ಕೋಪದ ಸಮಸ್ಯೆಗಳನ್ನು ಬಗೆಹರಿಸಬಹುದೇ?

ಕೋಪದ ಸಮಸ್ಯೆಗಳನ್ನು ಬಗೆಹರಿಸಬಹುದೇ?

ಕೋಪ ಯಾವಾಗ ಸಮಸ್ಯೆಯಾಗುತ್ತದೆ?

ನಮ್ಮ ದೈನಂದಿನ ಜೀವನದಲ್ಲಿ ಯಾವುದೋ ಒಂದು ಹಂತದಲ್ಲಿ ನಮಗೆ ಕೋಪ ಬಂದಿರುತ್ತದೆ. ಕೋಪದ ಆವೇಶವನ್ನು ಅನುಭವಿಸುವುದು ಸ್ವಾಭಾವಿಕವೂ ಹೌದು, ಅವಶ್ಯವೂ ಹೌದು ಮತ್ತು ಸೂಕ್ತವಾದುದೂ ಹೌದು. ಆಂತರಿಕವಾದ ಅಥವಾ ಹೊರಗಿನ ಘಟನೆಗಳು ಉಂಟುಮಾಡುವ ಆವೇಶದಿಂದ ಕೋಪ ಬರುತ್ತದೆ. ಹಿಂದಿರುಗಿ ನೋಡಿದರೆ, ಈ ಕೆಳಗಿನ ಘಟನೆಗಳಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಕಾರಣಗಳಿಂದ ನಮ್ಮಲ್ಲಿ ಕೋಪ ಉಕ್ಕಿಬರುತ್ತದೆ:

ಹೊರಗಿನ ಘಟನೆಗಳು:

• ನಮಗೆ ಅಗತ್ಯವಿಲ್ಲದ ಸನ್ನಿವೇಶ ಒತ್ತಡ ಉಂಟುಮಾಡುವುದು

• ಮತ್ತೊಬ್ಬರ ಅನಪೇಕ್ಷಿತವಾದ ಅಥವಾ ನ್ಯಾಯಯುತವಲ್ಲದ ವರ್ತನೆ ಮತ್ತು ಚಟುವಟಿಕೆ

• ನಮ್ಮ ಅವಶ್ಯಕತೆಗಳನ್ನು ಮತ್ತೊಬ್ಬರು ಪೂರೈಸದೆ ಇರುವುದು.

ಆಂತರಿಕ ಘಟನೆಗಳು:

• ಒಬ್ಬ ವ್ಯಕ್ತಿಯ ಬಗ್ಗೆ ಅಥವಾ ಸನ್ನಿವೇಶದ ಬಗ್ಗೆ ಅಸಮಧಾನ ಹೊಂದಿರುವುದು, ಘಾಸಿಗೊಂಡಿರುವುದು, ಜಿಗುಪ್ಸೆ ಹೊಂದಿರುವುದು.

• ಕೆಲವು ನೆನಪುಗಳು, ಪರಿಹರಿಸಲಾಗದ ಸಮಸ್ಯೆಗಳು ಅಥವಾ ಸಂಬಂಧಗಳ ಸಂಘರ್ಷಗಳು.

ಕೋಪ ಬಂದಾಗ ಅನುಭವಿಸುವ ಆವೇಶದಲ್ಲಿ ಕೆಲವು ಅಪಾಯಗಳಿರುವುದನ್ನೂ ನಾವು ಗಮನಿಸುತ್ತೇವೆ. ಉದಾಹರಣೆಗೆ ಎಲ್ಲೆ ಮೀರಿ ವರ್ತಿಸುವುದು, ಅನ್ಯಾಯ ಮಾಡುವುದು, ಅಗೌರವ ತೋರಿಸುವುದು, ದೈಹಿಕವಾದ ಅಥವಾ ಮಾನಸಿಕವಾದ ತೊಂದರೆ ಉಂಟುಮಾಡುವುದು ಇತ್ಯಾದಿ.

ಕೋಪದ ಅನುಭವ ಸಾಮಾನ್ಯವಾಗಿ ಒಂದು ಇಷ್ಟವಿಲ್ಲದ ಘಟನೆ ಅಥವಾ ಸನ್ನಿವೇಶದ ಹಿನ್ನೆಲೆಯಲ್ಲಿ ಉಂಟಾಗುವ ಸ್ವಾಭಾವಿಕ ಕ್ರಿಯೆಯಾದರೂ ಇದು ಈ ಕೆಲವು ಸನ್ನಿವೇಶಗಳಲ್ಲಿ ಸಮಸ್ಯೆಯಾಗಿ ಕಾಡುತ್ತದೆ:

