರ್ತನೆಯಲ್ಲಿ ಏರಿಳಿತ ಕಂಡು ಬರತೊಡಗಿದಾಗ.
  • ಯಾವುದೋ ಹಿಡಿತದಲ್ಲಿರುವಂತೆ ಕಂಡು ಬಂದಾಗ.
  • ಹಿಂದೆಂದಿಗಿಂತಲೂ ಕಡಿಮೆ ಸಾಮರ್ಥ್ಯ ಇರುವಂತೆ ತೋರತೊಡಗಿದಾಗ.
  • ಆಕ್ರಮಣಶೀ
  • ಲತೆಯನ್ನು ತೋರತೊಡಗಿದಾಗ.

ಈ ಮೇಲಿನವುಗಳಲ್ಲಿ ಯಾವುದಾದರೂ ಲಕ್ಷಣವು ನಿಮ್ಮ ಸಹೋದ್ಯೋಗಿಯಲ್ಲಿ ದೀರ್ಘಕಾಲದವರೆಗೆ ಕಂಡುಬಂದಲ್ಲಿ, (ಕೊನೆಪಕ್ಷ 2 ವಾರಗಳು) ನೀವು ಅವರ ಸಹಾಯಕ್ಕೆ ಧಾವಿಸುವುದು ಅಗತ್ಯವಾಗುತ್ತದೆ. ನೀವು ಅವರ ಮೇಲಧಿಕಾರಿಯಾಗಿದ್ದರೆ, ಉದ್ಯೋಗಿಯ ಕಾರ್ಯಕ್ಷಮತೆಯಲ್ಲಿ ಕೊರತೆ, ಆಯಾಸ ಹಾಗೂ ಆಕ್ರಮಣಶೀಲತೆಗಳು ಕಂಡುಬಂದಲ್ಲಿ ಅವರ ಸಹಾಯಕ್ಕೆ ಕೈಚಾಚುವುದು ಸೂಕ್ತ.

ಮಾನಸಿಕ ತೊಂದರೆಗೆ ಒಳಗಾದ ಉದ್ಯೋಗಿಗೆ ಭಾವನಾತ್ಮಕ ಹಾಗೂ ವಾಸ್ತವಿಕ ಬೆಂಬಲ ನೀಡುವುದರ ಜೊತೆಗೆ ಅವರೊಂದಿಗೆ ಸಹಾನುಭೂತಿಯ ನಡವಳಿಕೆಯನ್ನು ತೋರಿಸುವುದು ಅಗತ್ಯವಾಗುತ್ತದೆ. ಅಂಥ ವ್ಯಕ್ತಿಯನ್ನು ನಿಮ್ಮ ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಯಾತನೆಯನ್ನು ಸಮಾಧಾನವಾಗಿ ಆಲಿಸುವ ಮೂಲಕ ಅವರ ಉದ್ವಿಗ್ನತೆಯನ್ನು ಕಡಿಮೆ ಮಾಡುವುದು ಈ ನಿಟ್ಟಿನಲ್ಲಿ ನೀವು ಇಡಬೇಕಾದ ಮೊದಲ ಹೆಜ್ಜೆ. ಇಂಥ ಸನ್ನಿವೇಶಗಳಲ್ಲಿ ನೀವು ಹೇಗೆ ವರ್ತಿಸಬೇಕೆಂಬ ಬಗ್ಗೆ ಯಾವುದೇ ನಿರ್ದಿಷ್ಟ ಸೂಚನೆ ಇಲ್ಲದೆ ಇದ್ದರೂ ಕಾಳಜಿಯಿಂದ ಅವರೊಡನೆ ವರ್ತಿಸುವುದು ಮುಖ್ಯವಾಗುತ್ತದೆ.