• ಕೋಪ ಅಥವಾ ಆವೇಶ ಅತಿಯಾದಾಗ

• ಸರಿಯಾದ ರೀತಿಯಲ್ಲಿ ಕೋಪ ವ್ಯಕ್ತಪಡಿಸದೆ ಹೋದಾಗ

• ಕೋಪವನ್ನು ವ್ಯಕ್ತಪಡಿಸದೆ ಒಳಗೇ ಹಿಡಿದಿಟ್ಟುಕೊಂಡಾಗ

ಯಾರೇ ಆಗಲಿ, ಕೋಪವನ್ನು ಅತ್ಯಂತ ಆವೇಶದೊಂದಿಗೆ ಅಥವಾ ಆಕ್ರೋಶದೊಂದಿಗೆ ವ್ಯಕ್ತಪಡಿಸಿದಾಗ ಅದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ, ಒತ್ತಡ ತೀವ್ರವಾಗುತ್ತದೆ.

ತೀವ್ರವಾಗಿ ಕೋಪವನ್ನು ವ್ಯಕ್ತಪಡಿಸಿದಾಗ ಅಥವಾ ಆವೇಶವನ್ನು ಅನುಭವಿಸಿದಾಗ, ಪದೇ ಪದೇ ವ್ಯಕ್ತಪಡಿಸಿದಾಗ ನಮ್ಮ ದೇಹ ಮತ್ತು ಮನಸಿನ ಮೇಲೆ ಒತ್ತಡ ಹೆಚ್ಚಾಗುತ್ತದೆ. ಕೋಪವನ್ನು ದೈಹಿಕವಾಗಿಯಾಗಲೀ, ಮೌಖಿಕವಾಗಿಯಾಗಲೀ ಸರಿಯಾದ ರೀತಿಯಲ್ಲಿ ವ್ಯಕ್ತಪಡಿಸದೆ ಹೋದರೆ ಅವರು ಆಕ್ರಮಣಶೀಲರಾಗಿ ಕಾಣುತ್ತಾರೆ. ತೀವ್ರವಾಗಿ ನಿಂದಿಸಲಾರಂಭಿಸುತ್ತಾರೆ. ಇದರಿಂದ ಇವರ ಆಕ್ರೋಶ, ನಿಂದನೆ ಎದುರಿಸುವವರು ಪ್ರತಿರೋಧ ವ್ಯಕ್ತಪಡಿಸುವ ಸಾಧ್ಯತೆಗಳಿದ್ದು ವೈಯಕ್ತಿಕ ಮತ್ತು ವೃತ್ತಿಪರ ಸಂಬಂಧಗಳು ಹಾಳಾಗುತ್ತವೆ.

ಕೋಪ ಹೆಚ್ಚಾಗುತ್ತಲೇ ಹೋದರೆ ಅಥವಾ ಕೋಪವನ್ನು ಅದುಮಿಟ್ಟರೂ ಸಹ ನಮ್ಮ ದೇಹ ಮತ್ತು ಮನಸ್ಸಿನ ಮೇಲೆ ಒತ್ತಡ ಹೆಚ್ಚಾಗುತ್ತದೆ. ಬಾಲ್ಯದಲ್ಲಿ ಅನುಭವಿಸಿದ ಕೋಪ ಅಥವಾ ಆಕ್ರೋಶಗಳನ್ನು ಆ ಸಂದರ್ಭದಲ್ಲಿ ವ್ಯಕ್ತಪಡಿಸಲು ಅವಕಾಶಗಳಿಲ್ಲದೆ ಅದು ಹಾಗೆಯೇ ಉಳಿದುಬಿಡಬಹುದು. ಈ ರೀತಿ ಅದುಮಿಟ್ಟ ಕೋಪ ನಮ್ಮಲ್ಲಿ ಸದಾ ಇತರ ವ್ಯಕ್ತಿ ಅಥವಾ ಘಟನೆಯನ್ನೇ ನೆನೆಯುತ್ತಿರುವಂತೆ ಮಾಡುತ್ತದೆ. ಹೀಗಾದಾಗ ಹಠಾತ್ತನೆ ನಮ್ಮ ಕೋಪವನ್ನು ಹೊರಗೆ ಹಾಕಿಬಿಟುತ್ತೇವೆ ಇಲ್ಲವಾದರೆ ಒಳಗೇ ಅದುಮಿಟ್ಟುಕೊಳ್ಳುತ್ತೇವೆ. 