ಇಂಥ ಸನ್ನಿವೇಶದಲ್ಲಿ ನೀವು ಉದ್ಯೋಗಿಯೊಡನೆ ಹೇಗೆ ವರ್ತಿಸಬೇಕು ಅನ್ನುವುದಕ್ಕೆ ಚಿಕ್ಕದೊಂದು ನಿದರ್ಶನ ಇಲ್ಲಿದೆ:

“ ಹಾಯ್____ ಹೇಗಿದ್ದೀರಿ? ನೀವು ಯಾವುದೋ ಕಾರಣದಿಂದ ವಿಚಲಿತರಾಗಿದ್ದೀರಿ ಎಂದು ನನಗೆ ಅನ್ನಿಸುತ್ತಿದೆ. ನಿಮ್ಮ ಮೇಲೆ ನನಗಿರುವ ಕಾಳಜಿಯಿಂದ ಕೇಳುತ್ತಿದ್ದೇನೆ, ನನ್ನಿಂದ ನಿಮಗೆ ಏನಾದರೂ ಸಹಾಯವಾಗಬಹುದೇ? ನೀವು ನನ್ನೊಂದಿಗೆ ಹಂಚಿಕೊಳ್ಳಲು ಬಯಸಿದರೆ ನಾನು ಕೇಳಲು ಸಿದ್ಧವಿದ್ದೇನೆ. ನನ್ನಿಂದ ನಿಮಗೆ ಸಹಾಯವಾದರೆ ಅದೇ ನನಗೆ ಸಂತೋಷ. ನಿಮ್ಮ ಸಮಸ್ಯೆಗೆ ನನ್ನಿಂದ ಪರಿಹಾರ ಸಿಗದೆ ಹೋಗಬಹುದು. ಆದರೆ ಯಾರೊಂದಿಗಾದರೂ ಮಾತನಾಡಿದರೆ ನಿಮ್ಮ ಮನಸ್ಸು ಹಗುರವಾಗುತ್ತದೆ. ನೀವು ನನ್ನಲ್ಲಿ ನಂಬಿಕೆಯಿಟ್ಟು ನಿಮ್ಮ ಸಮಸ್ಯೆಗಳನ್ನು ಹೇಳಬಹುದು. ನಿಮಗೆ ನನ್ನ ಮೇಲೆ ಅಷ್ಟು ವಿಶ್ವಾಸ ಮೂಡಿದರೆ ನನಗೆ ಬಹಳ ಖುಷಿಯಾಗುತ್ತದೆ.”

ಹೀಗೆ.. ಇಂಥ ಮಾತುಗಳ ಮೂಲಕ ಉದ್ಯೋಗಿಯ ವಿಶ್ವಾಸವನ್ನು ಗಳಿಸಿ, ಅವರು ಮುಕ್ತವಾಗಿ ಮಾತನಾಡಲು ಪ್ರೋತ್ಸಾಹಿಸಬಹುದಾಗಿದೆ. ಅವರ ಸಮಸ್ಯೆಗಳನ್ನು ಆಲಿಸಿದ ನಂತರ, ಆ ನಿಟ್ಟಿನಲ್ಲಿ ನಿಮ್ಮ ಸ್ವಂತದ ಅನುಭವಗಳಿದ್ದರೆ ಅದನ್ನೂ, ಅಥವಾ ಎಲ್ಲಾದರೂ ಕಂಡು – ಕೇಳಿದ್ದರೆ ಅದನ್ನು ಅವರೊಂದಿಗೆ ಹಂಚಿಕೊಂಡು. ಅದರಿಂದ ಹೊರಬರುವ ಸಾಧ್ಯತೆಗಳನ್ನು ಚರ್ಚಿಸಬೇಕಾಗುತ್ತದೆ. ಇದರಿಂದ ಸಮಸ್ಯೆಗೆ ಒಳಗಾಗಿರುವ ಉದ್ಯೋಗಿಯಲ್ಲಿ ಒಂದು ಬಗೆಯ ಸುರಕ್ಷಿತ ಭಾವನೆ ಮೂಡುತ್ತದೆ.

ಆದರೆ, ಸಂಭಾಷಣೆ ನಡೆಸುವಾಗ, ಯಾವುದೇ ಕಾರಣಕ್ಕೂ ಅವರಲ್ಲಿ ಕೀಳರಿಮೆ ಉಂಟಾಗದಿರುವಂತೆ ಎಚ್ಚರ ವಹಿಸಿ. ಹಾಗೆಯೇ ಚರ್ಚಿಸುವ ಭರದಲ್ಲಿ ನಿಮ್ಮ ಸಮಸ್ಯೆಗಳನ್ನೇ ಹೇಳಿಕೊಳ್ಳುತ್ತಾ ಅವರ ಮೇಲೆ ಮತ್ತಷ್ಟು ಹೊರೆಯನ್ನು ಹೇರಲು ಹೋಗಬೇಡಿ. ಸಾಧ್ಯವಾದಷ್ಟೂ ಅವರ ಸಮಸ್ಯೆ ಹಾಗೂ ನಿಮ್ಮ ಪರಿಹಾರದ ದಿಕ್ಕಿನಲ್ಲಿ ಮಾತುಕತೆ ಇರಲಿ. ನಿಮ್ಮ ಜೊತೆಗಿನ ಸಂಭಾಷಣೆ ಅವರಲ್ಲಿ ಮನಸ್ಥಿತಿಯನ್ನು ಮತ್ತಷ್ಟು ಕೆಡಿಸುವಂತೆ ಆಗಬಾರದು. ಹಾಗೆಯೇ, “ಇವೆಲ್ಲ ಬದುಕಿನ ಸಾಮಾನ್ಯ ಸಂಗತಿಗಳು. ಅವನ್ನು ಅಲ್ಲಿಯೇ ಬಿಟ್ಟು ಮುಂದುವರೆಯಿರಿ!” ಎಂದು ಹೇಳಲುಹೋಗಬೇಡಿ. ಇಂಥಾ ಮಾತುಗಳನ್ನು ಸಾಕಷ್ಟು ಜನರಿಂದ ಅವರು ಕೇಳಿರುತ್ತಾರೆ ಮತ್ತು ಅದರಿಂದ ಅವರ ಮೇಲೆ ಯಾವ  ಪ್ರಯೋಜನವೂ ಆಗದು. ಹಾಗೆಯೇ “ನಿನ್ನ ನಡವಳಿಕೆ ನೋಡಿ ನಾನು ರೋಸಿ ಹೋಗಿದ್ದೇನೆ. ಹೇಡಿಯಂತೆ ಅಳುವುದನ್ನು ನಿಲ್ಲಿಸಿ ಕೆಲಸ ಮಾಡು” ಎಂಬಂಥ ಮಾತುಗಳನ್ನೂ ಆಡಬೇಡಿ. ಮಾನಸಿಕ ತೊಂದರೆಯಿಂದ ಯಾತನೆ ಪಡುವವರು ಸೂಕ್ಷ್ಮ ಪ್ರವೃತ್ತಿ ಹೊಂದಿರುತ್ತಾರೆ. ನಿಮ್ಮ ಇಂಥಾ ಮಾತುಗಳು ಅವರ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆಗಳೇ ಹೆಚ್ಚಿರುತ್ತವೆ.

ನಿಮ್ಮ ಸಂಸ್ಥೆಯು ಮಾನಸಿಕ ಯಾತನೆಗೆ ಒಳಗಾದ ಉದ್ಯೋಗಿಗೆ ಯಾವ ಬಗೆಯ ಸಹಾಯ ನೀಡಬಲ್ಲದು?

ಒಬ್ಬ ಸಹೋದ್ಯೋಗಿಯಾಗಿ, ನೀವು ಅವರಿಗೆ ಸಂಸ್ಥೆಯ Employee Assistance Program (EAP) ಅನ್ನು ಸಂಪರ್ಕಿಸುವಂತೆ ಸೂಚಿಸಬಹುದು. ಈ ವ್ಯವಸ್ಥೆಯು ಉದ್ಯೋಗಿಗಳ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಒದಗಿಸಲೆಂದೇ ಕೆಲಸ ಮಾಡುತ್ತದೆ. ಕೆಲವು EAPಗಳು ಉದ್ಯೋಗಿಗಳು ಹಾಗೂ ಅವರ ಕುಟುಂಬಗಳಿಗೆ ಮಾನಸಿಕ ಆರೋಗ್ಯ ಸುಧಾರಣೆಯ ನಿಟ್ಟಿನಲ್ಲಿ ಅಲ್ಪಕಾಲಿಕ ಪರಿಹಾರವನ್ನು ಒದಗಿಸುತ್ತವೆ. ಹಾಗೂ ಸುತ್ತಲಿನ ಸಮಾಜದಲ್ಲಿ ಕಾಣುವಂಥ ಸಮಸ್ಯೆಗಳು ಹಾಗೂ ಸವಾಲುಗಳನ್ನು ಎದುರಿಸುವ ಕುರಿತು ತಿಳಿವಳಿಕೆ ನೀಡುತ್ತವೆ.