ದೀರ್ಘ ಕಾಲ ಕೋಪವನ್ನು ಅದುಮಿಟ್ಟುಕೊಳ್ಳುವುದರಿಂದ ಮಾನಸಿಕ ಆರೋಗ್ಯದ ಸಮಸ್ಯೆಗಳೂ ಎದುರಾಗುತ್ತವೆ. ಇದನ್ನು ನಿಯಂತ್ರಿಸದಿದ್ದರೆ ಅಥವಾ ಸರಿಯಾಗಿ ನಿರ್ವಹಿಸದಿದ್ದರೆ ನಮ್ಮ ಕೋಪವನ್ನು ಉದ್ದೇಶಿತ ವ್ಯಕ್ತಿಯನ್ನು ಬಿಟ್ಟು ಮತ್ತಾರ ಮೇಲೋ ವ್ಯಕ್ತಪಡಿಸುತ್ತೇವೆ. ಬೇರಾವುದೋ ಸನ್ನಿವೇಶದಲ್ಲಿ ವ್ಯಕ್ತಪಡಿಸುತ್ತೇವೆ. ಇದು ಅಪಾರ್ಥಗಳಿಗೆ ಕಾರಣವಾಗುತ್ತದೆ, ಸಂಬಂಧಗಳಲ್ಲಿ ಘರ್ಷಣೆಯನ್ನು ಹೆಚ್ಚಿಸುತ್ತದೆ.  ಕೋಪದ ಸಮಸ್ಯೆಯನ್ನು ಸರಿಪಡಿಸುವುದು ಕೋಪ ಉಂಟುಮಾಡುವ ಸಮಸ್ಯೆಗಳು ಎದುರಾಗಲು ಮೂಲ ಕಾರಣ ಎಂದರೆ ಆವೇಶ ಅಥವಾ ಕೋಪವನ್ನು ನಿಯಂತ್ರಿಸಲು ಸಾಧ್ಯವಾಗದೆ ಇರುವುದು.

ಕೋಪ, ಆವೇಶವನ್ನು ಅನುಭವಿಸುವುದು ಸಹಜವೇ ಆದರೂ ನಾವು ಅದನ್ನು ನಿಯಂತ್ರಿಸಿದರೆ, ಪರಿಣಾಮಕಾರಿಯಾಗಿ ವ್ಯಕ್ತಪಡಿಸಿದರೆ, ಇತರರಿಗೆ ಅಥವಾ ನಮಗೇ ಹಾನಿಯಾಗದಂತೆ ವ್ಯಕ್ತಪಡಿಸಿದರೆ ಅದು ನಮಗೇ ಸಹಾಯಕವಾಗುತ್ತದೆ.

ಕೋಪವನ್ನು ವ್ಯಕ್ತಪಡಿಸುವಲ್ಲಿ ನಿಯಂತ್ರಿಸುವಲ್ಲಿ ಈ ಸೂತ್ರಗಳು ನೆರವಾಗುತ್ತವೆ:

ನಿಮ್ಮ ಕೋಪಕ್ಕೆ ಮೂಲ ಕಾರಣವನ್ನು ಅರಿತಿರುವುದು: ಇದು ನಿಮ್ಮ ಕೋಪವನ್ನು ನಿಯಂತ್ರಿಸುವ ಮೊದಲ ಹಂತ. ನಮ್ಮ ಕೋಪದ ಕಾರಣವನ್ನು ತಿಳಿದುಕೊಳ್ಳಲು ಈ ಅಂಶಗಳು ನೆರವಾಗುತ್ತವೆ.

1. ನಿಮ್ಮಲ್ಲಿ ಕೋಪ ಉಂಟಾಗಲು ಕಾರಣವಾದ ಘಟನೆ ಯಾವುದು ಎಂದು ತಿಳಿದುಕೊಳ್ಳುವುದು.

2. ನೀವು ಅನುಭವಿಸಿದ ಕೋಪ ಆವೇಶದ ಹಿಂದಿನ ಕಾರಣಗಳೇನು ಎಂದು ತಿಳಿದುಕೊಳ್ಳುವುದು.

3. ನಿಮ್ಮ ಕೋಪ ಅಥವಾ ಆವೇಶ ನ್ಯಾಯಯುತವಾದುದೇ ಅಥವಾ ತಪ್ಪುಕಲ್ಪನೆಯಿಂದ ಕೂಡಿದೆಯೇ ಎಂದು ತಿಳಿದುಕೊಳ್ಳುವುದು.