ಈ ಎಲ್ಲ ಸೇವೆಗಳನ್ನು ಕೋರಿಕೆಯ ಮೇರೆಗೆ ಗುಪ್ತವಾಗಿ ಇರಿಸಲಾಗುತ್ತದೆ. ಉದ್ಯೋಗಿಯಿಂದ ಮತ್ತೊಬ್ಬರಿಗೆ ಯಾವುದೇ ರೀತಿಯಲ್ಲಿ ಹಾನಿ ಉಂಟಾಗುವ ಸಂದರ್ಭವಿದ್ದಲ್ಲಿ ಮಾತ್ರ ಈ ಸಂಗತಿಯನ್ನು ಬಹಿರಂಗಪಡಿಸುವ ಅವಕಾಶಗಳಿರುತ್ತವೆ. EAPಯು ಉದ್ಯೋಗಿಗೆ ಔದ್ಯೋಗಿಕ ಮಾತ್ರವಲ್ಲ, ವೈಯಕ್ತಿಕ ಕಾರಣಗಳಿಂದ ಉಂಟಾಗುವ ಮಾನಸಿಕ ಸಮಸ್ಯೆಗಳಿಗೂ ಪರಿಹಾರ ದೊರಕಿಸಲು ಯತ್ನಿಸುತ್ತದೆ.

ಸಂಸ್ಥೆಯಲ್ಲಿ EAP ಲಭ್ಯವಿಲ್ಲದಾಗ ಸಹೋದ್ಯೋಗಿ ಏನು ಮಾಡಬೇಕು?

ನೀವು ಮ್ಯಾನೇಜರ್ ಆಗಿದ್ದಲ್ಲಿ, ಬಾಧೆಗೊಳಗಾದ ಉದ್ಯೋಗಿಗೆ ಸೂಕ್ತ ಕೌನ್ಸೆಲಿಂಗ್ ಸೈಕಾಲಜಿಸ್ಟ್ ಅನ್ನು ಭೇಟಿ ಮಾಡುವಂತೆ ಸೂಚಿಸಬಹುದು. ಆದರೆ ಇದರ ಖರ್ಚುವೆಚ್ಚಗಳನ್ನು ಉದ್ಯೋಗಿಯೇ ಭರಿಸಬೇಕಾಗುತ್ತದೆ, ಈ ನಿಟ್ಟಿನಲ್ಲಿ ಮಾಡಬಹುದಾದ ಮತ್ತೊಂದು ಕೆಲಸವೆಂದರೆ, ಬೆಂಬಲ ನೀಡುವುದು. ನಿಮ್ಮ ಸಹೋದ್ಯೋಗಿಯನ್ನು ಏಕಾಂಗಿಯಾಗಿ ಮಾನಸಿಕ ತಜ್ಞರ ಬಳಿ ಕಳುಹಿಸುವ ಬದಲು ನೀವೂ ಜೊತೆಯಲ್ಲಿ ಹೋಗಬಹುದು.  

ಹೆಚ್ಚುವರಿಯಾಗಿ, ನಿಮ್ಮ ಸಹೋದ್ಯೋಗಿಗೆ ಹೆಲ್ಪ್ ಲೈನ್ ಅನ್ನು ಸಂಪರ್ಕಿಸುವಂತೆ ಸಲಹೆ ನೀಡಬಹುದು.

ವರ್ಕ್ ಪ್ಲೇಸ್ ಆಪ್ಷನ್ಸ್’ನ ಕ್ಲಿನಿಕಲ್ ಹೆಡ್ ಮೌಲಿಕಾ ಶರ್ಮಾ ಅವರು ನೀಡಿದ ಅಂಶಗಳನ್ನು ಬಳಸಿ ಈ ಬರಹವನ್ನು ಸಿದ್ಧಪಡಿಸಲಾಗಿದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org