ವಿಶ್ರಾಂತಿ ಪಡೆಯುವ ವಿಧಾನಗಳನ್ನು ಶಿಸ್ತಿನಿಂದ ಪಾಲಿಸುವುದು: ಕೋಪ ಹೆಚ್ಚಾಗುವುದರಿಂದ ದೈಹಿಕ ಒತ್ತಡ ಹೆಚ್ಚಾಗುತ್ತದೆ, ನಮ್ಮ ದೇಹದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ನಮಗೆ ತಿಳಿದಿದೆ. ಇದರಿಂದ ಹೃದಯ ಬಡಿತ ಹೆಚ್ಚಾಗುತ್ತದೆ, ಉಸಿರು ಸಡಿಲಗೊಳ್ಳುತ್ತದೆ. ದೀರ್ಘ ಉಸಿರಾಡುವ ವ್ಯಾಯಾಮವನ್ನು ದಿನನಿತ್ಯ ಮಾಡುವುದು, ಮಾಂಸಖಂಡಗಳನ್ನು ಸಡಿಲಗೊಳಿಸುವ ವ್ಯಾಯಾಮ ಮಾಡುವುದು ಕೋಪ ಕಡಿಮೆ ಮಾಡಲು ನೆರವಾಗಬಹುದು.

ಕೋಪವನ್ನು ತಪ್ಪಾದ ರೀತಿಯಲ್ಲಿ ವ್ಯಕ್ತಪಡಿಸುವುದು: ಅನುಭವಕ್ಕೆ ಬರುವ ಯಾವುದೇ ಆವೇಶವನ್ನು ವ್ಯಕ್ತಪಡಿಸಬೇಕು. ಕೋಪ ಉಂಟುಮಾಡುವ ಆವೇಶಕ್ಕೆ ಇದು ಹೆಚ್ಚು ಅನ್ವಯಿಸುತ್ತದೆ. ಆದ್ದರಿಂದ, ಕೋಪಕ್ಕೆ ಕಾರಣವಾದ ಭಾವನೆಗಳನ್ನು ಮತ್ತು ಅದರಿಂದ ಉಂಟಾಗುವ ಜಿಗುಪ್ಸೆಯನ್ನು ಶಾಂತ ರೀತಿಯಲ್ಲಿ, ಒಟ್ಟಾಗಿ ವ್ಯಕ್ತಪಡಿಸುವುದರಿಂದ ಕೋಪದ ಭಾವನೆಯನ್ನು ನಿಯಂತ್ರಿಸಲು ಸಾಧ್ಯ. ಈ ಸಂದರ್ಭದಲ್ಲಿ ಬರೆಯುವುದು, ಕವಿತೆ ರಚಿಸುವುದು, ಚಿತ್ರಕಲೆ ರಚಿಸುವುದು ಮುಂತಾದ ಚಟುವಟಿಕೆಗಳನ್ನು ಅನುಸರಿಸಿವುದು ಸಹಾಯಕವಾಗುತ್ತದೆ.

ನಮ್ಮ ಅವಶ್ಯಕತೆ ಮತ್ತು ಆಶಯಗಳನ್ನು ತಿಳಿಸುವುದು: ನಮ್ಮ ಅವಶ್ಯಕತೆಗಳನ್ನು ಮತ್ತು ಆಶಯಗಳನ್ನು ಪರಿಣಾಮಕಾರಿಯಾಗಿ ಮತ್ತೊಬ್ಬರಿಗೆ ತಿಳಿಸುವುದರಿಂದ ಅವರಿಂದಲೂ ಸರಿಯಾದ ನ್ಯಾಯಯುತವಾದ ನಿರೀಕ್ಷೆಗಳನ್ನು ಅಪೇಕ್ಷಿಸಬಹುದು.

ವೃತ್ತಿಪರರ ಸಹಾಯ ಕೋರಿಕೆ: ನೀವು ಮೇಲಿನ ಕೆಲವು ಸೂತ್ರಗಳನ್ನು ಪ್ರಯತ್ನಿಸಿದ್ದರೆ, ಹಾಗಾಗಿಯೂ ನಿಮ್ಮ ಕೋಪ ನಿಯಂತ್ರಣಕ್ಕೆ ಬಾರದೆ ಕೈಮೀರಿ ಹೋಗುತ್ತಿದ್ದರೆ ನೀವು ವೃತ್ತಿಪರರ ನೆರವು ಪಡೆಯುವುದು ಒಳಿತು. ಉತ್ತಮ ಆಪ್ತಸಮಾಲೋಚಕರು, ಸಲಹೆಗಾರರು, ಮನಶ್ಶಾಸ್ತ್ರಜ್ಞರು ನಿಮ್ಮ ಕೋಪವನ್ನು ನಿಯಂತ್ರಿಸಲು, ನಿರ್ವಹಿಸಲು ನೆರವಾಗುತ್ತಾರೆ.

ಉಲ್ಲೇಖ:

ಕೋಪ ನಿಮ್ಮನ್ನು ನಿಯಂತ್ರಿಸುವ ಮುನ್ನ ನೀವು ಕೋಪ ನಿಯಂತ್ರಿಸಿ : http://www.apa.org/topics/anger/control.aspx ಕೋಪವನ್ನು ನಿರ್ವಹಿಸಲು ::  http://www.helpguide.org/articles/emotional-health/anger-management.htm  

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org